Monday, 21 May 2012

ನಟರಾಜ್ ಹುಳಿಯಾರ್ ಸಂದರ್ಶನ


ಹರ್ಷಕುಮಾರ್ ಕುಗ್ವೆ.
ಸೌಜನ್ಯ:-ಹಸಿರೆಲೆ


ಡಾ. ನಟರಾಜ್ ಹುಳಿಯಾರ್ ಅವರು ಕಥೆಗಾರರಾಗಿ, ವಿಮರ್ಶಕರಾಗಿ ಮತ್ತು ಅಂಕಣಕಾರರಾಗಿ ಚಿರಪರಿಚಿತರು. ಲೋಹಿಯಾ ಚಿಂತನೆಗಳನ್ನು ಕನ್ನಡಕ್ಕೆ ತರುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಇತ್ತೀಚೆಗಷ್ಟೇ ನಟರಾಜ್ ಹುಳಿಯಾರ್ ಅವರ ಮೂರು ದಶಕಗಳ ಕತೆಗಳ ಸಂಕಲನ ’ಮಾಯಾಕಿನ್ನರಿ’ ಹಾಗೂ ಸಾಂಸ್ಕೃತಿಕ ಬರಹಗಳ ಸಂಕಲನ ’ಗಾಳಿ ಬೆಳಕು’ ಬಿಡುಗಡೆಯಾಗಿವೆ. ಇದೀಗ ಹಲವು ವಿಚಾರಗಳನ್ನು ಕುರಿತು ತಮ್ಮ ನಿಲುವುಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.



ಸಾಹಿತ್ಯ ವಿಮರ್ಶೆಯನ್ನೂ ಬರೆದಿರುವ ನೀವು ಸಾಹಿತ್ಯ ವಿಮರ್ಶೆ ಇಂದು ಪಡೆದುಕೊಂಡಿರುವ ಪ್ರಾಮುಖ್ಯತೆ ಬಗ್ಗೆ ಏನು ಹೇಳುತ್ತೀರಿ?

ಸಾಹಿತ್ಯ ಇರುವವರೆಗೂ ಸಾಹಿತ್ಯ ವಿಮರ್ಶೆ ಇರಲೇಬೇಕಾಗುತ್ತದೆ. ಸಾಹಿತ್ಯ ವಿಮರ್ಶೆ ಇಂದು ಬೇರೆಯದೇ ಸ್ವರೂಪ ತಾಳಿದೆ. ಇಂದು ಅದು ಸಾಹಿತ್ಯ ಸಿದ್ಧಾಂತವಾಗುವ ಕಡೆ ಹೊರಳಿಕೊಂಡಿದೆ. ಸಾಹಿತ್ಯವಿಮರ್ಶೆ ಒಂದು ಸ್ವತಂತ್ರ ಚಿಂತನಾ ಕ್ರಮವೂ ಹೌದು. ಸಂಸ್ಕೃತಿವಿಮರ್ಶೆ ಚಾಲ್ತಿಗೆ ಬಂದಾದ ಮೇಲೆ ಸಾಹಿತ್ಯವಿಮರ್ಶೆ ಕೇವಲ ಕೃತಿಯೊಂದನ್ನು ಕುರಿತ ವಿಮರ್ಶೆಯಾಗಿ ಉಳಿದಿಲ್ಲ. ಅದು ಸಂಸ್ಕೃತಿ, ನಾಗರಿಕತೆಗೆ ಸಂಬಂಧಿಸಿದ ವಿಶಾಲ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಕೀರ್ತಿನಾಥ ಕುರ್ತಕೋಟಿಯಂಥವರು ಆರಂಭಿಸಿದ ಸಾಹಿತ್ಯ ವಿಮರ್ಶೆಗೂ ಇಂದಿನ ಸಾಹಿತ್ಯ ವಿಮರ್ಶೆಗೂ ವ್ಯತ್ಯಾಸ ಇಲ್ಲಿದೆ. ಹೀಗಾಗಿ ಇಂದಿನ ಸಾಹಿತ್ಯ ವಿಮರ್ಶೆ ಸಾಹಿತ್ಯ ಕೃತಿಗಳಿಂದ ಹೆಚ್ಚು ಸ್ವತಂತ್ರವಾಗಿದೆ. ಹಾಗೇ ಸಾಹಿತ್ಯ ವಿಮರ್ಶೆ ಸಾಹಿತ್ಯ ಸಂಶೋಧನೆಗೂ ದೊಡ್ಡ ಮಟ್ಟದಲ್ಲಿ ಬಳಕೆಯಾಗುತ್ತಿದೆ.

ಕನ್ನಡದಲ್ಲಿ ಸಾಹಿತ್ಯವೇನೋ ಅಪಾರ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ. ಆದರೆ ಈ ಸಾಹಿತ್ಯ ಯಾವ ಮೌಲ್ಯಗಳನ್ನು ಬಿಂಬಿಸುತ್ತಿದೆ?

ಇಂದು ಸಹಸ್ರಾರು ಪುಸ್ತಕಗಳು ಬರುತ್ತಿರುವುದರಿಂದ ಎಲ್ಲಾ ಕೃತಿಗಳೂ ಎಲ್ಲರ ಕಣ್ಣಿಗೂ ಬೀಳದಿರಬಹುದು. ಆದರೆ ಎಲ್ಲಾ ಕಾಲದಲ್ಲೂ ಆ ಕಾಲದ ಶ್ರೇಷ್ಠ ಸಾಹಿತ್ಯ ಎನ್ನುವುದು ಬರುತ್ತಲೇ ಇರುತ್ತದೆ. ನಾನು ಜಗತ್‌ಸಾಹಿತ್ಯದ ವಿದ್ಯಾರ್ಥಿಯೂ ಆಗಿರುವುದರಿಂದ ಯಾಕೋ ನಮ್ಮ ಇತ್ತೀಚಿನ ಕೃತಿಗಳು ಆ ಮಟ್ಟವನ್ನು ತಲುಪುತ್ತಿಲ್ಲ್ಲವೇನೋ ಎಂದು ನನಗೆ ಅನ್ನಿಸಿದೆ. ಕುವೆಂಪು,ಅನಂತಮೂರ್ತಿ,ಲಂಕೇಶ್, ತೇಜಸ್ವಿ, ಬೇಂದ್ರೆ, ದೇವನೂರರಂತೆಯೇ ಕನ್ನಡೇತರ ಲೇಖಕರಾದ ಮಾರ್ಕ್ವೆಜ್, ನೆರೂಡ, ಮಿಲನ್ ಕುಂದೇರಾ ಕೂಡ ದೊಡ್ಡ ಲೇಖಕರು ಎಂಬ ಅರಿವು ಕೂಡ ನಮಗೆ ಬೇಕು. ಇದನ್ನು ಗ್ರಹಿಸುವಲ್ಲಿ ಅನೇಕರು ಸ್ಥಗಿತಗೊಂಡಿದ್ದಾರೆ ಅನ್ನಿಸುತ್ತದೆ.

ಬರಹಗಾರರ ಮೇಲೆ ಇರುತ್ತಿದ್ದ ಪಾಶ್ಚಾತ್ಯ ಸಾಹಿತ್ಯ ಸಿದ್ಧಾಂತಗಳ ಪ್ರಭಾವ ಇಂದು ಆ ಮಟ್ಟಕ್ಕಿಲ್ಲ. ಈ ಕುರಿತು ಏನು ಹೇಳುತ್ತೀರಿ?

ಪ್ರಾಯಶಃ ಕನ್ನಡಸಂಸ್ಕೃತಿ ತನ್ನನ್ನು ತಾನು ಸ್ವಯಂಪೂರ್ಣ ಎಂದುಕೊಂಡಿರಬಹುದು.ಆದರೆ,ನೋಮ್ ಚಾಮ್‌ಸ್ಕಿಯಂತಹ ಈ ಕಾಲದ ದೊಡ್ಡ ಸಿದ್ಧಾಂತಿಗಳಿದ್ದಾರೆ. ಅವರಿಂದ ನಾವು ಪಡೆಯದಿದ್ದರೆ ಹೇಗೆ?ಇಂದು ಸಾಹಿತ್ಯದಲ್ಲಿ ಪೂರ್ವ,ಪಶ್ಚಿಮಗಳ ಕಲ್ಪನೆ ಹಿಂದಿನಂತೆ ಇಲ್ಲ. ಯೂರೋಪಿನ ಕಾರ್ಲ್‌ಮಾರ್ಕ್ಸ್ ಸಮಾಜವನ್ನು ನಿರ್ದಿಷ್ಟ ದಿಕ್ಕುಗಳಿಂದ ವಿವರಿಸದಿದ್ದಲ್ಲಿ ನಂತರ ಲೋಹಿಯಾ, ಅಂಬೇಡ್ಕರ್‌ರಿಗಾಗಲೀ, ಸ್ತ್ರೀವಾದಿಗಳಿಗಾಗಲೀ, ಚಾಮ್‌ಸ್ಕಿಯಂತವರಿಗಾಗಲೀ ಹೊಸ ಹಾದಿಗಳು ತೆರೆಯುತ್ತಲೇ ಇರಲಿಲ್ಲ. ವಿಮೋಚನಾ ಸಿದ್ಧಾಂತ ಜಗತ್ತಿನ ಯಾವುದೇ ಮೂಲೆಯಿಂದ ಬರಲಿ,ಅದನ್ನು ನಾವು ಸ್ವೀಕರಿಸಬೇಕಾಗುತ್ತದೆ. ಈಗಿನ ವಸಾಹತೋತ್ತರ ಸನ್ನಿವೇಶವನ್ನು ವಿವರಿಸಲು ಕನ್ನಡದಲ್ಲೇ ಹೆಚ್ಚು ಥಿಯರಿಗಳಿವೆ ಎಂದು ನಾನು ತಿಳಿದಿಲ್ಲ. ಇದೇ ಕಾಲದಲ್ಲೇ ಇರುವ ಆಫ್ರಿಕಾದ ಗೂಗಿ ವಾ ಥಿಯಾಂಗೋ, ಚಿನುವಾ ಅಚಿಬೆ ಕೂಡ ಸಿದ್ಧಾಂತಗಳನ್ನು ಕಟ್ಟುತ್ತಿದ್ದಾರಲ್ಲ? ಎಡ್ವರ್ಡ್ ಸೈದ್ ಪ್ಯಾಲೆಸ್ತೀನಿಯರ ಪರವಾಗಿ ಚಿಂತಿಸ್ತಾ ಇದ್ದರಲ್ಲ? ಪೂರ್ವ, ಪಶ್ಚಿಮ ಎನ್ನುವ ಆಯ್ಕೆ ಕೂಡ ಅನೇಕ ಸಲ ಅವರವರ ಅಭಿರುಚಿ, ಸಂವೇದನೆಗೆ ಬಿಟ್ಟಿದ್ದು. ಉದಾಹರಣೆಗೆ ನನ್ನ ಹದಿನೇಳನೇ ವಯಸ್ಸಿನಲ್ಲಿ ಸಿಕ್ಕಿದ ಆಲ್ಬರ್ಟ್ ಕಾಮುವಿನ ’ಅನ್ಯ’ ನನ್ನನ್ನು ಎಲ್ಲೆಲ್ಲೋ ಕರೆದುಕೊಂಡು ಹೋಯಿತು. ನಮಗೆ ವ್ಯಕ್ತಿಯ ವರ್ತನೆಯನ್ನು ಅರಿಯುವುದಕ್ಕೆ ದೇವನೂರರ ’ದತ್ತ’, ಅನಂತಮೂರ್ತಿಯವರ ’ಕಾರ್ತೀಕ’, ತೇಜಸ್ವಿಯವರ ’ಸ್ವರೂಪ’…ಹೀಗೆ ಎಲ್ಲ ಕತೆಗಳೂ ಬೇಕು;ಹಾಗೆಯೇ ಕಾಫ್ಕಾನ ’ದ ಟ್ರಯಲ್’ ಕೂಡ ಬೇಕು.ಇವತ್ತು ಜಗತ್ತಿನ ಶ್ರೇಷ್ಠ ಲೇಖಕ ಮಾರ್ಕ್ವೆಜ್ ನಮ್ಮೊಂದಿಗಿದ್ದಾರೆ. ಝೆಕೋಸ್ಲವಾಕಿಯಾದ ಮಿಲನ್ ಕುಂದೇರ ನನಗೆ ಪ್ರಿಯವಾದ ಲೇಖಕ. ಅವರೊಂದಿಗೂ ನಾವು ಮಾತಾಡಿಕೊಳ್ಳಬೇಕಲ್ಲವೇ? ನಾವು ಪಶ್ಚಿಮದಿಂದ ಏನನ್ನೂ ಪಡೆಯಬಾರದು ಎಂದು ಒಂದು ತಡೆ ನಿರ್ಮಿಸಿಕೊಂಡು ಬಿಟ್ಟಿದ್ದೇವೆ. ಆದರೆ ಪಶ್ಚಿಮ ಎನ್ನುವುದು ಇಂದು ಏನೇನೋ ಆಗಿಬಿಟ್ಟಿದೆ. ಇಂದು ಇಂಗ್ಲೆಂಡ್‌ನಿಂದ ಯಾವ ದೊಡ್ಡ ಬರಹಗಾರನೂ ಬರುತ್ತಿಲ್ಲ. ಆದರೆ ಇಸ್ತಾನ್‌ಬುಲ್‌ನ ಒರಾನ್ ಪಾಮುಕ್ ಬರೆಯುತ್ತಿರುವುದು ನನಗೆ ಬಹಳ ಮುಖ್ಯ ಅನ್ನಿಸ್ತಿದೆಯಲ್ಲ?

ಬರಹಗಾರನಾದವನು ತನ್ನ ಅನುಭವಗಳಿಗೆ ನಿಷ್ಠನಾಗಿರಬೇಕೋ ಅಥವಾ ಸಮಾಜಕ್ಕೋ?

ಇದು ಯಾವತ್ತಿಗೂ ದೊಡ್ಡ ಪ್ರಶ್ನೆಯೇ. ನನ್ನ ಪ್ರಕಾರ ಬರಹಗಾರ ತಾನು ಕಂಡ ಸತ್ಯಕ್ಕೆ ನಿಷ್ಠವಾಗಿರಬೇಕು; ಜೊತೆಗೆ ಆ ಸತ್ಯವನ್ನು ಪರೀಕ್ಷಿಸುತ್ತಿರಬೇಕು. ನಾನು ಕಂಡ ಸತ್ಯವನ್ನು ಬರೆಯಲು ಸ್ವಾತಂತ್ರ್ಯ ಇರುವುದು ಸಾಹಿತ್ಯದಲ್ಲಿ ಮಾತ್ರ. ಅದು ಪತ್ರಿಕೋದ್ಯಮದಲ್ಲಿಲ್ಲ, ಟೀವಿಯಲ್ಲಿಲ್ಲ, ಟೀಚಿಂಗ್‌ನಲ್ಲೂ ಇಲ್ಲ. ಸಾರ್ವಜನಿಕ ಜೀವನದಲ್ಲಂತೂ ಇಲ್ಲವೇ ಇಲ್ಲ. ಆಳವಾದ, ನಿಷ್ಠುರವಾದ ಸತ್ಯಗಳನ್ನು ಹೇಳುವುದಕ್ಕೆ ಉಳಿದಿರುವ ಏಕಮಾತ್ರ ವೇದಿಕೆ ಸಾಹಿತ್ಯ.

ಲೇಖಕರಿಗೆ ಸಾಮಾಜಿಕ ಬದ್ಧತೆ ಎಂಬುದೊಂದು ಇರಬಾರದೇ?

ಜವಾಬ್ದಾರಿ ಇರಲೇಬೇಕು. ಬದ್ಧತೆ ಎನ್ನುವುದು ಬಹಳ ವಿಸ್ತಾರವಾದ,ಸೂಕ್ಷ್ಮವಾದ ಪ್ರಶ್ನೆ.ನಮಗೆ ಯಾವುದೋ ಒಂದರ ಬಗೆಗೆ ಬದ್ಧತೆ ಇದೆ ಎನ್ನುವ ಕಾರಣಕ್ಕೆ ಸಾಹಿತ್ಯ ರಚನೆಯಲ್ಲಿ ಕೆಲವು ರೀತಿಯ ಪೂರ್ವಗ್ರಹ, ಪಕ್ಷಪಾತಗಳನ್ನು ಮಾಡಬಾರದು. ಅದು ಸಾಹಿತ್ಯರಚನೆಯ ಮನೋಧರ್ಮಕ್ಕೆ ವಿರುದ್ಧವಾಗಿರುತ್ತದೆ. ಆದ್ದರಿಂದ ವ್ಯಕ್ತಿನಿಷ್ಠತೆಯೂ ಅಂತಿಮವಲ್ಲ, ಸಮಾಜ ನಿಷ್ಠತೆಯೂ ಅಂತಿಮವಲ್ಲ. ಎರಡೂ ಅತಿರೇಕಗಳು.



ಸಾಹಿತ್ಯದಲ್ಲಿ ಹಲವಾರು ಸಂವೇದನೆಗಳನ್ನು ಕಂಡಿದ್ದೇವೆ. ಇಂದು ಒಂದು ಬಗೆಯ ನಿರ್ದಿಷ್ಟ ಸಂವೇದನೆಯ ಚೌಕಟ್ಟಿಗೆ ಸಾಹಿತ್ಯವನ್ನು ಒಳಪಡಿಸಬಹುದಾ?

ಇಂದು ಜನರು ವಾಸ್ತವವನ್ನು ನೋಡುವ ಕ್ರಮವೇ ಬದಲಾಗಿದೆ. ಇದಕ್ಕೆ ಕಾರಣ ಮಾರುಕಟ್ಟೆ. ಇದರ ಪ್ರಭಾವದಿಂದಾಗಿ ನಮ್ಮ ದಿನನಿತ್ಯದ ಭಾಷೆಯೊಳಗೆ ಒಂದು ಗಿಲೀಟು ಬಂದು ಸೇರಿಕೊಂಡಿದೆ. ಲಾಭ ಬರುವುದಿದ್ದರೆ ಯಾವ ಭಾಷೆಯನ್ನಾದರೂ ಬಳಸಬಹುದು ಎಂದು ಈಗ ನಂಬಿಸಲು ಯತ್ನಿಸಲಾಗುತ್ತಿದೆ. ’೧೯೨೦ರ ಸುಮಾರಿಗೆ ಪಶ್ಚಿಮದ ಮನುಷ್ಯನ ಸ್ವಭಾವ ಬದಲಾಗಿದೆ’ ಎಂದು ವರ್ಜೀನಿಯಾ ವುಲ್ಫ್ ಹೇಳುತ್ತಿದ್ದರು. ತೊಂಬತ್ತರ ದಶಕದಲ್ಲಿ ಮನುಷ್ಯನ ಭಾಷೆ ಮತ್ತು ಸ್ವಭಾವ ಎರಡೂ ಬದಲಾಗಿರುವುದನ್ನು ನೋಡುತ್ತೇವೆ. ನಗರಗಳಲ್ಲಿ ಮತ್ತು ಸಣ್ಣ ಊರುಗಳಲ್ಲಿ ಮೊಬೈಲ್ ಬಳಕೆ ಹೆಚ್ಚಿದ ಮೇಲೆ ನಾವು ಅಗತ್ಯವೇ ಇಲ್ಲದೇ ಸುಳ್ಳು ಹೇಳುತ್ತಿದ್ದೇವಲ್ಲವೇ? ಆದ್ದರಿಂದ ಒಂದು ಕತೆಯಲ್ಲಿ ಅನುಭವವನ್ನು ಶೋಧಿಸುವಾಗ ಮನುಷ್ಯವರ್ತನೆಯ ಸರಿ-ತಪ್ಪುಗಳನ್ನು ಪುರಾಣಗಳ ಕಾಲದ ರೀತಿ ಗೆರೆ ಕೊಯ್ದು ಹೇಳುವುದು ಕಷ್ಟ. ನೀತಿ, ಅನೀತಿ, ಭ್ರಷ್ಟತೆ ಮುಂತಾದವನ್ನು ಬಹಳ ಸಂಕೀರ್ಣವಾಗಿ ನೋಡುವ ಸ್ಥಿತಿ ಬಂದಿದೆ. ಇದನ್ನೆಲ್ಲಾ ಶೋಧನೆ ಮಾಡಲು ಸಾಹಿತ್ಯದಲ್ಲಿ ಹೆಚ್ಚು ಅವಕಾಶ ಇದೆ. ಇನ್ನು ವಿಶಿಷ್ಟ ಸಂವೇದನೆಗಳ ವಿಷಯಕ್ಕೆ ಬಂದರೆ, ಇಂದು ದಲಿತ ಸಂವೇದನೆ ಒಂದು ಪ್ರತ್ಯೇಕವಾದ ವಿಶಿಷ್ಟ ಸಂವೇದನೆ ಎನ್ನಿಸುವುದಿಲ್ಲ. ಯಾಕೆಂದರೆ ಈಗ ಅದನ್ನು ಎಲ್ಲ ಪ್ರಗತಿಪರರೂ ಒಪ್ಪಿಕೊಂಡಿದ್ದಾರೆ. ಇಂದು ದಲಿತ ಸಂವೇದನೆಯನ್ನು ದಲಿತೇತರ ಬರಹಗಾರರೂ, ಮಹಿಳಾ ಸಂವೇದನೆಯನ್ನು ಪುರುಷ ಬರಹಗಾರರೂ ಸ್ವೀಕರಿಸುತ್ತಿದ್ದಾರೆ. ತೇಜಸ್ವಿಯವರ ’ಕಿರಗೂರಿನ ಗಯ್ಯಾಳಿಗಳು’ ಅಥವಾ ಮಹಾದೇವರ ’ಒಡಲಾಳ’ದ ಸಾಕವ್ವನ ಸೃಷ್ಟಿಗೆ ಸ್ತ್ರೀವಾದವೂ ಕಾರಣವಾಗಿದೆ. ಹೀಗಾಗಿ ಒಂದು ಕಾಲದಲ್ಲಿ ಒಂದು ನಿರ್ದಿಷ್ಟ ಸಂವೇದನೆ ಬೆಳೆದು ಕ್ರಮೇಣ ಅದು ಎಲ್ಲ ಲೇಖಕ,ಲೇಖಕಿಯರಿಗೂ ಹಬ್ಬಿ ಕನ್ನಡ ಸಾಹಿತ್ಯ ಸಂವೇದನೆಯಲ್ಲಿ ಬೆರೆತು ಹೋಗುತ್ತದೆ.

ಲೇಖಕಿಯರ ಸಂಖ್ಯೆ ಹಿಂದೆಂದಿಗಿಂತ ಹೆಚ್ಚಿರುವ ಇಂದಿನ ಸಂದರ್ಭದಲ್ಲಿ ಸ್ತ್ರೀವಾದ ಯಾವ ದಿಕ್ಕಿನಲ್ಲಿ ವಿಸ್ತರಿಸಿಕೊಂಡಿದೆ?

ಇವತ್ತಿನ ಸ್ತ್ರೀವಾದ ಹೊಸ ಹೊಸ ಅಧಿಕಾರ ಕೇಂದ್ರಗಳನ್ನು ಗುರುತಿಸುವ ಪ್ರಯತ್ನದಲ್ಲಿದೆ. ಇಂದು ದಲಿತ ಸ್ತ್ರೀವಾದ ಬರುತ್ತಿದೆ. ಪರಿಸರಕ್ಕೆ ಸಂಬಂಧಿಸಿದ ಸ್ತ್ರೀವಾದ ಬರುತ್ತಿದೆ. ಭಾರತೀಯ ನೆಲದಲ್ಲೇ ದಲಿತ, ಹಿಂದುಳಿದ ವರ್ಗಗಳ ಮಹಿಳೆಯರ ಕಷ್ಟಗಳು ಬೇರೆ ಬೇರೆ ರೀತಿ ಇದೆ. ಅದಕ್ಕೆ ತಕ್ಕಂತೆ ಸ್ತ್ರೀವಾದವೂ ವಿಸ್ತರಿಸುತ್ತಿದೆ. ದುಡಿಯುವ ವರ್ಗದ ಬಡ ಮಹಿಳೆಯರ ದೃಷ್ಟಿಯಿಂದ ಸ್ತ್ರೀವಾದವನ್ನು ವ್ಯಾಖ್ಯಾನಿಸುವ ಅಗತ್ಯವೂ ಇದೆ. ಐವತ್ತರ ದಶಕದಲ್ಲಿ ಸ್ತ್ರೀವಾದ ಹೇಗಿತ್ತೋ ಅದೇ ರೀತಿ ಇಂದು ಇಲ್ಲ.

ಒಂದು ಕಾಲದಲ್ಲಿ ತಾವು ಪ್ರತಿನಿಧಿಸಿದ ಆಶಯಗಳಿಗೇ ವಿರುದ್ಧವಾದ ಸ್ಥಾನದಲ್ಲಿ ಸಿದ್ಧಲಿಂಗಯ್ಯನವರಂತಹ ಸಾಹಿತಿ ನಿಂತಿದ್ದಾರಲ್ಲ?

ಬರಹಗಾರರು ಅಧಿಕಾರ ಮತ್ತು ಅಧಿಕಾರಸ್ಥರನ್ನು ವಿಮರ್ಶೆಗೆ ಒಳಪಡಿಸುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲಾಗದಿದ್ದರೆ ತಮ್ಮ ಬರವಣಿಗೆಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಆಗ ಬರವಣಿಗೆಯಲ್ಲೂ ಸಾರ್ವಜನಿಕತೆ ನುಸುಳುತ್ತದೆ. ಬರಹಗಾರನೊಬ್ಬ ತಾನು ಪ್ರತಿನಿಧಿಸಿದ ಆಶಯಗಳಿಗೆ ವಿರುದ್ಧವಾಗಿ ಹೋದಾಗ ಅವರನ್ನು ಒಪ್ಪಿಕೊಂಡು ಬಂದ ಓದುಗರಿಗೆ ನಿರಾಸೆ ಅಥವಾ ಅಸಹನೆ ಖಂಡಿತಾ ಹುಟ್ಟುತ್ತದೆ. ಪ್ರತಿ ಬರಹಗಾರನೂ ಸಹ ತನಗೆ ಸಾಹಿತ್ಯ ಮುಖ್ಯವೋ ಅಥವಾ ಯಾವುದೋ ಅಧಿಕಾರ ಬೇಕೋ ಎಂಬ ಬಗ್ಗೆ ಖಚಿತವಾಗಿರಬೇಕು.ಮೌಲ್ಯಗಳನ್ನು ಪ್ರತಿಪಾದಿಸುವವರು, ಸಾಹಿತಿಗಳು ಅಧಿಕಾರಕ್ಕೆ, ರಾಜಕಾರಣಕ್ಕೆ ಹೋಗುವುದು ತಪ್ಪಲ್ಲ. ಒಬ್ಬ ಅರ್ಥಶಾಸ್ತ್ರಜ್ಞ, ಒಬ್ಬ ಸಾಫ್ಟ್‌ವೇರ್ ತಂತ್ರಜ್ಞ ಅಥವಾ ಒಬ್ಬ ಸ್ತ್ರೀವಾದಿ ವಿಧಾನ ಸೌಧಕ್ಕೆ ಹೋಗಬೇಕು. ಅದು ಒಳ್ಳೆಯದು ಕೂಡ. ಆದರೆ ಹಾಗೆ ಹೋದವರು ತಮ್ಮ ನಿಲುವು ಹಾಗೂ ಭಾಷೆಗಳನ್ನು ಬಳಸಬೇಕು.ಅದಕ್ಕೆ ಬದಲಾಗಿ ಅಲ್ಲಿನವರು ಕೊಟ್ಟ ಭಾಷೆಯಲ್ಲಿ ಅವರು ಮಾತನಾಡಲಾರಂಭಿಸುವುದು ದುರದೃಷ್ಟಕರ.

ಬರಹಗಾರನೊಬ್ಬನ ಬರಹ ಮತ್ತು ಆತನ ವ್ಯಕ್ತಿತ್ವಗಳಲ್ಲಿ ವೈರುಧ್ಯಗಳು ಕಾಣಿಸಿಕೊಂಡಾಗ ಓದುಗರಾದವರು ಹೇಗೆ ಪ್ರತಿಕ್ರಿಯಿಸಬೇಕೆನ್ನುತ್ತೀರಿ?

ಬರಹ ಎನ್ನುವುದು ವ್ಯಕ್ತಿತ್ವದ ವಿಸ್ತರಣೆಯೂ ಹೌದು. ಬರಹಗಾರ ಒಂದು ರೀತಿಯ ಗಾಢ ಆಶಯಗಳನ್ನು ಕೃತಿಯಲ್ಲಿ ಬರೆದು, ಅದಕ್ಕೆ ತದ್ವಿರುದ್ಧವಾಗಿ ನಡೆಯುವುದು ಸರಿಯಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ನಮ್ಮ ಓದಿನ ಕ್ರಮದಲ್ಲಿ ಕೃತಿಯನ್ನು ಕೃತಿಕಾರನಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಓದಬೇಕು. ಎಷ್ಟೋ ಸಲ ಒಬ್ಬ ಬರಹಗಾರ ತನ್ನ ಹಳೆಯ ನಿಲುವುಗಳನ್ನು ಬದಲಿಸಿಕೊಂಡು ಮುಂದೆ ಹೋದಾಗಲೂ ನಾವು ಆತ ಮೊದಲಿನ ರೀತಿಯಲ್ಲಿಯೇ ಬರೆಯಬೇಕೆಂದು ನಿರೀಕ್ಷಿಸುತ್ತೇವೆ. ಈ ಥರದ ಓದುಗರ ಸರ್ವಾಧಿಕಾರವೂ ಬಹಳ ವಿಚಿತ್ರವಾಗಿರಬಲ್ಲದು. ಹೀಗಾಗಿ ನಾವು ಬಲ್ಲ ಬರಹಗಾರನ ವ್ಯಕ್ತಿತ್ವಕ್ಕೂ ಅವನ ಸಾಹಿತ್ಯ ಕೃತಿಗೂ ವೈರುಧ್ಯ ಏರ್ಪಟ್ಟಾಗ ನಾವು ಆ ಕೃತಿ ಹೇಳುವ ಸತ್ಯವನ್ನೇ ಹೆಚ್ಚು ಅವಲಂಬಿಸಬೇಕು. ಆದರೆ ಕೃತಿಯಾಚೆಗೆ ಲೇಖಕನ ಸಾಮಾಜಿಕ ನಿಲುವಿನಲ್ಲಿ ವೈರುಧ್ಯಗಳು ಕಂಡಾಗ ಖಂಡಿತ ಪ್ರಶ್ನೆ ಮಾಡಬೇಕಾಗುತ್ತದೆ. ಆದರೆ ಮನುಷ್ಯ ಎಂದರೆ ವಿರೋಧಾಭಾಸಗಳ ಮೊತ್ತ ಎಂಬ ಸತ್ಯವನ್ನೂ ನಾವು ಮರೆಯಬಾರದು.

ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿ ಆಡಳಿತ ಮಂಡಳಿಗಳು ಹಿಂದೇಟು ಹಾಕುತ್ತಿವೆಯಲ್ಲ?

ಅವಕಾಶ ಇಲ್ಲದವರಿಗೆ ಅವಕಾಶ ನೀಡದಿದ್ದರೆ ಮುಂದೆ ದೊಡ್ಡ ದಂಗೆಯೇ ಆಗುತ್ತದೆ ಎಂದು ಸರ್ಕಾರವೇ ಎಚ್ಚೆತ್ತುಕೊಂಡಿದೆ. ಆದರೆ ಇಂದು ಖಾಸಗಿ ಆಡಳಿತ ಮಂಡಳಿಗಳು ತಮ್ಮ ವರ್ಗಹಿತಾಸಕ್ತಿಯ ಕಾರಣದಿಂದ ಶಿಕ್ಷಣ ಹಕ್ಕು ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇದರಲ್ಲಿ ಜಾತೀಯತೆಯೂ ಇದೆ. ಆದರೆ ಈ ಕಾಯ್ದೆ ಸರಿಯಾಗಿ ಜಾರಿಯಾಗದಿದ್ದಲ್ಲಿ ಒಂದು ಆಂದೋಲನವೇ ಸೃಷ್ಟಿಯಾಗಬೇಕಾಗುತ್ತದೆ. ಈ ಕಾಯ್ದೆಯಲ್ಲಿ ಲೋಪದೋಷಗಳಿವೆಯೇ ಎನ್ನುವುದನ್ನು ನಂತರ ನೋಡೋಣ. ಮೊದಲು ಅದು ಜಾರಿಯಾಗುವಂತೆ ನೋಡಬೇಕಾದ್ದು ಜಾಗೃತ ಶಕ್ತಿಗಳ ಕೆಲಸ.

ಯಾವುದೇ ಸಾಹಿತ್ಯ ಚಳವಳಿಗಳಿಲ್ಲದಿರುವ ಈ ಕಾಲ ಬರೆಯುವವರಿಗೆ ಪೂರಕವೇ?

ಸಾಮಾನ್ಯವಾಗಿ ದೊಡ್ಡ ವಾಗ್ವಾದಗಳು ನಡೆಯುವುದು ಒಂದು ಸಾಹಿತ್ಯ ಚಳವಳಿ ಹುಟ್ಟುವ ಸಮಯದಲ್ಲಿ. ಆದರೆ ಈ ಕಾಲದಲ್ಲಿ ಎಲ್ಲಾ ಸಾಹಿತ್ಯ ಚಳವಳಿಗಳ ಮಾದರಿಗಳೂ ಇರುವಂತೆ ನಮಗೆ ಕಾಣುತ್ತದೆ. ನಿರ್ದಿಷ್ಟ ಸಾಹಿತ್ಯ ಚಳವಳಿ ಇಲ್ಲದಿರುವುದು ಕೂಡ ಬರೆಯುವವರ ದೃಷ್ಟಿಯಿಂದ ಒಳ್ಳೆಯದೇ ಆಗಬಹುದಲ್ಲ? ಒಂದು ಸಾಹಿತ್ಯ ಚಳವಳಿ ಇದ್ದಾಗ ಯಾವುದೋ ಕಟ್ಟುಪಾಡುಗಳಿಗೆ ಒಳಗಾಗಿ ಬರೆಯುವ ಒತ್ತಡವಿರಬಹುದು. ಅದಿಲ್ಲದಿದ್ದಾಗ ಯಾವುದೇ ಆತಂಕವಿಲ್ಲದೆ ಪ್ರಯೋಗಗಳನ್ನು ನಡೆಸಬಹುದು. ಈ ಕಾಲವನ್ನು ನವಪ್ರಯೋಗಗಳ ಕಾಲ ಅಂತಲೂ ಕರೆಯಬಹುದು.

ಸಾಮಾಜಿಕ ಚಳವಳಿಗಳು ವಿಘಟಿತಗೊಂಡಿರುವುದಕ್ಕೆ ಯಾರು ಕಾರಣ?

ಚಳವಳಿಗಳು ಯಾವಾಗಲೂ ಒಂದೇ ರೀತಿ ನಡೀತಾ ಇರಲ್ಲ. ಕೆಲವೊಮ್ಮೆ ಚಳವಳಿಗಳು ಹೊಸ ರೂಪ ಪಡೆಯುತ್ತವೆ. ಇಂದು ಚಳವಳಿಗಳು ಒಡೆಯುವುದಕ್ಕೆ ಅನೇಕ ಶಕ್ತಿಗಳು ಕಾರಣವಿರಬಹುದು. ಕೆಲವರಿಗೆ ಚಳವಳಿಗಳ ಬಗ್ಗೆ ನಂಬಿಕೆಗಳು ಕುಸಿದಿರಬಹುದಾದರೂ ಹೊಸ ತಲೆಮಾರುಗಳಿಗೆ ಈ ಬಗ್ಗೆ ನಿರೀಕ್ಷೆ ಇದ್ದೇ ಇರುತ್ತದೆ. ಆದರೆ ಅದನ್ನು ಸಾಕಾರಗೊಳಿಸುವ ಪಡೆ ಹೊಸ ತಲೆಮಾರಿನಲ್ಲೂ ಹುಟ್ಟಬೇಕು. ಅದಕ್ಕೆ ಪೂರಕವಾದ ಒಂದು ಇಶ್ಯೂ ಹುಟ್ಟಬೇಕು. ಸಮಾಜದ ಹಲವಾರು ವಲಯಗಳಲ್ಲಿ ಈ ಚಳವಳಿಯ ಶಕ್ತಿಗಳು ಇವೆ. ಆದರೆ ದೊಡ್ಡ ಮಟ್ಟದಲ್ಲಿ ಇವು ಒಂದಾಗಿ ಕ್ರಿಯೆಗಿಳಿಯುವ ಸಾಧ್ಯತೆಗಳು ಎದ್ದು ಕಾಣುತ್ತಿಲ್ಲ. ಹಾಗೆಯೇ ಚಳವಳಿಗಳಿಗೆ ಹಲವು ದಿಕ್ಕುಗಳಿಂದ ಬರುತ್ತಿದ್ದ ಬೆಂಬಲ ನಿಂತುಹೋಗಿದೆ. ನಮ್ಮ ಮಾಧ್ಯಮಗಳಿಗೆ ಈ ಇಶ್ಯೂಗಳು ಮುಖ್ಯ ಎನ್ನಿಸುತ್ತಿಲ್ಲ ಅಥವಾ ಅವು ಚಳವಳಿಗಳ ಬಗ್ಗೆ ಸಿನಿಕತೆ ಬೆಳೆಸಿಕೊಂಡಿವೆ.’ಇಷ್ಟೊಂದು ದಲಿತ ಗುಂಪುಗಳಿವೆ; ನಾವು ಇವರ ಸುದ್ದಿ ಏನು ಹಾಕೋದು?’ ಎನ್ನುವ ಧೋರಣೆ ಕೆಲವು ಪತ್ರಿಕೆಗಳಲ್ಲಿದೆ. ಆದರೆ, ಇಷ್ಟೊಂದು ಜಾತಿ,ಧರ್ಮಗಳ ಗುಂಪುಗಳ ಸುದ್ದಿಗಳನ್ನು ಪ್ರಕಟಿಸುವಾಗ ಅವರು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿಲ್ಲ. ನಮ್ಮ ಮಾಧ್ಯಮಗಳಲ್ಲಿ ಚಳವಳಿಗಳ ಬಗ್ಗೆ ಅಭಿಪ್ರಾಯ ರೂಪಿಸುವ ಕೆಲಸ ನಡೆಯುತ್ತಿಲ್ಲ. ಹಾಗೆಯೇ ಚಳವಳಿಗಳಿಗೆ ಕಾಲೇಜು, ಯೂನಿವರ್ಸಿಟಿಗಳಿಂದ ಒದಗುತ್ತಿದ್ದ ದೊಡ್ಡ ಬೌದ್ಧಿಕ ಬೆಂಬಲ ನಿಂತುಹೋಗಿದೆ. ಚಳವಳಿಗಳು ಹಿನ್ನೆಲೆಗೆ ಸರಿಯಲು ಚಳವಳಿಗಾರರು ಮಾತ್ರ ಕಾರಣವಲ್ಲ. ಅವರು ಚಳವಳಿಗಳನ್ನೇ ಮಾಡಿಕೊಂಡಿರಲಿ ಎಂದು ನಾವು ಅವರನ್ನು ನೇಮಿಸಿಲ್ಲ ಮತ್ತು ಹಾಗೆ ಹೇಳಲು ನನಗೆ ಹಕ್ಕಿಲ್ಲ. ನಾನು ಸಂಬಳ ತೆಗೆದುಕೊಳ್ಳುತ್ತೇನೆ.ಚಳವಳಿಗಾರರಿಗೆ ಸಂಬಳ ಬರುತ್ತಿಲ್ಲವಲ್ಲ?ಅದರ ಜೊತೆಗೆ, ಚಳವಳಿಗಳಿಗೆ ಹಿಂದಿನಂತೆ ತಾತ್ವಿಕ ಸ್ಪೂರ್ತಿಮೂಲಗಳೂ ಕಡಿಮೆಯಾಗಿವೆ. ಉಳಿದ ವರ್ಗಗಳು ತಾವು ಆರಾಮಾಗಿದ್ದು, ಚಳವಳಿಗಾರರ ಮೇಲೆಯೇ ಎಲ್ಲ ಹೊಣೆ ಹೊರಿಸಿ ಅವರು ಮಾತ್ರ ಈ ಕೆಲಸ ಮಾಡಬೇಕು ಎನ್ನುವುದು ಸರಿಯಲ್ಲ.

ಲೋಹಿಯಾವಾದ ಒಂದು ಸಾಮಾಜಿಕ ತತ್ವವಾಗಿ ಕರ್ನಾಟಕದಲ್ಲಿ ಬೀರಿರುವ ಪರಿಣಾಮ ಎಂಥದ್ದು?

ನಮ್ಮ ರೈತ ಚಳವಳಿ ಮಹಾರಾಷ್ಟ್ರ ಅಥವಾ ಉತ್ತರ ಪ್ರದೇಶದ ರೈತ ಚಳವಳಿಗಿಂತ ಭಿನ್ನವಾಗಿರಲು ಅದನ್ನು ಇಲ್ಲಿ ಮುನ್ನಡೆಸಿದ ನಂಜುಂಡಸ್ವಾಮಿಯವರು ಲೋಹಿಯಾವಾದಿಯಾಗಿದ್ದು ಕೂಡ ಕಾರಣ. ರೈತರನ್ನು ಒಂದು ವರ್ಗವಾಗಿ ರೂಪಿಸಿ ವ್ಯವಸ್ಥೆಯ ವಿರುದ್ಧದ ಚಳವಳಿಗೆ ತೊಡಗಿಸುವುದು ಲೋಹಿಯಾರ ಕನಸಾಗಿತ್ತು. ನಂಜುಂಡಸ್ವಾಮಿ ಅದನ್ನು ಇಲ್ಲಿ ಸಾಕಾರಗೊಳಿಸಿದರು. ಅವರು ದಲಿತ ಚಳವಳಿಯ ಪ್ರೇರಕರಲ್ಲೊಬ್ಬರಾಗಿದ್ದರು. ದಲಿತ ಸಂಘರ್ಷ ಸಮಿತಿಯಲ್ಲಿ ಲೋಹಿಯಾವಾದವೂ ಇದ್ದುದರಿಂದ ಅದು ಎಲ್ಲ ವರ್ಗದವರನ್ನೂ ಒಳಗೊಳ್ಳಲು ಸಾಧ್ಯವಾಯಿತು. ಹಾಗೆಯೇ ಸಾಹಿತಿಗಳು ನೋಡುವ ಕ್ರಮವನ್ನೇ ಅದು ಬದಲಿಸಿತು. ಚಿಂತಕರು, ಬರಹಗಾರರು ಲೋಹಿಯಾ ಚಿಂತನೆಯನ್ನು ತಾವೇ ಹುಡುಕಿಕೊಂಡು ಹೋಗಿ ಪ್ರಸಾರ ಮಾಡಿದ ಕಾಲದಲ್ಲಿ ಅದು ಹೆಚ್ಚು ಪ್ರಭಾವಶಾಲಿಯಾಗಿತ್ತು. ಆದರೆ ಸರ್ಕಾರವೇ ಕನ್ನಡ ಸಂಸ್ಕೃತಿ ಇಲಾಖೆಯಿಂದ ಲೋಹಿಯಾ ಕೃತಿಗಳನ್ನು ತಂದಾಗ (ಅದರ ಸಂಪಾದಕನಾಗಿ ನಾನು ಹೇಳುತ್ತಿರುವ ಮಾತಿದು) ಅದರ ಪ್ರಭಾವ ಕಡಿಮೆ ಎನಿಸುತ್ತದೆ. ಲೋಹಿಯಾವಾದವನ್ನು ಕೂಡ ನಾವು ಮರು ಓದಿಗೆ ಒಳಪಡಿಸಬೇಕು. ಪ್ರತಿ ತಲೆಮಾರಿನವರೂ ತಮ್ಮ ಲೋಹಿಯಾ, ತಮ್ಮ ಅಂಬೇಡ್ಕರ್‌ರನ್ನು ಹುಡುಕಿಕೊಳ್ಳಬೇಕಾಗುತ್ತದೆ.

ನಿಮ್ಮ ಮೇಲೆ ಪ್ರಭಾವ ಬೀರಿದ ಕನ್ನಡದ ಲೇಖಕ ಮತ್ತು ಜಾಗತಿಕ ಲೇಖಕರು ಯಾರು?

ನನಗೆ ಹದಿ ಹರೆಯದಲ್ಲಿ ಬಹಳ ಪ್ರಭಾವ ಬೀರಿದವನು ಆಲ್ಬರ್ಟ್ ಕಾಮು. ಆ ನಂತರ, ವ್ಯಕ್ತಿಗಳ ವರ್ತನೆಗಳನ್ನು, ಅನೇಕ ಬಗೆಯ ಸತ್ಯಗಳನ್ನು ಅರ್ಥ ಮಾಡಿಕೊಳ್ಳಲು ಶೇಕ್ಸ್‌ಪಿಯರ್ ನೆರವಾಗಿದ್ದಾನೆ. ಕನ್ನಡದಲ್ಲಿ ಲಂಕೇಶ್. ನನ್ನ ಜೀವನದ ಕೆಲವು ಶ್ರೇಷ್ಠ ಗಳಿಗೆಗಳನ್ನು ಲಂಕೇಶರ ಜೊತೆ ಕಳೆದಿರುವ ಬಗ್ಗೆ ನನಗೆ ಖುಷಿ ಇದೆ.


Friday, 18 May 2012

ಮನುಷ್ಯರಾಗಿ ಸಲ್ಲೋಣ ಮನಸ್ಸುಗಳನ್ನು ಗೆಲ್ಲೋಣ..- ರಾಘವೇಂದ್ರ ತೆಕ್ಕಾರ್ ಬರಹ

ಸೌಜನ್ಯ:  ಲೇಖನಾನುಭವ




ಸಮಾಜದಲ್ಲಿ ಕೀಳು ಮೇಲು ಎಂಬುದನ್ನು ಸೃಷ್ಟಿಸಿದ್ದೆ ಒಂದು ಕಾಲಘಟ್ಟದಲ್ಲಿ ಬ್ರಾಹ್ಮಣ ಪಂಗಡಗಳು ಎಂಬುದು ಸರ್ವ ವಿಧಿತ.ತನ್ನ ಪೌರೋಹಿತಶಾಹಿ ನೀತಿಯನ್ನು ಹೇರುತ್ತಾ ಸಮಾಜವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಅಧಿಕಾರಶಾಹಿತ್ವ ಮೆರೆಯಲು ಬ್ರಾಹ್ಮಣ್ಯ ನೀತಿಯನ್ನು ಹೇರುತ್ತಾ ಹೋಗಿದ್ದು ಕೂಡ ಸತ್ಯ.ಆದರೆ ಇಂದಿನ ದಿನಗಳಲ್ಲಿ ಬ್ರಾಹ್ಮಣ್ಯ ಎಂಬುದು ಒಂದು ಜಾತೀಯ ಪಂಗಡಕ್ಕೆ ಸೀಮೀತವಾಗಿ ಉಳಿದಿಲ್ಲ, ಈ ಜಾತಿ ಸನ್ನಿಗಳು ಹೆಮ್ಮರವಾಗಿ ಬೆಳೆದು ನಿಂತಿದೆ.ವಿಜ್ಞಾನ, ತಂತ್ರಜ್ಞಾನ ಯುಗದಲ್ಲೂ ಜಾತಿಯ ಸನ್ನಿಗೆ ಆ ಮೂಲಕ ಡಂಬಾಚಾರಕ್ಕೆ ಕೊರತೆ ಏನು ಇಲ್ಲ. ಆದರೆ ಇಂತದೆ ಮೇಲ್ಜಾತಿಯೆಂದು ಕರೆಸಿಕೊಳ್ಳುವ ಬ್ರಾಹ್ಮಣ ಪಂಗಡಕ್ಕೆ ಸೇರಿದವನೊಬ್ಬ ಜಾತಿಯತೆಯಿಂದ ಬೇಸತ್ತು ಮನುಷ್ಯ ಮಾತ್ರನಾಗಿ ಇರುತ್ತೇನೆ ಎಂಬ ನೀತಿಗೆ ಬದ್ಧನಾಗಿ ಬದುಕು ನಡೆಸುವಾಗ, ಸಮಾಜ ಎಂಬುದು ಆತನನ್ನ ಜಾತಿಯಿಂದ ಹೊರತಾಗಿ ನೋಡಲು ಇಚ್ಚೆ ಪಡುವದೆ ಇಲ್ಲ.ಆ ಮಟ್ಟಿಗೆ ಜಾತಿಕತೆ ಸಮಾಜವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದರೆ ತಪ್ಪಿಲ್ಲ. ಈ ಪರಿಸ್ಥಿತಿ ಬ್ರಾಹ್ಮಣ ಹುಡುಗ ಅಂತ ಕರೆಸಿಕೊಳ್ಳೊ ಅವನಿಗಷ್ಟೆ ಸೀಮಿತವಾಗಿ ಅಲ್ಲದಿದ್ದರೂ, ಆತನ ಜಾತಿಯೆ ಇವೆಲ್ಲದಕ್ಕೂ ಮೂಲವಾದುದರಿಂದ ಇತರರಿಗಿಂತ ಆತನಿಗೆ ಜಾತಿಯತೆ ಹೊರತಾಗಿ ಮನುಷ್ಯ ಮಾತ್ರನಾಗಿ ತನ್ನ ಗುರುತಿಸಿಕೊಳ್ಳೊದು ಒಂದು ಸವಾಲೆ ಸರಿ. 

ಸಮಾಜದ ಮಾತುಗಳು ಒತ್ತಟ್ಟಿಗಿರಲಿ ತನ್ನದೆ ಕುಟುಂಬದ ತನ್ನವರೆ ಅನಿಸಿಕೊಂಡವರ ಸಂಪ್ರದಾಯಿಕ ಕಟ್ಟುಪಾಡುಗಳ ಹೇರಿಕೆಯನ್ನು ಇತ್ತ ಕಡೆ ಸ್ವೀಕರಿಸಲು ಆಗದೆ ತ್ಯಜಿಸಲು ಆಗದೆ ಅವನೊಳಗೆ ನಡೆಯುವ ತೊಳಲಾಟಗಳ ಭಾದೆಯು ಕೂಡ ಅಲ್ಪವಾದುದೇನಲ್ಲ. ಅರಿವಿನ ತಿಳುವಳಿಕೆಯಿಂದ ಒಡಮೂಡಿದ ತನ್ನದೆ ಆದ ನೀತಿಗಳನ್ನು ಪರಿಪಾಲಿಸುವಲ್ಲಿ ಕೂಡ ಆತ ತನ್ನಲ್ಲೆ ದೊಡ್ಡ ಘರ್ಷಣೆಗೆ ಎದುರುಗೊಳ್ಳಬೇಕು ಎನ್ನುವದು ವಾಸ್ತವ.ಇವೆಲ್ಲವಕ್ಕೂ ಕಾರಣ ಆತ ಗುರುತಿಸಿಕೊಂಡ ಜಾತಿ.ಈ ಸಮೀಕರಣದೊಳಗೆ ತನ್ನ ನೀತಿಯನ್ನು ಬಿಟ್ಟು ಕೊಡದೆ ಹೊಂದಿಕೊಳ್ಳಲು ನಡೆಸಬಹುದಾದ ಒಂದಷ್ಟು ಅಡ್ಜೆಷ್ಟ್ ಮೆಂಟ್ ಕ್ರಿಯೆಗಳೂ ಕೂಡ “ನೋಡಲ್ಲಿ ಅವ ಇನ್ನೂ ಅಲ್ಲೆ ಇದ್ದಾನೆ ಅವನೊಳಗಿನ ಜಾತಿ ಸತ್ತಿಲ್ಲ”ಅನ್ನೊ ಕುಹಕಗಳನ್ನ , ಅಪಹಾಸ್ಯಗಳನ್ನ ಅನಿವಾರ್ಯವಾಗಿ ಎದುರುಗೊಳ್ಳಬೇಕಾಗುತ್ತೆ. 

ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದಲ್ಲಿ ಅಷ್ಟೇನೂ ವ್ಯತ್ಯಾಸವಿಲ್ಲ ಇದು ಒಂದು ತರ ಜೊತೆ ಜೊತೆಗೆ ಇರುವಂತದ್ದು ಎನ್ನೋ ವಾದ ಒಂದು ಕಡೆ ಇದೆ.ಒಂದು ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಇದು ಸೂಕ್ತವೆ ಆಗಿದ್ದರು ಮೇಲೆ ಹೇಳಿದಂತೆ ಇವತ್ತು ಬ್ರಾಹ್ಮಣ್ಯ ಎನ್ನುವದು ಈ ಒಂದು ಜಾತಿಗೆ ಸೀಮಿತವಾಗಿ ಉಳಿದಿಲ್ಲ ಅನ್ನುವದು ಕೂಡ ಅಷ್ಟೆ ವಾಸ್ತವ. ಇದಕ್ಕೆ ಕಾರಣೀಭೂತರಾರು ಎಂಬುದಕ್ಕೆ ಮತ್ತೆ ಸಿಗುವ ಉತ್ತರ ಕೂಡ ಬ್ರಾಹ್ಮಣ ಪುರೋಹಿತಶಾಹಿ ವರ್ಗ ಎನ್ನುವದು ಹೌದಾದರು ಜಾತೀಯತೆಯಿಂದ ಹೊರತಾಗಿ ಯೋಚಿಸುವ ಆತನಿಗೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವ ಎಂಭ ಕಾರಣಕ್ಕೆ ಮನುಷ್ಯ ಸಂವೇದಿತನದಿಂದ ಸಮಾಜವನ್ನು ಎದುರುಗೊಳ್ಳಲು ಈ ಪ್ರಮೇಯಗಳನ್ನ ಬಿಡಿಸಿಕೊಂಡು ನಿಲ್ಲಲೇಬೇಕಾಗುತ್ತೆ.ಆದರೆ ಈ ಎಲ್ಲಾ ಸವಾಲುಗಳನ್ನು ತನ್ನದಾಗಿಸಿಕೊಂಡು ಸಮಾಜಮುಖಿಯಾಗಿ ಮುನುಷ್ಯರನ್ನ ಮನುಷ್ಯರಂತೆ ಕಾಣುವ ಬಯಸುವ ಮಂದಿಗಳೆಷ್ಟು? ಅನ್ನೋದು ಪ್ರಶ್ನೆಯಾಗೆ ಉಳಿದು ಬಿಡುತ್ತೆ, ಬಹುಶಃ ಈ ಬಳಗ ಇನ್ನೂ ಅಲ್ಪ ಮಟ್ಟದ್ದೆ.ಹುಟ್ಟಿನಿಂದ ಹೇರಿಕೆ ಮೂಲಕ ಆಪೋಶನಗೊಂಡ ನೀತಿಗಳನ್ನು ತಿರಸ್ಕರಿಸಿ ನಿಲ್ಲವದು ಬಹಳ ಮಂದಿಗೆ ಕಷ್ಟ, ಇನ್ನೂ ವಿಸ್ತರಿಸುವದಾದರೆ ತನ್ನ ಎರವಲು ಪಡೆದ ನೀತಿಗಳಲ್ಲಿ ಹಲವಷ್ಟು ಎಡವಟ್ಟುಗಳಿವೆ ಎಂಬುದರ ಅರಿವು ಕೂಡ ಬಾರದಷ್ಟು ಹೇರಿಕೆಯ ಕಟ್ಟುಪಾಡುಗಳನ್ನೊಳಗೊಂಡ ಸಂಸ್ಕೃತಿ ಎಂದು ಕರೆಸಿಕೊಳ್ಳೊ ಸಂಪ್ರದಾಯಗಳು ಅತನನ್ನು ಜಾತಿಯತೆಯೊಳಗಿನ ಕೂಪದಲ್ಲಿ ಮುಳುಗಿಸಿರುತ್ತದೆ.  ನಿಜವಾಗಿ ಮುಳುಗಿರುವದು ತನ್ನೊಳಗಿನ ಮಾನವೀಯ ಸಂವೇದನೆಗಳು ಎಂಬುದರ ಅರಿವು ಬಾರದಷ್ಟು ತಡೆಯೊಡ್ಡುವದು ಆತನಲ್ಲಿ ಆಪೋಶನಗೊಂಡು ಹೆಮ್ಮರವಾಗಿ ನಿಂತ ಜಾತೀಯತೆ ಎಂಭ ಕಾರ್ಕೋಟಕ ವಿಷ. 

ಇನ್ನೂ ಕೆಲವರು ಒಡಂಬಡಿಕೆಗೆ ಮಾನವೀಯತೆಯ ನೆಲೆಗಟ್ಟಿನ ಸೋಗಿನಲ್ಲಿ ನಾವೆಲ್ಲರೂ ಒಂದು ಎನ್ನುತ್ತಾ ,ಏರು ಪೇರುಗಳನ್ನು ಸರಿ ಪಡಿಸುತ್ತೇವೆ ಎನ್ನುತ್ತಾ ಮುನ್ನಡೆಯುವವರು ಇದ್ದಾರೆ. ಇದು ಹೇಗೆ ಅಂದರೆ ದೇವನೂರು ಮಹಾದೇವ ಅವರು ಹೇಳುವಂತೆ ರೋಟರಿ ಸಂಸ್ಕೃತಿಯ ತರ.ರೋಟರಿಯವರಿಗೆ ಏಸಿ ರೂಮಿನಲ್ಲಿ ಐಷಾರಾಮಿ ಹೋಟೆಲಲ್ಲಿ ಕುಳಿತು ಬಡವರ ಬಗ್ಗೆ ಚಿಂತೆ ಮಾಡುವದಕ್ಕೆ ಬಡವರು ಬೇಕು. ಅಂದರೆ ಬಡವ ಇದ್ದಲ್ಲಿ ಇವರ ಸೇವೆ ಆ ಮೂಲಕ ಸಂಸ್ಥೆ ಜೀವಂತ.ಅದೆ ತರನೆ ಸಮಾಜದ ಏರು ಪೇರು ಅಸ್ಪ್ರಶ್ಯತೆಯಂತ ನೀತಿಗಳು ಇದ್ದಲ್ಲಿ ಮಾತ್ರ ಇವರುಗಳ ರಾಜಕೀಯ ಆಕಾಂಕ್ಷೆಗಳ ಜೀವಂತಿಕೆ. ಗಮನಿಸಬೇಕಾದ ಒಂದು ಅಂಶವೆಂದರೆ ಮಾನವೀಯತೆ ಜೊತೆ ಆದರ್ಶವೆಂಬುದು ಕೂಡ ಜೊತೆಗೆ ತಳುಕು ಹಾಕಿಕೊಳ್ಳುತ್ತದೆ. ಆದರ್ಶ ಮೆರೆಯೋದಕ್ಕಾಗೆ ಸಮಾಜಸುಧಾರಣೆ ಅನ್ನೋದನ್ನ ಮಾನವೀಯತೆ ಅನ್ನೋ ನೆಲೆಯಲ್ಲಿ ನೋಡೋದು ಕಷ್ಟನೆ ಸರಿ. ಅದು ಮಾನವ ಕಾಳಜಿಯ ಸೋಗು ಅಷ್ಟೆ. ಮಾನವೀಯತೆಯೆ ಮೊದಲ್ಗೊಂಡು ಅದು ಇತರರಿಗೆ ಮಾನವೀಯತೆಯ ನಿಟ್ಟಿನಿಂದ ಆದರ್ಶವಾಗಿ ಕಂಡರೆ ಅದು ಬೇರೆ ಮಾತು. 

