ಟಿ ಕೆ ದಯಾನಂದ್
ಇರಾನ್ ದೇಶದ ಮಿಯಾನೆ ಎಂಬ ಪಟ್ಟಣ ಸಂಜಾತ ಚಿತ್ರ ನಿರ್ದೇಶಕ ಜಾಫರ್ ಪನಾಹಿ ಇರಾನಿನ ಪರ್ಷಿಯಾ ಚಿತ್ರರಂಗ ಕಂಡ ಅತ್ಯಂತ ವಿವಾದಾಸ್ಪದ ನಿರ್ದೇಶಕರಲ್ಲಿ ಅಗ್ರಗಣ್ಯ. ರಾಜಧಾನಿ ಟೆಹ್ರಾನಿನ ಇರಾನಿ ಬ್ರಾಡ್‌ಕಾಸ್ಟಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಪನಾಹಿ ಎಂಬ ಹುಡುಗ ಮೂಲತಃ ಇರಾನಿ ಸೈನ್ಯದ ಸೈನಿಕನಾಗಿದ್ದವ. ೧೯೮೦ರ ದಶಕದಲ್ಲಿ ನಡೆದ ಇರಾನ್ ಇರಾಕ್ ನಡುವಿನ ಯುದ್ಧದಲ್ಲಿ ಪಾಲ್ಗೊಂಡಿದ್ದ ಪನಾಹಿ ನಂತರದ ದಿನಗಳಲ್ಲಿ ಈ ಯುದ್ಧದ ಬಗ್ಗೆ ತಾನೇ ಚಿತ್ರೀಕರಿಸಿದ ವಿಡಿಯೋ ತುಣುಕುಗಳನ್ನಿಟ್ಟುಕೊಂಡು ಒಂದು ಸಾಕ್ಷ್ಯಚಿತ್ರ ನಿರ್ಮಿಸುತ್ತಾನೆ. ಇರಾನಿನ ಶ್ರೇಷ್ಠ ನಿರ್ದೇಶಕರಲ್ಲೊಬ್ಬನಾದ ಅಬ್ಬಾಸ್ ಕಿಯಾರೋಸ್ತೆಮಿ ಬಳಿ ತ್ರೂ ದಿ ಆಲೀವ್ ಲೀವ್ಸ್ ಚಿತ್ರಕ್ಕಾಗಿ ಸಹಾಯಕ ನಿರ್ದೇಶಕನಾಗಿ ದುಡಿದ ನಂತರ ಆ ಚಿತ್ರದ ನಿರ್ದೇಶಕ ಕಿಯಾರೋಸ್ತೆಮಿ ಬಳಿ ಈಗಾಗಲೇ ತಾನು ನೇಯ್ದಿದ್ದ ಒಂದೆಳೆಯ ಕಥೆಯನ್ನು ಹಂಚಿಕೊಳ್ಳುತ್ತಾನೆ. ತಕ್ಷಣವೇ ಕಥೆಯ ಎಳೆಗೆ ಮನಸೋತ ಕಿಯಾರೋಸ್ತೆಮಿ ಆ ಕಥೆಗೆ ಚಿತ್ರಕಥೆ ಸಂಭಾಷಣೆ ರಚಿಸುವ ಹೊಣೆಯನ್ನು ಹೊತ್ತುಕೊಂಡು ಪನಾಹಿ ನಿರ್ದೇಶನದಲ್ಲಿ ಒಂದು ಅದ್ಭುತ ಪರ್ಷಿಯನ್ ಚಿತ್ರ ಮೂಡಿ ಬರಲು ಜೊತೆಗೆ ನಿಲ್ಲುತ್ತಾನೆ. ಚಿತ್ರದ ಹೆಸರು ದಿ ವೈಟ್ ಬೆಲೂನ್.
