ಸೌಜನ್ಯ: http://avadhimag.com/?p=33457
ಇಂದು ಮೇ ದಿನಾಚರಣೆ, ಕಾರ್ಮಿಕರ ಹಬ್ಬ. ಆ ಒಂದು ಕಾರ್ಮಿಕ ದಿನಾಚರಣೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಇಲ್ಲಿದೆ ಒಂದು ಉದಾಹರಣೆ.
‘ನನ್ನೊಳಗಿನ ಹಾಡು ಕ್ಯೂಬಾ’ ಪುಸ್ತಕದಿಂದ
-ಜಿ ಎನ್ ಮೋಹನ್
ಈ ಪುಟ್ಟ ದೇಶ ನನ್ನ ಎದೆಯಾಳಕ್ಕಿಳಿಯಲು ನಾನು ಕೊಟ್ಟದ್ದು ಕೇವಲ ಒಂದು ರೂಪಾಯಿ ಮಾತ್ರ.
ನಿಗಿ ನಿಗಿ ಸುಡುವ ಸೂರ್ಯನ ಎಲ್ಲಾ ತಾಪವನ್ನೂ ಹೀರಿ ಚಿಮ್ಮುವುದೇ ಮೇ ಫ್ಲವರ್. ಇಂತಹ ಹೂವುಗಳ ಸಾವಿರ ಸಾವಿರವಾಗಿ ಅರಳುವ ಹೊತ್ತಲ್ಲಿ ನಡೆದ ಮೇ ಉತ್ಸವವೇ ನನಗೂ ಕ್ಯೂಬಾಗೂ ನಂಟನ್ನು ಬೆಸೆಯಿತು. ಜಗದುದ್ದ ಜಗದಗಲ ಹರಡಿಹೋದ ನೊಂದವರು ತಮ್ಮ ನೋವುಗಳನ್ನೆಲ್ಲಾ ಮರೆತು ಹಾಡಿ ಕುಣಿಯುವ ಹೊತ್ತು – ಮೇ ದಿನ. ಯೌವ್ವನಕ್ಕೆ ನಾನು ಕಾಲಿಡುತ್ತಿದ್ದ ದಿನಗಳಲ್ಲಿ ‘ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು – ಕಪ್ಪು ಮುಖ, ಬೆಳ್ಳಿ ಗಡ್ಡ, ಉರಿಯುತಿರುವ ಕಣ್ಣುಗಳು’ ಎಂಬಂತೆ ನೂರಾರು ಸಂಖ್ಯೆಯಲ್ಲಿ ಈ ದಿನಕ್ಕಾಗಿ ತೇಲಿಬರುವ ಜನರನ್ನು ಕಂಡು ಬೆರಗಾಗುತ್ತಿದ್ದೆ. ‘ಎಲ್ಲ ನೆಲದ ಕಾಮರ್ಿಕರೇ ಒಂದಾಗಿ, ನೀವು ಕಳಕೊಳ್ಳುವುದೇನಿಲ್ಲ ಸಂಕೋಲೆಗಳನ್ನು ಹೊರತು’- ಎಂದು ಕರೆ ನೀಡಿದಾತನ ಮೇಲೆ ಅಚಲ ನಂಬಿಕೆಯಿಟ್ಟು ಬಂದವರು ಅವರು. ತಮ್ಮ ನೋವುಗಳನ್ನು ಮರೆತು ತಮ್ಮಂತೆಯೇ ನೋವುಂಡವರ ಜೊತೆ ಬೆರೆತು, ಹಾಡು ಕುಣಿತಗಳ ಮಧ್ಯೆ ಮತ್ತೆ ಒಂದು ವರ್ಷ ಹೋರಾಟದ ಸಾಗರದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಛಲ ಹೊತ್ತು ತೆರಳುವವರು.
