ಲೇಖಕರು:-ಆನಂದ ತೀರ್ಥ ಪ್ಯಾಟಿ
ಕೃಪೆ:-ಪ್ರಜಾವಾಣಿ
ಒಂದು ಅಸಹನೀಯಪಯಣದ ಕಥೆ...ಇದು ಕ್ಯಾನ್ಸರ್ ಟ್ರೈನ್. ಪಂಜಾಬ್‌ನ ಹಸಿರು ಕ್ರಾಂತಿಯ ಹಳಿಗಳ ಮೇಲೆ ದುಃಸ್ವಪ್ನಗಳ ವಾಹಕದಂತೆ ಓಡುತ್ತಿರುವ ರೈಲು!
ಪಂಜಾಬಿನ ಅಬೋಹರ್ ತಾಲ್ಲೂಕಿನ ಪಕ್ಕಿ ನಿಲ್ದಾಣ. ರೈಲಿಗಾಗಿ ಕಾಯುತ್ತ ಇಳಿ ಸಂಜೆ ಕುಳಿತಿದ್ದ ಹರತೇಜ್ ಸಿಂಗ್ ನಮ್ಮತ್ತ ಅಸಮಾಧಾನದಿಂದಲೇ ನೋಡಿದರು. ಅವರ ನೋಟದಲ್ಲಿ ಅಪಾರ ವೇದನೆಯಿತ್ತು. ಹೌದು... ನನ್ನ ಪಕ್ಕ ಕುಳಿತಿರುವ ತಂದೆಯನ್ನು ನೋಡಿ... ಇಂಥವರ ಜತೆ ಹೋಗುವುದು ಇನ್ನೆಲ್ಲಿಗೆ?.
ಅವರ ಮಾತು ತುಸು ಖಾರವಾಗಿತ್ತು. ಅಬೋಹರ್‌ನಿಂದ ಬರಬೇಕಾಗಿದ್ದ ರೈಲಿನತ್ತ ಸುಮ್ಮನೇ ನೋಡುತ್ತಿದ್ದರು. ಒಮ್ಮೆ ನಮ್ಮತ್ತ, ಇನ್ನೊಮ್ಮೆ ತಂದೆಯತ್ತ ನೋಡತೊಡಗಿದರು. ಆಮೇಲೆ ರೈಲು ಹಳಿಯನ್ನು ದಿಟ್ಟಿಸತೊಡಗಿದರು.
ಹರತೇಜ್ ಪಕ್ಕದಲ್ಲೇ ಇನ್ನೂ ಇಬ್ಬರು ಮುಖಕ್ಕೆ ಮಫ್ಲರ್ ಸುತ್ತಿಕೊಂಡು ಕುಳಿತಿದ್ದರು. ಅವರೂ ಬಿಕಾನೇರ್‌ಗೆ ತೆರಳುವವರು. ಎಲ್ಲರದೂ ಒಂದೇ ದೋಣಿ... ಉಹುಂ, ಅವರೆಲ್ಲ ಒಂದೇ ಬೋಗಿಯ ಪಯಣಿಗರು.
ಅಬೋಹರ್- ಜೋಧಪುರ ಪ್ಯಾಸೆಂಜರ್ ರೈಲು ಅರ್ಧ ತಾಸು ತಡವಾಗಿ ಬಂತು. ಹತ್ತಲು ಧಾವಂತ. ಸೀಟು ಸಿಕ್ಕರೆ ಒಳ್ಳೆಯದು. ಇಲ್ಲದೇ ಹೋದರೂ ಚಿಂತೆಯಿಲ್ಲ. ಕೆಳಗೇ ಹಾಸಿಗೆ ಹಾಸಿ ನಿದ್ರಿಸುವುದು ಇದೆಯಲ್ಲ? ಬಿಕಾನೇರ್ ಪಟ್ಟಣ ತಲುಪುವ ವೇಳೆಗೆ ಬೆಳಗಾಗಿರುತ್ತದೆ.
ಅಲ್ಲಿಂದ ರಿಕ್ಷಾದಲ್ಲಿ ಆಚಾರ್ಯ ತುಳಸಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಕ್ಕೆ ಹೋಗಬೇಕು, ಕಾಯಬೇಕು. ಎಲ್ಲರದೂ ಒಂದೇ ಗುರಿ- ತಮ್ಮ ಮೇಲೆ ದಾಳಿ ಮಾಡಿರುವ ಕ್ಯಾನ್ಸರ್ ಜತೆ ಸೆಣೆಸಾಡಿ ಜೀವ ಉಳಿಸಿಕೊಳ್ಳುವುದು!
ಚಿಕಿತ್ಸೆಗೆಂದು ಬಿಕಾನೇರ್‌ಗೆ ಹೋಗಿ ಬರಲು ಅನುಕೂಲವಾಗಿರುವ ಈ ರೈಲು ಕ್ಯಾನ್ಸರ್ ಟ್ರೇನ್ ಎಂದೇ (ಕು)ಖ್ಯಾತಿ ಪಡೆದಿದೆ. ಅಬೋಹರ್, ಪಕ್ಕಿ, ಮಲೌತ್, ಗಿದ್ದರ್ಭಾ, ಸಂಗತ್, ಮಂಡಿ ಇತ್ಯಾದಿ ಪಟ್ಟಣಗಳ ಸುತ್ತಲಿನ ಹಳ್ಳಿಗಳಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಜನತೆ ಇದೇ ರೈಲಿನಲ್ಲಿ ರಾಜಸ್ತಾನದ ಬಿಕಾನೇರ್‌ಗೆ ತೆರಳುತ್ತಾರೆ.
