ಲೇಖಕರು:- ಡಾ | ಜಿ. ರಾಮಕೃಷ್ಣ
ಕೃಪೆ:- ಪ್ರಜಾವಾಣಿ
ನಮ್ಮ ಸಮಾಜದಲ್ಲಿ ಅಸಮಾನತೆ ನಿನ್ನೆ -ಮೊನ್ನೆಯದಲ್ಲ. ಅದಕ್ಕೆ ಹಲವು ಶತಮಾನಗಳ ಚರಿತ್ರೆ ಇದೆ. ಬೇರೆ ವಿಷಯಗಳಲ್ಲಿ ಅಸಮಾನತೆಯು ತುಂಬಿರುವಂತೆ ಶಿಕ್ಷಣ ಕ್ಷೇತ್ರದಲ್ಲೂ ಅದು ವ್ಯಾಪಕವಾಗಿದೆ.
ಅದು ಎಷ್ಟರಮಟ್ಟಿಗೆಂದರೆ, ಆರ್ಥಿಕ ಚೈತನ್ಯ ಇರುವವರು ಒಳ್ಳೆಯ ಶಿಕ್ಷಣ ಪಡೆಯಲು ಸಾಧನ ಮತ್ತು ಅಂತಹ ಚೈತನ್ಯವಿಲ್ಲದವರು ಶಾಲಾ ಮಟ್ಟದಿಂದ ಮೇಲಕ್ಕೆ ಹೋಗುವುದು ಸಹ ಕಠಿಣ.
1964ರ ಕೊಠಾರಿ ಆಯೋಗವು ಏಕಪ್ರಕಾರವಾದ ಸಮಾನ ಶಿಕ್ಷಣವು ಎಲ್ಲ ಮಕ್ಕಳಿಗೂ ದೊರೆಯಬೇಕೆಂಬ ಆಶಯದಿಂದ ಆಯಾ ಶಾಲೆಯ ಸನಿಹದಲ್ಲಿ ವಾಸಿಸುವ ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶ ನೀಡಬೇಕೆಂದು ಆಗ್ರಹಿಸಿತ್ತು ಮತ್ತು ಎಲ್ಲ ಶಾಲೆಗಳಲ್ಲೂ ಕಲಿಕೆಯ ಸಾಮಗ್ರಿ ಹಾಗೂ ಪದ್ಧತಿ ಹೆಚ್ಚು ಕಡಿಮೆ ಒಂದೇ ಆಗಿರಬೇಕೆಂದು ನಿರ್ದೇಶಿಸಿತ್ತು.
ನಮ್ಮ ದೇಶದಲ್ಲಿ ಇದೆಂದೂ ಗಂಭೀರವಾಗಿ ಪರಿಗಣನೆಗೆ ಬರಲಿಲ್ಲ. ಬದಲಾಗಿ 1950ರ ದಶಕದ ನಂತರ ಸಮಾಜದ ಬೇರೆ ಬೇರೆ ಸ್ತರದವರಿಗೆ ಬೇರೆ ಬೇರೆ ಶಾಲೆಗಳು ಎಂಬ ಅಲಿಖಿತ ನಿಯಮ ಜಾರಿಗೆ ಬಂದಿತು. ಶ್ರೀಮಂತ ರಾಜಕಾರಣಿಯ ಮಕ್ಕಳು, ಸರ್ಕಾರದ ಉನ್ನತ ಅಧಿಕಾರಿಗಳ ಮಕ್ಕಳು ಮತ್ತು ಅತಿಸಾಮಾನ್ಯರ ಮಕ್ಕಳು ಒಟ್ಟೊಟ್ಟಿಗೆ ಒಂದೇ ಶಾಲೆಯಲ್ಲಿ ಅಕ್ಕಪಕ್ಕದಲ್ಲಿ ಕೂತು ಕಲಿಯುವ ಸಂಪ್ರದಾಯ ಅಲ್ಲಿಂದೀಚೆಗೆ ವಿರಳವಾಗುತ್ತಾ ಬಂದಿದೆ.
