Wednesday 20 June 2012

ರಾಜ್ಯದಲ್ಲಿ ಅರ್ಧ ಬೆಲೆಗೆ ಔಷಧಿ: ಅಮೀರ್ ಎಫೆಕ್ಟ್!



ಇದೊಂದು ಸಂತೋಷದ ಸುದ್ದಿ. ರಾಜಸ್ಥಾನ ಸರ್ಕಾರದ ಮಾದರಿಯಲ್ಲಿ ಮಹಾರಾಷ್ಟ್ರ ಸರ್ಕಾರವೂ ಬಡವರಿಗೆ ಅನುಕೂಲವಗುವಂತೆ ಜನೆರಿಕ್ ಔಷಧಿಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದಂತೆ ಕರ್ನಾಟಕ ಸರ್ಕಾರವೂ ತಾನೂ ಆಸ್ಪತ್ರೆಗಳಲ್ಲಿ ಜನೆರಿಕ್ ಔಷಧಿಗಳನ್ನು ಒದಗಿಸುವ ನಿಟ್ಟಿನಲ್ಲಿ ಜನತಾ ಬಜಾರ್ ಔಷಧಿ ಅಂಗಡಿಗಳನ್ನು ಪ್ರಾರಂಭಿಸುವ ಯೋಜನೆಯನ್ನು ಇದೇ ಜೂನ್ ೨೧ರಿಂದ ವಿಕ್ಟೋರಿಯಾ ಆಸ್ಪತ್ರೆಯಿಂದ ಪ್ರಾರಂಭಿಸಲಿದೆ. 

ನಟ ಅಮೀರ್‌ಖಾನ್ ಅವರು ಸತ್ಯಮೇವ ಜನತೆ ಕಾರ್ಯಕ್ರಮದ ಮೂಲಕ ಬಡಜನತೆಗೆ ಸುಲಭ ದರಗಳಲಿ ಎಟುಕುವ ಜರೆರಿಕ್ ಔಷಧಿಗಳನ್ನು ಒದಗಿಸಲಾರದ ಸರ್ಕಾರಗಳ ಜಾಣಕುರುಡು ನೀತಿಯನ್ನು ಬಯಲಿಗೆಳೆದಿದ್ದರು. ಈ ನಿಟ್ಟಿನಲ್ಲಿ ರಾಜಾಸ್ತಾನ ಸರ್ಕಾರ ಮಾದರಿಯಾಗಿ ನಿಂತಿದ್ದನ್ನು ತಿಳಿಸುತ್ತಾ ಅದೇ ಮಾದರಿಯನ್ನು ಎಲ್ಲಾ ಸರ್ಕಾರಗಳೂ ಅನುಸರಿವುವಂತೆ ವಿನಂತಿಸಿಕೊಂಡಿದ್ದರು. ಪರಿಣಾಮವಾಗಿ ಮಹಾರಾಷ್ಟ್ರ ಸರ್ಕಾರವು ತಾನೂ ಜನೆರಿಕ್ ಔಷಧಿಗಳನ್ನು ಕಡಿಮೆ ಬೆಲೆಯಲ್ಲಿ ವಿತರಿಸುವ ಕ್ರಮಕ್ಕೆ ಮುದಮಾಗಿತ್ತು. ಈಗ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವ ಸಚಿವ ಎಸ್.ಎ.ರಾಮದಾಸ್ ಕೂಡಾ ಇಂತಹ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಎಲ್ಲಾ ಸರ್ಕಾರಿ ವೈದ್ಯರೂ ಸಹ ಜನೆರಿಕ್ ಔಷಧಗಳನ್ನೇ ಶಿಫಾರಸ್ಸು ಮಾಡುವ ಕುರಿತು ಆದೇಶ ಹೊರಡಿಸುವ ಮಾತನ್ನೂ ಸಚಿವರು ಹೇಳಿದ್ದಾರೆ. ಈ ಕೆಲಸ ಮೊದಲು ಆಗಬೇಕಿದೆ. ಸರ್ಕಾರಿ ವೈದ್ಯರುಗಳೇ ಏಕೆ ಎಲ್ಲಾ ವೈದ್ಯರೂ ಸಹ ಔಷಧಿ ಕಂಪನಿಗಳ ಆಮಿಷ ಆಸೆಗಳಿಂದ ಹೊರಬಂದು ನಿವಾದ ಅರ್ಥದಲ್ಲಿ 'ವೈದ್ಯೋನಾರಾಯಣ ಹರಿ'ಗಳಾಗಬೇಕಿದೆ. ಆಯ್ದ ಕೆಲವೇ ಆಸ್ಪತ್ರೆಗಳಲ್ಲಿ ಮಾತ್ರ ಈ ವ್ಯವಸ್ಥೆಗೆ ಅವರು ಮುದಾಗಿರುವುದು ಸರಿಯಲ್ಲ. ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲೂ ಈ ಪ್ರಯೋಜನ ಬಡ ರೋಗಿಗಳಿಗೆ ದಕ್ಕುವಂತಾಗಬೇಕು. 

ಏನೇ ಇರಲಿ. ಅಮೀರ್‌ಖಾನ್ ಕಾರ್ಯಕ್ರಮದ ಬಗ್ಗೆ ಮನಬಂದಂತೆ ಟೀಕಿಸಿ, ಆತನ ಉದ್ದೇಶವನ್ನು ಸಂಶಯದಿಂದ ನೋಡುವಂತೆ ಮಾಡಲು ಯತ್ನಿಸಿದ್ದವರಿಗೆ ಉತ್ತರ ಸಿಗುತ್ತಿದೆ. 

ಕೊನೆ ಚುಟುಕು: ವೈದ್ಯರ ಕುರಿತ ಅಮೀರ್ ಕಾರ್ಯಕ್ರಮಕ್ಕೆ ಅನೇಕ ಅಪ್ರಮಾಣಿಕ ವೈದ್ಯರೂ ತೀರಾ ಆಕ್ರೋಶ ವ್ಯಕ್ತಪಡಿಸಿ ಅಮೀರ್ ಕ್ಷಮೆ ಯಾಚಿಸಬೇಕು ಎಂದೆಲ್ಲಾ ಎಗರಾಡಿದ್ದರು. ಆದರೆ ಈ ಕುರಿತು ಸಂಸತ್ತಿನಲ್ಲಿ ಮಾತನಾಡಲು ಗುರುವಾರ ಅಮೀರ್‌ಖಾನ್‌ಗೆ ಅವಕಾಶ ಕಲಿಸಲಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ.


ಸತ್ಯ ಮೇವ ಜಯತೇ!


Tuesday 12 June 2012

ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಬೇಕೋ/ಬೇಡ್ವೋ? ಸಮಾನ ಚರ್ಚೆ

ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಬೇಕೋ/ಬೇಡ್ವೋ? ಈ ವಿಷಯದ ಕುರಿತಾಗಿ ಸಮಾನದಲ್ಲಿ ನಡೆದ ಚರ್ಚೆಯನ್ನು ಇಲ್ಲಿ ಲಗತ್ತಿಸಲಾಗಿದೆ. ಎನ್ ಎ ಇಸ್ಮಾಯಿಲ್ ಎತ್ತಿರುವ ಪ್ರಶ್ನೆಗೆ ನಡೆದ ಚರ್ಚೆಗಳು ಈ ಕೆಳಗಿನಂತಿವೆ
-ಸಮಾನ.


ಎನ್ ಎ ಇಸ್ಮಾಯಿಲ್:-
ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದನ್ನು ಬೇಡ ಎನ್ನುವುದಕ್ಕೆ ಕನ್ನಡದ ಅನೇಕ ಬುದ್ಧಿಜೀವಿಗಳು ಒಂದಾಗಿದ್ದಾರೆ. ಸದ್ಯದ ಪ್ರವೇಶಾನುಪಾತವನ್ನು ನೋಡಿದರೆ ಖಾಸಗಿ ಶಾಲೆಗಳಿಗೆ ಹೋಗುವವರ ಸಂಖ್ಯೆಯೇ ಹೆಚ್ಚು. ಅಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮವಿದೆ. ಈಗ ಸರ್ಕಾರಿ ಶಾಲೆಗೆ ಹೋಗುತ್ತಿರುವವರು ಗ್ರಾಮೀಣ ಪ್ರದೇಶದವರು ಮತ್ತು ಪಟ್ಟಣ ಮತ್ತು ನಗರಗಳ ಬಡವರು. ನಮ್ಮ ಕನ್ನಡಾಭಿಮಾನಿ ಬುದ್ಧಿಜೀವಿಗಳು ಉದ್ದೇಶ ಪೂರ್ವಕವಾಗಿ ಬಡವರು ಇಂಗ್ಲಿಷ್ ಕಲಿಯುವುದನ್ನು ತಡೆಯುತ್ತಿದ್ದಾರೆ ಅನ್ನಿಸುತ್ತಿಲ್ಲವೇ???

ರೇಣುಕಾ ಮಂಜುನಾಥ್
ಉದ್ದೇಶ ಪೂರ್ವಕವಾಗಿ ತಡೆಯೊಲ್ಲ,ಬುದ್ದಿಜೇವಿಗಳು ಎಂದು ಬ್ರಾಂಡ್ ಆಗಿರುವವರಿಗೆ ಆಗಾಗ ಜನರ ಮುಂದೆ ಕಾಣಿಸಿಕೊಳ್ಳಲಿಕ್ಕೆ ಸಿಕ್ಕ ಅವಕಾಶ ಅಥವಾ ಕೊಡುವ ಅವಕಾಶ! ಖಾಸಗಿ ಶಾಲೆಯವರ್ಯಾರು ಇವರನ್ನು ಬುದ್ದಿಜೀವಿಗಳು ಎಂದು ಅಟ್ಟಕೇರಿಸೊಲ್ಲ.ಪಾಪ....ಈ ಸರ್ಕಾರಿ...ಈ ಕನ್ನಡ ಮಾಧ್ಯಮ...ಅನ್ನೊ ವಿಚಾರಗಳೆ ಇವರ 'ಬುದ್ದಿಜೀವಿ ರೋಲ್' ಅನ್ನು ಜೀವಂತವಾಗಿರಿಸುತ್ತದೆ.ಯಾರು ಏನ್ ಬಡ್ಕೊಂಡ್ರು ಗ್ರೌಂಡ್ ರಿಯಾಲಿಟಿಗಳೆ ವಿಷಯದ ದಿಕ್ಕನ್ನು ನಿರ್ಧರಿಸುತ್ತವೆ!!ಓಮ್ಮೆ ತೇಜಸ್ವಿ ಹೇಳಿದ್ದರು, ನಾನು ಕುಪ್ಪಳ್ಳಿ ಶಿಬಿರಾರ್ಥಿಯಾಗಿ ಹೋಗಿದ್ದಾಗ.ನೋಡಿ CET-Engg- Medical ಇದಕ್ಯಾಕೆ ಜನ ಗಂಟು ಬೀಳ್ತಾರೆ?ಅದೇ ಬದುಕಾ??ಅಂತ ಮಾತಾಡೋದು ಸುಲಭ ... ಆದರೆ ನಮ್ಮ ಮಧ್ಯಮ ವರ್ಗದ ಪೋಷಕರಿಗೆ ಗೊತ್ತು...ಅದರ ಹಿಂದೆ ದುಡ್ಡಿದೆ ಹಾಗು ಅದು ನಮ್ಮ ಮುಂದಿನ ಬದುಕನ್ನು ಹಸನಾಗಿಸುತ್ತೆ ಅಂತ.ನಮ್ಮಂತವರಿಗೆ there are still serious issues to be addressed ಅಂತನಿಸುತ್ತೆ!!!!