ಅಲ್ಲಿಗೇ ಏಕೆ ಎಂದರೆ, ಸಾವಿರಾರು ಕ್ಯಾನ್ಸರ್ ರೋಗಿಗಳಿರುವ ಪಂಜಾಬಿನಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲು ಒಂದೂ ಸರ್ಕಾರಿ ಆಸ್ಪತ್ರೆ ಇಲ್ಲ. ಬಿಕಾನೇರ್‌ನಲ್ಲಿರುವ ಆಚಾರ್ಯ ತುಳಸಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸೆ ಹಾಗೂ ಸಂಶೋಧನಾ ಸಂಸ್ಥೆಯು ರೋಗಿಗಳಿಗೆ ರಿಯಾಯ್ತಿ ದರದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುತ್ತದೆ.
ಹಸಿರಿನ ಹಿಂದೆ ಕರಾಳ ಮುಖ
ಎಲ್ಲಿ ನೋಡಿದರೂ ಗೋಧಿ... ಗೋಧಿ... ಮತ್ತೊಂದು ಪ್ರದೇಶದಲ್ಲಿ ಭತ್ತ... ಭತ್ತ... ತಲೆ ಚಿಟ್ಟು ಹಿಡಿಸುವಷ್ಟರ ಮಟ್ಟಿಗೆ ಒಂದೇ ಬೆಳೆ. ಇದನ್ನು ನೋಡಿ ಪಂಜಾಬ್ ರಾಜ್ಯ ಕೃಷಿ ಉತ್ಪಾದನೆಯಲ್ಲಿ ಎಷ್ಟೊಂದು ಪ್ರಮಾಣದ ಆಹಾರ ಧಾನ್ಯ ಉತ್ಪಾದಿಸುತ್ತದಲ್ಲವೇ! ಎಂದು ಉದ್ಗರಿಸುವವರು ಹಸಿರು ಕ್ರಾಂತಿಯನ್ನು ಹಾಡಿ ಹೊಗಳುವುದು ಸಹಜ.
ಅತ್ಯಧಿಕ ಇಳುವರಿ ಕೊಡುವ ತಳಿಗಳು, ಅದಕ್ಕೆ ಬೇಕಾಗುವಷ್ಟು ನೀರು, ಬೆಳೆಗೆ ರಾಸಾಯನಿಕ ಗೊಬ್ಬರ- ಕೀಟನಾಶಕಗಳ ಲಭ್ಯತೆ- ಇವೆಲ್ಲವೂ ಪಂಜಾಬ್ ನೆಲವನ್ನು ಸದಾ ಹಸಿರಾಗಿ ಇಟ್ಟಿವೆ. ಆದರೆ, ಈ ಹಸಿರಿನ ಹಿಂದೆ ಕರಾಳ ಮುಖವೊಂದು ಅಡಗಿ ಕೂತಿದೆ; ಅದೀಗ ಬಯಲಿಗೂ ಬಂದಿದೆ.
ಅರವತ್ತರ ದಶಕದಲ್ಲಿ ಅಧಿಕ ಆಹಾರ ಉತ್ಪಾದನೆಯ ಉದ್ದೇಶದಿಂದ ಜಾರಿಗೊಳಿಸಲಾದ ಹಸಿರು ಕ್ರಾಂತಿಯ ಫಲ ಇದು. ಸಾಂಪ್ರದಾಯಿಕ ತಳಿ ಹೆಚ್ಚು ಇಳುವರಿ ನೀಡುವುದಿಲ್ಲ ಎಂಬ ನೆಪವೊಡ್ಡಿ, ಅಧಿಕ ಇಳುವರಿಯ ಹೈಬ್ರಿಡ್ ತಳಿಗಳನ್ನು ಕೃಷಿ ವಿಜ್ಞಾನಿಗಳು ರೈತರಿಗೆ ಕೊಟ್ಟರು.
ಆರಂಭದಲ್ಲಿ ಕೀಟನಾಶಕ- ರಸಗೊಬ್ಬರದ ಬಳಕೆಯಿಂದ ಇಳುವರಿ ಹೆಚ್ಚಿದ್ದೇನೋ ನಿಜ; ಬಳಿಕ ಕೀಟಗಳು ರಸವಿಷಗಳಿಗೆ ನಿರೋಧಕಶಕ್ತಿ ಬೆಳೆಸಿಕೊಂಡವು. ಕಂಪೆನಿಗಳಿಗೆ ಇದೇ ಸುವರ್ಣಾವಕಾಶ! ಇನ್ನಷ್ಟು ತೀವ್ರ ವಿಷಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದವು. ಒಂದಕ್ಕಿಂತ ಒಂದು ಕಾರ್ಕೋಟಕ. ಹತ್ತಾರು ವರ್ಷ ಇವುಗಳನ್ನು ಬಳಸಿ ಬಳಸಿ ಇಡೀ ಪರಿಸರ ವಿಷಯುಕ್ತವಾಗಿದೆ.
