ಚಿತ್ರ ಪರಿಚಯ:- ಕೇಶವ ಮೂರ್ತಿ
ಹಸಿರಿನ ಕಾಡ ಪರದೆ. ಝುಳು ಝುಳು ಹರಿವ ನೀರಿನ ಝರಿಯ ನಿನಾದ. ತಣ್ಣನೆ ಮಂಜು. ಚಿಕ್ಕ ಕೆರೆಯಂತೆ ಕಾಣುವ ನೀರಿನ ಹಳ್ಳ. ಅದರ ನಡುವೆ ಪುರಾತನ ಕಾಲವನ್ನು ಬಿಂಬಿಸುವ ದೇವಾಲಯದಂತಿರುವ ಮನೆ. ಅಲ್ಲೊಬ್ಬ ಹಿರಿಯ ವ್ಯಕ್ತಿ, ಇವರೊಂದಿಗೆ ಆಗಷ್ಟೆ ಪ್ರಪಂಚದ ತಿಳುವಳಿಕೆಯ ಅಂಗಳಕ್ಕೆ ಅಂಬೆಗಾಲಿಡುತ್ತಿರುವ ಪುಟ್ಟ ಬಾಲಕ. ಗುರು, ಶಿಷ್ಯರಾದರೂ ಅವರಿಬ್ಬರು ಅಜ್ಜ ಮೊಮ್ಮಗನ ಹಾಗೆ.
ಆ ಪುಟ್ಟ ಮನೆಯೇ ಚಿತ್ರ ಮತ್ತು ಚಿತ್ರಕಥೆಯ ಕೇಂದ್ರ ಬಿಂದು. ನಾಲ್ಕು ಹಂತಗಳಲ್ಲಿ ಸಾಗುವ ಈ ಕಥೆಯ ಆರಂಭ ಮತ್ತು ಅಂತ್ಯ ಎರಡನ್ನೂ ನೋಡಿ ಮತ್ತೆ ಆರಂಭಕ್ಕೆ ಮುನ್ನುಡಿಯಾಗುವ ಆ ಮನೆಯೇ ನಿರ್ದೇಶಕ ಕಿಮ್ ಕಿ ಡುಕ್್ನ ಚಿತ್ರಾಲಯ. ಕೊರಿಯಾದ 'ಸ್ಪ್ರಿಂಗ್, ಸಮ್ಮರ್, ಫಾಲ್, ವಿಂಟರ್... ಆಂಡ್ ಸ್ಪ್ರಿಂಗ್್' ಚಿತ್ರ ಮನುಷ್ಯನ ಭಾವತೀರದ ದಡ.
ಕಿಮ್ ಕಿ ಡುಕ್ ನಿರ್ದೇಶನದ 17 ಚಿತ್ರಗಳ ಪೈಕಿ ಬಹುತೇಕ ಸಿನಿಮಾಗಳಲ್ಲಿ ಜೀವನ, ಮೌಲ್ಯಗಳ ಬದಲಾವಣೆ, ಆಧ್ಯಾತ್ಮಿಕತೆ, ಪ್ರೀತಿ, ಪ್ರೇಮಕ್ಕೆ ಹೆಚ್ಚು ಒತ್ತು. ಕ್ರೈಮ್್ನೊಂದಿಗೆ ಜೀವನದ ಪ್ರತಿ ಘಟ್ಟವೂ ಬೆಸೇರಿಕೊಂಡಿರುತ್ತದೆ ಎನ್ನುತ್ತ ಅವೆರಡನ್ನೂ ಅನಾವರಣಗೊಳಿಸುವುದು ಕಿಮ್್ನ ಸ್ಟೈಲ್. ಈ ಚಿತ್ರ ಕೂಡಾ ಅದೇ ಸಾಲಿಗೆ ಸೇರುತ್ತದೆ. ಒಂದೊಂದು ಕಾಲಘಟ್ಟಕ್ಕೂ ಒಂದೊಂದು ಕಥೆ ಹೇಳುತ್ತ ನಾಲ್ಕು ಹಂತಗಳ ಕಥೆಯನ್ನು ಒಂದೇ ಚಿತ್ರದಲ್ಲಿ ಸಮೀಕರಿಸಿರುವ ತಂತ್ರ ಇಲ್ಲಿದೆ.
