Monday 30 April 2012

ಒಂದಾಗುವುದಕ್ಕೆ ಕರುಳ ಸಂಬಂಧವೊಂದೇ ಸಾಕು....


ಕೃಪೆ:- ಬಿ ಎಂ ಬಷೀರ್ ಅವರ "ಗುಜರಿ ಅಂಗಡಿ" ಬ್ಲಾಗ್ ನಿಂದ.


ಕಳೆದ ವರ್ಷ ಉಡುಪಿಯಲ್ಲಿ ವಿವಿಧ ಪ್ರಗತಿ ಪರ ಸಂಘಟನೆಗಳು ಒಂದಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದ್ದವು. ಅದರ ಉದ್ಘಾಟನಾ ಭಾಷಣವನ್ನು ನಾನು ಮಾಡಿದ್ದೆ. ಆ ಭಾಷಣದ ಸಂಗ್ರಹ ಇಲ್ಲಿದೆ.

ನಾನಿಲ್ಲಿ ಮೈಕ್‌ನ ಮುಂದೆ ನಿಂತು ಈ ಅಂಬೇಡ್ಕರ್ ಜಯಂತಿಯನ್ನು ಉದ್ಘಾಟಿಸಲು ಹೊರಟಿದ್ದರೆ ನನ್ನ ಮುಂದೆ ಮೋಂಟನ ಮುಖ ದುತ್ತೆಂದು ನಿಂತು, ನನ್ನನ್ನು ಅಣಕಿಸಿದಂತೆ ಭಾಸವಾಗುತ್ತಿದೆ. ಮೋಂಟ ನನ್ನ ಮನೆಗೆ ಕಟ್ಟಿಗೆಗಳನ್ನು ಹೊತ್ತು ತರುತ್ತಿದ್ದ. ತೆಂಗಿನ ಗಿಡಗಳ ಬುಡಗಳನ್ನು ಬಿಡಿಸುವುದಕ್ಕೆ ಬರುತ್ತಿದ್ದ. ನನ್ನ ಮನೆಯ ಜಮೀನಿನಲ್ಲಿ ನನ್ನ ಮತ್ತು ನನ್ನ ತಂದೆಯ ಬೆವರು ಬೀಳುವುದಕ್ಕಿಂತ ಹೆಚ್ಚಾಗಿ ಮೋಂಟನ ಬೆವರು ಹರಿದಿದೆ. ನಾನು ತೀರಾ ಸಣ್ಣವನಿರುವಾಗಲೇ ಆತ ನನ್ನ ಮನೆಗೆ ಬರುತ್ತಿದ್ದ. ನಾನು ಬೆಳಗ್ಗೆ ತಡವಾಗಿ ಎದ್ದು ಹಲ್ಲುಜ್ಜಿ ಟೇಬಲ್ ಮೇಲೆ ರೊಟ್ಟಿ ತಿನ್ನುತ್ತಿದ್ದರೆ ಆತ, ಬೆವರಿಳಿಸಿ ದುಡಿದು ನನ್ನ ಮನೆಯ ಹೊರಗೆ ಮೆಟ್ಟಿಲಲ್ಲಿ ಕೂತು ರೊಟ್ಟಿ ತಿನ್ನುತ್ತಿದ್ದ. ವಿಶೇಷವೆಂದರೆ ತೀರಾ ಸಣ್ಣವನಿದ್ದ ನನ್ನನ್ನು ಅವನು ಬಹುವಚನದಿಂದ ಕರೆಯುತ್ತಿದ್ದ. ನಾನು ಆತನನ್ನು ಏಕವಚನದಿಂದ ಕರೆಯುತ್ತಿದ್ದೆ. ಪಿಯುಸಿಗೆ ಕಾಲಿಡುತ್ತಿದ್ದ ಹಾಗೆ ನನಗೆ ನಿಧಾನಕ್ಕೆ ವಿಪರ್ಯಾಸ ಅರ್ಥವಾಗತೊಡಗಿತು. ಬಳಿಕ ಆತನನ್ನು ಮನೆಯ ಒಳಗೆ ಕರೆದು ರೊಟ್ಟಿ ಕೊಡುವಷ್ಟು ನಾನು ಸುಧಾರಿಸಿದೆ. ನಿಧಾನಕ್ಕೆ ಅವನಿಗೆ ಹತ್ತಿರವಾಗಲು ಪ್ರಯತ್ನಿಸಿದೆ. ದುರದೃಷ್ಟವಶಾತ್, ನಾವು ಹತ್ತಿರವಾಗುವುದು ಅಷ್ಟು ಸುಲಭವಿರಲಿಲ್ಲ. ‘‘ನನ್ನನ್ನು ಏಕವಚನದಿಂದ ಕರಿ’’ ಎಂದು ಅವನಲ್ಲಿ ಹೇಳುವುದಾಗಲಿ, ಅವನನ್ನು ಬಹುವಚನದಿಂದ ಕರೆಯುವುದಾಗಲಿ ನನ್ನಿಂದ ಸಾಧ್ಯವೇ ಆಗಲಿಲ್ಲ. ಎಷ್ಟೋ ಸಮಯದ ಬಳಿಕ, ಅಲ್ಲಿಲ್ಲಿ ಅವನು ಎದುರಾದರೆ ಅವನಿಗೆ ಐವತ್ತೋ, ನೂರೋ ಹಣ ಕೊಡುತ್ತಿದ್ದೆ. ಅವನದನ್ನು ನೇರ ಹೆಂಡದಂಗಡಿಗೆ ಕೊಡುತ್ತಿದ್ದ ಎನ್ನುವುದು ಗೊತ್ತಿದ್ದರೂ. ಅದು ನನ್ನ ಪಾಪ ಪ್ರಜ್ಞೆಯ ಫಲವಾಗಿರಬಹುದು. ಇತ್ತೀಚೆಗೆ ಮೋಂಟ ತೀರಿಕೊಡ. ಆದರೆ ಪ್ರಶ್ನೆ ಈಗಲೂ ನನ್ನಲ್ಲಿ ಉಳಿದಿದೆ. ಯಾಕೆ ಅವನನ್ನು ಬಹುವಚನದಿಂದ ನನಗೆ ಕರೆಯಲು ಸಾಧ್ಯವಾಗಲಿಲ್ಲ? ಈ ಕ್ಷಣದಲ್ಲೂ ಆತನನ್ನು ‘ನೀವು’ ಎಂದು ಕರೆಯುವುದಕ್ಕೆ ನನ್ನನ್ನು ಕಟ್ಟಿ ಹಾಕಿದ ಶಕ್ತಿ ಯಾವುದು? ನಿಜಕ್ಕೂ ನನ್ನನ್ನು ನಾನು ಜಾತ್ಯತೀತ ಎಂದು ಕರೆದುಕೊಳ್ಳಲು ಅರ್ಹನೆ...ಈ ಪ್ರಶ್ನೆಗಳು ಈ ಕ್ಷಣದಲ್ಲೂ ನನ್ನನ್ನು ಕಾಡುತ್ತಿದೆ.

ಈ ಸಮಾರಂಭದಲ್ಲಿ ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಕ್ರಿಶ್ಚಿಯನ್ನರೂ ಇದ್ದಾರೆ. ಈಗ ನನ್ನನ್ನು ಮತ್ತೊಂದು ಪ್ರಶ್ನೆ ಕಾಡುತ್ತಿದೆ. ಇಲ್ಲಿ ದಲಿತರು-ಮುಸ್ಲಿಮರು-ಕ್ರಿಶ್ಚಿಯನ್ನರು ಒಂದಿಷ್ಟು ಶೂದ್ರವರ್ಗದ ಜನರು ಒಂದಾಗಿ ಕುಳಿತಿದ್ದಾರೆ. ಆದರೆ ಯಾವ ಕಾರಣಕ್ಕೆ? ಹೌದು, ಕಾರಣ ಒಂದೇ...ಎಲ್ಲರಿಗೂ ಸಮಾನವಾದ ಒಬ್ಬ ಶತ್ರುವಿದ್ದಾನೆ. ಆ ಶತ್ರುವಿನ ಕಾರಣಕ್ಕಾಗಿ ನಾವು ಒಂದಾಗಿದ್ದೇವೆ. ಒಂದು ವೇಳೆ, ಈ ಶತ್ರು ಇಲ್ಲದೇ ಇರುತ್ತಿದ್ದರೆ ನಾವಿಲ್ಲಿ ಒಟ್ಟು ಸೇರುತ್ತಿದ್ದೇವೆಯೆ? ಸೇರುತ್ತಿರಲಿಲ್ಲ ಅನ್ನಿಸುತ್ತದೆ. ಆದುದರಿಂದಲೇ ನಾವೆಲ್ಲರೂ ನಮ್ಮಿಳಗಿನ ಜಾತ್ಯತೀತತೆಯನ್ನು ಉಜ್ಜಿ ನೋಡುವ ಸಂದರ್ಭ ಈ ಅಂಬೇಡ್ಕರ್ ಜಯಂತಿ.

ಮುಖ್ಯವಾಗಿ ದಲಿತರು ಮತ್ತು ಮುಸ್ಲಿಮರು ಒಟ್ಟು ಸೇರುವುದಕ್ಕೆ ಯಾವ ಶತ್ರುವಿನ ಅಗತ್ಯವೂ ಇಲ್ಲ. ಈ ಎರಡು ಸಮುದಾಯಗಳದ್ದು ಕರುಳ ಬಳ್ಳಿಯ ಸಂಬಂಧ. ಆ ಸಂಬಂಧವನ್ನು ನಾವು ಜೋಪಾನವಾಗಿ, ಗಟ್ಟಿ ಮಾಡಿ ಇಟ್ಟುಕೊಂಡಿದ್ದಿದ್ದರೆ ಯಾವ ಶತ್ರುವೂ ನಮ್ಮ ನಡುವೆ ಹುಟ್ಟುತ್ತಿರಲಿಲ್ಲ. ಶತ್ರುವಿದ್ದರೂ ನಮ್ಮ ಮುಂದೆ ತಲೆಯೆತ್ತುವ ಧೈರ್ಯ ಮಾಡುತ್ತಿರಲಿಲ್ಲ. ನಾವು ಕರುಳ ಸಂಬಂಧವನ್ನು ಮರೆತೆವು. ಅದರ ಪರಿಣಾಮವನ್ನು ಉಣ್ಣುತ್ತಿದ್ದೇವೆ.
ದಲಿತರು ಎನ್ನುವ ಶಬ್ದಕ್ಕೆ ವಿರುದ್ಧಾರ್ಥ ಬ್ರಾಹ್ಮಣ ಎಂದು ನಾವೆಲ್ಲ ತಿಳಿದುಕೊಂಡಿದ್ದೇವೆ. ಆದರೆ ಬ್ರಾಹ್ಮಣ್ಯ ಎನ್ನುವುದು ಒಂದು ಆಲೋಚನೆ ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕಾಗಿದೆ. ಆ ಆಲೋಚನೆ ನಮ್ಮ ನಿಮ್ಮಲ್ಲೆಲ್ಲ ಗುಟ್ಟಾಗಿ ಮನೆ ಮಾಡಿರಬಹುದು. ಮನು ಸಂವಿಧಾನದ ಫಲವನ್ನು ಕೇವಲ ಬ್ರಾಹ್ಮಣರು ಮಾತ್ರ ಉಂಡಿಲ್ಲ. ಅದರ ಸವಲತ್ತನ್ನು ಇಲ್ಲಿ ಕುಳಿತಿರುವ ಶೂದ್ರರು, ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ಉಂಡಿದ್ದಾರೆ. ಹಾಗೆ ನೋಡಿದರೆ ಇಂದು ಬ್ರಾಹ್ಮಣ್ಯವಾದ ಕಾರ್ಯ ನಿರ್ವಹಿಸುತ್ತಿರುವುದು ಬ್ರಾಹ್ಮಣೇತರ ಕೈಗಳ ಮೂಲಕ. ಮನು ಸಂವಿಧಾನವನ್ನು ಬರೆದು ಅದನ್ನು ಉಳಿದವರ ಕೈಯಲ್ಲಿಟ್ಟು, ಅವರು ದೂರದಲ್ಲಿ ನಿಂತು ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅಂದರೆ ಅದರ ಲಾಭಗಳನ್ನು ಇತರರೊಂದಿಗೆ ಹಂಚಿಕೊಳ್ಳುವಷ್ಟು ಉದಾರರಾಗಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿರುವವರಲ್ಲಿ ಶೂದ್ರರೇ ಬಹುಸಂಖ್ಯಾತರು. ಹಾಗೆಯೇ ಮುಸ್ಲಿಮರೂ ದಲಿತರನ್ನು ತುಳಿದಿದ್ದಾರೆ. ಕ್ರಿಶ್ಚಿಯನ್ನರೂ ದಲಿತರನ್ನು ತುಳಿದಿದ್ದಾರೆ. ಬ್ರಾಹ್ಮಣ್ಯವೆನ್ನುವುದು ಶೂದ್ರರಲ್ಲಿ, ಮುಸ್ಲಿಮರಲ್ಲಿಯೂ ವಿಷದ ಹಾವಿನಂತೆ ತಣ್ಣಗೆ ಮಲಗಿರುವುದನ್ನು ನಾನು ನೋಡಿದ್ದೇನೆ.