ಆನಂದ್
ಸಮಾನ ಶಿಕ್ಷಣದ ಗುರಿಗೆ ಮಾರಕವಾಗಿರುವ ಇಂದಿನ ಶಿಕ್ಷಣ ವ್ಯವಸ್ಥೆ... ವೈಜ್ಞಾನಿಕವಾದ ದಿಟಗಳಿಗೆ ವಿರುದ್ಧವಾಗಿರುವ ಪರಭಾಷಾ ಮಾಧ್ಯಮದಲ್ಲಿನ ಕಲಿಕೆಗೆ ಒತ್ತು ನೀಡಿರುವ ಇಂದಿನ ವ್ಯವಸ್ಥೆ... ಭಾಷೆಯ ಕಲಿಕೆಗೂ, ಕಲಿಕಾ ಮಾಧ್ಯಮಕ್ಕೂ ವ್ಯತ್ಯಾಸ ಮರೆಮಾಡುತ್ತಿರುವ, ಕಲಿಕಾ ಮಾಧ್ಯಮವನ್ನೇ ಇಂಗ್ಲೀಶ್ ಮಾಡಿಬಿಟ್ಟರೆ ಜಗ ಗೆಲ್ಲಬಹುದು ಎನ್ನುವ ಭ್ರಮೆಯನ್ನೇ ತಮ್ಮ ಶಿಕ್ಷಣ ಸಂಸ್ಥೆಗಳ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳ ನಡುವೆ ಸರ್ಕಾರವೊಂದು ಯಾವ ದಿಕ್ಕಿನಲ್ಲಿ ಸಾಗಬೇಕು? ಸರಿಯಿಲ್ಲದ ವ್ಯವಸ್ಥೆಯನ್ನು ತಾನೇ ಬೆನ್ನುಹತ್ತಿ ಹೋಗಬೇಕೋ? ಸರಿಮಾಡುವ ದಿಕ್ಕಿನೆಡೆಗೆ ಎಡರು ತೊಡರುಗಳನ್ನು ಮೆಟ್ಟುತ್ತಾ ಸಾಗಬೇಕೋ? ಈ ಬಗ್ಗೆ ಯಾವ ಬುದ್ಧಿಜೀವಿಯಾದರೂ ಅಭಿಪ್ರಾಯ ಕೊಡಬೇಕೇ? ಸಮಾಜದ ಹಿತ, ಕನ್ನಡಿಗರ ಭವಿಶ್ಯ ರೂಪಿಸುವ ಹೊಣೆ ಹೊತ್ತಿರುವ ಸರ್ಕಾರ ಯಾವ ನಿಲುವು ಹೊಂದಿರಬೇಕು ಎಂದೆಲ್ಲಾ ನೋಡಿದರೆ.... ಈಗಿನ ಸರ್ಕಾರದ ನಿಲುವು ಒಪ್ಪಲಾಗದ್ದು! ದೀರ್ಘಾವಧಿಯಲ್ಲಿ ಇದು ನಾಡಿನ ಸಾಮಾನ್ಯ ಕನ್ನಡಿಗರೆಲ್ಲರ ಹಿತಕ್ಕೆ ಮಾರಕವಾದದ್ದು...
ಬೇರೆ ರೀತಿಯಾಗಿ ವಾದ ತಿರುಗದಿರಲಿ ಅಂತ ಹೇಳ್ತಿದೀನಿ: ನನಗೆ ಇಬ್ಬರು ಗಂಡುಮಕ್ಕಳು. ಇಬ್ಬರೂ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು! ಬೆಂಗಳೂರಿನಲ್ಲಿರೋ ನಾವು ಕನ್ನಡ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸಿದ್ದು ಯಾವುದೇ ಆದರ್ಶಕ್ಕಾಗಿಯಲ್ಲ. ಮೊದಲ ಕಲಿಕೆ ತಾಯ್ನುಡಿಯಲ್ಲಿ ಅತ್ಯುತ್ತಮ ಎನ್ನುವ ಕಾರಣದಿಂದಲೇ...

ಮಹದೇವ್  ಹಡಪದ್
ಆಮರಣಾಂತ ಉಪವಾಸದ ಬೆದರಿಕೆ ಹಾಕೋರು ತುಳಸಿ ಕಟ್ಟೆಗೆ ಸುತ್ತ ಹಾಕೋರು ಒಂದೇ ಥರ ಕಾಣ್ತಾರೆ. ನನಗಂತು ಇಸ್ಮಾಯಿಲ್ ಸರ್ ಅನಿಸಿಕೆ ಸರಿಯಾಗಿದೆ.

ಆನಂದ್
ಕಲಿಕಾ ಮಾಧ್ಯಮ ಮತ್ತು ಭಾಷಾ ಕಲಿಕೆ ಎರಡನ್ನೂ ಬೆರೆಸಿ ನೋಡುವುದರ ಅಗತ್ಯವಿಲ್ಲ. ಇಂಗ್ಲೀಶನ್ನು ಒಂದು ಭಾಷೆಯಾಗಿ ಕಲಿಸೋದು ಖಂಡಿತಾ ತಪ್ಪಲ್ಲಾ... ಯಾವ ವಯಸ್ಸಿನಿಂದ ಕಲಿಸಬೇಕೆನ್ನುವುದನ್ನು ಸರ್ಕಾರ, ಈಗಾಗಲೇ ಇರುವ ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ತೀರ್ಮಾನಿಸುವುದು ಸರಿಯಾದ ವಿಧಾನ. ಇನ್ನು ಕನ್ನಡಿಗರಿಗೆ ಇಂಗ್ಲೀಶ್ ಮಾಧ್ಯಮವೇ ಅತ್ಯುತ್ತಮವೆನ್ನುವುದಕ್ಕೆ ಯಾವ ವೈಜ್ಞಾನಿಕ ಅಧ್ಯಯನದ ತಳಹದಿ ಇದೆ ಎನ್ನುವುದನ್ನು ಸರ್ಕಾರ ಘೋಷಿಸಲಿ. ಅದು ಪರಭಾಷಾ ಮಾಧ್ಯಮದ ಪರವಾಗಿದ್ದರೆ ಧೈರ್ಯವಾಗಿಯೇ ಇಂತಹ ಸಾಬೀತಾದ ವರದಿಗಳ/ ಅಧ್ಯಯನಗಳ ಆಧಾರದ ಮೇರೆಗೆ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದ್ದೇವೆ ಎನ್ನಲಿ.