ಇರಾನಿ-ಇರಾಕಿ ಚಿತ್ರ ನಿರ್ದೇಶಕರು ಸಾಮಾನ್ಯವಾಗಿ ಬಳಸುವ ಎಳೆಯ ಮನಸ್ಸುಗಳ ಮೂಲಕ ಜಾಗತಿಕ ಆಕ್ರಮಣಗಳನ್ನು ಪ್ರಶ್ನಿಸುವ ಮಾದರಿಯನ್ನು ಪನಾಹಿ ತನ್ನ ದಿ ವೈಟ್ ಬೆಲೂನ್ ಮೂಲಕವೂ ಎಳೆದೊಯ್ದಿದ್ದಾನೆ. ತನ್ನ ಮೊದಲ ಚಿತ್ರದಲ್ಲೇ ಮಕ್ಕಳಿಬ್ಬರ ಶುಭ್ರ ಜಗತ್ತಿನ ಅಮಾಯಕತೆಯ ಸೆಳವಿನೊಳಗೆ ಇರಾನಿನ ಬಡವರ್ಗದ ಹಣಕಾಸುಗಳ ದುಡಿಮೆಯ ಮತ್ತು ಸೈನ್ಯದ ನಿರರ್ಥಕ ಅಸ್ತಿತ್ವಗಳ ಬಿಕ್ಕಟ್ಟನ್ನು ಎಳೆದುಕೊಂಡಿರುವುದು ದಿ ವೈಟ್ ಬೆಲೂನ್ ಚಿತ್ರದ ವೈಶಿಷ್ಟ್ಯ. ಚಿತ್ರದ ಕಥೆಯೇನೆಂದು ನೋಡ ಹೊರಟರೆ ಅಲ್ಲಿ ಕಥೆಯೆಂಬುದರ ಬದಲಾಗಿ ಒಂದು ಘಟನೆಯಷ್ಟೇ ಫ್ರಧಾನವಾಗಿಸಿ ಕಾಸು ಕಳೆದುಕೊಂಡ ಪುಟ್ಟ ಹುಡುಗಿ ರಜಿಯೇಳ ಹುಡುಕಾಟವಷ್ಟನ್ನೇ ಕಥೆಯ ಸ್ವರೂಪಕ್ಕೆ ಒಗ್ಗಿಸಿಕೊಂಡಿರುವ ಪನಾಹಿಯ ಕಥನತಂತ್ರ ಮೆಚ್ಚಲರ್ಹವಾದುದು. ಚಿತ್ರದ ಪುಟ್ಟನಾಯಕಿ ರಜಿಯೇ (ಐದಾ ಮಹಮ್ಮದ್‌ಖಾನಿ) ಹೊಸವರ್ಷದ ಇಳಿಸಂಜೆಯಲ್ಲಿ ಆಕೆಯ ತಾಯಿಯೊಡನೆ ಸಂತೆಯಲ್ಲಿ ದಿನಸಿ ಖರೀದಿಸುವಲ್ಲಿಂದ ಚಿತ್ರ ಪ್ರಾರಂಭಗೊಳ್ಳುತ್ತದೆ. ಸಂತೆಯ ಅಂಗಡಿಯಲ್ಲಿ ನೋಡಿದ ಗಾಜಿನ ಪೆಟ್ಟಿಗೆಯೊಳಗಿನ ಚಿನ್ನದ ಬಣ್ಣದ ಮೀನುಗಳಿಗೆ ತನ್ನ ಆಸೆಯನ್ನು ಅಡವಿಡುತ್ತಾಳೆ. ತನ್ನ ಮಣ್ಣುಗೋಡೆಯ ಮನೆಯೊಳಗಿನ ಕೊಳದೊಳಗಿನ ಬಡಕಲು ಮೀನುಗಳ ಮೇಲೆ ರಜಿಯೇ ಸಿಟ್ಟಿಗೆದ್ದಿದ್ದಾಳೆ. ತಮ್ಮ ಬಣ್ಣವಿಲ್ಲದ ಬಡಕಲು ಮೈಯನ್ನು ಬಿಟ್ಟುಕೊಂಡು ತನ್ನ ಮನೆಯ ಕೊಳದೊಳಗೆ ಈಜುತ್ತಿರುವ ಈ ಮೀನುಗಳ ಜಾಗದಲ್ಲಿ ನಾಲ್ಕು ರೆಕ್ಕೆಯ ಬಣ್ಣದ ಮೀನನ್ನು ಬಿಡಬೇಕೆಂಬ ಕನಸು ಅವಳೊಳಗೆ ಹೆಡೆಯೆತ್ತಿ ಪೂತ್ಕರಿಸುತ್ತಿದೆ.