ಇವೆಲ್ಲದರ ಹೊರತಾಗಿ ಒಂದಂತೂ ಸತ್ಯ, ಬ್ರಾಹ್ಮಣ ಅಂತ ಸಮಾಜದಿಂದ ಕರೆಸಿಕೊಂಡ ಮಾತ್ರಕ್ಕೆ ಆತ ಬ್ರಾಹ್ಮಣನಾಗಬೇಕಾದ್ದಿಲ್ಲ, ಜಾತೀಯ ಬಂಧನಗಳನ್ನು ಬಿಡಿಸಿಕೊಂಡು ಆತನೂ ಮಾನವನಾಗಬಲ್ಲ, ಆದರೆ ಅವನಿಗೆ ಬೇಡದ ಆತನ ಜಾತಿ ಸಮಾಜಕ್ಕೆ ಬೇಕಿರುತ್ತದೆ.ಆತ ಯಾವ ಜಾತಿಗೂ ನಾ ಒಳಪಟ್ಟವನಲ್ಲ ಎಂಬುದನ್ನು ಎಷ್ಟೆ ಬೊಬ್ಬಿರುದು ಅಂದರು ಸಮಾಜಕ್ಕದು ಕೇಳಿಸುವದೆ ಇಲ್ಲ. ಆತನ ಜಾತಿಯಿಂದ ನಡೆದ ದುರಾಚಾರಗಳು, ಸಮಾಜದ ಏರು ಪೇರುಗಳಿಗೆ ಕಾರಾಣಿಭೂತರಾದ ಆತನ ಹಿರಿಯಿಕರ ಮೂಲಕ ಬಳವಳಿಯೆಂಬಂತೆ ಅವನಿಗೆ ಗೊತ್ತಿಲ್ಲದೆಯೆ ಅದರ ಪಾಪವನ್ನು ಅವನುಣ್ಣುತ್ತಿರಬೇಕು. ಜಾತಿ ಬಂಧನದಿಂದ ಬಿಡಿಸಿಕೊಂಡ ಆತನೂ ಜಾತಿಯ ಕಾರಣದಿಂದ ತನ್ನದಲ್ಲದ ತಪ್ಪಿಗೆ ಪಾಪವೆಂಬಂತೆ ತುಚ್ಚ ಮಾತುಗಳು, ದೃಷ್ಟಿಗಳನ್ನು ಎದುರಿಸಬೇಕಾಗುತ್ತೆ. ಹಾಗಿದ್ದಾಗ ಆತನಿಗೆ ಉಳಿದಿರುವ ದಾರಿ ಎಂದರೆ ಇದೆಲ್ಲವನ್ನೂ ಸಹಿಸುತ್ತೆಲೆ ಜಾತಿಯ ಸೋಗಲಾಡಿತನವನ್ನು ದಾಟಿ ಮನುಷ್ಯನಾಗಿ ಎಲ್ಲಾ ಕಠಿಣ ಹಾದಿಯನ್ನು ದಾಟಿ ಕ್ರಮಿಸುವದಕ್ಕೆ ತನ್ನಿಂದಾದ ಪ್ರಯತ್ನ ಪಡೋದೆ ಆಗಿರುತ್ತದೆ.ಅತನ ಮನಸ್ಸು ಪರಿಶುದ್ದವಾಗಿದ್ದಲ್ಲಿ ಜಾತಿ ಧರ್ಮದಿಂದ ಹೊರತಾಗಿ ಒಂದಲ್ಲ ಒಂದು ದಿನ ಎಲ್ಲರೀಗೂ ಸಲ್ಲುವವನಾಗುತ್ತಾನೆ ಅನ್ನೊ ನಂಬಿಕೆಯೆ ಆತನ ದಾರಿದೀಪವಾಗಬೇಕು.ತನ್ನ ಜಾತಿಯಿಂದ ಅವಮಾನಿತ ಮಂದಿ ಬಳಗದ ಮುಂದು ತನ್ನ ಅವಮಾನ ತೃಣ ಮಾತ್ರದ್ದು ಎಂಬ ಸತ್ಯದ ಅರಿವು ಇರಬೇಕಷ್ಟೆ.

Thursday, 17 May 2012

ಮೋದೂರ ತೇಜ ಬರೆದ ವೇದಾವತಿ ತೀರದಲ್ಲಿ' ಕಾದಂಬರಿ:ಅರುಣ್ ಜೋಳದ ಪರಿಚಯ

ಪುಸ್ತಕ ಪರಿಚಯ:-ಅರುಣ್ ಜೋಳದ ಕೂಡ್ಲಿಗಿ
ಕೃಪೆ:- ಕೆಂಡಸಂಪಿಗೆ




ಚಳ್ಳಕೆರೆ ಸಮೀಪದ ಮೋದೂರು ಗ್ರಾಮದ ದಲಿತ ಯುವಕ ದುರುಗಪ್ಪ (ಮೋದೂರು ತೇಜ) ಅವರ ‘ವೇದಾವತಿ ತೀರದಲ್ಲಿ’ ಕಾದಂಬರಿಯ ಘಟನೆಯೊಂದು ಹೀಗಿದೆ: ಹಳ್ಳಿಯೊಂದರ ಶಿಕ್ಷಿತ ದಲಿತ ಯುವಕ ಗೋವಿಂದ ತನಗಿಂತ ಮೇಲು ಜಾತಿಯ ಗೆಳೆಯನ ಮದುವೆಯ ಊಟದ ಪಂಕ್ತಿಯಲ್ಲಿ ಕೂತಿರುತ್ತಾನೆ. ಆಗ ಮೇಲ್ಜಾತಿಯ ಯಜಮಾನ ಬಂದು ಒಂದೇ ಪಂಕ್ತಿಯಲ್ಲಿ ದಲಿತರಿಗೆ ಊಟ ಹಾಕಿ ಊರ ಮಾನ ತೆಗೆಯುತ್ತಿದ್ದೀರಿ ಎಂದು ಕಿಡಿಕಾರುತ್ತಾನೆ. ಇದಕ್ಕೆ ಗೆಳೆಯರು ಸೊಪ್ಪುಹಾಕದೆ ಗೋವಿಂದನನ್ನು ಸಂತೈಸಿ ಊಟ ಮಾಡುವಂತೆ ಒತ್ತಾಯಿಸುತ್ತಾರೆ. ಗೋವಿಂದ ಅವಮಾನದಿಂದ ಬೇಯುತ್ತಾನೆ. ಊಟ ಹೊಟ್ಟೆಯೊಳಗೆ ಇಳಿಯುವುದಿಲ್ಲ. ಇದು ಬದಲುಗೊಂಡ ಗ್ರಾಮೀಣ ಬದುಕಿನಲ್ಲಿ ಜಾತಿ ಶ್ರೇಣೀಕರಣದ ಹೊಸ ಮುಖವೊಂದನ್ನು ಅನಾವರಣ ಮಾಡುತ್ತದೆ. ಇಂದಿನ ದಲಿತ ಯುವಕರ ಸಾಹಿತ್ಯ ಅಭಿವ್ಯಕ್ತಿ ಯಾವ ತೆರನಾಗಿರುತ್ತದೆ ಎನ್ನುವುದಕ್ಕೆ ಈ ಘಟನೆ ಉತ್ತರದಂತೆ ಬಂದಿದೆ.

ಹೊಸ ತಲೆಮಾರಿನ ಬರಹಗಾರ ಮೋದೂರು ತೇಜ ಅವರು ಮರದೊಳಗಳ ಕಿಚ್ಚು ಎನ್ನುವ ಕಥಾ ಸಂಕಲನ, ಬುದ್ಧನ ಮೇಲೂ ಯುದ್ಧ, ಭೂಮಿ ತೂಕದ ಪ್ರೀತಿ ಎಂಬ ಕವನ ಸಂಕಲನದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ಅವರ ಮೊದಲ ಕಾದಂಬರಿ ವೇದಾವತಿ ತೀರದಲ್ಲಿ. ಕಾದಂಬರಿ ಕ್ಷೇತ್ರಕ್ಕೆ ಹೆಚ್ಚು ತೆರೆದುಕೊಳ್ಳದ ಯುವ ಲೇಖಕರ ಮಧ್ಯೆ ತೇಜ ಅವರು ಭಿನ್ನರಾಗಿ ಕಾಣುತ್ತಾರೆ. ಈ ಕಾದಂಬರಿಯಲ್ಲಿ ಚಳ್ಳಕೆರೆ ಭಾಗದ ವೇದಾವತಿ ನದಿ ತೀರದ ಗ್ರಾಮೀಣ ಬದುಕಿನ ಚಿತ್ರಣವನ್ನು ಕಟ್ಟಿಕೊಡಲು ಯತ್ನಿಸಿದ್ದಾರೆ. ಇದು ೩೨೧ ಪುಟದ ೨೫ ಉಪ ಘಟಕಗಳನ್ನೊಳಗೊಂಡ ದೀರ್ಘ ಕಾದಂಬರಿ.

ಈ ಕಾದಂಬರಿ ಹಲವು ಕುಟುಂಬಗಳ ಬದುಕಿನ ಚಲನವಲನಗಳನ್ನು ದಾಖಲಿಸುತ್ತದೆ. ಯುಗಾದಿಯ ಬೇಟೆಯೊಂದಿಗೆ ಆರಂಭವಾಗಿ, ಮತ್ತೊಂದು ಯುಗಾದಿ ಬೇಟೆಯೊಂದಿಗೆ ಮುಕ್ತಾಯವಾಗುತ್ತದೆ. ಈ ಒಂದು ವರ್ಷದ ಅವಧಿಯಲ್ಲಿನ ಗ್ರಾಮೀಣ ಬದುಕಿನ ನಾಲ್ಕು ಕುಟುಂಬಗಳ ನಡುವೆ ನಡೆವ ಕೌಟುಂಬಿಕ ಏರುಪೇರುಗಳನ್ನು ಇಲ್ಲಿ ದಾಖಲಿಸಲಾಗಿದೆ. ಮುಖ್ಯವಾಗಿ ವೇದಾವತಿ ನದಿ ತೀರದ ಹಳ್ಳಿಗಳ ಹಬ್ಬ ಆಚರಣೆ ಜಗಳ ವೈಷಮ್ಯ ಮುಂತಾದವುಗಳ ಮೂಲಕ ಇಲ್ಲಿನ ಜನಜೀವನದ ದಟ್ಟ ವಿವರಗಳನ್ನು ಕಟ್ಟಿಕೊಡುತ್ತಾರೆ. ಹಾಗಾಗಿ ಇಲ್ಲಿ ಗ್ರಾಮೀಣ ಬದುಕಿನ ಸದ್ಯದ ಪಲ್ಲಟಗಳನ್ನು ಗ್ರಹಿಸಬಹುದು. ಇಡೀ ಕಾದಂಬರಿ ವಿವರಣೆಯಲ್ಲಿ ವಾಚ್ಯವಾದರೂ ಮಾತುಕತೆಯಲ್ಲಿ ಬರುವ ಗಾದೆಗಳೆ ಇಲ್ಲಿನ ಒಳ ದ್ವನಿಯಂತೆ ಬಳಕೆಯಾಗಿದೆ.

ಇಂದು ಗ್ರಾಮೀಣ ಪ್ರದೇಶದಲ್ಲಿ ಅರೆವಿದ್ಯಾವಂತರ ಸಂಖ್ಯೆ ಹೆಚ್ಚಿದೆ. ಅಂದರೆ ಇತ್ತ ನೌಕರಿಗೆ ಹೋಗುವಷ್ಟು ವಿದ್ಯೆಯೂ ಇಲ್ಲದೆ, ಇತ್ತ ಕೃಷಿ ಮಾಡುವ ಕೌಶಲ್ಯ, ಮನಸ್ಸೂ ಇಲ್ಲದೆ ಅಂಡಲೆಯುವ ಒಂದು ಯುವ ವರ್ಗ ಕರ್ನಾಟಕದಲ್ಲಿ ಹೆಚ್ಚಾಗಿದೆ. ಈ ವರ್ಗದ ಆಯ್ಕೆ ಏನಾಗಿದೆ? ಈ ವರ್ಗ ಆಯ್ದುಕೊಳ್ಳುವ ಹೊಸ ಉದ್ಯೋಗ ಯಾವ ಬಗೆಯದು, ಈ ವರ್ಗ ಬದುಕನ್ನು ಕಟ್ಟಿಕೊಳ್ಳಲು ತಾನು ಕಲೆತ ವಿದ್ಯೆಯನ್ನು ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದನ್ನು ಅಭ್ಯಸಿಸುವ ಅಗತ್ಯವಿದೆ.

ತೇಜ ಅವರ ಕಾದಂಬರಿಯಲ್ಲಿ ಇಪ್ಪತ್ತರಿಂದ ಮುವತ್ತೈದು ವರ್ಷದ ಒಳಗಿನ ಯುವ ಸಮುದಾಯದ ತಳಮಳಗಳ ಪ್ರಾತಿನಿಧಿಕವಾಗಿ ಇಲ್ಲಿನ ಬಸವರಾಜು, ಮೇಘರಾಜು, ರಘುರಾಮ, ಆನಂದ, ಗೋವಿಂದ, ಸಾರಿಕಾ, ವೇದಾವತಿ ಮುಂತಾದವರ ಪಾತ್ರಗಳು ಬರುತ್ತವೆ. ಈ ವರ್ಗದ ತಳಮಳಗಳನ್ನು ಹುಡುಕಾಟ ಮಾಡುವ ಕಾರಣಕ್ಕೆ ಈ ಕಾದಂಬರಿ ಮುಖ್ಯವಾಗುತ್ತದೆ.

ಪ್ರಾದೇಶಿಕ ವಿವರಗಳ ಸಾವಯವ ಸಂಬಂಧದೊಂದಿಗೆ ನಮ್ಮ ಕಾಲದ ಗ್ರಾಮೀಣ ಬದುಕನ್ನು ಕಟ್ಟಿಕೊಡುವಲ್ಲಿ ಮೋದುರು ತೇಜ ಪಟ್ಟಿರುವ ಶ್ರಮ ಮೆಚ್ಚುವಂಥದ್ದು. ಆದರೆ ಈ ಕಾದಂಬರಿಗೆ ಗಂಭೀರ ಮಿತಿಗಳಿವೆ. ಸಮೃದ್ಧ ಜೀವನಾನುಭವವನ್ನು ಒಂದು ತಾತ್ವಿಕ ಎಳೆಯಲ್ಲಿ ಪೋಣಿಸುವಲ್ಲಿ ಕಾದಂಬರಿ ಸೋತಿದೆ. ಇಲ್ಲಿನ ಬಹುತೇಕ ಪಾತ್ರಗಳು ಆದರ್ಶ ವ್ಯಕ್ತಿಚಿತ್ರಣದಂತೆ ಕಾಣುತ್ತವೆ. ತೇಜ (ದುರುಗಪ್ಪ) ಸ್ವತಃ ದಲಿತನಾಗಿ ತನ್ನದೇ ಹಳ್ಳಿಗಳಲ್ಲಿ ಅನುಭವಿಸಿದ ಅಸ್ಪೃಶ್ಯತೆಯ ನೋವುಗಳನ್ನು ಕಾದಂಬರಿಯಲ್ಲಿ ದಾಖಲಿಸಲು ಸಾಧ್ಯವಾಗಿಲ್ಲ. ಇಲ್ಲಿ ಲೇಖಕರು ದಲಿತ ಐಡೆಂಟಿಟಿಯಲ್ಲಿ ಗುರುತಿಸಿಕೊಳ್ಳದ ಇಕ್ಕಟ್ಟನ್ನು ಅನುಭವಿಸಿದಂತೆ ಕಾಣುತ್ತದೆ.

ದಲಿತ ಯವಕನೊಬ್ಬ ಗ್ರಾಮೀಣ ಬದುಕನ್ನು ನೋಡುವ ವಿಶಿಷ್ಟ ನೋಟಕ್ರಮವೂ ಇಲ್ಲಿ ಕಾಣುವುದಿಲ್ಲ. ಹಾಗೆಯೆ ಗ್ರಾಮೀಣ ಭಾಗದ ಸಾಮಾಜಿಕ ನಾಟಕಗಳ ಪ್ರಭಾವ ಕಾದಂಬರಿಯ ಸಂಭಾಷಣೆಗಳಲ್ಲಿ ಎದ್ದು ಕಾಣುತ್ತದೆ. ಈ ಬಗೆಯ ನಾಟಕೀಯತೆಯನ್ನು ಮೀರುವ ಅಗತ್ಯವಿತ್ತು. ಪ್ರಾದೇಶಿಕ ಭಾಷೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಕಾದಂಬರಿಕಾರ ಸೋತಿದ್ದಾನೆ. ಎಲ್ಲವೂ ಕಳೆದುಹೋಗುತ್ತಿವೆ ಅವುಗಳನ್ನು ಸಂಗ್ರಹಿಸಿಡಬೇಕು, ಹಳೆಯದೆಲ್ಲಾ ಸಮೃದ್ಧವಾದುದು, ಸಾಮರಸ್ಯದ್ದು ಎನ್ನುವ ಹಳಹಳಿಕೆ ಕಾದಂಬರಿಯ ನಿರೂಪಣೆಯಲ್ಲಿದೆ. ಇದು ಕೂಡ ಕಾದಂಬರಿಯ ಮಿತಿಯಾಗಿದೆ. ಇಂತಹ ಹಲವು ಮಿತಿಗಳು ಈ ಕಾದಂಬರಿಗಿವೆ.
ಮೋದೂರು ತೇಜ

ಮೋದೂರು ತೇಜ ಅವರ ಮೊದಲ ಕಾದಂಬರಿ ಇದಾಗಿದ್ದರಿಂದ ಇಂತಹ ಮಿತಿಗಳು ಉಳಿದಿರಬಹುದು. ತೇಜ ಅವರ ಕಥೆಗಳಲ್ಲಿ ಕಾಣುವ ಬಿಗಿ ಬಂಧ, ಕಥನ ಕ್ರಮ, ನಿರೂಪಣೆಯ ತಂತ್ರ ಇಲ್ಲಿಯೂ ಸಾಧ್ಯವಾಗಿದ್ದರೆ, ಇದೊಂದು ಮಹತ್ವದ ಕಾದಂಬರಿಯಾಗುತ್ತಿತ್ತು. ತೇಜ ಅವರು ತಮ್ಮ ಮುಂದಿನ ಬರಹದಲ್ಲಿ ಇಂತಹ ಮಿತಿಗಳನ್ನು ಮೀರಿದರೆ ಅವರಿಂದ ಮಹತ್ವದ ಕಾದಂಬರಿಯನ್ನು ನಿರೀಕ್ಷಿಸಬಹುದು. ಕಾದಂಬರಿಯಂತಹ ದೊಡ್ಡ ಕ್ಯಾನ್ವಾಸಿನಲ್ಲಿ ತನ್ನ ಸೃಜನಶೀಲ ಹುಡುಕಾಟ ಮಾಡಿದ ತೇಜ ಅವರನ್ನು ಈ ಕಾರಣಕ್ಕೆ ಅಭಿನಂದಿಸಬೇಕು.

ಕೃತಿ: ವೇದಾವತಿ ತೀರದ ಜನಬದುಕಿನ ಚಿತ್ರಲೋಕ (ಕಾದಂಬರಿ)
ಲೇಖಕರು: ಮೋದುರು ತೇಜ
ಪುಟ:೩೪೦, ಬೆಲೆ: ರೂ.೨೦೦
ಪ್ರ: ಅಕ್ಷಯ ಪ್ರಕಾಶನ, ಚಿತ್ರದುರ್ಗ

Wednesday, 16 May 2012

ಸ್ತ್ರೀವಾದ ಎನ್ನುವುದು ಬದುಕಿನ ಒಂದು ಕ್ರಮ – ಆಶಾ ದೇವಿ

ಹರ್ಷ ಕುಮಾರ್ ಕುಗ್ವೆ
ಸೌಜನ್ಯ:- ದ ಸಂಡೇ ಇಂಡಿಯನ್



ಕನ್ನಡ ಸಾಹಿತ್ಯದಲ್ಲಿ ಮಹಿಳಾ ಲೇಖಕಿಯರ ಸಾಹಿತ್ಯ ರಚನೆ ಇಂದು ಯಾವ ಘಟ್ಟವನ್ನು ತಲುಪಿದೆ ಎಂದು ನಿಮ್ಮ ಅನಿಸಿಕೆ?

ಎಲ್ಲ ಬಗೆಯ ಶೋಷಿತ ಸಮುದಾಯಗಳ ಸಂಕಥನದಲ್ಲಿ ಗುರುತಿಸಬಹುದಾದ ಸಾಮಾನ್ಯ ಲಕ್ಷಣಗಳು ಇಲ್ಲೂ ಇವೆ. ಮೊದಲನೆಯದು ಆತ್ಮ ಮರುಕದ ಘಟ್ಟವಾದರೆ ಎರಡನೆಯದು ಸ್ವ-ಅರಿವಿನ ಘಟ್ಟ, ಮೂರನೆಯದು ಅಧಿಕೃತತೆಯನ್ನು ದಾಖಲಿಸುವ ಘಟ್ಟ. ಹೀಗೆ ಇಂದು ಲೇಖಕಿಯರು ತಮ್ಮ ಅನುಭವಕ್ಕೂ, ತಮ್ಮ ಬರವಣಿಗೆಗೂ, ಒಟ್ಟಾರೆ ತಮ್ಮ ಅಭಿವ್ಯಕ್ತಿಗೆ ಅಧಿಕೃತತೆಯನ್ನು ಪಡೆದುಕೊಳ್ಳುವ ಒಂದು ಘಟ್ಟದಲ್ಲಿದ್ದಾರೆ. ನಮ್ಮ ಎದುರಿಗಿರುವ ಸವಾಲೆಂದರೆ ಲೋಕದೃಷ್ಟಿಯಿಂದ ಪಡೆದುಕೊಳ್ಳಬೇಕಾದ ಬಿಡುಗಡೆಗಿಂತ ಸ್ವ-ಬಿಡುಗಡೆ ತುಂಬ ಮೂಲಭೂತವಾದದ್ದು ಅನ್ನಿಸುತ್ತೆ. ಇವತ್ತಿನ ಲೇಖಕಿಯರು ಅವರವರ ಬದುಕಿನ ಸಣ್ಣ ಪುಟ್ಟ ಸುಖ ಸಂತೋಷಗಳನ್ನು ತುಂಬ ಮುಖ್ಯವಾದದ್ದೆನ್ನುವ ಹಾಗೆ, ಅದೇ ಅವರ ಅನುಭವ ಲೋಕ ಎನ್ನುವ ಹಾಗೆ ಬರೆಯುತ್ತಿದ್ದಾರೆ. ಹಾಗೆ ಬರೆಯುವಾಗ ಅವರಿಗಿರುವ ಆತ್ಮವಿಶ್ವಾಸ ಒಂದು ಗುರುತರವಾದ ಬದಲಾವಣೆಯನ್ನು ತಂದುಕೊಡುತ್ತಿದೆ.

ಮಹಿಳೆಯರ ಸಾಹಿತ್ಯ ಸೃಷ್ಟಿಗೆ ಯಾವ ಪ್ರತಿಸ್ಪಂದನೆ ಸಿಗುತ್ತಿದೆ?

ಇಂದು ಮಹಿಳೆಯ ಸಾಹಿತ್ಯಕ್ಕೆ ಸಿಗ್ತಾ ಇರೋ ಸ್ಥಾನ ಬೇರೆ. ಮಹಿಳೆಯ ಸಾಹಿತ್ಯ ಮತ್ತು ಸಾಹಿತ್ಯದ ಸ್ವರೂಪ ಎರಡಕ್ಕೂ ಹತ್ತಿರದ ಸಂಬಂಧವಿದೆ. ಮಹಿಳೆಯ ಸಾಹಿತ್ಯವನ್ನು ಸಾಹಿತ್ಯ ಅಂತ ಮಾತ್ರ ನೋಡಬೇಕು ಎನ್ನುವುದು ನಮ್ಮ ಹಂಬಲ. ಸಾಹಿತ್ಯದಲ್ಲಿ ಒಳ್ಳೆ ಸಾಹಿತ್ಯ, ಕೆಟ್ಟ ಸಾಹಿತ್ಯ ಎಂದು ಮಾತ್ರ ಇರಬೇಕು ಎಂಬುದರ ಕಡೆಗೆ ನಮ್ಮ ಚಲನೆ ಇರಬೇಕು. ಅದು ತುಂಬ ದೂರದ ದಾರಿ ನಿಜ. ಆದರೆ ಸಮಾಧಾನದ ಸಂಗತಿ ಏನೆಂದರೆ ಮಹಿಳೆಯ ಸಾಹಿತ್ಯವನ್ನು ನೋಡುವ ದೃಷ್ಟಿಕೋನದಲ್ಲಿ ತುಂಬಾ ಖಚಿತ ಹಾಗೂ ಗುಣಾತ್ಮಕ ಬದಲಾವಣೆಗಳಾಗುತ್ತಿರುವುದು. ಇಂದು ಹಿಂದೆ ನಿರ್ಲಕ್ಷಿಸಲ್ಪಟ್ಟ ಲೇಖಕಿಯರನ್ನೂ ಮುಂದೆ ಇಟ್ಟುಕೊಂಡು ಚರ್ಚಿಸುತ್ತಿದ್ದೇವೆ ಎಂಬುದು ಮೊದಲನೆಯದು. ಎರಡನೆಯದಾಗಿ, ಲೇಖಕಿಯರನ್ನು ಬೇರೆ ಬೇರೆ ನೆಲೆಗಳಲ್ಲಿ, ಅಂದರೆ ಲೇಖಕಿ ಎನ್ನುವ ನಿರ್ದಿಷ್ಟತೆಯನ್ನು ಬಿಟ್ಟು ಚರ್ಚಿಸುವ ನೆಲೆಗಳನ್ನು ಕಟ್ಟಿಕೊಡುವುದರಲ್ಲಿ ಇವತ್ತಿನ ಕನ್ನಡ ವಿದ್ವತ್ ಲೋಕಕ್ಕೆ ಆಸಕ್ತಿ ಇದೆ. ತುಂಬಾ ಮೂಲಭೂತ ಸವಾಲುಗಳು ಇನ್ನೂ ಹಾಗೇ ಉಳಿದುಕೊಂಡಿವೆ ಎಂಬುದೇನೋ ನಿಜ.

ಇತ್ತೀಚೆಗೆ ನಾನು ಕಟ್ಟಲು ಯತ್ನಿಸುತ್ತಿರುವ ಪ್ರಮೇಯ ಏನು ಎಂದರೆ ಕನ್ನಡ ವಿಮರ್ಶೆಯಲ್ಲಿ ಯಾವಾಗಲೂ ಸ್ತ್ರೀ ದೃಷ್ಟಿಕೋನವಿದೆ, ಆದರೆ ಸ್ತ್ರೀ ಸಂವೇದನೆ ಇಲ್ಲ ಎಂಬುದು. ನಮ್ಮ ಎಷ್ಟೋ ಮಹತ್ವದ ಲೇಖಕಿಯರನ್ನು ಅವರ ನಿಜವಾದ ನೆಲೆ ಮತ್ತು ಬೆಲೆಯಲ್ಲಿ ಗುರುತಿಸಲು ಏಕೆ ಸಾಧ್ಯವಾಗಲಿಲ್ಲ ಎಂದರೆ ದೃಷ್ಟಿಕೋನ ಸಾಧ್ಯವಾಗಿ ಸಂವೇದನೆ ಸಾಧ್ಯವಾಗದಿರುವುದರಿಂದಾಗಿ.

ಕನ್ನಡ ಸಾಹಿತ್ಯದ ಪುನರ್‌ಮೌಲ್ಯೀಕರಣ ಮಾಡುತ್ತಿರುವ ಈ ದಿನಗಳಲ್ಲಿ ಲೇಖಕಿಯರಿಗೆ ಬಹುಶಃ ಇಲ್ಲಿಯವರೆಗೆ ಸಿಗದೇ ಹೋದ ಸ್ಥಾನ ಇನ್ನು ಸಿಗುತ್ತೆ ಅಂತ ನನಗನ್ನಿಸುತ್ತಿದೆ.

ಇಂದು ಮಹಿಳೆಯರ ದೃಷ್ಟಿಕೋನದಲ್ಲಿ ಯಾವ ರೀತಿಯ ಬದಲಾವಣೆ ಕಂಡು ಬರುತ್ತಿದೆ? ಅದು ಕೇವಲ ವ್ಯಕ್ತಿನಿಷ್ಠವಾಗಿದೆಯೇ?