ಮನುಷ್ಯ ಜಡ ವಸ್ತು ಅಲ್ಲ. ಆತ ನಿರಂತರವಾಗಿ ಚಲಿಸುತ್ತಲೇ ಇರುತ್ತಾನೆ. ಆ ಚಲನೆಯಲ್ಲಿ ಕಾಲಕಾಲಕ್ಕೆ ತನ್ನತನವನ್ನು ಬದಲಾಯಿಸಿಕೊಳ್ಳುತ್ತಾನೆ. ಮನುಷ್ಯನ ಇಂಥ ಬದಲಾವಣೆಗಳು ಯಾವ ಕಾಲಘಟ್ಟದಲ್ಲಿ ಹೇಗಿರುತ್ತದೆ ಎಂಬುದು ಈ ಚಿತ್ರದ ತಿರುಳು. ಬಾಲ್ಯ, ಯೌವ್ವನ, ಜೀವನ, ಸುಖ-ದುಃಖ, ಸಾವು ಹೀಗೆ ಎಲ್ಲವನ್ನು ದರ್ಶನ ಮಾಡಿಸುವ ಈ ಚಿತ್ರ ಕ್ಲೈಮ್ಯಾಕ್ಸ್್ಗೆ ಬಂದು ಮತ್ತೆ ಆರಂಭಕ್ಕೆ ತಿರುಗುತ್ತದೆ. ಅಜ್ಜನನ್ನೇ ಗುರುವಾಗಿಸಿಕೊಂಡಿರುವ ಒಬ್ಬ ಬಾಲಕ. ಅವರ ಮಾತೇ ವೇದವಾಕ್ಯ.
ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಮಗಳಿಗೆ ಚಿಕಿತ್ಸೆ ಕೊಡಿಸಲು ತಾಯಿ ಮಗಳು ಆ ಮನೆಗೆ ಬರುತ್ತಾರೆ. ಒಂದು ದಿನ ಅಲ್ಲೇ ಕಳೆದು ಮಗಳನ್ನು ಬಿಟ್ಟು ಹೋಗುತ್ತಾಳೆ ಆ ತಾಯಿ. ಈಗ ಬಾಲಕ ದೊಡ್ಡವನಾಗಿದ್ದಾನೆ. ಗುರುಗಳ ಪಾಠದ ಜೊತೆಗೆ ಅವನಿಗೆ ಇನ್ನೇನೋ ಯೋಚನೆಗಳು ತಲೆಯಲ್ಲಿ ಕಾಡುತ್ತಿವೆ. ಚಿಕಿತ್ಸೆಗಾಗಿ ಬಂದಿರುವ ಹುಡುಗಿ ಜೊತೆಗೆ ಸೇರಿಕೊಳ್ಳುತ್ತಾನೆ. ಜೀವನದ ಹೊಸ ಪುಟ ಓದಿದ ಅನುವಭ ಆತನಿಗೆ. ಅದು ತನ್ನ ಗುರುಗಳಿಗೆ ಗೊತ್ತಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಬೇಸರಗೊಂಡು ಮನೆ ಬಿಟ್ಟು ಹೋಗುತ್ತಾನೆ 'ಬಾಲಕ'. ಗುರುಗಳ ಆಶ್ರಯ ಬಿಟ್ಟ ಆತ ಈಗ ಕ್ರಿಮಿನಲ್ ಆಗಿದ್ದಾನೆ. ಹೀಗೆ ಮುಂದೆ ಒಂದೊಂದಾಗಿ ಮನುಷ್ಯನ ಜೀವನ ಘಟ್ಟಗಳು ಪ್ರೇಕ್ಷಕನಿಗೆ ದರ್ಶನವಾಗುತ್ತದೆ.