ಹರ್ಷಕುಮಾರ್ ಕುಗ್ವೆ
ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದೇನೋ ಸರಿ ಅಂತಾನೇ ಹೇಳೋಣ. ಆದರೆ ಯಾರು ಕಲಿಸ್ತಾರೆ? ನಗರಗಳ ಖಾಸಗಿ ಕಾನ್ವೆಂಟ್ ಗಳಲ್ಲಿ ಪಾಠ ಮಾಡೋರಿಗೇ ಇಂಗ್ಲಿಷ್ ನೆಟ್ಟಗೆ ಬರಲ್ಲ. ಅಂತಾದ್ರಲ್ಲಿ ಸರ್ಕಾರ ಅದೆಂಗೆ ದಿಡೀರ್ ಅಂತ ಸಾವಿರಾರು ಜನ ಇಂಗ್ಲಿಷ್ ನಾಗೆ ಪಾಠ ಮಾಡೋರನ್ನ ತರ್ತದೆ ಇದು ಮೊದಲ ಪ್ರಶ್ನೆ. ಇವತ್ತಿಗೂ ಬಹಳಷ್ಟು ಹಳ್ಳಿಗಳಲ್ಲಿ ನಾಲ್ಕೈದು ತರಗತಿಗಳಿಗೆ ಪಾಠ ಮಾಡೋದು ಒಬ್ಬನೇ ಶಿಕ್ಷಕ. ಅಗತ್ಯ ಕೊಠಡಿಗಳೂ ಇಲ್ಲ. ಇಂತಾದ್ರಲ್ಲಿ ಅವರಿಗೆ ಕನ್ನೆಡದಲ್ಲಿ ಪಾಠ ಮಾಡೋದೇ ಕಷ್ಟ. ಮತ್ತೆ ಇಂಗ್ಲಿಷಲ್ಲಿ ಪಾಠ ಮಾಡಿ ಅಂದರೆ ಅದೆಂಗೆ ಮಾಡ್ತಾರೆ? ಬಡ, ದಲಿತ ವಿದ್ಯಾರ್ಥಿಗಳು ಇಂಗ್ಲಿಷ್ ಕಲೀಬೇಕು ಅನ್ನೋದನ್ನು ನಾನೂ ಒಪ್ತೀನಿ. ಆದರೆ ಇವತ್ತಿನ ನಮ್ಮ ಶಿಕ್ಷಣದ ಪದ್ಧತಿಗಳಲ್ಲಿ ಅದು ಅಸಾಧ್ಯದ ಮಾತು. ಅಷ್ಟಕ್ಕೂ ಹಳ್ಳಿಗಳ ವಾತಾವರಣವೇ ಇಂಗ್ಲಿಷಿಗೆ ಪೂರಕವಾಗಿರುವುದಲ್ಲ. ಅತ್ತ ಇಂಗ್ಲಿಷೂ ಅಲ್ಲದೆ ಇತ್ತ ಕನ್ನೆವೂ ಅಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ನಮ್ಮ ವಿದ್ಯಾರ್ಥಿಗಳು ನೇತಾಡೋ ಸ್ಥಿತಿ ಬಂದುಬಿಡುತ್ತಾ ಅಂತ ಒಂದು ಆತಂಕ ನಂಗೆ. ಅದಕ್ಕೆ 7 ನೇ ಕ್ಲಾಸು ಮುಗಿಯೋವರೆಗೂ ಮಕ್ಕಳಿಗೆ ಒಳ್ಳೇ ರೀತಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಸಿಗಲಿ. ಆದರೆ ಅಗತ್ಯವಾಗಿ ಒಂದನೇ ತರಗತಿಯಿಂದಲೂ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಲಿ. ಎಂಟನೇ ತರಗತಿಯಿಂದ ಮುಂದುಕ್ಕೆ ಇಂಗ್ಲಿಷ್ ಮಾಧ್ಯಮ ಕಲಿಸಲಿ.
ಜಗತ್ತಿನ ಎಲ್ಲಾ ಶಿಕ್ಷಣ ತಜ್ಞರೂ ಮಾತೃಭಾಷಾ ಶಿಕ್ಷಣವನ್ನೇ ಎತ್ತಿ ಹಿಡಿಯುತ್ತಾರೆ. ಅದುವೇ ಮಗುವನ್ನು ಮತ್ತು ಅದರ ಭಾಷೆಗೆ ಸಹಜ ಸಂಬಂಧ ಕಲ್ಪಿಸಿ ಆ ಮಗುವಿನ ಬೆಳವಣೀಗೆಗೆ ಸಹಾಯಕ. ಆದರೆ ಸಾಹಿತಿ ಬುದ್ದೀಜೀವಿಗಳು ಇಂಗ್ಲಿಷ್ ಕಲಿಕೆ ವಿರೋಧಿಸಿದೊಡನೆ ದಲಿತ ಸಮುದಾಯಗಳು ವಿರೋಧಿಸಲು ಇರುವ ಸಕಾರಣಗಳನ್ನೂ ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಇಂಗ್ಲಿಷ್ ಎನ್ನುವುದು ಮುಂದುವರಿದವರು ಮುಂದುವರಿಯಲು ಇರುವ ಒಂದು ಸಾಧನವೇ ಆಗಿರುವಾಗ ಅದನ್ನು ದಲಿತರಿಗೆ ನಿರಾಕರಿಸುವ ಹುನ್ನಾರವಿದು ಎಂದು ಅನ್ನಿಸುವುದು ತೀರಾ ಸಹಜ. ಹೀಗಾಗಿ ಎಲ್ಲಾ ಮುಂದುವರಿದವರಂತೆ ದಲಿತರೂ ಬಡವರೂ ಇಂಗ್ಲಿಷ್ ನ್ನು ಒಂದು ಭಾಷೆಯಾಗಿ ಕಲಿಯುವ ಅವಕಾಶ ಇರಬೇಕು. ಆದರೆ ಇವೆಲ್ಲವನ್ನು ನಾವು ನೀತಿ ನಿರೂಪಣೆಗಳ ಮಟ್ಟದಲ್ಲಿ ಮಾತನಾಡುವುದಕ್ಕಿಂತ ವಸ್ತುಸ್ಥಿತಿಗಳ ಮಟ್ಟದಲ್ಲಿ ಮಾತನಾಡುವುದು ಅವಶ್ಯಕ. 

ಎನ್ ಎ ಇಸ್ಮಾಯಿಲ್
ಪ್ರಿಯ Harshakumar Kugwe ಈ ಮಾತೃಭಾಷಾ ಶಿಕ್ಷಣ ಎಂದರೇನು? ತುಳವರಿಗೆ, ಬ್ಯಾರಿಗಳಿಗೆ, ಕೊಡವರಿಗೆ, ಕೊಂಕಣಿಗಳಿಗೆ ಅವರವರ ಭಾಷೆಯಲ್ಲಿ ಶಿಕ್ಷಣ ಕೊಡಬೇಕು ತಾನೇ? ಅದು ಸಾಧ್ಯವೇ? ಅವರು ತಮ್ಮದಲ್ಲದ ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಸರಿ ಎನ್ನುವುದಾದರೆ ಇಂಗ್ಲಿಷ್‌ನಲ್ಲೂ ಕಲಿಯಬಹುದಲ್ಲವೇ? ಮಾತೃಭಾಷೆ ಎನ್ನುವುದಕ್ಕಿಂತ ಮಗು ಇರುವ ವಾತಾವರಣ ಭಾಷೆ ಎನ್ನುವುದು ಹೆಚ್ಚು ಸರಿ ಎನ್ನಬಹುದೇನೋ. Anand Enguru ಸರ್ಕಾರ ಇಂಗ್ಲಿಷ್ ಮಾಧ್ಯಮ ಬೇಕು ಎಂದು ಹೇಳುತ್ತಿರುವುದರ ಹಿಂದಿರುವ ಅಧ್ಯಯನಗಳಿವೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಇಂಗ್ಲಿಷ್ ಶಾಲೆಗಳಿಗೆ ಹೋಗುತ್ತಿರುವ ಮಕ್ಕಳನ್ನು ಆಸೆಗಣ್ಣಿನಿಂದ ನೋಡುತ್ತಾ ತಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪರಿತಪಿಸುತ್ತಿರುವ ಸಾಮಾನ್ಯರಂತೂ ಸರ್ಕಾರದ ನಿರ್ಧಾರದ ಹಿಂದಿದ್ದಾರೆ. ಏಕೆಂದರೆ ಅವರೆಲ್ಲಾ ಅಧಿಕಾರಕ್ಕೇರ ಬಯಸುವವರಿಗೆ ಓಟುಗಳು.

ರೇಣುಕಾ ಮಂಜುನಾಥ್
ಇಸ್ಮಾಯಿಲ್ ಅವರು ಹೇಳುವುದು ಸರಿ! ಇನ್ನು ನನಗೆ ಹೇಳಬೇಕೆನಿಸಿರುವುದು, ಮಾತೃಭಾಷೆ ಉಳಿಸಿಕೊಳ್ಳುವುದೇನಿದ್ದರೂ ಅವರವರ ಮಾತೃವಲಯದಲ್ಲಿ ಕಾಳಜಿ ಇರುವವರು ಮಾಡಿಕೊಳ್ಳಬೇಕಿದೆ!now a days, anybody to develop and grow globally is not a big issue...since everything is very handy, if you are average intelligent you can achieve a lot.! that way, we the parents are comfortable and we are in 'no confusion' zone! local ಆಗಿ ಬೆಳೆಯಬೇಕೆಂದರೆ ನಾವು ನಮ್ಮ ಮಕ್ಕಳನ್ನು ಯಾರೊಡನೆ ಸ್ಪರ್ಧಿಸಲು ಬಿಡಬೇಕೆಂಬುದು ಬಹು ಮುಖ್ಯವಾಗುತ್ತದೆ! ಇಲ್ಲಿ might is right! real estate, political field, cinema...ಹೀಗೆ! ಹಾಗಾಗಿ ನಾವು ನಮ್ಮ ಮಕ್ಕಳಿಗಾಗಿ , ಭಾಷೆಯನ್ನು ಬದಿಗಿಟ್ಟು survivalಗಾಗಿ ಹೆಣಗಬೇಕಾದ ಪರಿಸ್ಥಿತಿ! global platform nalli ಸಶಕ್ತ ಭಾಷೆಗಷ್ಟೇ ಉಳಿಯುವ...ಉಳಿಸುವ ಸಾಮರ್ಥ್ಯ! ಹಾಗಾಗಿ ಇಂಗ್ಲೀಷ್ ಮೇಲುಗೈ ಸಾಧಿಸಿದ್ದರೆ ಆಶ್ಚರ್ಯವಿಲ್ಲ! ಇನ್ನು ಮುಂದೆ ನಮ್ಮ ಭಾಷೆ ಉಳಿಸಿಕೊಳ್ಳುವುದೆಂದರೆ ಅದು ನಮ್ಮ ವೈಯಕ್ತಿಕ ಕಾಳಜಿಯಾಗಿಬಿಡುವ ಸಾಧ್ಯತೆಯಿದೆ! ಲಿಪಿಯಿಲ್ಲದ ತುಳು, ಕೊಂಕಣಿ, ಕೊಡವ ಭಾಷೆಗಳು ಜೀವಂತವಾಗಿದ್ದಾವೆಂದಮೇಲೆ...ಕನ್ನಡಕ್ಕೆ ಯಾವ ತೊಂದರೆಯೂ ಇಲ್ಲ! ಅಮ್ಮಂದಿರ ಸಾಲಿನಲ್ಲಿ ನಿಲ್ಲುವ ನಮ್ಮಂತಹವರಿಗೆ , ನಮ್ಮ ಮಕ್ಕಳು ಸ್ಥಳೀಯ ದೈತ್ಯರಾಗಿರುವ ರಿಯಲ್ ಎಸ್ಟೇಟ್ ಮುಂತಾದ ಕುಳರನ್ನು ನೋಡಿ ನಮ್ಮ 'ಓದು' ಯಾವುದಕ್ಕೂ ಸಲ್ಲುತ್ತಿಲ್ಲ ಎಂದು 'ಕೀಳರಿಮೆ" ಅನುಭವಿಸುವುದಕ್ಕಿಂತ....ಭಾಷೆ ಯಾವುದಾದರೇನು .....ನಡೆಮುಂದೆ...ನಡೆಮುಂದೆ ಎನ್ನುತ್ತಾ ಮುನ್ನುಗ್ಗಬೇಕಿದೆ! ಬಾಷೆ ಉಳಿಸುವುದು ಸಮುದಾಯದ , ಸಮಾಜದ , ಸರ್ಕಾರದ ಜವಾಬ್ದಾರಿಯಾದಾಗ ಅದಕ್ಕೆ ಬೇರೆ ಆಯಾಮಗಳಲ್ಲಿ ಪ್ರಯತ್ನಿಸಬೇಕಿದೆ! ಶಿಕ್ಷಣದ ಹೊರತಾಗಿ....ಸಾಂಸ್ಕ್ೃತಿಕ. ಸಾಮಾಜಿಕ, ಕೌಟುಂಬಿಕ, ಧಾರ್ಮಿಕ, ಸಿನಿಮಾ, ನಾಟಕ, ...ಮುಂತಾದ ನೆಲೆಯಲ್ಲಿ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕಿದೆ!