ಇಲ್ಲಿರುವ ಮುಸ್ಲಿಮರನ್ನು ನಾನೊಂದು ಪ್ರಶ್ನೆಯನ್ನು ಕೇಳುವುದಕ್ಕೆ ಬಯಸುತ್ತೇನೆ. ಇಸ್ಲಾಂ ಸಹೋದರತೆಯನ್ನು, ಸಮಾನತೆಯನ್ನು ಬೋಧಿಸುತ್ತದೆ ಎಂದು ನಾವೆಲ್ಲ ನಂಬಿದ್ದೇವೆ. ಆದರೂ ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಯಾಕೆ ಅನ್ನಿಸಲಿಲ್ಲ? ಇದೇ ಪ್ರಶ್ನೆಯನ್ನು ನನ್ನೊಬ್ಬ ಆತ್ಮೀಯ ಧರ್ಮಗುರುವಿಗೆ ಕೇಳಿದ್ದೆ. ಅವರು ಹೇಳಿದರು ‘‘ಬಹುಶಃ ಇಸ್ಲಾಮನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾಗಿರಬೇಕು’’

ಇಲ್ಲ, ಅದಲ್ಲ. ಇಸ್ಲಾಮನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾದುದಲ್ಲ. ಬದಲಿಗೆ ಇಲ್ಲಿನ ಮುಸ್ಲಿಮರು ಇಸ್ಲಾಮನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಗಡ್ಡವನ್ನೇ ಇಸ್ಲಾಮಿನ ಅಸ್ತಿತ್ವ ಎಂದು ನಂಬಿಕೊಂಡಿರುವ ವೌಲವಿಗಳು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ನಾವು, ನೀವು ಇಸ್ಲಾಮನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಆಳದಲ್ಲಿ ಭಾರತದ ಜಾತೀಯತೆಯ ಚರಂಡಿ ಇನ್ನೂ ನಮ್ಮ ಮನದಾಳದಲ್ಲಿ ಅಂತರ್‌ಗಂಗೆಯಂತೆ ಹರಿಯುತ್ತಿದೆ. ಆದುದರಿಂದಲೇ ನಾನು ಹೇಳುತ್ತಿದ್ದೇನೆ, ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಅನ್ನಿಸದೇ ಇರುವುದು ಭಾರತದ ಆಧುನಿಕ ದಿನಗಳಲ್ಲಿ ಇಸ್ಲಾಮ್ ಧರ್ಮದ ಅತಿ ದೊಡ್ಡ ಸೋಲು. ಅದಕ್ಕಾಗಿ ಇಲ್ಲಿನ ಮುಸ್ಲಿಮರು ಈಗಲೂ ಬೆಲೆ ತೆರುತ್ತಲೇ ಇದ್ದಾರೆ. ಭಾರತದ ಎಲ್ಲ ವೌಲ್ವಿಗಳು ಇದಾಕ್ಕಾಗಿ ನಾಚಿಕೆ ಪಟ್ಟುಕೊಳ್ಳಬೇಕು. ಇದು ಇಸ್ಲಾಂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರರಾದ ದಲಿತರ ಶವ ದಫನ ಹಲವು ಚರ್ಚುಗಳಲ್ಲಿ ವಿವಾದವಾದುದನ್ನು ನಾವು ನೋಡಿದ್ದೇವೆ. ದಲಿತ ಪಾದ್ರಿಗಳೇ ಅಲ್ಲಿ ಕೀಳರಿಮೆಯಿಂದ ಬದುಕುವ ಸನ್ನಿವೇಶವಿದೆ. ದಲಿತರು ದಲಿತರಾಗಿದ್ದುಗೊಂಡು ಅವಮಾನ ಅನುಭವಿಸುವುದಕ್ಕಿಂತಲೂ ಇದು ಕ್ರೂರವಾದುದು. ಇದೆಲ್ಲವೂ ಯಾಕೆ ಸಂಬಂಧವಿಸುತ್ತಿದೆಯೆಂದರೆ, ಇಂದು ನಾವು ರಾಜಕೀಯ ಕಾರಣಗಳಿಗಾಗಿ ದಲಿತರನ್ನು ಪ್ರೀತಿಸಲು ತೊಡಗಿರುವುದು. ದಲಿತರನ್ನು ಪ್ರೀತಿಸುವುದಕ್ಕೆ ಈ ದೇಶದ ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ ರಾಜಕೀಯ ಕಾರಣಗಳ ಅಗತ್ಯವಿಲ್ಲ. ಕರುಳ ಸಂಬಂಧವೊಂದೇ ಸಾಕು. ಅವರೊಂದಿಗೆ ನೂರಾರು ಜನ್ಮ ಜೊತೆ ಜೊತೆಯಾಗಿ ಬಾಳುವುದಕ್ಕೆ.

ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿರಬಹುದು. ಬೌದ್ಧರಾಗಿದ್ದರೂ ಅವರು ಅತ್ಯುತ್ತಮ ಮುಸ್ಲಿಮರಾಗಿಯೂ, ಅತ್ಯುತ್ತಮ ಕ್ರಿಶ್ಚಿಯನ್ನರಾಗಿಯೂ ಬಾಳಿದರು. ಈ ದೇಶದಲ್ಲಿ ನಾನು ಅತಿಯಾಗಿ ಗೌರವಿಸುವ, ಇಷ್ಟ ಪಡುವ ಎರಡು ಜೀವಗಳು ಗಾಂಧಿ ಮತ್ತು ಅಂಬೇಡ್ಕರ್. ಇದೇ ಸಂದರ್ಭದಲ್ಲಿ ಗಾಂಧಿ ಇಲ್ಲದ ಭಾರತವನ್ನು ನಾನು ಕಲ್ಪಿಸಬಲ್ಲೆ. ಆದರೆ ಅಂಬೇಡ್ಕರ್ ಇಲ್ಲದ ಭಾರತವನ್ನು ನನಗೆ ಕಲ್ಪಿಸಲು ಸಾಧ್ಯವಿಲ್ಲ. ಗಾಂಧಿ ಮತ್ತು ಅಂಬೇಡ್ಕರ್‌ರಲ್ಲಿ ಯಾರನ್ನಾದರೂ ಒಬ್ಬರನ್ನು ಆರಿಸುವ ಅನಿವಾರ್ಯತೆ ಬಂದರೆ ನಾನು ಆರಿಸುವುದು ಅಂಬೇಡ್ಕರ್‌ರನ್ನು. ಇಂತಹ ನಾಯಕ ಜಯಂತಿ ಈ ದಿನ ನಾವು ಒಂದುಗೂಡಿದ ಉದ್ದೇಶ ಪ್ರಾಮಾಣಿಕವಾಗಿರುವುದು ಅತ್ಯಗತ್ಯ. ಈ ದಿನ ದಲಿತರು ಮತ್ತು ಇತರ ಶೋಷಿತ ಸಮುದಾಯಗಳು ತಮ್ಮ ನಡುವಿನ ಕರುಳ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವತ್ತ ಯೋಚಿಸಬೇಕು. ಒಬ್ಬ ದಲಿತನಿಗೆ ನೋವಾದಾಗ ಅದಕ್ಕಾಗಿ ಈ ದೇಶದ ಸರ್ವ ಶೋಷಿತರ ಕರುಳುಗಳೂ ಸಹಜವಾಗಿ ಮಿಡಿಯಬೇಕು.

ನಮ್ಮ ಶತ್ರುಗಳನ್ನು ಹೇಗೆ ಎದುರಿಸುವುದು ಎನ್ನುವುದಕ್ಕಾಗಿ ನಾವು ಇಲ್ಲಿ ಒಂದಾಗಿದ್ದೇವೆ ಎಂದಾದರೆ ಅದು ಅಪ್ರಾಮಾಣಿಕ ನಡೆಯಾಗಿರುತ್ತದೆ. ಅಂತಹ ಬಾಂಧವ್ಯ ಹೆಚ್ಚು ಸಮಯ ಬಾಳದು. ಶತ್ರು ನಮ್ಮಾಳಗಿದ್ದಾನೆ. ಅವನನ್ನು ಹುಡುಕಿ ಎದಿರುಸುವುದು ಹೇಗೆ ಎನ್ನುವುದಕ್ಕಾಗಿ ನಾವು ಈ ದಿನವನ್ನು ಬಳಸಿಕೊಳ್ಳೋಣ. ನಾವು ಇನ್ನಷ್ಟು ಜಾತ್ಯತೀತರಾಗುವ ದಾರಿಯನ್ನು ಹುಡುಕೋಣ. ಎಲ್ಲರಿಗೂ ಅಂಬೇಡ್ಕರ್ ಜಯಂತಿಯ ಶುಭಾಶಯಗಳು.

ವೀರಣ್ಣ ಮಡಿವಾಳರ ಸಂದರ್ಶನ


ಕೃಪೆ:-ಹರ್ಷಕುಮಾರ್ ಅವರ ಬ್ಲಾಗ್ "ಹಸಿರೆಲೆ"ಇಂದ...


ವಚನ ಮತ್ತು ಬಂಡಾಯವೇ ನಮ್ಮ ನೈಜ ಮಾದರಿ


ಕನ್ನಡದ  ಹೊಸತಲೆಮಾರಿನ ಸಂವೇದನಾಶೀಲ ಬರೆಹಗಾರರಲ್ಲಿ ಒಬ್ಬರಾದ ವೀರಣ್ಣ ಮಡಿವಾಳರ ಅವರ 'ನೆಲದ ಕರುಣೆಯ ದನಿ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ 'ದ ಸಂಡೆ ಇಂಡಿಯನ್' ಗಾಗಿ ನಡೆಸಿದ ಸಂದರ್ಶನ.

