Showing posts with label ಚಿತ್ರವಿಮರ್ಶೆ. Show all posts
Showing posts with label ಚಿತ್ರವಿಮರ್ಶೆ. Show all posts

Thursday, 10 May 2012

ಸ್ಪ್ರಿಂಗ್, ಸಮ್ಮರ್, ಫಾಲ್, ವಿಂಟರ್... ಆಂಡ್ ಸ್ಪ್ರಿಂಗ್ ...




ಚಿತ್ರ ಪರಿಚಯ:- ಕೇಶವ ಮೂರ್ತಿ



ಹಸಿರಿನ ಕಾಡ ಪರದೆ. ಝುಳು ಝುಳು ಹರಿವ ನೀರಿನ ಝರಿಯ ನಿನಾದ. ತಣ್ಣನೆ ಮಂಜು. ಚಿಕ್ಕ ಕೆರೆಯಂತೆ ಕಾಣುವ ನೀರಿನ ಹಳ್ಳ. ಅದರ ನಡುವೆ ಪುರಾತನ ಕಾಲವನ್ನು ಬಿಂಬಿಸುವ ದೇವಾಲಯದಂತಿರುವ ಮನೆ. ಅಲ್ಲೊಬ್ಬ ಹಿರಿಯ ವ್ಯಕ್ತಿ, ಇವರೊಂದಿಗೆ ಆಗಷ್ಟೆ ಪ್ರಪಂಚದ ತಿಳುವಳಿಕೆಯ ಅಂಗಳಕ್ಕೆ ಅಂಬೆಗಾಲಿಡುತ್ತಿರುವ ಪುಟ್ಟ ಬಾಲಕ. ಗುರು, ಶಿಷ್ಯರಾದರೂ ಅವರಿಬ್ಬರು ಅಜ್ಜ ಮೊಮ್ಮಗನ ಹಾಗೆ.



ಆ ಪುಟ್ಟ ಮನೆಯೇ ಚಿತ್ರ ಮತ್ತು ಚಿತ್ರಕಥೆಯ ಕೇಂದ್ರ ಬಿಂದು. ನಾಲ್ಕು ಹಂತಗಳಲ್ಲಿ ಸಾಗುವ ಈ ಕಥೆಯ ಆರಂಭ ಮತ್ತು ಅಂತ್ಯ ಎರಡನ್ನೂ ನೋಡಿ ಮತ್ತೆ ಆರಂಭಕ್ಕೆ ಮುನ್ನುಡಿಯಾಗುವ ಆ ಮನೆಯೇ ನಿರ್ದೇಶಕ ಕಿಮ್ ಕಿ ಡುಕ್್ನ ಚಿತ್ರಾಲಯ. ಕೊರಿಯಾದ 'ಸ್ಪ್ರಿಂಗ್, ಸಮ್ಮರ್, ಫಾಲ್, ವಿಂಟರ್... ಆಂಡ್ ಸ್ಪ್ರಿಂಗ್್' ಚಿತ್ರ ಮನುಷ್ಯನ ಭಾವತೀರದ ದಡ. 


ಕಿಮ್ ಕಿ ಡುಕ್ ನಿರ್ದೇಶನದ 17 ಚಿತ್ರಗಳ ಪೈಕಿ ಬಹುತೇಕ ಸಿನಿಮಾಗಳಲ್ಲಿ ಜೀವನ, ಮೌಲ್ಯಗಳ ಬದಲಾವಣೆ, ಆಧ್ಯಾತ್ಮಿಕತೆ, ಪ್ರೀತಿ, ಪ್ರೇಮಕ್ಕೆ ಹೆಚ್ಚು ಒತ್ತು. ಕ್ರೈಮ್್ನೊಂದಿಗೆ ಜೀವನದ ಪ್ರತಿ ಘಟ್ಟವೂ ಬೆಸೇರಿಕೊಂಡಿರುತ್ತದೆ ಎನ್ನುತ್ತ ಅವೆರಡನ್ನೂ ಅನಾವರಣಗೊಳಿಸುವುದು ಕಿಮ್್ನ ಸ್ಟೈಲ್. ಈ ಚಿತ್ರ ಕೂಡಾ ಅದೇ ಸಾಲಿಗೆ ಸೇರುತ್ತದೆ. ಒಂದೊಂದು ಕಾಲಘಟ್ಟಕ್ಕೂ ಒಂದೊಂದು ಕಥೆ ಹೇಳುತ್ತ ನಾಲ್ಕು ಹಂತಗಳ ಕಥೆಯನ್ನು ಒಂದೇ ಚಿತ್ರದಲ್ಲಿ ಸಮೀಕರಿಸಿರುವ ತಂತ್ರ ಇಲ್ಲಿದೆ.


ಮನುಷ್ಯ ಜಡ ವಸ್ತು ಅಲ್ಲ. ಆತ ನಿರಂತರವಾಗಿ ಚಲಿಸುತ್ತಲೇ ಇರುತ್ತಾನೆ. ಆ ಚಲನೆಯಲ್ಲಿ ಕಾಲಕಾಲಕ್ಕೆ ತನ್ನತನವನ್ನು ಬದಲಾಯಿಸಿಕೊಳ್ಳುತ್ತಾನೆ. ಮನುಷ್ಯನ ಇಂಥ ಬದಲಾವಣೆಗಳು ಯಾವ ಕಾಲಘಟ್ಟದಲ್ಲಿ ಹೇಗಿರುತ್ತದೆ ಎಂಬುದು ಈ ಚಿತ್ರದ ತಿರುಳು. ಬಾಲ್ಯ, ಯೌವ್ವನ, ಜೀವನ, ಸುಖ-ದುಃಖ, ಸಾವು ಹೀಗೆ ಎಲ್ಲವನ್ನು ದರ್ಶನ ಮಾಡಿಸುವ ಈ ಚಿತ್ರ ಕ್ಲೈಮ್ಯಾಕ್ಸ್್ಗೆ ಬಂದು ಮತ್ತೆ ಆರಂಭಕ್ಕೆ ತಿರುಗುತ್ತದೆ. ಅಜ್ಜನನ್ನೇ ಗುರುವಾಗಿಸಿಕೊಂಡಿರುವ ಒಬ್ಬ ಬಾಲಕ. ಅವರ ಮಾತೇ ವೇದವಾಕ್ಯ.

ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಮಗಳಿಗೆ ಚಿಕಿತ್ಸೆ ಕೊಡಿಸಲು ತಾಯಿ ಮಗಳು ಆ ಮನೆಗೆ ಬರುತ್ತಾರೆ. ಒಂದು ದಿನ ಅಲ್ಲೇ ಕಳೆದು ಮಗಳನ್ನು ಬಿಟ್ಟು ಹೋಗುತ್ತಾಳೆ ಆ ತಾಯಿ. ಈಗ ಬಾಲಕ ದೊಡ್ಡವನಾಗಿದ್ದಾನೆ. ಗುರುಗಳ ಪಾಠದ ಜೊತೆಗೆ ಅವನಿಗೆ ಇನ್ನೇನೋ ಯೋಚನೆಗಳು ತಲೆಯಲ್ಲಿ ಕಾಡುತ್ತಿವೆ. ಚಿಕಿತ್ಸೆಗಾಗಿ ಬಂದಿರುವ ಹುಡುಗಿ ಜೊತೆಗೆ ಸೇರಿಕೊಳ್ಳುತ್ತಾನೆ. ಜೀವನದ ಹೊಸ ಪುಟ ಓದಿದ ಅನುವಭ ಆತನಿಗೆ. ಅದು ತನ್ನ ಗುರುಗಳಿಗೆ ಗೊತ್ತಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಬೇಸರಗೊಂಡು ಮನೆ ಬಿಟ್ಟು ಹೋಗುತ್ತಾನೆ 'ಬಾಲಕ'. ಗುರುಗಳ ಆಶ್ರಯ ಬಿಟ್ಟ ಆತ ಈಗ ಕ್ರಿಮಿನಲ್ ಆಗಿದ್ದಾನೆ. ಹೀಗೆ ಮುಂದೆ ಒಂದೊಂದಾಗಿ ಮನುಷ್ಯನ ಜೀವನ ಘಟ್ಟಗಳು ಪ್ರೇಕ್ಷಕನಿಗೆ ದರ್ಶನವಾಗುತ್ತದೆ.


ಆರಂಭ: ತನ್ನ ಅಜ್ಜನಿಗೆ ಗೊತ್ತಾಗದ ಹಾಗೆ ತಾನೇ ದೋಣಿಯಲ್ಲಿ ದಡ ಸೇರಿ ಅಲ್ಲಿ ತನ್ನಿಷ್ಟದಂತೆ ಆಟವಾಡುತ್ತಾನೆ. ಈ ಆಟದಲ್ಲಿ ಮೀನು, ಕಪ್ಪೆ ಹಿಡಿದು ಅವುಗಳಿಗೆ ಕಲ್ಲು ಕಟ್ಟಿ ನೀರಿನಲ್ಲಿ ಬಿಟ್ಟು ಅವು ಒದ್ದಾಡುತ್ತಿದ್ದರೆ ಖುಷಿಪಡುತ್ತಾನೆ. ಹಾವಿಗೂ ಕಲ್ಲು ಕಟ್ಟುತ್ತಾನೆ. ಕಲ್ಲು ಕಟ್ಟಿಸಿಕೊಂಡ ಮೂರು ಜೀವಗಳು ಮಾತ್ರ ಮುಂದೆ ಸಾಗಲಾರದೆ ಯಾತನೆ ಅನುಭವಿಸುತ್ತವೆ. ತನ್ನ ಪಾಡಿಗೆ ತಾನು ಮತ್ತೆ ಮನೆ ಸೇರಿಕೊಳ್ಳುತ್ತಾನೆ. ಗುರು ಮಲಗಿದ್ದ ಬಾಲಕನ ಬೆನ್ನಿಗೆ ಕಲ್ಲು ಕಟ್ಟುತ್ತಾರೆ. ಬೆಳಿಗ್ಗೆ ನಡೆಯಲಾಗದೆ ಎದ್ದು ಬಿದ್ದು ಬರುವ ಬಾಲಕ 'ನಡೆಯಲಾಗುತ್ತಿಲ್ಲ. ಬೆನ್ನು ನೋವಾಗುತ್ತಿದೆ. ಕಲ್ಲು ಬಿಚ್ಚು' ಎಂದು ಗುರುಗಳನ್ನು ಕೇಳುತ್ತಾನೆ. ಗುರು ತೀಕ್ಷ್ಣವಾಗಿ ಬಾಲಕನ ಕಡೆ ನೋಡುತ್ತಾನೆ. 


ಬಾಲಕ ಬೆನ್ನಿಗೆ ಕಲ್ಲನ್ನು ಹಾಗೆ ಬೆನ್ನಿಗಿಟ್ಟುಕೊಂಡು ಮೀನು, ಕಪ್ಪೆ, ಹಾವನ್ನು ಕಲ್ಲಿನಿಂದ ಬಿಡಿಸಲು ಹೋಗುತ್ತಾನೆ. ಅಷ್ಟರಲ್ಲಿ ಮೀನು ಮತ್ತು ಹಾವು ಜೀವ ಬಿಟ್ಟಿರುತ್ತವೆ. ಕಲ್ಲು ಕಟ್ಟುವಾಗ ಎಷ್ಟು ಸಂಭ್ರಮಿಸಿ ಆಟವಾಡುತ್ತಾನೋ ಅದರ ಮೂರು ಪಟ್ಟು ಬಾಲಕ ಅಳುತ್ತಾನೆ. ನಿರ್ದೇಶಕ ಜೀವದ ಮಹತ್ವ ಸಾರಲು ಬಾಲಕನ ಆಟ, ಮೂರು ಮೂಕ ಜೀವಗಳನ್ನು ಸಾಂಕೇತಿವಾಗಿ ಬಳಸಿದ್ದಾರೆ ಅಷ್ಟೆ. ನಮ್ಮ ಖುಷಿಯ ಹಿಂದೆ ಇನ್ನೊಬ್ಬರ ನೋವು ಇದೆ, ಅಲ್ಲವೇ? 


'ಚಿತ್ರ ಇನ್ನು ಮುಗಿಯಿತು' ಎನ್ನುವಾಗಲೇ ಮತ್ತೆ ಆರಂಭವಾಗುತ್ತದೆ. ಹೀಗಾಗಿ ಯಾವುದೂ ಇಲ್ಲಿ ಅಂತ್ಯವಲ್ಲ. ನಿರಂತರವಾಗಿ ಚಲಿಸುವ ಜೀವನ ಚಕ್ರದ ಹಿಂದಿನ ಸತ್ಯವೂ ಕೂಡಾ ಅದೇ ಎಂಬುದನ್ನು ಪ್ರೇಕ್ಷಕನಿಗೆ ಮನದಟ್ಟು ಮಾಡುವಲ್ಲಿ ಚಿತ್ರ ಯಶಸ್ವಿಯಾಗುತ್ತದೆ. ಪ್ರತಿ ದೃಶ್ಯವನ್ನು ಯಾವುದೇ ಆಡಂಬರ ಇಲ್ಲದೆ ನಿರ್ಲಿಪ್ತವಾಗಿ ನಿರ್ದೇಶಕ ಕಟ್ಟಿಕೊಡುತ್ತಾನೆ. 


