ಕೃಪೆ:- ಪ್ರಜಾವಾಣಿ
ನಾಲ್ಕೈದು ವರ್ಷಗಳ ಹಿಂದಿನ ದಿನಗಳು ಮತ್ತೆ ನೆನಪಾಗುತ್ತಿವೆ. 2007ರಲ್ಲಿ ಆರ್ಥಿಕ ಹಿಂಜರಿತ ಕಾಣಿಸಿಕೊಂಡ ಆರಂಭದ ದಿನಗಳಲ್ಲಿಯೂ ಈಗಿನದೇ ಪರಿಸ್ಥಿತಿ ಇತ್ತು!
ಡಬಲ್ ಡಿಪ್; ಬ್ರಿಟನ್ ಬ್ಯಾಕ್ ಇನ್ ರಿಸಿಷನ್!
ಬ್ರಿಟನ್‌ನಲ್ಲಿ 2012ನೇ ವರ್ಷದ ಆರಂಭವೇ ಕಳವಳಕಾರಿಯಾಗಿದೆ. 2011ರ ಅಕ್ಟೋಬರ್-ಡಿಸೆಂಬರ್ ನಡುವಿನ 4ನೇ ತ್ರೈಮಾಸಿಕದಲ್ಲಿ ಇಂಗ್ಲೆಂಡ್‌ನ ಆರ್ಥಿಕ ಶಕ್ತಿ ಶೇ. 0.3ರಷ್ಟು ಕುಸಿತ ಕಂಡಿತ್ತು. ಸಾಲದೆಂಬಂತೆ 2012ರ 1ನೇ ತ್ರೈಮಾಸಿಕದಲ್ಲಿಯೂ ಮತ್ತೆ ಶೇ. 0.2ರಷ್ಟು ಕುಸಿತ!
ಹೀಗೆ ಸತತ ಕುಸಿತ ಕಾಣುತ್ತಿರುವುದರ ಪರಿಣಾಮ ದೇಶದ ಹಣಕಾಸು ಪರಿಸ್ಥಿತಿ ಆರ್ಥಿಕ ಹಿಂಜರಿತ ಸ್ಥಿತಿಗೆ ಮರಳುತ್ತಿದೆ ಎಂದು ಬ್ರಿಟನ್ ರಾಷ್ಟ್ರೀಯ ಅಂಕಿ ಅಂಶಗಳ ಸಂಸ್ಥೆ ಹೇಳಿರುವುದನ್ನು ಬಿಬಿಸಿ ಏಪ್ರಿಲ್ 25ರಂದು ವರದಿ ಮಾಡಿದೆ.
ಬ್ರಿಟನ್‌ನ ಆರ್ಥಿಕ ಪರಿಸ್ಥಿತಿ 2008ರ 2ನೇ ತ್ರೈಮಾಸಿಕದಲ್ಲಿ ಶೇ. -1.15ಕ್ಕೆ ನಂತರ ಶೇ. - 2, ಶೇ. -2.25ರ ಮಟ್ಟಕ್ಕೆ ಅಧೋಗತಿಗಿಳಿದಿತ್ತು. 2009ರ 3ನೇ ತ್ರೈಮಾಸಿಕ ನಂತರ ಸುಧಾರಣೆ ಕಂಡರೂ 2010ರಲ್ಲಿ ಏರಿಳಿತ ಕಾಣುತ್ತಲೇ ಸಾಗಿತು. ಮತ್ತೆ 2008ನೇ ವರ್ಷದ ಛಾಯೆ ಕಾಣುತ್ತಿರುವಂತಿದೆ.
2 ತ್ರೈಮಾಸಿಕಗಳಲ್ಲಿನ ಪರಿಸ್ಥಿತಿ ಕಂಡು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್, ಇದು ನಿಜಕ್ಕೂ ಬಹಳ ನಿರಾಶಾದಾಯಕ ಸಂಗತಿ ಎಂದು ಪ್ರತಿಕ್ರಿಯಿಸಿದ್ದಾರೆ.