ನಿಮ್ಮ ’ನೆಲದ ಕರುಣೆಯ ದನಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ ಲಭಿಸಿರುವುದು ಏನೆನ್ನಿಸುತ್ತದೆ?
ಇದು ನನ್ನ ಮತ್ತು ನನ್ನ ತಲೆಮಾರಿನ ಅಭಿವ್ಯಕ್ತಿಗೆ ಸಂದ ಗೌರವವೆಂದು ಭಾವಿಸುತ್ತೇನೆ. ಈ ಕ್ಷಣ ಅಪ್ಪನ ಬೆವರು, ಅವ್ವನ ಕನಸು ನೆನಪಾಗುತ್ತಿವೆ. ಈ ಪುರಸ್ಕಾರವನ್ನು ಕನ್ನಡ ಕಾವ್ಯವನ್ನು ಮತ್ತಷ್ಟು ಜೀವಪರವಾಗಿಸಿದ ಕವಿ ಎನ್.ಕೆ.ಹನುಮಂತಯ್ಯ, ವಿಭಾ ತಿರಕಪಡಿ ಹಾಗೂ ನಾನು ಎಷ್ಟು ಓದಿದರೂ ಮತ್ತೆ ಮತ್ತೆ ಓದಬೇಕೆನಿಸುವ ಪುಟ್ಟ ಪುಸ್ತಕಗಳೇ ಆಗಿರುವ ನನ್ನ ಗಾವಡ್ಯಾನವಾಡಿ ಶಾಲೆಯ ಮಕ್ಕಳಿಗೆ ಅರ್ಪಿಸುತ್ತೇನೆ. ವರ್ತಮಾನದ ಈ ಅವಘಡದ ಕಾಲದಲ್ಲಿ ಯಾವುದೇ ಸಂವೇದನಾಶೀಲ ಮನಸ್ಸು, ಯಾವುದೇ ಪುರಸ್ಕಾರವನ್ನು ಆನಂದಿಸುವ ಸ್ಥಿತಿಯಲ್ಲಿಲ್ಲ. ಈ ಕ್ಷಣ ನನ್ನ ಶಿಕ್ಷಕ ತರಬೇತಿಯ ಖಾಲಿ ಹೊಟ್ಟೆಯ ದಿನಗಳು ನೆನಪಾಗುತ್ತಿವೆ. ಈಗ ನನ್ನ ತುತ್ತಿಗೆ ದಾರಿಯಾಗಿರಬಹುದು, ಆದರೆ ಅದೆಷ್ಟು ಎಣಿಸಲಾಗದ ಹಸಿದ ಹೊಟ್ಟೆ ಚೀಲಗಳು ಕಣ್ಣಮುಂದೆಯೇ ಇವೆ.
ಇಂದು ಕೇವಲ ಅನ್ನಕ್ಕಾಗಿ ಪರದಾಟ ಮಾತ್ರವಲ್ಲ, ಅದರಾಚೆಗೆ ಬದುಕಿಗೆ ಬೆಳಕಾಗುವ ವಿದ್ಯಾದೀಪದ ಹುಡುಕಾಟದ ದುರಂತವೂ ಇದೆ. ತೀರಾ ಹೊಟ್ಟೆ ಹಸಿದರೆ ಸೊಪ್ಪು ಸೊದೆ ತಿಂದು ಜೀವ ಹಿಡಿಯಬಹುದು, ವಿದ್ಯೆಗೇ ಕುತ್ತು ಬಂದರೆ? ಮೈಯೆಲ್ಲ ಗಾಯ ಮಾಡಿಕೊಂಡು ಬಂದ ನವಿಲೊಂದು ಕುಣಿಯುತ್ತಿದ್ದರೆ, ಅದರ ಕುಣಿತವನ್ನು ಮೆಚ್ಚಿ, ಸಿಂಹಾಸನದ ಮೇಲೆ ಕುಳ್ಳಿರಿಸಿ ದುಡ್ಡು ಕೊಟ್ಟು ಸನ್ಮಾನಿಸುವುದಾದರೆ ಏನು ಹೇಳುವುದು? ವರ್ತಮಾನದ ದುರಾಡಳಿತದ ದಾಳಿಗೆ ಒಳಗಾಗಿ ಬಳಲಿದ ಜೀವಸಮುದಾಯದಿಂದ ಬಂದ ನವಿಲು ನಾನು. ಗಾಯಗಳು ನನ್ನವಷ್ಟೇ ಅಲ್ಲ, ನನ್ನೆಲ್ಲ ಬಂಧುಗಳವೂ ಇವೆ. ಅವೆಲ್ಲ ತೋರಲಾಗದವು ತೋರಿತೀರದವು. ಇವನ್ನೆಲ್ಲ ಕಾಣುವ ಕಣ್ಣುಗಳನ್ನು ಹುಡುಕುತ್ತಿದ್ದೇನೆ. ಈ ಪುರಸ್ಕಾರದ ನೆಪದಿಂದಾದರೂ ನಮ್ಮನ್ನಾಳುವ ಪ್ರಭುಗಳು ನಮ್ಮ ಅಭಿವ್ಯಕ್ತಿಯನ್ನು ಗಂಭೀರವಾಗಿ ಪರಿಗಣಿಸುತ್ತಾರಾ..?
ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಲು ನಿಮಗಿದ್ದ ಪ್ರೇರಣೆಗಳೇನು?
ತಿರಸ್ಕಾರ ಅವಮಾನಗಳಿಗೆ ಸಿಕ್ಕು ನರಳುತ್ತಿದ್ದ ನಾನು ಬದುಕಿನ ಅರ್ಥವನ್ನು ಬೇರೆ ಬೇರೆ ಸಾಧ್ಯತೆಗಳಲ್ಲಿ ಶೋಧಿಸುತ್ತಿದ್ದಾಗ ಸಿಕ್ಕ ಅಪರೂಪದ ದಾರಿ ಸಾಹಿತ್ಯ ಮಾಧ್ಯಮ. ಮೊದಮೊದಲು ಅದು ಓದಿನ ರೂಪದ್ದಿತ್ತು, ಆಕಸ್ಮಿಕವಾಗಿ ರಚನೆಯತ್ತಲೂ ಹೊರಳಿತು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ನನ್ನ ಗುರುಗಳಾದ ಪಿ.ಎಂ.ಕ್ಯಾತಣ್ಣನವರ, ಎಸ್.ಕೆ. ಗಾಡರೆಡ್ಡಿಯವರು ಬರೆಯುತ್ತಿದ್ದರು. ನಮಗೂ ಬರೆಯಲು ಹುರಿದುಂಬಿಸುತ್ತಿದ್ದರು. ಬಂಡಾಯ ಸಾಹಿತ್ಯ ಸಂಘಟನೆ ತುಂಬ ಕ್ರಿಯಾಶೀಲವಾಗಿದ್ದ ದಿನಗಳವು. ಅದ್ಯಾವುದೂ ತಿಳಿಯುತ್ತಿರದಿದ್ದರೂ ಮನಸಿನಲ್ಲಿ ಆ ಚಟುವಟಿಕೆಗಳು ಅಚ್ಚೊತ್ತಿವೆ. ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿಯ ಪ್ರೇರಣೆಗಳು ಒದಗಿದವು.
ಕೊಪ್ಪಳದಲ್ಲಿ ಆಕಸ್ಮಿಕವಾಗಿ ಸಿಕ್ಕ ವಿಜಯ ಅಮೃತರಾಜ ಸಾಹಿತ್ಯದ ಬಗ್ಗೆ ತುಂಬ ತಿಳುವಳಿಕೆ ಉಳ್ಳವರು. ಅವರು ನನಗೆ ಮೊದಲಿಗೆ ಲಂಕೇಶ್‌ರ ಪುಸ್ತಕಗಳನ್ನು ಪರಿಚಯಿಸಿದರು. ಮುಖ್ಯವಾದದ್ದು ಬಸವರಾಜ ಸೂಳಿಬಾವಿಯವರ ಸಂಪರ್ಕ. ಬಸೂ ಉತ್ತರ ಕರ್ನಾಟಕದ ಭೂ ಸಂಬಂಧಿತ ಹೋರಾಟಗಳನ್ನು ಸಂಘಟಿಸುತ್ತಿದ್ದ ಸಮಯದಲ್ಲಿ ನಾನೂ ಅದರಲ್ಲಿ ಭಾಗಿಯಾದೆ. ಅವು ನನ್ನ ಬದುಕಿನ ಕುರಿತಾದ ಗ್ರಹಿಕೆಗಳನ್ನು ತಿಳಿಯಾಗಿಸಿಕೊಳ್ಳುವ ನಿಟ್ಟಿನಲ್ಲಿ ಬಹಳ ಮುಖ್ಯವಾದವು.
ನಾಡಿನ ಹಿರಿಯ ಸಾಹಿತಿಗಳು ಮತ್ತು ಸಾಹಿತ್ಯದ ಓದು ನಿಮ್ಮ ಮೇಲೆ ಬೀರಿರುವ ಪ್ರಭಾವ?
ಹಿರಿಯ ಸಾಹಿತಿಗಳ ಒಡನಾಟ ನನ್ನ ಬದುಕಿನ ವಿಸ್ಮಯಗಳಲ್ಲಿ ಮುಖ್ಯವಾದದ್ದು. ಅದು ವೈಯಕ್ತಿಕವಾಗಿ ಮತ್ತು ಓದಿನಿಂದ. ಇವೆರಡೂ ಇಲ್ಲದಿದ್ದರೆ ನನ್ನ ಬದುಕು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಓದು ನನಗೆ ಬದುಕು ಕೊಟ್ಟಿದೆ.
ಒಬ್ಬ ಯುವ ಬರಹಗಾರರಾಗಿ ಇಂದಿನ ಕನ್ನಡ ಸಾಹಿತ್ಯದ ದಿಕ್ಕನ್ನು ಹೇಗೆ ಪರಿಭಾವಿಸುತ್ತೀರಿ?
ನಿಜವಾದ ಸಮಾಜಮುಖಿ ನೆಲೆಯಲ್ಲಿ ಇಂದಿನ ಕನ್ನಡ ಸಾಹಿತ್ಯ ಚಲಿಸುತ್ತಿದೆಯೆಂಬುದೇ ನನ್ನ ಭಾವನೆ ಮತ್ತು ನಂಬಿಕೆ. ಆದರೆ ಈ ಚಲನೆ ತುಂಬ ಸಂಕೀರ್ಣವಾದದ್ದು. ವಚನ, ಬಂಡಾಯದ ಕಾಲಘಟ್ಟದ ಸಾಹಿತ್ಯವೇ ನಮ್ಮ ನಿಜವಾದ ಮಾದರಿ. ನಮಗೆ ನೋವಿರುವುದು ಈ ಕಾಲದ ಅವಘಡಗಳಿಗೆ ಮುಖಾಮುಖಿಯಾಗಲು ನಮ್ಮ ಸಾಹಿತ್ಯದ ತೋಳು ಇನ್ನೂ ಬಲಿಯದಿರುವುದು.
ಸಾಹಿತ್ಯ – ಸಾಹಿತಿಗೆ ಇರುವಂತಹ ಸಾಮಾಜಿಕ ಹೊಣೆಗಾರಿಕೆ ಯಾವ ತೆರನಾದದ್ದು?
ಹೊಣೆಗಾರಿಕೆ ಎಂಬುದು ಸಾಹಿತ್ಯ-ಸಾಹಿತಿಗೆ ಸಂಬಂಧಿಸಿದ್ದು ಎಂದು ನಾನು ಭಾವಿಸಿಲ್ಲ. ಜೀವಂತಿಕೆ ಇರುವ ಮಾನವೀಯತೆಯನ್ನು ಉಳಿಸಿಕೊಂಡಿರುವ ಎಲ್ಲ ಮನಸ್ಸಿಗೆ ಇರಲೇಬೇಕಾದದ್ದು ಎನಿಸುತ್ತಿದೆ. ಸಾಹಿತ್ಯ ಮತ್ತು ಅಸಾಹಿತ್ಯದ ವ್ಯತ್ಯಾಸವಿಲ್ಲದಂತೆ ಇಂದಿನ ಬರವಣಿಗೆಯನ್ನು ವ್ಯಾಖ್ಯಾನಿಸಲಾಗುತ್ತಿದೆ. ಜೀವಪರ ಎನ್ನುವ ಪದವನ್ನೇ ಅಪಹಾಸ್ಯಕ್ಕೊಳಪಡಿಸುವ ಹಲವು ಜನ ಸಾಹಿತಿಗಳನ್ನು ನಾನು ನೋಡಿದ್ದೇನೆ. ಇವರಿಗೆ ಕ್ರೌರ‍್ಯವೂ ಸಹಜವಾಗಿಯೇ ಕಾಣುತ್ತದೆ. ಎಂದಿಲ್ಲದ ಎಚ್ಚರದ ಹೊಣೆಗಾರಿಕೆಯಲ್ಲಿ ನಾವು ಮತ್ತು ನಮ್ಮ ಬರವಣಿಗೆ ಹೆಜ್ಜೆಯಿಡಬೇಕಾದ ನಿರ್ಣಾಯಕ ಸಂದರ್ಭದಲ್ಲಿ ನಾವಿದ್ದೇವೆ.
ಚಳವಳಿಗಳೆಲ್ಲಾ ಮುಸುಕಾಗಿರುವ ಸಂದರ್ಭ ಸಾಹಿತ್ಯ ಯಾವ ಪಾತ್ರ ವಹಿಸುತ್ತಿದೆ ಎಂದು ನಿಮ್ಮ ಭಾವನೆ?
ಚಳವಳಿಗಳೆಲ್ಲಾ ಮುಸುಕಾಗಿವೆ ಎನ್ನುವ ನಿಲುವಿನಲ್ಲೇ ದೋಷವಿದೆ. ಪ್ರಭುತ್ವದ ದಮನಕಾರಿ ನೀತಿಗೆ ಜೀವವನ್ನೇ ಪಣಕ್ಕಿಟ್ಟು ದಿನಾಲು ಸಾವಿರ ಜನ ಬೀದಿಗಿಳಿಯುತ್ತಾರಲ್ಲ, ಇದಕ್ಕೆ ಬೇರೆ ಹೆಸರಿದೆಯೆ? ಪ್ರತಿರೋಧವೊಂದೇ ಕರ್ನಾಟಕದ ಈ ಕರಾಳ ವಾಸ್ತವವನ್ನು ಬದಲಿಸುವ ಸಶಕ್ತ ದಾರಿ. ಅದನ್ನು ಎದೆಯಲ್ಲಿಟ್ಟುಕೊಂಡೇ ನಮ್ಮ ಸಾಹಿತ್ಯ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಸಾಮಾಜಿಕ ಕ್ರೌರ‍್ಯದ ಆತ್ಯಂತಿಕ ಸ್ಥಿತಿಯಲ್ಲಿರುವ ನಮಗೆ ಈ ದುರಾಡಳಿತವನ್ನು ಕೊನೆಗಾಣಿಸುವ ಇಚ್ಛಾಶಕ್ತಿಯೊಂದೇ ಪರ್ಯಾಯ. ಇಂಥ ಸಂದರ್ಭಗಳಲ್ಲಿ ಸಾಹಿತಿಗಳಾದವರೆ ಬೀದಿಯಲ್ಲಿ ನಿಂತು ಚಳವಳಿಗಳನ್ನು ಮುನ್ನಡೆಸುತ್ತಿದ್ದಾರೆ. ಪ್ರತಿರೋಧದ ಹೊಸ ಮಾದರಿಗಳನ್ನು ಸೃಜನಶೀಲವಾಗಿ ಕಟ್ಟುತ್ತಿದ್ದಾರೆ.
ಊರು ಹಾಗೂ ಊರೊಳಗಿನ ದಲಿತರ ಕೇರಿಗಳ ನಡುವಿನ ಕಂದಕ ಹೆಚ್ಚುತ್ತಿರುವ ಘಟನೆಗಳು ನಿರಂತರವಾಗಿ ಸಂಭವಿಸುತ್ತಿರುವಾಗ ನಮ್ಮ ಚಳವಳಿಗಳು ನಿಷ್ಕ್ರಿಯವಾಗಿವೆ ಎನ್ನಿಸುವುದಿಲ್ಲವೆ?