ಚಿತ್ರದ ನಡುವೆ: 30 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಸಾಯಿಸಿದ್ದಾನೆಂಬ ಸುದ್ದಿ ಅಜ್ಜನ ಕಿವಿಗೆ ಬೀಳುತ್ತದೆ. ಆ ವ್ಯಕ್ತಿ ತನ್ನ ಶಿಷ್ಯನೇ! ಪೋಲೀಸರ ಆಗಮನ, ಬಂಧನ. ಕಾಲ ಮತ್ತೆ ಬದಲಾಗಿದೆ, ಅಜ್ಜ ಕಣ್ಮುಚ್ಚಿದ್ದಾನೆ. ದೇವಾಲಯದಂತಿರುವ ಮನೆ ಪಾಳು ಬಿದ್ದಿದೆ. ನೀರು ಬತ್ತಿ ಹೋಗಿದೆ. ಹಸಿರು ಕಣ್ಮರೆಯಾಗಿದೆ, ಹಕ್ಕಿ ಕೂಗುತ್ತಿಲ್ಲ, ನೀರು ಹರಿಯುತ್ತಿಲ್ಲ. ಅಲ್ಲಿಗೆ ಸ್ಪ್ರಿಂಗ್, ಸಮ್ಮರ್, ಫಾಲ್, ವಿಂಟರ್ ಮುಗಿಯಿತು. ಬಂಧನಕ್ಕೊಳಗಾದವನು ಈಗ ಬಿಡುಗಡೆಯಾಗಿದ್ದಾನೆ. ತನ್ನ ಗುರುಗಳ ಸ್ಥಾವರಕ್ಕೆ ಬಂದಿದ್ದಾನೆ. ಮನೆಗೆ ಮತ್ತೆ ಜೀವ ಕೊಡುವ ಪ್ರಯತ್ನ ಮಾಡುತ್ತಿದ್ದಾನೆ. ಮುಖ ಪರಿಚಯವಿಲ್ಲದ ಮಹಿಳೆಯೊಬ್ಬಳು ಅಲ್ಲಿಗೆ ಬಂದು ತನ್ನ ಮಗುವನ್ನು ಬಿಟ್ಟು ಹೋಗಿದ್ದಾಳೆ. ಆಕೆ ಜೀವಂತವಾಗಿಲ್ಲ. ಮಗು ಅಲ್ಲೇ ಬೆಳೆಯುತ್ತದೆ. ಮನೆ ಜೀವಕಳೆ ಪಡೆದುಕೊಳ್ಳತೊಡಗಿದೆ. ನೀರು ಹರಿಯತೊಡಗಿದೆ, ಮರ, ಗಿಡ ಚಿಗುರುತ್ತಿವೆ. ಕಾಡು ಹಸಿರಾಗುತ್ತಿದೆ. ಮತ್ತೆ 'ಸ್ಪ್ರಿಂಗ್...' ಈಗ ಕಾಲಘಟ್ಟ ಬದಲಾಗಿದೆ!

Wednesday, 9 May 2012

ದಿ ವೈಟ್ ಬೆಲೂನ್


ಟಿ ಕೆ ದಯಾನಂದ್

ಇರಾನ್ ದೇಶದ ಮಿಯಾನೆ ಎಂಬ ಪಟ್ಟಣ ಸಂಜಾತ ಚಿತ್ರ ನಿರ್ದೇಶಕ ಜಾಫರ್ ಪನಾಹಿ ಇರಾನಿನ ಪರ್ಷಿಯಾ ಚಿತ್ರರಂಗ ಕಂಡ ಅತ್ಯಂತ ವಿವಾದಾಸ್ಪದ ನಿರ್ದೇಶಕರಲ್ಲಿ ಅಗ್ರಗಣ್ಯ. ರಾಜಧಾನಿ ಟೆಹ್ರಾನಿನ ಇರಾನಿ ಬ್ರಾಡ್‌ಕಾಸ್ಟಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಪನಾಹಿ ಎಂಬ ಹುಡುಗ ಮೂಲತಃ ಇರಾನಿ ಸೈನ್ಯದ ಸೈನಿಕನಾಗಿದ್ದವ. ೧೯೮೦ರ ದಶಕದಲ್ಲಿ ನಡೆದ ಇರಾನ್ ಇರಾಕ್ ನಡುವಿನ ಯುದ್ಧದಲ್ಲಿ ಪಾಲ್ಗೊಂಡಿದ್ದ ಪನಾಹಿ ನಂತರದ ದಿನಗಳಲ್ಲಿ ಈ ಯುದ್ಧದ ಬಗ್ಗೆ ತಾನೇ ಚಿತ್ರೀಕರಿಸಿದ ವಿಡಿಯೋ ತುಣುಕುಗಳನ್ನಿಟ್ಟುಕೊಂಡು ಒಂದು ಸಾಕ್ಷ್ಯಚಿತ್ರ ನಿರ್ಮಿಸುತ್ತಾನೆ. ಇರಾನಿನ ಶ್ರೇಷ್ಠ ನಿರ್ದೇಶಕರಲ್ಲೊಬ್ಬನಾದ ಅಬ್ಬಾಸ್ ಕಿಯಾರೋಸ್ತೆಮಿ ಬಳಿ ತ್ರೂ ದಿ ಆಲೀವ್ ಲೀವ್ಸ್ ಚಿತ್ರಕ್ಕಾಗಿ ಸಹಾಯಕ ನಿರ್ದೇಶಕನಾಗಿ ದುಡಿದ ನಂತರ ಆ ಚಿತ್ರದ ನಿರ್ದೇಶಕ ಕಿಯಾರೋಸ್ತೆಮಿ ಬಳಿ ಈಗಾಗಲೇ ತಾನು ನೇಯ್ದಿದ್ದ ಒಂದೆಳೆಯ ಕಥೆಯನ್ನು ಹಂಚಿಕೊಳ್ಳುತ್ತಾನೆ. ತಕ್ಷಣವೇ ಕಥೆಯ ಎಳೆಗೆ ಮನಸೋತ ಕಿಯಾರೋಸ್ತೆಮಿ ಆ ಕಥೆಗೆ ಚಿತ್ರಕಥೆ ಸಂಭಾಷಣೆ ರಚಿಸುವ ಹೊಣೆಯನ್ನು ಹೊತ್ತುಕೊಂಡು ಪನಾಹಿ ನಿರ್ದೇಶನದಲ್ಲಿ ಒಂದು ಅದ್ಭುತ ಪರ್ಷಿಯನ್ ಚಿತ್ರ ಮೂಡಿ ಬರಲು ಜೊತೆಗೆ ನಿಲ್ಲುತ್ತಾನೆ. ಚಿತ್ರದ ಹೆಸರು ದಿ ವೈಟ್ ಬೆಲೂನ್.

ಇರಾನಿ-ಇರಾಕಿ ಚಿತ್ರ ನಿರ್ದೇಶಕರು ಸಾಮಾನ್ಯವಾಗಿ ಬಳಸುವ ಎಳೆಯ ಮನಸ್ಸುಗಳ ಮೂಲಕ ಜಾಗತಿಕ ಆಕ್ರಮಣಗಳನ್ನು ಪ್ರಶ್ನಿಸುವ ಮಾದರಿಯನ್ನು ಪನಾಹಿ ತನ್ನ ದಿ ವೈಟ್ ಬೆಲೂನ್ ಮೂಲಕವೂ ಎಳೆದೊಯ್ದಿದ್ದಾನೆ. ತನ್ನ ಮೊದಲ ಚಿತ್ರದಲ್ಲೇ ಮಕ್ಕಳಿಬ್ಬರ ಶುಭ್ರ ಜಗತ್ತಿನ ಅಮಾಯಕತೆಯ ಸೆಳವಿನೊಳಗೆ ಇರಾನಿನ ಬಡವರ್ಗದ ಹಣಕಾಸುಗಳ ದುಡಿಮೆಯ ಮತ್ತು ಸೈನ್ಯದ ನಿರರ್ಥಕ ಅಸ್ತಿತ್ವಗಳ ಬಿಕ್ಕಟ್ಟನ್ನು ಎಳೆದುಕೊಂಡಿರುವುದು ದಿ ವೈಟ್ ಬೆಲೂನ್ ಚಿತ್ರದ ವೈಶಿಷ್ಟ್ಯ. ಚಿತ್ರದ ಕಥೆಯೇನೆಂದು ನೋಡ ಹೊರಟರೆ ಅಲ್ಲಿ ಕಥೆಯೆಂಬುದರ ಬದಲಾಗಿ ಒಂದು ಘಟನೆಯಷ್ಟೇ ಫ್ರಧಾನವಾಗಿಸಿ ಕಾಸು ಕಳೆದುಕೊಂಡ ಪುಟ್ಟ ಹುಡುಗಿ ರಜಿಯೇಳ ಹುಡುಕಾಟವಷ್ಟನ್ನೇ ಕಥೆಯ ಸ್ವರೂಪಕ್ಕೆ ಒಗ್ಗಿಸಿಕೊಂಡಿರುವ ಪನಾಹಿಯ ಕಥನತಂತ್ರ ಮೆಚ್ಚಲರ್ಹವಾದುದು. ಚಿತ್ರದ ಪುಟ್ಟನಾಯಕಿ ರಜಿಯೇ (ಐದಾ ಮಹಮ್ಮದ್‌ಖಾನಿ) ಹೊಸವರ್ಷದ ಇಳಿಸಂಜೆಯಲ್ಲಿ ಆಕೆಯ ತಾಯಿಯೊಡನೆ ಸಂತೆಯಲ್ಲಿ ದಿನಸಿ ಖರೀದಿಸುವಲ್ಲಿಂದ ಚಿತ್ರ ಪ್ರಾರಂಭಗೊಳ್ಳುತ್ತದೆ. ಸಂತೆಯ ಅಂಗಡಿಯಲ್ಲಿ ನೋಡಿದ ಗಾಜಿನ ಪೆಟ್ಟಿಗೆಯೊಳಗಿನ ಚಿನ್ನದ ಬಣ್ಣದ ಮೀನುಗಳಿಗೆ ತನ್ನ ಆಸೆಯನ್ನು ಅಡವಿಡುತ್ತಾಳೆ. ತನ್ನ ಮಣ್ಣುಗೋಡೆಯ ಮನೆಯೊಳಗಿನ ಕೊಳದೊಳಗಿನ ಬಡಕಲು ಮೀನುಗಳ ಮೇಲೆ ರಜಿಯೇ ಸಿಟ್ಟಿಗೆದ್ದಿದ್ದಾಳೆ. ತಮ್ಮ ಬಣ್ಣವಿಲ್ಲದ ಬಡಕಲು ಮೈಯನ್ನು ಬಿಟ್ಟುಕೊಂಡು ತನ್ನ ಮನೆಯ ಕೊಳದೊಳಗೆ ಈಜುತ್ತಿರುವ ಈ ಮೀನುಗಳ ಜಾಗದಲ್ಲಿ ನಾಲ್ಕು ರೆಕ್ಕೆಯ ಬಣ್ಣದ ಮೀನನ್ನು ಬಿಡಬೇಕೆಂಬ ಕನಸು ಅವಳೊಳಗೆ ಹೆಡೆಯೆತ್ತಿ ಪೂತ್ಕರಿಸುತ್ತಿದೆ.

ನಿರ್ದೇಶಕ ಜಾಫರ್ ಪನಾಹಿಮನೆಗೆ ಬಂದನಚಿತರ ಅವಳ ತಾಯಿಗೆ ನಾಲ್ಕು ರೆಕ್ಕೆಯ ಬಣ್ಣದ ಮೀನನ್ನು ಕೊಡಿಸಲು ದುಂಬಾಳು ಬೀಳುವ ರಜಿಯೇಳಿಗೆ ಅಮ್ಮನಿಂದ ಬೈಗುಳವಷ್ಟೇ ಸಿಗುತ್ತದೆ. ಈ ಬಡಕಲು ಮೀನುಗನ್ನು ತೆಗೆದು ಬಣ್ಣದ ಮೀನುಗಳನ್ನು ಕೊಳಕ್ಕೆ ಬಿಡೋಣ ಹೊಸ ವರ್ಷದ ದಿನ ಎಲ್ಲರೂ ಹೊಸ ಮೀನು ತೆಗೆದುಕೊಳ್ಳುತ್ತಿದ್ದಾರೆ ನನಗೂ ಕೊಡಿಸು ಎಂಬುದು ರೆಜಿಯೇಳ ಆಸೆಯ ವರಾತ. ಖಡಾಖಂಡಿತವಾಗಿ ಸಾಧ್ಯವಿಲ್ಲವೆಂಬ ಅಮ್ಮನ ನಿರ್ಧಾರದಿಂದ ಬೇಸರಗೊಳ್ಳುವ ರಜಿಯೇ, ತನ್ನ ಅಣ್ಣ ಬಾಲಕ ಆಲಿಗೆ ಅಮ್ಮನಿಂದ ಮೀನು ತೆಗೆದುಕೊಳ್ಳಲು ಹಣ ಕೊಡಲು ಒಪ್ಪಿಗೆ ತಂದರೆ ತನ್ನ ಬಳಿ ಇರುವ ಯಾಂತ್ರೀಕೃತ ಆಟದ ಗೊಂಬೆಯನ್ನು ಬದಲಿಗೆ ಕೊಡುವ ಒಪ್ಪಂದ ಮಾಡಿಕೊಳ್ಳುತ್ತಾಳೆ. ಬೀಳಬಾರದ ಪಾಡು ಬಿದ್ದು ತನ್ನ ತಾಯಿಯನ್ನು ಆಲಿ ಮೀನಿಗೆ ಹಣ ಕೊಡಿಸಲು ಒಪ್ಪಿಸಿ ರೆಜಿಯೇಳ ಕೈಗೆ ೫೦೦ ತೋಮನ್ (ಇರಾನಿ ಕರೆನ್ಸಿ)ಗಳನ್ನು ಕೊಡಿಸುತ್ತಾನೆ. ೨೦೦ ತೋಮನ್ ಬೆಲೆಬಾಳುವ ಬಣ್ಣದ ಮೀನನ್ನು ಕೊಂಡುಕೊಳ್ಳಲು ಆ ೫೦೦ ತೋಮನ್ ನೋಟನ್ನು ಗಾಜಿನ ಬಟ್ಟಲೊಳಗೆ ಹಾಕಿಕೊಂಡು ಓಡುವ ರೆಜಿಯೇ ಹಾವಾಡಿಸುವ ಡರ್ವಿಶ್‌ಗಳ ಗುಂಪಿನೊಳಗೆ ಸೇರಿ ಕೊಂಚ ಹೊತ್ತು ಹಾವಾಡಿಸುವುದನ್ನು ನೋಡಿಕೊಂಡು ಮತ್ತೆ ಬಟ್ಟಲು ಹಿಡಿದು ಮೀನಿನ ಅಂಗಡಿಗೆ ಓಡುತ್ತಾಳೆ. ಅಂಗಡಿಗೆ ಬಂದು ನೋಡುವಷ್ಟರಲ್ಲಿ ಅವಳ ಗಾಜಿನ ಬಟ್ಟಲೊಳಗಿದ್ದ ೫೦೦ ತೋಮನ್‌ನ ನೋಟು ನಾಪತ್ತೆಯಾಗಿದೆ. ದಾರಿಯಲ್ಲಿ ಬರುವಾಗ ಎಲ್ಲೋ ಬೀಳಿಸಿಕೊಂಡಿದ್ದಾಳೆ.