ಕಲಿಸುವ ಕ್ರಮದಲ್ಲಿ ಸಹ ಸಮಾನತೆ ಇಲ್ಲ. ಯಾವುದೇ ಹಂತದ ಮಕ್ಕಳಿಗೆ ಹೇಗೆ ಪಾಠ ಕಲಿಸಬೇಕೆಂಬುದು ಶೈಕ್ಷಣಿಕ ತತ್ವದ ವಿಚಾರ. ಒಂದು ವರ್ಗದ ಮಕ್ಕಳಿಗೆ ಅದು ಸರಿಯಾದ ವಿಧಾನವೆಂದರೆ ಬೇರೆ ವರ್ಗದ ಮಕ್ಕಳಿಗೂ ಅದೇ ವಿಧಾನ ಸ್ವೀಕಾರಾರ್ಹವಾಗಿರಬೇಕು.
ಯಾವ ವರ್ಗದವರಾದರೇನು, ಕಲಿಕೆಯು ಒಂದೇ ತಾನೆ? ಹೀಗಿದ್ದೂ ನಮ್ಮ ಇಂದಿನ ವ್ಯವಸ್ಥೆಯಲ್ಲಿ ಬೋಧನಾ ವಿಧಾನದಲ್ಲಿ ಸಹ ಪ್ರತ್ಯೇಕತೆ ಮನೆ ಮಾಡಿಕೊಂಡಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ನಲಿ - ಕಲಿ ಎಂಬ ವಿಧಾನವನ್ನು ಕೆಲವು ತರಗತಿಗಳ ಹಂತದಲ್ಲಿ ಅಳವಡಿಸಿದ್ದಾರೆ, ಆದರೆ ಆ ವಿಧಾನವು ಪ್ರತಿಷ್ಠಿತರ ಖಾಸಗಿ ಶಾಲೆಗಳಲ್ಲಿ ಅನುಸರಿಸಲಾಗುತ್ತಿಲ್ಲ.
ಈ ವಿಧಾನದ ಪ್ರಯೋಗಕ್ಕೆ ಸರ್ಕಾರಿ ಶಾಲೆಯ ಮಕ್ಕಳು! ವಿದೇಶಿ ಔಷಧಿ ಕಂಪೆನಿಗಳು ನಮ್ಮ ದೇಶದ ರೋಗಿಗಳ ಮೇಲೆ ಹೊಸ ಔಷಧಿಗಳ ಪ್ರಯೋಗ ನಡೆಸುತ್ತಾರಲ್ಲಾ, ಹಾಗೆ.
ಶಿಕ್ಷಣದ ಹಕ್ಕಿನ ಕಾಯ್ದೆಯನ್ನು ಜಾರಿಗೊಳಿಸಬೇಕೆಂಬ ಆಜ್ಞೆಯನ್ನು ಸರ್ಕಾರವು ಹೊರಡಿಸಿದ್ದ ತರುವಾಯದಲ್ಲಿ ಬಂದಿರುವ ಕೆಲವು ಪ್ರತಿಕ್ರಿಯೆಗಳು ನಮ್ಮ ಸಮಾಜದ ಶ್ರೇಣೀಕರಣ ಎಷ್ಟು ಆಳವಾದ್ದು ಮತ್ತು ಗಟ್ಟಿಯಾದ್ದು ಎಂಬುದನ್ನು ತೋರಿಸಿಕೊಟ್ಟಿವೆ.
ಕೆಳಸ್ತರದ ಮಕ್ಕಳು ಅನುದಾನ ಪಡೆಯದ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದರೆ ಶೈಕ್ಷಣಿಕ ವಾತಾವರಣ ಹಾಳಾಗುತ್ತದೆ, ಎಂದು ಹೇಳುವಷ್ಟು ಧಾರ್ಷ್ಟ್ಯ ಈ ಖಾಸಗಿ ಶಾಲೆಗಳದ್ದು, ಸರ್ಕಾರವು ನಿಗದಿಗೊಳಿಸಿರುವ ಶೇ 25 ರಷ್ಟು ಸರ್ಕಾರಿ ಮಕ್ಕಳು ಈ ಪ್ರತಿಷ್ಠಿತ ಶಾಲೆಗಳಿಗೆ ಹೋಗಬೇಕಾದ ಪ್ರಮೇಯ ಬಂದಿರುವುದು, ಅವು ಆ ಮಕ್ಕಳಿಗೆ ಹತ್ತಿರದ ಶಾಲೆಗಳು ಎಂಬ ಕಾರಣಕ್ಕೆ.