ರಸಗೊಬ್ಬರ - ಕೀಟನಾಶಕದ ಜಾಲ ರೈತರನ್ನು ಎಂಥ ದುರಂತದೆಡೆಗೆ ಕರೆದೊಯ್ದಿದೆ ಎಂದರೆ; ಅವರು ಆಹಾರ ಉತ್ಪಾದಿಸುವ ವಿಧಾನದಿಂದ ನೆಲ- ಜಲ- ಗಾಳಿ ಕಲುಷಿತಗೊಂಡಿದೆ.
“1997ನೇ ಇಸವಿ. ನಾನು ಎಸ್ಸೆಸ್ಸೆಲ್ಸಿ ಓದುತ್ತಿದ್ದೆ. ನನ್ನ ಚಿಕ್ಕಪ್ಪ ಕ್ಯಾನ್ಸರ್‌ನಿಂದ ಸಾವನ್ನಪ್ಪಿದರು. ಅವರ ತಂದೆ- ಅಂದರೆ ನನ್ನ ಅಜ್ಜ ಕೂಡ ಕ್ಯಾನ್ಸರ್‌ಗೆ ಬಲಿಯಾದರು. ಇದೆಲ್ಲ ಕೇವಲ ಐದಾರು ವರ್ಷಗಳ ಅಂತರದಲ್ಲಿ ನಡೆದ ಘಟನೆ. ಅದೇ ಸಮಯದಲ್ಲಿ ಸುತ್ತಲಿನ ಹಳ್ಳಿಗಳಲ್ಲಿ ಜನರು ಕ್ಯಾನ್ಸರ್ ರೋಗಕ್ಕೆ ಬಲಿಯಾದ ವರದಿ ಪ್ರಕಟವಾದವು.
2000ನೇ ಇಸ್ವಿ ಆಸುಪಾಸಿನಲ್ಲಿ ಕ್ಯಾನ್ಸರ್ ಸೃಷ್ಟಿಸಿದ ಆತಂಕ ಅಷ್ಟಿಷ್ಟಲ್ಲ. ಆದರೆ ಇದಕ್ಕೆ ನಿಖರ ಕಾರಣವೇನು ಎಂಬುದು ಆಗ ಗೊತ್ತಿರಲೇ ಇಲ್ಲ. ಎಲ್ಲವೂ ನಿಗೂಢ” ಎಂದು ನೆನಪಿಸಿಕೊಳ್ಳುತ್ತಾರೆ, ಜೈತೋ ಪಟ್ಟಣದ ವೈದ್ಯ ಡಾ. ಸನ್ನಿ ಸಂಧು.
ಇದೇ ಸಮಯದಲ್ಲಿ ಪರಿಸರದಲ್ಲೂ ಕೆಲವು ಬದಲಾವಣೆ ಗೋಚರಿಸಲು ಶುರುವಾಯಿತು. ಈ ಭಾಗದಲ್ಲಿ ವ್ಯಾಪಕವಾಗಿ ಕಾಣಿಸುತ್ತಿದ್ದ ರಣಹದ್ದುಗಳು ಕಣ್ಮರೆಯಾದವು. ಮಹಿಳೆಯರಲ್ಲಿ ಗರ್ಭಪಾತ ಹಾಗೂ ಪುರುಷರಲ್ಲಿ ಸಂತಾನಶಕ್ತಿ ಕುಂಠಿತಗೊಂಡ ವರದಿಗಳೂ ಪ್ರಕಟಗೊಂಡವು.
ಚಂಡೀಗಡದ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸ್ನಾತಕೋತ್ತರ ಅಧ್ಯಯನ ಕೇಂದ್ರ ನಡೆಸಿದ ಸಮೀಕ್ಷೆಯು- ಅಪಾಯಕಾರಿ ರಾಸಾಯನಿಕ ಕೀಟನಾಶಕಗಳನ್ನು ವಿವೇಚನಾರಹಿತವಾಗಿ ಬಳಸಿದ ಕಾರಣ, ಈ ಭಾಗದಲ್ಲಿ ಕ್ಯಾನ್ಸರ್ ರೋಗ ವ್ಯಾಪಿಸಲು ಕಾರಣವಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ. ರಾಸಾಯನಿಕಗಳಿಂದಾಗಿ ಪಂಜಾಬ್ ಆಘಾತಕರ ಸ್ಥಿತಿಗೆ ತಲುಪಿದೆ ಎಂದು ರಾಷ್ಟ್ರೀಯ ಕೃಷಿ ಸಂಶೋಧನೆ ಸಲಹಾ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಬದುಕಿಗೆ ತಗುಲಿದ ಕೀಟನಾಶಕಗಳು
ಪಂಜಾಬಿನಲ್ಲಿ ಗೋಧಿ, ಹತ್ತಿ ಹಾಗೂ ಭತ್ತದ ಬೆಳೆಗೆ ಬಳಸುವ ಕೀಟನಾಶಕಗಳು 50ಕ್ಕೂ ಹೆಚ್ಚು. ಆ ಪೈಕಿ ಸುಮಾರು 20 ಉಗ್ರವಿಷಗಳು. ಬಠಿಂಡಾ ಜಿಲ್ಲೆಯಲ್ಲಿ ಕಾಲುವೆ ನೀರನ್ನು ಬಳಸಿ ಹತ್ತಿ ಹಾಗೂ ಭತ್ತ ಬೆಳೆಯಲಾಗುತ್ತಿದೆ.