ಊರು ಮತ್ತು ಕೇರಿಗಳ ನಡುವಿನ ಕಂದಕವಷ್ಟೇ ಅಲ್ಲ, ಕೇರಿ ಕೇರಿಯ ಜನ ಅದರಲ್ಲೂ ಮಹಿಳೆಯರು, ಮಕ್ಕಳು ಇಂದು ಉಳಿವಿಗಾಗಿ ಹೋರಾಟ ನಡೆಸುವ ದುರಂತದಲ್ಲಿ ನಾವಿದ್ದೇವೆ. ತಿರುಮಲದೇವರಕೊಪ್ಪದಲ್ಲಿ ಬಸವರಾಜನೆಂಬ ಹುಡುಗನನ್ನು ಮನೆಶಾಂತಿಗಾಗಿ ಬಲಿಕೊಟ್ಟದ್ದು, ಭೋಜ ಎಂಬ ಹಳ್ಳಿಯಲ್ಲಿ ಕೇರಿಯ ಮೇಲಿನ ಸವರ್ಣೀಯರ ಅಟ್ಟಹಾಸಕ್ಕೆ ಬಲಿಯಾಗಿ ಅರೆಜೀವವಾಗಿ ಪ್ರಾಣ ಹಿಡಿದಿರುವ ಅಭೀಷೇಕ ಎಂಬ ಹುಡುಗನ ದಯನೀಯ ಸ್ಥಿತಿಯಾಗಲೀ, ಆಡುಗಳು ತಪ್ಪಿಸಿಕೊಂಡು ತೋಟಕ್ಕೆ ನುಗ್ಗಿದವು ಎಂಬ ಕಾರಣಕ್ಕೆ ಹತ್ತು ವರ್ಷದ ದಲಿತ ಹುಡುಗಿಯನ್ನ ಗಿಡಕ್ಕೆ ಕಟ್ಟಿ ಬಾರಿಸುವ ಕ್ರೌರ‍್ಯವನ್ನು ಕಂಡಾಗ ಎದೆತುಂಬಿ ಬಂದು ಎಂಥವರಿಗೂ ಈ ವ್ಯವಸ್ಥೆಯ ಕುರಿತು ರೇಜಿಗೆ ಹುಟ್ಟದೆ ಇರದು. ಆದರೆ ನಾವು ಈ ಚಿತ್ರಗಳಲ್ಲಿರುವ ಆಂತರ್ಯದ ಕ್ರೌರ‍್ಯವನ್ನು ಮನಗಾಣಿಸಿ ಆರೋಗ್ಯವಂತ ಮನಸ್ಸುಗಳನ್ನು ಕಟ್ಟುವಲ್ಲಿ ನಮ್ಮ ಶ್ರಮ ಸಾಲದು ಎನಿಸುತ್ತಿದೆ.
ನಮ್ಮೆದುರು ಸಂಭವಿಸುತ್ತಿರುವ ಸಮಾಜೋ – ಆರ್ಥಿಕ ವಿಪ್ಲವಗಳಿಗೆ ನಮ್ಮ ದೇಸೀಯ ಸಂಸ್ಕೃತಿ ಮತ್ತು ಸಾಹಿತ್ಯಗಳು ಪ್ರತಿಕ್ರಿಯಿಸುತ್ತಿವೆಯೆ?
ಸಮಾಜೋ- ಆರ್ಥಿಕ ವಿಪ್ಲವಗಳನ್ನು ತುಂಬ ವಸ್ತುನಿಷ್ಠವಾಗಿ ಸಮರ್ಥವಾಗಿ ಕಟ್ಟಿಕೊಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ಪರಿಣಾಮಕಾರಿಯಾಗಿ ನಡೆಯುತ್ತಿವೆ. ಆದರೆ ಇದೆಲ್ಲವನ್ನೂ ನಿರ್ಲಕ್ಷಿಸುವ ಪ್ರಭುತ್ವದ ಉದಾಸೀನತೆ ಬೇಸರ ಹುಟ್ಟಿಸುತ್ತದೆ.
ನಮ್ಮ ಮುಂದೆ ನಡೆಯುತ್ತಿರುವ ’ಅಭಿವೃದ್ಧಿ’ಯ ದಾರಿ – ಪರಿಣಾಮಗಳ ಬಗ್ಗೆ ನಿಮ್ಮ ಅವಗಾಹನೆ ಏನು?
ಅಭಿವೃದ್ಧಿ ಎನ್ನುವ ಪದವನ್ನು ಪ್ರಭುತ್ವ ವ್ಯಾಖ್ಯಾನಿಸಿಕೊಂಡಿರುವ ರೀತಿ ಮತ್ತು ಜನಸಾಮಾನ್ಯರು ಅಪೇಕ್ಷಿಸುವ ರೀತಿ ತದ್ವಿರುದ್ಧ. ಲಕ್ಷ ಕೋಟಿ ಬಜೆಟ್ಟು ಯಾರ ಅಭಿವೃದ್ಧಿಗೆ ಎಂಬುದು ಪ್ರಶ್ನೆ. ಸಾವಿರ ಗುಡಿಸಲುಗಳು ಕಣ್ಣಮುಂದಿವೆ. ನಮಗೆ ಅನ್ನ ನೀಡಿದ ರೈತ ಆತ್ಮಹತ್ಯೆಗೆ ಹೊರಟಿರುವ ಕರಾಳತೆಯ ಅರಿವು ಈ ಪ್ರಭುತ್ವಕ್ಕಿಲ್ಲ. ಅಭಿವೃದ್ಧಿಯಲ್ಲ, ಉಳಿವಿಗಾಗಿ ನಮ್ಮ ಜನ ಹೋರಾಡುತ್ತಿರುವಾಗ ಕೋಟಿ ಕೋಟಿ ಬಜೆಟ್ಟನ್ನು ಮಂಡಿಸುವ ನಾಡಪ್ರಭುಗಳಿಗೆ ಮನುಷ್ಯತ್ವವಿದೆಯೆ ಎಂಬ ಪ್ರಶ್ನೆ ಮೂಡುತ್ತದೆ.
ಕನ್ನಡ ಸಾಹಿತ್ಯಲೋಕದಲ್ಲಿ ಅಭಿಪ್ರಾಯ ಭೇಧಗಳನ್ನು ಒಬ್ಬ ಯುವ ಸಾಹಿತಿಯಾಗಿ ಹೇಗೆ ನೋಡುತ್ತೀರಿ?
ಅಭಿಪ್ರಾಯ ಭೇದವಷ್ಟೇ ಆದರೆ ಸರಿ ನಡೆಯಲಿ ಎನ್ನಬಹುದು. ಆದರೆ ಜೀವವಿರೋಧಿ ಪ್ರಭುತ್ವದ ಸಮರ್ಥನೆಗಿಳಿದರೆ ಸಹಿಸುವುದು ಕಷ್ಟ. ಖಾವಿಯೊಂದೇ ಅನೈತಿಕ ಸಂಬಂಧವನ್ನು ಆಳುವ ಪ್ರಭುತ್ವದೊಂದಿಗೆ ಹೊಂದಿಲ್ಲ.
ಕೆಲವರ ಚಿಂತನೆಗಳನ್ನು ಗಮನಿಸಿದರೆ
ಈ ಕಾಲದ ಅವಘಡಗಳಿಗೆ ಸಾಹಿತ್ಯದ ಕೊಡುಗೆಯೂ ಇಲ್ಲದಿಲ್ಲ.

ಚಾಮರಾಜ ಸವಡಿ ಬರೆಹ- ಗುರುವಾದ ಮಗಳಿಗೆ ಈಗ ಹತ್ತು ವರ್ಷ

ಕೃಪೆ: www.chamarajasavadi.blogspot.in



ಮನೆ ಎದುರಿನ ರಸ್ತೆಯಲ್ಲಿ ಮಕ್ಕಳ ಗುಂಪು, ಗದ್ದಲ. ಈಗ ತಾನೇ ನಡೆಯಲು ಕಲಿತ ಮಗುವಿನಿಂದ ಹಿಡಿದು ಹೈಸ್ಕೂಲು ಮೆಟ್ಟಿಲು ಹತ್ತಲಿರುವ ವಯಸ್ಸಿನವರೆಗಿನ ಮಕ್ಕಳು ಅಲ್ಲಿದ್ದಾರೆ. ಅವರು ಆಡಿದ್ದೇ ಆಟ. ಹಾಕಿದ್ದೇ ನಿಯಮ. ಪರೀಕ್ಷೆ ಮುಗಿದ ಸಂತಸದಲ್ಲಿ ಕೂಗಾಡುತ್ತ ಆಡುತ್ತಿದ್ದಾರೆ. 


