Friday, 4 May 2012

ಜಯಂತಿಗಳ ಆಚರಣೆಯಲ್ಲಿ ಸಮಾನತೆಯ ಕನಸಿರಲಿ:


ಸಾವಿತ್ರಿ ಮುಜುಂದಾರ್, ಸಂಪಾದಕರು, ಮಹಿಳಾ ಲೋಕ ವಾರಪತ್ರಿಕೆ, ಕೊಪ್ಪಳ, 
ಸೌಜನ್ಯ: ಕನ್ನಡ ಪ್ರಭ ದಿನಪತ್ರಿಕೆ

ಈಗಾಗಲೇ ಡಾ||ಬಾಬಾಸಾಹೇಬ ಅಂಬೇಡ್ಕರ ಜಯಂತಿಯನ್ನು ಆಚರಿಸಿದ್ದೇವೆ. ಬಸವಜಯಂತಿಯನ್ನು ಆಚರಿಸುವ ಸಂಭ್ರಮದಲ್ಲಿದ್ದೇವೆ. ಬಸವಣ್ಣನವರ ಮತ್ತು ಅಂಬೇಡ್ಕರರವರ ಪ್ರತಿಮೆಗಳನ್ನು ಸ್ಥಾಪಿಸುತ್ತಿದ್ದೇವೆ. ಈ ಜಯಂತಿ ಮತ್ತು ಪ್ರತಿಮೆಗಳಾಚೆಗೆ ನಾವು ಮಾಡುವದು ಸಾಕಷ್ಟಿದೆ.

ಈ ಇಬ್ಬರೂ ಮಹನೀಯರು ಜಾತಿ ವಿನಾಶಕ್ಕಾಗಿ ಹೋರಾಡಿದವರು. ವರ್ಣವ್ಯವಸ್ಥೆ ಅತ್ಯಂತ ಬಿಗಿಯಾಗಿರುವ ಹನ್ನೇರಡನೇ ಶತಮಾನದಲ್ಲಿಯೇ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಹರಳಯ್ಯ. ಕಿನ್ನರಿ ಬೊಮ್ಮಯ್ಯ, ಹಡಪದ ಅಪ್ಪಣ್ಣ, ಸತ್ಯಕ್ಕ ದುಗ್ಗಳೆ, ಆಯ್ದಕ್ಕಿ ಮಾರಯ್ಯ & ಲಕ್ಕಮ್ಮ ದಂತಪತಿಗಳು, ಕಾಳವ್ವ, ಸೂಳೆ ಸಂಕವ್ವ, ಮುಂತಾದ ತಳ ಸಮುದಾಯದವರವನ್ನು ಮೇಲ್ಜಾತಿಯ ಮಾದರಸ ಮುಂತಾದವರೊಂದಿಗೆ ಸಮೀಕರಿಸಿ ಒಂದೇ ವೇದಿಕೆಯಲ್ಲಿ ಸಮಾನ ಅವಕಾಶವನ್ನು ನೀಡಿದ ಬಸವಣ್ಣನವರಿಗೂ, ದಲಿತರಲ್ಲಿಯ, ಕೀಳರಿಮೆಯನ್ನು ಕಿತ್ತೊಗೆದು ಸಮಾನತೆಯ ಜಾಗೃತಿಯನ್ನು ಮೂಡಿಸಿ ಸಂಘಟಿಸಿ ಹೋರಾಟಕ್ಕಿಳಿದು ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜೀವನವನ್ನೇ ಮುಡಿಪಿಟ್ಟ ಅಂಬೇಡ್ಕರರ ತತ್ವಾದರ್ಶಗಳು ನಮಗೆ ಮುಖ್ಯವಾಗಬೇಕು. ಆದರೆ ನಮ್ಮ ಸಮಾಜ ಇನ್ನೂ ಸಂಪೂರ್ಣ ಜ್ಯಾತ್ಯಾತೀತವಾಗಿಲ್ಲ. ಅಸ್ಪೃಶ್ಯತೆ ನಿವಾರಣೆಯಾಗಿಲ್ಲ. ಮೇಲುಕೀಳೆಂಬ ಭಾವನೆ ತೊಡೆದು ಹಾಕಲಾಗಿಲ್ಲ. ಈ ಎಲ್ಲ ರೋಗಗಳಿಗೆ ಚಿಕಿತ್ಸೆ ಕೊಡಿಸಬೇಕಾಗಿದೆ.