ಆನಂದ್
ಪ್ರಿಯ N A Mahamed Ismail ಸರ್,
ನೀವು ಹೇಳುವಂತೆ ಕೊಡವ, ತುಳು, ಬ್ಯಾರಿ ಎಲ್ಲರಿಗೂ ಅವರವರ ತಾಯ್ನುಡಿಯಲ್ಲಿ ಶಿಕ್ಷಣ ಸಿಗಬೇಕಾದ್ದು ಸರಿಯಾದದ್ದು. ಹಾಗೆ ಕೊಡುವ ಏರ್ಪಾಟು ಮಾಡಬೇಕಾದ್ದು ಸರ್ಕಾರದ ಸಹಯೋಗದೊಂದಿಗೆ ಆಯಾ ಭಾಷಿಕ ಜನರು ಮಾತ್ರವೇ. ಇಂದು ಹಾಗೆ ಕೊಡಲಾಗುತ್ತಿಲ್ಲವಾದರೆ ಕೊಡುವ ದಿಕ್ಕಿನಲ್ಲಿ ಕೆಲಸಗಳಾಗಬೇಕು. ಅದಕ್ಕೆ ವಿಪರೀತವಾಗಿ ಈಗ ಕನ್ನಡದಲ್ಲಿರುವ ಏರ್ಪಾಟನ್ನೂ ಕೈಬಿದುವುದಲ್ಲ. ಜನರ ಬಯಕೆಗಳು ಇಂಗ್ಲೀಶ್ ಮಾಧ್ಯಮದ ಕಡೆಗಿದ್ದರೆ ಅದಕ್ಕೆ ಸರ್ಕಾರ ಕನ್ನಡದ ವ್ಯವಸ್ಥೆಯನ್ನು ಅಂಥಾ ಭರವಸೆ ಹುಟ್ಟಿಸುವ ಬಗೆಯಲ್ಲಿ ಕಟ್ಟಿಲ್ಲದಿರುವುದು ಕಾರಣ. ಈ ದಿಕ್ಕಿನಲ್ಲಿ ಪಾಲಿಸಿ ರೂಪಿಸಬೇಕಾದ ಹೊಣೆಗಾರಿಕೆ ಸರ್ಕಾರದ್ದು. ಅಂದರೆ ಗುಣಮಟ್ಟದ ಕಾರಣದಿಂದಾಗಿ ಕನ್ನಡ ಜನತೆ ಕನ್ನಡ ಮಾಧ್ಯಮ ಅಪ್ಪುವಮ್ತೆ ಮಾಡಬೇಕಾದ sarkaara ಇದನ್ನು ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ಸರಿಯಲ್ಲ. ತನ್ನ ನಿಲುವಿಗೆ/ ಕ್ರಮಕ್ಕೆ ವೈಜ್ಞಾನಿಕ ಅಧ್ಯಯನದ ಬೆಂಬಲ ಇದ್ದಲ್ಲಿ ಯಾಕೆ ಆರನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ? ಒಂದನೇ ತರಗತಿಯಿಂದಲೇ ಆರಂಭಿಸಲಿ.. ನಮಗೇನು? ಒಟ್ಟಲ್ಲಿ ಕನ್ನಡಿಗರ ಏಳಿಗೆ ಮುಖ್ಯ!

ಮುಂದುವರಿದು............................


ಎನ್ ಎ ಇಸ್ಮಾಯಿಲ್
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಪರಿಚಯಿಸುವ ಪ್ರಸ್ತಾಪಕ್ಕೆ ಭಾವುಕವಾಗಿ ಪ್ರತಿಕ್ರಿಯಿಸುವ ನಾವೇಕೆ ಸಾಮಾನ್ಯ ಶಾಲೆಗಳು ಮತ್ತು ಸಮಾನ ಶಿಕ್ಷಣದ ಬೇಡಿಕೆಯನ್ನು ಇಷ್ಟೇ ಬಲವಾಗಿ ಮಂಡಿಸುತ್ತಿಲ್ಲ. ಇದು ಕನ್ನಡ ಮಾಧ್ಯಮದ ಪರವಾಗಿ ಮಾತನಾಡುತ್ತಿರುವವರು ಬಡವರು ಕಲಿಯುವ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಉಳಿಸಲು ಹೊರಟವರು ಎಂಬ ಭಾವನೆಗೆ ಕಾರಣವಾಗುತ್ತಿದೆ. ಸಾಮಾಜಿಕ/ಆರ್ಥಿಕ ಅಸಮಾನತೆ ಎಂಬುದು ಒಂದು ವಾಸ್ತವ. ಹಾಗೆಯೇ ನಗರದ ಮಧ್ಯಮ ವರ್ಗ(ಅಪವಾದಗಳನ್ನು ಹೊರತು ಪಡಿಸಿ) ತಮ್ಮ ಮಕ್ಕಳನ್ನು 'ಒಳ್ಳೆಯ ಶಾಲೆ'ಗಳಿಗೆ (ಸರಿಯಾಗಿ ಇಂಗ್ಲಿಷ್ ಕಲಿಸುವ ಖಾಸಗಿ ಶಾಲೆಗಳಿಗೆ)ಸೇರಿಸುತ್ತಿದೆ ಎಂಬುದು ವಾಸ್ತವವೇ. ಈ ಎರಡೂ ವಾಸ್ತವಗಳನ್ನು ದೃಷ್ಟಿಯಲ್ಲಿಟ್ಟುಕೊಂಡರೆ 'ಕನ್ನಡ ಮಾಧ್ಯಮ'ಕ್ಕಾಗಿ ಮಂಡಿಸುವ ವಾದವು ಸಮಾನ ಶಿಕ್ಷಣವನ್ನು ನೆಲೆಗಟ್ಟಾಗಿಸಿಕೊಳ್ಳದೇ ಹೋದರೆ ಅದು ಉಳ್ಳವರ ಆಷಾಡಭೂತಿತನದಂತೆ ಬಡವರಿಗೆ/ದಲಿತರಿಗೆ ಕಾಣಿಸುವುದು ಸಹಜವಲ್ಲವೇ?

ಆನಂದ್
ಪ್ರಿಯ N A Mahamed Ismail ಸಾರ್,
ನಿಮ್ಮ ಮಾತಿಗೆ ನನ್ನ ಪೂರ್ಣ ಒಪ್ಪಿಗೆ. ಸಮಾನ ಶಿಕ್ಷಣ ಮತ್ತು ಕನ್ನಡ ಮಾಧ್ಯಮದ ಶಿಕ್ಷಣಗಳೆರಡೂ ನಮಗೆ ಮುಖ್ಯ. ಈ ವಿಷಯವಾಗಿ ಅನಂತಮೂರ್ತಿಯವರ ವಿಚಾರಗಳು ಆಸಕ್ತಿಕರವಾಗಿವೆ. ನನ್ನ ಮಾತೇನೆಂದರೆ ಸರ್ಕಾರದ ಹೊಣೆಗಾರಿಕೆ ಈಗ ಈ ಆಶಯಗಳಿಗೆ ವಿರುದ್ಧವಾಗಿ ಸಾಗುವಂತಹ ನೀತಿ ರೂಪಿಸುದೆ, ಇವುಗಳಿಗೆ ಪೂರಕವಾಗುವ, ಏನಾಗಬೇಕೋ ಅದನ್ನಾಗಿಸುವೆಡೆಗಿನ ಹೆಜ್ಜೆ ಇಡಲಿ ಎನ್ನುವುದು ನಮ್ಮ ಕಾಳಜಿ.. ಒತ್ತಾಯ!

ಮಂಜುನಾಥ್ ಸೋನು
ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಕೆಲವು ಖಾಸಗಿ ಸಂಸ್ಥೆಗಳಲ್ಲಿ ಜವಾನನ ಹುದ್ದೆ ತಗೋಬೇಕಂದ್ರೂ ಇಂಗ್ಲಿಷ್ ಬರಬೇಕು ಅಂತ ಅನ್ನೋ ಈ ಜಾಗತೀಕರಣದ ಸಂದರ್ಭದಲ್ಲಿ ಸರ್ಕಾರವೇ ಇಂಗ್ಲಿಷ್ ಶಿಕ್ಷಣ ಕೊಟ್ಟರೆ ತಪ್ಪೇನು? ಹಾಗೆ ಕೆಲವು ಕನ್ನಡಪರ ಹೋರಾಟಗಾರರಿಗೆ ಒಂದು ಪ್ರಶ್ನೆ ಇವತ್ತು ಕನ್ನಡ ಕನ್ನಡ ಎನ್ನುವವರ ಮನೆ ಮಕ್ಕಳು ಎಷ್ಟು ಜನ ನಮ್ಮ ಊರುಗಳ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದುತ್ತಿದ್ದಾರೆ ಅಯ್ಯೋ ಸ್ವಾಮಿ ನಮ್ಮ ಮನೆಯ ಮಕ್ಕಳಿಗೆ ಸರ್ಕಾರಿ ಹುದ್ದೆಗಳಂತೂ ಕನಸಿನ ಮಾತು ಹಾಗಾಗಿ ಸರ್ಕಾರವೇ ಇಂಗ್ಲಿಷ್ ಶಿಕ್ಞಣ ಸಂಸ್ಥೆಗಳನ್ನು ಪ್ರಾರಂಭಿಸಿದರೆ ನಾವು ಅನ್ಯಾಯವಾಗಿ ಸಾವಿರಾರು ರೂಪಾಯಿಗಳನ್ನು ಪೀಕುತ್ತಿರುವ ಕಾನ್ವೆಂಟುಗಳಿಂದ ಉಳಿಯಬಹುದು ಕಡೆಯದಾಗಿ ಹೇಳೋದಾದರೆ ಯಾವುದೇ ಭಾಷೆ ನಾವು ಕಲಿತರೂ ಅದು ನಮಗೆ ಅರ್ಥ ಆಗೋದು ನನ್ನ ಅಮ್ಮ ಕಲಿಸಿದ ಭಾಷೆಯಲ್ಲಿಯೇ ಹಾಗಾಗಿ ಮಾತೃಭಾಷೆಯ ಜೊತೆಗೆ ಅನ್ನ ಕೊಡೋ ಭಾಷೆನೂ ಬೇಕು.