ಅವರ ಗುಂಪಿನಿಂದ ದೂರ, ಮನೆ ಎದುರಿಗೆ ಹಾಸಿದ ಪುಟ್ಟ ಕಟ್ಟೆಯಂತಿರುವ ಜಾಗದಲ್ಲಿ ಆಯಾ ಮನೆಗಳ ತಾಯಂದಿರು, ಅಜ್ಜಿಯರು ಕೂತಿದ್ದಾರೆ. ಅವರ ಮಧ್ಯೆ ಮಗುವೊಂದು ಕೂತಿದೆ. ಅದಕ್ಕೆ ಆಡುವ ಮಕ್ಕಳ ಕೇಕೆಯ ಕಡೆ ಗಮನವಿಲ್ಲ. ಅದರ ಲೋಕವೇ ಬೇರೆ.
ಆಕೆ ಗೌರಿ.
ಹತ್ತು ವರ್ಷಗಳ ಹಿಂದೆ, ಇದೇ ದಿನ (ಏಪ್ರಿಲ್ ೧೯) ಗೌರಿ ಜನಿಸಿದಾಗ ನಾನು ಕೊಪ್ಪಳದಲ್ಲಿದ್ದೆ. ಬದುಕು ಕಟ್ಟಿಕೊಳ್ಳುವ ಹೆಣಗಾಟದ ದಿನಗಳವು. ಅನಿವಾರ್ಯವಾಗಿ ಶುರು ಮಾಡಿದ್ದ ವಾರಪತ್ರಿಕೆಯೊಂದಕ್ಕೆ ಬರೆಯುತ್ತ ಕೂತವನನ್ನು ಫೋನ್ ಮಾಡಿ ಕರೆಸಿದ್ದರು ಮಾವ. ನೀವು ಬಿಜಿ ಇರ್ತೀರಂತ ಹೇಳಿರಲಿಲ್ಲ. ರೇಖಾಳನ್ನು ನಿನ್ನೆ ರಾತ್ರಿಯೇ ಆಸ್ಪತ್ರೆಗೆ ಸೇರಿಸಿದ್ವಿ. ಬೇಗ ಬನ್ನಿ ಎಂದಿದ್ದರು. 
ರಾತ್ರಿಯಿಡೀ ನಿದ್ದೆಗೆಟ್ಟವನು ಹಾಗೇ ಪೆನ್ನು ಮುಚ್ಚಿಟ್ಟು ಅವಸರದಲ್ಲಿ ಆಸ್ಪತ್ರೆಗೆ ಬಂದಿದ್ದೆ. ನನ್ನನ್ನೇ ಕಾಯುತ್ತಿದ್ದ ಡಾಕ್ಟರ್, ಸಿಸೇರಿಯನ್ ಆಗ್ಬೇಕು, ನೀವಿಲ್ಲಿ ಸೈನ್ ಮಾಡಿ ಎಂದು ಮುಂದೆ ಹಿಡಿದ ಹಾಳೆಯಲ್ಲಿ ಸಹಿ ಮಾಡಿ ಅರ್ಧ ಗಂಟೆ ಸುಮ್ಮನೇ ಕೂತಿದ್ದೆ. ವರ್ಷದ ಹಿಂದೆ ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಬರೆದು, ರಜೆಯಲ್ಲಿ ಮದುವೆಯಾಗಿದ್ದ ರೇಖಾ ಒಳಗೆ ಲೇಬರ್ ರೂಮಿನಲ್ಲಿ ತಾಯಾಗಲಿದ್ದಳು. 
ಏನಿದ್ದವು ನನ್ನ ಭಾವನೆಗಳಾಗ?
ಇದ್ದ ಇಬ್ಬರೇ ಬಲು ಸಾಧಾರಣ ಜೀವನ ಸಾಗಿಸಲೂ ಕಷ್ಟಪಡಬೇಕಿತ್ತು. ಈಗ ನಮ್ಮ ಮಧ್ಯೆ ಇನ್ನೊಂದು ಜೀವ ಬರಲಿದೆ. ಅದಕ್ಕಾಗಿ ಹರ್ಷ ಪಡಬೇಕೋ, ಚಿಂತೆ ಮಾಡಬೇಕೋ ಎಂಬ ಗೊಂದಲ. 
ಸುಮ್ಮನೇ ಕೂತವನೆದುರು ಬಂದು ನರ್ಸ್ ಹೇಳಿದ್ದಳು: ಹೆಣ್ಣುಮಗು!
ಗೌರಿ ಹುಟ್ಟಿದ್ದು ಹಾಗೆ. 
*****
ಬಲು ಕೆಂಪಗಿತ್ತು ಮಗು. ಆಕೆಯನ್ನು ಮೊದಲ ಬಾರಿ ನೋಡಿದಾಗಿನ ಕ್ಷಣಗಳು ಇವತ್ತಿಗೂ ನೆನಪಿನಲ್ಲಿ ಹಚ್ಚಹಸಿರು. ಹೆರಿಗೆ ನೋವು, ಸಿಸೇರಿಯನ್ ರಗಳೆಯಲ್ಲಿ ಬಾಡಿದಂತಿದ್ದ ರೇಖಾಳ ಮೊಗದಲ್ಲಿ ಬೆಳದಿಂಗಳು. ಪಕ್ಕದಲ್ಲೇ ಮಲಗಿತ್ತು ಪುಟ್ಟ ಗೌರಿ- ಕೆಂಪಗೆ, ದಪ್ಪಗೆ, ಮುಷ್ಠಿ ಬಿಗಿದುಕೊಂಡು. 
ಆ ಕ್ಷಣದಲ್ಲಿ, ಈಕೆ ಮುಂದೆ ನನಗೆ ಗುರುವಾಗುತ್ತಾಳೆಂದು ಖಂಡಿತ ಅಂದುಕೊಂಡಿರಲಿಲ್ಲ. 
*****
ಮೂರು ತಿಂಗಳಾದರೂ ಗೌರಿಯ ಕತ್ತು ಸ್ಥಿರವಾಗಲಿಲ್ಲ. ದೃಷ್ಟಿ ಎತ್ತಲೋ. ಮಗು ಗೆಲುವಾಗಿತ್ತು. ಊಟ, ನಿದ್ದೆ, ತನ್ನ ಪಾಡಿಗೆ ತಾನು ಆಟವಾಡುವುದು ಎಲ್ಲಾ ಇದ್ದರೂ, ಸುತ್ತಲಿನ ಜಗತ್ತಿನೊಂದಿಗೆ ಸಂಬಂಧ ಇಲ್ಲದಂತಿತ್ತು. ತೊಟ್ಟಿಲ ಮೇಲೆ ಬಾಗಿ, ಲಟಿಕೆ ಹೊಡೆದು, ಗಿಲಿಗಿಲಿ ಆಡಿಸಿದರೂ ನಮ್ಮತ್ತ ದೃಷ್ಟಿ ಕೊಟ್ಟು ನೋಡುತ್ತಿರಲಿಲ್ಲ. ಶಬ್ದಕ್ಕೆ ಮುಖವರಳಿಸುತ್ತಿದ್ದುದನ್ನು ಬಿಟ್ಟರೆ, ಬಾಹ್ಯ ಜಗತ್ತಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. 
‘ಕೆಲ ಮಕ್ಕಳು ಹಾಗೇ. ಅದರಲ್ಲೂ ಮೊದಲ ಮಗು ಕೊಂಚ ನಿಧಾನ’ ಅಂದರು ಹಿರಿಯರು.
ಆರು ತಿಂಗಳುಗಳಾದವು. ಕತ್ತು ಕೊಂಚ ಸ್ಥಿರವಾಗಿದ್ದರೂ, ಉಳಿದೆಲ್ಲ ವಿಷಯಗಳಲ್ಲಿ ಅದಿನ್ನೂ ಹಸುಗೂಸೇ. 
‘ಕೆಲ ಮಕ್ಕಳು ಹಾಗೇ. ನಿಧಾನವಾಗಿ ಪ್ರತಿಕ್ರಿಯಿಸುತ್ತವೆ’ ಅಂದರು ಕೊಪ್ಪಳದ ಮಕ್ಕಳ ಡಾಕ್ಟರು.
ಎಂಟು ತಿಂಗಳಾದರೂ ಗೌರಿ ಅದೇ ಸ್ಥಿತಿಯಲ್ಲಿ ಉಳಿದಾಗ ಪಕ್ಕದ ಹೊಸಪೇಟೆಗೆ ಹೋಗಿ ಬೇರೊಬ್ಬ ಮಕ್ಕಳ ತಜ್ಞರಿಗೆ ತೋರಿಸಿದೆವು. ಕೆಲ ಪರೀಕ್ಷೆಗಳನ್ನು ಮಾಡಿ, ಗೌರಿಯ ತಲೆಯ ಗಾತ್ರವನ್ನು ಟೇಪ್‌ನಲ್ಲಿ ಅಳೆದ ಆ ವೈದ್ಯರು ಹೇಳಿದರು:
ಈಕೆಯ ಮೆದುಳಿನ ಬೆಳವಣಿಗೆ ಸಹಜವಾಗಿಲ್ಲ. ಬುದ್ಧಿಮಾಂದ್ಯತೆಯ ಲಕ್ಷಣಗಳು ಕಾಣಿಸ್ತಿವೆ. ನೀವೊಮ್ಮೆ ಸ್ಕ್ಯಾನ್ ಮಾಡಿಸೋದು ಉತ್ತಮ. ಹುಬ್ಬಳ್ಳಿ ಅಥವಾ ಬೆಂಗಳೂರಿಗೆ ಹೋಗಿ ಎಂದರು. 
ಮಗುವನ್ನು ಕರೆದುಕೊಂಡು ಹತ್ತಿರದ ಒಣಗಿದ ಪಾರ್ಕ್‌ನಲ್ಲಿ ಮೌನವಾಗಿ ಕೂತೆವು. ರೇಖಾ ನಿರಂತರವಾಗಿ ಅಳುತ್ತಿದ್ದರೆ, ನಾನು ಒಳಗೊಳಗೇ ಅಳುತ್ತ ಮಂಕಾಗಿ ಕೂತಿದ್ದೆ. ಗೌರಿಯೊಬ್ಬಳೇ ತನ್ನ ಪಾಡಿಗೆ ತಾನು ನಗುತ್ತಿದ್ದಿದ್ದು. 
*****
ಧಾರವಾಡದ ಮಕ್ಕಳ ವೈದ್ಯರು ಆಕೆಯ ಮೆದುಳಿನ ಬೆಳವಣಿಗೆ ಅಸಮರ್ಪಕವಾಗಿದ್ದನ್ನು ಸ್ಕ್ಯಾನಿಂಗ್ ಮಾಡಿ ತೋರಿಸಿದರು. ಅಲ್ಲಿಗೆ ಚಿತ್ರಣ ಸ್ಪಷ್ಟವಾಗಿತ್ತು. 
ನಡೆಸುತ್ತಿದ್ದ ಪತ್ರಿಕೆ ಮುಚ್ಚಿ ರೇಖಾ ಮತ್ತು ಗೌರಿಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದೆ. ಓ ಮನಸೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತ ನಿಮ್ಹಾನ್ಸ್‌ನಲ್ಲಿ ಗೌರಿಯನ್ನು ತೋರಿಸಿದೆವು. ಅವರ ಚಿತ್ರಣ ಇನ್ನೂ ನಿಖರವಾಗಿತ್ತು. ಗೌರಿಯ ಮೆದುಳಿನ ಶೇ.೪೦ರಿಂದ ೪೫ ಭಾಗದಲ್ಲಿ ಚಟುವಟಿಕೆಯೇ ಇರಲಿಲ್ಲ. 
‘ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಆಕೆಯ ಜೊತೆ ಮಾತಾಡಿ. ಆಟ ಆಡಿಸಿ. ಫಿಸಿಯೋಥೆರಪಿ ಮಾಡಿಸಿ. ಆಕೆ ಸಾಮಾನ್ಯ ಸ್ಥಿತಿಗೆ ಬರುತ್ತಾಳೆಂದು ಹೇಳಲಾರೆವು. ಆದರೆ, ಆ ಸ್ಥಿತಿಗೆ ಹತ್ತಿರವಾಗಿಸಲು ಪ್ರಯತ್ನಿಸಿ. ಒಳ್ಳೆಯದಾಗಲಿ’ ಎಂದರು ನಿಮ್ಹಾನ್ಸ್‌ನ ಕರುಣಾಮಯಿ ವೈದ್ಯರು.
ಅವತ್ತು ಮತ್ತೆ ಅತ್ತಿದ್ದೆವು ಇಬ್ಬರೂ. 
*****
ಈಕೆ ದೇವರಿಗೆ ಹರಕೆ ಹೊತ್ತಳು. ನಾನು ತಜ್ಞರ ಶೋಧದಲ್ಲಿ ತೊಡಗಿದೆ. ಭರವಸೆ ಹುಟ್ಟಿಸಿದ ಪ್ರತಿಯೊಬ್ಬ ವೈದ್ಯರಲ್ಲೂ ತೋರಿಸಿದೆವು. ಅವರ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದೆವು. ನಿಮ್ಹಾನ್ಸ್‌ನಲ್ಲೇ ಇದ್ದ ಆಯುರ್ವೇದ ವಿಭಾಗದಲ್ಲಿ ವಾರಪೂರ್ತಿ ಚಿಕಿತ್ಸೆ ಆಯಿತು. ಅವನ್ನೇ ಮನೆಯಲ್ಲೂ ಮಾಡುತ್ತ ಹೋದೆವು. 
ಊಹೂಂ. ಅವ್ಯಾವೂ ತಕ್ಷಣದ ಭರವಸೆ ಮೂಡಿಸಲಿಲ್ಲ. 
ಹೋಮಿಯೋಪತಿ ಚಿಕಿತ್ಸೆಯ ಬೆನ್ನು ಹಿಡಿದು ಹುಬ್ಬಳ್ಳಿ, ಪುಣೆ ಎಂದೆಲ್ಲಾ ಓಡಾಡಿದೆವು. ಯಾವುದೂ ಕೈ ಹಿಡಿಯಲಿಲ್ಲ. 
ಅಷ್ಟೊತ್ತಿಗೆ ಪ್ರಜಾವಾಣಿ ಸೇರಿಕೊಂಡಿದ್ದ ನಾನು ಧಾರವಾಡಕ್ಕೆ ವರ್ಗ ಕೇಳಿ ಪಡೆದೆ. ಹೋದಲ್ಲೆಲ್ಲ ದೇವರು, ಶಾಸ್ತ್ರದವರು, ತಜ್ಞರು ಎಂದೆಲ್ಲಾ ಅಲೆದೆವು. 
ಇವೆಲ್ಲ ಪ್ರಯೋಗಗಳು ಫಲ ನೀಡದೇ ಹೋದಾಗ ನಿಮ್ಹಾನ್ಸ್‌ನ ವೈದ್ಯರ ಮಾತು ನೆನಪಾದವು. 
ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಗೌರಿಯೊಂದಿಗೆ ಮಾತಾಡುವುದು ಶುರುವಾಯ್ತು. ಫಿಜಿಯೋಥೆರಪಿ ಪ್ರಾರಂಭಿಸಿದೆವು. ವಿಶೇಷ ಶಾಲೆಗೂ ಗೌರಿಯನ್ನು ಸೇರಿಸಿದೆವು. ಬದುಕು ನಿಧಾನವಾಗಿ ತಿರುಗಲು ಶುರುವಾಯ್ತು.
*****
ಗೌರಿ ಕೂಡಲು ಕಲಿತಿದ್ದು ಎರಡು ವರ್ಷಗಳ ನಂತರ. ಅಂಬೆಗಾಲಿಟ್ಟಿದ್ದು ನಾಲ್ಕು ವರ್ಷಗಳಿಗೆ. ತಡವರಿಸುತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟಿದ್ದು ಆರು ವರ್ಷಗಳ ನಂತರ. 
ಇವತ್ತಿಗೂ ಆಕೆ ನಮ್ಮ ಕಣ್ಣನ್ನು ೨-೩ ಸೆಕೆಂಡ್‌ಗಳಿಗಿಂತ ಹೆಚ್ಚು ನೋಡುವುದಿಲ್ಲ. ಕೆಲವು ಶಬ್ದಗಳನ್ನು ಬಿಟ್ಟರೆ ಬೇರೆ ಶಬ್ದಗಳನ್ನು ಆಡಿಲ್ಲ. ಇವತ್ತಿಗೂ ನಡಿಗೆ ಅಸಹಜ. ತಂಗಿಯೊಂದಿಗೆ ಬೆರೆಯುವುದು ತೀರಾ ಕಡಿಮೆ. 
ಆಟಿಸಂ ಮತ್ತು ಬುದ್ಧಿ ಮಾಂದ್ಯತೆಗಳೆರಡರ ಲಕ್ಷಣಗಳನ್ನೂ ಆಕೆಯಲ್ಲಿ ಗುರುತಿಸಿದ್ದಾರೆ ತಜ್ಞರು. ಈಗ ವಿಶೇಷ ಶಾಲೆಗೆ ಹೋಗುತ್ತಿದ್ದಾಳೆ. ಫಿಜಿಯೋಥೆರಪಿ, ಸ್ಪೀಚ್ ಥೆರಪಿ ಮುಂತಾದವೆಲ್ಲ ನಡೆದಿವೆ. ಈಗ ಆಕೆಗೆ ತಿಳಿವಳಿಕೆ ನಿಧಾನವಾಗಿ, ಬಲು ನಿಧಾನವಾಗಿ ಬೆಳೆಯುತ್ತಿದೆ. ಕೆಲವೊಂದು ಸರಳ ಮಾತುಗಳು ಅರ್ಥವಾಗುತ್ತವೆ. ಕೆಲವು ಸರಳ ಕೆಲಸಗಳನ್ನು ಮಾಡುತ್ತಾಳೆ. ಇವತ್ತಿಗೆ ಹತ್ತು ತುಂಬಿದ್ದರೂ ಗೌರಿ ನಮ್ಮ ಪಾಲಿಗೆ ಒಂದು ವರ್ಷದ ಮಗು.
*****
ಎಷ್ಟೋ ಸಾರಿ ಯೋಚಿಸುತ್ತೇನೆ: ಮಾತೇ ಆಡದ ಈಕೆ ನಮಗೆ ಎಷ್ಟೊಂದು ಕಲಿಸಿದಳಲ್ಲ ಎಂದು. ಆಕೆ ಬದುಕಿನ ರೀತಿ ನೀತಿಗಳ ಬಗ್ಗೆ ನನಗಿದ್ದ ಎಷ್ಟೊಂದು ಭ್ರಮೆಗಳನ್ನು ಹೋಗಲಾಡಿಸಿದಳು! ವಾಸ್ತವ ಪ್ರಪಂಚದ ಮಗ್ಗುಲಗಳನ್ನು ಪರಿಚಯಿಸಿದಳು. ನನಗೇ ಗೊತ್ತಿರದ ನನ್ನ ಮಿತಿ ಮತ್ತು ಸಾಮರ್ಥ್ಯವನ್ನು ತಿಳಿಸಿದಳು. ಕಿರಾಣಿ ಅಂಗಡಿಗೆ ಹೋಗಿ ರೇಶನ್ ತರಲು ಹಿಂಜರಿಯುತ್ತಿದ್ದ ರೇಖಾಳಿಗೆ ಇಡೀ ಬೆಂಗಳೂರನ್ನು ಕಾರಲ್ಲಿ ಸುತ್ತಿಬರುವಂತೆ ಮಾಡಿದಳು. ನಾನು ಕೆಲಸದ ಮೇಲೆ ಕೆಲಸಕ್ಕೆ ರಾಜೀನಾಮೆ ಬೀಸಾಡಿ ಬಂದು ಕೂತಾಗ, ಹೊಸ ಭರವಸೆ ಇನ್ನೂ ಇದೆ ಎಂಬುದನ್ನು ತೋರಿಸಿದಳು. ಮಂಕಾಗಿ ಕೂತವನಲ್ಲಿ ಹೊಸ ಕನಸು, ಸೋತ ಭಾವದ ಜಾಗದಲ್ಲಿ ಗೆಲುವಿನ ದಾರಿ ಮೂಡಿಸಿದಳು. 
ಅವಳು ಮೂಡಿಸಿದ ಸ್ಫೂರ್ತಿಯಿಂದ ರೇಖಾ ಮತ್ತೆ ಸಂಗೀತ ಕಲಿಯಲು, ದಿನಾ ಜಿಮ್‌ಗೆ ಹೋಗಲು, ನಾನು ವೃತ್ತಿಯ ಹೊಸ ಸಾಧ್ಯತೆಗಳತ್ತ ಮುಖ ಮಾಡಲು ಸಾಧ್ಯವಾಯಿತು. ಗೌರಿಯಂಥ ಮಗುವನ್ನು ನಾವೇ ನೋಡಿಕೊಳ್ಳಬೇಕೆಂಬ ಅನಿವಾರ್ಯತೆ ನಮ್ಮನ್ನು ನಿತ್ಯ ಚುರುಕಾಗಿರಿಸಿದೆ. ನಿತ್ಯ ಗೆಲುವಾಗಿರಿಸಿದೆ. ಅಪರಿಚಿತರಲ್ಲಿ ಆತ್ಮೀಯರನ್ನು ಹುಟ್ಟುಹಾಕಿದೆ. ಸವಾಲಿನ ಜಾಗದಲ್ಲಿ ಅವಕಾಶ, ಸೋಲಿನ ಜಾಗದಲ್ಲಿ ಹೊಸ ಯತ್ನವನ್ನು ಮೂಡಿಸಿದೆ. 
ಮಾತೇ ಆಡದ ಗೌರಿ ನಮಗೆ ಬದುಕಲು ಕಲಿಸಿದ್ದಾಳೆ. ಭರವಸೆ ಮೂಡಿಸಿದ್ದಾಳೆ. ನಿತ್ಯ ಹೊಸದೊಂದನ್ನು ಕಲಿಸುತ್ತ, ಹೊಸ ಭರವಸೆ ಮೂಡಿಸುತ್ತ, ತನ್ನ ಪಾಡಿಗೆ ತಾನು ನಗುತ್ತಲೇ ಇದ್ದಾಳೆ.
*****
ಥ್ಯಾಂಕ್ಸ್ ಗೌರಿ, ನೀನು ನಮ್ಮ ಮಗಳಾಗಿದ್ದಕ್ಕೆ. ನಮ್ಮ ಗುರುವಾಗಿದ್ದಕ್ಕೆ. 
ಹ್ಯಾಪಿ ಬರ್ತ್‌ಡೇ ನಿನಗೆ. 
- ಚಾಮರಾಜ ಸವಡಿ