ಮನೆಗೆ ಬಂದನಚಿತರ ಅವಳ ತಾಯಿಗೆ ನಾಲ್ಕು ರೆಕ್ಕೆಯ ಬಣ್ಣದ ಮೀನನ್ನು ಕೊಡಿಸಲು ದುಂಬಾಳು ಬೀಳುವ ರಜಿಯೇಳಿಗೆ ಅಮ್ಮನಿಂದ ಬೈಗುಳವಷ್ಟೇ ಸಿಗುತ್ತದೆ. ಈ ಬಡಕಲು ಮೀನುಗನ್ನು ತೆಗೆದು ಬಣ್ಣದ ಮೀನುಗಳನ್ನು ಕೊಳಕ್ಕೆ ಬಿಡೋಣ ಹೊಸ ವರ್ಷದ ದಿನ ಎಲ್ಲರೂ ಹೊಸ ಮೀನು ತೆಗೆದುಕೊಳ್ಳುತ್ತಿದ್ದಾರೆ ನನಗೂ ಕೊಡಿಸು ಎಂಬುದು ರೆಜಿಯೇಳ ಆಸೆಯ ವರಾತ. ಖಡಾಖಂಡಿತವಾಗಿ ಸಾಧ್ಯವಿಲ್ಲವೆಂಬ ಅಮ್ಮನ ನಿರ್ಧಾರದಿಂದ ಬೇಸರಗೊಳ್ಳುವ ರಜಿಯೇ, ತನ್ನ ಅಣ್ಣ ಬಾಲಕ ಆಲಿಗೆ ಅಮ್ಮನಿಂದ ಮೀನು ತೆಗೆದುಕೊಳ್ಳಲು ಹಣ ಕೊಡಲು ಒಪ್ಪಿಗೆ ತಂದರೆ ತನ್ನ ಬಳಿ ಇರುವ ಯಾಂತ್ರೀಕೃತ ಆಟದ ಗೊಂಬೆಯನ್ನು ಬದಲಿಗೆ ಕೊಡುವ ಒಪ್ಪಂದ ಮಾಡಿಕೊಳ್ಳುತ್ತಾಳೆ. ಬೀಳಬಾರದ ಪಾಡು ಬಿದ್ದು ತನ್ನ ತಾಯಿಯನ್ನು ಆಲಿ ಮೀನಿಗೆ ಹಣ ಕೊಡಿಸಲು ಒಪ್ಪಿಸಿ ರೆಜಿಯೇಳ ಕೈಗೆ ೫೦೦ ತೋಮನ್ (ಇರಾನಿ ಕರೆನ್ಸಿ)ಗಳನ್ನು ಕೊಡಿಸುತ್ತಾನೆ. ೨೦೦ ತೋಮನ್ ಬೆಲೆಬಾಳುವ ಬಣ್ಣದ ಮೀನನ್ನು ಕೊಂಡುಕೊಳ್ಳಲು ಆ ೫೦೦ ತೋಮನ್ ನೋಟನ್ನು ಗಾಜಿನ ಬಟ್ಟಲೊಳಗೆ ಹಾಕಿಕೊಂಡು ಓಡುವ ರೆಜಿಯೇ ಹಾವಾಡಿಸುವ ಡರ್ವಿಶ್‌ಗಳ ಗುಂಪಿನೊಳಗೆ ಸೇರಿ ಕೊಂಚ ಹೊತ್ತು ಹಾವಾಡಿಸುವುದನ್ನು ನೋಡಿಕೊಂಡು ಮತ್ತೆ ಬಟ್ಟಲು ಹಿಡಿದು ಮೀನಿನ ಅಂಗಡಿಗೆ ಓಡುತ್ತಾಳೆ. ಅಂಗಡಿಗೆ ಬಂದು ನೋಡುವಷ್ಟರಲ್ಲಿ ಅವಳ ಗಾಜಿನ ಬಟ್ಟಲೊಳಗಿದ್ದ ೫೦೦ ತೋಮನ್‌ನ ನೋಟು ನಾಪತ್ತೆಯಾಗಿದೆ. ದಾರಿಯಲ್ಲಿ ಬರುವಾಗ ಎಲ್ಲೋ ಬೀಳಿಸಿಕೊಂಡಿದ್ದಾಳೆ.