ಸಾಹಿತ್ಯ ಸೃಷ್ಟಿಗೆ ತೊಡಗಿಕೊಂಡಿರುವವರಲ್ಲಿ ಹಲವರು ಸಮಷ್ಟಿ ನೆಲೆಯಲ್ಲೂ ಬರೆಯುತ್ತಿದ್ದಾರೆ. ಅದಕ್ಕೇ ನಾನು ಹೇಳಿದ್ದು. ಇಂದು ಬರೆಹ ಸ್ತ್ರೀ ಕೇಂದ್ರಿತಕ್ಕಿಂತ ಬದುಕಿನ ಕೇಂದ್ರಿತ ಸಾಹಿತ್ಯವಾಗಿದೆ. ಇದೇ ಒಂದು ಬದಲಾವಣೆ. ಆತ್ಮ ಮರುಕ ಮತ್ತು ಸ್ವ-ಗ್ರಹಿಕೆಯಿಂದ ಹೊರಟು ಅಧಿಕೃತತೆಯೆಡೆ ಬಂದಿರುವುದೇ ಒಂದು ಬದಲಾವಣೆ. ಇಂದು ತುಂಬ ದೊಡ್ಡದಾಗಿರುವುದು ಯಾವುದೆಂದರೆ ಬದುಕು. ತಾನುಂಟೋ ಮೂರು ಲೋಕವುಂಟೋ ಎಂದು ನೋಡುತ್ತಿದ್ದವರಿಗೆ ಇಂದು ಕಣ್ಣು ಹೊರಳಿಸಿ ಹೊರಳಿಸಿ ನೋಡಲಿಕ್ಕಾಗುತ್ತಿದೆ. ಹಾಗೆ ನೋಡಲಿಕ್ಕೆ ಬೇಕಾಗಿರುವ ಆತ್ಮಸಮ್ಮಾನ ಇಂದು ಸಾಧ್ಯವಾಗಿದೆ. ಕಟ್ಟಿಕೊಳ್ಳುತ್ತಿರುವ ಬದುಕಿನ ಬಗ್ಗೆ ಯಾವ ಕೀಳರಿಮೆಯೂ ಇಲ್ಲದ ವಿಶ್ವಾಸ ಇಂದು ಸಾಧ್ಯವಾಗಿದೆ. ಹೀಗಾಗಿ ಇಂದು ಹೆಣ್ಣು ಕಂಡುಕೊಳ್ಳುತ್ತಿರುವುದು ಹೊರಗಿನದ್ದೂ ಹೌದು ಒಳಗಿನದ್ದೂ ಹೌದು. ಆದರೆ ಕೆಲವೊಮ್ಮೆ ಬಿಡುಗಡೆಯ ದಾರಿಗಳಾಗಿ ಕಂಡಿರುವುದು ಎಷ್ಟೋ ಸಲ ಬಿಡುಗಡೆಯ ದಾರಿಗಳಾಗಿರುವುದಿಲ್ಲ. ಅವು ನಮ್ಮನ್ನು ಇನ್ನೂ ಹೆಚ್ಚೆಚ್ಚು ಆಳವಾಗಿ ಹುಗಿಯುವ (ಪುರುಷ ಪ್ರಧಾನತೆಯೊಳಗೆ) ಹುನ್ನಾರಗಳಾಗಿರುತ್ತವೆ. ಆದರೆ ಸಮಾಧಾನದ ಸಂಗತಿ ಎಂದರೆ ಇಂದು ಪುರುಷ ಪ್ರಾಧಾನ್ಯತೆಯ ಈ ಛದ್ಮವೇಷವು ಅರ್ಥವಾಗುತ್ತಿದೆ. ಒಂದು ಕಾಲದಲ್ಲಿ ಅದು ಅರಿವಿಗೇ ಬರುತ್ತಿಲ್ಲ.


ನಮ್ಮ ಸಮಾಜದಲ್ಲಿ ಸ್ತ್ರೀವಾದ ಇಂದು ಯಾವ ಹಂತದಲ್ಲಿದೆ? ಸ್ತ್ರೀವಾದಕ್ಕೆ ನಿಮ್ಮ ವ್ಯಾಖ್ಯಾನವೇನು?

ಸ್ತ್ರೀವಾದ ಎನ್ನುವುದು ಒಂದು ಬದುಕಿನ ಕ್ರಮ ಅಷ್ಟೆ. ಸಮಾನತೆ, ಸ್ವಾತಂತ್ರ್ಯ ಯಾವುದೂ ಇಲ್ಲದ, ಬದಲಿಗೆ ಪರಸ್ಪರ ಸ್ವಾಯತ್ತತೆಯಿಂದ ಒಪ್ಪಿ ಗೌರವಿಸುವ ಒಂದು ಜೀವನ ವಿಧಾನ ಎನ್ನುವುದು ನನ್ನ ಗ್ರಹಿಕೆ. ಆದರೆ ಸ್ತ್ರೀವಾದ ಎನ್ನುವುದು ಮಹಿಳೆಯರಿಗೇ ಸಂಬಂಧಿಸಿದ್ದಲ್ಲ. ಆ ಬದುಕಿನ ಕ್ರಮವನ್ನು ಗಂಡು ಮತ್ತು ಹೆಣ್ಣು ಇಬ್ಬರೂ ಬಹಳ ಶ್ರಮ ಹಾಗೂ ಪ್ರೀತಿಯಲ್ಲಿ ಮಾತ್ರ ಕಟ್ಟಿಕೊಳ್ಳಲು ಆಗುತ್ತೆ.

ಸ್ತ್ರೀವಾದದಲ್ಲಿ ಖಂಡಿತವಾಗಿಯೂ ಒಂದು ಬೆಳವಣಿಗೆ ಇದೆ. ಸ್ತ್ರೀವಾದಿ ಚಳವಳಿಯನ್ನು ಪ್ರತ್ಯೇಕವಾಗಿ ನೋಡಬೇಕಿಲ್ಲ ಎನ್ನುವುದೇ ನನಗನ್ನಿಸಿದ್ದು. ಒಂದು ಕಾಲದಲ್ಲಿ ಸ್ತ್ರೀವಾದ ಭಾರತಕ್ಕೆ ಪ್ರವೇಶ ಮಾಡಿದಾಗ ಅದು ಎಲ್ಲಾ ಸೌಲಭ್ಯ ಪಡೆದ ವರ್ಗದ ಪ್ರಯತ್ನವಾಗಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಇಂದು ಬೇರೆ ಬೇರೆ ಸ್ತರಗಳಲ್ಲಿರುವವರಿಗೂ ಅದು ತಲುಪಿದೆ. ವಿದ್ಯಾವಂತರು, ಅವಿದ್ಯಾವಂತರು, ಗಾರ್ಮೆಂಟ್ ಕಾರ್ಮಿಕರು- ಹೀಗೆ ಎಲ್ಲರಲ್ಲಿ ಒಂದು ಜಾಗೃತಿ ಕಾಣಿಸುತ್ತಿದೆ. ಅದೇ ಹೊತ್ತಿಗೆ ಈ ಜಾಗೃತಿ ಅಥವಾ ಅರಿವು ಎನ್ನುವುದು ಆಧುನಿಕ ಹೆಣ್ಣಿನ ಹಿಂಸೆಯನ್ನು ಹಿಂದೆಂದೂ ಇರದಷ್ಟು ಹೆಚ್ಚಿಸಿದೆ ಎನ್ನುವುದೂ ಅಷ್ಟೇ ವಾಸ್ತವ. ಅರಿವಿನ ಹಿಂಸೆಯ ಘಟ್ಟವನ್ನು ದಾಟುವುದು ಯಾವ ಶೋಷಿತ ವರ್ಗಕ್ಕೂ ತುಂಬ ನಿರ್ಣಾಯಕವಾದ ಘಟ್ಟ. ಬಹಳ ಕಷ್ಟದ ಕಾಲ ಅದು. ಆದರೆ ಹೆಣ್ಣಿನದು ಅಸಾಧಾರಣವಾದ ಆತ್ಮ ಸ್ಥೈರ್ಯದ ವ್ಯಕ್ತಿತ್ವವಾದ್ದರಿಂದ ಈ ಹಿಂಸೆಗೂ ಆಕೆ ತನ್ನನ್ನು ತಾನು ಒಡ್ಡಿಕೊಂಡಿದ್ದಾಳೆ.

ಪುರುಷ ಲೇಖಕರಲ್ಲಿ ಸ್ತ್ರೀ ಸಂವೇದನೆ ಎಷ್ಟರ ಮಟ್ಟಕ್ಕೆ ವ್ಯಕ್ತಗೊಂಡಿದೆ?

ಹೆಣ್ಣನ್ನು ತನ್ನ ನಿಜದಲ್ಲಿ ಗುರುತಿಸಲು ಪ್ರಯತ್ನಿಸಿದವರಲ್ಲಿ ಮೊದಲಿಗನಾಗಿ ನನಗೆ ಕಾಣುವುದು ಅಲ್ಲಮ. ದಾಸಿಮಯ್ಯ ಕೂಡಾ ಅದೇ ಪ್ರಯತ್ನ ನಡೆಸಿದವನು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾರಂತರಿದ್ದಾರೆ. ಅದೆಷ್ಟೇ ಬೌದ್ಧಿಕ ನೆಲೆಯದ್ದಾಗಿರಬಹುದಾದರೂ ಕಾರಂತರು ತುಂಬಾ ಪ್ರ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಕುವೆಂಪು ಅವರಲ್ಲಿ ಕೆಲವೊಮ್ಮೆ ಅಪ್ರಯತ್ನಪೂರ್ವಕವಾಗಿ ಸ್ತ್ರೀ ಸಂವೇದನೆ ಕಾಣಿಸುತ್ತದೆ. ಸ್ತ್ರೀ ಸಂವೇದನೆಯನ್ನು ತುಂಬಾ ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ ಲೇಖಕ ಎಂದರೆ ಲಂಕೇಶ್ ಅನ್ನಿಸುತ್ತೆ.

ಮಹಿಳಾ ಸಂವೇದನೆ ಎಲ್ಲಿ ಕೊರತೆ ಅನುಭವಿಸುತ್ತಿದೆ?

ನೀವು ಈ ಥರದ ಪ್ರಶ್ನೆಗಳನ್ನು ಬೇರೆಯವರಿಗೂ ಕೇಳಬೇಕು. ಇದಿಷ್ಟೂ ಪ್ರಶ್ನೆಗಳನ್ನು ರಹಮತ್‌ರವರಿಗೂ ಕೇಳಬೇಕೆಂದು ಬಯಸುತ್ತೇನೆ. ನನಗೆ ರಹಮತ್‌ರೊಂದಿಗೂ ಸಮಸ್ಯೆ ಇದೆ. ಅವರು ಅಷ್ಟು ಪ್ರಾಮಾಣಿಕವಾಗಿದ್ದೂ, ಸ್ತ್ರೀಯರ ಬಗ್ಗೆ ಆಳವಾದ ಗೌರವ ವಿಶ್ವಾಸ ಎಲ್ಲಾ ಇದ್ದರೂ ಯಾಕೆ ಅವರು ಕನ್ನಡದ ಯಾವೊಬ್ಬ ಮಹತ್ವದ ಲೇಖಕಿಯ ಬಗ್ಗೆ ಬರೆದಿಲ್ಲ. ಬರೆದೇ ಇಲ್ಲವೆಂದಲ್ಲ. ಆದರೆ ಬೇರೆ ವಿಷಯಗಳ ಬಗ್ಗೆ ಅಷ್ಟಷ್ಟು ಬರೆದವರು ಈ ಬಗ್ಗೆ ಎಷ್ಟು ಬರೆಯಲು ಸಾಧ್ಯವಾಗಿದೆ ಎನ್ನುವುದು ನನ್ನ ತಕರಾರು. ಇದೇ ಪ್ರಶ್ನೆಯನ್ನು ನಾನು ಬಸವಣ್ಣನವರ ಬಗ್ಗೆಯೂ ಎತ್ತಿದಾಗ ಇವಳನ್ನು ಕೆಲಸದಿಂದ ತೆಗೀರಿ ಎಂದು ಹೇಳಿದರು. ಯಾಕೆಂದರೆ ದಲಿತರ ಸಣ್ಣಸಣ್ಣ ನೋವುಗಳನ್ನೂ ಅಷ್ಟು ಸೂಕ್ಷ್ಮವಾಗಿ ಆವಾಹಿಸಿಕೊಳ್ಳಲು ಬಸವಣ್ಣ ಪ್ರಯತ್ನಿಸುತ್ತಾರೆ. ಚೆನ್ನಯ್ಯನ ಮನೆಯ ದಾಸಿಯ ಮಗ ಎಂದಾಗ ಅವರು ತಮ್ಮನ್ನು ತಾವು ದಲಿತರೊಂದಿಗೆ ಸಮೀಕರಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ, ಹೆಣ್ಣನ್ನು ನೂರು ಸಲ ನಾಯಿ ಎಂದು ಕರೆಯುತ್ತಾರೆ. ನಮ್ಮ ವಿಮರ್ಶೆಯಲ್ಲೂ ಅಷ್ಟೆ. ಸಂಸ್ಕಾರಕ್ಕೆ ಸಿಗಬೇಕಾದ ಸ್ಥಾನಮಾನ ’ಫಣಿಯಮ್ಮ’ಗೆ ಸಿಗಲಿಲ್ಲ? ಫಣಿಯಮನನ್ನು ಹೇಗೆ ಚರ್ಚೆ ಮಾಡಬೇಕಿತ್ತೋ ಹಾಗೆ ಮಾಡಿದ್ದರೆ ಇಂದು ಫಣಿಯಮ್ಮದ ಸ್ಥಾನ ಎಲ್ಲಿರುತ್ತಿತ್ತು? ಹೆಚ್ಚೂ ಕಡಿಮೆ ಸಂಸ್ಕಾರ ಎತ್ತಿದಷ್ಟೇ ಮೂಲಭೂತ ಪ್ರಶ್ನೆಗಳನ್ನು ಹೆಣ್ಣಿನ ವಿಷಯದಲ್ಲಿ ಫಣಿಯಮ್ಮ ಎತ್ತಿರಲಿಲ್ಲವೇ?.

ನಾನು ಎಷ್ಟೋ ವಿಚಾರ ಸಂಕಿರಣಗಳನ್ನು ಈ ಕಾರಣಕ್ಕೆ ತಿರಸ್ಕರಿಸಿದ್ದೀನಿ. ಏಕೆಂದರೆ ನಮಗೆ ಅದೇ ವಿಷಯ ಮೀಸಲಿಟ್ಟಿರುತ್ತಾರೆ. ಈಗ ಪಂಪನ ಬಗ್ಗೆ ವಿಚಾರ ಸಂಕಿರಣದಲ್ಲಿ ಸ್ತ್ರೀವಾದಿ ದೃಷ್ಟಿಕೋನದಲ್ಲಿ ಪಂಪ ಎಂದು ಒಂದು ವಿಷಯ ಮಂಡನೆ ಇರಬೇಕಪ್ಪ. ಇಲ್ಲ ಅಂದರೆ ಯಾಕೆ ರಂಪ ಎಂದು ಸುಮಿತ್ರಾಬಾಯಿನೋ, ಆಶಾದೇವಿನೋ, ಗಾಯತ್ರಿನೋ ಯಾರನ್ನೋ ಒಬ್ಬರನ್ನು ಕರೆಯೋದು. ಈ ವಿಷಯದ ಬಗ್ಗೆ ಪುರುಷರೂ ಮಾತನಾಡುವಂತಾಗಬೇಕು ಎಂದು ನನ್ನ ಒತ್ತಾಯ.

ಆಧುನಿಕ ತಂತ್ರಜ್ಞಾನದ ಜಗತ್ತು ತಂದಿರುವ ಬದಲಾವಣೆ ಯಾವ ಬಗೆಯದ್ದು ಎಂದು ನಿಮ್ಮ ಭಾವನೆ?

ಇಂದು ಕಾರ್ಪೊರೇಟ್ ಪ್ರಪಂಚ ಹೆಣ್ಣಿಗೆ ಎಲ್ಲದನ್ನೂ ಕೊಟ್ಟುಬಿಟ್ಟಿರುವಂತೆ ಕಾಣಿಸುತ್ತದೆ. ಆದರೆ ಇದು ಲಿಂಗ ರಾಜಕೀಯಕ್ಕಿಂತ ಹೆಚ್ಚಿನ ಕ್ರೌರ್ಯವನ್ನು ಹೆಣ್ಣುಮಕ್ಕಳ ವಿಷಯದಲ್ಲಿ ಈ ಕಾರ್ಪೊರೇಟ್ ಲೋಕ ತೋರಿಸುತ್ತಿರುವುದನ್ನು ಕಾಣುತ್ತೇವೆ. ಅಲ್ಲಿ ಒಂದು ಡಿಜೆಂಡರೈಜೇಷನ್ (ಲಿಂಗಸೂಕ್ಷ್ಮರಾಹಿತ್ಯತೆ) ಕಾಣಿಸುತ್ತಿದೆ. ಗಂಡು ಹೆಣ್ಣು ಯಾವುದೂ ಅಲ್ಲ. ಕೆಲಸ ಮಾಡಿದರೆ ಉಳಿದುಕೊಳ್ತಾರೆ ಇಲ್ಲವೇ ತೆಗೆದು ಹಾಕೋದಷ್ಟೇ. ಇದು ಅಲ್ಲಿನ ಮೂಲಭೂತ ಪರಿಕಲ್ಪನೆ. ತನ್ನ ತಾಯ್ತನದ ಮೂಲಭೂತ ಪ್ರಶ್ನೆಯನ್ನು ಇಟ್ಟುಕೊಂಡು ಆಕೆ ಕೆಲಸದಲ್ಲಿ ಗಂಡಿನ ಜೊತೆ ತನ್ನ ಸಮಾನ ಸ್ಪರ್ಧೆ ನಡೆಸಬೇಕಾಗಿದೆ. ಕೆಲಸ ಹಾಗೂ ತಾಯ್ತನಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಂಡರೂ ಅದು ತುಂಬ ನೋವಿನ ಅಯ್ಕೆಯಾಗಿರುತ್ತದೆ. ಯಾವುದನ್ನು ಆರಿಸಿಕೊಂಡರೂ ಅದರಲ್ಲಿ ಅವಳಿಗೆ ಸಂತೋಷ ಸಿಗುತ್ತಾದರೂ ಇನ್ನೊಂದು ಕಳೆದುಕೊಂಡ ದುಃಖ ಇರುತ್ತದೆ. ಇದನ್ನು ಒಂದು ಮಾನವೀಯ ಹಿನ್ನೆಲೆಯಲ್ಲಿ ಈ ಕಾರ್ಪೊರೇಟ್ ವ್ಯವಸ್ಥೆ ನೋಡೋದೇ ಇಲ್ಲ. ತನ್ನ ಆತ್ಮಸ್ಥೈರ್ಯ ಉಳಿಸಿಕೊಂಡು, ತನ್ನ ಅನನ್ಯತೆಯನ್ನು ಉಳಿಸಿಕೊಂಡು, ತನ್ನ ಸುಖದ ಮೂಲಗಳನ್ನುಳಿಸಿಕೊಂಡು ಹೋಗೋದು ಆಕೆಯ ಪಾಲಿಗೆ ದೊಡ್ಡ ಸವಾಲಾಗಿದೆ. ಇದರಿಂದ ಆಧುನಿಕತೆಯಲ್ಲಿ ಯಾವುದು ಬಿಡುಗಡೆ ಎಂದು ಹೇಳುವುದು ಕಷ್ಟದ್ದು. ಹೀಗಿರುವಾಗ ತಾಯ್ತನದ ಸುಖ ಏನೂ ಅಲ್ಲ, ಅದನ್ನು ಬಿಟ್ಟುಕೊಟ್ಟು ಬಿಡ್ತೀನಿ ಎಂದುಕೊಳ್ಳುವುದು ಆಕೆಗೆ ಸಾಧ್ಯವಾಗ್ತಾನೇ ಇಲ್ವಲ್ಲ. ಅದು ಸಾಧ್ಯವಾಗಿಬಿಟ್ಟರೆ ಎಲ್ಲ ಸರಿಹೋಗಿಬಿಡುತ್ತೆ ಎಂದಲ್ಲ. ಆದರೆ, ಅವಕಾಶ ಸಿಕ್ಕರೆ ಅದು ಎಲ್ಲರಿಗೂ ಬೇಕು; ಜಗತ್ತಿನ ಅಪೂರ್ವ ಸುಖ ಅದು ಎಂದು ಕಾಣುತ್ತೆ. ಅದು ಒಂದು ರೀತಿ ನಿಜವೂ ಹೌದು. ಮುಖ್ಯವಾಗಿ ಇಲ್ಲಿ ಆಕೆಯ ಎದುರಿಗಿರುವ ಸವಾಲೆಂದರೆ ಯಾವಾಗಲೂ ಕೆಲಸ ಮಾಡುವ ಮಹಿಳೆ ತನ್ನ ಮೇಲೆ ತಾನೇ ಒಂದು ಕೀಳರಿಮೆಯನ್ನು ಹೇರಿಕೊಳ್ತಾಳೆ. ತಾನೆಲ್ಲೋ ಇದನ್ನು ಸರಿಯಾಗಿ ನಿಭಾಯಿಸಲಿಲ್ಲವೇನೋ, ಅದನ್ನು ಸರಿಯಾಗಿ ನಿಭಾಯಿಸಲಿಲ್ವೇನೋ, ಎಂದು. ಯಾಕೆಂದರೆ ಈಗಾಗಲೇ ಸ್ಥಾಪಿತ ಪರಿಕಲ್ಪನೆಗಳು ನಮ್ಮ ಮನಸ್ಥಿತಿಯನ್ನು ಹಾಗೆ ರೂಪಿಸಿರುತ್ತವೆ. ಮಹಿಳೆ ಎಲ್ಲವನ್ನೂ ಸರಿಯಾಗಿ ತೂಗಿಸೋದಕ್ಕೆ ನೋಡುತ್ತಾಳೆ. ಆಕೆಗೆ ಧಾರಣ ಶಕ್ತಿ ಅಸಾಧಾರಣವಾಗಿರತ್ತೆ ಎನ್ನುವುದು ಬೇರೆ ವಿಷಯ. ಆದರೆ ಆ ಧಾರಣ ಶಕ್ತಿಗೆ ಸರಿಯಾದ ಬೆಂಬಲ ರಚನೆಯಿಲ್ಲದೇ ಹೋದಾಗ ಒಂದು ಸಮಯದಲ್ಲಿ ಆಕೆ ಕುಸಿದು ಹೋಗುತ್ತಾಳೆ.

ಇಂದು ಭ್ರಷ್ಟಾಚಾರದ ವಿಷಯ ಚರ್ಚೆಗೊಳಗಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?

ಇಂದು ಅತ್ಯಂತ ಭ್ರಷ್ಟ ಎಂದು ಹೇಳಲು ಒಂದು ವ್ಯಾಖ್ಯಾನ ಇದೆಯಾ? ಇಂದು ಭ್ರಷ್ಟಾಚಾರವನ್ನು ಒಂದು ವ್ಯವಸ್ಥೆಯಾಗಿ ಒಪ್ಪಿಕೊಂಡುಬಿಟ್ಟಿರುವ ದುರಂತ ನಮ್ಮೆದುರಿಗಿದೆ. ಅಣ್ಣಾ ಹಜಾರೆಯಂತವರು ಆರಂಭಿಸಿರುವ ಚಳವಳಿ ಒಂದು ಆಶಾಕಿರಣವಾಗಿ ಕಾಣುತ್ತಿರುವುದು ನಿಜ. ಎಲ್ಲೋ ಜೆಪಿ ಶುರು ಮಾಡಿದ ತರದ ಚಳವಳಿ ಭವಿಷ್ಯದಲ್ಲಿ ಇದೆ ಎಂದೇ ನನ್ನ ಅನಿಸಿಕೆ. ನಾವು ಆಶಾವಾದಿಯಾಗಿರಲು ಎಲ್ಲೋ ಸಣ್ಣ ಅವಕಾಶವಿದೆ.

ಜಾತಿ ಸಮಾವೇಶಗಳು ಜರುಗುತ್ತಿವೆ. ಒಂದು ಜಾತಿ ಮಠಾಧೀಶರು ನೇರವಾಗಿ ಸರ್ಕಾರದ ರಕ್ಷಣೆಯಲ್ಲಿ ತೊಡಗಿದ್ದಾರಲ್ಲಾ?

ಇಂದು ಜಾತಿ ಎನ್ನುವುದು ಆಧುನಿಕತೆಯ ಒಂದು ಶಾಪವೇ ಅಲ್ಲವೇ? ಆಧುನಿಕತೆಯ ಹಲವು ಶಾಪಗಳಲ್ಲಿ ಜಾತಿಯನ್ನು ವ್ಯವಸ್ಥೆಯ ಭದ್ರ ಭಾಗವಾಗಿಸಿದ್ದೂ ಒಂದು. ಹೇಗೆ ಕೋಮುವಾದ ಸಹ ಆಧುನಿಕತೆ ಮತ್ತು ವಿಜ್ಞಾನದ ನೆರವಿನಿಂದ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆಯೋ ಹಾಗೆ ಜಾತಿ ವಿಷಯದಲ್ಲೂ ಸಹ ಅದರ ಉಪ ಉತ್ಪನ್ನವಾಗಿದೆ. ನಾವು ಮತ್ತೆ ಮತ್ತೆ ಜಾತಿ ವಿಷಯಕ್ಕೆ ಬರುತ್ತೇವೆಂದರೆ ಭಾರತದ ಮಟ್ಟಿಗೆ ಅದು ತೇಜಸ್ವಿ ಹೇಳುವ ರೀತಿ ಚರ್ಮವೇ ಆಗಿದೆ. ಅದು ಅಷ್ಟು ಸುಲಭವಾಗಿ ಹೋಗುವಂತಾದ್ದಲ್ಲ.

ಯಾವುದೇ ಒಂದು ಸಾಮಾಜಿಕ ಚಳವಳಿಯ ಅನುಪಸ್ಥಿತಿ ಸಾಹಿತ್ಯದ ಮೇಲೆ ಬೀರಿರುವ ಪರಿಣಾಮ ಎಂಥದು?

ಇಂದು ಒಂದು ಮೂರ್ತವಾದ ಚಳವಳಿ ಇಲ್ಲ. ಎಲ್ಲ ಚಳವಳಿಗಳನ್ನು ರೂಪಿಸುವುದು ಒಂದು ತಾತ್ವಿಕ ಆಕೃತಿಯೇ ಅಲ್ಲವೇ? ಆದರೆ ಇಂದು ನಾವಿರುವ ಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲೇ ಯಾವುದೇ ಒಂದು ನಿರ್ದಿಷ್ಟ ತಾತ್ವಿಕ ಆಕೃತಿ ಮೆಲಿನ ನಂಬಿಕೆ ಎನ್ನುವುದು ಹೊರಟುಹೋಗಿದೆ. ಎಲ್ಲ ತಾತ್ವಿಕ ಆಕೃತಿಗಳು ಒಡೆದು ಹೋಗಿರುವ ಅಥವಾ ಎಲ್ಲವೂ ಸೇರಿ ಬೆರೆಯುತ್ತಿರುವ ಸನ್ನಿವೇಶ ಇದು. ಹೀಗೆ ಎಲ್ಲ ತಾತ್ವಿಕ ಆಕೃತಿಗಳು ಬೆರೆತು ಅಖಂಡವಾದ ಮಾನವೀಯ ನೆಲೆಯನ್ನು ಕಟ್ಟಿಕೊಳ್ಳಲು ಪ್ರಯತ್ನ ಪಡುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗಾಗಿ ಒಂದು ಚಳವಳಿ ಎನ್ನುವುದು ಸ್ಪಷ್ಟ ರೂಪದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಚಳವಳಿಗಳು ಇಲ್ಲದ ಕಾಲ ಒಂದು ಬರವಣಿಗೆಯಲ್ಲಿ ಯಾವತ್ತಾದರೂ ಇರುತ್ತೆ ಎಂದು ನನಗೆ ತೋರಿಬಂದಿಲ್ಲ. ಉದಾಹರಣೆಗೆ ತೇಜಸ್ವಿಯವರು ಒಮ್ಮೆ ಮಾತನಾಡುತ್ತಾ ಈ ಸಿದ್ಧಾಂತಗಳಿಗೆಲ್ಲಾ ನನಗೆ ಪ್ರವೇಶವೇ ಇಲ್ಲ ಎಂದರು. ಅದಕ್ಕೆ ನಾನು, ಹಾಗಿಲ್ಲವಾದರೆ ನಿಮ್ಮ ಕಿರಗೂರಿನ ಗಯ್ಯಾಳಿಗಳು ಓದಿ ಸ್ತ್ರೀವಾದಿ ಚರ್ಚೆ ಕಟ್ಟಿಕೋತೇನೆ ಬಿಡಿ ಎಂದಿದ್ದೆ. ಕೃತಿಯನ್ನು ಅವರು ಅರ್ಪಿಸಿರುವುದೂ ಸಹ ತಮ್ಮ ಆತ್ಮಗೌರವಕ್ಕಾಗಿ ಅವಿರತವಾಗಿ ಹೋರಾಡುತ್ತಿರುವ ಮಹಿಳೆಯರಿಗೆ. ಅಲ್ಲಿ ಒಂದು ತತ್ವಶಾಸ್ತ್ರೀಯ ಮಂಡನೆ ಇಲ್ಲವೇ? ಅವರು ಒಪ್ಪಿಕೊಳ್ಳದಿರಬಹುದು. ಲಂಕೇಶ್‌ಗೆ ಕೇಳಿದ್ದಿದ್ರೆ ನನಗೂ ಸಿದ್ಧಾಂತಕ್ಕೂ ಸಂಬಂಧವಿಲ್ಲ ಎಂತಲೇ ಅವರೂ ಹೇಳುತ್ತಿದ್ದರೇನೋ??ಕನ್ನಡ ಸಾಹಿತ್ಯದಲ್ಲಿ ಮಹಿಳಾ ಲೇಖಕಿಯರ  ಸಾಹಿತ್ಯ ರಚನೆ ಇಂದು ಯಾವ ಘಟ್ಟವನ್ನು ತಲುಪಿದೆ ಎಂದು ನಿಮ್ಮ ಅನಿಸಿಕೆ?ಎಲ್ಲ ಬಗೆಯ ಶೋಷಿತ ಸಮುದಾಯಗಳ ಸಂಕಥನದಲ್ಲಿ ಗುರುತಿಸಬಹುದಾದ ಸಾಮಾನ್ಯ ಲಕ್ಷಣಗಳು ಇಲ್ಲೂ ಇವೆ. ಮೊದಲನೆಯದು ಆತ್ಮ ಮರುಕದ ಘಟ್ಟವಾದರೆ ಎರಡನೆಯದು ಸ್ವ-ಅರಿವಿನ ಘಟ್ಟ, ಮೂರನೆಯದು ಅಧಿಕೃತತೆಯನ್ನು ದಾಖಲಿಸುವ ಘಟ್ಟ. ಹೀಗೆ ಇಂದು ಲೇಖಕಿಯರು ತಮ್ಮ ಅನುಭವಕ್ಕೂ, ತಮ್ಮ ಬರವಣಿಗೆಗೂ, ಒಟ್ಟಾರೆ ತಮ್ಮ ಅಭಿವ್ಯಕ್ತಿಗೆ ಅಧಿಕೃತತೆಯನ್ನು ಪಡೆದುಕೊಳ್ಳುವ ಒಂದು ಘಟ್ಟದಲ್ಲಿದ್ದಾರೆ. ನಮ್ಮ ಎದುರಿಗಿರುವ ಸವಾಲೆಂದರೆ ಲೋಕದೃಷ್ಟಿಯಿಂದ ಪಡೆದುಕೊಳ್ಳಬೇಕಾದ ಬಿಡುಗಡೆಗಿಂತ ಸ್ವ-ಬಿಡುಗಡೆ ತುಂಬ ಮೂಲಭೂತವಾದದ್ದು ಅನ್ನಿಸುತ್ತೆ. ಇವತ್ತಿನ ಲೇಖಕಿಯರು ಅವರವರ ಬದುಕಿನ ಸಣ್ಣ ಪುಟ್ಟ ಸುಖ ಸಂತೋಷಗಳನ್ನು ತುಂಬ ಮುಖ್ಯವಾದದ್ದೆನ್ನುವ ಹಾಗೆ, ಅದೇ ಅವರ ಅನುಭವ ಲೋಕ ಎನ್ನುವ ಹಾಗೆ ಬರೆಯುತ್ತಿದ್ದಾರೆ. ಹಾಗೆ ಬರೆಯುವಾಗ ಅವರಿಗಿರುವ ಆತ್ಮವಿಶ್ವಾಸ ಒಂದು ಗುರುತರವಾದ ಬದಲಾವಣೆಯನ್ನು ತಂದುಕೊಡುತ್ತಿದೆ.