ಇಂಗ್ಲೀಶ್ ಬಲ್ಲ, ಆದರೆ ಅರೆಬರೆ ಅರಿಮೆಯ ನಾಡು ಕಟ್ಟಬೇಕೇ?

ಆನಂದ್
ಕೃಪೆ:-ಬನವಾಸಿ ಬಳಗ ಬ್ಲಾಗ್ ಏನ್ ಗುರು ಕಾಫಿ ಆಯ್ತಾ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯಸರ್ಕಾರವು ಆರನೇ ತರಗತಿಯಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ತಾನೇ ಆರಂಭಿಸಲು ಮುಂದಾಗಿದೆ. ಈ ನಡೆಯು ಕನ್ನಡ ಮಾಧ್ಯಮ ಕಲಿಕೆಯ ಬಗ್ಗೆ ನಂಬಿಕೆಯಾಗಲೀ, ಈಗಿರುವ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಯೋಚನೆಯಾಗಲೀ ಸರ್ಕಾರಕ್ಕಿಲ್ಲವೆಂಬುವಂತಿದೆ. ಸರ್ಕಾರದ ಈ ನಡೆಯು ದೀರ್ಘಾವಧಿಯಲ್ಲಿ ನಾಡಿನ ಏಳಿಗೆಯನ್ನು ಮಣ್ಣುಪಾಲುಮಾಡಬಲ್ಲುದಾಗಿದೆ.

ರಾಜ್ಯಸರ್ಕಾರದ ಕನ್ನಡಪರತೆ!

೨೦೦೮ರಲ್ಲಿ ರೂಪುಗೊಂಡ ರಾಜ್ಯಸರ್ಕಾರವು ಕಲಿಕೆಯ ವಿಷಯದಲ್ಲಿ ಮೊದಲಿನಿಂದಲೂ ಕನ್ನಡ ವಿರೋಧಿಯನ್ನು ಧೋರಣೆಯನ್ನು ತೋರಿಸುತ್ತಿರುವ ಅನುಮಾನವಿದೆ. ಎರಡುವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿಶಾಲೆಯನ್ನು ಭಾರತೀಯ ವಿದ್ಯಾಭವನ ಎನ್ನುವ ಖಾಸಗಿ ಸಂಸ್ಥೆಗೆ ಕೇಂದ್ರೀಯ ಪಠ್ಯಕ್ರಮದ ಆಂಗ್ಲಮಾಧ್ಯಮ ಶಾಲೆಯನ್ನು ನಡೆಸಲು ಒಪ್ಪಿಸಿಬಿಟ್ಟಿತು. ಆ ಮೂಲಕ ರಾಜ್ಯಸರ್ಕಾರದ ಪಠ್ಯಕ್ರಮದಲ್ಲಿ ತನಗೆ ನಂಬಿಕೆ ಇಲ್ಲವೆಂಬುದನ್ನು ತೋರಿಸಿಕೊಂಡಿತ್ತು. ಹೀಗೆ ನಡೆದುಕೊಳ್ಳಲು “ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು” ಎನ್ನುವ ಕಾರಣವನ್ನು ನೀಡಿತ್ತು. ಇದಾದ ಕೆಲದಿನಗಳಲ್ಲೇ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂದು ಸುಮಾರು ಮೂರು ಸಾವಿರ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಮುಂದಾಯಿತು. ಈ ಬಗ್ಗೆ ಜನರಿಂದ ವಿರೋಧ ಬಂದಾಗ “ಮುಚ್ಚುವಿಕೆ ಅಲ್ಲಾ... ಹತ್ತಿರದ ಶಾಲೆಯೊಂದಿಗೆ ವಿಲೀನ” ಎಂದಿತು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಯಾಕೆ ಕಡಿಮೆ? ಎನ್ನುವುದಕ್ಕೆ “ಹಳ್ಳಿಗಳಿಂದ ನಗರಗಳಿಗೆ ಜನರು ವಲಸೆ ಹೋಗುತ್ತಿದ್ದಾರೆ” ಎಂದಿತು. “ಹಾಗಾದರೆ ಹಳ್ಳಿಗಾಡಿನ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೇಗೆ ಹೆಚ್ಚುತ್ತಿದೆ?” ಎನ್ನುವ ಪ್ರಶ್ನೆಗೆ ಉತ್ತರವಿಲ್ಲದಾಯ್ತು. ಸರ್ಕಾರಿ ಶಾಲೆಗಳನ್ನು ಮುಚ್ಚಲು ಮಕ್ಕಳ ಸಂಖ್ಯೆ ಐದಕ್ಕಿಂತಾ ಕಡಿಮೆಯಿದೆ ಎನ್ನುವ ಕಾರಣ ನೀಡುತ್ತಾ “ಇದು ಕೇಂದ್ರಸರ್ಕಾರದ ಆದೇಶ, ನಮ್ಮ ತಪ್ಪೇನೂ ಇಲ್ಲಾ” ಎಂದು ತಿಪ್ಪೆ ಸಾರಿಸಲಾಯಿತು. ಇಷ್ಟೇ ಅಲ್ಲದೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳನ್ನು ಆರಂಭಿಸಲು ಇರುವ ಕಟ್ಟುಪಾಡುಗಳನ್ನೆಲ್ಲಾ ಗಾಳಿಗೆ ತೂರಿ ನಿರಾಕ್ಷೇಪಣಾ ಪತ್ರಗಳನ್ನು ನೀಡುವುದನ್ನು ಮುಂದುವರೆಸಲಾಯಿತು, ಇದು ಬೀದಿಗೊಂದು ಕೇಂದ್ರಪಠ್ಯಕ್ರಮದ ಶಾಲೆ ಆರಂಭವಾಗಲು ಕಾರಣವಾಯಿತು. ಇವಿಷ್ಟೂ ಒಂದು ಹಂತದ ಕಥೆಯಾದರೆ ಈಗಿನದ್ದು ಮತ್ತೊಂದು.

ಹೊಸ ನಿರ್ಧಾರ!

ಈಗ ರಾಜ್ಯಸರ್ಕಾರದ ೩೪೧ ಶಾಲೆಗಳಲ್ಲಿ ಆಂಗ್ಲಮಾಧ್ಯಮವನ್ನು ಶುರುಮಾಡಲು ಮುಂದಾಗಿದೆ. “ಇದಕ್ಕೆ ಜನರಿಂದ ಬೇಡಿಕೆಯಿದೆ, ಬಡಮಕ್ಕಳು ಖಾಸಗಿ ಶಾಲೆಗಳನ್ನು ಸೇರಲಾಗದ ಕಾರಣದಿಂದ ಆಂಗ್ಲಮಾಧ್ಯಮದಲ್ಲಿ ಕಲಿಯುವುದರಿಂದ ವಂಚಿತರಾಗಬಾರದು, ಇದು ರಾಜ್ಯಸರ್ಕಾರದ ಭಾಷಾನೀತಿಯನ್ನು ಉಲ್ಲಂಘಿಸುತ್ತಿಲ್ಲಾ” ಇತ್ಯಾದಿ ಕಾರಣಗಳನ್ನು ಕೊಡಲಾಗುತ್ತಿದೆ. ಕರ್ನಾಟಕದ ಭಾಷಾನೀತಿ ಕನ್ನಡ ಮಾಧ್ಯಮದಲ್ಲಿನ ಕಲಿಕೆಯನ್ನು ೫ನೇ ತರಗತಿಯವರೆಗೆ ಕಡ್ಡಾಯ ಮಾಡಿರುವುದನ್ನು “ಕನಿಷ್ಠ ೫ನೇ ತರಗತಿಯವರೆಗೆ” ಎಂದು ಪರಿಗಣಿಸದೇ “ಗರಿಷ್ಠ ೫ನೇ ತರಗತಿಯವರೆಗೆ” ಎಂದು ಸರ್ಕಾರ ಪರಿಗಣಿಸಿದಂತಿದೆ.

ಕನ್ನಡದ ಬಗ್ಗೆ ಕನ್ನಡಸರ್ಕಾರಕ್ಕೇ ನಂಬಿಕೆಯಿಲ್ಲ!

ಇದೆಲ್ಲದರ ಅರ್ಥವು ನೇರವೂ ಸರಳವೂ ಆಗಿದೆ. ಕನ್ನಡನಾಡಿನ ಭವಿಷ್ಯ ರೂಪಿಸಲು ಅಗತ್ಯವಾಗಿರುವ ’ಕನ್ನಡಿಗರ ಕಲಿಕೆ’ಗೆ ‘ಕನ್ನಡ ನುಡಿ’ ಯೋಗ್ಯವಾಗಿದೆ ಎನ್ನುವ ನಂಬಿಕೆಯೇ ಸರ್ಕಾರಕ್ಕಿಲ್ಲ. ಈಗಿರುವ ಕಲಿಕೆ ಏರ್ಪಾಟಿನಲ್ಲಿರುವ ಕುಂದುಕೊರತೆಗಳನ್ನು ನೀಗಿಸಿಕೊಂಡು “ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿರುವ, ಅತ್ಯುತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ”ಯನ್ನು ಕಟ್ಟಬೇಕೆಂಬ ಸಣ್ಣ ಹಂಬಲವೂ ಸರ್ಕಾರಕ್ಕಿರುವಂತೆ ತೋರುತ್ತಿಲ್ಲ. ಬದಲಾಗಿ ಕನ್ನಡಕ್ಕೆ ಕಲಿಕಾ ಮಾಧ್ಯಮವಾಗುವ ಯೋಗ್ಯತೆಯಿಲ್ಲಾ ಎಂದೂ, ಕನ್ನಡಿಗರಿಗೆ ಆಂಗ್ಲಮಾಧ್ಯಮದಲ್ಲಿನ ಕಲಿಕೆಯೇ ಒಳಿತೆಂದೂ ತಿಳಿದಿರುವಂತಿದೆ. ಪ್ರಪಂಚದಲ್ಲಿ “ತಾಯ್ನುಡಿಯಲ್ಲಿ ಕಲಿಕೆ ನೀಡುವುದೇ ಅತ್ಯುತ್ತಮ” ಎನ್ನದಿರುವ ಯಾವುದಾದರೂ ನಾಡಿದ್ದರೆ ಬಹುಶಃ ಅದು ನಮ್ಮದೇ! ವೈಜ್ಞಾನಿಕ ಅಧ್ಯಯನಗಳು, ವಿಶ್ವಸಂಸ್ಥೆಯ ಅಂಗವಾಗಿರುವ ಯುನೆಸ್ಕೋ ನಿಲುವುಗಳೆಲ್ಲವೂ ಈ ಬಗ್ಗೆ ಸ್ಪಷ್ಟವಾಗಿ ಏನನ್ನು ಹೇಳುತ್ತಿವೆಯೋ ಅದು ನಮ್ಮ ಸರ್ಕಾರಕ್ಕೆ ಮನವರಿಕೆಯಾಗಿಲ್ಲ. ಬದಲಾಗಿ ಯಾರದೋ ಮಕ್ಕಳು - ಮೊಮ್ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿರುವುದನ್ನು ಎತ್ತಿ ತೋರಿಸುತ್ತಾ... ಕೆಲವರ ಆಯ್ಕೆಯ ಉದಾಹರಣೆಯನ್ನು ರಾಜ್ಯಸರ್ಕಾರದ ನೀತಿ-ನಿಲುವನ್ನು ರೂಪಿಸಲು, ಸಮರ್ಥಿಸಿಕೊಳ್ಳಲು ಬಳಸುತ್ತಿರುವುದು ದುರಂತ.