ಕಣ್ಣೊಳಗೆ ಮಳೆಗಾಲವನ್ನೇ ತುಂಬಿಕೊಂಡ ರಜಿಯೇಗೆ ದಿಕ್ಕು ತೋಚದಂತಾಗುತ್ತದೆ, ಕಳೆದುಕೊಂಡ ನೋಟನ್ನು ವಾಪಸ್ಸು ತರುವುದಾಗಿಯೂ ಅಲ್ಲಿಯವರೆಗೆ ಆ ಮೀನನ್ನು ಯಾರಿಗೂ ಮಾರಬಾರದೆಂದು ಅಂಗಡಿಯವನಿಂದ ಭಾಷೆ ತೆಗೆದುಕೊಂಡು ಮತ್ತೆ ತಾನು ಓಡುತ್ತ ಬಂದ ಸಂದುಗೊಂದುಗಳಲ್ಲಿ ನೋಟನ್ನು ಹುಡುಕಿಕೊಂಡು ಅಲೆಯುತ್ತಾಳೆ, ಎಲ್ಲಿಯೂ ಸಿಗುವುದಿಲ್ಲ, ತನ್ನನ್ನು ಹುಡುಕುತ್ತ ಬಂದ ಅಣ್ಣ ಆಲಿಗೆ ವಿಷಯ ತಿಳಿಸುತ್ತಾಳೆ, ಆತನೂ ಸೇರಿಕೊಂಡು ಎಲ್ಲೆಡೆ ಆ ನೋಟನ್ನು ಹುಡುಕುತ್ತಾ ಬಾಗಿಲು ಮುಚ್ಚಿದ ಒಂದು ಅಂಗಡಿಯ ಮುಂದೆ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಎದುರಿಗಿನ ಚರಂಡಿಯ ಒಳಗೆ ರಜಿಯೇಳ ನೋಟು ಬಿದ್ದಿದೆ. ಚರಂಡಿಗೆ ಮೇಲಿನಿಂದ ಕಬ್ಬಿಣದ ಸರಳುಗಳು ಅಡ್ಡಲಾಗಿವೆ, ಸರಳುಗಳನ್ನು ತೆಗೆಯಲು ಬೀಗವಿರುವ ಅಂಗಡಿಯವನು ಅಂಗಡಿ ಮುಚ್ಚಿ ಎರಡು ವಾರಗಳ ರಜೆಯ ಮೇಲೆ ತೆರಳಿದ್ದಾನೆ. ಇಲ್ಲಿಂದ ಚಿತ್ರದ ಕೊನೆಯವರೆಗೂ ಆ ನೋಟನ್ನು ತೆಗೆದುಕೊಳ್ಳಲು ರಜಿಯೇ ಮತ್ತವನ ಅಣ್ಣ ಆಲಿ ನಡೆಸುವ ಅವರ ಮಿತಿಯೊಳಗಿನ ತರಾವರಿ ಸಾಹಸಗಳೇ ಇಡೀ ಚಿತ್ರದ ಕಥೆ. ಬೀಳಬಾರದ ಹರಸಾಹಸಗಳನ್ನೆಲ್ಲ ಬಿದ್ದಾದ ಮೇಲೂ ೫೦೦ ಮುಖಬೆಲೆಯ ತೋಮನ್ ನೋಟು ರಜಿಯೇಗೆ ಮರೀಚಿಕೆಯೇ ಆಗಿ ಉಳಿದಿದೆ. ಖಾಲಿ ಕೈಯಲ್ಲಿ ಮನೆಗೆ ಹೋದರೆ ದುಡಿಮೆಯ ದುಡ್ಡನ್ನು ಕಳೆದುಬಂದ ತಪ್ಪಿಗೆ ಏಟು ಬೀಳುತ್ತವೆ, ಜೊತೆಗೆ ಎರಡು ದಿನಗಳ ಕಾಲ ರಜಿಯೇ ಕುಟುಂಬ ಉಪವಾಸವಿರಬೇಕಿದೆ.

ಇಂಥಲ್ಲಿ ಏನೂ ತೋಚದೆ ಕುಳಿತ ರಜಿಯೇ ಪಕ್ಕ ಒಬ್ಬ ಸೈನಿಕ ಕುಳಿತುಕೊಂಡು ತನ್ನ ಬಗ್ಗೆ ಹೇಳಿಕೊಳ್ಳುತ್ತಾನೆ, ಅಪರಿಚಿತರೊಡನೆ ಮಾತನಾಡದಿರುವಂತೆ ಅಮ್ಮನ ಸೂಚನೆಯಂತೆ ಸೈನಿಕನೊಟ್ಟಿಗೆ ರಜಿಯೇ ಮಾತನಾಡುತ್ತಿಲ್ಲ.. ನಂತರ ಸೈನಿಕನ ತಂಗಿಯರು ಅವನ ಮನೆಯ ಬಗ್ಗೆ ವಿವರಗಳನ್ನು ಕೇಳುತ್ತ ಕೇಳುತ್ತ ಸೈನಿಕನು ಅಪರಿಚಿತನಲ್ಲ,, ಈತನೂ ತನ್ನದೇ ಬಗೆಯ ಹಸಿವಿನ ಕುಟುಂಬದಿಂದ ಬಂದ ಪರಿಚಿತ ಎನ್ನಿಸತೊಡಗುತ್ತದೆ. ರಜಿಯೇ ಮತ್ತು ಸೈನಿಕ ನಡುವಿನ ಮಾತುಕತೆಗಳಲ್ಲಿ ಇರಾನಿನ ಸೈನ್ಯ, ನಿರರ್ಥಕ ಯುದ್ಧ, ಹೊಟ್ಟೆಪಾಡಿನ ದೇಶಸೇವೆ ಎಲ್ಲವೂ ಬಂದುಹೋಗುತ್ತವೆ. ತನ್ನ ನೋಟು ಕಳೆದ ವಿಷಯ ಸೈನಿಕನೊಳಗೆ ಯಾವ ತಲ್ಲಣವನ್ನೂ ಹುಟ್ಟಿಸುತ್ತಿಲ್ಲ ಎಂದು ರಜಿಯೇ ಅಚ್ಚರಿಗೊಳಗಾಗುತ್ತಾಳೆ. ಗಜಿಬಿಜಿಯ ಸಂತೆಯ ನಡುವೆ ಕಳೆದು ಹೋದ ನೋಟಿಗೆ ಕಾವಲಿಗೆ ಕುಳಿತ ತನ್ನ ಸಂಕಟವನ್ನು ಈ ಸಂತೆಯೇಕೆ ತಿರುಗಿ ನೋಡುತ್ತಿಲ್ಲ ಎಂದುಕೊಳ್ಳುತ್ತಾಳೆ. ಕಳೆದುಕೊಂಡ ಸಂಕಟ ಅವಳೊಬ್ಬಳದ್ದು ಮಾತ್ರವೆಂದು ಸಂತೆ ನಿಮಿಷ ನಿಮಿಷಕ್ಕೂ ತನ್ನಪಾಡಿಗೆ ತಾನು ಚಿತ್ರಗಳನ್ನು ಬದಲಿಸಿಕೊಳ್ಳುತ್ತಿದೆ.

ಕೊನೆಗೆ ರಜಿಯೇಳ ಅಣ್ಣ ಒಂದು ಉಪಾಯದೊಂದಿಗೆ ಬೀದಿಯಲ್ಲಿ ಬೆಲೂನು ಮಾರುವ ಬೀದಿವ್ಯಾಪಾರಿ ಹುಡುಗನಿಂದ ಬೆಲೂನು ಕಟ್ಟಿದ್ದ ಕೋಲೊಂದನ್ನು ಪಡೆದು ಅದರ ತುದಿಗೆ ಚೂರು ಅಂಟನ್ನು ಮೆತ್ತಿ ಚರಂಡಿಯ ಮೇನಿನ ಸರಳುಗಳ ಮೂಲಕ ಕೋಲನ್ನು ಒಳಗೆ ತೂರಿಸಿ ಅಲ್ಲಿ ಬಿದ್ದಿದ್ದ ರಜಿಯೇಳ ನೋಟನ್ನು ಕೋಲಿಗೆ ಅಂಟಿಕೊಳ್ಳುವಂತೆ ಮಾಡಿ ನೋಟನ್ನು ಹೊರತೆಗೆಯುತ್ತಾನೆ. ತೆಹ್ರಾನಿನ ಬಡವರು ಮತ್ತು ಇರಾನಿನ ಕೆಲಸಕ್ಕೆ ಬಾರದ ದೇಶರಕ್ಷಣೆಯ ಆದ್ಯತೆ ಹಾಗೂ ಬೆಳೆದುನಿಂತ ದೊಡ್ಡವರ ಜಗತ್ತನ್ನು ರಜಿಯೇಳ ಕಣ್ಣಿಂದ ಅಬೋಧವಾಗಿ ಪರಾಮರ್ಶಿಸುವ ನಿರ್ದೇಶಕ ಪನಾಹಿ ಕಳೆದು ಹೋದ ರಜಿಯೇಳ ನೋಟಿನ ಜಾಗದಲ್ಲಿ ಬಿಕ್ಕಟ್ಟಿಗೆ ಸಿಲುಕಿದ ಜಾಗತಿಕ ಶಾಂತಿಯನ್ನೂ, ನೋಟನ್ನು ಹೊರತೆಗೆಯುವ ಕೋಲಿಗೆ ಸಿಗಿಸಿದ ಬೆಲೂನಿನೊಳಗಿನ ಬಡ ಬೀದಿ ವ್ಯಾಪಾರಿಯ ಉಸಿರನ್ನು ಪರಿಹಾರವಾಗಿಸಿದ್ದಾನಾ? ಎಂಬ ಅನುಮಾನಗಳು ಥಟ್ಟನೆ ಮೂಡುತ್ತವೆ. ರಜಿಯೇ ಪಾತ್ರಧಾರಿ ಐದಾ ಮಹಮ್ಮದ್‌ಖಾನಿಯೆಂಬ ೭ ವರ್ಷದ ಬಾಲಕಿಯಿಂದ ತೆಗೆದಿರುವ ಅನುಭವ ಅದನ್ನು ಅಭಿನಯವೆಂದು ಹೇಳಲು ಸಾಧ್ಯವೇ ಇಲ್ಲದಷ್ಟು ಸಹಜವಾಗಿದೆ. ನೋಟು ಕಳೆದುಕೊಂಡ ಹುಡುಗಿಯೊಬ್ಬಳ ಹಿಂದೆ ಪನಾಹಿ ಸುಮ್ಮನೆ ಕೆಮೆರಾ ಓಡಾಡಿಸಿದ್ದಾನಾ ಎನ್ನುವಷ್ಟು ಆ ಹುಡುಗಿಯ ಅಭಿನಯ ಅತ್ಯದ್ಭುತ, ಬೆಲೂನಿನ ಕೋಲಿನಿಂದ ನೋಟು ತೆಗೆದ ರಜಿಯೇ ತನ್ನ ಗಾಜಿನ ಬಟ್ಟಲೊಳಗೆ ನಾಲ್ಕು ರೆಕ್ಕೆಯ ಮೀನನ್ನೂ, ಚಿಲ್ಲರೆ ಕಾಸನ್ನು ಬಿಗ್ಗಿಯಾಗಿ ಹಿಡಿದ ಅವಳ ಕೈಯನ್ನೂ ಪನಾಹಿಯ ಅಂತರಂಗದ ಕಣ್ಣು ಚಿತ್ರದ ಕೊನೆಯಲ್ಲಿ ಕೇಂದ್ರೀಕರಿಸುವುದು ಚಪ್ಪಾಳೆಗೆ ತಕ್ಕುನಾದ ಅಂಶ.