ಸಾಹಿತ್ಯ ರಚನೆ ಇಂದು ಯಾವ ಘಟ್ಟವನ್ನು ತಲುಪಿದೆ ಎಂದು ನಿಮ್ಮ ಅನಿಸಿಕೆ?
ಎಲ್ಲ ಬಗೆಯ ಶೋಷಿತ ಸಮುದಾಯಗಳ ಸಂಕಥನದಲ್ಲಿ ಗುರುತಿಸಬಹುದಾದ ಸಾಮಾನ್ಯ ಲಕ್ಷಣಗಳು ಇಲ್ಲೂ ಇವೆ. ಮೊದಲನೆಯದು ಆತ್ಮ ಮರುಕದ ಘಟ್ಟವಾದರೆ ಎರಡನೆಯದು ಸ್ವ-ಅರಿವಿನ ಘಟ್ಟ, ಮೂರನೆಯದು ಅಧಿಕೃತತೆಯನ್ನು ದಾಖಲಿಸುವ ಘಟ್ಟ. ಹೀಗೆ ಇಂದು ಲೇಖಕಿಯರು ತಮ್ಮ ಅನುಭವಕ್ಕೂ, ತಮ್ಮ ಬರವಣಿಗೆಗೂ, ಒಟ್ಟಾರೆ ತಮ್ಮ ಅಭಿವ್ಯಕ್ತಿಗೆ ಅಧಿಕೃತತೆಯನ್ನು ಪಡೆದುಕೊಳ್ಳುವ ಒಂದು ಘಟ್ಟದಲ್ಲಿದ್ದಾರೆ. ನಮ್ಮ ಎದುರಿಗಿರುವ ಸವಾಲೆಂದರೆ ಲೋಕದೃಷ್ಟಿಯಿಂದ ಪಡೆದುಕೊಳ್ಳಬೇಕಾದ ಬಿಡುಗಡೆಗಿಂತ ಸ್ವ-ಬಿಡುಗಡೆ ತುಂಬ ಮೂಲಭೂತವಾದದ್ದು ಅನ್ನಿಸುತ್ತೆ. ಇವತ್ತಿನ ಲೇಖಕಿಯರು ಅವರವರ ಬದುಕಿನ ಸಣ್ಣ ಪುಟ್ಟ ಸುಖ ಸಂತೋಷಗಳನ್ನು ತುಂಬ ಮುಖ್ಯವಾದದ್ದೆನ್ನುವ ಹಾಗೆ, ಅದೇ ಅವರ ಅನುಭವ ಲೋಕ ಎನ್ನುವ ಹಾಗೆ ಬರೆಯುತ್ತಿದ್ದಾರೆ. ಹಾಗೆ ಬರೆಯುವಾಗ ಅವರಿಗಿರುವ ಆತ್ಮವಿಶ್ವಾಸ ಒಂದು ಗುರುತರವಾದ ಬದಲಾವಣೆಯನ್ನು ತಂದುಕೊಡುತ್ತಿದೆ.

ಮಹಿಳೆಯರ ಸಾಹಿತ್ಯ ಸೃಷ್ಟಿಗೆ ಯಾವ ಪ್ರತಿಸ್ಪಂದನೆ ಸಿಗುತ್ತಿದೆ?

ಇಂದು ಮಹಿಳೆಯ ಸಾಹಿತ್ಯಕ್ಕೆ ಸಿಗ್ತಾ ಇರೋ ಸ್ಥಾನ ಬೇರೆ. ಮಹಿಳೆಯ ಸಾಹಿತ್ಯ ಮತ್ತು ಸಾಹಿತ್ಯದ ಸ್ವರೂಪ ಎರಡಕ್ಕೂ ಹತ್ತಿರದ ಸಂಬಂಧವಿದೆ. ಮಹಿಳೆಯ ಸಾಹಿತ್ಯವನ್ನು ಸಾಹಿತ್ಯ ಅಂತ ಮಾತ್ರ ನೋಡಬೇಕು ಎನ್ನುವುದು ನಮ್ಮ ಹಂಬಲ. ಸಾಹಿತ್ಯದಲ್ಲಿ ಒಳ್ಳೆ ಸಾಹಿತ್ಯ, ಕೆಟ್ಟ ಸಾಹಿತ್ಯ ಎಂದು ಮಾತ್ರ ಇರಬೇಕು ಎಂಬುದರ ಕಡೆಗೆ ನಮ್ಮ ಚಲನೆ ಇರಬೇಕು. ಅದು ತುಂಬ ದೂರದ ದಾರಿ ನಿಜ. ಆದರೆ ಸಮಾಧಾನದ ಸಂಗತಿ ಏನೆಂದರೆ ಮಹಿಳೆಯ ಸಾಹಿತ್ಯವನ್ನು ನೋಡುವ ದೃಷ್ಟಿಕೋನದಲ್ಲಿ ತುಂಬಾ ಖಚಿತ ಹಾಗೂ ಗುಣಾತ್ಮಕ ಬದಲಾವಣೆಗಳಾಗುತ್ತಿರುವುದು. ಇಂದು ಹಿಂದೆ ನಿರ್ಲಕ್ಷಿಸಲ್ಪಟ್ಟ ಲೇಖಕಿಯರನ್ನೂ ಮುಂದೆ ಇಟ್ಟುಕೊಂಡು ಚರ್ಚಿಸುತ್ತಿದ್ದೇವೆ ಎಂಬುದು ಮೊದಲನೆಯದು. ಎರಡನೆಯದಾಗಿ, ಲೇಖಕಿಯರನ್ನು ಬೇರೆ ಬೇರೆ ನೆಲೆಗಳಲ್ಲಿ, ಅಂದರೆ ಲೇಖಕಿ ಎನ್ನುವ ನಿರ್ದಿಷ್ಟತೆಯನ್ನು ಬಿಟ್ಟು ಚರ್ಚಿಸುವ ನೆಲೆಗಳನ್ನು ಕಟ್ಟಿಕೊಡುವುದರಲ್ಲಿ ಇವತ್ತಿನ ಕನ್ನಡ ವಿದ್ವತ್ ಲೋಕಕ್ಕೆ ಆಸಕ್ತಿ ಇದೆ. ತುಂಬಾ ಮೂಲಭೂತ ಸವಾಲುಗಳು ಇನ್ನೂ ಹಾಗೇ ಉಳಿದುಕೊಂಡಿವೆ ಎಂಬುದೇನೋ ನಿಜ.


ಇತ್ತೀಚೆಗೆ ನಾನು ಕಟ್ಟಲು ಯತ್ನಿಸುತ್ತಿರುವ ಪ್ರಮೇಯ ಏನು ಎಂದರೆ ಕನ್ನಡ ವಿಮರ್ಶೆಯಲ್ಲಿ ಯಾವಾಗಲೂ ಸ್ತ್ರೀ ದೃಷ್ಟಿಕೋನವಿದೆ, ಆದರೆ ಸ್ತ್ರೀ ಸಂವೇದನೆ ಇಲ್ಲ ಎಂಬುದು. ನಮ್ಮ ಎಷ್ಟೋ ಮಹತ್ವದ ಲೇಖಕಿಯರನ್ನು ಅವರ ನಿಜವಾದ ನೆಲೆ ಮತ್ತು ಬೆಲೆಯಲ್ಲಿ ಗುರುತಿಸಲು ಏಕೆ ಸಾಧ್ಯವಾಗಲಿಲ್ಲ ಎಂದರೆ ದೃಷ್ಟಿಕೋನ ಸಾಧ್ಯವಾಗಿ ಸಂವೇದನೆ ಸಾಧ್ಯವಾಗದಿರುವುದರಿಂದಾಗಿ.



ಕನ್ನಡ ಸಾಹಿತ್ಯದ ಪುನರ್‌ಮೌಲ್ಯೀಕರಣ ಮಾಡುತ್ತಿರುವ ಈ ದಿನಗಳಲ್ಲಿ ಲೇಖಕಿಯರಿಗೆ ಬಹುಶಃ ಇಲ್ಲಿಯವರೆಗೆ ಸಿಗದೇ ಹೋದ ಸ್ಥಾನ ಇನ್ನು ಸಿಗುತ್ತೆ ಅಂತ ನನಗನ್ನಿಸುತ್ತಿದೆ.

ಇಂದು ಮಹಿಳೆಯರ ದೃಷ್ಟಿಕೋನದಲ್ಲಿ ಯಾವ ರೀತಿಯ ಬದಲಾವಣೆ ಕಂಡು ಬರುತ್ತಿದೆ? ಅದು ಕೇವಲ ವ್ಯಕ್ತಿನಿಷ್ಠವಾಗಿದೆಯೇ?


ಸಾಹಿತ್ಯ ಸೃಷ್ಟಿಗೆ ತೊಡಗಿಕೊಂಡಿರುವವರಲ್ಲಿ ಹಲವರು ಸಮಷ್ಟಿ ನೆಲೆಯಲ್ಲೂ ಬರೆಯುತ್ತಿದ್ದಾರೆ. ಅದಕ್ಕೇ ನಾನು ಹೇಳಿದ್ದು. ಇಂದು ಬರೆಹ ಸ್ತ್ರೀ ಕೇಂದ್ರಿತಕ್ಕಿಂತ ಬದುಕಿನ ಕೇಂದ್ರಿತ ಸಾಹಿತ್ಯವಾಗಿದೆ. ಇದೇ ಒಂದು ಬದಲಾವಣೆ. ಆತ್ಮ ಮರುಕ ಮತ್ತು ಸ್ವ-ಗ್ರಹಿಕೆಯಿಂದ ಹೊರಟು ಅಧಿಕೃತತೆಯೆಡೆ ಬಂದಿರುವುದೇ ಒಂದು ಬದಲಾವಣೆ. ಇಂದು ತುಂಬ ದೊಡ್ಡದಾಗಿರುವುದು ಯಾವುದೆಂದರೆ ಬದುಕು. ತಾನುಂಟೋ ಮೂರು ಲೋಕವುಂಟೋ ಎಂದು ನೋಡುತ್ತಿದ್ದವರಿಗೆ ಇಂದು ಕಣ್ಣು ಹೊರಳಿಸಿ ಹೊರಳಿಸಿ ನೋಡಲಿಕ್ಕಾಗುತ್ತಿದೆ. ಹಾಗೆ ನೋಡಲಿಕ್ಕೆ ಬೇಕಾಗಿರುವ ಆತ್ಮಸಮ್ಮಾನ ಇಂದು ಸಾಧ್ಯವಾಗಿದೆ. ಕಟ್ಟಿಕೊಳ್ಳುತ್ತಿರುವ ಬದುಕಿನ ಬಗ್ಗೆ ಯಾವ ಕೀಳರಿಮೆಯೂ ಇಲ್ಲದ ವಿಶ್ವಾಸ ಇಂದು ಸಾಧ್ಯವಾಗಿದೆ. ಹೀಗಾಗಿ ಇಂದು ಹೆಣ್ಣು ಕಂಡುಕೊಳ್ಳುತ್ತಿರುವುದು ಹೊರಗಿನದ್ದೂ ಹೌದು ಒಳಗಿನದ್ದೂ ಹೌದು. ಆದರೆ ಕೆಲವೊಮ್ಮೆ ಬಿಡುಗಡೆಯ ದಾರಿಗಳಾಗಿ ಕಂಡಿರುವುದು ಎಷ್ಟೋ ಸಲ ಬಿಡುಗಡೆಯ ದಾರಿಗಳಾಗಿರುವುದಿಲ್ಲ. ಅವು ನಮ್ಮನ್ನು ಇನ್ನೂ ಹೆಚ್ಚೆಚ್ಚು ಆಳವಾಗಿ ಹುಗಿಯುವ (ಪುರುಷ ಪ್ರಧಾನತೆಯೊಳಗೆ) ಹುನ್ನಾರಗಳಾಗಿರುತ್ತವೆ. ಆದರೆ ಸಮಾಧಾನದ ಸಂಗತಿ ಎಂದರೆ ಇಂದು ಪುರುಷ ಪ್ರಾಧಾನ್ಯತೆಯ ಈ ಛದ್ಮವೇಷವು ಅರ್ಥವಾಗುತ್ತಿದೆ. ಒಂದು ಕಾಲದಲ್ಲಿ ಅದು ಅರಿವಿಗೇ ಬರುತ್ತಿಲ್ಲ.



ನಮ್ಮ ಸಮಾಜದಲ್ಲಿ ಸ್ತ್ರೀವಾದ ಇಂದು ಯಾವ ಹಂತದಲ್ಲಿದೆ? ಸ್ತ್ರೀವಾದಕ್ಕೆ ನಿಮ್ಮ ವ್ಯಾಖ್ಯಾನವೇನು?

ಸ್ತ್ರೀವಾದ ಎನ್ನುವುದು ಒಂದು ಬದುಕಿನ ಕ್ರಮ ಅಷ್ಟೆ. ಸಮಾನತೆ, ಸ್ವಾತಂತ್ರ್ಯ ಯಾವುದೂ ಇಲ್ಲದ, ಬದಲಿಗೆ ಪರಸ್ಪರ ಸ್ವಾಯತ್ತತೆಯಿಂದ ಒಪ್ಪಿ ಗೌರವಿಸುವ ಒಂದು ಜೀವನ ವಿಧಾನ ಎನ್ನುವುದು ನನ್ನ ಗ್ರಹಿಕೆ. ಆದರೆ ಸ್ತ್ರೀವಾದ ಎನ್ನುವುದು ಮಹಿಳೆಯರಿಗೇ ಸಂಬಂಧಿಸಿದ್ದಲ್ಲ. ಆ ಬದುಕಿನ ಕ್ರಮವನ್ನು ಗಂಡು ಮತ್ತು ಹೆಣ್ಣು ಇಬ್ಬರೂ ಬಹಳ ಶ್ರಮ ಹಾಗೂ ಪ್ರೀತಿಯಲ್ಲಿ ಮಾತ್ರ ಕಟ್ಟಿಕೊಳ್ಳಲು ಆಗುತ್ತೆ.


ಸ್ತ್ರೀವಾದದಲ್ಲಿ ಖಂಡಿತವಾಗಿಯೂ ಒಂದು ಬೆಳವಣಿಗೆ ಇದೆ. ಸ್ತ್ರೀವಾದಿ ಚಳವಳಿಯನ್ನು ಪ್ರತ್ಯೇಕವಾಗಿ ನೋಡಬೇಕಿಲ್ಲ ಎನ್ನುವುದೇ ನನಗನ್ನಿಸಿದ್ದು. ಒಂದು ಕಾಲದಲ್ಲಿ ಸ್ತ್ರೀವಾದ ಭಾರತಕ್ಕೆ ಪ್ರವೇಶ ಮಾಡಿದಾಗ ಅದು ಎಲ್ಲಾ ಸೌಲಭ್ಯ ಪಡೆದ ವರ್ಗದ ಪ್ರಯತ್ನವಾಗಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಇಂದು ಬೇರೆ ಬೇರೆ ಸ್ತರಗಳಲ್ಲಿರುವವರಿಗೂ ಅದು ತಲುಪಿದೆ. ವಿದ್ಯಾವಂತರು, ಅವಿದ್ಯಾವಂತರು, ಗಾರ್ಮೆಂಟ್ ಕಾರ್ಮಿಕರು- ಹೀಗೆ ಎಲ್ಲರಲ್ಲಿ ಒಂದು ಜಾಗೃತಿ ಕಾಣಿಸುತ್ತಿದೆ. ಅದೇ ಹೊತ್ತಿಗೆ ಈ ಜಾಗೃತಿ ಅಥವಾ ಅರಿವು ಎನ್ನುವುದು ಆಧುನಿಕ ಹೆಣ್ಣಿನ ಹಿಂಸೆಯನ್ನು ಹಿಂದೆಂದೂ ಇರದಷ್ಟು ಹೆಚ್ಚಿಸಿದೆ ಎನ್ನುವುದೂ ಅಷ್ಟೇ ವಾಸ್ತವ. ಅರಿವಿನ ಹಿಂಸೆಯ ಘಟ್ಟವನ್ನು ದಾಟುವುದು ಯಾವ ಶೋಷಿತ ವರ್ಗಕ್ಕೂ ತುಂಬ ನಿರ್ಣಾಯಕವಾದ ಘಟ್ಟ. ಬಹಳ ಕಷ್ಟದ ಕಾಲ ಅದು. ಆದರೆ ಹೆಣ್ಣಿನದು ಅಸಾಧಾರಣವಾದ ಆತ್ಮ ಸ್ಥೈರ್ಯದ ವ್ಯಕ್ತಿತ್ವವಾದ್ದರಿಂದ ಈ ಹಿಂಸೆಗೂ ಆಕೆ ತನ್ನನ್ನು ತಾನು ಒಡ್ಡಿಕೊಂಡಿದ್ದಾಳೆ.

ಪುರುಷ ಲೇಖಕರಲ್ಲಿ ಸ್ತ್ರೀ ಸಂವೇದನೆ ಎಷ್ಟರ ಮಟ್ಟಕ್ಕೆ ವ್ಯಕ್ತಗೊಂಡಿದೆ?

ಹೆಣ್ಣನ್ನು ತನ್ನ ನಿಜದಲ್ಲಿ ಗುರುತಿಸಲು ಪ್ರಯತ್ನಿಸಿದವರಲ್ಲಿ ಮೊದಲಿಗನಾಗಿ ನನಗೆ ಕಾಣುವುದು ಅಲ್ಲಮ. ದಾಸಿಮಯ್ಯ ಕೂಡಾ ಅದೇ ಪ್ರಯತ್ನ ನಡೆಸಿದವನು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾರಂತರಿದ್ದಾರೆ. ಅದೆಷ್ಟೇ ಬೌದ್ಧಿಕ ನೆಲೆಯದ್ದಾಗಿರಬಹುದಾದರೂ ಕಾರಂತರು ತುಂಬಾ ಪ್ರ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಕುವೆಂಪು ಅವರಲ್ಲಿ ಕೆಲವೊಮ್ಮೆ ಅಪ್ರಯತ್ನಪೂರ್ವಕವಾಗಿ ಸ್ತ್ರೀ ಸಂವೇದನೆ ಕಾಣಿಸುತ್ತದೆ. ಸ್ತ್ರೀ ಸಂವೇದನೆಯನ್ನು ತುಂಬಾ ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ ಲೇಖಕ ಎಂದರೆ ಲಂಕೇಶ್ ಅನ್ನಿಸುತ್ತೆ.

ಮಹಿಳಾ ಸಂವೇದನೆ ಎಲ್ಲಿ ಕೊರತೆ ಅನುಭವಿಸುತ್ತಿದೆ?

ನೀವು ಈ ಥರದ ಪ್ರಶ್ನೆಗಳನ್ನು ಬೇರೆಯವರಿಗೂ ಕೇಳಬೇಕು. ಇದಿಷ್ಟೂ ಪ್ರಶ್ನೆಗಳನ್ನು ರಹಮತ್‌ರವರಿಗೂ ಕೇಳಬೇಕೆಂದು ಬಯಸುತ್ತೇನೆ. ನನಗೆ ರಹಮತ್‌ರೊಂದಿಗೂ ಸಮಸ್ಯೆ ಇದೆ. ಅವರು ಅಷ್ಟು ಪ್ರಾಮಾಣಿಕವಾಗಿದ್ದೂ, ಸ್ತ್ರೀಯರ ಬಗ್ಗೆ ಆಳವಾದ ಗೌರವ ವಿಶ್ವಾಸ ಎಲ್ಲಾ ಇದ್ದರೂ ಯಾಕೆ ಅವರು ಕನ್ನಡದ ಯಾವೊಬ್ಬ ಮಹತ್ವದ ಲೇಖಕಿಯ ಬಗ್ಗೆ ಬರೆದಿಲ್ಲ. ಬರೆದೇ ಇಲ್ಲವೆಂದಲ್ಲ. ಆದರೆ ಬೇರೆ ವಿಷಯಗಳ ಬಗ್ಗೆ ಅಷ್ಟಷ್ಟು ಬರೆದವರು ಈ ಬಗ್ಗೆ ಎಷ್ಟು ಬರೆಯಲು ಸಾಧ್ಯವಾಗಿದೆ ಎನ್ನುವುದು ನನ್ನ ತಕರಾರು. ಇದೇ ಪ್ರಶ್ನೆಯನ್ನು ನಾನು ಬಸವಣ್ಣನವರ ಬಗ್ಗೆಯೂ ಎತ್ತಿದಾಗ ಇವಳನ್ನು ಕೆಲಸದಿಂದ ತೆಗೀರಿ ಎಂದು ಹೇಳಿದರು. ಯಾಕೆಂದರೆ ದಲಿತರ ಸಣ್ಣಸಣ್ಣ ನೋವುಗಳನ್ನೂ ಅಷ್ಟು ಸೂಕ್ಷ್ಮವಾಗಿ ಆವಾಹಿಸಿಕೊಳ್ಳಲು ಬಸವಣ್ಣ ಪ್ರಯತ್ನಿಸುತ್ತಾರೆ. ಚೆನ್ನಯ್ಯನ ಮನೆಯ ದಾಸಿಯ ಮಗ ಎಂದಾಗ ಅವರು ತಮ್ಮನ್ನು ತಾವು ದಲಿತರೊಂದಿಗೆ ಸಮೀಕರಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ, ಹೆಣ್ಣನ್ನು ನೂರು ಸಲ ನಾಯಿ ಎಂದು ಕರೆಯುತ್ತಾರೆ. ನಮ್ಮ ವಿಮರ್ಶೆಯಲ್ಲೂ ಅಷ್ಟೆ. ಸಂಸ್ಕಾರಕ್ಕೆ ಸಿಗಬೇಕಾದ ಸ್ಥಾನಮಾನ ’ಫಣಿಯಮ್ಮ’ಗೆ ಸಿಗಲಿಲ್ಲ? ಫಣಿಯಮನನ್ನು ಹೇಗೆ ಚರ್ಚೆ ಮಾಡಬೇಕಿತ್ತೋ ಹಾಗೆ ಮಾಡಿದ್ದರೆ ಇಂದು ಫಣಿಯಮ್ಮದ ಸ್ಥಾನ ಎಲ್ಲಿರುತ್ತಿತ್ತು? ಹೆಚ್ಚೂ ಕಡಿಮೆ ಸಂಸ್ಕಾರ ಎತ್ತಿದಷ್ಟೇ ಮೂಲಭೂತ ಪ್ರಶ್ನೆಗಳನ್ನು ಹೆಣ್ಣಿನ ವಿಷಯದಲ್ಲಿ ಫಣಿಯಮ್ಮ ಎತ್ತಿರಲಿಲ್ಲವೇ?.


ನಾನು ಎಷ್ಟೋ ವಿಚಾರ ಸಂಕಿರಣಗಳನ್ನು ಈ ಕಾರಣಕ್ಕೆ ತಿರಸ್ಕರಿಸಿದ್ದೀನಿ. ಏಕೆಂದರೆ ನಮಗೆ ಅದೇ ವಿಷಯ ಮೀಸಲಿಟ್ಟಿರುತ್ತಾರೆ. ಈಗ ಪಂಪನ ಬಗ್ಗೆ ವಿಚಾರ ಸಂಕಿರಣದಲ್ಲಿ ಸ್ತ್ರೀವಾದಿ ದೃಷ್ಟಿಕೋನದಲ್ಲಿ ಪಂಪ ಎಂದು ಒಂದು ವಿಷಯ ಮಂಡನೆ ಇರಬೇಕಪ್ಪ. ಇಲ್ಲ ಅಂದರೆ ಯಾಕೆ ರಂಪ ಎಂದು ಸುಮಿತ್ರಾಬಾಯಿನೋ, ಆಶಾದೇವಿನೋ, ಗಾಯತ್ರಿನೋ ಯಾರನ್ನೋ ಒಬ್ಬರನ್ನು ಕರೆಯೋದು. ಈ ವಿಷಯದ ಬಗ್ಗೆ ಪುರುಷರೂ ಮಾತನಾಡುವಂತಾಗಬೇಕು ಎಂದು ನನ್ನ ಒತ್ತಾಯ.

ಆಧುನಿಕ ತಂತ್ರಜ್ಞಾನದ ಜಗತ್ತು ತಂದಿರುವ ಬದಲಾವಣೆ ಯಾವ ಬಗೆಯದ್ದು ಎಂದು ನಿಮ್ಮ ಭಾವನೆ?

ಇಂದು ಕಾರ್ಪೊರೇಟ್ ಪ್ರಪಂಚ ಹೆಣ್ಣಿಗೆ ಎಲ್ಲದನ್ನೂ ಕೊಟ್ಟುಬಿಟ್ಟಿರುವಂತೆ ಕಾಣಿಸುತ್ತದೆ. ಆದರೆ ಇದು ಲಿಂಗ ರಾಜಕೀಯಕ್ಕಿಂತ ಹೆಚ್ಚಿನ ಕ್ರೌರ್ಯವನ್ನು ಹೆಣ್ಣುಮಕ್ಕಳ ವಿಷಯದಲ್ಲಿ ಈ ಕಾರ್ಪೊರೇಟ್ ಲೋಕ ತೋರಿಸುತ್ತಿರುವುದನ್ನು ಕಾಣುತ್ತೇವೆ. ಅಲ್ಲಿ ಒಂದು ಡಿಜೆಂಡರೈಜೇಷನ್ (ಲಿಂಗಸೂಕ್ಷ್ಮರಾಹಿತ್ಯತೆ) ಕಾಣಿಸುತ್ತಿದೆ. ಗಂಡು ಹೆಣ್ಣು ಯಾವುದೂ ಅಲ್ಲ. ಕೆಲಸ ಮಾಡಿದರೆ ಉಳಿದುಕೊಳ್ತಾರೆ ಇಲ್ಲವೇ ತೆಗೆದು ಹಾಕೋದಷ್ಟೇ. ಇದು ಅಲ್ಲಿನ ಮೂಲಭೂತ ಪರಿಕಲ್ಪನೆ. ತನ್ನ ತಾಯ್ತನದ ಮೂಲಭೂತ ಪ್ರಶ್ನೆಯನ್ನು ಇಟ್ಟುಕೊಂಡು ಆಕೆ ಕೆಲಸದಲ್ಲಿ ಗಂಡಿನ ಜೊತೆ ತನ್ನ ಸಮಾನ ಸ್ಪರ್ಧೆ ನಡೆಸಬೇಕಾಗಿದೆ. ಕೆಲಸ ಹಾಗೂ ತಾಯ್ತನಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಂಡರೂ ಅದು ತುಂಬ ನೋವಿನ ಅಯ್ಕೆಯಾಗಿರುತ್ತದೆ. ಯಾವುದನ್ನು ಆರಿಸಿಕೊಂಡರೂ ಅದರಲ್ಲಿ ಅವಳಿಗೆ ಸಂತೋಷ ಸಿಗುತ್ತಾದರೂ ಇನ್ನೊಂದು ಕಳೆದುಕೊಂಡ ದುಃಖ ಇರುತ್ತದೆ. ಇದನ್ನು ಒಂದು ಮಾನವೀಯ ಹಿನ್ನೆಲೆಯಲ್ಲಿ ಈ ಕಾರ್ಪೊರೇಟ್ ವ್ಯವಸ್ಥೆ ನೋಡೋದೇ ಇಲ್ಲ. ತನ್ನ ಆತ್ಮಸ್ಥೈರ್ಯ ಉಳಿಸಿಕೊಂಡು, ತನ್ನ ಅನನ್ಯತೆಯನ್ನು ಉಳಿಸಿಕೊಂಡು, ತನ್ನ ಸುಖದ ಮೂಲಗಳನ್ನುಳಿಸಿಕೊಂಡು ಹೋಗೋದು ಆಕೆಯ ಪಾಲಿಗೆ ದೊಡ್ಡ ಸವಾಲಾಗಿದೆ. ಇದರಿಂದ ಆಧುನಿಕತೆಯಲ್ಲಿ ಯಾವುದು ಬಿಡುಗಡೆ ಎಂದು ಹೇಳುವುದು ಕಷ್ಟದ್ದು. ಹೀಗಿರುವಾಗ ತಾಯ್ತನದ ಸುಖ ಏನೂ ಅಲ್ಲ, ಅದನ್ನು ಬಿಟ್ಟುಕೊಟ್ಟು ಬಿಡ್ತೀನಿ ಎಂದುಕೊಳ್ಳುವುದು ಆಕೆಗೆ ಸಾಧ್ಯವಾಗ್ತಾನೇ ಇಲ್ವಲ್ಲ. ಅದು ಸಾಧ್ಯವಾಗಿಬಿಟ್ಟರೆ ಎಲ್ಲ ಸರಿಹೋಗಿಬಿಡುತ್ತೆ ಎಂದಲ್ಲ. ಆದರೆ, ಅವಕಾಶ ಸಿಕ್ಕರೆ ಅದು ಎಲ್ಲರಿಗೂ ಬೇಕು; ಜಗತ್ತಿನ ಅಪೂರ್ವ ಸುಖ ಅದು ಎಂದು ಕಾಣುತ್ತೆ. ಅದು ಒಂದು ರೀತಿ ನಿಜವೂ ಹೌದು. ಮುಖ್ಯವಾಗಿ ಇಲ್ಲಿ ಆಕೆಯ ಎದುರಿಗಿರುವ ಸವಾಲೆಂದರೆ ಯಾವಾಗಲೂ ಕೆಲಸ ಮಾಡುವ ಮಹಿಳೆ ತನ್ನ ಮೇಲೆ ತಾನೇ ಒಂದು ಕೀಳರಿಮೆಯನ್ನು ಹೇರಿಕೊಳ್ತಾಳೆ. ತಾನೆಲ್ಲೋ ಇದನ್ನು ಸರಿಯಾಗಿ ನಿಭಾಯಿಸಲಿಲ್ಲವೇನೋ, ಅದನ್ನು ಸರಿಯಾಗಿ ನಿಭಾಯಿಸಲಿಲ್ವೇನೋ, ಎಂದು. ಯಾಕೆಂದರೆ ಈಗಾಗಲೇ ಸ್ಥಾಪಿತ ಪರಿಕಲ್ಪನೆಗಳು ನಮ್ಮ ಮನಸ್ಥಿತಿಯನ್ನು ಹಾಗೆ ರೂಪಿಸಿರುತ್ತವೆ. ಮಹಿಳೆ ಎಲ್ಲವನ್ನೂ ಸರಿಯಾಗಿ ತೂಗಿಸೋದಕ್ಕೆ ನೋಡುತ್ತಾಳೆ. ಆಕೆಗೆ ಧಾರಣ ಶಕ್ತಿ ಅಸಾಧಾರಣವಾಗಿರತ್ತೆ ಎನ್ನುವುದು ಬೇರೆ ವಿಷಯ. ಆದರೆ ಆ ಧಾರಣ ಶಕ್ತಿಗೆ ಸರಿಯಾದ ಬೆಂಬಲ ರಚನೆಯಿಲ್ಲದೇ ಹೋದಾಗ ಒಂದು ಸಮಯದಲ್ಲಿ ಆಕೆ ಕುಸಿದು ಹೋಗುತ್ತಾಳೆ.