ದಿನೇಶ್ ಅಮೀನ್ ಮಟ್ಟು ಲೇಖನ- ಸಚಿನ್, ರಾಜ್ಯಸಭೆ ನಿಮ್ಮ ಮೈದಾನ ಅಲ್ಲ

ಕೃಪೆ: ಪ್ರಜಾವಾಣಿ
ದಿ.30.04.2012, ಸೋಮವಾರ

ಕ್ರಿಕೆಟ್ ಜಗತ್ತಿನ `ದೇವರು` ಸಚಿನ್ ತೆಂಡೂಲ್ಕರ್  ಪ್ರಜಾಪ್ರಭುತ್ವದ ಗರ್ಭಗುಡಿಯಾದ ಸಂಸತ್ ಪ್ರವೇಶಿಸಿದ್ದಾರೆ. `ದೇವರು` ಇದ್ದಲ್ಲಿ ಭಕ್ತಿ-ಆರಾಧನೆಗಳಿರುತ್ತವೆ, ಪ್ರಶ್ನೆ-ವಿಮರ್ಶೆಗಳು ಇರುವುದಿಲ್ಲ. 
ರಾಜ್ಯಸಭೆಗೆ ಸಚಿನ್ ನಾಮಕರಣಗೊಂಡದ್ದನ್ನು ಸ್ವಾಗತಿಸುತ್ತಿರುವವರ ಮನಸ್ಸಲ್ಲಿ ಇಂತಹದ್ದೊಂದು ಕುರುಡು ಭಕ್ತಿ ಇದೆ. ಸಚಿನ್ ವಿಶ್ವ ಕಂಡ ಅದ್ಭುತ ಕ್ರಿಕೆಟಿಗ.  ಇಂತಹ ಇನ್ನೊಬ್ಬ ಆಟಗಾರ ಈ ನೆಲದಲ್ಲಿ ಮತ್ತೆ ಹುಟ್ಟಲಾರ ಎಂದು ಜನ ನಂಬುವಷ್ಟು ಎತ್ತರಕ್ಕೆ ಬೆಳೆದವರು ಸಚಿನ್. ಅವರ ಸಾಧನೆಗೆ ಯಾವ ಪ್ರಶಸ್ತಿ-ಗೌರವವೂ ಕಡಿಮೆಯೇ. ಆದರೆ ರಾಜ್ಯಸಭೆಗೆ ನಾಮಕರಣ? ಮೊದಲನೆಯದಾಗಿ ರಾಜ್ಯಸಭೆಯ ಸದಸ್ಯತ್ವ ಪ್ರಶಸ್ತಿಯೂ ಅಲ್ಲ, ಗೌರವವೂ ಅಲ್ಲ.


ಹೌದೆಂದು ತಿಳಿದುಕೊಂಡವರು ಮತ್ತೊಮ್ಮೆ ಸಂವಿಧಾನವನ್ನು ಓದಬೇಕು. ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ರಾಜ್ಯಸಭೆಗೆ ಮನೆ ಹಿರಿಯನ ಪಾತ್ರ. ಪ್ರಜೆಗಳೇ ನೇರವಾಗಿ ಆರಿಸಿ ಕಳುಹಿಸುವ ಸದಸ್ಯರ ಮೂಲಕ ರೂಪುಗೊಂಡ ಲೋಕಸಭೆಗಿಂತ ರಾಜ್ಯಸಭೆಗೆ ಮೇಲಿನ ಸ್ಥಾನ.
ಲೋಕಸಭೆ ಕೆಳಮನೆಯಾದರೆ ರಾಜ್ಯಸಭೆ ಮೇಲ್ಮನೆ. ವಿಧಾನಸಭಾ ಸದಸ್ಯರೇ ಆರಿಸಿ ಕಳುಹಿಸುವ ರಾಜ್ಯಸಭಾ ಸದಸ್ಯರು ಸಂಸತ್‌ನಲ್ಲಿ ರಾಜ್ಯದ ಹಕ್ಕು ಪಾಲಕರಾಗಿ ಕಾರ್ಯನಿರ್ವಹಿಸಬೇಕೆನ್ನುವುದು ಸಂವಿಧಾನದ ಆಶಯ.
ಈ ಹಿನ್ನೆಲೆಯಲ್ಲಿಯೇ ಇದನ್ನು `ರಾಜ್ಯಗಳ ಪರಿಷತ್` ಎನ್ನುವುದು. ಎದುರಾಗುವ ಆಪತ್ತುಗಳಿಂದ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸುವ ಉದ್ದೇಶ ಕೂಡಾ ರಾಜ್ಯಸಭೆ ರಚನೆಯ ಹಿನ್ನೆಲೆಯಲ್ಲಿ ಕೆಲಸ ಮಾಡಿದೆ. 