ಅಮಾಯಕತೆಯ ಜಗತ್ತಿನಲ್ಲಿಯೂ ಜಾಗತಿಕ ಸಂಕೀರ್ಣ ಸಮಸ್ಯೆಗಳನ್ನು ಚರ್ಚೆಗೊಡ್ಡಬಹುದು ಎಂಬುದನ್ನು ದೊಡ್ಡಮಟ್ಟದಲ್ಲಿ ಈ ಚಿತ್ರದ ಮೂಲಕ ಅರಿತುಕೊಂಡ ಪನಾಹಿ ನಂತರ ನಿರ್ಮಿಸಿದ ನಿರ್ದೇಶಿಸಿದ ಅಷ್ಟೂ ಚಿತ್ರಗಳು ವಿವಾದಾತ್ಮಕ ಚಿತ್ರಗಳೇ. ತಾನಿದ್ದ ದೇಶವನ್ನೇ ಎದುರುಹಾಕಿಕೊಂಡು ಅಂತರರಾಷ್ಟ್ರೀಯ ಚಿತ್ರರಂಗದ ಅಂಗಳದಲ್ಲಿ ಇರಾನಿನ ಸ್ಥಿತ್ಯಂತರಗಳು ಮತ್ತು ಸಾಮಾಜಿಕ ಪಲ್ಲಟಗಳನ್ನು ಆಧರಿಸಿದ ಚಿತ್ರಗಳನ್ನು ಚರ್ಚೆಗೆ ಬಿಟ್ಟು ಇರಾನ್ ಸರ್ಕಾರದಿಂದ ಲೆಕ್ಕವಿಲ್ಲದಷ್ಟು ಸಲ ದಿಗ್ಬಂಧನ, ಪಾಸ್‌ಪೋರ್ಟ್ ರದ್ದು ಮತ್ತು ಪತ್ನಿ-ಮಗಳ ಸಮೇತ ಜೈಲುವಾಸವನ್ನು ಕಂಡ ಅಪರೂಪದ ಚಿತ್ರಜೀವ ಜಾಫರ್ ಪನಾಹಿಯದ್ದು. ಕೆಲ ವರ್ಷಗಳ ಹಿಂದೆ ಇರಾನಿನ ಚುನಾವಣೆಯ ಸಂದರ್ಭದಲ್ಲಿ ನಡೆದ ಸರ್ಕಾರದ ವಿರೋಧಿ ಪ್ರತಿಭಟನಾಕಾರರ ಹತ್ಯೆಯನ್ನು ಖಂಡಿಸಿ ದನಿಯೆತ್ತಿದ್ದ ಪನಾಹಿಯನ್ನು ಅನಾಮತ್ತಾಗಿ ಸರ್ಕಾರದ ವಿರುದ್ಧ ಸಂಚಿನ ಆರೋಪ ಹೊರಿಸಿ ಜೈಲುಪಾಲು ಮಾಡಲಾಗಿತ್ತು. ದೇಶದ ಸರ್ಕಾರವನ್ನೇ ಎದುರು ಹಾಕಿಕೊಂಡಿರುವ ಪನಾಹಿಯ ಚಿತ್ರಜಗತ್ತಿನ ಜೊತೆಗಿನ ಒಡನಾಟವೇ ಸರ್ಕಾರದ ಕೆಂಗಣ್ಣಿನಿಂದಾಗಿ ಅಂತ್ಯಗೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ೪೯ರ ಹರೆಯದ ಬಂಡುಕೋರ ಚಿತ್ರ ನಿರ್ದೇಶಕ ಜಾಫರ್ ಪನಾಹಿ ಸದ್ಯಕ್ಕೆ ಇರಾನ್ ದೇಶವನ್ನು ತ್ಯಜಿಸುವ ನಿರ್ಧಾರದಲ್ಲಿದ್ದಾನೆ.