ಕೈಬಿಡಲಿ ಭಾಷಾನೀತಿಯನ್ನು!

ಸರ್ಕಾರ ಈಗಿನ ನಂಬಿಕೆಯನ್ನೇ ಖಚಿತವಾಗಿ ಹೊಂದಿದ್ದರೆ ತನ್ನ ಭಾಷಾನೀತಿಯನ್ನೂ, ಶಿಕ್ಷಣನೀತಿಯನ್ನು ಬದಲಾಯಿಸಲಿ. ಯಾಕಾಗಿ ಆರನೇ ತರಗತಿಯಿಂದ ಆಂಗ್ಲಮಾಧ್ಯಮ ಶುರುವಾಗಬೇಕು? ಅದು ಒಂದನೇ ತರಗತಿಯಿಂದಲೇ ಆಗಲಿ. ಕನ್ನಡದ ಮಕ್ಕಳನ್ನು ಕನ್ನಡದಿಂದ ದೂರ ಮಾಡುವ ಕಲಿಕಾ ವ್ಯವಸ್ಥೆಯನ್ನು ಕಟ್ಟುತ್ತಿರುವ ಸರ್ಕಾರಕ್ಕೆ ಸುಮ್ಮನೆ ಕನ್ನಡಪರ ಸರ್ಕಾರ ಎಂದು ತೋರಿಸುವ ಹಂಬಲವೇಕೆ? ಕನ್ನಡ ಅಭಿವೃದ್ಧಿ ಪ್ರಾಧಿಕಾರವೇಕೆ? ಆಡಳಿತ ಭಾಷೆಯಾಗಿ ಕನ್ನಡ ಏಕೆ? ಕನ್ನಡ ಸಂಸ್ಕೃತಿ ಇಲಾಖೆ ಏಕೆ? ವಾರ್ಷಿಕ ಪ್ರಶಸ್ತಿಗಳೇಕೆ? ಕನ್ನಡದ ಜಾತ್ರೆಗಳೇಕೇ? ಸುಮ್ಮನೇ ತೆರಿಗೆ ಹಣ ಪೋಲು ಮಾಡುವುದಾದರೂ ಏಕೆ? ಕನ್ನಡದಿಂದ ಜ್ಞಾನಾರ್ಜನೆ ಅಸಾಧ್ಯವೆನ್ನುವ, ಕನ್ನಡದಿಂದ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ, ಕನ್ನಡದಲ್ಲಿ ಉನ್ನತ ಕಲಿಕೆ ಸಾಧ್ಯವಿಲ್ಲ, ಉದ್ಯೋಗಾವಕಾಶ ಸಾಧ್ಯವಿಲ್ಲ ಎನ್ನುವ ನಂಬಿಕೆ ನಮ್ಮ ಸರ್ಕಾರಕ್ಕಿರುವುದಾದರೆ… ನಾಡಿನ ಜನರ ಒಳಿತು ಆಂಗ್ಲಮಾಧ್ಯಮದ ಕಲಿಕೆಯಿಂದಲೇ ಎನ್ನುವುದಾದರೆ ಅದನ್ನೇ ಮಾಡಲಿ.

ಬೇಕು ಏಳಿಗೆಗೆ ಸಾಧನ

ಈಗಿನ ಕರ್ನಾಟಕ ರಾಜ್ಯಸರ್ಕಾರ ಮುಂದಿನ ಗೊತ್ತುಗುರಿಯಿಲ್ಲದೆ ತೀರಾ ಹತ್ತಿರದ ನೋಟ ಹೊಂದಿದ್ದು ನಾಡಿನ ಕಲಿಕಾ ವ್ಯವಸ್ಥೆಯನ್ನು ಶಾಶ್ವತವಾಗಿ ಹಾಳುಗೆಡವುವ ಕ್ರಮಕ್ಕೆ ಮುಂದಾಗಿದೆ ಮತ್ತು ಮುಂದೆ ಇದರಿಂದಾಗಿ ಕನ್ನಡ ಜನಾಂಗಕ್ಕಾಗುವ ಹಾನಿಗೆ ಸರ್ಕಾರವೇ ಹೊಣೆಯಾಗಿದೆ. ಒಂದು ಒಳ್ಳೆಯ ಕಲಿಕಾ ವ್ಯವಸ್ಥೆಯನ್ನು ಕಟ್ಟಲು ಶ್ರಮಿಸಬೇಕಾಗಿದ್ದ ಸರ್ಕಾರವು ಈ ರೀತಿ ಅರೆನುರಿತ ಕ್ರಮಗಳನ್ನು ತೆಗೆದುಕೊಳ್ಳುವುದು ನಾಡಿಗೆ ಒಳಿತಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವತ್ತ ಗಮನಹರಿಸಬೇಕಾಗಿರುವ ಜೊತೆಯಲ್ಲೇ ಖಾಸಗಿ ಶಾಲೆಯಾದರೂ ಕನ್ನಡ ಮಾಧ್ಯಮವಾಗಿದ್ದಲ್ಲಿ ಅವುಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕಾಗಿದೆ. ಬದಲಾಗಿ ನಮ್ಮ ರಾಜ್ಯಸರ್ಕಾರವು ಕನ್ನಡ ಶಾಲೆಗಳನ್ನೇ ಮುಚ್ಚುವುದರಿಂದಾಗಲೀ, ಕಲಿಕಾ ಮಾಧ್ಯಮವನ್ನೇ ಬದಲಾಯಿಸುವುದರಿಂದಾಗಲೀ ಯಾವುದೇ ಉಪಯೋಗವಿಲ್ಲ. ಇಂಗ್ಲೀಶ್ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳು ಇಂಗ್ಲೀಶ್ ಭಾಷೆಯನ್ನರಿತ ಆದರೆ ಅರಿಮೆಯ ವಿಷಯಗಳನ್ನು ಅರೆಬರೆ ತಿಳಿದ ಪೀಳಿಗೆಯಾಗಿಬಿಡುವ ಅಪಾಯವಿದೆ. ನಮ್ಮ ನಾಡಿಗೆ ಬೇಕಿರುವುದು, ಅರಿಮೆಯ ವಿಷಯಗಳನ್ನು ಚೆನ್ನಾಗಿ ತಿಳಿದ, ಕನ್ನಡದ ಜೊತೆಗೆ ಇಂಗ್ಲೀಶನ್ನೂ ಬಲ್ಲ ಜನರು. ನಮಗೆ ಬೇಕಿರುವುದು ಸಮಾನ ಶಿಕ್ಷಣದ ಕನ್ನಡ ಮಾಧ್ಯಮದ ಸಮುದಾಯ ಶಾಲೆಗಳು.

88 ವರ್ಷಗಳ ನಂತರ ಸಮಾಧಿ ಸೇರಲಿದೆ ಲೆನಿನ್ ಕಳೇಬರ!



ಲಂಡನ್: ಕಾಯ ಅಳಿದರೂ ಕಾರ್ಯ ಉಳಿಯುವುದು ಎಂಬ ಮಾತು ಜನಜನಿತ. ಆದರೆ ಸೋವಿಯತ್ ರಷ್ಯಾದ ಕ್ರಾಂತಿಕಾರಿ ನಾಯಕ ವ್ಲಾದಿಮಿರ್ ಲೆನಿನ್ ವಿಷಯಕ್ಕೆ ಬಂದಾಗ ಕಾರ್ಯದೊಂದಿಗೆ ಕಾಯವೂ ಉಳಿದಿರುವುದು ಮಾತ್ರ ಸೋಜಿಗ!


ಲೆನಿನ್ ಮೃತಪಟ್ಟು 88 ವರ್ಷಗಳಾದರೂ ಅವರ ಕಳೇಬರಕ್ಕೆ ಇನ್ನೂ ಅಂತ್ಯಕ್ರಿಯೆ ನಡೆದಿಲ್ಲ. 1924ರಲ್ಲಿ 53ನೆಯ ವಯಸ್ಸಿನಲ್ಲಿ ನಿಧನರಾದ ಲೆನಿನ್‌ರ ಮೃತದೇಹವನ್ನು ಶವಸಂಸ್ಕಾರ ಮಾಡದೆ ಮಾಸ್ಕೊದ ರೆಡ್ ಸ್ಕೇರ್‌ನ ಸಮಾಧಿಯಲ್ಲಿ ಕಳೆದ 88 ವರ್ಷಗಳಿಂದ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ.