ಇಂತಹ ಮೇ ದಿನವನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಾ ಅದರಲ್ಲಿ ನಡೆಯುವ ಹಾಡು ಕುಣಿತದಲ್ಲಿ ಒಂದಾಗಿ ಮನೆಗೆ ಮರಳುವಾಗ ಸಂಗಾತಿಯೊಬ್ಬರು ನನಗೆ ನೀಡಿದ್ದು – ಆ ಒಂದು ರೂಪಾಯಿಯ ಕೂಪನ್. ಕ್ಯೂಬಾ ದೇಶದ ಬೆಂಬಲಾರ್ಥವಾಗಿ ಒಂದು ರೂ. ಮೇ ದಿನ ಹಾಡು ಕುಣಿತಗಳ ಜೊತೆಗೆ ಇಂತಹ ಹಲವು ನಂಟು ಬೆಸೆಯುವ ದಿನವೂ ಹೌದು. ಹೋರಾಟದ ಕಿಚ್ಚು ಹೊತ್ತಿಸುವ ಪುಸ್ತಕಗಳು, ತಮಗೆ ಆದರ್ಶವಾದವರ ಚಿತ್ರಗಳು, ಕಲಾಕೃತಿಗಳು, ಎಲ್ಲೆಲ್ಲೂ ಕರಪತ್ರಗಳು. ನೊಂದ ಸಂಘಟನೆಗಳಿಗಾಗಿ, ಮುಷ್ಕರ ಕುಳಿತವರ ನೆರವಿಗಾಗಿ ಹಣ ಸಂಗ್ರಹಿಸಲು ಕೂಪನ್ಗಳು.
ಆದರೆ ಈಗ ಇವರು ಕೇಳುತ್ತಿರುವುದು ಒಂದು ದೇಶಕ್ಕಾಗಿ. ಇದು ನನ್ನನ್ನು ಬೆರಗುಗೊಳಿಸಿದ ಸಂಗತಿ. ಎಲ್ಲಿಯ ಕ್ಯೂಬಾ, ಎಲ್ಲಿಯ ಭಾರತ, ಎಲ್ಲಿಯ ಬೆಂಗಳೂರು. ಆ ದೇಶಕ್ಕೇಕೆ ಒಂದು ರೂಪಾಯಿಯ ನೆರವು. ಈ ಪ್ರಶ್ನೆ ನನ್ನ ತಲೆಯಲ್ಲಿ ಮೊಳೆತಿದ್ದೇ ತಡ ಕ್ಯೂಬಾ ಹಾಗೂ ನನ್ನ ನಡುವಿನ ಗೋಡೆಗಳು ಇಲ್ಲವಾಗುತ್ತಾ ಹೋದವು. ಗೆಳೆಯನ ಮನೆಯ ದಾರಿ ದೂರವಲ್ಲ ಎಂಬಂತೆ ಹಾದಿ ಹತ್ತಿರವಾಗತೊಡಗಿತು. ಕ್ಯೂಬಾ ನನ್ನ ನೆರೆಮನೆಯಾಯಿತು. ನನ್ನೊಳಗಿಳಿಯಿತು. ನನ್ನೊಳಗಿನ ಹಾಡಾಯಿತು.
ಹೀಗೆ ಯೋಚಿಸುವಾಗಲೆಲ್ಲಾ ನನಗೆ ಸು.ರಂ.ಎಕ್ಕುಂಡಿ ನೆನಪಾಗುತ್ತಾರೆ. ಶೇಕ್ಸ್ಪಿಯರ್ನ ‘ಹ್ಯಾಮ್ಲೆಟ್’ ನಾಟಕವನ್ನು ನೋಡುತ್ತಾ ಒಬ್ಬ ಹಳ್ಳಿಯಾತ ಬಿಕ್ಕಿ ಬಿಕ್ಕಿ ಅಳುತ್ತಾನೆ. ಆಗ ಶೇಕ್ಸ್ಪಿಯರ್ ವಿಸ್ಮಿತರಾಗಿ ಕೇಳುತ್ತಾರೆ -Who is he to Hekuba and Hekuba to him?
ರೊಮೀನಿಯಾದ ಒಡಲಲ್ಲಿ ಅರಳಿ ಜಗತ್ತನ್ನೇ ಬೆರಗಾಗಿಸಿದ ಜೀಮ್ನಾಸ್ಟ್ ನದಿಯಾ ಕಮಾನ್ಸೆಯ ಬಗ್ಗೆ ನಾನು ಕವನ ಬರೆದಾಗ ಎಕ್ಕುಂಡಿ ಈ ಮಾತು ಹೇಳಿದ್ದರು. ಕಾಣದ ಇಂಥ ಸಂಬಂಧದ ತಂತುಗಳು ಈ ಜಗತ್ತಿನ ಮೂಲೆ ಮೂಲೆಯಲ್ಲಿ ಹರಡಿರುತ್ತದೆ ಎಂದಿದ್ದರು. ಈಗ ಕ್ಯೂಬಾ ಮತ್ತು ನಾನು.