ಜ್ಯಾತ್ಯಾತೀತತೆ ನಮ್ಮ ಸಂವಿಧಾನದ ಅಶಯ. ಆದರೆ ರಾಜಕಾರಣಿಗಳಿಗೆ ಜಾತಿಯೇ ಮೂಲ ಆಧಾರ. ಚುನಾವಣೆ ಬಂತೆಂದರೆ ಸಾಕು ಈ ಜಾತಿ ಪೆಡಂಭೂತ ತನ್ನ ರೌದ್ರಾವತಾರ ಪ್ರಾರಂಭಿಸಿಬಿಡುತ್ತದೆ. ಆಯಾಜಾತಿಯ ಸಂಘಟನೆಗಳು ಚುರುಕಾಗುತ್ತವೆ. ಪ್ರಾದೇಶಿಕವಾಗಿ ಪ್ರಬಲ ಜಾತಿಗಳು ಕಾಲಭೈರವನಂತೆ ಅಟ್ಟಹಾಸ ಮೆರೆಯುತ್ತವೆ. ಚಿಕ್ಕಪುಟ್ಟ ಸಮುದಾಯಗಳು ನಲುಗಿ ಹೋಗುತ್ತವೆ. 'ಇವನಮ್ಮವ' ಎಂಬ ಅಣ್ಣನ ನುಡಿ ಇವರ್ಯಾರಿಗೂ ನೆನಪಾಗುವದೇ ಇಲ್ಲ. ಈ ಸಂಧರ್ಭದಲ್ಲಿ ಜಾತಿವಾರು ಮಠಾಧೀಶರು ಧರ್ಮದ ಹೆಸರಿನಲ್ಲಿ ಸ್ವಜಾತಿಯ ರಾಜಕಾರಣಿಗಳಿಗೆ ಬೆಂಬಲಿಸುತ್ತಾರೆ. ಜಾತಿಮತದ ಆಧಾರಿದಿಂದಲೇ ಶಾಸಕರು ಸಂಸದರು ಆಗಿಬಿಡುತ್ತಾರೆ. ಇಂಥವರು ಬಸವ, ಬುದ್ಧ, ಅಂಬೇಡ್ಕರ ಕುರಿತು ವೇದಿಕೆಯ ಮೇಲೆ ಗಂಟೆಗಟ್ಟಲೆ ಮಾತನಾಡುತ್ತಾರೆ. ಇದು ವಿಪರ್ಯಾಸವಲ್ಲದೆ ಮತ್ತೇನು?

ನಮ್ಮ ಸಮಾಜದಲ್ಲಿ ಶತಮಾನಗಳಿಂದಲು ನಂಬಿಕೊಂಡು ಆಚರಿಸುತ್ತ ಬಂದಿದ್ದ ಕಂದಾಚಾರಗಳನ್ನು ಬೇರು ಸಮೇತ ಕಿತ್ತೊಗೆಯುವದು ಮತ್ತು ಆ ಜಾಗದಲ್ಲಿ ವೈಚಾರಿಕತೆಯನ್ನು ತುಂಬಿಕೊಳ್ಳುವದು ನಡೆಯಲೇಬೇಕಾದ ಪ್ರಕ್ರಿಯೆ. ಆಯಾಕಾಲದಲ್ಲಿ ಅ ಪ್ರಕ್ರಿಯೆಗೆ ಚಾಲನೆ ನೀಡಿ ಯಶಸ್ವಿಯಾದವರಲ್ಲಿ ಬಸವಣ್ಣ ಮತ್ತು ಅಂಬೇಡ್ಕರರು ಪ್ರಮುಖರು. ಇವರ ಅನುಯಾಯಿಗಳೆಂದು ಹೇಳಿಕೊಳ್ಳುವ ಅನೇಕರು ಈ ನಿಟ್ಟಿನಲ್ಲಿ ಯೋಚಿಸುವುದನ್ನೇ ಮರೆತಿದ್ದಾರೆ ಎನಿಸುತ್ತದೆ. ಉದಾಹರಣೆಗೆ ಮಡೆಸ್ನಾನವನ್ನೆ ತೆಗೆದುಕೊಳ್ಳಿ ಎಂಜಲೆಲೆ ಮೇಲೆ ಉರುಳಾಡುವ ಈ ಅಮಾನವಿಯ ಕೃತ್ಯವನ್ನು ತಡೆಗಟ್ಟಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ನಿಡುಮಾಮಿಡಿ ಶ್ರೀಗಳ ನೇತೃತ್ವದಲ್ಲಿ ನೂರಾರು ಮಠಾಧೀಶರು ಹಾಗೂ ಪ್ರಗತಿಪರ ಚಿಂತಕರು ನಿರಂತರ ಹೋರಾಟವನ್ನು ಮಾಡುತ್ತಿದ್ದರೂ, ಮಡೆಸ್ನಾನ ನಿಷೇಧ ಸಾಧ್ಯವಾಗುತ್ತಿಲ್ಲ.. ಕೊನೆಗೆ ಬಸವಜಯಂತಿಯ ಕೊಡುಗೆ ಎಂದಾದರೂ ಈ ನಿಷೇದಾಜ್ಞೆ ಹೊರ ಬಂದರೆ ಸಾಕು.