ಇಂದು ಭ್ರಷ್ಟಾಚಾರದ ವಿಷಯ ಚರ್ಚೆಗೊಳಗಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?

ಇಂದು ಅತ್ಯಂತ ಭ್ರಷ್ಟ ಎಂದು ಹೇಳಲು ಒಂದು ವ್ಯಾಖ್ಯಾನ ಇದೆಯಾ? ಇಂದು ಭ್ರಷ್ಟಾಚಾರವನ್ನು ಒಂದು ವ್ಯವಸ್ಥೆಯಾಗಿ ಒಪ್ಪಿಕೊಂಡುಬಿಟ್ಟಿರುವ ದುರಂತ ನಮ್ಮೆದುರಿಗಿದೆ. ಅಣ್ಣಾ ಹಜಾರೆಯಂತವರು ಆರಂಭಿಸಿರುವ ಚಳವಳಿ ಒಂದು ಆಶಾಕಿರಣವಾಗಿ ಕಾಣುತ್ತಿರುವುದು ನಿಜ. ಎಲ್ಲೋ ಜೆಪಿ ಶುರು ಮಾಡಿದ ತರದ ಚಳವಳಿ ಭವಿಷ್ಯದಲ್ಲಿ ಇದೆ ಎಂದೇ ನನ್ನ ಅನಿಸಿಕೆ. ನಾವು ಆಶಾವಾದಿಯಾಗಿರಲು ಎಲ್ಲೋ ಸಣ್ಣ ಅವಕಾಶವಿದೆ.


ಜಾತಿ ಸಮಾವೇಶಗಳು ಜರುಗುತ್ತಿವೆ. ಒಂದು ಜಾತಿ ಮಠಾಧೀಶರು ನೇರವಾಗಿ ಸರ್ಕಾರದ ರಕ್ಷಣೆಯಲ್ಲಿ ತೊಡಗಿದ್ದಾರಲ್ಲಾ?



ಇಂದು ಜಾತಿ ಎನ್ನುವುದು ಆಧುನಿಕತೆಯ ಒಂದು ಶಾಪವೇ ಅಲ್ಲವೇ? ಆಧುನಿಕತೆಯ ಹಲವು ಶಾಪಗಳಲ್ಲಿ ಜಾತಿಯನ್ನು ವ್ಯವಸ್ಥೆಯ ಭದ್ರ ಭಾಗವಾಗಿಸಿದ್ದೂ ಒಂದು. ಹೇಗೆ ಕೋಮುವಾದ ಸಹ ಆಧುನಿಕತೆ ಮತ್ತು ವಿಜ್ಞಾನದ ನೆರವಿನಿಂದ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆಯೋ ಹಾಗೆ ಜಾತಿ ವಿಷಯದಲ್ಲೂ ಸಹ ಅದರ ಉಪ ಉತ್ಪನ್ನವಾಗಿದೆ. ನಾವು ಮತ್ತೆ ಮತ್ತೆ ಜಾತಿ ವಿಷಯಕ್ಕೆ ಬರುತ್ತೇವೆಂದರೆ ಭಾರತದ ಮಟ್ಟಿಗೆ ಅದು ತೇಜಸ್ವಿ ಹೇಳುವ ರೀತಿ ಚರ್ಮವೇ ಆಗಿದೆ. ಅದು ಅಷ್ಟು ಸುಲಭವಾಗಿ ಹೋಗುವಂತಾದ್ದಲ್ಲ.

ಯಾವುದೇ ಒಂದು ಸಾಮಾಜಿಕ ಚಳವಳಿಯ ಅನುಪಸ್ಥಿತಿ ಸಾಹಿತ್ಯದ ಮೇಲೆ ಬೀರಿರುವ ಪರಿಣಾಮ ಎಂಥದು?


ಇಂದು ಒಂದು ಮೂರ್ತವಾದ ಚಳವಳಿ ಇಲ್ಲ. ಎಲ್ಲ ಚಳವಳಿಗಳನ್ನು ರೂಪಿಸುವುದು ಒಂದು ತಾತ್ವಿಕ ಆಕೃತಿಯೇ ಅಲ್ಲವೇ? ಆದರೆ ಇಂದು ನಾವಿರುವ ಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲೇ ಯಾವುದೇ ಒಂದು ನಿರ್ದಿಷ್ಟ ತಾತ್ವಿಕ ಆಕೃತಿ ಮೆಲಿನ ನಂಬಿಕೆ ಎನ್ನುವುದು ಹೊರಟುಹೋಗಿದೆ. ಎಲ್ಲ ತಾತ್ವಿಕ ಆಕೃತಿಗಳು ಒಡೆದು ಹೋಗಿರುವ ಅಥವಾ ಎಲ್ಲವೂ ಸೇರಿ ಬೆರೆಯುತ್ತಿರುವ ಸನ್ನಿವೇಶ ಇದು. ಹೀಗೆ ಎಲ್ಲ ತಾತ್ವಿಕ ಆಕೃತಿಗಳು ಬೆರೆತು ಅಖಂಡವಾದ ಮಾನವೀಯ ನೆಲೆಯನ್ನು ಕಟ್ಟಿಕೊಳ್ಳಲು ಪ್ರಯತ್ನ ಪಡುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗಾಗಿ ಒಂದು ಚಳವಳಿ ಎನ್ನುವುದು ಸ್ಪಷ್ಟ ರೂಪದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಚಳವಳಿಗಳು ಇಲ್ಲದ ಕಾಲ ಒಂದು ಬರವಣಿಗೆಯಲ್ಲಿ ಯಾವತ್ತಾದರೂ ಇರುತ್ತೆ ಎಂದು ನನಗೆ ತೋರಿಬಂದಿಲ್ಲ. ಉದಾಹರಣೆಗೆ ತೇಜಸ್ವಿಯವರು ಒಮ್ಮೆ ಮಾತನಾಡುತ್ತಾ ಈ ಸಿದ್ಧಾಂತಗಳಿಗೆಲ್ಲಾ ನನಗೆ ಪ್ರವೇಶವೇ ಇಲ್ಲ ಎಂದರು. ಅದಕ್ಕೆ ನಾನು, ಹಾಗಿಲ್ಲವಾದರೆ ನಿಮ್ಮ ಕಿರಗೂರಿನ ಗಯ್ಯಾಳಿಗಳು ಓದಿ ಸ್ತ್ರೀವಾದಿ ಚರ್ಚೆ ಕಟ್ಟಿಕೋತೇನೆ ಬಿಡಿ ಎಂದಿದ್ದೆ. ಕೃತಿಯನ್ನು ಅವರು ಅರ್ಪಿಸಿರುವುದೂ ಸಹ ತಮ್ಮ ಆತ್ಮಗೌರವಕ್ಕಾಗಿ ಅವಿರತವಾಗಿ ಹೋರಾಡುತ್ತಿರುವ ಮಹಿಳೆಯರಿಗೆ. ಅಲ್ಲಿ ಒಂದು ತತ್ವಶಾಸ್ತ್ರೀಯ ಮಂಡನೆ ಇಲ್ಲವೇ? ಅವರು ಒಪ್ಪಿಕೊಳ್ಳದಿರಬಹುದು. ಲಂಕೇಶ್‌ಗೆ ಕೇಳಿದ್ದಿದ್ರೆ ನನಗೂ ಸಿದ್ಧಾಂತಕ್ಕೂ ಸಂಬಂಧವಿಲ್ಲ ಎಂತಲೇ ಅವರೂ ಹೇಳುತ್ತಿದ್ದರೇನೋ?




















Saturday, 12 May 2012

ನೇಗಿಲ ಯೋಗಿಗೆ ’ಕೃಷಿ ವಿಜ್ಞಾನಿ’ ಸನ್ಮಾನ


ಲೇಖಕಿ:-ಅನಿತಾ ಸಿ ಪಿ
ಕೃಪೆ:-ದ ಸಂಡೇ ಇಂಡಿಯನ್

ರಾಯಚೂರು ಎಂದಾಕ್ಷಣ ಕಣ್ಣಿಗೆ ಕಟ್ಟುವುದು ಬಿಸಿಲ ಝಳ. ಒಣಒಣ ಭೂಮಿ, ಕಣ್ಣು ಹಾಯಿಸಿದಲ್ಲೆಲ್ಲಾ ಬಯಲು. ಆದರೆ ಇದಕ್ಕೆ ತದ್ವಿರುದ್ಧವಾಗಿ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಟ್ಟ್ಟೂರು ಗ್ರಾಮದ ರೈತ ಮಲ್ಲೇಶಗೌಡ ಅಮರೇಗೌಡ ಪಾಟೀಲ್ ಅವರ ತೋಟಕ್ಕೊಮ್ಮೆ ನೀವು ಕಾಲಿಟ್ಟರೆ ದೊಡ್ಡ ಅಚ್ಚರಿಯೇ ನಿಮ್ಮನ್ನ ಎದುರುಗೊಳ್ಳುತ್ತದೆ! ಮಲೆನಾಡ ತಂಪು, ಕೊಟ್ಟಿಗೆಯಲ್ಲಿ ಸೊಂಪಾಗಿ ಹಸಿರುಂಡು ಬೆಳೆದ ಜಾನುವಾರುಗಳು ನಿಮ್ಮನ್ನು ಎದುರುಗೊಳ್ಳುತ್ತವೆ. 


ಹೌದು. ಆ ಬಯಲು ಸೀಮೆಯಲ್ಲಿ ಇಂಥಹ ಹಸಿರಿನ ಸಮೃದ್ಧತೆಯನ್ನು ಕಾಯ್ದುಕೊಂಡು ಪೋಷಿಸಿರುವ ಇವರ ಕೃಷಿ ವೈಖರಿಗೆ ಮಾರು ಹೋಗದವರಿಲ್ಲ. ಒಟ್ಟು ೪೩ ಎಕರೆ ಜಮೀನು ಹೊಂದಿರುವ ಮಲ್ಲೇಶ್‌ಗೌಡ ಪಾಟೀಲರು ಕೃಷಿ, ತೋಟಗಾರಿಕೆ, ಮೀನು ಸಾಕಾಣಿಕೆ, ಹೈನುಗಾರಿಕೆ, ರೇಷ್ಮೆ, ಮೇವಿನಬೆಳೆ, ಅರಣ್ಯ ಬೆಳೆ, ಎರೆಗೊಬ್ಬರ ಉತ್ಪಾದನೆ ಸೇರಿದಂತೆ ಹಲವು ರೀತಿಯ ಬೆಳೆ ತೆಗೆಯುತ್ತಿದ್ದಾರೆ. 

ಒಟ್ಟು ೨೫ ಎಕರೆ ಪ್ರದೇಶದಲ್ಲಿ ನೀರಾವರಿ ಮಾಡುತ್ತಿದ್ದು, ೧೩ ಎಕರೆಯಲ್ಲಿ ಸಮೃದ್ಧ ರೇಷ್ಮೆ ಬೆಳೆ ತೆಗೆಯುತ್ತಿದ್ದಾರೆ. ಒಂದೂವರೆ ಎಕರೆಯಲ್ಲಿ ನಿಂಬು, ಸಪೋಟ ಹಾಕಿದ್ದಾರೆ. ಎರಡೂವರೆ ಎಕರೆಯಲ್ಲಿ ಪೇರಲೆಕಾಯಿ ಹಾಗೂ ನುಗ್ಗೆಕಾಯಿ ಮಿಶ್ರ ಬೆಳೆ ಮಾಡುತ್ತಿದ್ದಾರೆ. ಇನ್ನು ೭೦ ತೆಂಗಿನ ಮರಗಳೂ ಇವೆ. ಇನ್ನು ೪ ಎಕರೆ ಜಮೀನಿನಲ್ಲಿ ಕೋಯ್ಮತ್ತೂರು-೩, ಡಿ ಹೆಚ್‌ಆರ್ ನೇಪಿಯರ್, ಪ್ಯಾರಾ ಹುಲ್ಲು, ಗ್ಲಿರಿಸೀಡಿಯಾ ಹಾಗೂ ಆತಿ ಗ್ರಾಸ್, ಮೆಕ್ಕೆ ಜೋಳ ಇತ್ಯಾದಿ ಹುಲ್ಲು ಜಾತಿಯ ಸೊಪ್ಪನ್ನು ದನಕರುಗಳ ಮೇವಿಗಾಗಿ ಬೆಳೆಯುತ್ತಿದ್ದಾರೆ. ಇನ್ನು ಹೊಲದ ಬದುವಿನಲ್ಲಿ ಗ್ಲೇಸರ್ ಡೇ, ಸುಬಾಬುಲ್ (ಹಸುವಿಗೆ ಆಹಾರ ಮತ್ತು ಗೊಬ್ಬರಕ್ಕೂ ಉಪಯುಕ್ತ) ಮರಗಳು, ೩೦೦ ಸಾಗುವಾನಿ, ೪೦ ಹುಣಸೆ ಮರಗಳನ್ನು ಸಾಕಿದ್ದಾರೆ. ೧೮ ಎಕರೆ ಒಣ ಜಮೀನಿನಲ್ಲಿ ಕಡಲೆ, ಬಿಳಿಜೋಳ, ಸೂರ್ಯಕಾಂತಿಯನ್ನು ಬೆಳೆಯುತ್ತಾರೆ. ಹಚ್ಚಹಸಿರು ಅವರ ಹೊಲದ ಮೂಲೆ ಮೂಲೆಯನ್ನು ಆವರಿಸಿ ಮೈದುಂಬಿ ಕಾಣುತ್ತದೆ. ಇವರು ತಮ್ಮ ಹೊಲದಲ್ಲಿ ಮಣ್ಣು ಹಾಗೂ ನೀರು ಸಂರಕ್ಷಣೆಗಾಗಿ ಅಳವಡಿಸಿಕೊಂಡಿರುವ ವಿಧಾನಗಳು ಕೂಡ ಯಾವ ವಿಜ್ಞಾನಿಗಳ ಯೋಜನೆ, ಸಂಶೋಧನೆ ಹಾಗೂ ಚಿಂತನೆಗಳಿಗೂ ಕಮ್ಮಿ ಇಲ್ಲ. ನೀರು ಇಂಗುವ ಗುಂಡಿ, ಹಳ್ಳಕ್ಕೆ ಹಾಕಿದ ತಡೆಗೋಡೆ, ಹೊಲದಲ್ಲಿ ನಿರ್ಮಿಸಿರುವ ನೈಸರ್ಗಿಕ ಕೆರೆ ಇವು ಅವರ ಪರಿಶ್ರಮ ಹಾಗೂ ಕೃಷಿ ಕಾಳಜಿಗೆ ಕನ್ನಡಿಯಾಗಿದ್ದರೆ, ಕೃಷಿ ಯಾಂತ್ರಿಕರಣ, ಸುಧಾರಿತ ನೇಗಿಲು, ಯಾಂತ್ರಿಕ ಸಿಂಪಡಕಗಳು, ಕಳೆ ಯಂತ್ರಗಳು, ಧಾನ್ಯ ಸಂಸ್ಕರಣಾ ಯಂತ್ರಗಳ ಬಳಕೆ ಕೂಡಾ ಇನ್ನೊಂದು ಬಗೆಯದ್ದಾಗಿವೆ. 

ಮಲ್ಲೇಶ್‌ಗೌಡರ ಹೊಲದ ಸಮೀಪದಲ್ಲಿ ಮಳೆಗಾಲದಲ್ಲಿ ಹರಿಯುವ ಹಳ್ಳವೊಂದಿದೆ. ಆ ಹಳ್ಳಕ್ಕೆ ತಡೆಗೋಡೆಯೊಂದನ್ನು ನಿರ್ಮಿಸಿದ್ದು, ಅದರಿಂದ ತಮ್ಮ ಹೊಲದಲ್ಲಿ ೧ ಎಕರೆ ಪ್ರದೇಶದಲ್ಲಿ ಕೆರೆಯೊಂದನ್ನು ನಿರ್ಮಿಸಿ ಹಳ್ಳದಿಂದ ಕೆರೆಗೆ ನೀರು ಹಾಯಿಸುತ್ತಾರೆ. ಈ ಕೆರೆ ೪೦೦ ಅಡಿ ಉದ್ದ, ೧೦೦ ಅಡಿ ಅಗಲ, ೨೦ ಅಡಿ ಆಳವಿದೆ. ಮಳೆಗಾಲದಲ್ಲಿ ಹಳ್ಳ ಹರಿಯುವಾಗ ಈ ಕೆರೆಯಲ್ಲಿ ನೀರು ಸಂಗ್ರಹಿಸುತ್ತಾರೆ. ಸದ್ಯ ಇವರ ಕೆರೆಯಲ್ಲಿ ೫ ಅಡಿ ನೀರು ಇದೆ. ಏಕೆಂದರೆ ಕಳೆದ ವರ್ಷ ಈ ಭಾಗದಲ್ಲಿ ಮಳೆಯಾಗಿದ್ದು ತುಂಬಾ ಕಡಿಮೆ. ಹೀಗಾಗಿ ೨೦೧೦ರಲ್ಲಿ ಬಂದ ಮಳೆಯ ನೀರೇ ಇನ್ನೂ ಇವರ ಕೆರೆಯಲ್ಲಿದೆ. ಇಲ್ಲಿಗೆ ಸರಿಯಾಗಿ ಮಳೆ ನೀರು ತುಂಬಿಸಿ ೧ ವರ್ಷ ೮ ತಿಂಗಳಾಗಿದೆ ಎನ್ನುತ್ತಾರೆ ಮಲ್ಲೇಶ್‌ಗೌಡರು. ಅಚ್ಚರಿಯೆಂದರೆ ಇವರ ಊರಿನಲ್ಲೇ ಇರುವ ಇನ್ನೆರಡು ಕೆರೆಗಳಲ್ಲಿ ಸರ್ಕಾರ ಹೂಳೆತ್ತಿಸಿದ್ದರೂ ನೀರಿಲ್ಲ. ಆದರೆ ಇವರ ಹೊಲದ ಕೆರೆಯಲ್ಲಿ ಮಾತ್ರ ನೀರು ತುಂಬಿದೆ. ಮಳೆಗಾಲದಲ್ಲಿ ಕೆರೆಗೆ ನೀರು ತುಂಬಿಸಿದ ಕಾರಣಕ್ಕೆ ಕೆರೆ ಪಕ್ಕದಲ್ಲಿರುವ ಎರಡು ತೆರದ ಬಾವಿಗಳಲ್ಲೂ ನೀರಿದೆ. ಇನ್ನು ೩ ಕೊಳವೆ ಬಾವಿಗಳಿದ್ದು ಅವುಗಳಲ್ಲಿ ೨೦ ಎಕರೆ ಹೊಲಕ್ಕೆ ಆಗುವಷ್ಟು ನೀರಿದೆ. ಹೀಗಾಗಿಯೇ ಒಂದು ವರ್ಷ ಮಳೆ ಕೈಕೊಟ್ಟರೂ ಇವರಿಗೆ ಅಂಥಹ ನಷ್ಟವೇನೂ ಅಗಿಲ್ಲ. ಕೆರೆಯಿಂದಾಗಿ ಅಂತರ್ಜಲ ಮಟ್ಟವೂ ಕುಸಿದಿಲ್ಲ. ಇದಕ್ಕೆ ನಿದರ್ಶನವೆಂಬಂತೆ ೧೫೦ರಿಂದ ೨೦೦ ಅಡಿ ಬೋರ್ ತೆಗಸಿದರೆ ಸಾಕು ಇಲ್ಲಿ ನೀರು ಬೀಳುತ್ತದೆ. ೨೦ ಅಡಿ ತೆಗೆದರೆ ತೆರದ ಬಾವಿಗಳಲ್ಲೂ ನೀರು ಬರುತ್ತದೆ. ಈ ಕೆರೆಯಲ್ಲೂ ಇವರು ವಾಣಿಜ್ಯ ಲಾಭ ಗಿಟ್ಟಿಸುತ್ತಿದ್ದಾರೆ. ವಿಶೇಷವೆಂದರೆ ತಮ್ಮ ಕೆರೆಯಲ್ಲಿ ಮೀನು ಸಾಕಾಣಿಕೆಯನ್ನೂ ಮಾಡಿದ್ದಾರೆ. ಪ್ರತಿ ವರ್ಷ ೨೫ ಸಾವಿರ ಲಾಭ ಪಡೆಯುತ್ತಾರೆ. 

ರೇಷ್ಮೆ ಸಾಕಾಣಿಕೆ ಎಂದರೆ ಕರ್ನಾಟಕದ ಮಟ್ಟಿಗೆ ಅದು ಮೈಸೂರು ಸೀಮೆಯ ಕೃಷಿ ಪದ್ಧತಿ ಎನ್ನುವ ನಂಬಿಕೆ ಇಂದಿಗೂ ಇದೆ. ಆದರೆ ಮಲ್ಲೇಶ್‌ಗೌಡರು ಈ ಮಾತನ್ನು ಅಕ್ಷರಶಃ ಹುಸಿಯಾಗಿಸಿದ್ದಾರೆ. ೧೯೭೮ರಲ್ಲಿ ಮೊದಲ ಬಾರಿಗೆ ರಾಯಚೂರು ಭಾಗದಲ್ಲಿ ರೇಷ್ಮೆ ಬೆಳೆ ಪರಿಚಯವಾಯ್ತು. ಇಂದು ೧೩ ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆಯುವ ಇವರು ತಮ್ಮ ಆದಾಯದ ಬಹಳಷ್ಟು ಪಾಲನ್ನು ರೇಷ್ಮೆಯಿಂದಲೇ ಪಡೆಯುತ್ತಿದ್ದಾರೆ. ವರ್ಷಕ್ಕೆ ಸರಾಸರಿ ೪೬೮೪ ಕೆಜಿ ರೇಷ್ಮೆ ಗೂಡು ಉತ್ಪಾದಿಸಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಈ ಭಾಗದಲ್ಲೇ ಅತೀ ’ಹೆಚ್ಚು ರೇಷ್ಮೆ ಉತ್ಪಾದಿಸುವ ರೈತ’ ಎಂಬ ಹೆಗ್ಗಳಿಕೆ ಇವರದ್ದು. ರೇಷ್ಮೆ ಸಾಕಾಣಿಕೆಗಾಗಿ ಮೂರು ಪ್ರತ್ಯೇಕ ಮನೆಗಳನ್ನು ನಿರ್ಮಿಸಿದ್ದಾರೆ. 


ವ್ಯವಸಾಯಕ್ಕೆ ಪೂರಕವಾಗಿ ತಮ್ಮ ತೋಟದಲ್ಲಿ ಹೈನುಗಾರಿಕೆಯನ್ನು ಮಾಡಿಯೂ ಯಶಸ್ವಿಯಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲೇ ಅತಿ ಹೆಚ್ಚು ಹಾಲು ಹಾಕುತ್ತಿರುವ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ. ದಿನಕ್ಕೆ ಇವರು ಮಾರಾಟ ಮಾಡುವ ಹಾಲಿನ ಪ್ರಮಾಣ ೧೫೦ ಲೀಟರ್! ಇವರ ವಿಶೇಷ ಪ್ರಯತ್ನದಿಂದಾಗಿ ಲಿಂಗಸುಗೂರಿನಲ್ಲಿ ’ಕರ್ನಾಟಕ ಹಾಲು ಮಂಡಳಿ’ಯೂ ಸ್ಥಾಪನೆಯಾಗಿದೆ. ಇದರ ಉಪಯೋಗವನ್ನು ಮಟ್ಟೂರು ಗ್ರಾಮ ಸೇರಿದಂತೆ ಇತರ ಗ್ರಾಮಗಳೂ ಪಡೆಯುತ್ತಿವೆ. ಇವರ ಪರಿಶ್ರಮದಿಂದಾಗಿ ಸದ್ಯ ತಾಲೂಕಿನಲ್ಲಿ ೧೨ ಹಾಲು ಸೊಸೈಟಿಗಳು ತಲೆ ಎತ್ತಿವೆ. ೪೦ ಸಂಘಗಳು ಇವೆ. ಸದ್ಯ ಹಾಲಿನ ಬೆಲೆ ೨೩ ರೂಪಾಯಿ ಇದ್ದು ಸಾಕಷ್ಟು ಲಾಭ ಸಿಗುತ್ತದೆ ಎನ್ನುತ್ತಾರೆ ಮಲ್ಲೇಶ್‌ಗೌಡರು. ಮೊದಲು ಮುರ್ರಾ ಎಮ್ಮೆಗಳು ಹಾಗೂ ಜವಾರಿ ದನಗಳನ್ನು ಸಾಕಿದ್ದ ಇವರು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಹಾಲು ಕೊಡುವ ಸೀಮೆ ಹಸುಗಳನ್ನು ಸಾಕುತ್ತಿದ್ದಾರೆ. ತಮ್ಮ ಜಾನುವಾರುಗಳ ಮೇವಿಗಾಗಿ ೪ ಎಕರೆ ಪ್ರದೇಶದಲ್ಲಿ ವಿವಿಧ ರೀತಿಯ ಹುಲ್ಲು ಬೆಳೆಯುತ್ತಾರೆ. ಅಲ್ಲದೇ ಹುಲ್ಲಿನ ಗಡ್ಡೆ ಹಾಗೂ ಬೀಜಗಳನ್ನು ಇತರ ರೈತರಿಗೂ ನೀಡಿ ಪ್ರೇರೇಪಿಸುತ್ತಾರೆ. ಮಲ್ಲೇಶಪ್ಪ ಅವರು ತಮ್ಮ ಹೊಲಕ್ಕಾಗಿ ಎರೆಹುಳಗೊಬ್ಬರವನ್ನು ತಯಾರಿಸುತ್ತಾರಲ್ಲದೇ ಇತರೇ ರೈತರಿಗೂ ಅದನ್ನು ೨೫೦ ಕೆಜಿಗೆ ೫೦ ರೂಪಾಯಿಯಂತೆ ಮಾರಾಟ ಮಾಡುತ್ತಾರೆ. 

ಜಾನುವಾರುಗಳ ತ್ಯಾಜ್ಯದಿಂದ ಗೊಬ್ಬರ ತಯಾರಿಸುವುದಕ್ಕಾಗಿ ದನ-ಕರುಗಳ ಸಗಣಿ- ಗಂಜಲವೆಲ್ಲಾ ಒಂದು ದೊಡ್ಡ ಟ್ಯಾಂಕ್‌ಗೆ ಬಂದು ಸೇರುವಂತೆ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಜಾನುವಾರುಗಳ ಸಗಣಿ- ಗಂಜಲ ಹಾಗೂ ಅವುಗಳಿಗೆ ಸ್ನಾನ ಮಾಡಿಸಿದ ನೀರು ಎಲ್ಲವೂ ಹೋಗಿ ಸೇರುವಂತೆ ಪೈಪ್ ಜೋಡಿಸಿದ್ದು ಹೊಲಕ್ಕೆ ಬೇಕಾಗುವಷ್ಟು ಗೊಬ್ಬರವನ್ನು ಪಡೆಯುತ್ತಾರೆ. ಅಲ್ಲದೇ ಹೊಲದಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಗೊಬ್ಬರ ಅನಿಲ ಬಳಕೆಗೆ ವ್ಯವಸ್ಥೆಯನ್ನು ಮಾಡಿಸಿದ್ದಾರೆ. 