Friday, 4 May 2012

ಇನ್ ಟು ದಿ ವೈಲ್ಡ್ ಸಿನೆಮಾ


ಟಿ.ಕೆ. ದಯಾನಂದ
ಸೌಜನ್ಯ:  ಕೆಂಡಸಂಪಿಗೆ
ಇನ್ ಟು ದಿ ವೈಲ್ಡ್ ಚಿತ್ರದ ಪೋಸ್ಟರ್

ನನಗೆ ಇರುವ ಲೆಕ್ಕವಿಲ್ಲದಷ್ಟು ತಿಕ್ಕಲೋ ತಿಕ್ಕಲರ ಗೆಳೆಯ ಗುಂಪಿನೊಳಗೆ ಹೀಗೇ ಒಬ್ಬ ಗೆಳೆಯ, ಆಶಯಗಳು, ಆಲೋಚನೆಗಳು, ಬದುಕುವಿಕೆಗಳಲ್ಲಿ ಯದ್ವಾತದ್ವಾ ಸಾಮ್ಯತೆಗಳಿರುವ ಒಬ್ಬ ಗೆಳೆಯ, ಹೆಸರನ್ನು ಪಕ್ಕಕ್ಕಿಡೋಣ, ಆತ ನಾಡಿನ ಪ್ರಖ್ಯಾತ ದಿನಪತ್ರಿಕೆಯೊಂದರಲ್ಲಿ ಸುದ್ದಿ ವರದಿಗಾರ. ತಲೆಯ ತುಂಬ ಸಮಾನತೆಯ ಮೊಟ್ಟೆಯನ್ನು ಕಾವಿಗೆ ಕೂರಿಸಿಕೊಂಡ ಕಚ್ಛಾ ಕನಸುಗಳ ಗೆಳೆಯ. ಈಗಿಂದೀಗಲೇ ಈ ಸೆಕೆಂಡಿಗೇ ಕೈಗೆ ನಿಲುಕುವ ಏನಾದರೂ ಸರಿಯೇ ಅಡ್ಡಡ್ಡ ನುಂಗಿ ಮುಗಿಸಿಬಿಡಬೇಕೆನ್ನಿಸುವಷ್ಟು ಕುತೂಹಲಕಾರಿ ಮನಸ್ಸಿನವ.. ಫೋನು ಮಾಡಿದಾಗಲೆಲ್ಲ ಇದ್ಯಾಕೋ ಯಾವುದೂ ಸರಿಯಿಲ್ಲ ಮಾರಾಯ ಎಲ್ಲಿಗಾದ್ರೂ ಹೋಗ್ತೀನಿ ನಾನು.. ಹೋಗಿ ಒಂದಷ್ಟು ತಿಂಗಳು ನನ್ನ ಹೆಸರೇ ಮರೆತು ಹೋಗುವಷ್ಟು ಏಕಾಂತದಲ್ಲಿ ಓಡಾಡಿಕೊಂಡು ಹೊಸ ಹೊಸತೇನಾದರೂ ಒಳಗೆ ಬಸಿದುಕೊಂಡು ಬರುತ್ತೇನೆ, ಯಾವು ಯಾವುದನ್ನು ಇದು ಇಂಥದು ಇದು ಅಂಥದು ಅಂತ ಜಗತ್ತು ಹೆಸರಿಟ್ಟು ಕರೆಯುತ್ತದೆಯೋ ಅಂತಹ ವಸ್ತುಗಳ ಜಗತ್ತಿನಾಚೆಗೆ ಹೆಸರಿಲ್ಲದವುಗಳನ್ನು ಹುಡುಕಿಕೊಂಡು ಬರುತ್ತೇನೆ, ಅನ್ನುತ್ತಿದ್ದ. ಬೇಡ ಮಾರಾಯ ಹೇಳೋ ಮಾತು ಕೇಳು ಅಂತ ವಿನಂತಿಸಿ ಆಯಿತು, ಸಮಾಧಾನಿಸಲು ಯತ್ನಿಸಿಯೂ ಆಯಿತು, ಗದರಿದ್ದೂ ಆಯಿತು. ಫೋನು ಮಾಡಿದಾಗಲೆಲ್ಲ ಅದೂ ಇದೂ ಮಾತನಾಡುತ್ತ ಕಟ್ಟಕಡೆಗೆ ನಾನು ಕೆಲಸ ಬಿಡ್ತೇನೆ ಗೊತ್ತುಗುರಿಯಿಲ್ಲದೆ ಅಲೆಯಲು ಹೋಗ್ತೇನೆ ಅಂತ ಮಾತುಕತೆ ಕೊನೆಯಾಗುತ್ತಿತ್ತು. ನೆನ್ನೆಯೇಕೋ ಇವನು ಇವಾಗಲೋ ಅವಾಗಲೋ ಫೋನಿಟ್ಟ ಕೂಡಲೇ ಹೋಗ್ತಾನೆ ದಿಕ್ಕುದೆಸೆಯಿಲ್ಲದ ಪರದೇಸಿ ಅಲೆದಾಟಕ್ಕೆ ಅನ್ನುವುದು ಖಚಿತವಾಯಿತು. ಅದೇ ಸಮಯಕ್ಕೆ ಇವನದ್ದೇ ಮನಸ್ಥಿತಿಯ ಇನ್ ಟು ದಿ ವೈಲ್ಡ್ ಎಂಬ ಅದ್ಭುತ ಕೃತಿ ಮತ್ತು ಸಿನಿಮಾವೂ ಆದ ವಿಶಿಷ್ಟ ಅಲೆಮಾರಿ ಮೆಕಾಂಡ್ಲೆಸನೂ ಆಕಳಿಸಿಕೊಂಡೆದ್ದು ನಿಂತು ನೆನಪಾಗತೊಡಗಿದ.    
ಕ್ರಿಸ್ಟೋಫರ್ ಜಾನ್ಸನ್ ಮೆಕಾಂಡ್ಲೆಸ್ ಸೂಪರ್‌ಟಾಂಪ್ (ಮಹಾ ಅಲೆಮಾರಿ) ಎಂಬ ಅಡ್ಡಹೆಸರನ್ನು ತನಗೆ ತಾನೇ ಇಟ್ಟುಕೊಂಡು ಲಕ್ಷಗಟ್ಟಲೆ ಡಾಲರ್ ಸಂಬಳವನ್ನು ಎಡಗಾಲಲ್ಲಿ ಒದ್ದೆದ್ದು ಅಲಾಸ್ಕಾಗೆ ನಡೆದುಕೊಂಡೇ ಹೋಗ್ತೇನೆ ಎಂದು ನಡೆಯುತ್ತಲೇ ಬದುಕಿದವ. ಅಲಾಸ್ಕಾಗೆ ಹೋಗುವ ನಡಿಗೆಯ ದಾರಿಯಲ್ಲಿ ಸಿಗುವ ಮಣಗಟ್ಟಲೆ ಏಕಾಂತವನ್ನಷ್ಟೇ ನಂಬಿಕೊಂಡು ನಡೆದ ಮೆಕಾಂಡ್ಲೆಸ್, ಇರುವಷ್ಟು ದಿನ ಸರಳವಾಗಿರು, ನಿನ್ನ ಸುತ್ತಮುತ್ತ ಯಾವ ಮನುಷ್ಯ ನಿರ್ಮಿತ ಸ್ಥಾವರಗಳನ್ನು ಕಟ್ಟಿಕೊಳ್ಳಬೇಡ ಎಂಬ ತನ್ನೊಳಗಿನ ಕೂಗಾಟಕ್ಕೆ ಕಿವಿಯನ್ನು ಅಡವಿಟ್ಟವ, ಎಲ್ಲವನ್ನೂ ಬಿಟ್ಟು ಮತ್ತೇನನ್ನೋ ಹುಡುಕುತ್ತ ನಡೆದ ಮೆಕಾಂಡ್ಲೆಸನ ಶವ ಆತನೆ ಬೆತ್ತಲೆಯಾನ ಶುರುಗೊಂಡ ೪ ತಿಂಗಳ ನಂತರ ಒಂದು ಶಾಲಾಮಕ್ಕಳ ಕೆಟ್ಟುನಿಂತ ವಾಹನದೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗುತ್ತದೆ. ಸಾಯುವಾಗ ಆತ ತನಗಿದ್ದ ದೇಹದಾರ್ಡತ್ಯೆಯೆಲ್ಲವನ್ನೂ ಬರೋಬ್ಬರಿ ಕಳೆದುಕೊಂಡು ೩೦ ಕೇಜಿಯಷ್ಟೇ ಆಗಿ ಉಳಿದುಬಿಟ್ಟಿದ್ದ. ಆತನ ಶವದೊಟ್ಟಿಗೆ ಆತನ ಡೈರಿಯೂ ಸಿಕ್ಕಿತು. ಸಾಯುವ ಹಿಂದಿನ ಸೆಕೆಂಡಿನವರೆಗೂ ಮೆಕಾಂಡ್ಲೆಸ್ ತನ್ನ ಡೈರಿಯೊಳಗೆ ತನಗಾದ ಸಂಪೂರ್ಣ ಅನುಭವಗಳೆಲ್ಲವನ್ನೂ ದಾಖಲಿಸಿಯೇ ಸೃಷ್ಟಿಗೆ ಮಾರಿಕೊಂಡಿದ್ದ. ಅದನ್ನು ಆಧರಿಸಿ ಜಾನ್ ಕ್ರಾಕರ್ ಎಂಬ ಅಮೆರಿಕನ್ ಲೇಖಕ ೧೯೯೬ರಲ್ಲಿ ಬರೆದ ಇನ್ ಟು ದಿ ವೈಲ್ಡ್ ಕೃತಿಯು ಬೆಸ್ಟ್ ಸೆಲ್ಲರ್ ಆಫ್ ದಿ ಇಯರ್ ಮುಕುಟಕ್ಕೆ ತಲೆ ಕೊಟ್ಟಿತಷ್ಟೇ ಅಲ್ಲ ಮೆಕಾಂಡ್ಲೆಸ್ ಎಂಬ ಮಹಾ ಅಲೆಮಾರಿಯ ಬಗ್ಗೆ ಅರ್ಧಜಗತ್ತು ಗಕ್ಕನೆ ನಿಂತು ಹಿಂತಿರುಗಿ ನೋಡುವಂತಾಗಿತ್ತು. ಇಷ್ಟಕ್ಕೂ ಮೆಕಾಂಡ್ಲೆಸನ ತಲೆಯೊಳಗೆ ಅಲಾಸ್ಕಾ ಹಿಮಗಡ್ಡೆಗಳ ಮಡುವಿನೊಳಗೆ ಖಾಲಿಜೇಬು ಹೊತ್ತುಕೊಂಡು ಬರಿಗಾಲಲ್ಲೇ ಓಡಬೇಕು ಅಂತ ಅನ್ನಿಸಿತ್ತಾದರೂ ಏಕೆ? ಆತನೇಕೆ ಆ ಮಟ್ಟಿಗಿನ ಅರಾಜಕತೆ ಅಥವಾ ಹೊಸತಿನ ಹುಡುಕಾಟಕ್ಕೆ ಸಿಲುಕಿದ್ದ, ಅವನು ಹುಡುಕಿದ್ದಾದರೂ ಏನು ಕಡೆಗೆ ಪಡಕೊಂಡಿದ್ದು ಏನು ಎಂಬುದನ್ನು ನೋಡಬೇಕೆಂದರೆ ಮೆಕಾಂಡ್ಲೆಸನ  ಹೆಜ್ಜೆಗುರುತುಗಳ ಒಳಗೆ ನಮ್ಮ ಬೆತ್ತಲೆ ಪಾದಗಳೂ ಇಳಿಯಬೇಕು.
 ಕೆಲಿಫೋರ್ನಿಯಾದ ಎಲ್ ಸೆಗುಂಡೋ ಎಂಬಲ್ಲಿ ಏರ್ ಕ್ರಾಫ್ಟ್ ಕಂಪೆನಿಯೊಂದರ ಸೆಕ್ರೆಟರಿ ತಾಯಿಗೂ ಆಂಟೆನಾ ತಜ್ಞ ತಂದೆಗೂ ಜನಿಸಿದ ಮೆಕಾಂಡ್ಲೆಸ್ ತನ್ನ ಕಣ್ಣೆದುರೇ ಕಿತ್ತಾಡಿಕೊಂಡು ಬೇರೆಯಾದ ಪೋಷಕರನ್ನು ಬಹಳ ಹತ್ತಿರದಿಂದ ನೋಡಿದವ. ಶಾಲೆಯಲ್ಲಿದ್ದಾಗಲೂ ತನ್ನದೇ ರೆಗ್ಯುಲರ್ ಅಲ್ಲದ ಸಿದ್ಧಾಂತದ ಪ್ರಭಾವಳಿಗೆ ಸಿಲುಕಿದ್ದ. ಶಾಲೆಯ ಗುಡ್ಡಗಾಡು ಓಟವೊಂದರ ತಂಡದ ನಾಯಕನಾಗಿ ತನ್ನ ತಂಡದ ಸದಸ್ಯರಿಗೆ ಜಗತ್ತಿನ ಎಲ್ಲ ಕೆಡುಕುಗಳೂ ನಿಮ್ಮ ಬೆನ್ನು ಬಿದ್ದಿವೆ ಎಂದು ಭಾವಿಸಿಕೊಂಡು ಅದರಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದೇವೆಂದು ಭಾವಿಸಿಕೊಂಡು ಓಡಿ ಎಂದು ಹುರುಪು ತುಂಬುತ್ತಿದ್ದ. ಕಾಲೇಜು ಹಂತಕ್ಕೆ ಬರುವುದರೊಳಗಾಗಿ ತಮ್ಮ ಗೊತ್ತುಗುರಿಯಿಲ್ಲದ ಅಲೆದಾಟಗಳ ಮೂಲಕ ಜಗತ್ತಿನ ಕೃತಕ ಭೌತಿಕ ಪರಿಸರದೊಳಗಿರುವುದು ಏನೇನೂ ಅಲ್ಲ, ಅದರ ತುಂಬ ಮನುಷ್ಯ ನಿರ್ಮಿತ ಶೂನ್ಯವಷ್ಟೇ ತುಂಬಿಕೊಂಡಿದೆ ಎಂಬ ನಿರ್ಧಾರಕ್ಕೆ ತಲುಪಿಯಾಗಿತ್ತು. ೧೯೯೦ರಲ್ಲಿ ಪದವಿ ಮುಗಿಸುವ ಹೊತ್ತಿಗೆ ಮೆಕಾಂಡ್ಲೆಸ್ ಕಟ್ಟಲ್ಪಟ್ಟವುಗಳ ಬಗ್ಗೆ, ಸಮುದಾಯದೊಳಗಿನ ಅನಗತ್ಯ ಶಿಸ್ತುಗಳ ಬಗ್ಗೆ, ಕೆಲಸ, ಉದ್ಯೋಗ, ಕಛೇರಿ, ಮನೆ, ಕುಟುಂಬ, ಸಂಬಳ, ಪ್ರವಾಸ, ಗಂಡಹೆಂಡಿರ ಗಂಟುಪಾಡು ಸಂಸಾರ, ಸಮಾಜದ ಕಟ್ಟುಪಾಡುಗಳು, ರಿವಾಜುರೀತಿಗಳೆಲ್ಲವುಗಳಿಂದ ರೋಸೆದ್ದು ಹೋದಂತೆ ಇವ್ಯಾವುದೂ ಬೇಡವೆಂದು ಒಂದು ದಿನ ಅಲಾಸ್ಕಾ ಹಿಮಪ್ರದೇಶಕ್ಕೆ ನಡೆದುಹೋಗುತ್ತೇನೆಂದು ಎಲ್ಲವನ್ನೂ ಬಿಟ್ಟು ನಡೆಯತೊಡಗುತ್ತಾನೆ.
ಜೇಬಿನೊಳಗಿನ ದುಡ್ಡು ಮತ್ತು ಎಟಿಎಂ ಕಾರ್ಡುಗಳೂ ಸಹ ತನ್ನನ್ನು ನಿಯಂತ್ರಿಸಲು ಯತ್ನಿಸುತ್ತಿವೆ ಎಂದು ಭಯಗೊಳ್ಳುವ ಮೆಕಾಂಡ್ಲೆಸ್ ಅವೆರಡನ್ನೂ ಹರಿದು ಬೆಂಕಿಯಿಟ್ಟು ಬೆತ್ತಲೆ ಹೆಜ್ಜೆಗಳಿತ್ತ ಅಲಾಸ್ಕಾ ದಾರಿಯಲ್ಲಿನ ದುರ್ಗಮತೆಯತ್ತ ಪ್ರಕೃತಿಯನ್ನಷ್ಟೇ ನಂಬಿಕೊಂಡು ನಡೆಯಲು ಶುರುವಿಡುತ್ತಾನೆ.. ದಿಕ್ಕು ಸೂಚಿಸುವ ದಿಕ್ಸೂಚಿಯನ್ನೂ ಮುಟ್ಟದೆ ದೂರವಿಡುವ ಆತ ಅಲಾಸ್ಕಾದ ದಾರಿಯನ್ನೂ ತಾನೇ ಕಂಡುಕೊಳ್ಳುತ್ತ ನಡೆಯುತ್ತ ನಡೆಯುತ್ತ ತನ್ನಂತಹವರೇ ಬಹಳಷ್ಟು ಜನರನ್ನು ಸಂಧಿಸುತ್ತ ಅವರೊಡನೆ ಹರಟುತ್ತ, ಹುಡುಗಿಯೊಬ್ಬಳೊಟ್ಟಿಗೆ ಸೃಷ್ಟಿಯ ಪರಮೋದ್ದೇಶವಾದ ದೈಹಿಕಸಂಗಮಕ್ಕೂ ಒಳಗಾಗಿ, ಕಟ್ಟುಪಾಡುಗಳನ್ನು ಬೇಡುವ ಅವಳ ಪ್ರೇಮವನ್ನೂ ತ್ಯಜಿಸಿ, ನೀರು ಕಂಡಲ್ಲಿ ಕುಡಿಯುತ್ತ ಕೈಗೆ ಸಿಕ್ಕಿದ್ದನ್ನು ತಿಂದುಕೊಂಡು ಕೊನೆಗೆ ಡೆನಾಲಿ ನ್ಯಾಷನಲ್ ಪಾರ್ಕ್ ಬಳಿ ಕೆಟ್ಟು ನಿಂತಿದ್ದ ಹಳೆಯ ಶಾಲಾ ವಾಹನದೊಳಗೆ ತನ್ನ ಗುಡಾರವನ್ನು ಕಂಡುಕೊಳ್ಳುತ್ತಾನೆ. ಹತ್ತು ಪೌಂಡ್ ನಷ್ಟಿರುವ ಅಕ್ಕಿ, ಅಲಾಸ್ಕಾ ಸುತ್ತಮುತ್ತಲಿನ ಮರಗಿಡಗಳ ಕುರಿತ ಒಂದು ಮಾರ್ಗದರ್ಶಿ ಪುಸ್ತಕ ಮತ್ತು ಒಂದು ಬಂದೂಕಷ್ಟೇ ಆತನ ಒಂಟಿ ಸಂಸಾರಕ್ಕೆ ಪ್ರವೇಶ ಪಡೆದ ಅಮೂಲ್ಯ ವಸ್ತುಗಳಾಗಿರುತ್ತವೆ. ಕಣ್ಣಿಗೆ ಕಂಡ ಹಕ್ಕುಗಳನ್ನೂ ಸಣ್ಣಪುಟ್ಟ ಪ್ರಾಣಿಗಳನ್ನೂ ಬಂದೂಕಿನಿಂದ ಕೊಂದು ತನ್ನ ಆಹಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುವ ಮೆಕಾಂಡ್ಲೆಸ್ ಒಮ್ಮೆ ಹಿಮಗಾಡಿನಲ್ಲಿ ಸಾಮಾನ್ಯವಾಗಿರುವ ಭಾರೀಗಾತ್ರದ ಹಿಮಗಡವೆಯೊಂದನ್ನು ಹೊಡೆದುರುಳಿಸುತ್ತಾನೆ, ಆದರೆ ಅದರ ಮಾಂಸವನ್ನು ಮುಂದಿನ ದಿನಕ್ಕಾಗಿ ಕಾಪಿಡಲು ಯತ್ನಿಸಿ ಸೋಲುವ ಆತ ಇಲ್ಲಿಯೂ ತನಗೆ ನಾಳೆಯ ಆಸೆಗಳೇಕೆ ಹುಟ್ಟುತ್ತಿವೆ ಎಂದು ಅಚ್ಚರಿಗೀಡಾಗುತ್ತಾನೆ.
ತನ್ನ ಆಹಾರದ ಅವಶ್ಯಕತೆಗಷ್ಟೇ ಮಾಂಸ ಕೊಡುವ ಸಣ್ಣಪುಟ್ಟ ಪ್ರಾಣಿಗಳನ್ನು ಕೊಂದು ಬೇಯಿಸಿ ತಿನ್ನುತ್ತ ಅದೇ ಕೆಟ್ಟುನಿಂತ ಶಾಲಾ ಬಸ್ಸಿನೊಳಗೆ ೩ ತಿಂಗಳು ಕಳೆದುಬಿಡುತ್ತಾನೆ. ತನ್ನ ಮಲಗುವ ಚೀಲದೊಳಗೆ ತೂರಿಕೊಂಡು ಒಬ್ಬೊಬ್ಬನೇ ತಾನು ಕಂಡನುಭವಿಸಿದ ಪ್ರಕೃತಿಯ ವಿಸ್ಮಯಗಳನ್ನು ಧ್ಯಾನಿಸುತ್ತ ಒಬ್ಬನೇ ಬದುಕಿಬಿಡುವ ಮೆಕಾಂಡ್ಲೆಸ್ ಒಂದು ದಿನ ಕುತೂಹಲಕ್ಕೆಂದು ತಿಂದ ಹೆಡಿಸಾರಂ ಮೆಕೆಂಝೀ ಕಾಯಿಯ ಕಾರಣಕ್ಕೆ ಅಸ್ವಸ್ಥತೆಗೆ ಬೀಳುತ್ತಾನೆ. ಮೊದಲಿಗೆ ಇದೇಕೆಂದು ಗೊತ್ತಾಗದೆ ತನ್ನ ಬಳಿಯಿದ್ದ ಮರಗಿಡ, ಸಸಿಬಳ್ಳಿಗಳ ಪುಸ್ತಕವನ್ನು ಹುಡುಕಿದಾಗ ಮೆಕೆಂಝೀ ವಿಷಕಾರಕ ಅಂಶವುಳ್ಳ ಕಾಯಿಯೆಂಬುದು ತಿಳಿಯುತ್ತದೆ. ಮೇಲೆ ಎದ್ದೇಳಾಗದಷ್ಟು ನಿತ್ರಾಣನಾಗುವ ಮೆಕಾಂಡ್ಲೆಸ್ ಆ ಸ್ಥಿತಿಯಲ್ಲೂ ಡೈರಿ ಬರೆಯುವುದನ್ನು ನಿಲ್ಲಿಸುವುದಿಲ್ಲ. ಬರೆದೂ ಬರೆದೂ ಬರೆದೂ.. ಒಂದು ದಿನ ಮೆಕಾಂಡ್ಲೆಸನ ಸಾವೂ ಬಂದು ಅವನೆದೆಯ ಮೇಲೆ ಕುಳಿತು ಆತನ ಜೀವ ತೆಗೆಯುತ್ತದೆ. ಪ್ರೀತಿಗೂ ಮೊದಲು, ದುಡ್ಡು ನಂಬಿಕೆ ಖ್ಯಾತಿ ರಮ್ಯ ರೋಚಕತೆಗೂ ಮೊದಲು.. ನನಗೆ ಸತ್ಯವನ್ನು ಕಂಡುಕೊಳ್ಳಬೇಕಿದೆಯೆಂದು ಅಲಾಸ್ಕಾದೆಡೆಗೆ ನಡೆದ ಮೆಕಾಂಡ್ಲೆಸನ ಹೆಣವನ್ನು ಎರಡು ವಾರಗಳವರೆಗೆ ಜಗತ್ತಿನ ಯಾವ ಜೀವವೂ ಲೆಕ್ಕಕ್ಕೆ ತಂದುಕೊಂಡಿರಲಿಲ್ಲ.
ಮನುಷ್ಯ ನಿರ್ಮಿತ ಸಮಾಜ ಮತ್ತು ಸಮಾಜದೊಳಗಿನ ಇಂತಿಷ್ಟೇ ಎಂದು ಗಡಿಗಳನ್ನು ಹೇರುವ ವ್ಯವಸ್ಥೆಯ ವಿರುದ್ದ ಅನಾರ್ಕೋ ಪ್ರಿಮಿಟಿವಿಸಂ ಬಗೆಯ ಧೋರಣೆಯ ಮೂಲಕ ತನ್ನದೇ ಬದುಕುವಿಕೆಯನ್ನು ಕಟ್ಟಹೊರಟು ಕೊನೆಗೆ ಯಾವುದನ್ನು ಹುಡುಕುತ್ತ ಹೊರಟನೋ ಅದರಿಂದಲೇ ಕೊಲೆಯಾದ ಮೆಕಾಂಡ್ಲೆಸನ ಅನುಭವ ಗಾಥೆಗಳನ್ನು ಆಧರಿಸಿದ ಇನ್ ಟು ದಿ ವೈಲ್ಡ್ ಸಿನಿಮಾವನ್ನು ನಿರ್ದೇಶಿಸಿದ್ದು ಖ್ಯಾತ ನಟ ಸೀನ್‌ಪೆನ್. ಎರಡನೆಯ ಮಹಾಯುದ್ಧದ ಕಾಲಘಟ್ಟದಲ್ಲಿ ಸೈನಿಕರಾಗಿ ಬೇರೆ ಬೇರೆ ದೇಶಗಳ ಸೈನಿಕರನ್ನು ತಮ್ಮದಲ್ಲದ ಕಾರಣಗಳಿಗಾಗಿ ಕೊಂದುಹಾಕಿದ ಪಾಪಪ್ರಜ್ಞೆಯೊಳಗೆ ಹುಟ್ಟಿದ ವಿಶಿಷ್ಟ ರೀತಿಯ ಬದುಕುವಿಕೆಯೊಳಗೆ ಜಾರಿಕೊಂಡ ಹಿಪ್ಪಿಗಳಿಗೂ, ಸಮಾಜ ಮತ್ತದರ ನಾಜೂಕಿನ ಪೊರೆ ಹೊತ್ತ ಕ್ರೂರ ಮನಸ್ಥಿತಿಗಳ ವಿರುದ್ಧ ಪರ್ಯಾಯ ಬದುಕುವಿಕೆ ಶೈಲಿಯಲ್ಲಿಯೇ ಬಂಡೆದ್ದ ಮೆಕಾಂಡ್ಲೆಸನ ದುರಂತ ಸಾವಿಗೂ ಸಾಮ್ಯತೆಗಳಿವೆ. ಕಟ್ಟಿದ್ದನ್ನೇ ಬದುಕು, ಗೋಡೆಗಳನ್ನು ದಾಟದಿರು, ಆಲೋಚನೆಯೂ ಸೇರಿದಂತೆ ಎಲ್ಲವಕ್ಕೂ ಮಿತಿಯ ಗೆರೆಯನ್ನೆಳೆದುಕೊಂಡು ಬದುಕು ಎಂಬ ಶಾಸನಗಳನ್ನು ಹೊರಡಿಸುವ ಸಮಾಜ ಮತ್ತು ಅದರ ಹಿಂದಿನ ಶಕ್ತಿಗಳ ವಿರುದ್ಧ ಎಲ್ಲರೊಳಗೂ ಒಂದು ಅಸಮಾಧಾನದ ಹೊಗೆ ಆಡುತ್ತಲೇ ಇರುತ್ತದೆ. ಆದರೆ ಆ ಹೊಗೆಯನ್ನೂದಿ ಬೆಂಕಿ ಮಾಡಿ ಆ ಬೆಂಕಿಯಲ್ಲಿ ನಿರ್ಬಂಧಗಳೆಲ್ಲವನ್ನೂ ಸುಟ್ಟು ಹೊಸತಾದ ಸ್ವಚ್ಛಬೂದಿಯನ್ನು ಸೃಜಿಸುವ ಮನಸ್ಥಿತಿಗೆ ನಾವ್ಯಾರೂ ತಲೆಕೊಡಲು ಹೋಗುವುದಿಲ್ಲ. ಇಡೀ ಇನ್ ಟು ದಿ ವೈಲ್ಡ್ ಚಿತ್ರವು ಮೆಕಾಂಡ್ಲೆಸನ ಹೊಸತರ ಹುಡುಕಾಟ ಮತ್ತು ಅಸ್ತಿತ್ವದಲ್ಲಿರುವ ಮತ್ತು ಕೈಗಳಿಗೆ ಹಗ್ಗ ಬಿಗಿಯುವ ಆಧುನಿಕ ಭೌತಿಕತೆ ಮತ್ತು ಕನ್‌ಸ್ಯೂಮರಿಸಂ ಆಧರಿಸಿದ ಶಿಸ್ತಿನ ಬದುಕನ್ನು ತಿರಸ್ಕರಿಸುವ ಆತನ ಅಸಹನೆಯನ್ನು ಕಟ್ಟಿಕೊಡುವ ಅಪರೂಪದ ಚಿತ್ರ.
ಯಾವುದೆಲ್ಲವನ್ನೂ ತ್ಯಜಿಸಿ ಮತ್ತೇನನ್ನೋ ಹುಡುಕುತ್ತ ಹೋಗುವ ಮೆಕಾಂಡ್ಲೆಸನ ಬೆತ್ತಲೆಕಾಲಿನ ನಡಿಗೆ ತಾನು ಹುಡುಕಿ ಹೊರಟದ್ದರ ಮೂಲಕವೇ ಜೀವಸಮೇತ ಅವಸಾನಗೊಳ್ಳುವ ಬಗೆಯೂ ದುರಂತವೇ. ಮನುಷ್ಯನ ಬದುಕು ಪೂರ್ವ ನಿರ್ಮಿತ ಕಾರಣಗಳಿಂದ ಆಳಲ್ಪಡುತ್ತಿದೆ ಎಂದಾದಲ್ಲಿ ಬದುಕಿನ ಎಲ್ಲ ಸಾಧ್ಯತೆಗಳೂ ಅಲ್ಲಿಗೆ ನಾಶಗೊಳ್ಳುತ್ತವೆ ಎಂಬುದನ್ನು ನಂಬಿದ್ದ ಮೆಕಾಂಡ್ಲೆಸನ ಪಾತ್ರದೊಳಗೆ ನಟ ಎಮಿಲಿ ಹರ್ಶ್ ಸಲೀಸಾಗಿ ಲೀನವಾಗಿದ್ದಾನೆ. ಆತನ ಕೆಲವು ದಿನಗಳ ಪ್ರೇಮದೊಳಗೆ ಸಿಲುಕುವ ಹುಡುಗಿಯಾಗಿ ಟ್ವಿಲೈಟ್ ಸಾಗಾ ಸರಣಿ ಚಿತ್ರಗಳ ಮೂಲಕ ಮನೆಮಾತಾದ ನಾಯಕಿ ಬೆಲ್ಲಾಸ್ವಾನ್ ನಟಿಸಿದ್ದಾಳೆ. ಜಾನ್ ಕ್ರಾಕರನ ಕೃತಿ ಓದುವಾಗಿನ ಆಪ್ತತೆ ಮತ್ತು ಮೆಕಾಂಡ್ಲೆಸನ ಸಾಮೀಪ್ಯ ಸಿನಿಮಾದೊಳಗೆ ಅಷ್ಟಾಗಿ ತೆರೆದುಕೊಳ್ಳದಿರುವುದು ಕೃತಿ ಮತ್ತು ದೃಶ್ಯ ಮಾಧ್ಯಮದ ಎಂದಿನ ತಿಕ್ಕಾಟ. ನಮ್ಮೊಳಗಿನ ಕೊಲೆಯಾದ ಅಲೆಮಾರಿ ಮನೋಸ್ಥಿತಿಗೆ ಕೈಕಾಲು ಮೊಳೆತಂತೆ ಬದುಕಿದ್ದ ಜಾನ್ ಕ್ರಿಸ್ಟೋಫರ್ ಮೆಕಾಂಡ್ಲೆಸ್ ಹಲವರಿಗೆ ಮಾದರಿಯೂ, ಶತ್ರುವೂ ಆಗಿ ಇನ್ನಾದರೂ ಕಾಡುವಷ್ಟು ತನಗೆಂದೇ ಬದುಕಿದ್ದು ಅದು ಕೃತಿಯಾಗಿ, ಸಿನಿಮಾರೂಪ ತಳೆದು ಕೋಟ್ಯಂತರ ಜನರನ್ನು ತಲುಪಿದ್ದು ಮತ್ತದೇ ಮೆಕಾಂಡ್ಲೆಸ್ ಪ್ರತಿಭಟಿಸುತ್ತಿದ್ದ ಗ್ರಾಹಕ ಸಂಸ್ಕೃತಿ ಮತ್ತು ಕಟ್ಟಲ್ಪಟ್ಟ ಸಮುದಾಯಿಕ ಸಂರಚನೆಗಳ ಮೂಲಕವೇ ಎಂಬುದು ಅನಿವಾರ್ಯವಾಗಿ ಒಪ್ಪಬೇಕಾದ ಸಂಗತಿ.
ಚಿತ್ರನಿರ್ದೇಶಕ ಸೀನ್ ಪೆನ್
ಈಗ ಗೆಳೆಯನ ವಿಷಯಕ್ಕೆ ಬರೋಣ. ಕಾಲಿಗೆ ಟೈರು ಕಟ್ಟಿಕೊಂಡು ಇಳಿಜಾರು ಕಂಡ ಕಡೆಯೆಲ್ಲ ಜಾರಲಿಕ್ಕೆ ಹೊರಟಿರುವ ಗೆಳೆಯನ ಹೊಸತನದ ಹುಡುಕುವಿಕೆಗೆ ಮತ್ತು ಅನೂಹ್ಯತೆಗಳನ್ನು ತನ್ನನುಭವದ ಕುಡಿಕೆಕೊಳಗೆ ಬಸಿದುಕೊಳ್ಳಲು ಇರುವುದೆಲ್ಲವನ್ನೂ ಬಿಟ್ಟು ಹೊರಟಿರುವ ಗೆಳೆಯನಿಗೆ ಅಲೆಮಾರಿ ಮೆಕಾಂಡ್ಲೆಸನ ಮನಸ್ಥಿತಿ ವರ್ಗಾವಣೆಗೊಂಡಿರಬಹುದೇ? ಇದು ಇಷ್ಟೇ ಎಂದು ಹೇಳಿ ಕೊಟ್ಟಿರುವ ಜಗತ್ತಿನಲ್ಲಿ ನಾವುಗಳು ಕೈಕಾಲು ನಾಲಿಗೆ ತುಟಿ ಎದೆ ಮನಸ್ಸುಗಳೆಲ್ಲವನ್ನೂ ಬಿಗಿಯಾಗಿ ಕಟ್ಟಿಹಾಕಿಕೊಂಡು ಕುಳಿತಿರುವಾಗ ಈ ಗೆಳೆಯನೊಬ್ಬನಾದರೂ ಅದರಿಂದ ಬಚಾವಾಗಿ ಒಂದಷ್ಟು ದಿನ ಬದುಕಿಕೊಂಡು ಬರುವುದಾದರೆ ಯಾರಿಗೇನೂ ನಷ್ಟವಿಲ್ಲವಲ್ಲ. ಗೆಳೆಯನ ಟೈರು ಕಟ್ಟಿಕೊಂಡ ಕಾಲಿನೆದುರು ಏರುದಿಬ್ಬಗಳು ಎದುರಾಗದಿರಲಿ, ಬೆತ್ತಲೆಹೆಜ್ಜೆಗಳ ಯಾನದ ಯಾವತ್ತಾದರೊಂದು ದಿನ ಮೈಮುರಿದು ಎದ್ದು ನಿಂತ ಹಸಿವಿನ ಸಮಯದಲ್ಲಿ ಅವನಿಗೆ ಹತ್ತಿರದಲ್ಲೆಲ್ಲೂ ಹೆಡಿಸಾರಂ ಮೆಕೆಂಝೀ ಜಾತಿಯ ಮರದ ಕಾಯಿಗಳ್ಯಾವುವೂ ಸಿಗದಿರಲಿ.