ರಾಸಾಯನಿಕ ಬಳಕೆಗೆ ಪ್ರೇರೇಪಿಸುವ ಪಂಜಾಬ್ ಕೃಷಿ ವಿಶ್ವವಿದ್ಯಾಲಯವು ಹತ್ತಿಗೆ ಆರು ಸಲ ಕೀಟನಾಶಕ ಸಿಂಪಡಿಸಲು ಶಿಫಾರಸು ಮಾಡಿದೆ. ರೈತರು 30ಕ್ಕೂ ಹೆಚ್ಚು ಸಲ ಸಿಂಪಡಣೆ ಮಾಡುತ್ತಾರೆ!
“ಒಂದರ್ಥದಲ್ಲಿ ಪಂಜಾಬಿನ ಜನರ ನರಳಿಕೆಗೆ ಕಾರಣ ಕೃಷಿ ವಿಶ್ವವಿದ್ಯಾಲಯ. 1960ರ ದಶಕದಲ್ಲಿ ಹತ್ತಿಗೆ ಬರೀ ಆರೆಂಟು ಬಗೆಯ ಕೀಟಗಳ ಬಾಧೆ ಇತ್ತು. ಅದನ್ನೇ ಬಂಡವಾಳ ಮಾಡಿಕೊಂಡ ಕೃಷಿ ವಿಜ್ಞಾನಿಗಳು ಬಗೆಬಗೆಯ ಕೀಟನಾಶಕ ಬಳಕೆ ಮಾಡುವಂತೆ ರೈತರಿಗೆ ಸಲಹೆ ನೀಡಿದರು.
ಈಗ ಹತ್ತಿಗೆ 60 ಬಗೆಯ ಕೀಟಬಾಧೆ ಕಾಣಿಸುತ್ತಿವೆ. ಪರಿಸರಕ್ಕೆ ಈ ಬಗೆಯ ಹಾನಿ ಮಾಡಿದರೆ ತಮ್ಮ ಮಕ್ಕಳು ಮೊಮ್ಮಕ್ಕಳು ಬದುಕುವುದಾದರೂ ಹೇಗೆ ಎಂಬ ಕನಿಷ್ಠ ಕಾಳಜಿಯೂ ಈ ಕೃಷಿ ವಿಜ್ಞಾನಿಗಳಲ್ಲಿ ಇಲ್ಲವಲ್ಲ?” ಎಂದು ಕಟುವಾಗಿ ಟೀಕಿಸುತ್ತಾರೆ, ಉಮೇಂದ್ರ ದತ್.
ಮರೆತೇ ಹೋಗಿರುವ ಸುಸ್ಥಿರ, ನೈಸರ್ಗಿಕ ಕೃಷಿ ವಿಧಾನಗಳನ್ನು ರೈತರಿಗೆ ಮತ್ತೆ ನೆನಪು ಮಾಡಿಕೊಡುತ್ತಿರುವ ಖೇತಿ ವಿರಾಸತ್ ಮಿಶನ್ ಸಂಸ್ಥೆಯ ನಿರ್ದೇಶಕರು ಈ ದತ್. ಬಹುರಾಷ್ಟ್ರೀಯ ಕಂಪೆನಿಗಳು ಕೃಷಿ ವಿಜ್ಞಾನಿಗಳೊಂದಿಗೆ ಶಾಮೀಲಾಗಿ ನಡೆಸಿದ ಹುನ್ನಾರವು ಬೇರೆಡೆಗಿಂತಲೂ ಪಂಜಾಬಿನಲ್ಲಿ ಸಾಕಷ್ಟು ಯಶಸ್ಸು ಪಡೆದಿದೆ ಎನ್ನುವುದು ಅವರ ವಿಷಾದ.
ದಾರಿ ಯಾವುದಯ್ಯ...
ಕ್ಯಾನ್ಸರ್ ಟ್ರೇನ್ನಲ್ಲಿ ನಿತ್ಯ ಸಂಚರಿಸುವ ರೋಗಿಗಳ ಪೈಕಿ ಮುಕ್ಕಾಲು ಭಾಗ ರೈತರೇ! ನಿಷೇಧಕ್ಕೆ ಒಳಗಾದ ಹತ್ತಾರು ಬಗೆಯ ಕೀಟನಾಶಕಗಳನ್ನು ಸಾಮಾನ್ಯ ಔಷಧಿ ಎಂಬಂತೆ ರೈತರು ಬಳಕೆ ಮಾಡುತ್ತಿದ್ದಾರೆ.
“ಹೌದು... ಪಂಜಾಬಿನ ಜನತೆ ಎದುರಿಸುತ್ತಿರುವ ಭೀಕರ ಸ್ಥಿತಿಗೆ ಏನು ಕಾರಣ ಎಂಬುದು ರೈತರಿಗೂ ಗೊತ್ತಾಗಿದೆ. ಆದರೆ ಕೀಟನಾಶಕ ಬಳಕೆ ಕೈಬಿಡಲು ಸಿದ್ಧರಿಲ್ಲ. ವರ್ಷದಿಂದ ವರ್ಷಕ್ಕೆ ಬಳಕೆ ಪ್ರಮಾಣ ಏರಿಕೆಯಾಗುತ್ತಲೇ ಇದೆ.