ವರ್ಣವ್ಯವಸ್ಥೆಯ ಕಾಲ್ತುಳಿತಕ್ಕೆ ಸಿಕ್ಕು ದಲಿತಜನಾಂಗ ಘಾಸಿಗೊಂಡಿದೆ. ಎಂಭತ್ತರ ದಶಕದಿಂದಿಚೆಗೆ ಸ್ವಲ್ಪ ಜಾಗೃತಿಯೂ ಮೂಡಿದೆ. ಮೀಸಲಾತಿ ಮತ್ತು ಕಾನೂನಿನ ನೆರವಿನಿಂದ ತಲೆಎತ್ತುವಂತಾಗಿದೆ. ಆದರೆ ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಮನೋಭಾವನೆಯಲ್ಲಿ ಬದಲಾಗಬೇಕಲ್ಲವೇ?

ದಲಿತರಿಗೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಪ್ರಾತಿನಿಧ್ಯ ದೊರಕುತ್ತಿದ್ದಂತೆಯೇ, ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ. ದಲಿತರ ಹಸಿವು, ಅಪಮಾನ, ಅಸಮಾನತೆಗಳು ಕಡಿಮೆಯಾಗುತ್ತಿಲ್ಲ. ಅಂಬೇಡ್ಕರರು ಹೇಳಿಕೊಟ್ಟ ಸಂಘಟನೆ-ಶಿಕ್ಷಣ-ಹೋರಾಟ ಎಂಬ ಘೋಷಣೆಗಳು ಕಾರ್ಯರೂಪಕ್ಕೆ ಬರಬೇಕಾಗಿದೆ. ದಲಿತ ಸಮುದಾಯಗಳಲ್ಲಿ ಏಕತೆ ಮತ್ತು ಜಾಗೃತಿಗಳು ಗಟ್ಟಿಗೊಳ್ಳಬೇಕಾಗಿದೆ. ದಲಿತ ಸಂಘಟನೆಗಳ ವಿಘಟನೆ ದೂರವಾಗಿ ಎಲ್ಲ ಪ್ರಗತಿಪರ ಸಂಘಟನೆಗಳು ದಲಿತೋದ್ಧಾರಕ್ಕೆ ಸಕ್ರಿಯವಾಗಿ ರಚನಾತ್ಮಕವಾಗಿ ತೊಡಗಿಸಿಕೊಳ್ಳಬೇಕಾಗಿದೆ. 

ಅಲ್ಲಲ್ಲಿ ದಲಿತರಿಗೆ ಬಹಿಷ್ಕಾರ, ದೇವಾಲಯ ಪ್ರವೇಶಕ್ಕೆ ನಿಷೇಧ, ಕೆರೆಕಟ್ಟೆಗಳಿಗೆ ನಿಷೇಧ ಇನ್ನೂ ನಡೆದೆ ಇದೆ. ಕೆಲವು ಹಳ್ಳಿಗಳಲ್ಲಂತೂ ಹೊಟೇಲ್ಗಳಲ್ಲಿ ಸಾರ್ವಜನಿಕ ಶೌಚಾಲಯಗಳಲ್ಲಿ ದಲಿತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಮೇಲುವರ್ಗದವರ ಮನೆಗಳನ್ನು ದಲಿತರು ಬಾಡಿಗೆ ಪಡೆಯುವಂತಿಲ್ಲ.

ಹರಳಯ್ಯ ಮಧುವರಸರ ಮಕ್ಕಳನ್ನು ಅಂತರಜಾತಿಯ ವಿವಾಹ ಮಾಡಿಸುವ ಮೂಲಕ, ಜಾತಿ ವಿನಾಶದ ದಿವಟಿಗೆಯನ್ನು ಹಚ್ಚಿದ ಬಸವಣ್ಣನವರ ಜಯಂತಿಯ ಸಂದರ್ಭದಲ್ಲಾದರೂ ಈ ಮರ್ಯಾದಾ ಹತ್ಯೆಗಳು ಕೊನೆಗೊಳ್ಳಬೇಕು. ಮೇಲುಕೀಳೆಂಬ ಜಾತಿ ವ್ಯವಸ್ಥೆಯನ್ನು ಭದ್ರವಾಗಿ ಕಾಪಿಟ್ಟುಕೊಂಡು ಬಂದ ತಳಜಾತಿಯವರಿಗೆ ದೌರ್ಜನ್ಯ. ಅತ್ಯಾಚಾರಗಳನ್ನು ನಡೆಸುತ್ತಿರುವ ಸಮಾಜದ ಕ್ರೂರ ಶಕ್ತಿಗಳಿಗೆ ಅಂತರ್ಜಾತಿಯ ವಿವಾಹಗಳನ್ನು ಸಹಿಸಲಾಗುತ್ತಿಲ್ಲ.