Thursday, 3 May 2012

..ಒಂದು ಅಗಲಿಕೆಯ ಆಜುಬಾಜು..

ಸೌಜನ್ಯ: ಚರಿತಾ ಮೈಸೂರು ಅವರ ಗೋರಂಟಿ ಬ್ಲಾಗು 


ತುಂಬ ದಿನಗಳ ನಂತರ ನನ್ನನ್ನು ಗಾಢವಾಗಿ ಆವರಿಕೊಂಡ ಸಿನಿಮಾ ಇದು. ಇದೇ ನನಗಾಗಿ ಕಾಯುತ್ತಿತ್ತೊ ಅಥವಾ ನಾನೇ ಇಂಥ ಭಾವುಕತೆಗಾಗಿ ಕಾದಿದ್ದೆನೊ ಗೊತ್ತಿಲ್ಲ! ಆ ಪಾತ್ರಗಳ ಜೊತೆಗೆ ನಾನೂ ಒಂದು ಪಾತ್ರವಾಗಿ ಅವರೊಂದಿಗೇ ಪ್ರಯಾಣ ಹೊರಟುಬಿಟ್ಟ ಅನುಭವ! ಇವರೆಲ್ಲರಿಂದ ತಪ್ಪಿಸಿಕೊಳ್ಳಲೋ ಎಂಬಂತೆ ಹೀಗೆ ಬರೆಯುತ್ತಾ ಕೂತಿದ್ದೀನಿ! ಆದರೂ ಇವರೆಲ್ಲ ನನ್ನ ಸುತ್ತಲೇ ಗಿರಕಿ ಹೊಡೆಯುತ್ತ, ಇವರೇ ನನ್ನ ಹಿಂದೆ ಬಿದ್ದಹಾಗೆ ಕಾಣುತ್ತಿದ್ದಾರೆ! ಹೀಗೆ ನನ್ನ ಬಿಟ್ಟೂಬಿಡದೆ ಬೆನ್ನಟ್ಟಿರುವ ಚಿತ್ರ - 'ಎ ಸೆಪರೇಶನ್'. ಆಸ್ಕರ್ ಒಳಗೊಂಡಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ, ಅಸ್ಗರ್ ಫರ್ಹಾದಿಯ ಇರಾನಿ ಚಿತ್ರ ಇದು. ಇರಾನಿ ಸಿನಿಮಾಗಳ ಬಗ್ಗೆ ನನಗಿದ್ದ ಒಂದು ಬಗೆಯ ಆಪ್ತತೆಯನ್ನು ಇಮ್ಮಡಿಗೊಳಿಸಿದ ಚಿತ್ರ. ಇದರ ಬಗ್ಗೆ ನಾಲ್ಕು 'ಒಳ್ಳೆಯ' ಮಾತುಗಳನ್ನು ಕೇಳಿದ್ದೆನಾದ್ದರಿಂದ, ಅದು ಎಷ್ಟು ನಿಜ ನೋಡೇಬಿಡೋಣ ಎನಿಸಿ, ಕುತೂಹಲದಿಂದ ಚಿತ್ರ 'ತೆರೆದು' ಕೂತೆ. ಅದ್ಯಾವಾಗ, ಯಾವ ಮಾಯದಲ್ಲಿ ನನ್ನ ನಾ ಮರೆತೆನೋ ಗೊತ್ತಿಲ್ಲ.. ಯಾರು ನನ್ನನ್ನು ಪರದೆಯ ಒಳಗೆಳೆದು ಪಕ್ಕ ನಿಲ್ಲಿಸಿಕೊಂಡರೋ ಆ ಪಾತ್ರಗಳನ್ನೇ ಕೇಳಬೇಕು!