ಅದಕ್ಕೆ ತಕ್ಕಂತೆ, ಚಾನ್ಸೆಲರ್, ಇದೊ ಬಂದಿದೆ ನೋಡಿ ಮತ್ತೊಂದು ಆರ್ಥಿಕ ಹಿಂಜರಿತ. ಇದು ನಿಮ್ಮದೇ ಕೊಡುಗೆ ಎಂಬ ಶೀರ್ಷಿಕೆಯಲ್ಲಿ ಪ್ರಧಾನಿಯನ್ನು ತಿವಿದಿದೆ ದಿ ಗಾರ್ಡಿಯನ್ ಪತ್ರಿಕೆ.
| ಭಾರತಕ್ಕೆ ಋಣಾತ್ಮಕ ಎಚ್ಚರಿಕೆ |
| ಸರಿಯಾಗಿ ಒಂದು ವಾರದ (ಏಪ್ರಿಲ್ 25) ಹಿಂದೆ ಭಾರತದ ಆರ್ಥಿಕ ಸಾಮರ್ಥ್ಯದ ಮೌಲ್ಯಮಾಪನ ಮತ್ತು ಮುನ್ನೋಟದ ಫಲಿತಾಂಶ ಹೊರಬಿದ್ದಿತ್ತು. ಮೌಲ್ಯ ಮಾಪನ ಮಾಡಿದ ಸ್ಟಾಂಡರ್ಡ್ ಅಂಡ್ ಪೂರ್ (ಎಸ್ ಅಂಡ್ ಪಿ) ಸಂಸ್ಥೆ ಪ್ರಕಟಿಸಿದ ಅಂಕಪಟ್ಟಿ ನೋಡಿ ದೇಶದ ಹಣಕಾಸು ಮಾರುಕಟ್ಟೆ, ಬ್ಯಾಂಕಿಂಗ್ ಉದ್ಯಮ, ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕ್ಷಣ ಕಾಲ ಬೆಚ್ಚಿ ಬಿದ್ದಿತ್ತು. ಅಂಕಪಟ್ಟಿಯಲ್ಲಿ ಬಿಬಿಬಿ ಮೈನಸ್ ರೇಟಿಂಗ್ ಕಂಡು ಷೇರುಪೇಟೆಯಲ್ಲಿಯೂ ಸಣ್ಣಗೆ ನಡುಕ! ವಿವಿಧ ದೇಶಗಳ ಋಣಬಾಧೆ, ಆರ್ಥಿಕ ಸಾಮರ್ಥ್ಯ, ಬ್ಯಾಂಕಿಂಗ್ ನೀತಿ-ರಾಜಕೀಯ ಸ್ಥಿರತೆ ಎಲ್ಲವನ್ನೂ ಸಮಗ್ರವಾಗಿ ಅಧ್ಯಯನ ಮಾಡಿ ಅಂಕ ನೀಡುವ ಎಸ್ ಅಂಡ್ ಪಿ, ಭಾರತದ ಋಣಾತ್ಮಕ ಸ್ಥಿತಿಯತ್ತ ಸಾಗುತ್ತಿದೆ ಎಂಬ ಮುನ್ನೋಟ ನೀಡಿತ್ತು. ದೇಶದ ಪ್ರಮುಖ ಬ್ಯಾಂಕ್‌ಗಳು ಮತ್ತು ದೊಡ್ಡ ಉದ್ದಿಮೆ ಸಂಸ್ಥೆಗಳ ಆರ್ಥಿಕ ಸಾಮರ್ಥ್ಯ-ಆಡಳಿತ ಕ್ರಮ ಆಧರಿಸಿದ ದರ್ಜೆಯನ್ನು (ರೇಟಿಂಗ್) ಕೆಳಕ್ಕಿಳಿಸಿತ್ತು. ಸಂಸ್ಥೆ ಭಾರತವನ್ನು ತಿವಿದು ಎಚ್ಚರಿಸಿತ್ತು. ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಎಸ್‌ಬಿಐ, ಟಿಸಿಎಸ್, ಇನ್‌ಫೋಸಿಸ್, ವಿಪ್ರೊ, ಎಸ್‌ಎಐಎಲ್, ಎನ್‌ಟಿಪಿಸಿ ಮತ್ತಿತರ 21 ದೊಡ್ಡ ಕಂಪನಿಗಳ ಮುನ್ನೋಟದ ರೇಟಿಂಗ್ ಅನ್ನು ಎಸ್ ಅಂಡ್ ಪಿ ಸ್ಥಿರತೆಯಿಂದ ಋಣಾತ್ಮಕ ಸ್ಥಿತಿಗೆ ಇಳಿಸಿತ್ತು. ಭಾರತದ ಈ ಪ್ರಮುಖ ಕಂಪನಿಗಳಿಗೆ ದೀರ್ಘ ಕಾಲದ ಸಾಲ ವಿತರಕರ ರೇಟಿಂಗ್‌ನ ಮೌಲ್ಯಮಾಪನ (ಅಂಕ)ಪಟ್ಟಿಯಲ್ಲಿ ಬಿಬಿಬಿ ಮೈನಸ್`ಗೆ ಇಳಿಸಲಾಗಿದೆ.ಇದಕ್ಕೆಲ್ಲ ಭಾರತದಲ್ಲಿನ ರಾಜಕೀಯ ಅಸ್ಥಿರತೆ, ಹಣಕಾಸು ಮಾರುಕಟ್ಟೆಯಲ್ಲಿನ ಸಡಿಲ ನೀತಿಯೇ ಕಾರಣ ಎನ್ನುವುದರತ್ತಲೂ ಮೌಲ್ಯಮಾಪಕರು ಬೊಟ್ಟು ಮಾಡಿದ್ದರು. ಕೇಂದ್ರದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸ್ವಲ್ಪ ಮಟ್ಟಿಗಾದರೂ ಕಳವಳಗೊಂಡಿದ್ದರು. ಇದು ಎಚ್ಚರಿಕೆ ಗಂಟೆ ಎಂದು ಪ್ರತಿಕ್ರಿಯಿಸಿದ್ದರು. ಇದಕ್ಕೆ ತಕ್ಕಂತೆ, ದೇಶದ ದೊಡ್ಡ ಕಂಪೆನಿಗಳು 2011-12ನೇ ಸಾಲಿನ ಲೆಕ್ಕಪತ್ರ ಮಂಡಿಸುತ್ತಿದ್ದರೆ ಪೇಟೆಯಲ್ಲಿ ನಿರುತ್ಸಾಹ. ಮುಂಚೂಣಿ ಕಂಪೆನಿಗಳ ಸಾಧನೆ ಕಂಡು ಬಿಎಸ್‌ಇ ಸಂವೇದಿ ಸೂಚ್ಯಂಕವಂತೂ ಕೆಳಕ್ಕೇ ಮುಖಮಾಡಿತ್ತು. ಇನ್‌ಫೋಸಿಸ್ ಮತ್ತು ವಿಪ್ರೊದಂತಹ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಲಾಭದಲ್ಲಿ, ವರಮಾನ ಗಳಿಕೆಯಲ್ಲಿ ಕುಸಿತವಾಗಿತ್ತು. ವಿಪ್ರೊ 4ನೇ ತ್ರೈಮಾಸಿಕದಲ್ಲಿ ಲಾಭ ಗಳಿಕೆಯಲ್ಲಿ ಕೇವಲ ಶೇ. 