ಸರ್ಕಾರವು ಆ ಮಕ್ಕಳ ಪರವಾಗಿ ಖಾಸಗಿ ಶಾಲೆಗೆ ದೊಡ್ಡಪ್ರಮಾಣದ ಶುಲ್ಕ ನೀಡುತ್ತದೆ. ಆದರೆ ಈ ಖಾಸಗಿ ಶಾಲೆಗಳ ದೃಷ್ಟಿಯಲ್ಲಿ ಆ ಮಕ್ಕಳು ಕಲಿಯಲು ಅನರ್ಹರು, ಬೇರೆ ಮಕ್ಕಳ ಕಲಿಕೆಗೆ ಇವರಿಂದ ಬಾಧೆಯುಂಟಾಗುತ್ತದೆ! ಅಂತರಾರ್ಥ ಬೇರೆಯೇ ಇದೆ: ಕೆಳಮಟ್ಟದ ಮಕ್ಕಳೊಡನೆ ಪ್ರತಿಷ್ಠಿತ ವರ್ಗದ ಮಕ್ಕಳು ಬೆರೆಯಲು ಇಷ್ಟಪಡುವುದಿಲ್ಲ; ಅದು ಕೂಡದು, ಎಂಬುದು ಸಂದೇಶ.
ಶಿಕ್ಷಣದಲ್ಲಿ ಸಾಮಾಜಿಕ ನೈತಿಕತೆಯ ಕಲ್ಪನೆ ಯಾವ ಅಸಹನೆ ಹಂತವನ್ನು ತಲುಪಿದೆಯೆಂಬುದಕ್ಕೆ ಇದಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಶಿಕ್ಷಣಕ್ಕೆಂದು ಸರ್ಕಾರವು ಶೇಕಡ ಮೂರರಷ್ಟು ತೆರಿಗೆ ವಸೂಲು ಮಾಡುತ್ತದೆ, ಆದರೆ ಶಿಕ್ಷಣ ನೀಡುವುದರಲ್ಲಿ ತಾರತಮ್ಯವಿದೆ.
ಶಿಕ್ಷಣದ ಹಕ್ಕಿನ ಕಾಯ್ದೆಯು ಮೂಲತಃ ನಮ್ಮ ದೇಶದ ಸಂವಿಧಾನದ ನಿರ್ದೇಶನವೊಂದರ ಫಲವಾಗಿ ಬಂದಿದೆ: 6 ರಿಂದ 14 ವಯಸ್ಸಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ಆ ನಿಬಂಧನೆ ಸೂಚಿಸಿದೆ. ಅಂದರೆ, ಎಂಟು ವರ್ಷಗಳ ಶಿಕ್ಷಣ ಎಂದಾಯಿತು. 1950ರ ದಶಕದಲ್ಲಿ ನಾಲ್ಕು ವರ್ಷ ಪ್ರಾಥಮಿಕ ಶಿಕ್ಷಣ, ನಾಲ್ಕು ವರ್ಷ ಮಾಧ್ಯಮಿಕ, ನಂತರ ಮೂರು ವರ್ಷ ಮೆಟ್ರಿಕ್ಯುಲೇಶನ್ (ಎಸ್.ಎಸ್.ಎಲ್.ಸಿ.), ಎಂಬ ಪದ್ಧತಿ ಇತ್ತು.
ಆದ್ದರಿಂದ 6 ರಿಂದ 14 ವರ್ಷದವರೆಗಿನ ಕಡ್ಡಾಯ ಶಿಕ್ಷಣ ಸೂತ್ರವನ್ನು ಸೂಚಿಸಲಾಗಿತ್ತು. ಈಗ ಅದು ನಾಲ್ಕು, ಮೂರು, ಮೂರು ಆಗಿದೆ. 21ನೆಯ ಶತಮಾನದಲ್ಲಿ ಪ್ರೀ-ಯೂನಿವರ್ಸಿಟಿವರೆಗಿನ ಶಿಕ್ಷಣ ಯಾವುದೇ ಉದ್ಯೋಗಕ್ಕೂ ಕನಿಷ್ಠ ಅರ್ಹತೆ ಎನ್ನುವಂತಾಗಿದೆ.