ಕಣ್ಣೊಳಗೆ ಮಳೆಗಾಲವನ್ನೇ ತುಂಬಿಕೊಂಡ ರಜಿಯೇಗೆ ದಿಕ್ಕು ತೋಚದಂತಾಗುತ್ತದೆ, ಕಳೆದುಕೊಂಡ ನೋಟನ್ನು ವಾಪಸ್ಸು ತರುವುದಾಗಿಯೂ ಅಲ್ಲಿಯವರೆಗೆ ಆ ಮೀನನ್ನು ಯಾರಿಗೂ ಮಾರಬಾರದೆಂದು ಅಂಗಡಿಯವನಿಂದ ಭಾಷೆ ತೆಗೆದುಕೊಂಡು ಮತ್ತೆ ತಾನು ಓಡುತ್ತ ಬಂದ ಸಂದುಗೊಂದುಗಳಲ್ಲಿ ನೋಟನ್ನು ಹುಡುಕಿಕೊಂಡು ಅಲೆಯುತ್ತಾಳೆ, ಎಲ್ಲಿಯೂ ಸಿಗುವುದಿಲ್ಲ, ತನ್ನನ್ನು ಹುಡುಕುತ್ತ ಬಂದ ಅಣ್ಣ ಆಲಿಗೆ ವಿಷಯ ತಿಳಿಸುತ್ತಾಳೆ, ಆತನೂ ಸೇರಿಕೊಂಡು ಎಲ್ಲೆಡೆ ಆ ನೋಟನ್ನು ಹುಡುಕುತ್ತಾ ಬಾಗಿಲು ಮುಚ್ಚಿದ ಒಂದು ಅಂಗಡಿಯ ಮುಂದೆ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಎದುರಿಗಿನ ಚರಂಡಿಯ ಒಳಗೆ ರಜಿಯೇಳ ನೋಟು ಬಿದ್ದಿದೆ. ಚರಂಡಿಗೆ ಮೇಲಿನಿಂದ ಕಬ್ಬಿಣದ ಸರಳುಗಳು ಅಡ್ಡಲಾಗಿವೆ, ಸರಳುಗಳನ್ನು ತೆಗೆಯಲು ಬೀಗವಿರುವ ಅಂಗಡಿಯವನು ಅಂಗಡಿ ಮುಚ್ಚಿ ಎರಡು ವಾರಗಳ ರಜೆಯ ಮೇಲೆ ತೆರಳಿದ್ದಾನೆ. ಇಲ್ಲಿಂದ ಚಿತ್ರದ ಕೊನೆಯವರೆಗೂ ಆ ನೋಟನ್ನು ತೆಗೆದುಕೊಳ್ಳಲು ರಜಿಯೇ ಮತ್ತವನ ಅಣ್ಣ ಆಲಿ ನಡೆಸುವ ಅವರ ಮಿತಿಯೊಳಗಿನ ತರಾವರಿ ಸಾಹಸಗಳೇ ಇಡೀ ಚಿತ್ರದ ಕಥೆ. ಬೀಳಬಾರದ ಹರಸಾಹಸಗಳನ್ನೆಲ್ಲ ಬಿದ್ದಾದ ಮೇಲೂ ೫೦೦ ಮುಖಬೆಲೆಯ ತೋಮನ್ ನೋಟು ರಜಿಯೇಗೆ ಮರೀಚಿಕೆಯೇ ಆಗಿ ಉಳಿದಿದೆ. ಖಾಲಿ ಕೈಯಲ್ಲಿ ಮನೆಗೆ ಹೋದರೆ ದುಡಿಮೆಯ ದುಡ್ಡನ್ನು ಕಳೆದುಬಂದ ತಪ್ಪಿಗೆ ಏಟು ಬೀಳುತ್ತವೆ, ಜೊತೆಗೆ ಎರಡು ದಿನಗಳ ಕಾಲ ರಜಿಯೇ ಕುಟುಂಬ ಉಪವಾಸವಿರಬೇಕಿದೆ.