ರಾಸಾಯನಿಕ ಬಳಕೆ ಕೈಬಿಡಿ ಎಂದರೆ, ಕೀಟ- ರೋಗ ನಿಯಂತ್ರಣಕ್ಕೆ ದಾರಿ ಬೇರೇನಿದೆ ಹೇಳಿ? ಎಂದು ರೈತರು ಕೇಳುತ್ತಾರೆ. ಪರ್ಯಾಯ ಮಾರ್ಗಗಳ ಬಗ್ಗೆ ಸಂಶೋಧನೆ ನಡೆಸುವುದನ್ನು ವಿಜ್ಞಾನಿಗಳು ಮರೆತೇ ಬಿಟ್ಟಿದ್ದಾರೆ.
ರಾಸಾಯನಿಕಗಳಿಗೆ ಕೊಟ್ಟಷ್ಟು ಪ್ರಚಾರವನ್ನು ಅವರು ಸುಸ್ಥಿರ ಕೃಷಿಗೆ ಯಾಕೆ ಕೊಡುತ್ತಿಲ್ಲ? ದುರಂತ ಎಂದರೆ ಇದೇ ಅಲ್ಲವೇ?” ಎಂದು ಖಬ್ಬನ್ ಗ್ರಾಮದ ಸಾವಯವ ಕೃಷಿಕ ಆಶಿಶ್ ಅಹೂಜಾ ಕಳವಳದಿಂದ ಪ್ರಶ್ನಿಸುತ್ತಾರೆ.
ಕಿನೋ ಹಣ್ಣು, ಗೋಧಿ, ಹತ್ತಿ, ಸಾಸಿವೆ ಇತರ ಬೆಳೆಗಳಿರುವ ತಮ್ಮ 70 ಎಕರೆ ಜಮೀನನ್ನು ಸಾವಯವ ವಿಧಾನಕ್ಕೆ ಅಳವಡಿಸಿಕೊಂಡಿರುವ ಈ ಐಐಟಿ ಪದವೀಧರ, ಸಾವಯವ ಕೃಷಿಗೆ ಹೊರಳಲು ಸುತ್ತಲಿನ ಹಳ್ಳಿಗಳ ರೈತರ ಮನವೊಲಿಸಲು ಪಟ್ಟು ಬಿಡದೇ ಪ್ರಯತ್ನಿಸುತ್ತಿದ್ದಾರೆ. “ಸಿಕ್ಕ ಪ್ರತಿಫಲ ತೀರಾ ಅತ್ಯಲ್ಪ”- ಅಹುಜಾ ನಿರಾಶೆಯ ದನಿ.
ಬೆಳೆಗೆ ಸಿಂಪಡಿಸಿದ ವಿಷ, ಮಳೆ ನೀರಿನ ಮೂಲಕ ಕೆರೆ, ಹಳ್ಳ ನದಿ ಸೇರುತ್ತದೆ; ಕೆಲವೆಡೆ ಇಂಗಿ ಅಂತರ್ಜಲಕ್ಕೂ ಹೋಗುತ್ತದೆ. ಕುಡಿಯುವ ನೀರಿಗೆ ಇವೇ ಮೂಲಗಳನ್ನು ಅವಲಂಬಿಸಿದವರು, ಮತ್ತೆ ಅದೇ ವಿಷ ಸೇವನೆ ಮಾಡುತ್ತಾರೆ. ಶುದ್ಧ ಕುಡಿಯುವ ನೀರು ಒದಗಿಸುವುದು ಹೇಗೆ?
ಸರ್ಕಾರದ ಬಳಿ ಎಲ್ಲಕ್ಕೂ ಯೋಜನೆ ಇದ್ದೇ ಇರುತ್ತದೆ. ಪಂಜಾಬ್ ಸರ್ಕಾರವೇನೂ ಹಿಂದೆ ಬಿದ್ದಿಲ್ಲ. ಬಠಿಂಡಾ, ಮಾನಸಾ, ಫರೀದ್‌ಕೋಟ್, ಫಿರೋಜ್‌ಪುರ ಪಾಟಿಯಾಲಾ ಜಿಲ್ಲೆಗಳ 300ಕ್ಕೂ ಹೆಚ್ಚು ಗ್ರಾಮಗಳಿಗೆ 35 ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ಧ ನೀರು ಪೂರೈಸಲು ಯೋಜನೆ ರೂಪಿಸಿದೆ. ಟ್ಯಾಂಕ್‌ನಿಂದ ರಿವರ್ಸ್ ಅಸ್ಮೊಸಿಸ್ ಘಟಕದ (ಆರ್‌ಒ ಯೂನಿಟ್) ಮೂಲಕ ಶುದ್ಧ ನೀರು ಹೊರಬರುತ್ತದೆ. ಬೇಕಾದವರು ಆ ಘಟಕದ ಬಳಿ ಬಂದು ತೆಗೆದುಕೊಂಡು ಹೋಗಬೇಕು.
“ಇದೇನೂ ಉಚಿತವಲ್ಲ. 20 ಲೀಟರ್ ನೀರಿಗೆ 2 ರೂಪಾಯಿ. ಉಳ್ಳವರು ದಿನಾಲು ಒಯ್ಯುತ್ತಾರೆ. ಇದೆಲ್ಲ ಯಾಕೆ? ಎಂದು ಉದಾಸೀನದಿಂದ ಕೆರೆ ಕಾಲುವೆ ನೀರನ್ನೇ ಬಡವರು ಕುಡಿಯುತ್ತಾರೆ.