ಆರಂಭ: ತನ್ನ ಅಜ್ಜನಿಗೆ ಗೊತ್ತಾಗದ ಹಾಗೆ ತಾನೇ ದೋಣಿಯಲ್ಲಿ ದಡ ಸೇರಿ ಅಲ್ಲಿ ತನ್ನಿಷ್ಟದಂತೆ ಆಟವಾಡುತ್ತಾನೆ. ಈ ಆಟದಲ್ಲಿ ಮೀನು, ಕಪ್ಪೆ ಹಿಡಿದು ಅವುಗಳಿಗೆ ಕಲ್ಲು ಕಟ್ಟಿ ನೀರಿನಲ್ಲಿ ಬಿಟ್ಟು ಅವು ಒದ್ದಾಡುತ್ತಿದ್ದರೆ ಖುಷಿಪಡುತ್ತಾನೆ. ಹಾವಿಗೂ ಕಲ್ಲು ಕಟ್ಟುತ್ತಾನೆ. ಕಲ್ಲು ಕಟ್ಟಿಸಿಕೊಂಡ ಮೂರು ಜೀವಗಳು ಮಾತ್ರ ಮುಂದೆ ಸಾಗಲಾರದೆ ಯಾತನೆ ಅನುಭವಿಸುತ್ತವೆ. ತನ್ನ ಪಾಡಿಗೆ ತಾನು ಮತ್ತೆ ಮನೆ ಸೇರಿಕೊಳ್ಳುತ್ತಾನೆ. ಗುರು ಮಲಗಿದ್ದ ಬಾಲಕನ ಬೆನ್ನಿಗೆ ಕಲ್ಲು ಕಟ್ಟುತ್ತಾರೆ. ಬೆಳಿಗ್ಗೆ ನಡೆಯಲಾಗದೆ ಎದ್ದು ಬಿದ್ದು ಬರುವ ಬಾಲಕ 'ನಡೆಯಲಾಗುತ್ತಿಲ್ಲ. ಬೆನ್ನು ನೋವಾಗುತ್ತಿದೆ. ಕಲ್ಲು ಬಿಚ್ಚು' ಎಂದು ಗುರುಗಳನ್ನು ಕೇಳುತ್ತಾನೆ. ಗುರು ತೀಕ್ಷ್ಣವಾಗಿ ಬಾಲಕನ ಕಡೆ ನೋಡುತ್ತಾನೆ.
ಬಾಲಕ ಬೆನ್ನಿಗೆ ಕಲ್ಲನ್ನು ಹಾಗೆ ಬೆನ್ನಿಗಿಟ್ಟುಕೊಂಡು ಮೀನು, ಕಪ್ಪೆ, ಹಾವನ್ನು ಕಲ್ಲಿನಿಂದ ಬಿಡಿಸಲು ಹೋಗುತ್ತಾನೆ. ಅಷ್ಟರಲ್ಲಿ ಮೀನು ಮತ್ತು ಹಾವು ಜೀವ ಬಿಟ್ಟಿರುತ್ತವೆ. ಕಲ್ಲು ಕಟ್ಟುವಾಗ ಎಷ್ಟು ಸಂಭ್ರಮಿಸಿ ಆಟವಾಡುತ್ತಾನೋ ಅದರ ಮೂರು ಪಟ್ಟು ಬಾಲಕ ಅಳುತ್ತಾನೆ. ನಿರ್ದೇಶಕ ಜೀವದ ಮಹತ್ವ ಸಾರಲು ಬಾಲಕನ ಆಟ, ಮೂರು ಮೂಕ ಜೀವಗಳನ್ನು ಸಾಂಕೇತಿವಾಗಿ ಬಳಸಿದ್ದಾರೆ ಅಷ್ಟೆ. ನಮ್ಮ ಖುಷಿಯ ಹಿಂದೆ ಇನ್ನೊಬ್ಬರ ನೋವು ಇದೆ, ಅಲ್ಲವೇ?