ಹೀಗಿರುವಾಗ ಎಂಟು ವರ್ಷದ ಶಿಕ್ಷಣ (ಅಂದರೆ, ಪ್ರೌಢ ಶಾಲೆಯ ಮೊದಲ ತರಗತಿ) ಯಾವ ಅರ್ಥದಲ್ಲಿ ಯೋಗ್ಯವಾದೀತು? 1950 ರಲ್ಲಿ ಎಂಟನೆಯ ತರಗತಿಯ ಸಾರ್ವಜನಿಕ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಲು ಅರ್ಹತೆಯುಂಟು ಎಂದು ಪರಿಗಣಿಸಲಾಗಿತ್ತು.
ಅಂದಿನ ಸೂತ್ರ ಇಂದಿಗೆ ಸರ್ವಥಾ ಅಪ್ರಯೋಜಕ. ಆದ್ದರಿಂದ 6 ರಿಂದ 14 ಎಂಬುದನ್ನು ಪರಿಷ್ಕರಿಸಿ 18ನೆಯ ವರ್ಷದವರೆಗೆ ಶಿಕ್ಷಣವು ಕಡ್ಡಾಯವಾಗಬೇಕೆಂದು ಸ್ವೀಕರಿಸಬೇಕು. ಅದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ಸಹ ಬೇಕಾಗುತ್ತದೆ. ವಿಶ್ವ ಸಂಸ್ಥೆಯು ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ 18 ವರ್ಷದವರೆಗಿನವರನ್ನೆಲ್ಲಾ ಮಕ್ಕಳು ಎಂದೇ ಪರಿಗಣಿಸಲಾಗಿದೆ.
ಈಗಿನ ಶಾಲಾ ಪದ್ಧತಿಯಲ್ಲಿ 14 ವರ್ಷದ ಮಕ್ಕಳು ಎಂಟನೆಯ ತರಗತಿಯಲ್ಲಿರುತ್ತಾರೆ. ಆ ಕಲಿಕೆಯ ಮಟ್ಟವು ಇಂದಿನ ವ್ಯವಹಾರದಲ್ಲಿ ಸಾಕೆನಿಸುತ್ತದೆಯೆ? ಜೊತೆಗೆ, ಬೇರೆ ಬೇರೆ ವರ್ಗದ ಮಕ್ಕಳ ಕಲಿಕೆಯ ಮಟ್ಟದಲ್ಲಿ ವ್ಯತ್ಯಾಸವಿರುವಂತಹ ವ್ಯವಸ್ಥೆ ನಮ್ಮದು. ಆ ಹಂತದ ಕಲಿಕೆಯು ಬಹಳವೆಂದರೆ ವಿದ್ಯಾರ್ಥಿಗಳನ್ನು ಅಕ್ಷರಸ್ಥರು ಎಂಬ ಮಟ್ಟಕ್ಕೆ ತಂದಿರಬಹುದು, ಶಿಕ್ಷಕರು ಎಂಬ ಮಟ್ಟಕ್ಕಲ್ಲ.
ಈ 14 ಎಂಬುದು ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ ಎಂಬ ಹಂತದ್ದು ಪ್ರೌಢ ಶಾಲೆಯ ಮೊದಲನೆಯ ತರಗತಿಗೆ ವಿದ್ಯಾಭ್ಯಾಸವು ಮುಗಿಯುವಂತಾದರೆ ವಿದ್ಯಾರ್ಥಿಗಳಿಸಿದ್ದೇನು? ಇದಕ್ಕೆ ಪರಿಹಾರವೋ ಎಂಬಂತೆ ನಮ್ಮ ರಾಜ್ಯದ ಶಿಕ್ಷಣ ಮಂತ್ರಿ ಕಾಗೇರಿಯವರು ಪ್ರೌಢ ಶಾಲೆಯ ಮೊದಲನೆಯ ತರಗತಿಯನ್ನು ಮಾಧ್ಯಮಿಕ ಶಾಲೆಗೆ ಲಗತ್ತಿಸಿರುವ ಯೋಚನೆಯನ್ನು ಮುಂದಿಟ್ಟಿದ್ದಾರೆ.