ಎಲ್ಲಕ್ಕಿಂತ ಮಿಗಿಲಾಗಿ ಜಾನುವಾರು, ಕೋಳಿ - ಕುರಿಗಳಿಗೆ ಶುದ್ಧ ನೀರು ಕುಡಿಸುವವರಾರು? ಕಲುಷಿತ ನೀರು ಕುಡಿವ ಆ ಪ್ರಾಣಿ-ಪಕ್ಷಿಗಳ ಮಾಂಸ ತಿಂದರೆ ಅಪಾಯವಲ್ಲವೇ?” ಎಂಬುದು ಮೈಮಾ ತರ್ಜಾ ಗ್ರಾಮದ ಬಯಂತ್ ಸಿಂಗ್ ಸಂಶಯ.
ಹಳ್ಳಿಗರ ದಾಹ ತಣಿಸಲು ಹಾಕಿರುವ ಆರ್‌ಒ ಘಟಕಗಳಿಗೆ ಬರುವ ಸುತ್ತಲಿನ ಪಟ್ಟಣಗಳ ವ್ಯಾಪಾರಸ್ಥರು, ಇಲ್ಲಿಂದ ನೀರು ಒಯ್ದು ಲೀಟರ್‌ಗೆ ಒಂದು ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ಅಲ್ಲಿಗೆ, ಸರ್ಕಾರದ ಯೋಜನೆ ಯಾರನ್ನು ತಲುಪುತ್ತಿದೆ ಎನ್ನುವುದು ಸ್ಪಷ್ಟವಾದಂತಾಯಿತು!
ಇಲ್ಲೂ ಇದ್ದಾರೆ ಬಡವರು
ದೂರದಿಂದ ನೋಡಿದರೆ ಪಂಜಾಬ್ ಸುಭಿಕ್ಷ ರಾಜ್ಯ ಎನಿಸುತ್ತದೆ. ಅದರೆ ಇಲ್ಲೂ ಸಾಕಷ್ಟು ಬಡವರಿದ್ದಾರೆ. ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಬಯಸುವ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಲಭ್ಯವಿಲ್ಲ. ಹೀಗಾಗಿ ರೋಗಿಗಳು ಬಿಕಾನೇರ್‌ಗೆ ಚಿಕಿತ್ಸೆಗೆಂದು ಹೋಗುತ್ತಾರೆ.
ಅಬೋಹರ್‌ನಿಂದ ಹೊರಡುವ (ಟ್ರೈನ್ ನಂ: 54703) ಪ್ಯಾಸೆಂಜರ್ ರೈಲು ರೋಗಿಗಳಿಗೆ ಬಹು ಅನುಕೂಲ. ರೋಗಿ ಹಾಗೂ ಆತನ ಜತೆ ತೆರಳುವ ವ್ಯಕ್ತಿಗೆ ಪ್ರಯಾಣ ದರದಲ್ಲಿ ಶೇ. 75ರಷ್ಟು ರಿಯಾಯಿತಿ ಲಭ್ಯ.
“ನಮ್ಮದು ನಾಲ್ಕು ಎಕರೆ ಕೃಷಿ ಭೂಮಿ ಇದೆ. ಗೋಧಿ ಮುಖ್ಯ ಬೆಳೆ. ನಮ್ಮ ತಾಯಿಗೆ ಕ್ಯಾನ್ಸರ್ ಬಂದಿದೆ. ಎಂಟು ತಿಂಗಳಿನಿಂದಲೂ ಚಿಕಿತ್ಸೆಗಾಗಿ ನಾನೇ ಬಿಕಾನೇರ್‌ಗೆ ಕರೆದುಕೊಂಡು ಹೋಗುತ್ತಿದ್ದೇನೆ.
ನನ್ನ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಸಿಗುವುದು ಅಲ್ಲೇ” ಎಂದು ಗುರ್ಸಾರ್ ನಿಲ್ದಾಣದಲ್ಲಿ ತಾಯಿಯೊಂದಿಗೆ ರೈಲಿಗಾಗಿ ಕಾಯುತ್ತಿದ್ದ ಜರ್ನೈಲ್ ಹೇಳಿದ. ಈವರೆಗೆ ಆಕೆಯ ಚಿಕಿತ್ಸೆಗೆ ಎಷ್ಟು ಖರ್ಚಾಗಿದೆ? ಎಂಬ ಪ್ರಶ್ನೆಗೆ, “ಇಲ್ಲೆಲ್ಲ ಪಡೆದ ಚಿಕಿತ್ಸೆಗೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು. ಆದರೆ ಬಿಕಾನೇರ್ ಆಸ್ಪತ್ರೆಯಲ್ಲಿ ಕಡಿಮೆ ಹಣಕ್ಕೆ ಒಳ್ಳೆಯ ಚಿಕಿತ್ಸೆ ಸಿಗುತ್ತಿದೆ” ಎಂದು ನುಡಿದ.