ಪುತಿನ್ ಸರಕಾರದಲ್ಲಿ ನೂತನ ಸಾಂಸ್ಕೃತಿಕ ಸಚಿವರಾಗಿರುವ ವ್ಲಾಡಿಮಿರ್ ಮೆಡಿಂಸ್ಕಿ ಲೆನಿನ್ ಶವ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಲೆನಿನ್ ಶವ ಸಂಸ್ಕಾರಕ್ಕೆ ತಯಾರಿ ನಡೆಯುತ್ತಿದ್ದು ಪೂರ್ಣ ಪ್ರಮಾಣದ ಸರಕಾರಿ ಮರ್ಯಾದೆಗಳೊಂದಿಗೆ ಅಂತ್ಯಕ್ರಿಯೆ ನಡೆಯಬೇಕು ಎಂದು ಹೇಳಿದ್ದಾರೆ. ಲೆನಿನ್ ಅಪೇಕ್ಷೆಯಂತೆಯೇ ಸಾಮಾನ್ಯ ಸಮಾಧಿಯಲ್ಲಿ ಶವ ಸಂಸ್ಕಾರ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

'ಈ ಕಾಲಕ್ಕೆ ಅನುಗುಣವಾಗಿ ಸ್ವಲ್ಪ ಮಟ್ಟಿನ ಬದಲಾವಣೆಯಾಗಬಹುದು. ಸಂಭಾವ್ಯ ಟೀಕೆಗಳನ್ನು ತಪ್ಪಿಸಲು ಎಚ್ಚರಿಕೆಯಿಂದ ಅಂತ್ಯಕ್ರಿಯೆ ನಡೆಸಲಾಗುವುದು. ಲೆನಿನ್ ಸಮಾಧಿ ಸೋವಿಯತ್‌ನ ಪಾರಂಪರಿಕ ತಾಣವಾಗಲಿದೆ ಎಂದು ಹೇಳಿದ್ದಾರೆ. ಕ್ರೆಮ್ಲಿನ್‌ನ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಲೆನಿನ್ ತಾಯಿ ಸಮಾಧಿ ಬಳಿಯೇ ಲೆನಿನ್ ಸಮಾಧಿಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

Tuesday 5 June 2012

ಹೂ ಜೊತೆಗೆ ನಾರು...

ಕೃಪೆ:-ಗಿರೀಶ್ ಕೆ ಅವರ ಬಯಲಬಿತ್ತಿ ಬ್ಲಾಗ್


ಅಮೀರ್ ಖಾನ್ನ ಸತ್ಯಮೇವ ಜಯತೇ' ಕಾರ್ಯಕ್ರಮ ಜಡ್ಡುಗಟ್ಟಿರುವ ಭಾರತದ ಮಧ್ಯಮ ವರ್ಗದ ಮನಸ್ಸುಗಳನ್ನು ಅಲ್ಲಾಡಿಸಲು ಶುರು ಮಾಡಿದೆ. ಜೊತೆಗೇ ಕಳೆದುಹೋಗಿರುವ ಟಿವಿ ಚಾನೆಲ್ಗಳ ಬದ್ಧತೆಯನ್ನೂ ಹುಡುಕಿ ತಂದು ಕನ್ನಡಿಯಂತೆ ಮುಖಕ್ಕೆ ಹಿಡಿಯುತ್ತಿದೆ.

ಇಂಥಾ ಹೊತ್ತಲ್ಲೇ ಅಮೀರ್ ಖಾನ್ ಜೊತೆಗೆ ಕಾರ್ಯಕ್ರಮದ ಸಾಚಾತನವನ್ನೇ ಸಿನಿಕತನದಿಂದ ಹೀಗೆಳೆಯುವ ಪ್ರಯತ್ನಗಳೂ ಶುರುವಾಗಿವೆ. ಡಬ್ಬಿಂಗ್ ಇಲ್ಲದೆ ಕನರ್ಾಟಕದಲ್ಲೂ ಆಪಾರವಾಗಿ ನೋಡುಗರನ್ನು ಸೃಷ್ಟಿಸಿಕೊಂಡಿರುವ ಕಾರ್ಯಕ್ರಮವನ್ನು ಹೊಟ್ಟೆಕಿಚ್ಚಿನ ಕಾರಣಕ್ಕೆ ವಿರೋಧಿಸುವ ಗೊಡ್ಡುಗಳೂ ಹುಟ್ಟುಕೊಂಡಿದ್ದಾರೆ. ಅಲ್ಲದೆ ಅಮೀರ್ ಖಾನ್ನ ವಾಣಿಜ್ಯ ಉದ್ದೇಶ ಹಾಗೂ ಶೋನ ನಾಟಕೀಯತೆಯನ್ನು ಬೊಟ್ಟು ಮಾಡಿ, ಕಾರ್ಯಕ್ರಮದ ಒಟ್ಟಾರೆ ಪರಿಣಾಮ ಮತ್ತು ಫಲಿತಾಂಶವನ್ನು ಮರೆಮಾಚುವ ಪ್ರಯತ್ನಗಳೂ ಶುರುವಾಗಿವೆ.

ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸೈದ್ಧಾಂತಿಕ ಚರ್ಚೆಯ ಚೌಕಟ್ಟಿನಲ್ಲಿ ನಿರ್ದೇಶಕ ಬಿ.ಸುರೇಶ್ ಮತ್ತು ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಗಂಗಾಧರ್ ಮೊದಲಿಯಾರ್ ಅವರು ಎತ್ತಿರುವ ಪ್ರಶ್ನೆಯನ್ನು ನಿಷ್ಠುರವಾಗಿ ಚರ್ಚಿಸಲೇಬೇಕಿದೆ.

ಇವರಿಬ್ಬರ ವಾದದಲ್ಲೂ ಸಾಮಾನ್ಯವಾಗಿದ್ದ ಸಂಗತಿ ಅಂದರೆ ಕನ್ನಡದಲ್ಲೂ ಕೂಡಾ ಇಂತಹ ಕಾರ್ಯಕ್ರಮ ಈಗಾಗಲೇ ಮಾಳವಿಕಾ ಮತ್ತು ಶಿವರಾಜ್ಕುಮಾರ್ ಅವರು ನಡೆಸಿಕೊಟ್ಟಿದ್ದಾರೆ ಅನ್ನುವುದು ಮೊದಲನೆಯದು.ಸತ್ಯಮೇವ ಜಯತೇ'ಯಲ್ಲೂ ವಾಣಿಜ್ಯ ಉದ್ದೇಶಗಳಿವೆ. ಸಾಮಾಜಿಕ ಕಳಕಳಿ ಕಾಣುವುದಿಲ್ಲ. ಲಾಭಕ್ಕಾಗಿ ವಾಸ್ತವವನ್ನು ನಾಟಕೀಯಗೊಳಿಸಿ ಸಮಸ್ಯೆಯನ್ನು ಪರಿಹಾರ ಇಲ್ಲದೆ ಸರಳೀಕೃತಗೊಳಿಸಲಾಗುತ್ತಿದೆ ಅನ್ನುವುದು ಎರಡನೆಯದು.
ಅಮೀರ್ ಖಾನ್ ಜೊತೆಗೆ ಮಾಳವಿಕಾ ಅವರನ್ನು ಹೋಲಿಸಿರುವುದೇ ಅಸಹ್ಯ. ಏಕೆಂದರೆ ಮಾಳವಿಕಾ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಅವರೊಬ್ಬ ನಿರೂಪಕಿ ಅಷ್ಟೇ. ಕುಟುಂಬದ ಸಮಸ್ಯೆಗೆ ಸಾಮಾಜಿಕವಾಗಿ ಪರಿಹಾರ ಕಂಡುಹಿಡಿಯುವ ಕನಿಷ್ಠ ಪ್ರಯತ್ನವನ್ನೂ ಮಾಡದೆ ನಾಲ್ಕು ಗೋಡೆ ಯೊಳಗಿದ್ದುದನ್ನು ಬೀದಿಗೆ ತಂದು ಹಾದಿರಂಪ ಮಾಡಿದಂತಿತ್ತು ಅವರ ಕಾರ್ಯಕ್ರಮ. ಅದೆಷ್ಟೇ ಹೃದಯ ಹಿಂಡುವ ಸಮಸ್ಯೆ ಇದ್ದರೂ ಮಾಳವಿಕಾ ಅವರ ಗ್ಲಾಮರ್ ಕೊಂಚವೂ ಕಡಿಮೆಯಾಗದಂತೆ ಒಂದೂವರೆ ಕೆಜಿ ರೇಷ್ಮೆ ಸೀರೆ, ಮೇಕಪ್, ಲಿಪ್ಸ್ಟಿಕ್ ಸಮೇತ ಆ ಚಾನೆಲ್ ಅವರನ್ನು ನಿರೂಪಕಿಯಾಗಿ ಪ್ರದರ್ಶಿಸಿತ್ತು. ಇದರ ಆಚೆಗೆ ಕಾರ್ಯಕ್ರಮಕ್ಕೆ ಸಾಮಾಜಿಕ ಪ್ರಸ್ತುತತೆಯೇ ಇರಲಿಲ್ಲ.

ಅಮೀರ್ ಖಾನ್ ಎತ್ತಿಕೊಂಡಿರುವ ಸಮಸ್ಯೆಗಳು ಯಾರಿಗೂ ಗೊತ್ತಿಲ್ಲದ್ದಲ್ಲ. ಹಾಗೆಯೇ ಯಾರು ಬೇಕಾದರೂ ಕಾರ್ಯಕ್ರಮ ಮಾಡಬಹುದಾದದ್ದು. ಆದರೆ ಅದಕ್ಕೆ ಬೇಕಾಗಿರುವ ಇಚ್ಛಾಶಕ್ತಿ, ಅಧ್ಯಯನಶೀಲತೆ, ಕಾಳಜಿ ಮತ್ತು ಪರಿಣಾಮಕಾರಿಯಾಗಿ ಜನರನ್ನು ಮುಟ್ಟಿಸಲು ಬೇಕಾದ ಕಲಾವಂತಿಕೆ. ಇದಿಷ್ಟನ್ನೂ ಅಮೀರ್ ಖಾನ್ ತನ್ನ ತಂಡದ ಸಮೇತ ಜಾರಿಗೊಳಿಸಿದ್ದಾನೆ.
ತನ್ನ ಸ್ಟಾರ್ಗಿರಿಯನ್ನು ಸಾಮಾಜಿಕ ಹೋರಾಟ ವಾಗಿ, ಸಾಮಾಜಿಕ ಚಟುವಟಿಕೆಯಾಗಿ ಪರಿವರ್ತಿಸುತ್ತಿರುವುದು ಅಮೀರ್ ಖಾನ್ನ ಹೆಗ್ಗಳಿಕೆ. ತನ್ನ ಸಿನಿಮಾಗಳಲ್ಲಿ ಮಾತ್ರವಲ್ಲದೆ, ವೈಯಕ್ತಿಕವಾಗಿಯೂ ನರ್ಮದಾ ಹೋರಾಟ, ಹಜಾರೆ ಉಪವಾಸಗಳಲ್ಲಿ ಪ್ರಚಾರವಿಲ್ಲದೆ ಭಾಗವಹಿಸಿ ಈಗಾಗಲೇ ತನ್ನನ್ನು ಸಾಬೀತುಗೊಳಿಸಿಕೊಂಡಿರುವ ಸ್ಟಾರ್, ಅಮೀರ್.ಸತ್ಯಮೇವ ಜಯತೇ' ಹೇಳುತ್ತಿರುವ ಸತ್ಯವನ್ನೇ ಪತ್ರಕರ್ತ ಪಿ.ಸಾಯಿನಾಥ್, ಅರುಂಧತಿ ರಾಯ್ ಅವರೂ ಹಲವು ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ಆದರೆ ಅವರ ಮಾತು ಮತ್ತು ಮಾಧ್ಯಮ ಎಷ್ಟು ಜನರಿಗೆ ತಲುಪಿದೆ? ಹಾಗಂದ ಮಾತ್ರಕ್ಕೆ ಅವರು ಸಂವೇದನಾ ಶೀಲರಲ್ಲ, ಕಾಳಜಿಯುಳ್ಳವರಲ್ಲ ಎಂದು ಹೇಳಲಾಗುತ್ತದೆಯೇ?