ಅಂತರ್ಜಾತಿಯ ವಿವಾಹದ ಮೂಲಕ ಜಾತಿವಿನಾಶದ ಕನಸನ್ನು ಕಂಡ ಅಂಬೇಡ್ಕರ ಜಯಂತಿಯ ಆಚರಣೆಯ ಸಂದರ್ಭದಲ್ಲಿಯೇ ಮರ್ಯಾದಾ ಹತ್ಯೆಗಳು ನಡೆಯುತ್ತಿರುವುದು ಎಷ್ಟು ಸರಿ?

ಶೂಧ್ರರ ಮತ್ತು ಮಹಿಳೆಯರ ಹಕ್ಕುಗಳನ್ನೇ ನಿರಾಕರಿಸಿ, ಅವರನ್ನು ಗುಲಾಮರಂತೆ ನಡೆಸಿಕೊಂಡು ಮನುಸು್ಮೃತಿಯನ್ನು ಸುಟ್ಟುಹಾಕುವ ಮೂಲಕ ಅಂಬೇಡ್ಕರರು ಶೋಷಣೆಯ ವಿರುದ್ಧ ಸಾತ್ವಿಕ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆದರೆ ಇಂದು ಮನುಸು್ಮೃತಿಯ ಅಶಯಗಳನ್ನೇ ಹೊಂದಿದ ಭಗವದ್ಗೀತೆಯನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಮುಂದಾದ ಸಕರ್ಾರದ ಕ್ರಮವನ್ನು ಏನನ್ನಬೇಕು. ಈ ಕ್ರಮದ ವಿರುದ್ಧ ದೊಡ್ಡ ಮಟ್ಟದಲ್ಲಿ ಜನಾಂದೋಲನವೇ ನಡೆಯಬೇಕಾಗಿದೆ. ಅಂಧಾನುಕರಣಿಯನ್ನು ಬಿತ್ತಲು ಯತ್ನಿಸುತ್ತಿರುವ ಬಲಪಂಥಿಯ ಹುನ್ನಾರುಗಳನ್ನು ಬಯಲಿಗೆಳೆಯಬೇಕು.

ಬಸವ-ಭೀಮರ ವೈಚಾರಿಕತೆಯ ನೆರಳಿನಲ್ಲಿ ಮಹಿಳೆಯರ ಅದರಲ್ಲೂ ದಲಿತ ಮಹಿಳೆಯರ ಸಮಸ್ಯೆಗಳಾದ ದೇವದಾಸಿಪದ್ಧತಿ, ದೌರ್ಜನ್ಯ ಮತ್ತು ಅತ್ಯಾಚಾರ, ಬಾಲ್ಯವಿವಾಹ, ಮಧ್ಯಪಾನ, ಅನಾರೋಗ್ಯ, ಕಡುಬಡತನ, ವೇಶಾವೃತ್ತಿ, ಶಿಕ್ಷಣದ ಕೊರತೆ, ಅಲ್ಪ ಆದಾಯ ಮುಂತಾದ ಅನೇಕ ಸಮಸ್ಯೆಗಳಿಗೆ ಉತ್ತರ ಹುಡಕಬೇಕಾದ  ದರ್ದು ಇದೆ.

ಬಸವಣ್ಣ ಹಾಗೂ ಅಂಬೇಡ್ಕರರ ಪ್ರತಿಮೆಗಳಡಿಯಲ್ಲಿ ಅವರ ತತ್ವಾದರ್ಶಗಳನ್ನು ಕುರಿತು ಚಿಂತಿಸಬೇಕಾಗಿದೆ. ಆ ಮಹನಿಯರ ಜಯಂತಿಗಳನ್ನು ಆಚರಿಸುವದರೊಂದಿಗೆ ಅವರ ಚಿಂತನೆಗಳ ಅನುಷ್ಠಾನವನ್ನು ಮಾಡಬೇಕು. ಮೇಲುಕೀಳೆನ್ನದೇ ಎಲ್ಲ ಜಾತಿ ಜನಾಂಗಗಳೂ ತಮ್ಮ ಜಾತಿಯ ವಿಷವರ್ತುಲ ದಿಂದ ಹೊರಬಂದು ಜಾತಿ ವಿನಾಶದ ಗುರಿಯನ್ನು ತಲುಪಬೇಕು.

No comments:

Post a Comment