ಈ ರೈಲಿನಲ್ಲಿ ದಿನವಹಿ ಸುಮಾರು ನೂರು ರೋಗಿಗಳು ಬಿಕಾನೇರ್‌ಗೆ ತೆರಳುತ್ತಾರೆ. ಕೆಲವರು ತಿಂಗಳಿಗೆ ಒಮ್ಮೆ ಅಥವಾ ಎರಡು ಸಲ ಹೋಗಬೇಕಾಗುವುದರಿಂದ, ಅಲ್ಪ ದರದಲ್ಲೇ ಅವರನ್ನು ಕರೆದೊಯ್ಯುವ ರೈಲು ಎಲ್ಲರ ಪಾಲಿಗೆ ವರದಾನ ಇದ್ದಂತೆ. ಕ್ಯಾನ್ಸರ್ ರೋಗಿಗಳು ಹೆಚ್ಚು ತೆರಳುವ ಈ ರೈಲಿಗೆ ಕ್ಯಾನ್ಸರ್ ಟ್ರೇನ್ ಎಂದೇ ಹೆಸರು ಬಂದಿದೆ.
ಮೂರು ದಿನ ಪಂಜಾಬಿನ ವಿವಿಧ ಹಳ್ಳಿಗಳಲ್ಲಿ ಸುತ್ತಾಡಿದ ಬಳಿಕ ಚಂಡೀಗಢದ ಸಭೆಯೊಂದರಲ್ಲಿ ಹಲವು ವೈದ್ಯರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಹಳ್ಳಿಗಳಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಸಿದ ಅಪಾಯಕಾರಿ ರಾಸಾಯನಿಕಗಳ ವಿರುದ್ಧ ಪ್ರಬಲ ಆಕ್ಷೇಪ ಅವರಲ್ಲಿ ಕಾಣಿಸಲೇ ಇಲ್ಲ! ವಿಷಾದದ ಸಂಗತಿ ಎಂದರೆ ಇದೇ.
ಅತ್ತ ಕೃಷಿ ವಿಜ್ಞಾನಿಗಳು ಹಳ್ಳಿ ರೈತರಿಗೆ ರಾಸಾಯನಿಕ ಮಂತ್ರದ ಬೋಧನೆ ಬಿಡುತ್ತಿಲ್ಲ; ಇತ್ತ ನಗರ - ಪಟ್ಟಣಗಳಲ್ಲಿ ಕೀಟನಾಶಕಗಳ ವಿರುದ್ಧ ದನಿ ಎತ್ತುವವರೇ ಇಲ್ಲ..!
ಇದ್ದುದರಲ್ಲಿ ದಕ್ಷಿಣ ರಾಜ್ಯಗಳೇ ವಾಸಿ ಎಂಬ ಸಮಾಧಾನದೊಂದಿಗೆ ಅಂದಿನ ದಿನಪತ್ರಿಕೆ ಕೈಗೆತ್ತಿಕೊಂಡಾಗ, ಭಾಭಾ ಪರಮಾಣು ಸಂಶೋಧನಾ ಕೇಂದ್ರವು ಪಂಜಾಬಿನ 13 ಜಿಲ್ಲೆಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಅಂತರ್ಜಲದಲ್ಲಿ ಯುರೇನಿಯಂ ಅಧಿಕ ಪ್ರಮಾಣದಲ್ಲಿ ಪತ್ತೆಯಾಗಿದೆ ಎಂಬ ಆತಂಕದ ಸುದ್ದಿ ಮುಖಪುಟದಲ್ಲಿ ಸ್ಥಾನ ಪಡೆದಿತ್ತು.ಪಂಚ ನದಿಗಳ ನಾಡಿನ ನರಳಿಕೆ ನಮಗೆಲ್ಲ ಪಾಠವಾಗಬೇಕಿದೆ.
ಪಲಾಯನಕ್ಕೆ ಸುಲಭ ಸೂತ್ರ!
ರಕ್ತ, ಗಂಟಲು, ಕರಳು, ಶ್ವಾಸಕೋಶ... ಹಲವು ಬಗೆಯ ಕ್ಯಾನ್ಸರ್‌ಗಳು ಪಂಜಾಬಿನ ಜನರನ್ನು ನಜ್ಜುಗುಜ್ಜು ಮಾಡುತ್ತಿವೆ. ಆದರೆ ಕ್ಯಾನ್ಸರ್‌ಗೆ ಕೀಟನಾಶಕಗಳೇ ಕಾರಣ ಎಂಬುದನ್ನು ನಿಖರವಾಗಿ ಸಾಬೀತುಪಡಿಸಲು ಅಸಾಧ್ಯ. ಇದೊಂದೇ ಕಾರಣದಿಂದ ಯಾರು ಬೇಕಾದರೂ ಅಪವಾದದಿಂದ ಪಾರಾಗಬಹುದು!
“ನಮ್ಮ ತಂದೆ ಖ್ಯಾತ ವೈದ್ಯ. ಅವರ ತಮ್ಮ ಅಂದರೆ ನನ್ನ ಚಿಕ್ಕಪ್ಪನಿಗೆ ಕ್ಯಾನ್ಸರ್ ರೋಗ ದಾಳಿ ಮಾಡಿತು. ಇದಕ್ಕೆ ಕಾರಣವೇನು ಎಂದು ನನ್ನ ತಂದೆ ಎಷ್ಟೇ ತಪಾಸಣೆ ನಡೆಸಿದರೂ ಗೊತ್ತಾಗಲಿಲ್ಲ. ಅಷ್ಟೊತ್ತಿಗೆ ನಮ್ಮೂರಿನಲ್ಲಿ ಪ್ರತಿ ಕುಟುಂಬದಲ್ಲೂ ಕನಿಷ್ಠ ಒಬ್ಬರು ಕ್ಯಾನ್ಸರ್‌ನಿಂದ ಬಳಲುತ್ತಿದ್ದುದು ಬೆಳಕಿಗೆ ಬಂತು.