ಇಷ್ಟೆಲ್ಲಾ ಕೃಷಿಯಲ್ಲಿ ಸಾಧನೆ ಮಾಡಿರುವ ಮಲ್ಲೇಶ್ ಅವರು ತಮ್ಮ ಆದಾಯ ಹಾಗೂ ವೆಚ್ಚದ ಬಗ್ಗೆ ಹೀಗೆ ವಿವರಿಸುತ್ತಾರೆ: ನಾಲ್ಕು ದನದ ಕೊಟ್ಟಿಗೆಗೆ ಹಾಗೂ ಗೊಬ್ಬರ ನಿರ್ವಹಣೆಗೆ ಮಾಡಿರುವ ಖರ್ಚು ಅಂದಾಜು ೫೦ ಲಕ್ಷ ರೂಪಾಯಿಗಳು. ಕೆರೆ ನಿರ್ವಹಣೆಗೆ ಹಾಗೂ ಹೊಲದ ಸುತ್ತಲು ಹಾಕಿರುವ ಪ್ಲಾಂಟೇಷನ್ ಇತ್ಯಾದಿಗಾಗಿ ೫೦ ಲಕ್ಷ ರೂಪಾಯಿ ಒಟ್ಟು ೧ ಕೋಟಿ ಬಂಡವಾಳ ಹಾಕಿರುವುದಾಗಿ ಹೇಳುತ್ತಾರೆ. ಇದಕ್ಕಾಗಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ೨೫ ಲಕ್ಷ ಸಹಾಯಧನ ಮತ್ತು ಬ್ಯಾಂಕ್ ಲೋನ್ ೨೫ ಲಕ್ಷ ರೂಪಾಯಿಯನ್ನು ಪಡೆದಿದ್ದಾರೆ. ಉಳಿದಿದ್ದು ತಮ್ಮ ಸ್ವಂತ ಬಂಡವಾಳ ಹಾಕಿರುವುದಾಗಿ ಹೇಳುತ್ತಾರೆ. ವಾರ್ಷಿಕ ೨೫ ಲಕ್ಷ ರೂಪಾಯಿ ಆದಾಯ ಸಿಗುತ್ತದೆ. ಅತೀ ಹೆಚ್ಚು ಅಂದರೆ ೧೩ ಲಕ್ಷದಷ್ಟು ರೇಷ್ಮೇ ಸಾಕಾಣಿಕೆಯಿಂದ, ಹಾಲು ಹಾಗೂ ಹಸು ಮಾರಾಟದಿಂದ ೭ ಲಕ್ಷ ಹಾಗು ಪೇರಲೆ, ಸಪೋಟೋ ಮಾರಾಟ ಇತ್ಯಾದಿ ತೋಟಗಾರಿಕೆಯಿಂದ ೨ ಲಕ್ಷ ಲಾಭವಾಗುತ್ತದೆ ಎಂದು ತಮ್ಮ ಪ್ರತೀ ಆದಾಯ ಮೂಲಗಳನ್ನು ಯಾವುದೇ ಮುಚ್ಚುಮರೆಯಿಲ್ಲದೇ ಬಿಚ್ಚಿಡುತ್ತಾರೆ. 

ಈ ಮಣ್ಣಿನ ಯೋಗಿಯ ಪರಿಶ್ರಮಕ್ಕೆ ಹಾಗೂ ಕೃಷಿ ಸಾಧನೆಗೆ ಸಾಕಷ್ಟು ಪುರಸ್ಕಾರಗಳು ಕೂಡಾ ಲಭಿಸಿವೆ. ತಮ್ಮ ತೋಟದಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಮಲ್ಲೇಶ್ ಅವರನ್ನು ಗುರುತಿಸಿರುವ ರಾಜ್ಯ ಸರ್ಕಾರ ೨೦೧೦-೨೦೧೧ ಸಾಲಿನ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರಾಯಚೂರು ಕೃಷಿ ವಿಶ್ವವಿದ್ಯಾಲಯ ೨೦೧೨ರ ಏಪ್ರಿಲ್ ೨೨ ರಂದು ಇವರ ಸಾಧನೆಯನ್ನು ಕಂಡು ಮೊಟ್ಟಮೊದಲ ಬಾರಿಗೆ ’ಕೃಷಿ ವಿಜ್ಞಾನಿ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇಷ್ಟೇ ಅಲ್ಲದೇ ಸಾಕಷ್ಟು ಸನ್ಮಾನಗಳೂ ಇವರನ್ನು ಅರಸಿ ಬಂದಿವೆ. 

ಧಾರವಾಡ ವಿಶ್ವವಿದ್ಯಾಲಯ ಕೂಡಾ ಇವರಿಗೆ ’ಶ್ರೇಷ್ಠ ಕೃಷಿಕ’ ಪುರಸ್ಕಾರ ನೀಡಿದೆ. ರಾಯಚೂರು ಜಿಲ್ಲಾ ಘಟಕ ಇವರ ಸಾವಯವ ಕೃಷಿ ಪದ್ಧತಿಯನ್ನು ಮೆಚ್ಚಿ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಲ್ಲೇಶ್‌ಗೌಡ ಪಾಟೀಲ್ ಅವರ ಸಾಧನೆ ನಿಜಕ್ಕೂ ಪ್ರತಿಯೊಬ್ಬ ರೈತರಿಗೂ ಮಾದರಿ. ಹೀಗಾಗಿಯೇ ಅವರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಅವರ ಈ ಹೆಗ್ಗಳಿಕೆಯ ಹಿಂದೆ ಸಾಕಷ್ಟು ಪರಿಶ್ರಮವೂ ಇದೆ. ಇದೇ ಅವರ ಕಣ್ಮುಂದೆ ನಿಂತಿದೆ ಎಂದರೆ ತಪ್ಪಿಲ್ಲ. ಈ ಮಣ್ಣಿನ ಮಗನ ಯಶೋಗಾಥೆ ನಿಜಕ್ಕೂ ರೈತರಿಗೆ ಸ್ಫೂರ್ತಿದಾಯಕವಾಗಿದೆ.


ಮೂಲತಃ ನಮ್ಮದು ಕೃಷಿ ಕುಟುಂಬ ಹುಟ್ಟುತ್ತಲೇ ನಾನು ಮಣ್ಣಿನ ಒಡನಾಟವನ್ನು ಬೆಳೆಸಿಕೊಂಡು ಬೆಳೆದೆ. ನನಗೀಗ ೫೬ ವರ್ಷ. ತಿಳುವಳಿಕೆ ಬಂದಾಗಿನಿಂದ ನಾನು ಕೃಷಿಯನ್ನೇ ನೆಚ್ಚಿಕೊಂಡು ಅಂಟಿಕೊಂಡು ಬದುಕುತ್ತಿದ್ದೇನೆ. ಭೂಮಿ ತಾಯಿ ನನ್ನನ್ನು ಎಂದೂ ಕೈಬಿಟ್ಟಿಲ್ಲ. ಕೃಷಿಯಲ್ಲಿ ನಾನು ಮಾಡಿರುವ ಎಲ್ಲ ಸಂಶೋಧನೆ, ಆವಿಷ್ಕಾರಗಳು ಏನೇ ಇದ್ದರೂ ಎಲ್ಲವೂ ನನ್ನ ಅನುಭವದ ಹಾಗೂ ಹೊಸ ಪದ್ಧತಿಗಳನ್ನು ಅಳವಡಿಸಿಕೊಂಡದ್ದರ ಫಲ. ಕೃಷಿಯಲ್ಲಾಗಲೀ ಅಥವಾ ಇನ್ನಾವುದೇ ವಿಷಯದಲ್ಲಿ ನಾನು ಯಾವುದೇ ಪದವಿ ಪಡೆದಿಲ್ಲ ನಾನು ಓದಿದ್ದು ಕೇವಲ ೧೦ನೇ ತರಗತಿ ಎನ್ನುವ ಸರಳ ವ್ಯಕ್ತಿತ್ವ ಅವರದ್ದು. 

ಇದಕ್ಕೆ ಇರಬೇಕು ಗಾಂಧೀಜಿಯವರು ಅನುಭವವೇ ಶಿಕ್ಷಣ ಎಂದು ಹೇಳಿದ್ದು. ಅವರ ಮಾತು, ಕೃತಿ, ಎಲ್ಲವೂ ಹೊಲ, ಉಳಿಮೆ, ಬೆಳೆಯ ಸುತ್ತಲೇ. ೫೬ರ ಹರೆಯದಲ್ಲೂ ಹೊಸತನದ ಹುರುಪು ಎದ್ದು ಕಾಣುತ್ತದೆ. ಇಂದಿಗೂ ಕೂಡಾ ಕೃಷಿಗೆ ಸಂಬಂಧಿಸಿದಂತೆ ರಾಜ್ಯದ ಯಾವುದೇ ಮೂಲೆಯಲ್ಲಾಗಲೀ ಕಾರ್ಯಗಾರ, ಉಪನ್ಯಾಸಗಳು, ತರಬೇತಿ ನಡೆದರೆ ಮರು ಮಾತಾಡದೇ ಹೊಗುವ ಅವರ ಉತ್ಸಾಹಕ್ಕೆ ಎಣೆ ಇಲ್ಲ. 

ಮಲ್ಲೇಶ್‌ಗೌಡ ಪಾಟೀಲ್ ಅವರಿಗೆ ’ಕೃಷಿ ವಿಜ್ಞಾನಿ’ ಪ್ರಶಸ್ತಿ ಪ್ರದಾನ ಮಾಡಿದ ರಾಯಚೂರು ಕೃಷಿ ವಿವಿ ಕುಲಪತಿ ಡಾ.ಬಿ.ವಿ.ಪಾಟೀಲ್ ದೇಶದಲ್ಲಿಯೇ ಕೃಷಿ ವಿವಿಯೊಂದು ‘ರೈತ ವಿಜ್ಞಾನಿ’ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು ಇದೇ ಮೊದಲು. ಅದನ್ನು ಪಡೆದ ಕೀರ್ತಿ ಇವರದ್ದು. ಇದಕ್ಕೆ ಅವರ ಪರಿಶ್ರಮ ಹಾಗೂ ಕೃಷಿ ಕ್ಷೇತ್ರದಲ್ಲಿ ಅವರು ಮಾಡಿರುವ ಅಲಿಖಿತ ಸಂಶೋಧನೆ ಕಾರಣ ಎನ್ನುತ್ತಾರೆ. 
ವಿವಿಯ ನಿರ್ದೇಶಕರಲ್ಲೊಬ್ಬರಾದ ಎಸ್.ಎನ್. ಹಂಚಿನಾಳ್ ಅವರೂ ಕೂಡಾ, ಮನಸ್ಸಿದ್ದಲ್ಲಿ ಮಾರ್ಗ ಎನ್ನುವ ಮಾತನ್ನು ಇವರನ್ನು ನೋಡಿ ನಮ್ಮ ರೈತರು ಅರಿಯಬೇಕು. ಇವರ ಕೃಷಿ ಪದ್ಧತಿ ಎಲ್ಲ ರೈತರಿಗೂ ಮಾದರಿ ಇವರ ಸಲಹೆ ಸೂಚನೆಗಳು ರೈತರಿಗೊಂದು ಕೊಡುಗೆಯೇ ಸರಿ ಎಂದಿದ್ದಾರೆ. ಕಾಲೇಜಿನ ಅಧ್ಯಾಪಕ ಬಸವರಾಜ್ ಹುಲಗೂರು ಇವರ ಕೃಷಿ ಪದ್ಧತಿಗಳು ಯಾವುದೇ ಸಂಶೋಧನೆ, ವಿಜ್ಞಾನಿಗೂ ಕಮ್ಮಿ ಇಲ್ಲ ಎಂಬ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. 

ಮಾಡುವ ಕೆಲಸದಲ್ಲಿ ಬದ್ಧತೆ, ಶ್ರದ್ಧೆ ಮತ್ತು ಕಠಿಣ ಪರಿಶ್ರಮ ಇದ್ದರೆ ಸಾಮಾನ್ಯನೂ ಅಸಮಾನ್ಯ ಸಾಧನೆ ಮಾಡಬಲ್ಲ ಎನ್ನುವುದಕ್ಕೆ ಮಲ್ಲೇಶ್‌ಗೌಡ ಪಾಟೀಲ್ ಒಂದು ಜೀವಂತ ಉದಾಹರಣೆ.

Friday, 11 May 2012

ಸಾದತ್ ಹಸನ್ ಮಾಂಟೊ- ಅದ್ವಿತೀಯ ಕತೆಗಾರ-ಡಾ. ಜೆ. ಬಾಲಕೃಷ್ಣ.



ಕೃಪೆ:- ಅಂತರಗಂಗೆ

My Photo

ಮಾಂಟೋನನ್ನು ಕನ್ನಡಕ್ಕೆ ತಂದವರಲ್ಲಿ ಡಾ. ಜೆ. ಬಾಲಕೃಷ್ಣ ಕೂಡ ಒಬ್ಬರು. ಅವರು ತಮ್ಮ 'ಅಂತರಗಂಗೆ' ಬ್ಲಾಗ್ ನಲ್ಲಿ ಹಂಚಿಕೊಂಡಿರುವ ಮಾಂಟೋನ ಕಿರು ಪರಿಚಯ ಮತ್ತು ಒಂದು ಕತೆ ಇಲ್ಲಿವೆ -ಸಮಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ ಅನಿಕೇತನ'ದ 19ನೇ ಸಂಪುಟ, ಸಂಚಿಕೆ 3ರಲ್ಲಿ ಸಾದತ್ ಹಸನ್ ಮಾಂಟೋನ ಪರಿಚಯ ಹಾಗೂ ನಾನು ಅನುವಾದಿಸಿರುವ ಎರಡು ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಮನಕಲಕುವ ಕತೆ ತೆಗೆದುಬಿಡು' ಇಲ್ಲಿ ಕೊಟ್ಟಿದ್ದೇನೆ. ಓದಿ ತಮ್ಮ ಅನಿಸಿಕೆ ತಿಳಿಸಿ- ಡಾ. ಜೆ. ಬಾಲಕೃಷ್ಣ.


ಸಾದತ್ ಹಸನ್ ಮಾಂಟೊ (೧೧.೫.೧೯೧೨-೧೮.೧.೧೯೫೫) ಈ ಉಪಖಂಡ ಕಂಡ ಒಬ್ಬ ಮಹಾನ್ ಹಾಗೂ ವಿವಾದಾಸ್ಪದ ಉರ್ದು ಕತೆಗಾರ. ಭಾರತ, ಪಾಕಿಸ್ತಾನ ವಿಭಜನೆಯಿಂದ ತೀವ್ರ ಆಘಾತಕ್ಕೊಳಗಾದ ಮಾಂಟೊ ಆಗ ತಾನು ಕಂಡ ಕೋಮುಗಲಭೆಗಳ ಅಮಾನವೀಯ ಕ್ರೌರ್ಯದಿಂದ ತತ್ತರಿಸಿಹೋದ. ಭಾರತ, ಪಾಕಿಸ್ತಾನ ವಿಭಜನೆಯಾದಾಗ, 'ಈ ಎರಡೂ ದೇಶಗಳಲ್ಲಿ ನನ್ನ ದೇಶ ಯಾವುದೆಂದು ನಿರ್ಧರಿಸಲು ನನ್ನಿಂದ ಸಾಧ್ಯವಾಗಲೇ ಇಲ್ಲ' ಎಂದಿದ್ದಾನೆ. ಆತ ಜನರನ್ನು ಹಿಂದೂ, ಮುಸಲ್ಮಾನ ಅಥವಾ ಸಿಖ್ಖರೆಂದು ಪ್ರತ್ಯೇಕಿಸಿ ನೋಡಲಿಲ್ಲ. ಆತನಿಗೆ ಎಲ್ಲರೂ ಮನುಷ್ಯರೆ. ಕೆಲದಿನಗಳ ಹಿಂದೆಯಷ್ಟೇ ನೆರೆಹೊರೆಯವರು, ಗೆಳೆಯರಾಗಿದ್ದವರು ಪರಸ್ಪರ ಕೊಂದುಕೊಳ್ಳುವ ಅಮಾನವೀಯ, ಕ್ರೌರ್ಯ ಮನೋಭಾವ ಪಡೆದುಕೊಂಡದ್ದು ಮಾಂಟೋನಲ್ಲಿ ಆಘಾತ ಹಾಗೂ ದಿಗ್ಭ್ರಮೆ ಉಂಟುಮಾಡಿತ್ತು. ವಿಭಜನೆಯ ನಂತರ ಪಾಕಿಸ್ತಾನದ ಲಾಹೋರ್‌ಗೆ ಹೋದ ಮಾಂಟೊ ಅಲ್ಲಿ ಏಳು ವರ್ಷಗಳು ಬದುಕಿದ್ದ. ಆ ಏಳು ವರ್ಷಗಳು ಆತನ ಬದುಕಿನ ಸೆಣಸಾಟವೇ ಆಗಿತ್ತು. ಆ ಸೆಣಸಾಟದಲ್ಲೂ ಜಗತ್ತಿಗೆ ತನ್ನ ಮಹಾನ್ ಕೃತಿಗಳ ಕಾಣಿಕೆ ನೀಡಿದ. ಆ ಏಳೂ ವರ್ಷಗಳ ಬದುಕಿನ ಪಯಣ ಆತನನ್ನು ಸಾವಿಗೆ ಹತ್ತಿರ ಹತ್ತಿರ ಕೊಂಡೊಯ್ದವು. ಮಾಂಟೊ ಸತ್ತಾಗ ಆತನಿಗಿನ್ನೂ ೪೩ ವರ್ಷ ತುಂಬಿರಲಿಲ್ಲ. ಅಷ್ಟರಲ್ಲೇ ಆತ ೨೫೦ಕ್ಕೂ ಹೆಚ್ಚು ಸಣ್ಣ ಕತೆಗಳನ್ನು (೨೨ ಕಥಾ ಸಂಕಲನಗಳು), ಏಳು ರೇಡಿಯೋ ನಾಟಕ ಸಂಗ್ರಹಗಳನ್ನು, ಮೂರು ಪ್ರಬಂಧ ಸಂಗ್ರಹಗಳನ್ನು ಹಾಗೂ ಒಂದು ಕಿರುಕಾದಂಬರಿಯನ್ನು ರಚಿಸಿದ್ದ. ಆತ ಬದುಕಿನಲ್ಲಿ ಎಲ್ಲವನ್ನೂ ಕಂಡಿದ್ದ- ಅತ್ಯಂತ ಜನಪ್ರಿಯತೆ, ಅಸೀಮ ದ್ವೇಷ, ತಾನು ಬಯಸದ ಅಪಮಾನ ಹಾಗೂ ಆ ಎಲ್ಲವನ್ನೂ ತನ್ನ ಕತೆಗಳಲ್ಲಿ ಹೇಳಿಬಿಟ್ಟಿದ್ದ- ಜಗತ್ತೇ ತನ್ನನ್ನು ಅದ್ಭುತ ಕತೆಗಾರನೆಂದು ಕೊಂಡಾಡುವಂತೆ.

ಸಾದತ್ ಹಸನ್ ಮಾಂಟೋನ ಕತೆ-

ತೆಗೆದುಬಿಡು

ಮಧ್ಯಾಹ್ನ ಎರಡು ಗಂಟೆಗೆ ಅಮೃತಸರ್ ಬಿಟ್ಟ ಟ್ರೈನು ಎಂಟು ಗಂಟೆಯ ಪ್ರಯಾಣದ ನಂತರ ಲಾಹೋರಿನ ಮುಘಲ್‌ಪುರ ತಲುಪಿತ್ತು. ಅದರ ಪ್ರಯಾಣದ ಹಾದಿಯಲ್ಲಿ ಬಹಳಷ್ಟು ಜನ ಕೊಲ್ಲಲ್ಪಟ್ಟಿದ್ದರು, ಅದಕ್ಕಿಂತ ಹೆಚ್ಚು ಜನ ಗಾಯಗಳಿಂದ ನರಳುತ್ತಿದ್ದರು ಹಾಗೂ ಲೆಕ್ಕವಿಡದಷ್ಟು ಜನ ಕಣ್ಮರೆಯಾಗಿದ್ದರು.ಸಿರಾಜುದ್ದೀನನಿಗೆ ಎಚ್ಚರವಾದಾಗ ಮರುದಿನ ಬೆಳಿಗ್ಗೆ ಹತ್ತು ಗಂಟೆಯಾಗಿತ್ತು. ಸುತ್ತಲೂ ಕಿರಿಚಾಡುತ್ತಿದ್ದ ಗಂಡಸರು, ಹೆಂಗಸರು ಮತ್ತು ಮಕ್ಕಳ ನಡುವೆ ನೆಲದ ಮೇಲೆ ಆತ ಬಿದ್ದಿದ್ದ. ಆ ಕಿರಿಚಾಟ, ಅರಚಾಟ ಅವನಿಗೇನೂ ಅನ್ನಿಸಲೇ ಇಲ್ಲ.ಸಿರಾಜುದ್ದೀನ್ ಹಾಗೇ ಬಿದ್ದಿದ್ದ; ಧೂಳು ತುಂಬಿದ ಆಕಾಶದ ಶೂನ್ಯದೆಡೆಗೆ ಅವನ ನೋಟ ನೆಟ್ಟಿತ್ತು. ಸುತ್ತಮುತ್ತಲ ಗೊಂದಲವಾಗಲಿ, ಗಲಾಟೆಯ ಶಬ್ದವಾಗಲಿ ಅವನ ಗಮನಕ್ಕೆ ಬರುತ್ತಲೇ ಇಲ್ಲ. ಯಾರಾದರೂ ಅಪರಿಚಿತರಿಗೆ ಈ ಮುದುಕ ಗಾಢ ಆಲೋಚನೆಯಲ್ಲಿ ಮುಳುಗಿರುವಂತೆ ಕಾಣುತ್ತಿದ್ದ. ಆದರೆ ವಿಷಯ ಹಾಗಿರಲಿಲ್ಲ. ಆತ ಆಘಾತಕ್ಕೊಳಗಾಗಿದ್ದ, ತಳವೇ ಇಲ್ಲದ ಗುಂಡಿಯೊಳಗೆ ಅವನನ್ನು ನೇತು ಬಿಟ್ಟ ಹಾಗಿತ್ತು ಅವನ ಸ್ಥಿತಿ.ಅವನ ಕಣ್ಣು ಚಲಿಸಿತು. ಹಾಗೆಯೇ ಪ್ರಖರ ಸೂರ್ಯನೆಡೆಗೆ ನೋಡಿದ. ಗಾಬರಿಗೊಂಡವನಂತೆ ಎಚ್ಚೆತ್ತು ಜೀವಂತ ಮನುಷ್ಯರ ಜಗತ್ತಿಗೆ ಹಿಂದಿರುಗಿದ. ಅವನ ಮನಸ್ಸಿನಲ್ಲಿ ಹಲವಾರು ಚಿತ್ರಗಳು ಸರಸರನೆ ಹಾದುಹೋದವು. ದಾಳಿ... ಬೆಂಕಿ... ತಪ್ಪಿಸಿಕೊಂಡು ಓಡಿದ್ದು... ರೈಲ್ವೇ ನಿಲ್ದಾಣ... ರಾತ್ರಿಯ ಕತ್ತಲು... ಸಕೀನಾ. ಇದ್ದಕ್ಕಿದ್ದಂತೆ ಎದ್ದು ಆ ನಿರಾಶ್ರಿತರ ಕ್ಯಾಂಪಿನ ಜನಜಂಗುಳಿಯಲ್ಲಿ ಹುಡುಕತೊಡಗಿದ.

ಅದೆಷ್ಟೋ ಗಂಟೆಗಳು ಹುಡುಕಿದ, ಜೋರಾಗಿ ತನ್ನ ಮಗಳ ಹೆಸರನ್ನು ಕರೆಯುತ್ತಲೇ ಇದ್ದ... ಸಕೀನಾ, ಸಕೀನಾ... ಆದರೆ ಅವಳೆಲ್ಲೂ ಸಿಗಲೇ ಇಲ್ಲ.ಎಲ್ಲೆಲ್ಲೂ ಗೊಂದಲ, ಜನ ಕಳೆದುಹೋದ ತಮ್ಮ ಮಕ್ಕಳನ್ನು, ತಾಯಿಯರನ್ನು, ಹೆಂಡಂದಿರನ್ನು ಹುಡುಕುತ್ತಲೇ ಇದ್ದರು. ಕೊನೆಗೆ ಸಾಕಾಗಿ ಸಿರಾಜುದ್ದೀನ್ ಜನಜಂಗುಳಿಯಿಂದ ದೂರ ಕೂತು ನಡೆದ ಘಟನೆಗಳ ಬಗೆಗೆ ಶಾಂತವಾಗಿ ಆಲೋಚಿಸತೊಡಗಿದ. ಸಕೀನಾ ಮತ್ತು ಆಕೆಯ ತಾಯಿಯನ್ನು ಕಳೆದುಕೊಂಡಿದ್ದು ಎಲ್ಲಿ? ಮಿಂಚಿನಂತೆ ಚಿತ್ರವೊಂದು ತನ್ನ ಕಣ್ಣಮುಂದೆ ಮೂಡಿತು- ತನ್ನ ಹೆಂಡತಿಯ ಜೀವಬಿಟ್ಟಿದ್ದ ದೇಹ, ಹೊಟ್ಟೆ ಬಗೆದು ಕರಳುಗಳೆಲ್ಲ ಹೊರಗೆ ಬಂದಿತ್ತು. ಆ ಚಿತ್ರ ಕಣ್ಣಿನಿಂದ, ಮನಸ್ಸಿನಿಂದ ದೂರ ಸರಿಯಲೇ ಇಲ್ಲ.

ಸಕೀನಾಳ ತಾಯಿ ಸತ್ತು ಹೋಗಿದ್ದಳು. ಅದಂತೂ ನಿಜ. ಆಕೆ ತನ್ನ ಕಣ್ಣ ಮುಂದೆಯೇ ಪ್ರಾಣ ಬಿಟ್ಟಿದ್ದಳು. ಸಾಯುವ ಮುನ್ನ ಅವಳಾಡಿದ ಮಾತು ಇನ್ನೂ ಸಿರಾಜುದ್ದೀನನ ಕಿವಿಯಲ್ಲಿ ಗುಂಯ್ಗುಡುತ್ತಿತ್ತು: 'ನನ್ನನ್ನಿಲ್ಲೇ ಬಿಟ್ಟು ಹೊರಡಿ. ಹೋಗಿ, ಮಗಳನ್ನು ಕರೆದುಕೊಂಡು ಹೋಗಿಬಿಡಿ'.ಅವರಿಬ್ಬರೂ ಅಲ್ಲಿಂದ ಓಡತೊಡಗಿದರು. ಸಕೀನಾಳ ದುಪಟ್ಟಾಜಾರಿ ನೆಲದ ಮೇಲೆ ಬಿತ್ತು. ಓಡುತ್ತಿದ್ದ ಆತ ನಿಂತು ಅದನ್ನು ಎತ್ತಿಕೊಳ್ಳಲು ಬಾಗಿದ ಹಾಗೂ ಆಗ ಆಕೆ ಹೇಳಿದ್ದಳು, ಅಪ್ಪ ಬೇಡ, ಅದನ್ನಲ್ಲೇ ಬಿಟ್ಟುಬಿಡಿ'.ಅವನ ಜೇಬು ಉಬ್ಬಿತ್ತು. ಅದೊಂದು ಉದ್ದವಾದ ಬಟ್ಟೆ. ಹೌದು, ಆತ ಅದನ್ನು ಗುರುತಿಸಿದ. ಅದು ಸಕೀನಾಳ ದುಪಟ್ಟಾ, ಆದರೆ ಅವಳೆಲ್ಲಿ ಹೋದಳು?ಇತರ ವಿವರಗಳೆಲ್ಲಾ ಅಸ್ಪಷ್ಟ. ಅವಳನ್ನು ರೈಲ್ವೇ ನಿಲ್ದಾಣದವರೆಗೂ ಕರೆದುತಂದಿದ್ದನೆ? ಆಕೆ ಅವನೊಂದಿಗೆ ಗಾಡಿಯನ್ನು ಹತ್ತಿದ್ದಳೆ? ದಾರಿಯಲ್ಲಿ ದೊಂಬಿ ನಡೆಸುವವರು ಟ್ರೈನನ್ನು ನಿಲ್ಲಿಸಿದಾಗ, ಅವರು ಅವಳನ್ನು ಕೊಂಡೊಯ್ದರೆ?ಎಲ್ಲವೂ ಬರೇ ಪ್ರಶ್ನೆಗಳೇ. ಉತ್ತರಗಳೇ ಇಲ್ಲ. ಅವನಿಗೆ ಅಳಬೇಕೆನ್ನಿಸಿತು, ಆದರೆ ಕಣ್ಣೀರು ಬರುತ್ತಲೇ ಇಲ್ಲ. ಅವನಿಗೆ ಸಹಾಯದ ಅಗತ್ಯವಿದೆಯೆಂದು ಆಗ ಅನ್ನಿಸಿತು.

