ಲೇಖಕರು:- ಡಾ. ನಟರಾಜ್ ಎಸ್ ಎಂ
ನಮ್ಮ ರಾಷ್ಟ್ರಗೀತೆ ಜನಗಣಮನ, ಬಾಂಗ್ಲಾದೇಶದ ರಾಷ್ಟ್ರಗೀತೆ ಅಮಾರ್ ಸೋನಾರ್ ಬಾಂಗ್ಲಾ ಕವಿ ಗುರು ರವೀಂದ್ರನಾಥ ಠಾಗೋರರ ಸೃಷ್ಟಿಗಳಾದರೆ ಶ್ರೀಲಂಕಾದ ರಾಷ್ಟ್ರಗೀತೆ ಶ್ರೀಲಂಕಾ ಮಾತಾ ಕೂಡಾ ಠಾಗೋರರ ಸೃಷ್ಟಿಯಾಗಿತ್ತು ನಂತರ ಅದನ್ನು ಬೆಂಗಾಳಿಯಿಂದ ಸಿಂಹಿಳಿಗೆ ಆನಂದ ಸಮರಕೂನ್ ರವರು ಭಾಷಾಂತರಿಸಿದರು ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳುತ್ತದೆ. ಮೂರು ರಾಷ್ಟ್ರಗಳ ರಾಷ್ಟ್ರಗೀತೆಗಳು ಒಬ್ಬ ಮಹಾನ್ ವ್ಯಕ್ತಿಯ ಲೇಖನಿಯಿಂದ ಮೂಡಿವೆ ಎಂದರೆ ಆ ವ್ಯಕ್ತಿಯಲ್ಲಿರುವ ಕವಿಗೆ ಈ ಜಗತ್ತು ನೀಡುವ ಗೌರವವೆಷ್ಟು ಎಂಬುದನು ನಾವು ಊಹಿಸಿಕೊಳ್ಳಬೇಕು. ಕವಿ ಗುರುವಿನ ಹುಟ್ಟು, ಬೆಳವಣಿಗೆ, ಕವಿತೆ, ಇತ್ಯಾದಿಗಳನ್ನು ಕುರಿತು ಬರೀ ಪುಸ್ತಕಗಳಲ್ಲಿ ಓದಿ ತಿಳಿದವರಿಗೆ ಪುಸ್ತಕದ ಹೊರಗೆ ಕವಿ ಗುರು ಹೇಗೆ ಕಾಣುತ್ತಾರೆ ಎಂದು ಹೆಚ್ಚು ಜನರಿಗೆ ಗೊತ್ತಿಲ್ಲದೆ ಇರಬಹುದು. ಆ ತರಹದ ಗೊತ್ತಿಲ್ಲದೆ ಇರುವ ವಿಷಯಗಳ ಕುರಿತು ಒಂದೆರಡು ಸಾಲುಗಳನು ಗೀಚಿರುವುದು ಈ ಲೇಖನದ ಮುಖ್ಯ ಉದ್ದೇಶ.
![]() |
| ಟ್ಯಾಗೋರ್ ಮತ್ತು ಹೆಲೆನ್ ಕೆಲ್ಲರ್ |
ನಮ್ಮ ಕರ್ನಾಟಕದ ಸಂಸ್ಕೃತಿಯಲ್ಲಿ ಕಾರ್ಯಕ್ರಮವೊಂದನು ಶುರು ಮಾಡುವ ಮೊದಲು ದೇವರನು ಸ್ತುತಿಸಿ ಪ್ರಾರ್ಥಿಸುವುದು ವಾಡಿಕೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮವೇನಾದರು ಇದ್ದರೆ ಅಲ್ಲಿ ಮೈಕ್ ಸೆಟ್ ಗಳಲ್ಲಿ ಮೊದಲು ದೇವರ ಹಾಡೊಂದನು ಹಾಕಿ ನಂತರ ಬೇರೆ ಹಾಡುಗಳನ್ನು ಕೇಳಿಸುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ದತಿ. ಬಹುಶಃ ಇತ್ತೀಚೆಗೆ ಮೈಕ್ ಸೆಟ್ ಗಳಲ್ಲಿ ದೇವರ ಹಾಡುಗಳನು ಮೊದಲು ಹಾಕುವುದು ತಪ್ಪಿರಬಹುದು. ಆದರೆ ಬೆಂಗಾಳದ ಪ್ರತಿ ಕಾರ್ಯಕ್ರಮಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಠಾಗೋರರ ರವೀಂದ್ರ ಸಂಗೀತ್ ಎಂದು ಕರೆಯಲ್ಪಡುವ ಹಾಡುಗಳನ್ನು ಮೊದಲು ಹಾಡುವುದು ಅಥವಾ ಕೇಳಿಸುವುದನು ಇಂದಿಗೂ ಕಾಣಬಹುದು.