ಇಂಥಲ್ಲಿ ಏನೂ ತೋಚದೆ ಕುಳಿತ ರಜಿಯೇ ಪಕ್ಕ ಒಬ್ಬ ಸೈನಿಕ ಕುಳಿತುಕೊಂಡು ತನ್ನ ಬಗ್ಗೆ ಹೇಳಿಕೊಳ್ಳುತ್ತಾನೆ, ಅಪರಿಚಿತರೊಡನೆ ಮಾತನಾಡದಿರುವಂತೆ ಅಮ್ಮನ ಸೂಚನೆಯಂತೆ ಸೈನಿಕನೊಟ್ಟಿಗೆ ರಜಿಯೇ ಮಾತನಾಡುತ್ತಿಲ್ಲ.. ನಂತರ ಸೈನಿಕನ ತಂಗಿಯರು ಅವನ ಮನೆಯ ಬಗ್ಗೆ ವಿವರಗಳನ್ನು ಕೇಳುತ್ತ ಕೇಳುತ್ತ ಸೈನಿಕನು ಅಪರಿಚಿತನಲ್ಲ,, ಈತನೂ ತನ್ನದೇ ಬಗೆಯ ಹಸಿವಿನ ಕುಟುಂಬದಿಂದ ಬಂದ ಪರಿಚಿತ ಎನ್ನಿಸತೊಡಗುತ್ತದೆ. ರಜಿಯೇ ಮತ್ತು ಸೈನಿಕ ನಡುವಿನ ಮಾತುಕತೆಗಳಲ್ಲಿ ಇರಾನಿನ ಸೈನ್ಯ, ನಿರರ್ಥಕ ಯುದ್ಧ, ಹೊಟ್ಟೆಪಾಡಿನ ದೇಶಸೇವೆ ಎಲ್ಲವೂ ಬಂದುಹೋಗುತ್ತವೆ. ತನ್ನ ನೋಟು ಕಳೆದ ವಿಷಯ ಸೈನಿಕನೊಳಗೆ ಯಾವ ತಲ್ಲಣವನ್ನೂ ಹುಟ್ಟಿಸುತ್ತಿಲ್ಲ ಎಂದು ರಜಿಯೇ ಅಚ್ಚರಿಗೊಳಗಾಗುತ್ತಾಳೆ. ಗಜಿಬಿಜಿಯ ಸಂತೆಯ ನಡುವೆ ಕಳೆದು ಹೋದ ನೋಟಿಗೆ ಕಾವಲಿಗೆ ಕುಳಿತ ತನ್ನ ಸಂಕಟವನ್ನು ಈ ಸಂತೆಯೇಕೆ ತಿರುಗಿ ನೋಡುತ್ತಿಲ್ಲ ಎಂದುಕೊಳ್ಳುತ್ತಾಳೆ. ಕಳೆದುಕೊಂಡ ಸಂಕಟ ಅವಳೊಬ್ಬಳದ್ದು ಮಾತ್ರವೆಂದು ಸಂತೆ ನಿಮಿಷ ನಿಮಿಷಕ್ಕೂ ತನ್ನಪಾಡಿಗೆ ತಾನು ಚಿತ್ರಗಳನ್ನು ಬದಲಿಸಿಕೊಳ್ಳುತ್ತಿದೆ.