ರಾಜ್ಯಗಳು ಮತ್ತು ರಾಜ್ಯಸಭೆಯ ಸಂಬಂಧ ಅಷ್ಟೊಂದು ಆಪ್ತವಾದುದು. ಬುದ್ದಿಜೀವಿಗಳು ಮತ್ತು ವಿವಿಧ ಕ್ಷೇತ್ರಗಳ ಅನುಭವಿಗಳಿಗೆ ಸಂಸದೀಯ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಮೂಲಕ ರಾಷ್ಟ್ರನಿರ್ಮಾಣದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುವುದು ರಾಜ್ಯಸಭೆ ರಚನೆಯ ಇನ್ನೊಂದು ಉದ್ದೇಶ. 
ಪ್ರಧಾನಿ ಮನಮೋಹನ್‌ಸಿಂಗ್ ಅವರೂ ಸೇರಿದಂತೆ ಕೇಂದ್ರ ಸಂಪುಟದಲ್ಲಿ ಮಹತ್ವದ ಸಚಿವ ಖಾತೆಗಳನ್ನು ಹೊಂದಿದ್ದವರ ಪಟ್ಟಿಯನ್ನು ನೋಡಿದರೆ ಈ ಉದ್ದೇಶ ಇನ್ನಷ್ಟು ಸ್ಪಷ್ಟವಾಗುತ್ತದೆ. ರಾಜ್ಯಸಭೆಯ ಒಟ್ಟು ಬಲ 245. ಇದರಲ್ಲಿ 233 ಸ್ಥಾನಗಳನ್ನು ರಾಜ್ಯಗಳ ಪ್ರತಿನಿಧಿಗಳ ರೂಪದಲ್ಲಿ ವಿಧಾನಸಭಾ ಸದಸ್ಯರು ಚುನಾವಣೆ ಮೂಲಕ ಆಯ್ಕೆ ಮಾಡುತ್ತಾರೆ. 
ಉಳಿದ ಹನ್ನೆರಡು ಸ್ಥಾನಗಳಿಗೆ  ಸಾಹಿತ್ಯ, ವಿಜ್ಞಾನ,ಕಲೆ ಮತ್ತು ಸಮಾಜಸೇವೆಯ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ರಾಷ್ಟ್ರಪತಿಗಳು ನಾಮಕರಣ ಮಾಡುತ್ತಾರೆ, ಚುನಾವಣೆ ನಡೆಯುವುದಿಲ್ಲ. ಹೆಸರಿಗೆ ರಾಷ್ಟ್ರಪತಿಗಳ ನಾಮಕರಣ ಎಂದಿದ್ದರೂ ವಾಸ್ತವದಲ್ಲಿ ಆಡಳಿತಾರೂಢ ಪಕ್ಷ ಸೂಚಿಸಿದ ಹೆಸರುಗಳಿಗೆ ಮೊಹರು ಒತ್ತುವುದಷ್ಟೇ ಅವರ ಕೆಲಸ.
ಆದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನ ರಚನೆಕಾರರ ಆಶಯವನ್ನು ಭಂಗಗೊಳಿಸುವಂತಹ ವಿದ್ಯಮಾನಗಳು ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆ ಮತ್ತು ನಾಮಕರಣಗಳಲ್ಲಿ ನಡೆಯುತ್ತಿವೆ.


ಚುನಾವಣೆಯಲ್ಲಿ `ದುಡ್ಡಿನ ದೊಡ್ಡಪ್ಪ`ಗಳಿಗೆ ರಾಜ್ಯಸಭಾ ಸ್ಥಾನಗಳನ್ನು `ಮಾರಾಟ` ಮಾಡಲಾಗುತ್ತಿದೆ ಎಂಬ ಆರೋಪ ಎಡಪಕ್ಷಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜಕೀಯ ಪಕ್ಷಗಳ ಮೇಲೆ ಇವೆ. ಈ ಪಕ್ಷಗಳ ಆಯ್ಕೆಯ ಮೇಲೆ ಕಣ್ಣಾಡಿಸಿದರೆ ಈ ಆರೋಪಕ್ಕೆ ಪುರಾವೆಗಳೂ ಸಿಗುತ್ತವೆ. 

ಇತ್ತೀಚೆಗಷ್ಟೇ ಜಾರ್ಖಂಡ್‌ನಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅಂಶುಮಾನ್ ಮಿಶ್ರಾ ಎಂಬ ಉದ್ಯಮಿ ಬಿಜೆಪಿ ನಾಯಕರನ್ನು ಒಲಿಸಿಕೊಂಡು ಸ್ಪರ್ಧಿಸಲು ಬಯಸಿದ್ದ. ಎಲ್.ಕೆ.ಅಡ್ವಾಣಿ , ಯಶವಂತ್‌ಸಿನ್ಹಾ ಮೊದಲಾದವರ ವಿರೋಧದಿಂದ ಅದು ಸಾಧ್ಯ ಆಗಲಿಲ್ಲ. 
ಆದರೆ ಬೇರೊಬ್ಬ ಅಭ್ಯರ್ಥಿಯ ಸಂಬಂಧಿಕರಿಂದ ಚುನಾವಣಾ ಅಧಿಕಾರಿಗಳು ಎರಡು ಕಾಲು ಕೋಟಿ ರೂಪಾಯಿ ವಶಪಡಿಸಿಕೊಂಡ ನಂತರ `ಮತ ಖರೀದಿ`ಯ ಪ್ರಯತ್ನ ನಡೆಯುತ್ತಿರುವುದು ಖಾತರಿಯಾಗಿ ಆ ಚುನಾವಣೆಯನ್ನೇ ಆಯೋಗ ರದ್ದುಮಾಡಬೇಕಾಯಿತು.
25-30 ವರ್ಷಗಳ ಹಿಂದೆ ಉದ್ಯಮಿಗಳ ಜತೆ ನೇರವಾಗಿ ಗುರುತಿಸಿಕೊಳ್ಳಲು ರಾಜಕೀಯ ಪಕ್ಷಗಳು ಹಿಂಜರಿಯುತ್ತಿದ್ದವು. 1975ರಲ್ಲಿ ಜನಸಂಘ ವೀರೇನ್ ಶಹಾ ಎಂಬ ಉದ್ಯಮಿಯನ್ನು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಮಾಡಿದಾಗ ಯಾವ ರೀತಿಯ ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು ಎನ್ನುವುದನ್ನು ಹಿರಿಯ ಬಿಜೆಪಿ ನಾಯಕರು ಈಗಲೂ ನೆನೆಸಿಕೊಳ್ಳುತ್ತಾರೆ. 
ನಂತರದ ದಿನಗಳಲ್ಲಿ ಮುಖ್ಯವಾಗಿ ಆರ್ಥಿಕ ಉದಾರೀಕರಣದ ಶಕೆಯ ನಂತರ ಅನೈತಿಕತೆ ಎಂದು ಆರೋಪಿಸುವಷ್ಟರ ಮಟ್ಟಿಗೆ ಉದ್ಯಮಿಗಳು ಮತ್ತು ರಾಜಕಾರಣಿಗಳ ಸಂಬಂಧ ಬೆಳೆಯುತ್ತಾ ಬಂತು. ಆಕಾಂಕ್ಷಿ ಉದ್ಯಮಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಅವರ ಪ್ರವೇಶಕ್ಕೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ರೂಪಿಸುವ ಪಿತೂರಿ ಕೂಡಾ ಪ್ರಾರಂಭವಾಯಿತು.


ರಾಜ್ಯಸಭೆಗೆ ಸ್ಪರ್ಧಿಸುವವರು ಅವರನ್ನು ಆರಿಸಿ ಕಳುಹಿಸುವ ರಾಜ್ಯದ ಮತದಾರರಾಗಿರಬೇಕು ಮತ್ತು `ಸಾಮಾನ್ಯ ನಿವಾಸಿಗಳು` ಆಗಿರಬೇಕು ಎಂಬ ಷರತ್ತು ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿತ್ತು. ಎನ್‌ಡಿಎ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ಮಾಡಿ `ದೇಶದ ಯಾವುದೇ ಭಾಗದಲ್ಲಿ ಮತದಾರರಾಗಿರುವರು` ರಾಜ್ಯಸಭೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತು. 

ಈ ತಿದ್ದುಪಡಿಯನ್ನು ಪ್ರಶ್ನಿಸಿ ಹಿರಿಯ ಪತ್ರಕರ್ತರಾದ ಕುಲದೀಪ್ ನಯ್ಯರ್ ಮತ್ತು ಇಂದರ್‌ಜಿತ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಾಡುತ್ತಿರುವ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿಲ್ಲ. ತಿದ್ದುಪಡಿ ರದ್ದಾದರೆ ಮನಮೋಹನ್‌ಸಿಂಗ್ ಸೇರಿದಂತೆ ಹಲವರು ರಾಜ್ಯಸಭಾ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ.
ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿನ ಇಂತಹ ಅಕ್ರಮಗಳು ನಾಮಕರಣಕ್ಕೆ ಸಂಬಂಧಿಸಿದಂತೆ  ಕೇಳಿ ಬರದೆ ಇದ್ದರೂ, ಈ ಅವಕಾಶವನ್ನು ರಾಜಕೀಯವಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಎಲ್ಲ ಪಕ್ಷಗಳೂ ಎದುರಿಸುತ್ತಿವೆ. 
ಆಡಳಿತಾರೂಢ ಪಕ್ಷಗಳು ನಾಮಕರಣದ ನೆಪದಲ್ಲಿ ಒಂದೆಡೆ ತಮ್ಮ ಪಕ್ಷದ ಸದಸ್ಯರನ್ನೇ ರಾಜ್ಯಸಭೆಗೆ ನಾಮಕರಣ ಮಾಡುತ್ತಾ ಬಂದಿದ್ದರೆ, ಇನ್ನೊಂದೆಡೆ ಗಣ್ಯರನ್ನು ನಾಮಕರಣಕ್ಕೆ ಆಯ್ಕೆ ಮಾಡುವಾಗಲೂ ಆ ಸ್ಥಾನಕ್ಕೆ ಬೇಕಾದ ಅರ್ಹತೆಗಿಂತಲೂ ಹೆಚ್ಚಾಗಿ ಅದರಿಂದ ಆಗಲಿರುವ ರಾಜಕೀಯ ಲಾಭದ ಲೆಕ್ಕಾಚಾರ ಮಾಡುತ್ತಾ ಬಂದಿರುವುದನ್ನು ಕಾಣಬಹುದು. 
ಇಲ್ಲಿಯವರೆಗೆ ನಾಮಕರಣಗೊಂಡ ಕ್ರಿಕೆಟಿಗ ಸಚಿನ್, ಚಿತ್ರತಾರೆ ರೇಖಾ ಸೇರಿದಂತೆ ರಾಜ್ಯಸಭೆಗೆ ನಾಮಕರಣಗೊಂಡ 121 ಸದಸ್ಯರ ಪಟ್ಟಿ ಮೇಲೆ ಕಣ್ಣಾಡಿಸಿದರೆ ಇದು ಇನ್ನಷ್ಟು ನಿಚ್ಚಳವಾಗಿ ಕಾಣುತ್ತದೆ. 
ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಅವರನ್ನು ಎದುರು ಹಾಕಿಕೊಳ್ಳದೆ ಹೋಗಿದ್ದರೆ ಇಲ್ಲವೇ ಕಾಂಗ್ರೆಸ್ ಬಗ್ಗೆ ಟೀಕೆ ಮಾಡಿದ್ದರೆ, ಸಚಿನ್ ಅವರ ನಾಮಕರಣಕ್ಕೆ ಕಾಂಗ್ರೆಸ್ ಮುಂದಾಗುತ್ತಿತ್ತೇ ಎನ್ನುವುದು ಪ್ರಶ್ನೆ.
ಈಗಿನ ರಾಜ್ಯಸಭೆಯಲ್ಲಿ ನಾಮಕರಣಗೊಂಡ ಹತ್ತು ಸದಸ್ಯರಿದ್ದಾರೆ. ಇವರಲ್ಲಿ ಕಾಂಗ್ರೆಸ್ ಸದಸ್ಯರಾದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಮತ್ತು ಬಾಲಚಂದ್ರ ಮುಂಗೇಕರ್ ಅವರು `ಗಣ್ಯರ` ಹೆಸರಲ್ಲಿ ನುಸುಳಿದವರು. ಉಳಿದಂತೆ ಜಾವೇದ್ ಅಖ್ತರ್ (ಸಾಹಿತಿ) ಎಚ್.ಕೆ.ದುವಾ (ಪತ್ರಕರ್ತ), ಅಶೋಕ್ ಗಂಗೂಲಿ (ಉದ್ಯಮಿ), ಬಿ.ಜಯಶ್ರಿ (ರಂಗಭೂಮಿ ಕಲಾವಿದೆ), ಅನು ಅಗಾ (ಉದ್ಯಮಿ) ರೇಖಾ (ಚಿತ್ರನಟಿ) ಮತ್ತು ಸಚಿನ್ ತೆಂಡೂಲ್ಕರ್(ಕ್ರಿಕೆಟಿಗ) ಅವರು ಗಣ್ಯರ ಕೋಟಾದಲ್ಲಿ ನಾಮಕರಣಗೊಂಡವರು. 
ಈ ಆರೂ ಮಂದಿ ತಮ್ಮ  ಕ್ಷೇತ್ರದಲ್ಲಿ ಸಾಧನೆ ಮೂಲಕ ಅಗ್ರಗಣ್ಯರೆಂಬ ಗೌರವಕ್ಕೆ ಪಾತ್ರರಾದವರು. ಆದರೆ ರಾಜ್ಯಸಭೆಯ ಇತಿಹಾಸವನ್ನು ನೋಡಿದರೆ ಈ `ಅಗ್ರಗಣ್ಯ`ರೆನಿಸಿಕೊಂಡ ಸದಸ್ಯರ ಸಾಧನೆ ನಿರಾಶಾದಾಯಕ.