ನಂತರ ಪ್ರೀ-ಯೂನಿವರ್ಸಿಟಿಯನ್ನು ಪ್ರೌಢಶಾಲೆಗೆ ಸೇರಿಸಿ ಬಿಡುತ್ತಾರಂತೆ. ಇದು ಸಮಂಜಸವಾದ ಶಿಕ್ಷಣ ನೀತಿಯಲ್ಲ, ಕಡ್ಡಾಯ ಶಿಕ್ಷಣ ಎಂಬುದನ್ನು ಹೇಗೋ ಜಾರಿಗೊಳಿಸಿಬಿಡುವ ಬುದ್ಧಿವಂತಿಕೆ, ತಂತ್ರಗಾರಿಕೆ, ಸರ್ಕಾರಕ್ಕೆ ಜವಾಬ್ದಾರಿ ಬೇಡವೆಂದು ನುಣುಚಿಕೊಳ್ಳುವ ಪ್ರಸಂಗ ಇದು. ಸಾಮರ್ಥ್ಯವಿರುವವರು ಹೇಗೂ ಹೊರಗೆ ಖಾಸಗಿ ಶಾಲೆಗಳಿಗೆ ಹೋಗಿ ಉನ್ನತ ವ್ಯಾಸಂಗ ಪಡೆದುಕೊಳ್ಳುತ್ತಾರೆ.
ಸಾಮರ್ಥ್ಯವಿಲ್ಲದವರ ಬಗ್ಗೆ ವೃಥಾ ಸರ್ಕಾರಕ್ಕೇಕೆ ಉಸಾಬರಿ ಎಂಬ ಪಲಾಯನವಾದ ಇಲ್ಲಿ ಕೆಲಸ ಮಾಡುತ್ತಿದೆ.ಇದನ್ನೆಲ್ಲಾ ಕೇವಲ ಶಿಕ್ಷಣಕ್ಕೆ ಸೀಮಿತಗೊಳಿಸಿ ಪರ್ಯಾಲೋಚಿಸುವುದು ಸರಿಯಲ್ಲ. ಇದು ಆದ್ಯತೆಯ ಪ್ರಶ್ನೆ. ಮುಂದೆ ಆಡಳಿತ ಮತ್ತು ಅಧಿಕಾರ ಯಾರ ಕೈಯ್ಯಲ್ಲಿರುತ್ತದೆ ಎನ್ನುವುದು ಇಂದು ಯಾರಿಗೆ ಎಷ್ಟು ಶಿಕ್ಷಣ ನೀಡುತ್ತೇವೆಂಬುದನ್ನು ಆಧರಿಸಿರುತ್ತದೆ.
ಇಂದಿನ ಸಾಮಾಜಿಕ ವಿಭಜನೆಯು ನಿರಂತರವಾಗಿ ಹೀಗೇ ಮುಂದುವರಿಯಬೇಕೆಂಬ ಹುನ್ನಾರಕ್ಕೆ ನಾವು ತಲೆಬಾಗಬೇಕೆ? ಇಂದು ಶಿಕ್ಷಣದ ಅವಕಾಶದಿಂದ ವಂಚಿತರಾಗುವವರು ನಾಳೆ ಖಂಡಿತವಾಗಿಯೂ ಅಧಿಕಾರ ಸ್ಥಾನ ಪಡೆಯುವ ಸಾಧ್ಯತೆಯಿಂದಲೂ ವಂಚಿತರಾಗುತ್ತಾರೆ.
ಶಿಕ್ಷಣ ನೀತಿ ರೂಪಿಸುವಾಗ ಇದನ್ನು ಮರೆಯಬಾರದು. ಪ್ರಸ್ತುತ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಏಕರೂಪವಿಲ್ಲ, ಅಗಾಧ ವಿಂಗಡಣೆ ಇದೆ. ಶ್ರೇಣೀಕರಣಕ್ಕೆ ಇದೊಂದು ಒಳ್ಳೆಯ ಮಾದರಿ. ಸರ್ಕಾರಿ, ಶಾಲೆ, ಖಾಸಗಿ ಶಾಲೆ, ಖಾಸಗಿ ಅನನುದಾನಿತ ಶಾಲೆ, ಸಿಬಿಎಸ್‌ಸಿ ಶಾಲೆ, ಐಸಿಎಸ್‌ಇ ಶಾಲೆ, ಹೀಗೆ ನಮ್ಮಲ್ಲಿ ಹತ್ತಾರು ಶ್ರೇಣಿಗಳಿವೆ. ಸಾಮಾಜಿಕ ವರ್ಗಗಳಿಗೆ ಅನುರೂಪವಾಗಿ ಈ ಶಾಲೆಗಳಿವೆ. ಯಾವುದೇ ಪ್ರಕಾರದ್ದಿರಲಿ, ಒಂದೇ ರೀತಿಯ ಗುಣಮಟ್ಟ ಇರಬೇಕಾದ್ದು ನ್ಯಾಯಸಮ್ಮತ.