'ಚಿತ್ರ ಇನ್ನು ಮುಗಿಯಿತು' ಎನ್ನುವಾಗಲೇ ಮತ್ತೆ ಆರಂಭವಾಗುತ್ತದೆ. ಹೀಗಾಗಿ ಯಾವುದೂ ಇಲ್ಲಿ ಅಂತ್ಯವಲ್ಲ. ನಿರಂತರವಾಗಿ ಚಲಿಸುವ ಜೀವನ ಚಕ್ರದ ಹಿಂದಿನ ಸತ್ಯವೂ ಕೂಡಾ ಅದೇ ಎಂಬುದನ್ನು ಪ್ರೇಕ್ಷಕನಿಗೆ ಮನದಟ್ಟು ಮಾಡುವಲ್ಲಿ ಚಿತ್ರ ಯಶಸ್ವಿಯಾಗುತ್ತದೆ. ಪ್ರತಿ ದೃಶ್ಯವನ್ನು ಯಾವುದೇ ಆಡಂಬರ ಇಲ್ಲದೆ ನಿರ್ಲಿಪ್ತವಾಗಿ ನಿರ್ದೇಶಕ ಕಟ್ಟಿಕೊಡುತ್ತಾನೆ.
ಚಿತ್ರದ ನಡುವೆ: 30 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಸಾಯಿಸಿದ್ದಾನೆಂಬ ಸುದ್ದಿ ಅಜ್ಜನ ಕಿವಿಗೆ ಬೀಳುತ್ತದೆ. ಆ ವ್ಯಕ್ತಿ ತನ್ನ ಶಿಷ್ಯನೇ! ಪೋಲೀಸರ ಆಗಮನ, ಬಂಧನ. ಕಾಲ ಮತ್ತೆ ಬದಲಾಗಿದೆ, ಅಜ್ಜ ಕಣ್ಮುಚ್ಚಿದ್ದಾನೆ. ದೇವಾಲಯದಂತಿರುವ ಮನೆ ಪಾಳು ಬಿದ್ದಿದೆ. ನೀರು ಬತ್ತಿ ಹೋಗಿದೆ. ಹಸಿರು ಕಣ್ಮರೆಯಾಗಿದೆ, ಹಕ್ಕಿ ಕೂಗುತ್ತಿಲ್ಲ, ನೀರು ಹರಿಯುತ್ತಿಲ್ಲ. ಅಲ್ಲಿಗೆ ಸ್ಪ್ರಿಂಗ್, ಸಮ್ಮರ್, ಫಾಲ್, ವಿಂಟರ್ ಮುಗಿಯಿತು. ಬಂಧನಕ್ಕೊಳಗಾದವನು ಈಗ ಬಿಡುಗಡೆಯಾಗಿದ್ದಾನೆ. ತನ್ನ ಗುರುಗಳ ಸ್ಥಾವರಕ್ಕೆ ಬಂದಿದ್ದಾನೆ. ಮನೆಗೆ ಮತ್ತೆ ಜೀವ ಕೊಡುವ ಪ್ರಯತ್ನ ಮಾಡುತ್ತಿದ್ದಾನೆ. ಮುಖ ಪರಿಚಯವಿಲ್ಲದ ಮಹಿಳೆಯೊಬ್ಬಳು ಅಲ್ಲಿಗೆ ಬಂದು ತನ್ನ ಮಗುವನ್ನು ಬಿಟ್ಟು ಹೋಗಿದ್ದಾಳೆ. ಆಕೆ ಜೀವಂತವಾಗಿಲ್ಲ. ಮಗು ಅಲ್ಲೇ ಬೆಳೆಯುತ್ತದೆ. ಮನೆ ಜೀವಕಳೆ ಪಡೆದುಕೊಳ್ಳತೊಡಗಿದೆ. ನೀರು ಹರಿಯತೊಡಗಿದೆ, ಮರ, ಗಿಡ ಚಿಗುರುತ್ತಿವೆ. ಕಾಡು ಹಸಿರಾಗುತ್ತಿದೆ. ಮತ್ತೆ 'ಸ್ಪ್ರಿಂಗ್...' ಈಗ ಕಾಲಘಟ್ಟ ಬದಲಾಗಿದೆ!
No comments:
Post a Comment