ಆಕೆ, ಉಪೇಕ್ಷಿಸಿಬಿಡಬಹುದಾದಷ್ಟು ಸಣ್ಣ ಸಣ್ಣ ಕಾರಣ ಮುಂದೊಡ್ಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಹೆಂಡತಿ. ಅಲ್ಝೈಮರ್ ಖಾಯಿಲೆಗೆ ತುತ್ತಾಗಿರುವ ತನ್ನ ವಯಸ್ಸಾದ ತಂದೆಯನ್ನು ಬಿಟ್ಟು ಹೆಂಡತಿ-ಮಗಳೊಂದಿಗೆ ವಿದೇಶಕ್ಕೆ ಹೊರಡಲು ಸಿದ್ಧನಿಲ್ಲದ ಗಂಡ. ಆತ ಬಾಯ್ಬಿಟ್ಟು "ನೀನಿಲ್ಲದೆ ಹೇಗಿರಲಿ ನಾನು?" ಅಂತಲೋ, "ನನ್ನ ಬಿಟ್ಟು ಹೋಗಬೇಡ, ಪ್ಲೀಸ್" ಅಂತಲೋ ದೈನ್ಯದಿಂದ ಹೇಳದೆ, ನಿರ್ಲಿಪ್ತನಾಗಿ "ನಿನ್ನಿಷ್ಟದ ಹಾಗೆ ಮಾಡು" ಅಂದದ್ದು ಅವಳ ಗಾಯಕ್ಕೆ ಉಪ್ಪು ಮೆತ್ತಿದ ಹಾಗಾಗಿದೆ. ಇನ್ನು ನಲವತ್ತು ದಿನಗಳು ಮಾತ್ರ ವ್ಯಾಲಿಡಿಟಿ ಇರುವ ವೀಸಾವನ್ನು 'ಸರಿಯಾಗಿ' ಬಳಸಿಕೊಂಡುಬಿಡುವುದು ಆಕೆಯ ಮುಂದಿರುವ ಸಧ್ಯದ ಗುರಿ. 'ಸರಿಯಾದ' ಕಾರಣ ಇಲ್ಲದ್ದರಿಂದಾಗಿ ಕೋರ್ಟ್ ನಿಂದ ಸಿಗದ ವಿಚ್ಛೇದನ..


ಹಟಮಾರಿತನವನ್ನೇ ಅಚ್ಚು ತೆಗೆದು ಮುಖ ಮಾಡಿಕೊಂಡಂಥ ಆಕೆಯ ಚಹರೆ,..ಇವತ್ತೋ, ನಾಳೆಯೋ ತನ್ನ ಸಭ್ಯತನದ ಮುಖವಾಡ ಕಳಚಿಟ್ಟು 'ಹುಚ್ಚ'ನಾಗಿಯೇಬಿಡಬಹುದು ಎಂಬಂತಿರುವ ಅವನು,..ದೊಡ್ಡ ಶರೀರದೊಳಗೆ ಪುಟ್ಟ ಮಗುವನ್ನು ಹುದುಗಿಸಿಟ್ಟಂತೆ ಮುದ್ದು ಹುಟ್ಟಿಸುವ ಆತನ ವಯಸ್ಸಾದ ತಂದೆ,..ಎಲ್ಲವನ್ನು ಕಂಡೂ, ಯಾವುದಕ್ಕೂ ಪ್ರತಿಕ್ರಿಯಿಸಲಾಗದ, ಮೌನವನ್ನೇ ಹೊದ್ದುಕೂತಿರುವ ಈ ವೃದ್ಧ, ಪುಟ್ಟ ಮಗುವಿನಂತೆ ಸಂಪೂರ್ಣ ಪರಾವಲಂಬಿ. (..ನಾನಾದರೂ ಹೋಗಿ ಅಜ್ಜನಿಗೆ ಸಹಾಯ ಮಾಡೋಹಾಗಿದ್ದಿದ್ದರೆ..ಅಂತ ಕೈ ಕೈ ಹೊಸಕಿಕೊಳ್ಳುವುದೊಂದೇ ನನಗೆ ಸಾಧ್ಯವಾಗಿದ್ದು!)


ಇನ್ನು, ಇಡೀ ಚಿತ್ರದ ಪ್ರತ್ಯಕ್ಷ ಮತ್ತು ಪರೋಕ್ಷ ಪ್ರತಿನಿಧಿ - 'ತೆರ್ಮೆಹ್'. ಈ ಗಲಾಟೆ ಗಂಡಹೆಂಡಿರ ಒಬ್ಬಳೇ ಮುದ್ದು ಮಗಳು. ಆರನೇ ಇಯತ್ತೆಯಲ್ಲಿ ಕಲಿಯುತ್ತಿರುವ ಸೂಕ್ಷ್ಮ ಮನಸ್ಸಿನ ಪುಟ್ಟ ಹುಡುಗಿ. ಇನ್ನೇನು ಉಕ್ಕಿಯೇಬಿಡುವಂತಿರುವ ದುಗುಡವನ್ನು ತನ್ನ ಗಲ್ಲದಲ್ಲಿ ಹೆಪ್ಪಗಟ್ಟಿಸಿಕೊಂಡಿರುವ ತೆರ್ಮೆಹ್ ತನ್ನ ಅಪ್ಪ-ಅಮ್ಮನ ಅವಿವೇಕತನ, ಹಟಮಾರಿ ಧೋರಣೆ, ಸ್ವಕೇಂದ್ರಿತ ನಿಲುವುಗಳ ಒಟ್ಟು ಸಂಕಟದ ಮೊತ್ತ! ಬಾಲ್ಯಸಹಜವಾದ ತುಂಟಾಟ, ಚಂಚಲತೆಗೆ ತನ್ನ ಬಳಿ ಪ್ರವೇಶ ನಿಷಿದ್ಧ ಅನ್ನುತ್ತಿವೆಯೇನೊ ಅನಿಸುವ, ದುಃಖಕ್ಕಷ್ಟೇ ಬೇಲಿ ಹಾಕಿಕೊಂಡಿರುವ ಹುಬ್ಬುಗಳು,..ಶೂನ್ಯವನ್ನೋ ಅಥವಾ ಕೊನೆಯಿರದ ಯಾವುದನ್ನೋ ಎಡೆಬಿಡದೆ ದಿಟ್ಟಿಸುವಂತಿರುವ ಇವಳ ನೋಟ ಈಗಲೂ ನನ್ನ ಬಿಡದೆ ಇಡಿಯಾಗಿ ನುಂಗಿಬಿಟ್ಟ ಹಾಗಿದೆ! 


ತನ್ನನ್ನು ಬಿಟ್ಟು ಅಮ್ಮ ವಿದೇಶಕ್ಕೆ ಹೋಗಲಾರಳು ಎಂಬುದು ಗೊತ್ತಿರುವ ಮಗಳು ಅಪ್ಪ-ಅಜ್ಜನೊಂದಿಗೆ ಉಳಿಯುತ್ತಾಳೆ. ಅಪ್ಪ-ಮಗಳು-ಅಜ್ಜನ ನಡುವಿನ ಸಹಜ ಪ್ರೀತಿ, ಹೊಂದಾಣಿಕೆ ಕಂಡಾಗ 'ಅಮ್ಮ'ನ ಬಗ್ಗೆ ಪ್ರೇಕ್ಷಕರಿಗೆ ಅಸಹನೆಯುಂಟಾದರೆ ಆಶ್ಚರ್ಯವಿಲ್ಲ. ಮಗಳಿಗೆ ಗುರುವಿನಂತೆ ಪಾಠ ಹೇಳುತ್ತ, ಗೆಳೆಯನಂತೆ ಆಟವಾಡುತ್ತ, ಅಪ್ಪನನ್ನು ತಾಯಿಯಂತೆ ನೋಡಿಕೊಳ್ಳುತ್ತ, ಹೆಂಡತಿಯ ಹಟಮಾರಿತನಕ್ಕೆ ನಿರ್ಲಿಪ್ತತೆಯೇ ಉತ್ತರವೆಂಬಂತಿರುವ ಅವನ ತಣ್ಣಗಿನ ತಲ್ಲಣ ನಿಮ್ಮನ್ನೂ ತಣ್ಣಗೆ ಮಾಡದಿರದು!


ಬೇಡಿಕೆಯಂತಹ ಒಂದು ಮಾತೂ ಗಂಡನಿಂದ ಬರದಿದ್ದಾಗ ಅಮ್ಮನ ಮನೆಗೆ ಹೊರಟುನಿಲ್ಲುವ ಆಕೆ, ಮನೆಗೆಲಸಕ್ಕೆಂದು ಒಬ್ಬ ಹೆಂಗಸನ್ನು ಗೊತ್ತುಮಾಡುತ್ತಾಳೆ. ಇವಳು ಧಾರ್ಮಿಕ ಶ್ರದ್ಧೆಯ ಮುಗ್ಧ ಹೆಂಗಸು. ಕರುಣೆ ಉಕ್ಕಿಸುವಂತಿರುವ ದೈನ್ಯ, ನಿಸ್ಸಹಾಯಕ ಭಾವದ ಇವಳು ಐದಾರು ವರ್ಷದ ತನ್ನ ಪುಟ್ಟ ಮಗಳೊಂದಿಗೆ ಹಲವು ದೂರ ಕ್ರಮಿಸಿ ಇವರ ಮನೆಗೆಲಸಕ್ಕೆ ಬರಬೇಕು - ಬಸುರಿ ಬೇರೆ. ತನ್ನ ನಿರುದ್ಯೋಗಿ ಗಂಡನಿಗೂ ತಿಳಿಸದೆ, ಈ ಕೆಲಸ ಒಪ್ಪಿಕೊಂಡಿದ್ದಾಳೆ. ಮೊದಲ ದಿನವೇ ಉಚ್ಚೆಯಿಂದ ನೆನೆದ ಅಜ್ಜನ ಬಟ್ಟೆ ಬದಲಿಸುವುದು ಆಕೆಗೆ ದೊಡ್ಡ ಸವಾಲಿನಂತೆ ಕಾಣುತ್ತದೆ. ಆಕೆಯ ಮುಂದಿರುವ ಪ್ರಶ್ನೆ- ತಾನೊಬ್ಬ ಹೆಂಗಸಾಗಿ ಪರಪುರುಷನ ಬಟ್ಟೆಬದಲಿಸುವುದು -ಅದೂ ಎಂಬತ್ತರ ಆಜುಬಾಜಿನ, ಅಸಹಾಯಕ ಮುದುಕನಾದರೂ- ಪಾಪದ ಕೆಲಸವಲ್ಲವೇ? ಎಂಬುದು. ಧರ್ಮದ ಹೆಸರಿನ ನಂಬಿಕೆಗಳು ಮಾನವೀಯತೆಯನ್ನೂ ಮರೆಸಿಬಿಡುವಷ್ಟು ಪ್ರಬಲವಾಗಿರಬೇಕೆ? ಮಾನವ ಧರ್ಮವನ್ನೂ ಮೀರಿ ನಿಲ್ಲುವ ಇಂತಹ ದಿಕ್ಕೆಡಿಸುವ ದ್ವಂದ್ವಗಳಿಗೆ ಅರ್ಥವಿದೆಯೇ? ಎಂಬ ಪ್ರಶ್ನೆಗಳ ಆ ಕ್ಷಣ ನಿಮ್ಮ ಮನಸ್ಸಿನ ಪರದೆಯ ಮೇಲೆ ಎದ್ದು ನಿಲ್ಲುತ್ತವೆ.