ಆ ದಿಕ್ಕಿನಲ್ಲಿ ಹೆಜ್ಜೆ ಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಾನಸಿಕ ಸಿದ್ಧತೆ ಸರ್ವಥಾ ಶೂನ್ಯ. ಅದಕ್ಕೆ ಪುರಾವೆ ಬೇಕೆನಿಸಿದರೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮವು ಮಾತೃ ಭಾಷೆಯಲ್ಲಿರಬೇಕೆಂಬ ಶಾಸನವನ್ನು ಸರ್ವೋಚ್ಚ ನ್ಯಾಯಾಲಯದವರೆಗೆ ಎಳೆದುಕೊಂಡು ಹೋಗಿರುವುದನ್ನು ಗಮನಿಸಬೇಕು. ಒಂದು ದಶಕಕ್ಕೂ ಹೆಚ್ಚಿನ ಕಾಲದಿಂದ ಈ ಮೊಕದ್ದಮೆ ನಡೆಯುತ್ತಿದೆ.
ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅದನ್ನು ತೆರವುಗೊಳಿಸಲು ನಮ್ಮ ರಾಜ್ಯದ ಯಾವ ಪಕ್ಷದ ಸರ್ಕಾರವೂ ಈ ವರೆಗೆ ಮನಸ್ಸು ಮಾಡಿಲ್ಲ. ಶಾಸಕರು, ಮಂತ್ರಿಗಳು ಮತ್ತು ಸರ್ಕಾರದ ಅಧಿಕಾರಿಗಳು ಸ್ವತಃ ತಮ್ಮವೇ ಖಾಸಗಿ ಶಾಲೆಗಳನ್ನು ಹೊಂದಿರುವುದರ ನೇರ ಪರಿಣಾಮ ಇದು. ಶಿಕ್ಷಣವು ಅವರಿಗೆ ಒಂದು ಉದ್ಯಮ, ಅದರಲ್ಲಿನ ಲಾಭ ಅವರ ಹಿತಾಸಕ್ತಿ, ಅದನ್ನು ಕಳೆದುಕೊಳ್ಳಲು ಅವರೇಕೆ ಮುಂದಾಗುತ್ತಾರೆ!
ಶಿಕ್ಷಣ ಹಕ್ಕಿನ ಕಾಯಿದೆಯು ಊರ್ಜಿತವಾಗಬೇಕಾದರೆ ಸರ್ಕಾರಿ ಶಾಲೆಗಳದ್ದೇ ಪ್ರಮುಖ ಪಾತ್ರವಾಗಬೇಕಿದೆ. ಆದರೆ ನಾವಿಂದು ಹಳ್ಳಿಗಳಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಮುಚ್ಚಿದಂತೆ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದೇವೆ. ಈ ಮುಚ್ಚುವಿಕೆಗೆ ವಿಲೀನಗೊಳಿಸುವಿಕೆ ಎಂಬ ಹಸನಾದ ಹೆಸರನ್ನು ಕೊಡಲಾಗಿದೆ. ಆದರೆ ಪರಿಣಾಮ ಒಂದೇ:
ಶಾಲೆಗಳಿಲ್ಲದಂತಾಗುವುದು, ಖಾಸಗಿ ಶಾಲೆಗಳಿಗೆ ಮಕ್ಕಳನ್ನು ತಳ್ಳುವುದು ಅಲ್ಲಿಯ ಶುಲ್ಕ ಭರಿಸಲಾಗದವರು ಬಾಲಕಾರ್ಮಿಕರಾಗಿ ಪರಿವರ್ತನೆ ಹೊಂದುವುದು. ಅಂಗನವಾಡಿ ಕಾರ್ಯಕರ್ತೆಯರು ಈ ಸಮಸ್ಯೆಯನ್ನು ಸರ್ಕಾರದ ಶಿಕ್ಷಣ ತಜ್ಞರಿಗಿಂತ ಭಿನ್ನವಾಗಿ ವಿಶ್ಲೇಷಿಸಿದ್ದಾರೆ. ಅದರಲ್ಲಿ ಎರಡು ಅಂಶಗಳಿವೆ: (ಅ) ಸಂವಿಧಾನವು 6 ರಿಂದ 14ರ ವಯಸ್ಸು ಎಂದಿರುವುದು ನಿಜ, ಆದರೆ ರಾಜ್ಯ ಸರ್ಕಾರಗಳು ಅದನ್ನು 4 ರಿಂದ 16 ಅಥವಾ 4 ರಿಂದ 18 ಎಂದು ತಿದ್ದಿಕೊಳ್ಳಬಾರದೆಂದೇನೂ ಇಲ್ಲ.