8ರಷ್ಟು ಹೆಚ್ಚಳವನ್ನಷ್ಟೇ ದಾಖಲಿಸಿತ್ತು. ಜತೆಗೆ 3ನೇ ತ್ರೈಮಾಸಿಕದಲ್ಲಿ ಹೊಸದಾಗಿ 5004 ನೌಕರರನ್ನು ನೇಮಿಸಿಕೊಂಡಿದ್ದ ಕಂಪನಿ, 4ನೇ ತ್ರೈಮಾಸಿಕದಲ್ಲಿ ಯಾವುದೇ ನೇಮಕಾತಿ ಕೈಗೊಂಡಿರಲಿಲ್ಲ. ಜತೆಗೆ 2012-13ರ 1ನೇ ತ್ರೈಮಾಸಿಕ ಕುರಿತು ಅಂತಹ ಆಶಾದಾಯಕ ನಿರೀಕ್ಷೆಯನ್ನೇನೂ ಅದು ಪ್ರಕಟಿಸಿರಲಿಲ್ಲ. ಆಟೊಮೊಬೈಲ್ ಉದ್ಯಮದಲ್ಲಿಯೂ ಸಣ್ಣಗೆ ತಲ್ಲಣ. ಪ್ರಮುಖ ಕಾರು ತಯಾರಿಕಾ ಕಂಪನಿ ಮಾರುತಿಯೂ ಮುಖದಲ್ಲೂ ಪೇಲವ ನಗೆ. ಅದರ ಲಾಭ ಗಳಿಕೆಯಲ್ಲಿ ಶೇ. 29ರಷ್ಟು ಕುಸಿತ. ಕಾರುಗಳ ಮಾರಾಟ ಲೆಕ್ಕದಲ್ಲೂ ಭಾರಿ ಇಳಿಕೆ. ಇದೆಲ್ಲದರ ಜತೆಗೆ ಅಮೆರಿಕದ ಡಾಲರ್, ಯೋರೋ, ಪೌಂಡ್ ಎದುರು ಭಾರತದ ರೂಪಾಯಿ ಸತತ ಮೌಲ್ಯ ಕುಸಿತವೂ ಹಣಕಾಸು ಮಾರುಕಟ್ಟೆಯನ್ನು ಚಿಂತೆಗೀಡುಮಾಡುತ್ತಲೇ ಇದೆ. |
ಬ್ರಿಟನ್‌ಗೆ ಕಳೆದ ದಶಕದಲ್ಲಿದ್ದಂತಹುದೇ ಆರ್ಥಿಕ ಹಿಂಜರಿತ ಪರಿಸ್ಥಿತಿ ಈಗಲೂ ಎದುರಾಗಿದೆ. ನಿರುದ್ಯೋಗ ಪ್ರಮಾಣವೂ ಅತ್ಯಧಿಕವಾಗಿದೆ ಎಂದು ಗಮನ ಸೆಳೆದಿದೆ ಡೈಲಿ ಮೇಲ್.
ಇನ್ನೊಂದೆಡೆ ದಿಸೀಸ್ ನಾಟಿಂಗ್‌ಹ್ಯಾಮ್ ಎಂಬ ವೆಬ್‌ಸೈಟ್‌ನಲ್ಲಿ ಮಾತ್ರ ಡಬಲ್ ಡಿಪ್ ರಿಸಿಷನ್ ಎಂಬುದು ಸದ್ಯಕ್ಕೆ ಆತುರದ ಪ್ರತಿಕ್ರಿಯೆ ಎನಿಸುತ್ತದೆ ಎಂಬ ಭಿನ್ನ ಅಭಿಮತವೂ ಪ್ರಕಟವಾಗಿದೆ.