ನಿಷ್ಕ್ರಿಯರೆನಿಸಿಕೊಂಡ ನಾಮಕರಣ ಸದಸ್ಯರಲ್ಲಿ ಹಿಂದಿ ಚಿತ್ರರಂಗದಿಂದ ಬಂದವರಿಗೆ ಮೊದಲ ಸ್ಥಾನ. 1999ರಿಂದ 2005ರ ವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಖ್ಯಾತ ಹಿಂದಿ ಗಾಯಕಿ ಲತಾ ಮಂಗೇಶ್ಕರ್ ಅವರು ಪ್ರಮಾಣ ವಚನ ಸ್ವೀಕರಿಸಲು ಹೋಗಿದ್ದನ್ನು ಬಿಟ್ಟರೆ ಎಂದೂ ಕಲಾಪದಲ್ಲಿ ಭಾಗವಹಿಸಿಯೇ ಇಲ್ಲ. 

ದಿಲೀಪ್‌ಕುಮಾರ್, ದಾರಾಸಿಂಗ್,ಧರ್ಮೇಂದ್ರ, ಶ್ಯಾಮ್ ಬೆನೆಗಲ್ ಸೇರಿದಂತೆ ರಾಜ್ಯಸಭೆಗೆ ನಾಮಕರಣಗೊಂಡ ಚಿತ್ರನಟರ ಸಂಸದೀಯ ಸಾಧನೆ ಶೂನ್ಯ. ಇವರಿಗೆಲ್ಲ ಹೋಲಿಸಿದರೆ ರಾಜ್ಯಸಭೆಯಲ್ಲಿದ್ದು ಸದ್ದು ಮಾಡಿದವರು ನಟಿ ಶಬನಾ ಅಜ್ಮಿ ಮಾತ್ರ.  `ಚಿರಯುವತಿ` ರೇಖಾ ಯಾವ ಸಾಲಿಗೆ ಸೇರಲಿದ್ದಾರೆ ಎನ್ನುವುದನ್ನು ನೋಡಬೇಕಾಗಿದೆ.
ಕರ್ನಾಟಕದವರಾದ ರಂಗಭೂಮಿ ಕಲಾವಿದೆ ಬಿ.ಜಯಶ್ರಿ ಅವರು ರಾಜ್ಯಸಭೆ ಪ್ರವೇಶಿಸಿ ಎರಡು ವರ್ಷಗಳಾಗಿವೆ. ಇಲ್ಲಿಯವರೆಗೆ ಅವರು ಸದನದಲ್ಲಿ ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ. ವಿಶೇಷ ಪ್ರಸ್ತಾವ ಮಾಡಿಲ್ಲ. ಯಾವ ಮಸೂದೆಯ ಬಗ್ಗೆಯೂ ಮಾತನಾಡಿಲ್ಲ. 
ಆಶ್ಚರ್ಯವೆಂದರೆ ಟಿವಿ ಚಾನೆಲ್‌ಗಳಲ್ಲಿ ನೋಡುತ್ತಿರುವಾಗ ವಾಚಾಳಿಯಂತೆ ಕಾಣಿಸುವ ಜಾವೇದ್ ಅಖ್ತರ್  ಚರ್ಚೆಗಳಲ್ಲಿ ಒಂದಷ್ಟು ಹೊತ್ತು ಭಾಗವಹಿಸಿದ್ದು ಬಿಟ್ಟರೆ, ಪ್ರಶ್ನೆಗಳನ್ನು ಕೇಳಿದ ಇಲ್ಲವೆ ವಿಶೇಷ ಪ್ರಸ್ತಾವವನ್ನು ಮಾಡಿದ ದಾಖಲೆಗಳು ಇಲ್ಲ. ಉದ್ಯಮಿ ಅಶೋಕ್ ಗಂಗೂಲಿಯವರ ಸಾಧನೆಯೂ ಅಷ್ಟಕ್ಕಷ್ಟೆ. ಈ ವರೆಗೆ ರಾಜ್ಯಸಭೆಗೆ ನಾಮಕರಣಗೊಂಡ ಸದಸ್ಯರಲ್ಲಿ ಕ್ರಿಯಾಶೀಲರಾಗಿದ್ದವರೆಂದರೆ ಪತ್ರಕರ್ತರು ಮಾತ್ರ.


ನಾಮಕರಣಗೊಂಡ ಹಾಲಿ ಸದಸ್ಯರಲ್ಲಿ ಮಣಿ ಶಂಕರ್ ಅಯ್ಯರ್ ಅವರನ್ನು ಬಿಟ್ಟರೆ ಸಕ್ರಿಯವಾಗಿ ಕಲಾಪದಲ್ಲಿ ಭಾಗವಹಿಸುತ್ತಿರುವವರು ಹಿರಿಯ ಪತ್ರಕರ್ತ ಎಚ್.ಕೆ.ದುವಾ. ಆರ್.ಕೆ.ಕರಂಜಿಯಾ ಅವರಿಂದ ಹಿಡಿದು ಇತ್ತೀಚಿನ ಚಂದನ್ ಮಿತ್ರ ವರೆಗೆ ರಾಜ್ಯಸಭೆಗೆ ನಾಮಕರಣಗೊಂಡ ಪತ್ರಕರ್ತರೆಲ್ಲರೂ ಕಸಬುದಾರ ರಾಜಕಾರಣಿಗಳನ್ನು ಮೀರಿಸುವಂತೆ ಕಲಾಪದಲ್ಲಿ ಭಾಗವಹಿಸಿದ್ದಾರೆ.

ಆದರೆ ಸಚಿನ್ ತೆಂಡೂಲ್ಕರ್? ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸುವಷ್ಟು ಸಮಯ ಅವರಲ್ಲಿದೆಯೇ ಎನ್ನುವುದು ಮೊದಲ ಪ್ರಶ್ನೆ. ಮಾರ್ಚ್‌ಗೆ ಕೊನೆಗೊಂಡ ಒಂದು ವರ್ಷದಲ್ಲಿ ಸಚಿನ್ 250 ದಿನ ಕ್ರಿಕೆಟ್ ಆಡಿದ್ದಾರೆ.


ಈಗಲೂ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಸೂಚನೆಯನ್ನು ಅವರು ನೀಡುತ್ತಿಲ್ಲ. ಹೀಗಿದ್ದಾಗ ರಾಜ್ಯಸಭಾ ಸದಸ್ಯತ್ವವನ್ನು ಅಲಂಕಾರಿಕ ಹುದ್ದೆಯನ್ನಾಗಿ ಸ್ವೀಕರಿಸುವುದಕ್ಕೆ ಏನು ಅರ್ಥ ಇದೆ? ನಿವೃತ್ತಿಯಾಗಲು ಅವರು ನಿರ್ಧರಿಸಿದರೂ ಬಿಡುವಿನ ಸಮಯವನ್ನು ಉಪಯೋಗಿಸಿಕೊಳ್ಳುವುದಕ್ಕೆ ಅವರದ್ದೇ ಆದ ಕ್ಷೇತ್ರ ಇದೆ.
ಅವರ ಅನುಭವದ ಅಗತ್ಯ ರಾಜಕೀಯ ಕ್ಷೇತ್ರಕ್ಕಿಂತ ಹೆಚ್ಚಾಗಿ ಕ್ರೀಡಾ ಕ್ಷೇತ್ರಕ್ಕೆ ಇದೆ. ಕ್ರಿಕೆಟ್ ಎನ್ನುವುದು ಒಂದು ಸರಳ ಕ್ರೀಡೆಯಾಗಿ ಉಳಿದಿಲ್ಲ, ಅದು ಉದ್ಯಮದ ಸ್ವರೂಪ ಪಡೆದು ಆಟಗಾರರೆಲ್ಲ ಹಣ ಗಳಿಸುವ ಯಂತ್ರಗಳಾಗಿ ಹೋಗಿದ್ದಾರೆ. 

ಸಚಿನ್ ತೆಂಡೂಲ್ಕರ್ ಎಂಬ ಮಹಾನ್ ತಾರೆ ಉದಿಯಮಾನವಾಗಿರುವ ಕಾಲದಲ್ಲಿಯೇ ಕ್ರಿಕೆಟ್ ಕ್ಷೇತ್ರ ಇಂತಹ ನೈತಿಕ ಅಧೋಗತಿಗೆ ತಲುಪಿರುವುದನ್ನು ಹೇಗೆ ತಳ್ಳಿಹಾಕುವುದು? ಈ ಅವನತಿಯಲ್ಲಿ ಸಚಿನ್ ಪಾಲಿಲ್ಲವೇ? 
ಹಿರಿಯರಿಂದ ಬಳುವಳಿಯಾಗಿ ಪಡೆದ  ಸ್ವಚ್ಚ ಕ್ರಿಕೆಟ್ ಮೈದಾನವನ್ನೇ  ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುತ್ತಿದ್ದೇನೆ ಎಂದು ಎದೆಮುಟ್ಟಿ ಹೇಳುವ ಧೈರ್ಯ ಸಚಿನ್ ಅವರಿಗಿದೆಯೇ? ಇಲ್ಲ ಎಂದಾದರೆ ಕ್ರಿಕೆಟ್ ಕ್ಷೇತ್ರ ಕಳೆದುಕೊಳ್ಳುತ್ತಿರುವ ಗೌರವವನ್ನು ಮರಳಿ ಗಳಿಸಿಕೊಡುವ ಹೊಣೆ ಈ ಮಹಾನ್ ತಾರೆಗೆ ಇಲ್ಲವೇ?
ದೇಶದಲ್ಲಿರುವ ಬಹುತೇಕ ಕ್ರೀಡಾ ಸಂಸ್ಥೆಗಳ ಉನ್ನತ ಪದಾಧಿಕಾರ ಸ್ಥಾನಗಳಲ್ಲಿ ರಾಜಕಾರಣಿಗಳು ವಿರಾಜಮಾನರಾಗಿದ್ದಾರೆ. ಕ್ರೀಡಾ ಕ್ಷೇತ್ರದ ಅವನತಿಗೆ ಇದು ಮುಖ್ಯ ಕಾರಣ. ಸಚಿನ್ ಕ್ರೀಡಾ ಕ್ಷೇತ್ರವನ್ನು ರಾಜಕಾರಣದ ಹಿಡಿತದಿಂದ ಮುಕ್ತಗೊಳಿಸಿದರೆ ಅದಕ್ಕಿಂತ ದೊಡ್ಡ ಕೊಡುಗೆ ಬೇರೆ ಇರಲಾರದು. ಸಮಾಜದಲ್ಲಿ ತಾನು ಹೊಂದಿರುವ ಗೌರವದ ಸ್ಥಾನ ಮತ್ತು ಗಳಿಸಿರುವ ಜನಪ್ರಿಯತೆಯ ಬಲದಿಂದ ಇದನ್ನು ಮಾಡಿ ತೋರಿಸಲು ಅವರಿಗೆ ಸಾಧ್ಯ ಇದೆ.


ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಂಡು ಸೋನಿಯಾಗಾಂಧಿ ಅವರ ನಿವಾಸಕ್ಕೆ ತೆರಳಿ ಕೃತಜ್ಞತೆ ಸೂಚಿಸಿ ಬರುವುದರಿಂದ ಇದನ್ನು ಮಾಡಲಾಗದು. ರಾಜ್ಯಸಭಾ ಸದಸ್ಯರಾಗಿ ಅಪರೂಪಕ್ಕೆ ಕಲಾಪದಲ್ಲಿ ಭಾಗವಹಿಸಿ ಕುಳಿತ ಆಸನವನ್ನು ಬಿಸಿಮಾಡಿ ಬರುವುದರಲ್ಲಿ ಏನೂ ಲಾಭ ಇಲ್ಲ. 

ಸಚಿನ್ ಅವರೊಬ್ಬ ಪ್ರತಿಭಾಶಾಲಿ ಆಟಗಾರನಿರಬಹುದು, ಕ್ರಿಕೆಟ್ ಕ್ಷೇತ್ರದಲ್ಲಿ ಅವರು ಯಶಸ್ಸನ್ನೂ ಗಳಿಸಿರಬಹುದು. ಆದರೆ ರಾಜಕೀಯ ಎನ್ನುವುದು ಬೇರೆಯೇ ಚೆಂಡಿನ ಆಟ. ಗೊತ್ತಿಲ್ಲದ ಆಟವನ್ನು ಆಡಲು ಹೊರಡುವವನು ಕ್ರೀಡಾಪಟು ಅಲ್ಲ.