ಅಮೀರ್ನ ಶ್ರೀಮಂತಿಕೆ ಇರುವುದು ಇಲ್ಲೇ. ಸತ್ಯವನ್ನು ತಲುಪಿಸಬೇಕಾಗಿ ರುವ ಜನಕ್ಕೆ ತಲುಪಿಸಬೇಕಾದ ರೀತಿಯಲ್ಲಿ ತಲುಪಿಸಿರುವ ಕಾರಣಕ್ಕೇ ಕಾರ್ಯಕ್ರಮ ಸಾರ್ಥಕತೆ ಕಂಡು ಕೊಂಡಿರುವುದು. ಅಮೀರ್ ಖಾನ್ ಸಾಯಿನಾಥ್, ಅರುಂಧತಿ ರಾಯ್ ರಷ್ಟು ಅಣ್ಣಾ ಹಜಾರೆ ಪ್ರಬುದ್ಧರಲ್ಲ. ಬುದ್ಧಿವಂತರೂ ಅಲ್ಲ. ಆದರೆ ಅತ್ಯಂತ ಸರಳವಾಗಿ ಬದುಕಿರುವ ಒಳ್ಳೆಯ ಮನುಷ್ಯ. ಹೆಚ್ಚಿನ ಮಾತಿಲ್ಲದೆ ಮೌನದಲ್ಲೇ ದೇಶವನ್ನು ಅಲ್ಲಾಡಿಸಿ ಬಿಡಲಿಲ್ಲವೇ?

ಇದರ ಅರ್ಥ ಇಷ್ಟೇ. ಜನಸಾಮಾನ್ಯರಿಗೆ ಒಣ ಸಿದ್ಧಾಂತ, ಪಾಂಡಿತ್ಯದ ಪ್ರಹಾರ ಬೇಕಿಲ್ಲ. ಅತೀ ಸರಳವಾಗಿ ಅವರ ಹೃದಯ ಮುಟ್ಟುವಂತೆ ಅವರನ್ನು ಕಾಡುತ್ತಿರುವ ನೋವನ್ನು, ಅದರ ಹಿಂದಿರುವ ಹುನ್ನಾರವನ್ನು ತೆರೆದು ತೋರಿಸಬೇಕಷ್ಟೇ. ತೋರಿಸುವುದರ ಜೊತೆಗೆ ತೋರಿಸುವವರ ಯೋಗ್ಯತೆ ಕೂಡಾ ಮುಖ್ಯವಾಗುತ್ತದೆ. ಇದೇ ಸತ್ಯಮೇವ ಜಯತೇ'ಯನ್ನು ಸಲ್ಮಾನ್ ನಡೆಸಿಕೊಟ್ಟಿದ್ದರೆ ಅದರ ಸಾಂದ್ರತೆ ಎಷ್ಟು ಕೆಳಮಟ್ಟದಲ್ಲಿ ಇರುತ್ತಿತ್ತು?
ಇದೇ ಅಮೀರ್ನ ಶಕ್ತಿ ಮತ್ತು ತಾಕತ್ತು.
ಹೀಗಿರುವಾಗ ಮಾಳವಿಕಾರನ್ನು ಅಮೀರ್ ಮಟ್ಟಕ್ಕೆ ಹೋಲಿಸುವುದು ಅತ್ಯಂತ ಅಸಭ್ಯ. ನವಿರಾಗಿ ಹೇಳಬಹುದಾದರೆ ಹೂ'ವಿನ ಜೊತೆಗೆ ನಾರೂ ಕೂಡಾ ಸ್ವರ್ಗ ಸೇರಿದಂತೆ!ಇನ್ನು ಕಾರ್ಯಕ್ರಮದ ವಾಣಿಜ್ಯ ಉದ್ದೇಶ ಹಾಗೂ ಅಮೀರ್ನ ಲಾಭ'ದ ಗುರಿಯನ್ನು ಪ್ರಶ್ನಿಸಲಾಗಿದೆ. ಕಾರ್ಯಕ್ರಮದ ಪ್ರಾಯೋಜಕರಾದ ಕಂಪನಿ ಯವರನ್ನು ಮುಂದಿಟ್ಟು ಅಮೀರ್ನ ಸಾಚಾತನವನ್ನು ಪ್ರಶ್ನಿಸಲಾಗಿದೆ.
ಗಾಂಧಿಯನ್ನು ಬಡವನ ರೀತಿ ಕಾಣಿಸಲು ಬಿರ್ಲಾ ತಿಂಗಳಿಗೆ 500 ಡಾಲರ್ ಖಚರ್ು ಮಾಡುತ್ತಿದ್ದರು ಎಂದು ಸರೋಜಿನಿ ನಾಯ್ಡು ಅವರು ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ.ಇಲ್ಲಿ ಗಾಂಧಿ ಸುಳ್ಳಾ? ಸರೋಜಿನಿ ನಾಯ್ಡು ಸುಳ್ಳಾ?
ಎರಡೂ ಸತ್ಯವೇ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಬಿರ್ಲಾರ ಷಾಮಿಯಾನವನ್ನು ಗಾಂಧಿ ಆಶ್ರಯಿಸಿದ್ದರು. ಅಷ್ಟೇ ಏಕೆ ಬ್ರಿಟಿಷರೇ ತಂದ ಪ್ರಿಂಟಿಂಗ್ ಪ್ರೆಸ್ಗಳಲ್ಲೇ ಅಲ್ಲವೇ ಭಗತ್ ಸಿಂಗ್ನ ಕರಪತ್ರಗಳು ಮುದ್ರಿತ ವಾಗಿದ್ದು?ಹೀಗೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಣ್ಣ-ಪುಟ್ಟ ರಾಜಿಗಳ ಜೊತೆಗೇ ನಮ್ಮ ಕಾಳಜಿಗಳನ್ನು ಜಾರಿಗೊಳಿಸಬೇಕಾದ್ದು ಅನಿವಾರ್ಯ.ಹಾಗಂತ ಅಂಬಾನಿ ಅವರದ್ದೇ ಡ್ರಗ್ಸ್ ಕಂಪನಿ ಇದೆ. ಅವರದ್ದೇ ಆಸ್ಪತ್ರೆಯಲ್ಲಿ ವೈದ್ಯರ ತಂಡವೇ ಇದೆ.ಸತ್ಯಮೇವ ಜಯತೇ'ಯಲ್ಲಿ ಅಂಬಾನಿ ಆಸ್ಪತ್ರೆಯ ಯಾವ ವೈದ್ಯರೂ ಮೂತಿ ತೂರಿಸಿಲ್ಲ. ಇಡೀ ಮಹಾರಾಷ್ಟ್ರದಲ್ಲಿ ದೇವರ ಮಗ' ಎಂದು ಆರಾಧಿಸಲ್ಪಡುವ ಡಾ.ರವಿ ಬಾಪಟ್ರವರನ್ನು ತೋರಿಸಲಾಯಿತು. ಇವರ ಇಡೀ ಕುಟುಂಬ ಖಾಸಗೀ ವೈದ್ಯಕೀಯ ಕ್ಷೇತ್ರದ ಕುತಂತ್ರ, ಲಾಭಕೋರತನ, ಮೋಸ, ವಂಚನೆ ವಿರುದ್ಧ ಹೋರಾಡುತ್ತಲೇ ಬಂದಿದೆ. ಇವರು ಬರೆದಿರುವ ವಾರ್ಡ್ ನಂ.5 ಏಇಒ' ಹಾಗೂ ಪೋಸ್ಟ್ ಮಾರ್ಟಂ ಅನ್ನುವ ಎರಡು ಕಾದಂಬರಿಗಳು ವೈದ್ಯಲೋಕದ ನರಹಂತಕತನವನ್ನು ಬಿಚ್ಚಿಡುತ್ತವೆ.

ಭಾರತದ ಮಾಧ್ಯಮ ಜಗತ್ತಿನಲ್ಲಿ ಡ್ರಗ್ಸ್ ಮತ್ತು ವೈದ್ಯಲೋಕದ ಮಾಫಿಯಾಗಳ ವಿರುದ್ಧ ತನಿಖಾ ವರದಿಗಳು ಆಗ ಬೇಕಾದಷ್ಟು ಪ್ರಮಾಣದಲ್ಲಿ ಆಗಿಲ್ಲ. ಅದರಲ್ಲೂ ವಿದೇಶಿ ಕಂಪನಿಗಳ ಕ್ರೈಂ ಮತ್ತು ಮಾಫಿಯಾವನ್ನು ಬಿಚ್ಚಿಟ್ಟಿರು ವುದು ಕೂಡಾ ಕಡಿಮೆಯೇ.
ಇಂಥಾ ಹೊತ್ತಲ್ಲಿ ಎಲ್ಲಾ ಮಾಫಿಯಾಗಳಿಂದಲೂ ಟಾಗರ್ೆಟ್ ಆಗಿಸಿಕೊಳ್ಳುವ ಅಪಾಯವನ್ನು ಲೆಕ್ಕಿಸದೆ ಅಮೀರ್ ನಿಷ್ಠುರ ಸತ್ಯಗಳನ್ನು ಮಧ್ಯಮ ವರ್ಗದ ಜಡ್ಡುತನಕ್ಕೆ ಚಾಟಿ ಬೀಸುವ ರೀತಿಯಲ್ಲಿ ಬಿಚ್ಚಿಡುತ್ತಿದ್ದಾರೆ.
ನಾವು ಸಿನಿಕತನ ಬಿಡದಿದ್ದರೆ ಹೇಗೆ?