ಇದಕ್ಕೂ ಹೆಚ್ಚು ಕಳವಳ ಉಂಟುಮಾಡುತ್ತಿರುವುದೆಂದರೆ ಅಮೆರಿಕದಿಂದ ಬಂದ ಋಣಾತ್ಮಕ ಸುದ್ದಿ. 2011ರ 4ನೇ ತ್ರೈಮಾಸಿಕದಲ್ಲಿ ಶೇ. 3ಕ್ಕೇರಿದ್ದ ಅಲ್ಲಿನ ಒಟ್ಟಾರೆ ಆಂತರಿಕ ಉತ್ಪಾದನೆ(ಜಿಡಿಪಿ) 2012ರ ಮೊದಲ ಮೂರು ತಿಂಗಳಲ್ಲಿ ಶೇ. 2.2ಕ್ಕೆ ಕುಸಿದಿದೆ ಎಂದಿದೆ ವರದಿ.
ಅಮೆರಿಕದಲ್ಲಿ ಮಾರ್ಚ್‌ನಲ್ಲಿ 1.20 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿ ನಿರುದ್ಯೋಗಿಗಳ ಸಂಖ್ಯೆ ಶೇ. 8.3ರಿಂದ ಶೇ. 8.2ಕ್ಕೆ ಇಳಿಕೆಯಾಗಿದ್ದರೂ ಜಿಡಿಪಿ ಪ್ರಗತಿ ಗತಿಯಲ್ಲಿ ಮಾತ್ರ ಸತತ ಕುಸಿತ!
ಇದರ ಬೆನ್ನಲ್ಲೇ ಜಾಗತಿಕ ಮಟ್ಟದ ಮುಂಚೂಣಿ ಬ್ಯಾಂಕ್ ಎನಿಸಿಕೊಂಡಿರುವ ಎಚ್‌ಎಸ್‌ಬಿಸಿಯಲ್ಲಿ ದೊಡ್ಡ ಮಟ್ಟದಲ್ಲಿ ಸಿಬ್ಬಂದಿ ಕಡಿತದ ಆಘಾತಕಾರಿ ಸುದ್ದಿ!
ಎಚ್‌ಎಸ್‌ಬಿಸಿ ಎಲ್ಲ ಸ್ಥರದಲ್ಲಿಯೂ ಸಿಬ್ಬಂದಿ ಕಡಿತಕ್ಕೆ ಮುಂದಾಗಿದೆ. ಒಟ್ಟು 3167 ಮಂದಿಯನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ.
2013ರ ವೇಳೆಗೆ ಸಿಬ್ಬಂದಿ ಸಂಖ್ಯೆಯನ್ನು 30 ಸಾವಿರಕ್ಕೆ ತಗ್ಗಿಸುವ ನಿರ್ಧಾರ ಮೊದಲೇ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಈ ವರ್ಷ 3167 ಸಿಬ್ಬಂದಿ ಕಡಿತವಾಗಲಿದ್ದು, ಸದ್ಯ 2217 ಉದ್ಯೋಗಿಗಳು ಮುಂಬರುವ ದಿನಗಳಲ್ಲಿ ಹೊರಹೋಗಲಿದ್ದಾರೆ ಎಂದು ಬ್ಯಾಂಕ್ ತಿಳಿಸಿದೆ. ಇದು ಮುಂಬರುವ ದಿನಗಳಲ್ಲಿ ಎಲ್ಲೆಡೆ ಉದ್ಯೋಗ ಕಡಿತ ಭೀತಿ ಎದುರಾಗಲಿರುವ ಸೂಚನೆಯೇ?!
ಚೀನಾದಲ್ಲಿಯೂ 1ನೇ ತ್ರೈಮಾಸಿಕದಲ್ಲಿ ಶೇ. 4.1ರಷ್ಟು ನಿರುದ್ಯೋಗ ಎಂಬ ವರದಿ. ಇನ್ನೊಂದೆಡೆ ಸ್ಪೇನ್‌ನಲ್ಲಿಯೂ ನಿರುದ್ಯೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ.