ಗೀತಾಂಜಲಿ ಬಗ್ಗೆಯಷ್ಟೇ ಹೆಚ್ಚು ಕೇಳಿರುವ ಬೆಂಗಾಳಿನ ಹೊರಗಿನವರಿಗೆ ರವೀಂದ್ರ ಸಂಗೀತದ ಮೋಡಿ ಕುರಿತು ಬಹುಶಃ ಹೆಚ್ಚು ತಿಳಿದಿರಲಾರದು. ಇತ್ತೀಚೆಗೆ ಅಮಿತಾಬ್ ಬಚ್ಚನ್ ರವರು ಠಾಗೋರರ ಬೆಂಗಾಳಿ ಕವಿತೆಯೊಂದರ ಕೆಲವು ಸಾಲುಗಳನು ತಮ್ಮ ಕಂಠದಲ್ಲಿ ಹಿಂದಿ ಚಿತ್ರಕ್ಕಾಗಿ ಹಾಡಲು ಬಳಸಿಕೊಂಡಿದ್ದರು. ಆ ಹಾಡು ರವೀಂದ್ರ ಸಂಗೀತದ ಒಂದು ಪ್ರಖ್ಯಾತವಾದ ಹಾಡು. ಬೆಂಗಾಳದ ಹೊರಗಿನ ಅಮಿತಾಬ್ ಬಚ್ಚನ್ ರವರೇ ರವೀಂದ್ರ ಸಂಗೀತದ ಮೋಡಿಗೆ ಒಳಗಾಗಿ ರವೀಂದ್ರ ಸಂಗೀತ್ ಹಾಡಿದರೆಂದರೆ ಬೆಂಗಾಳಿ ಮೂಲದ ಗಾಯಕರಿಗೆ ರವೀಂದ್ರ ಸಂಗೀತ ಮನೆ ಪಾಠದ ಮೊದ ಮೊದಲ ನುಡಿಗಳಿದ್ದ ಹಾಗೆ ಅನಿಸುತ್ತೆ. ಬೆಂಗಾಳಿ ಮೂಲದ ಯಾವ ಗಾಯಕ ಗಾಯಕಿಯೇ ಆಗಿರಲಿ, ಅವರು ಹೆಸರು ಗಳಿಸಿ ಎಷ್ಟೇ ದೊಡ್ಡವರಾಗಿರಲಿ ರವೀಂದ್ರ ಸಂಗೀತದ ಹಾಡುಗಳಿರುವ ಆಲ್ಬಂವೊಂದನು ತಮ್ಮ ದನಿಯಲ್ಲಿ ಹಾಡದೆ ಇದ್ದರೆ ಅವರು ಬೆಂಗಾಳಿಯಾಗಿದ್ದು ನಿರರ್ಥಕ. ಹಾಗೆಯೇ ಬರೀ ರವೀಂದ್ರ ಸಂಗೀತದ ಹಾಡುಗಳನ್ನಷ್ಟೇ ಹಾಡಿ ತಮ್ಮ ಛಾಪು ಮೂಡಿಸಿದ ಕಲಾವಿದರು ಬೆಂಗಾಳದಲ್ಲಿ ಇಂದಿಗೂ ಸಿಗುತ್ತಾರೆ ಎಂದರೆ ಅಚ್ಚರಿಪಡಬೇಕಿಲ್ಲ.
![]() |
| ಗುರು ರವೀಂದ್ರ ಮತ್ತು ಮಹಾತ್ಮ ಗಾಂಧೀಜಿ |
ಇವತ್ತಿನ ದಿನಗಳಲ್ಲಿ ಕೆಲವು ಭಾಷೆಗಳು ಅವನತಿಯ ಅಂಚಿನಲ್ಲಿ ನಿಂತಿವೆ ಎಂದು ಕೂಗುಗಳು ಕೇಳಿಬರುತ್ತಿದೆ. ಅಚ್ಚರಿಯೆಂದರೆ ಬೆಂಗಾಳಿ ಭಾಷೆ ಉಳಿಸಿ ಎಂದು ಯಾರೂ ಯಾವತ್ತಿಗೂ ಪ್ರತಿಭಟಿಸುವುದನು ನಾವು ಕಾಣಲಾರೆವು. ಯಾಕೆಂದರೆ ಬಹುಶಃ ಒಂದು ಕಾಲದಲ್ಲಿ ಬೆಂಗಾಳಿ ಸಂಸ್ಕೃತಿಯೆಂದರೆ ಹೀಗಿರಬೇಕು ಎಂದು ಬೆಂಗಾಳಿ ಸಂಸ್ಕೃತಿಗೊಂದು ತಳಹದಿ ಹಾಕಿಕೊಟ್ಟ ಕೀರ್ತಿ ಠಾಗೋರರಿಗೆ ಸೇರುತ್ತದೆ. ಕೋಲ್ಕತ್ತಾದ ದುರ್ಗಾ ಪೂಜೆಯಾಗಲಿ, ವಿಶ್ವ ಭಾರತಿಯ ವಸಂತ ಉತ್ಸವವಾಗಲಿ, ಹೀಗೆ ಎಲ್ಲದರಲ್ಲೂ ಬೆಂಗಾಳಿ ಸಂಸ್ಕೃತಿಯನ್ನು ಸಮೃದ್ದಗೊಳಿಸಿ ಬೆಂಗಾಳಿಗಳು ಬದುಕಿದರೆ ಖುಷಿಯಿಂದ ಹಾಡಿಕೊಂಡು, ಸಂತೋಷದಿಂದ ಬದುಕಬೇಕು ಎಂದು ಬಹುಶಃ ಠಾಗೋರರು ಕಲಿಸಿಕೊಟ್ಟು ಹೋದರು ಎನಿಸುತ್ತದೆ. ಅದಕ್ಕೆ ಇಡೀ ಭಾರತವೇ ದುಡ್ಡಿನ ಹಿಂದೆ ಬಿದ್ದು ಸಂತೋಷವನ್ನು ಹಾಳುಮಾಡಿಕೊಂಡು ಬದುಕುತ್ತಿದ್ದರೆ ಕೋಲ್ಕತ್ತಾದ ಜನ ಇರುವುದರಲ್ಲಿ ಖುಷಿಪಡುತ್ತಾ, ಖುಷಿಯಿಂದ ಬದುಕಿ ತಮ್ಮ ನಗರಿಗೆ ಖುಷಿ ನಗರಿ ಎಂಬ ಹೆಸರು ತಂದಿತ್ತಿದ್ದಾರೆ.