ಅಂತಹ ಬದಲಾವಣೆಯು ಇಂದಿನ ಅನಿವಾರ್ಯ ಅಗತ್ಯ. (ಆ) ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾಗದಿರುವುದಕ್ಕೆ ಒಂದು ಕಾರಣವಿದೆ. ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಪೂರ್ವ ತರಗತಿಗಳಿಗೆ ಮಕ್ಕಳನ್ನು ಮೂರು ಅಥವಾ ನಾಲ್ಕನೆಯ ವಯಸ್ಸಿನಲ್ಲಿ ಸೇರಿಸಿಕೊಳ್ಳುತ್ತಾರೆ; ಅದರ ನಂತರ ಪ್ರಾಥಮಿಕ ಶಾಲೆಗಳಿಗೆ ಮಕ್ಕಳು ಅಲ್ಲೇ ಮುಂದುವರಿಯುತ್ತಾರೆ.
ಇದಕ್ಕೆ ಪರ್ಯಾಯ ಇರುವುದೊಂದೇ: ಅಂಗನವಾಡಿಗಳನ್ನು ಪ್ರಾಥಮಿಕ ಶಾಲೆಗಳಿಗೆ ಲಗತ್ತಿಸಿ ಮಕ್ಕಳನ್ನು ಅಲ್ಲೇ ಉಳಿಸಿಕೊಳ್ಳುವುದು. ಕಡ್ಡಾಯ ಶಿಕ್ಷಣವು ಕನಿಷ್ಠವೆಂದರೆ 3- 16 ವಯಸ್ಸಿನವರೆಗೆ ಎಂದಾಗಬೇಕು.
ಇದಕ್ಕೆಲ್ಲಾ ಹಣವೆಲ್ಲಿ ಎಂಬ ಸಬೂಬು ಅರ್ಥರಹಿತವಾದ್ದು. ದೇಶದ ಮಕ್ಕಳಿಗಾಗಿ ಅಷ್ಟು ಜವಾಬ್ದಾರಿಯನ್ನು ಸಹ ವಹಿಸಲಾಗದಿದ್ದರೆ ನಮಗೆ ಪ್ರಜಾಪ್ರಭುತ್ವ ಎಲ್ಲಿಯದು, ಸರ್ಕಾರ ಏಕೆ ಬೇಕು? ಸೌಲಭ್ಯ ಮತ್ತು ತಾರತಮ್ಯ ತೊಡೆದುಹಾಕಿದಾಗ ಮಾತ್ರ ಸಮಾನ ಅವಕಾಶಗಳು ಸಾಧ್ಯ. ಕಳೆದ ವರ್ಷ ಕೊಯಮತ್ತೂರಿನ ಜಿಲ್ಲಾಧಿಕಾರಿ ತನ್ನ ಮಗನನ್ನೋ ಮಗಳನ್ನೋ ತನ್ನ ನಿವಾಸದ ಹತ್ತಿರದ ಸರ್ಕಾರಿ ಶಾಲೆಗೆ ಸೇರಿಸಿದರು.
ಹೀಗೆ ಮಾಡಿದರೆ ಶಾಲೆ ಉತ್ತಮವಾಗುವುದಿಲ್ಲ, ನೋಡೋಣ, ಎಂಬ ಸವಾಲು ಸ್ವೀಕರಿಸಿದರು. ಅದು ಕಡ್ಡಾಯ ಶಿಕ್ಷಣಕ್ಕೆ ಒಳ್ಳೆಯ ಪೀಠಿಕೆ, ಏಕಪ್ರಕಾರ ಹಾಗೂ ಸಮಾನ ಶಿಕ್ಷಣಕ್ಕೆ ಅಡಿಪಾಯ. ನಮ್ಮ ರಾಜ್ಯದ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಇದನ್ನು ಅನುಕರಿಸುವುದು ಯೋಗ್ಯವಾದ ಕ್ರಮ.
No comments:
Post a Comment