ಸ್ಪೇನ್‌ನಲ್ಲಿಯೂ 1ನೇ ತ್ರೈಮಾಸಿಕದಲ್ಲಿ 56.30 ಲಕ್ಷ ನಿರುದ್ಯೋಗಿಗಳು. ಅದರಲ್ಲೂ 18ರಿಂದ 24 ವರ್ಷದ ನಡುವಿನ ಯುವಕರಲ್ಲಿ ಅರ್ಧದಷ್ಟು ಜನರಿಗೆ ನೌಕರಿಯೆ ಇಲ್ಲ ಎಂಬ ಅಂಕಿ-ಅಂಶ.
ಇನ್ನೊಂದೆಡೆ ಸ್ಪೇನ್‌ನಲ್ಲಿಯೂ ಆರ್ಥಿಕ ಹಿಂಜರಿತ ಮರುಕಳಿಸಿದೆ. ಇಟಲಿಯಲ್ಲಿಯೂ ಆರ್ಥಿಕ ಹಿಂಜರಿತದ ಭೀತಿ ಮತ್ತೆ ಎದುರಾಗಿದೆ. ಪರಿಣಾಮ ಅಲ್ಲೆಗ ವೇತನ ಪ್ರಮಾಣ ಕಳೆದ 17 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದಿದೆ.
ಇತ್ತ ಭಾರತದಲ್ಲೂ ಆರ್ಥಿಕ ಸಾಮರ್ಥ್ಯ ಇಳಿಮುಖವಾಗುತ್ತಿರುವ ಬಗ್ಗೆ ಸ್ಟಾಂಡರ್ಡ್ ಅಂಡ್ ಪೂರ್ ಸಂಸ್ಥೆಯಿಂದ ಸ್ಥಿರತೆಯಿಂದ ಋಣಾತ್ಮಕದೆಡೆಗೆ ರೇಟಿಂಗ್ ನೀಡಲಾಗಿದೆ. ದೇಶದ ಮುಂಚೂಣಿ ನೆಲೆಯ ಬ್ಯಾಂಕ್‌ಗಳಿಗೆ ಬಿಬಿಸಿ ಮೈನಸ್/ಋಣಾತ್ಮಕ/ಎ3 ದರ್ಜೆ ನೀಡಲಾಗಿದೆ. ಪ್ರಮುಖ ಐಟಿ ಕಂಪೆನಿಗಳದ್ದೂ ಇದೇ ಕಥೆ-ವ್ಯಥೆ.
ಇದೆಲ್ಲದರ ಬೆನ್ನಲ್ಲೇ 4ನೇ ತ್ರೈಮಾಸಿಕ ಮತ್ತು ವಾರ್ಷಿಕ ಹಣಕಾಸು ಫಲಿತಾಂಶ ಹೊರಬೀಳಲಾರಂಭಿಸಿದ್ದು, ಪ್ರಮುಖ ಕಂಪೆನಿಗಳು ಲಾಭ ಗಳಿಕೆಯಲ್ಲಿಯೂ ಕುಸಿತ ಕಾಣುತ್ತಿವೆ.
ಇದೆಲ್ಲ ಸಂಗತಿಗಳೂ ವಿಶ್ವದ ವಿವಿಧ ದೇಶಗಳನ್ನು 2008ರಲ್ಲಿ ಕಂಗೆಡಿಸಿದ್ದ ಆರ್ಥಿಕ ಹಿಂಜರಿತದ ದಿನಗಳನ್ನು ಮತ್ತೆ ನೆನಪಿಸುತ್ತಿವೆ. ಕಳೆದ ಬಾರಿ ಬಚಾವಾಗಿದ್ದ ಭಾರತ ಈ ಬಾರಿ ತಾನೂ ಆರ್ಥಿಕ ಹಿಂಜರಿತ ಸೆಳೆತಕ್ಕೆ ಸಿಲುಕಿ ಜಾರಿಬೀಳುತ್ತಿದೆಯೇ? ಮುಂಬರುವ ದಿನಗಳು ಹೇಗಿರುತ್ತವೆಯೋ?

No comments:
Post a Comment