ಕೊನೆಗೆ ರಜಿಯೇಳ ಅಣ್ಣ ಒಂದು ಉಪಾಯದೊಂದಿಗೆ ಬೀದಿಯಲ್ಲಿ ಬೆಲೂನು ಮಾರುವ ಬೀದಿವ್ಯಾಪಾರಿ ಹುಡುಗನಿಂದ ಬೆಲೂನು ಕಟ್ಟಿದ್ದ ಕೋಲೊಂದನ್ನು ಪಡೆದು ಅದರ ತುದಿಗೆ ಚೂರು ಅಂಟನ್ನು ಮೆತ್ತಿ ಚರಂಡಿಯ ಮೇನಿನ ಸರಳುಗಳ ಮೂಲಕ ಕೋಲನ್ನು ಒಳಗೆ ತೂರಿಸಿ ಅಲ್ಲಿ ಬಿದ್ದಿದ್ದ ರಜಿಯೇಳ ನೋಟನ್ನು ಕೋಲಿಗೆ ಅಂಟಿಕೊಳ್ಳುವಂತೆ ಮಾಡಿ ನೋಟನ್ನು ಹೊರತೆಗೆಯುತ್ತಾನೆ. ತೆಹ್ರಾನಿನ ಬಡವರು ಮತ್ತು ಇರಾನಿನ ಕೆಲಸಕ್ಕೆ ಬಾರದ ದೇಶರಕ್ಷಣೆಯ ಆದ್ಯತೆ ಹಾಗೂ ಬೆಳೆದುನಿಂತ ದೊಡ್ಡವರ ಜಗತ್ತನ್ನು ರಜಿಯೇಳ ಕಣ್ಣಿಂದ ಅಬೋಧವಾಗಿ ಪರಾಮರ್ಶಿಸುವ ನಿರ್ದೇಶಕ ಪನಾಹಿ ಕಳೆದು ಹೋದ ರಜಿಯೇಳ ನೋಟಿನ ಜಾಗದಲ್ಲಿ ಬಿಕ್ಕಟ್ಟಿಗೆ ಸಿಲುಕಿದ ಜಾಗತಿಕ ಶಾಂತಿಯನ್ನೂ, ನೋಟನ್ನು ಹೊರತೆಗೆಯುವ ಕೋಲಿಗೆ ಸಿಗಿಸಿದ ಬೆಲೂನಿನೊಳಗಿನ ಬಡ ಬೀದಿ ವ್ಯಾಪಾರಿಯ ಉಸಿರನ್ನು ಪರಿಹಾರವಾಗಿಸಿದ್ದಾನಾ? ಎಂಬ ಅನುಮಾನಗಳು ಥಟ್ಟನೆ ಮೂಡುತ್ತವೆ. ರಜಿಯೇ ಪಾತ್ರಧಾರಿ ಐದಾ ಮಹಮ್ಮದ್‌ಖಾನಿಯೆಂಬ ೭ ವರ್ಷದ ಬಾಲಕಿಯಿಂದ ತೆಗೆದಿರುವ ಅನುಭವ ಅದನ್ನು ಅಭಿನಯವೆಂದು ಹೇಳಲು ಸಾಧ್ಯವೇ ಇಲ್ಲದಷ್ಟು ಸಹಜವಾಗಿದೆ. ನೋಟು ಕಳೆದುಕೊಂಡ ಹುಡುಗಿಯೊಬ್ಬಳ ಹಿಂದೆ ಪನಾಹಿ ಸುಮ್ಮನೆ ಕೆಮೆರಾ ಓಡಾಡಿಸಿದ್ದಾನಾ ಎನ್ನುವಷ್ಟು ಆ ಹುಡುಗಿಯ ಅಭಿನಯ ಅತ್ಯದ್ಭುತ, ಬೆಲೂನಿನ ಕೋಲಿನಿಂದ ನೋಟು ತೆಗೆದ ರಜಿಯೇ ತನ್ನ ಗಾಜಿನ ಬಟ್ಟಲೊಳಗೆ ನಾಲ್ಕು ರೆಕ್ಕೆಯ ಮೀನನ್ನೂ, ಚಿಲ್ಲರೆ ಕಾಸನ್ನು ಬಿಗ್ಗಿಯಾಗಿ ಹಿಡಿದ ಅವಳ ಕೈಯನ್ನೂ ಪನಾಹಿಯ ಅಂತರಂಗದ ಕಣ್ಣು ಚಿತ್ರದ ಕೊನೆಯಲ್ಲಿ ಕೇಂದ್ರೀಕರಿಸುವುದು ಚಪ್ಪಾಳೆಗೆ ತಕ್ಕುನಾದ ಅಂಶ.