ಒಂದು ರೂಪಾಯಿ ಕೊಟ್ಟಾಗಲೇ ಮೊದಲ ಬಾರಿಗೆ ಕ್ಯೂಬಾ ಹೆಸರು ಕೇಳಿದ ನಾನು ಮತ್ತೆ ಯಾರಾದರೂ ಕ್ಯೂಬಾ ಹೆಸರು ಎತ್ತಿದಾಗ, ಪತ್ರಿಕೆಗಳಲ್ಲಿ ಕ್ಯೂಬಾ ಹೆಸರು ಕಂಡರೆ ಅರೆ! ಇದು ನಾನು ಒಂದು ರೂಪಾಯಿ ಕೊಟ್ಟ ದೇಶ ಎನಿಸುತ್ತಿತ್ತು. ಆ ಒಂದು ರೂಪಾಯಿಯ ದೇಶ ಸುದ್ದಿಯಾಗಿ ಪತ್ರಿಕೆಯಲ್ಲಿ ಮುಖ ತೋರಿಸುತ್ತಿರುವುದಾದರೂ ಯಾತಕ್ಕೇ? ಎಂದು ಕುತೂಹಲಗೊಂಡು ಓದುತ್ತಾ, ಓದುತ್ತಾ ಹೋದಂತೆ, ಆ ಒಂದು ರೂಪಾಯಿಯ ದೇಶ ನನ್ನೊಳಗೆ ಒಂದು ಜಾಗವನ್ನು ಹುಡುಕಿಕೊಂಡಿತು.
ಆ ಒಂದು ರೂಪಾಯಿ ಕೇವಲ ಕ್ಯೂಬಾವನ್ನು ಮಾತ್ರವಲ್ಲ ಅದಮ್ಯ ಕನಸುಗಾರ ಚೆಗೆವಾರನ್ನು, ಹಸಿರು ಬಟ್ಟೆಯ ಹರಕು ಗಡ್ಡದ ಫಿಡೆಲ್ನನ್ನು, ಗ್ರಾನ್ಮಾ ನೌಕೆಯನ್ನೂ, ನೆರೂದಾನ ಕಾವ್ಯವನ್ನು, ಸದಾ ಜೊತೆಗಾರನಾಗಿ ನಿಂತ ಮೆಕ್ಸಿಕೋವನ್ನು, ‘ಚೆ’ ಅಜರ್ೆಂಟೀನಾವನ್ನು, ಆತ ಇಲ್ಲವಾದ ಬೊಲಿವಿಯಾವನ್ನು, ಲ್ಯಾಟಿನ್ ಅಮೇರಿಕಾದ ಒಳಬೇಗುದಿಯನ್ನು, ಅಷ್ಟೇ ಅಲ್ಲ – ಅಮೇರಿಕಾ ಎಂಬ ದೊಡ್ಡಣ್ಣನನ್ನೂ ಪರಿಚಯ ಮಾಡಿಕೊಟ್ಟಿತು.
‘ಬೆಟ್ಟಗುಡ್ಡಗಳಲ್ಲಿ, ಕಾಡು ಕಣಿವೆಗಳಲ್ಲಿ, ಚೆಗೆವಾರನ ಕೈಯಲ್ಲಿ ಇದ್ದದ್ದು ಕೋವಿ ಮತ್ತು ಕಾವ್ಯ’ ಎಂದು ಬಣ್ಣಿಸಿದ್ದರು ಎಕ್ಕುಂಡಿ. ಆಗ ತಾನೇ ‘ಈ ರಾತ್ರಿ ಬರೆಯುತ್ತೇನೆ. ಅತ್ಯಂತ ನೋವಿನ ಸಾಲುಗಳನ್ನು…’ ಎಂಬ ನೆರೂದಾನ ಕವನದಲ್ಲಿ ಇಳಿಯುತ್ತಿದ್ದ ನಾನು ‘ಚೆ’ ಎಂಬ ಕನಸುಗಾರನೊಂದಿಗೆ ಕಳೆದುಹೋದೆ. ಪಡ್ಡೆ ‘ಚೆ’ ಜೊತೆಗೆ ತುಡುಗರ ದಂಡು. ಕನಸುಗಾರನ ಹಿಂದೆ ‘ಇರುವೆಯಂತೆ ಹರಿವ ಸಾಲು…’