![]() |
| ರವೀಂದ್ರನಾಥ ಟ್ಯಾಗೋರ್ ಮತ್ತು ಐನ್ ಸ್ಟೀನ್ |
ಇಡೀ ದೇಶ ಅದರಲ್ಲೂ ಪಶ್ಚಿಮ ಬಾಂಗ್ಲಾ ರವೀಂದ್ರನಾಥ ಠಾಗೋರರ 151ನೇ ಜನುಮ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದೆ. ಹೆಚ್ಚು ಸಲ ಮಹಾನ್ ವ್ಯಕ್ತಿಗಳನ್ನು ಅವರ ಜನುಮ ದಿನದಂದಷ್ಟೇ ನೆನೆದು ನಂತರ ಮುಂದಿನ ಜನುಮ ದಿನ ಬರುವವರೆಗೂ ಮರೆತುಬಿಡುವುದು ವಾಡಿಕೆ. ಆದರೆ ಕವಿ ಗುರು ಠಾಗೋರರನ್ನು ಯಾರು ಮರೆತರೂ ಬೆಂಗಾಳಿ ಜನರು ಮರೆಯಲಾರರು. ಯಾಕೆಂದರೆ ಠಾಗೋರರು ಬರೀ ಕವಿಯಾಗಿ ಜನಮಾನಸದಲ್ಲಿ ಉಳಿದಿಲ್ಲ. ಠಾಕೂರ್ ಎಂದರೆ ಬೆಂಗಾಳಿಯಲ್ಲಿ ದೇವರು ಎಂದರ್ಥ. ಹೆಚ್ಚು ಜನ ರವೀಂದ್ರನಾಥ ಠಾಗೋರರನು ರವಿ ಠಾಕೂರ್ ಎಂದು ನೆನೆಯುತ್ತಾರೆ ಎಂದರೆ ಬಹುಶಃ ಜನ ಅವರನ್ನು ದೇವರಂತೆ ಪೂಜಿಸುತ್ತಾರೆ ಹಾಗು ಗೌರವಿಸುತ್ತಾರೆ. ಅಂದ ಹಾಗೆ ರವೀಂದ್ರನಾಥ ಠಾಗೋರರು ದೇವೇಂದ್ರನಾಥ ಠಾಗೋರ್ ಮತ್ತು ಶಾರದ ದೇವಿಯವರ ಹದಿಮೂರು ಮಕ್ಕಳಲ್ಲಿ ಕಿರಿಯ ಮಗನಾಗಿ ಹುಟ್ಟಿದ್ದು 7 ಮೇ 1861 ರಂದು ಕೋಲ್ಕತ್ತಾದಲ್ಲಿರುವ ಜೋರಾಸಂಕೋ ಎಂಬ ಬಂಗಲೆಯಲ್ಲಿ. ಭಾರತದ ಹೆಮ್ಮೆಯ ಪುತ್ರರಾದ ಗುರುದೇವ ರವೀಂದ್ರನಾಥ ಠಾಗೋರರ ಆದರ್ಶಗಳು ನಮಗೆಲ್ಲಾ ದಾರಿದೀಪವಾಗಲಿ ಎಂದು ಬಯಸುತ್ತಾ ಕವಿ ಗುರುವಿಗೆ ಶಿರ ಬಾಗಿ ನಮಿಸೋಣ..
ಚಿತ್ರಕೃಪೆ:- ದಿ ಹಿಂದೂ
ಚಿತ್ರಕೃಪೆ:- ದಿ ಹಿಂದೂ



No comments:
Post a Comment