ಎಷ್ಟೋ ವರ್ಷಗಳ ಬಳಿಕ ನಮ್ಮ ತಂದೆ ಇದಕ್ಕೆಲ್ಲ ರಾಸಾಯನಿಕಗಳೇ ಕಾರಣ. ಆದರೆ ಅದನ್ನು ಹೇಗೆ ಸಾಬೀತು ಮಾಡಬೇಕೋ ಗೊತ್ತಾಗುತ್ತಿಲ್ಲ ಎಂದು ಅಸಹಾಯಕರಾಗಿ ಹೇಳಿದರು. ರಾಸಾಯನಿಕಗಳು ನಿಧಾನ ವಿಷದಂತೆ.
ಯಾವುದಾದರೂ ಒಂದು ಸಂಶೋಧನೆಯಿಂದ ರಾಸಾಯನಿಕಗಳ ಅಪಾಯ ಸಾಬೀತಾಗುವವರೆಗೆ ಇನ್ನಷ್ಟು ರಾಜ್ಯಗಳು ಪಂಜಾಬಿನಂತೆ ಆಗುತ್ತಲೇ ಇರುತ್ತವೆ” ಎಂದು ವೈದ್ಯ ಡಾ. ಸನ್ನಿ ಸಂಧು ನುಡಿಯುತ್ತಾರೆ.
ರೋಗಿಗಳ ಕುಟುಂಬಕ್ಕೆ ಆಮಿಷ
ಏಳು ವರ್ಷಗಳ ಹಿಂದೆ ಪಂಜಾಬಿನ ಪರಿಸ್ಥಿತಿಯ ವಿವರವಾದ ಅಧ್ಯಯನ ನಡೆಸಿದ್ದ ನವದೆಹಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ), ಬಹುತೇಕ ಜನರ ರಕ್ತದಲ್ಲಿ ಡಿಡಿಟಿ, ಎಂಡೋಸಲ್ಫಾನ್, ಮೊನೊಕ್ರೊಟೋಫಾಸ್, ಕ್ಲೊರೋಪೈರಿಫಾಸ್ ರೀತಿಯ ಅತ್ಯಪಾಯಕಾರಿ ಪೀಡೆನಾಶಕಗಳ ಅಂಶ ಇರುವ ಸಂಗತಿಯನ್ನು ತನ್ನ ಡೌನ್ ಟು ಅರ್ಥ್ ಪತ್ರಿಕೆಯಲ್ಲಿ ಪ್ರಕಟಿಸಿತ್ತು.
ದೇಶದಾದ್ಯಂತ ತಲ್ಲಣ ಉಂಟು ಮಾಡಿದ ಈ ವರದಿಯಿಂದಾಗಿ, ಅಂದಿನ ಪಂಜಾಬ್ ಸರ್ಕಾರ ತಜ್ಞರ ಎರಡು ಸಮಿತಿಗಳನ್ನು ರಚಿಸಿ ಪರಿಹಾರ ನೀಡುವಂತೆ ಸೂಚಿಸಿತ್ತು. ಆದರೆ ಸಮಿತಿಗಳು ಸಭೆ ಸೇರಲೇ ಇಲ್ಲ.
“ಪೀಡೆನಾಶಕ ವಿಷಯ ಎಷ್ಟು ಗಂಭೀರವಾಗಿ ಚರ್ಚೆಗೆ ಈಡಾಗಬೇಕಿತ್ತೋ ಆಗಲಿಲ್ಲ. ಕ್ಯಾನ್ಸರ್ ರೋಗಿಗಳನ್ನೇ ಎನ್‌ಕ್ಯಾಶ್ ಮಾಡಿಕೊಳ್ಳುವ ಯತ್ನ ಈಚೆಗಿನ ವಿಧಾನಸಭಾ ಚುನಾವಣೆಯಲ್ಲಿ ನಡೆಯಿತು. ಟೀವಿ, ಫ್ಯಾನ್ ಆಮಿಷ ನೀಡುವ ಮಾದರಿಯಲ್ಲೇ ನಿಮ್ಮ ಕುಟುಂಬದಲ್ಲಿ ಕ್ಯಾನ್ಸರ್ ರೋಗಿ ಇದ್ದರೆ ಧನಸಹಾಯ ಕೊಡಿಸುತ್ತೇವೆ.
ನಮಗೇ ಮತ ಕೊಡಿ ಎಂಬ ಭರವಸೆಯನ್ನು ಪ್ರಮುಖ ಪಕ್ಷವೊಂದರ ಮುಖಂಡರು ನೀಡಿದ್ದರು. ಗಂಭೀರ ವಿಷಯವೊಂದರ ಬಗ್ಗೆ ನಮ್ಮ ರಾಜಕೀಯ ಪಕ್ಷಗಳು ಯೋಚಿಸುವ ಬಗೆ ಹೇಗಿದೆ ನೋಡಿ..!” ಎಂದು ಸಿಎಸ್‌ಇ ನಿರ್ದೇಶಕಿ ಸುನೀತಾ ನರೇನ್ ಉದ್ಗರಿಸುತ್ತಾ
ಡಾ. ಸನ್ನಿ ಸಂಧು
No comments:
Post a Comment