ಕ್ಯೂಬಾ ಅಂದಿನಿಂದಲೂ ನನ್ನೊಂದಿಗಿದೆ. ಕನಸಾಗಿ, ಹಾಡಾಗಿ, ಬಂಡೇಳುವ ಹುಮ್ಮಸ್ಸಾಗಿ, ಕವಿತೆಯ ಸಾಲುಗಳಾಗಿ. ನನಗೆ ಫಿಡೆಲ್, ಚೆ, ಮಂಡೇಲ ಎಲ್ಲರೂ ಸೋನೆ ಹನಿಗಳಾಗಿ ಕಂಡಿದ್ದಾರೆ. ಈ ನೆಲಕ್ಕೆ ಹಸಿರು ಮುಕ್ಕಳಿಸುವ ತಾಕತ್ತು ಕೊಟ್ಟಿದ್ದರೆ ಅದು ಇಂತಹ ಅನೇಕಾನೇಕ ಸೋನೆ ಹನಿಗಳು ಎಂಬ ನಂಬಿಕೆ. ಸೋನೆ ಹನಿಗಳು ಉದುರಿ ಎದೆಗೂಡು ಸೇರಿ ಬೆಚ್ಚನೆಯ ಹಾಡಲ್ಲಿ ಹಾಡಾಯಿತು… ನನ್ನ ಸಂಕಲನದ ಸಾಲು ಇದು. ಇವರೆಲ್ಲರೂ ಎದೆಯಲ್ಲಿ ಕಾವ್ಯ, ಕೈಯಲ್ಲಿ ಖಡ್ಗ ಹಿಡಿದ ಪಂಪನ ಬಂಧುಗಳು. ಈ ಜಗತ್ತಿನಲ್ಲಿ ಪಂಪನದ್ದೇ ಒಂದು ಸೈನ್ಯವಿದೆ. ಎದೆಯಲ್ಲಿ ಕಾವ್ಯದ ಎಸಳುಗಳನ್ನಿಟ್ಟುಕೊಂಡು ಕೈಯಲ್ಲಿ ಖಡ್ಗ ಹಿಡಿದ ಎಷ್ಟೊಂದು ಜನ ಆ ಸೇನೆಯಲ್ಲಿದ್ದಾರೆ. ಆ ‘ಚೆ’ಯಿಂದ ಹಿಡಿದು ಬೆಂಜಮಿನ್ ಮೊಲಾಯಿಸ್ನವರೆಗೆ. ಜಗತ್ತಿನ ಕನಸುಗಾರನ ನಡುವೆ ಗೆರೆಗಳಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಜಗತ್ತಿನ ತುಂಬಾ ಹಲವಾರು ಲೆಬನಾನ್ಗಳು ಸೃಷ್ಟಿಯಾದಾಗ, ನೀನು ಕಪ್ಪು ಎನ್ನುವ ಮನಸ್ಸುಗಳು, ಸಕರ್ಾರಗಳು ಸೃಷ್ಟಿಯಾದಾಗ ‘ಒಂದೊಂದು ಮನೆಯಲ್ಲಿ ಒಬ್ಬೊಬ್ಬ ಚೆ….’ ಮೂಡುವ ಕನಸುಗಳೂ ಬೆಳೆದಿವೆ.
‘ಮಣಿ’ ಎನ್ನುವ ಅಮೇರಿಕಾ ‘ಮಣಿಯಲಾರೆ’ ಎನ್ನುವ ಕ್ಯೂಬಾ ಇಂದು ಜಗತ್ತಿನ ಆ ತುದಿಯ ಕಥೆಯಾಗಿ ಉಳಿದಿಲ್ಲ. ತನ್ನ ಕಾಲ ಮೇಲೆ ತಾನು ನಿಲ್ಲುವ ಬಯಕೆಗಳು ಮೂಡಿದ ಕಡೆಯೆಲ್ಲಾ ಈ ಕ್ಯೂಬಾ – ಅಮೇರಿಕಾ ಸೃಷ್ಟಿಯಾಗಿವೆ. ದೇಶಗಳ ನಡುವೆ, ದೇಶಗಳ ಒಳಗೆ, ಮನೆಯೊಳಗೆ, ಹಾಗೇ ಮನಸ್ಸಿನ ಒಳಗೂ….
ಆ ಒಂದು ರೂಪಾಯಿ ಏನೆಲ್ಲಾ ಮಾಡಿತು. ಕನಸುಗಳನ್ನು ಕೊಟ್ಟಿತು. ಅಂತೆಯೇ ಅದರತ್ತ ಹಾರುದ ರೆಕ್ಕೆಗಳನ್ನೂ ಕೊಟ್ಟಿತು. ಆ ರೆಕ್ಕೆಗಳೇ ನನ್ನನ್ನು ಕ್ಯೂಬಾದ ಒಳಗೆ ಇಳಿಸಿತು.

No comments:
Post a Comment