ಅಮಾಯಕತೆಯ ಜಗತ್ತಿನಲ್ಲಿಯೂ ಜಾಗತಿಕ ಸಂಕೀರ್ಣ ಸಮಸ್ಯೆಗಳನ್ನು ಚರ್ಚೆಗೊಡ್ಡಬಹುದು ಎಂಬುದನ್ನು ದೊಡ್ಡಮಟ್ಟದಲ್ಲಿ ಈ ಚಿತ್ರದ ಮೂಲಕ ಅರಿತುಕೊಂಡ ಪನಾಹಿ ನಂತರ ನಿರ್ಮಿಸಿದ ನಿರ್ದೇಶಿಸಿದ ಅಷ್ಟೂ ಚಿತ್ರಗಳು ವಿವಾದಾತ್ಮಕ ಚಿತ್ರಗಳೇ. ತಾನಿದ್ದ ದೇಶವನ್ನೇ ಎದುರುಹಾಕಿಕೊಂಡು ಅಂತರರಾಷ್ಟ್ರೀಯ ಚಿತ್ರರಂಗದ ಅಂಗಳದಲ್ಲಿ ಇರಾನಿನ ಸ್ಥಿತ್ಯಂತರಗಳು ಮತ್ತು ಸಾಮಾಜಿಕ ಪಲ್ಲಟಗಳನ್ನು ಆಧರಿಸಿದ ಚಿತ್ರಗಳನ್ನು ಚರ್ಚೆಗೆ ಬಿಟ್ಟು ಇರಾನ್ ಸರ್ಕಾರದಿಂದ ಲೆಕ್ಕವಿಲ್ಲದಷ್ಟು ಸಲ ದಿಗ್ಬಂಧನ, ಪಾಸ್‌ಪೋರ್ಟ್ ರದ್ದು ಮತ್ತು ಪತ್ನಿ-ಮಗಳ ಸಮೇತ ಜೈಲುವಾಸವನ್ನು ಕಂಡ ಅಪರೂಪದ ಚಿತ್ರಜೀವ ಜಾಫರ್ ಪನಾಹಿಯದ್ದು. ಕೆಲ ವರ್ಷಗಳ ಹಿಂದೆ ಇರಾನಿನ ಚುನಾವಣೆಯ ಸಂದರ್ಭದಲ್ಲಿ ನಡೆದ ಸರ್ಕಾರದ ವಿರೋಧಿ ಪ್ರತಿಭಟನಾಕಾರರ ಹತ್ಯೆಯನ್ನು ಖಂಡಿಸಿ ದನಿಯೆತ್ತಿದ್ದ ಪನಾಹಿಯನ್ನು ಅನಾಮತ್ತಾಗಿ ಸರ್ಕಾರದ ವಿರುದ್ಧ ಸಂಚಿನ ಆರೋಪ ಹೊರಿಸಿ ಜೈಲುಪಾಲು ಮಾಡಲಾಗಿತ್ತು. ದೇಶದ ಸರ್ಕಾರವನ್ನೇ ಎದುರು ಹಾಕಿಕೊಂಡಿರುವ ಪನಾಹಿಯ ಚಿತ್ರಜಗತ್ತಿನ ಜೊತೆಗಿನ ಒಡನಾಟವೇ ಸರ್ಕಾರದ ಕೆಂಗಣ್ಣಿನಿಂದಾಗಿ ಅಂತ್ಯಗೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ೪೯ರ ಹರೆಯದ ಬಂಡುಕೋರ ಚಿತ್ರ ನಿರ್ದೇಶಕ ಜಾಫರ್ ಪನಾಹಿ ಸದ್ಯಕ್ಕೆ ಇರಾನ್ ದೇಶವನ್ನು ತ್ಯಜಿಸುವ ನಿರ್ಧಾರದಲ್ಲಿದ್ದಾನೆ.
No comments:
Post a Comment