ಇಲ್ಲಿ ನಿಧಾನವಾಗಿ ಒಂದೊಂದು 'ಸಣ್ಣ' ವಿಷಯವೂ ದೊಡ್ಡ ಸಮಸ್ಯೆಯಾಗಿಬಿಡಬಲ್ಲ ಯಾವುದೋ ವಿಕ್ಷಿಪ್ತ ಮನಸ್ಥಿತಿ ಆವರಿಸಿಕೊಳ್ಳುತ್ತಿದೆ..ಗಾಢವಾದ ಸ್ತಬ್ಧತೆಯೊಂದು ಚಿಕ್ಕ ಅಲುಗಾಟಕ್ಕೂ ಸ್ಫೋಟಗೊಳ್ಳಲು ಸನ್ನದ್ಧವಾಗಿರುವಂಥ ಸೂಕ್ಷ್ಮವೇದಿಕೆ ಸಿದ್ಧವಾಗಿದೆ... ಈ ಹೊಸ ವ್ಯವಸ್ಥೆಯೊಂದಿಗೆ ಅನಿವಾರ್ಯವಾಗಿ ಸಖ್ಯ ಬೆಳೆಸಿಕೊಳ್ಳಬೇಕಾದ ಅಜ್ಜ, ಅಜ್ಜನ ಮಗ, ಆತನ ಮಗಳು, ಕೆಲಸದಾಕೆ, ಆಕೆಯ ಪುಟ್ಟ ಮಗು - ಈ ಎಲ್ಲರ ಒಳಗೂ ಈ ದಾರುಣ ಸ್ತಬ್ಧತೆ ಸ್ಫೋಟಗೊಳ್ಳಲು ಕಾದಿರುವಂತೆ... ಸಣ್ಣ ಸಣ್ಣ ಭಯ, ಆತಂಕ, ದುಃಖ, ಹತಾಶೆ ಎಲ್ಲವೂ ನಿಧಾನವಾಗಿ ಸಂಗ್ರಹಗೊಳ್ಳುತ್ತ ಕಡೆಗೊಮ್ಮೆ ಜ್ವಾಲಾಮುಖಿಯಂಥ ಕೋಪದ ರೂಪದಲ್ಲಿ ಸಿಡಿಯುವ ದಿನವೂ ಬಂದೇಬರುತ್ತದೆ! ...'ಮನೆಯ ಯಜಮಾನ, ಕೆಲಸದಾಕೆಯ ಮೇಲೆ ಕಳ್ಳತನದ ಆರೋಪ ಹೊರಿಸಿ ಮನೆಯಿಂದ ಬಲವಂತವಾಗಿ ಹೊರದಬ್ಬಿದ್ದರಿಂದ ಜಾರಿಬಿದ್ದ ಆಕೆಗೆ ಗರ್ಭಪಾತವಾಯಿತು, ಇದು ಕೊಲೆಗೆ ಸಮನಾದ ಅಪರಾಧ'... ಎಂಬ ಘಂಟಾಘೋಷದ ಹೇಳಿಕೆ ಆ ಸ್ಫೋಟದ ಕೊನೆಯ ನಿಲ್ದಾಣದಂತೆ ಕೇಳಿಸುತ್ತದೆ. ಇನ್ನು ಎಂಥ ಬರ್ಬರ ಯುದ್ಧಗಳಾಗುವುದಕ್ಕೂ ಸೂಕ್ತ ಮನೋಭೂಮಿಕೆ ಸಿದ್ಧ! ಈ ಎಲ್ಲ ಪಾತ್ರಗಳ ಒಳಗೂ-ಹೊರಗೂ ನಡೆಯುವ ತುಮುಲಗಳ ನಡುವೆ ನಿಮಗೆ ನಿಮ್ಮನ್ನೆ ಕಾಣಿಸುತ್ತ ಸಾಗುತ್ತದೆ ಈ ಚಿತ್ರ.

 
 ಕೋರ್ಟ್ ವಿಚಾರಣೆಯ ಪಡಸಾಲೆಯಲ್ಲಿ ನಿಂತಿರುವ ಈ ಎಲ್ಲ ಪಾತ್ರಗಳಿಗೂ ಮಾತಾಡಲು, ಯೋಚಿಸಲು, ಕೋಪಗೊಳ್ಳಲು, ಸಿಡಿದುಬೀಳಲು ಈಗ ಸ್ಪಷ್ಟವಾದ ಕಾರಣ ಮತ್ತು ಗುರಿಯಿದೆ! ಮತ್ತೆ ತಮ್ಮ ತಮ್ಮ ದೈನಂದಿನ ಸ್ತಬ್ಧತೆಯಲ್ಲಿ ಅನಾಮಿಕರಂತೆ ಕಳೆದುಹೋಗುವುದು ಎಂಥ ನೆಮ್ಮದಿಯ ವಿಷಯ ಎಂಬುದು ಹೀಗೆ ಪರಸ್ಪರ ವಿಷಕಾರುತ್ತ ಅಬ್ಬರಿಸುತ್ತಿರುವ ಈ ಎಲ್ಲರಿಗೂ ಅನಿಸಿರಬಹುದಾದ ಸನ್ನಿವೇಶ ಅದು. ಈ ಸಮಸ್ಯೆಗೆ ಮೂಲವಾದರೂ ಯಾವುದು ಎಂಬ ಪ್ರಶ್ನೆಗೆ ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಕಾರಣ ಹುಡುಕಿಕೊಂಡು, ತಮ್ಮ ತಮ್ಮ ಪರವಾಗಿಯೇ ಫಮರ್ಾನು ಹೊರಡಿಸುವ ಶೂರರು! ಪ್ರಙ್ಞಪೂರ್ವಕವಾಗಿ ತಮ್ಮ ತಪ್ಪುಗಳನ್ನು ಮುಚ್ಚಿಟ್ಟು ಮತ್ತೊಬ್ಬನೆಡೆಗೆ ಬೆರಳು ತೋರಿಸುತ್ತಿರುವ ಇವರುಗಳಿಗೆ ಮಾತ್ರ ತಾವು ಹೇಳುತ್ತಿರುವ ಸುಳ್ಳುಗಳು, ತಮ್ಮ ತಮ್ಮ ತಪ್ಪುಗಳು ನಿಚ್ಚಳವಾಗಿ ಗೊತ್ತು!

ಕಾನೂನಿನ ದೃಷ್ಟಿಯಲ್ಲಿನ 'ಸತ್ಯ' ಮತ್ತು ಸಂಬಂಧಗಳ ದೃಷ್ಟಿಯಲ್ಲಿನ 'ಸತ್ಯ' - ಇವೆರಡರಲ್ಲಿ ಯಾವುದು ಹೆಚ್ಚು 'ತೂಕದ್ದು'?! 'ಸತ್ಯ' ಎಂಬುದಕ್ಕೆ ಎಷ್ಟೊಂದು ಮುಖಗಳು, ಮುಖವಾಡಗಳು ಇರುವುದು ಸಾಧ್ಯ! ಎನಿಸಿ ಬೆಚ್ಚಿಬೀಳುವ ಸರದಿ ನಿಮ್ಮದಾಗುತ್ತದೆ! ಇನ್ನು ಈ ಸಮಸ್ಯೆ ಹೇಗೆ ಕೊನೆಗೊಳ್ಳುತ್ತೆ ಅನ್ನೋದನ್ನು ಮಾತ್ರ ನೀವೇ ಕಂಡು ತಿಳಿಯಬೇಕು.


ಕಳ್ಳಿ ಎಂಬ ಆರೋಪ ಹೊತ್ತು, ಗರ್ಭಪಾತಕ್ಕೊಳಗಾಗಿ, ದಣಿವು, ಮುಗುಜರ, ರೇಜಿಗೆ, ದುಃಖ ಎಲ್ಲವೂ ಒಟ್ಟಿಗೆ ಆಗಿರಬಹುದಾದ ಕೆಲಸದಾಕೆ, ಆಕೆಯ ನಿರುದ್ಯೋಗಿ - ಮುಂಗೋಪಿ ಗಂಡ, ತಮ್ಮ ತಮ್ಮ ನಿತ್ಯದ ಜಂಜಡಗಳಲ್ಲೇ ಬಳಲಿ ಬೆಂಡಾಗಿರುವ ಈ ಮನೆಯ ಯಜಮಾನ-ಆತನ ಹೆಂಡತಿ, ಎಲ್ಲವನ್ನೂ ಕಂಡೂ ಮರುಮಾತಾಡಲಾರದ ಅಸಹಾಯಕ ಅಜ್ಜ, ಈ ಎಲ್ಲಾ 'ದೊಡ್ಡವರ' ಜಂಜಾಟಗಳ ನಡುವೆ ತಮ್ಮ ಸಹಜ ನಗು ಮರೆತು, ಆತಂಕ-ದುಗುಡಗಳನ್ನೇ ಉಸಿರಾಡುತ್ತಿರುವ ಆ ಪುಟ್ಟ ಮಕ್ಕಳು - ಎಲ್ಲರೂ ಒಂದೊಂದು ಪ್ರತ್ಯೇಕ ಕಾದಂಬರಿಗಳಂತೆ ಕಾಣುತ್ತಾರೆ! ಈ ಕಾದಂಬರಿಗಳಂಥ ಎಲ್ಲಾ ಪಾತ್ರಗಳಿಂದ ಮತ್ತೊಂದು ಕಥೆ ನಿಮ್ಮ ಮುಂದೆ ಬಿಚ್ಚಿಕೊಳ್ಳುತ್ತದೆ. ಈ ಕಥೆಯೊಳಗಿನ ಉಪಕಥೆಗಳು ನಿಮ್ಮ ಗ್ರಹಿಕೆ, ನೋಟಕ್ಕೆ ಅನುಗುಣವಾಗಿ ಹೆಣೆದುಕೊಳ್ಳುತ್ತಾ ಸಾಗುತ್ತವೆ. ಈ ಹೆಣಿಗೆಗೆ ಕೊನೆಯೆಂಬುದೇ ಇಲ್ಲವೇನೋ ಎನಿಸಿ ಗಾಬರಿಯೂ ಆಗುತ್ತೆ! ನೀವು ಈ ಪಾತ್ರಗಳಲ್ಲಿ ಯಾವ ಪಾತ್ರದ ಎಷ್ಟು ಸನಿಹ ನಿಲ್ಲುತ್ತೀರಿ? ಯಾವ ಕೋನಗಳಿಂದ ಹೇಗೆ ಕಾಣುತ್ತೀರಿ? ಯಾವ ಪಾತ್ರದೊಂದಿಗೆ ಎಷ್ಟು ಮಾತನಾಡುತ್ತೀರಿ? ಎಂಬುದೆಲ್ಲ ನಿಮಗೇ ಬಿಟ್ಟದ್ದು, ನಿರ್ದೇಶಕ ಎಂಬ ಸೂತ್ರಧಾರ ನಿಮಗೆ ನೆನಪಾಗುವುದೇ ಸಿನಿಮಾ ಮುಗಿದ ಮೇಲೆ! ಅಷ್ಟು ಸಹಜವಾದ ಸಾತತ್ಯ ಸಾಧ್ಯವಾಗುವುದೇ ಈ ಚಿತ್ರದ ಹೆಗ್ಗಳಿಕೆ


'ಸಣ್ಣ'ದೆಂಬುದು ಸಣ್ಣದಲ್ಲದ, ದೊಡ್ಡದೆಂಬುದು 'ದೊಡ್ಡ'ದಲ್ಲದ, ನಿಜ-ಸುಳ್ಳು, ಸರಿ-ತಪ್ಪು, ನೋವು-ನಗು ಎಲ್ಲವೂ ವಿಚಾರಣೆಯ ಯಾವ 'ನೋಟೀಸೂ' ಕೊಡದೆ ಸ್ಥಾನಪಲ್ಲಟಗೊಳ್ಳಬಹುದಾದ ಈ ಅಸಾಧಾರಣ, ದಾರುಣ ಬದುಕು! ಈ ಬದುಕಿನ ತೀವ್ರತೆಯ ತೆಕ್ಕೆಯಲ್ಲಿ ನಾವು-ನೀವು-ಯಾರೂ 'ಸ್ವಂತ' ಚಲನೆಯ ಪಥವನ್ನು ಆಯ್ದಕೊಳ್ಳುವ ಹಕ್ಕುದಾರರಲ್ಲ! ಇಲ್ಲಿ ಕೇವಲ ನಮ್ಮ ಉಸಿರಾಟ ಒಂದೇ ನಮ್ಮ 'ಸ್ವಂತದ್ದು'! ..ಸಮಾಜ, ಸಂಬಂಧಗಳೇ ಹಾಗೇನೊ.. ಪೂರ್ಣವೆಂಬ ಅಪೂರ್ಣತೆ ಮತ್ತು ಅಪೂರ್ಣವೆಂಬ ಪೂರ್ಣತೆಯ ಹಾಗೆ! ಇದಕ್ಕೆ ನಗುವುದು ಅಥವಾ ಅಳುವುದು ಮಾತ್ರ ನಿಮ್ಮದೇ ಸ್ವಂತ ಆಯ್ಕೆ!

...ಕೊನೆಗೂ ಆ ದಂಪತಿಗಳಿಗೆ ಉಳಿಯುವುದು ವಿಚ್ಛೇದನದ ಆಯ್ಕೆಯೇ. ಕೋರ್ಟ್ ವಿಚಾರಣೆಯೊಂದಿಗೆ ಶುರುವಾಗುವ ಚಿತ್ರ ಮುಗಿಯುವುದೂ ಅಂಥದ್ದೇ ಸನ್ನಿವೇಶದೊಂದಿಗೆ. ಪುಟ್ಟ ತೆರ್ಮೆಹ್ ತಾನು ಮುಂದಿನ ಬದುಕನ್ನು ಕಳೆಯುವುದು ಅಪ್ಪನೊಂದಿಗೋ? ಅಮ್ಮನೊಂದಿಗೋ? ಎಂಬ ಅನಿವಾರ್ಯ ಆಯ್ಕೆ ಮಾಡಿಕೊಳ್ಳಬೇಕಿದೆ... ದುಗುಡವಲ್ಲದೆ ಮತ್ತೇನನ್ನೂ ಕಂಡಿರದ ಆ ಗಲ್ಲದ ಮೇಲಿನ ಬೆಚ್ಚನೆಯ ಕಣ್ಣೀರು ಅವಳದೋ?...ನಿಮ್ಮದೋ?...ಎಂಬುದು ಗೊತ್ತಾಗದ ಹಾಗೆ ಕೋರ್ಟ್ ಆವರಣದ ಮಬ್ಬುಗತ್ತಲು ನಿಮ್ಮ ಕಣ್ಣುಗಳಿಗೂ ಆವರಿಸಿಕೊಳ್ಳತ್ತದೆ....