ಕೆಲವು ದಿನಗಳ ನಂತರ ಬೆಳಕೊಂದು ಕಂಡಿತು. ಅವರು ಎಂಟು ಜನರಿದ್ದರು, ಯುವಕರು ಹಾಗೂ ಬಂದೂಕುಗಳನ್ನು ಹೊಂದಿದ್ದರು. ಅವರ ಬಳಿ ಲಾರಿಯೊಂದು ಸಹ ಇತ್ತು. ಗಡಿಯ ಮತ್ತೊಂದು ಬದಿ ಬಿಟ್ಟುಬಂದಿದ್ದ ಹೆಂಗಸರು ಮತ್ತು ಮಕ್ಕಳನ್ನು ಕರೆದುತರುತ್ತಿರುವುದಾಗಿ ತಿಳಿಸಿದರು.ಅವರಿಗೆ ತನ್ನ ಮಗಳ ವಿವರಗಳನ್ನು ನೀಡಿದ. 'ಆಕೆ ಅತ್ಯಂತ ಸುಂದರಿ, ಬೆಳ್ಳಗಿದ್ದಾಳೆ. ಇಲ್ಲ, ಆಕೆ ನನ್ನ ಹಾಗೆ ಇಲ್ಲ, ಆಕೆಯ ತಾಯಿಯನ್ನು ಹೋಲುತ್ತಾಳೆ. ಸುಮಾರು ಹದಿನೇಳು ವರ್ಷ. ಬಟ್ಟಲುಗಣ್ಣು, ಕಪ್ಪನೆ ಕೂದಲು, ಎಡಗೆನ್ನೆಯ ಮೇಲೆ ಕಪ್ಪನೆ ಚಿಕ್ಕ ಮಚ್ಚೆಯಿದೆ. ನನ್ನ ಮಗಳನ್ನು ಹುಡುಕಿಕೊಡಿ. ದೇವರು ನಿಮಗೆ ಒಳ್ಳೆಯದು ಮಾಡಲಿ'.ಆ ಯುವಕರು ಸಿರಾಜುದ್ದೀನನಿಗೆ ಹೇಳಿದ್ದರು, 'ನಿನ್ನ ಮಗಳು ಬದುಕಿದ್ದಲ್ಲಿ, ಖಂಡಿತಾ ಹುಡುಕಿ ತರುತ್ತೇವೆ'.ಅವರು ಪ್ರಯತ್ನಿಸಿದ್ದರು ಸಹ. ತಮ್ಮ ಪ್ರಾಣಾಪಾಯವನ್ನು ಲೆಕ್ಕಿಸದೆ ಅವರು ಅಮೃತಸರದವರೆಗೂ ಹೋದರು. ಹಲವಾರು ಹೆಂಗಸರು ಮತ್ತು ಮಕ್ಕಳನ್ನು ಕ್ಯಾಂಪಿಗೆ ತಂದುಬಿಟ್ಟರು, ಆದರೆ ಅವರಿಗೆ ಎಲ್ಲೂ ಸಕೀನಾ ಕಂಡಿರಲಿಲ್ಲ.

ಆ ಯುವಕರ ಮುಂದಿನ ಪ್ರಯಾಣದಲ್ಲಿ, ರಸ್ತೆ ಬದಿ ನಡೆದುಹೋಗುತ್ತಿದ್ದ ಹುಡುಗಿಯೊಬ್ಬಳನ್ನು ಕಂಡಿದ್ದರು. ಅವರನ್ನು ಕಂಡ ಆಕೆ ಹೆದರಿಕೆಯಿಂದ ಓಡತೊಡಗಿದ್ದಳು. ಅವರು ತಮ್ಮ ಲಾರಿ ನಿಲ್ಲಿಸಿ ಅವಳ ಹಿಂದೆ ಓಡಿದರು. ಕೊನೆಗೆ ಹೊಲವೊಂದರಲ್ಲಿ ಆಕೆ ಸಿಕ್ಕಿಬಿದ್ದಳು. ಅವಳು ಅತ್ಯಂತ ಸುಂದರವಾಗಿದ್ದಳು ಹಾಗೂ ಆಕೆಯ ಎಡಗೆನ್ನೆಯ ಮೇಲೆ ಕಪ್ಪನೆ ಚಿಕ್ಕ ಮಚ್ಚೆಯಿತ್ತು. ಅವರಲ್ಲಿ ಒಬ್ಬಾತ ಆಕೆಗೆ ಹೇಳಿದ, 'ಹೆದರಿಕೋಬೇಡ. ನಿನ್ನ ಹೆಸರು ಸಕೀನಾ ಅಲ್ಲವೆ?' ಆಕೆ ಹೆದರಿಕೆಯಿಂದ ಬಿಳಿಚಿಕೊಂಡಿದ್ದಳು. ಅವರು ಯಾರೆಂಬುದನ್ನು ಆಕೆಗೆ ವಿವರಿಸಿ ಹೇಳಿದನಂತರ ಆಕೆ ಅಂಜಿಕೆಯಿಂದಲೇ ಒಪ್ಪಿಕೊಂಡಿದ್ದಳು, ತಾನು ಸಿರಾಜುದ್ದೀನನ ಮಗಳು ಸಕೀನಾ ಎಂಬುದನ್ನು.ಆ ಯುವಕರು ಕರುಣಾಮಯಿಗಳು. ಆಕೆಗೆ ಆಹಾರ ನೀಡಿದರು, ಕುಡಿಯಲು ಹಾಲು ಕೊಟ್ಟರು ಹಾಗೂ ತಮ್ಮ ಲಾರಿಯಲ್ಲಿ ಕರೆದೊಯ್ದರು. ಅವರಲ್ಲಿ ಒಬ್ಬಾತ ಅವಳು ತನ್ನ ಮೈಮುಚ್ಚಿಕೊಳ್ಳಲೆಂದು ತನ್ನ ಕೋಟನ್ನು ನೀಡಿದ್ದ. ಏಕೆಂದರೆ ಅವಳು ತನ್ನ ದುಪಟ್ಟಾ ಇಲ್ಲದೆ ಕಸಿವಿಸಿಗೊಂಡಿದ್ದಳು, ನಡುಗುತ್ತಾ ತನ್ನ ಎದೆಯನ್ನು ಕೈಗಳಿಂದ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಳು.

ಹಲವಾರು ದಿನಗಳೇ ಕಳೆದುಹೋದವು ಹಾಗೂ ಸಿರಾಜುದ್ದೀನನಿಗೆ ತನ್ನ ಮಗಳ ಸುದ್ದಿಯೇನೂ ತಿಳಿದುಬರಲಿಲ್ಲ. ಒಂದು ಕ್ಯಾಂಪಿನಿಂದ ಮತ್ತೊಂದು ಕ್ಯಾಂಪಿಗೆ ಅವಳನ್ನು ಹುಡುಕುತ್ತಾ ಓಡಾಡುವುದರಲ್ಲೇ ಅವನ ಸಮಯ ಕಳೆಯುತ್ತಿತ್ತು. ಪ್ರತಿ ರಾತ್ರಿ ತನ್ನ ಮಗಳನ್ನು ಹುಡುಕುತ್ತಿದ್ದ ಆ ಯುವಕರ ಪ್ರಯತ್ನ ಯಶಸ್ವಿಯಾಗಲೆಂದು ಪ್ರಾರ್ಥಿಸುತ್ತಿದ್ದ. ಅವರು ಹೇಳಿದ್ದ ಮಾತು ಅವನ ಕಿವಿಯಲ್ಲಿ ಗುಂಯ್ಗುಡುತ್ತಿತ್ತು: 'ನಿನ್ನ ಮಗಳು ಬದುಕಿದ್ದಲ್ಲಿ, ಖಂಡಿತಾ ಹುಡುಕಿ ತರುತ್ತೇವೆ'.ಅದೊಂದು ದಿನ ಆತ ಆ ಯುವಕರನ್ನು ಕಂಡ. ಅವರು ಇನ್ನೇನು ತಮ್ಮ ವಾಹನದಲ್ಲಿ ಹೊರಟುಬಿಡುತ್ತಿದ್ದರು. ಮಗನೇ', ಅವರಲ್ಲೊಬ್ಬಾತನನ್ನು ಕುರಿತು ಸಿರಾಜುದ್ದೀನ್ ಕೂಗಿದ, 'ಸಕೀನಾ, ನನ್ನ ಮಗಳು ಸಿಕ್ಕಳೆ?''ಹುಡುಕುತ್ತಿದ್ದೇವೆ, ಖಂಡಿತಾ ಹುಡುಕುತ್ತೇವೆ' ಒಕ್ಕೊರಲಿನಿಂದ ಅವರೆಲ್ಲಾ ಕೂಗಿದರು.ಆ ಯುವಕರಿಗಾಗಿ ಆ ಮುದುಕ ಮತ್ತೊಮ್ಮೆ ಪ್ರಾರ್ಥಿಸಿದ. ಆ ಪ್ರಾರ್ಥನೆಯಿಂದ ಅವನ ಮನಸ್ಸು ಹಗುರವೆನ್ನಿಸುತ್ತಿತ್ತು.ಆ ಸಂಜೆ ಕ್ಯಾಂಪಿನಲ್ಲಿ ಬಿರುಸಿನ ಚಟುವಟಿಕೆಗಳು ಕಂಡುಬಂದವು. ರೈಲ್ವೇ ಹಳಿಗಳ ಬಳಿ ಎಚ್ಚರ ತಪ್ಪಿ ಬಿದ್ದಿದ್ದ ಹುಡುಗಿಯನ್ನು ನಾಲ್ಕು ಜನ ಹೊತ್ತುಕೊಂಡು ಬಂದರು. ಅವರು ಕ್ಯಾಂಪಿನ ಆಸ್ಪತ್ರೆ ಎಲ್ಲಿದೆ ಎಂದು ವಿಚಾರಿಸುತ್ತಿದ್ದರು. ಸಿರಾಜುದ್ದೀನನಿಗೆ ತನ್ನ ಮಗಳ ನೆನಪಾಗಿ ಅವರನ್ನು ಯಾಂತ್ರಿಕವಾಗಿ ಹಿಂಬಾಲಿಸಿದ.ಅವರು ಆ ಹುಡುಗಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೊರಟುಹೋದರು. ಆತ ಆಸ್ಪತ್ರೆಯ ಹೊರಗೇ ಸ್ವಲ್ಪ ಹೊತ್ತು ನಿಂತಿದ್ದು ನಂತರ ನಿಧಾನವಾಗಿ ಒಳಹೊಕ್ಕ.ಮಬ್ಬುಗತ್ತಲ ಕೋಣೆ. ಕೋಣೆಯಲ್ಲಿ ಯಾರೂ ಕಾಣಲಿಲ್ಲ. ಆ ಕೋಣೆಯ ಮೂಲೆಯೊಂದರಲ್ಲಿ ಸ್ಟ್ರೆಚರ್ ಮೇಲೆ ಯಾರನ್ನೋ ಮಲಗಿಸಿದಂತಿತ್ತು. ಸಿರಾಜುದ್ದೀನ್ ನಿಧಾನವಾಗಿ ಆ ಸ್ಟ್ರೆಚರ್ ಬಳಿಗೆ ಹೆಜ್ಜೆ ಹಾಕಿದ. ಇದ್ದಕ್ಕಿದ್ದಂತೆ ಕೋಣೆಯ ಲೈಟ್‌ಗಳು ಹೊತ್ತಿಕೊಂಡವು. ಸ್ಟ್ರೆಚರ್ ಮೇಲೆ ಮಲಗಿಸಿದ್ದ ಹುಡುಗಿಯ ಎಡಗೆನ್ನೆಯ ಮೇಲೆ ಕಪ್ಪನೆ ಚಿಕ್ಕ ಮಚ್ಚೆ ಕಾಣಿಸಿತು. 'ಸಕೀನಾ', ತನಗರಿವಿಲ್ಲದೆ ಸಿರಾಜುದ್ದೀನ್ ಕೂಗಿದ.ಆಗ ತಾನೆ ಕೋಣೆಗೆ ಬಂದು ಲೈಟ್ ಹಾಕಿದ್ದ ಡಾಕ್ಟರ್ ಸಿರಾಜುದ್ದೀನನೆಡೆಗೆ ದುರುಗುಟ್ಟಿ ನೋಡಿದ.'ನಾನು... ನಾನು ಅಕೆಯ ತಂದೆ' ಸಿರಾಜುದ್ದೀನ್ ತೊದಲಿದ.ಅಂಗಾತ ಮಲಗಿದ್ದ ಹುಡುಗಿಯನ್ನು ನೋಡಿದ ಡಾಕ್ಟರ್ ಅವಳ ಕೈ ಹಿಡಿದು ನಾಡಿಮಿಡಿತ ಪರೀಕ್ಷಿಸಿದ. ಆ ನಂತರ ಸಿರಾಜುದ್ದೀನನೆಡೆಗೆ ನೋಡಿ ಕಿಟಕಿಯೆಡೆಗೆ ಕೈ ತೋರಿಸಿ, 'ಅದನ್ನು ತೆಗೆದುಬಿಡು' ಎಂದ.ಸ್ಟ್ರೆಚರ್ ಮೇಲೆ ಮಲಗಿದ್ದ ಹುಡುಗಿ ಮಿಸುಕಾಡಿದಳು. ಅವಳ ಕೈ ತನ್ನ ಸಲ್ವಾರ್‌ನ ಪೈಜಾಮಾದ ಲಾಡಿಯನ್ನು ಸಡಿಲಗೊಳಿಸಿತು.ಅತ್ಯಂತ ನೋವಿನಿಂದ ಎನ್ನುವಂತೆ ನಿಧಾನವಾಗಿ ಅದನ್ನು ಬಿಚ್ಚಿ ಕೆಳಕ್ಕೆ ಸರಿಸಿ ತೊಡೆ ಅಗಲಿಸಿದಳು.'ಬದುಕಿದ್ದಾಳೆ, ನನ್ನ ಮಗಳು ಬದುಕಿದ್ದಾಳೆ' ಮುದುಕ ಸಿರಾಜುದ್ದೀನ್ ಸಂತೋಷದಿಂದ ಕೂಗಿದ.

ಡಾಕ್ಟರ್‌ನ ಇಡೀ ಮೈ ಕಂಪಿಸಿತು, ದೇಹವೆಲ್ಲಾ ಬೆವರಿಟ್ಟಿತು.
******

ಈ ಕತೆ ಲಂಕೇಶ್ ಪ್ರಕಾಶನ'ದ ಮಾಂಟೋ ಕತೆಗಳು ಸಂಗ್ರಹದಲ್ಲಿಯೂ ಇದೆ:
ಪ್ರಕಾಶಕರು: ಲಂಕೇಶ್ ಪ್ರಕಾಶನ, ಇ.ಎ.ಟಿ. ರಸ್ತೆ, ಬಸವನಗುಡಿ, ಬೆಂಗಳೂರು.

Thursday, 10 May 2012

ಇಂದು ಸಾದತ್ ಹಸನ್ ಮಾಂಟೋ ಜನ್ಮಶತಮಾನೋತ್ಸವ ದಿನ



ಮೇ೧೧. ಇಂದು ಸಾದತ್ ಹಸನ್ ಮಾಂಟೋ ಜನ್ಮಶತಮಾನೋತ್ಸವ ದಿನ (ಮೇ ೧೧, ೧೯೧೨- ಜನವರಿ ೧೮, ೧೯೫೫) ಭಾರತ-ಪಾಕಿಸ್ತಾನ ಉಪಖಂಡ ಕಂಡಂತಹ ಮಹಾನ್ ಲೇಖಕ ಮಾಂಟೋ. ಭಾರತ- ಪಾಕಿಸ್ತಾನ ವಿಭಜನೆ ಕಾಲದ ಘೋರ ನರಹತ್ಯೆ ಮತ್ತು ಭೀಭತ್ಸಗಳನ್ನು ಮಾಂಟೋನಷ್ಟು ಹರಿತವಾಗಿ ಸಶಕ್ತವಾಗಿ ಬರೆದವರು ಮತ್ತೊಬ್ಬರಿಲ್ಲ. ಮಾಂಟೋ ಅವರಷ್ಟು ಪ್ರಸಿದ್ಧಿ ಪಡೆದ ಉರ್ದು ಕತೆಗಾರರಿಲ್ಲ. ಹಾಗೆಯೇ ಅವರಷ್ಟು ವಿವಾದಕ್ಕೊಳಗಾದವರೂ ಇಲ್ಲ. ’ಅಶ್ಲೀಲ’ ಸಾಹಿತ್ಯ ರಚಿಸಿದ್ದಕ್ಕಾಗಿ ಪಾಕಿಸ್ತಾನ ಸರ್ಕಾರ ಅವರ ವಿರುದ್ಧ ಕೇಸು ದಾಖಲಿಸಿತ್ತು. ಮಾಂಟೋ ತಮ್ಮ ಬದುಕನ್ನೇ ಕತೆಯಾಗಿಸಿದರು. ’ನನ್ನ ಅನಿಸಿಕೆಗಳು ಅಕ್ಷರದ ಉಡುಗೆ ತೊಟ್ಟರೂ ಹಸಿಹಸಿಯಾಗಿರುತ್ತವೆ’ ಎಂದ ಹೇಳುತ್ತಿದ್ದ ಮಾಂಟೋ ತಮ್ಮ ಹೃದಯದಾಳದ ನೋವು, ತಳಮಳ ಹಾಗೂ ರೋಷವನ್ನು ಕತೆಗಳ ಮೂಲಕ ಹೊರಹಾಕಿದರು. ಅದವರಿಗೆ ಅನಿರ್ವಾವೂ ಆಗಿತ್ತು. ದೇಶವಿಭಜನೆಯ ಕಾಲದಲ್ಲಿ ಮತಾಂಧತೆ ಹಾಗೂ ಅಧಿಕಾರದ ಹಪಾಹಪಿಗಳು ಹುಟ್ಟುಹಾಕಿದ ದುರಂತದಿಂದ ಜನಸಾಮಾನ್ಯರು ಹೇಗೆ ತತ್ತರಿಸಿದರೆಂಬುದನ್ನು ಅವರು ತಮ್ಮ ಬರಹಗಳಲ್ಲಿ ಕಾಣಿಸಿದ್ದಾರೆ. 

ದೇಶವಿಭಜನೆ ಮಾಂಟೀನಂತಹ ಸೂಕ್ಷ್ಮ ಮನಸ್ಸಿನ ಮಾನವತಾವಾದಿಯನ್ನು ’ಒಡೆದ ವ್ಯಕ್ತಿತ್ವ’ )ಸಿಜೋಫ್ರೇನಿಯಾ ದಂತಹ ಭಯಂಕರ ಮನೋರೋಗಕ್ಕೆ ದೂಡಿತು. ಮಾಂಟೋ ಅವರು ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋದರೂ ಅತ್ತ ಭಾರತದವರೂ ಆಗದ ಪಾಕಿಸ್ತಾನದವನೂ ಆಗದೆ ಗೊಂದಲದಲ್ಲಿ ಮುಳುಗಿಬಿಟ್ಟಿದ್ದರು. ಅವರ ಪ್ರಸಿದ್ಧ ಕತೆ ತೊ ಬಾಕ್ ತೇ ಸಿಂಗ್ (ಹುಚ್ಚರ ದರ್ಬಾರ್) ಕತೆಯಲ್ಲಿ ಅಂತಿಮವಾಗಿ ಭಾರತಕ್ಕೂ ಸೇರದ ಪಾಕಿಸ್ತಾನಕ್ಕೂ ಸೇರದ ’ನೋ ಮ್ಯಾನ್ ಲ್ಯಾಂಡ್’ ನಲ್ಲಿ ಪ್ರಾಣ ಬಿಡುವ ಹುಚ್ಚನ ಸ್ಥಿತಿಯೇ ಮಾಂಟೋನ ಬದುಕೂ ಆಗಿಬಿಟ್ಟಿತು. ಪಾಕಿಸ್ತಾನ ಸರ್ಕಾರ ಮಾಂಟೋರನ್ನು ಅಕ್ಷರಶಃ ಹುಚ್ಚಾಸ್ಪತ್ರೆಯಲ್ಲಿ ಇಟ್ಟಿತ್ತು. ಅಗಾಧ ಮಾನವಪ್ರೇಮಿ ಪಾಕಿಸ್ತಾನದಲ್ಲಿ ಅನಾಥರಾದರು. ಭಾರತದಲ್ಲೂ ಪರಕೀಯರೆನಿಸಿಕೊಂಡರು. 

ರಾಜಕಾರಣ ಹಾಗೂ ಧರ್ಮಗಳು ಹುಟ್ಟಿಸುವ ಕ್ರೌರ್ಯವನ್ನು ಮಾತ್ರ ಮಾಂಟೋ ಕತೆಗಳು ಹೇಳುವುದಿಲ್ಲ. ಅವು ಬದುಕಿನ ಅಪಾರ ಚೆಲುವನ್ನು ಕುರಿತೂ ಹೇಳುತ್ತವೆ. ಇದಕ್ಕೆ ಅವರ ’ಏಜಿದ್’ ಕತೆ ಸಾಕ್ಷಿ. 
ದೇಶ ವಿಭಜನೆಯಾಗಿ ಆರು ದಶಕಗಳ ನಂತರವೂ ಮತಾಂಧರೆ, ದೇಶ ದುರಭಿಮಾನಗಳಲ್ಲಿ ಮುಳುಗಿ ಹೋಗಿರುವ ಭಾರತೀಯರು, ಪಾಕಿಸ್ತಾನೀಯರು ಸಾದತ್ ಹಸನ್ ಮಾಂಟೋನನ್ನು ಅವರು ಪ್ರತಿಪಾದಿಸಿದ ದೇಶ-ಧರ್ಮಗಳನ್ನು ಮೀರಿದ ಮಾನವೀಯತೆಗಾಗಿ ನೆನಪಿಸಿಕೊಳ್ಳುವ ಜರೂರಿದೆ

- ಸಮಾನ


ಸಾದತ್ ಹಸನ್ರವರ ಕೆಲವು ಕಿರು ಕಥೆಗಳು ಇಂತಿವೆ:-


ಮಿಸ್ಟೇಕ್

ಚೂರಿ ಹೊಟ್ಟೆ ಇರಿಯುತ್ತಾ ಮೂಗಿನ ತುದಿ ತಲುಪಿತು. ಎವೆಯಿಕ್ಕುವುದರೊಳಗೆ ಅದು ಚೂರಿ ಹಿಡಿದವನ ಇಜಾರದ ಲಾಡಿಯನ್ನು ಕತ್ತರಿಸಿಬಿಟ್ಟಿತು. ತಕ್ಷಣ ಅವನ ಬಾಯಿಯಿಂದ ಹೊರಟ ವಿಷಾದದ ಶಬ್ದಗಳು: ಛೇ...ಛೇ.. ಮಿಸ್ಟೇಕ್ ಆಯಿತು! 


ವಿಶ್ರಾಂತಿಯ ಅವಶ್ಯಕತೆ
ಸತ್ತಿಲ್ಲ..... ನೋಡು ಇನ್ನೂ ಜೀವ ಐತಿ
ಹೋಗಲಿ ಬಿಡೋ ಮಾರಾಯ....ನನಗ ಸುಸ್ತಾಗಿ ಬಿಟ್ಟೈತಿ.

ದೂರು

ಏನೋ ಗೆಳೆಯ, ಬ್ಲಾಕ್ ಮಾರ್ಕೆಟ್ ರೇಡಿನಲ್ಲೇ ನ್ನನಿಂದ ಹಣ ಕಿತ್ತುಕೊಂಡೆ. ಆದರೆ ಪೆಟ್ರೋಲ್ ಎಷ್ಟ ಹೊಲಸ ಐತಲ್ಲೊ ಮಾರಾಯ. ಅದು ಒಂದು ಮನೆಯನ್ನೂ ಸುಡಲಿಲ್ಲ.



ಚಪ್ಪಲಿ

ಜನಸಮೂಹದ ದಿಕ್ಕು ಬದಲಾಯಿತು. ಜನ ಗಂಗಾರಾಮನ ಪುತ್ಥಳಿ ಮೇಲೆ ಹಠಾತ್ತನೇ ಎರಗಿದರು. ದೊಣ್ಣೇ ಬೀಸಿದರು. ಕಲ್ಲು ಇಟ್ಟಿಗೆಗಳನ್ನು ತೂರಿದರು. ಒಬ್ಬ ಮುಖಕ್ಕೆ ಡಾಂಬರ್ ಬಳಿದ. ಇನ್ನೊಬ್ಬ ಹಳೆಯ ಚಪ್ಪಲಿಗಳ ಹಾರ ಮಾಡಿ ಪುತ್ಥಳಿಯ ಕೊರಳಿಗೆ ಹಾಕಲು ಮುನ್ನುಗ್ಗಿದ. ಅಷ್ಟರಲ್ಲಿ ಪೊಲೀಸರು ಬಂದರು. ಗೋಳೀಬಾರ್ ಆಯಿತು.
ಚಪ್ಪಲಿ ಹಾರ ಹಾಕಬೇಕೆಂದುಕೊಂಡವ ಗಾಯಗೊಂಡ. ಹೀಗಾಗಿ ಚಿಕಿತ್ಸೆಗೆಂದು ಅವನನ್ನು ಸರ್ ಗಂಗಾರಾಮ ಆಸ್ಪತ್ರೆಗೆ ಸಾಗಿಸಲಾಯಿತು.


ಮೋಸ

ಇಬ್ಬರು ಗೆಳೆಯರು ಹತ್ತಿಪ್ಪತ್ತು ಯುವತಿಯರಲ್ಲಿ ಒಬ್ಬಳನ್ನು ಆಯ್ಕೆ ಮಾಡಿಕೊಂಡರು. ೪೨ ರೂಪಾಯಿ ಕೊಟ್ಟು ಖರೀದಿಸಿದರು. ರಾತ್ರಿ ಕಳೆದ ಮೇಲೆ ಒಬ್ಬ ’ನಿನ್ನ ಹೆಸರೇನು?’ ಎಂದು ಯುವತಿಯನ್ನು ಕೇಳಿದ.
ಯುವತಿ ತನ್ನ ಹೆಸರು ಹೇಳಿದೊಡನೆ ಅವನಿಗೆ ತುಂಬ ಬೇಸರವಾಯಿತು. ನೀನು ಬೇರೆ ಧರ್ಮದವಳೆಂದು ಅವನು ಹೇಳಿದ್ದನಲ್ಲ.
ಅವನು ಸುಳ್ಳು ಹೇಳಿದ್ದ ಆಕೆ ಉತ್ತರಿಸಿದಳು.
ಇದನ್ನು ಕೇಳುತ್ತಲೇ ಅವನು ಗೆಳೆಯನ ಬಳಿ ದಾವಿಸಿ ಹೋದ. ಅವನು ಹೀಗೆಂದ ಆ ಹರಾಮಖೋರ ನಮಗೆ ಮೋಸ ಮಾಡಿದ್ದಾನೆ. ನಮ್ಮ ಧರ್ಮದ ಹುಡುಗಿಯನ್ನೇ ನಮಗೆ ಮಾರಿದ್ದಾನೆ. ನಡೀ ವಾಪಸ್ಸು ಕೊಟ್ಟು ಬರೋಣ.



ಉಪಚಾರ

ಓಡುತ್ತಿದ್ದ ರೈಲನ್ನು ತಡೆಯಲಾಯಿತು. ಬೇರೆ ಧರ್ಮಕ್ಕೆ ಸೇರಿದವರನ್ನು ಹೊರಗೆ ಎಳೆದೆಳೆದು ಖಡ್ಗ ಹಾಗೂ ಬಂದೂಕಿನಿಂದ ಕೊಲ್ಲಲಾಯಿತು. ಈ ಕೆಲಸ ಪೂರೈಸಿದ ನಂತರ ಉಳಿದ ಪ್ರಯಾಣಿಕರಿಗೆ ಹಾಲು, ಹಣ್ಣು, ಹಲ್ವಾ ನೀಡಿ ಉಪಚರಿಸಲಾಯಿತು.
ರಲು ಹೊರಡುವುದಕ್ಕೆ ಮೊದಲು ಉಪಚಾರದ ವ್ಯವಸ್ಥೆ ಮಾಡಿದವನು ಪ್ರಯಾಣಿಕರನ್ನುದ್ದೇಶಿಸಿ ಹೀಗೆಂದ, ಸೋದರ ಸೋದರಿಯರೆ, ರೈಲಿನ ಆಗಮನದ ಬಗ್ಗೆ ನಮಗೆ ಮಾಹಿತಿ ಸ್ವಲ್ಪ ಮೊದಲೇ ಸಿಕ್ಕಿದ್ದರೆ ನಾವು ನಮಗೆ ತೃಪ್ತಿ ಎನಿಸುವಂತೆ ನಿಮಗೆ ಉಪಚರಿಸಬಹುದಿತ್ತು. ಅದಕ್ಕಾಗಿ ವಿಷಾದಿಸುತ್ತೇನೆ. 



ಪಶುತ್ವ

ದಂಪತಿಗಳು ಬಲು ಪ್ರಯಾಸದಿಂದ ತಮ್ಮ ಮನೆಯ ಒಂದಷ್ಟು ಸಾಮಾನುಗಳನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅವರಿಗೆ ಒಬ್ಬ ಹರೆಯದ ಮಗಳಿದ್ದಳು. ಆಕೆಯ ಸುಳಿವೇ ಸಿಗಲಿಲ್ಲ. ಪುಟ್ಟ ಹೆಣ್ಣು ಮಗುವೊಂದಿತ್ತು. ಅದನ್ನು ತಾಯಿ ಎದೆಗವಚಿಕೊಂಡಿದ್ದಳು. ಒಂದು ಬಿಳಿ ಎಮ್ಮೆ ಇತ್ತು. ಗಲಭೆಕೋರರು ಅದನ್ನು ಅಟ್ಟಿಸಿಕೊಂಡು ಹೋಗಿದ್ದರು. ಆಕಳು ಉಳಿದುಕೊಂಡಿತ್ತು. ಆದರೆ ಕರುವು ಕಾಣೆಯಾಗಿತ್ತು.
ಗಂಡ, ಹೆಂಡತಿ ಹಾಗೂ ಅವರ ಪುಟ್ಟ ಮಗು ಒಂದೆಡೆ ಅಡಗಿಕೊಂಡಿದ್ದರು ಆಕಳು ಸಹ ಅವರ ಜೊತೆಗೇ ಇತ್ತು. ಕಗ್ಗತ್ತಲ ರಾತ್ರಿ ಅದು. ಮಗು ಹೆದರಿ ಅಳಲಾರಂಭಿಸಿದಾಗ ಬಿಕೋ ಎನ್ನುತ್ತಿದ್ದ ಪರಿಸರದಲ್ಲಿ ಡೋಲು ಬಾರಿಸಿದಂತಾಯಿತು. ವೈರಿಗಳು ಕೇಳಿಯಾರೆಂದು ಹೆದರಿದ ತಾಯಿ ಮಗುವಿನ ಬಾಯಿ ಮೇಲೆ ಕೈ ಇಟ್ಟಳು. ದನಿ ತಗ್ಗಿತು. ಸುರಕ್ಷತೆಯ ದೃಷ್ಟಿಯಿಂದ ತಂದೆ ಹೊಲಸಾಗಿದ್ದ ದಪ್ಪ ಚಾದರನ್ನು ಅದರ ಮೇಲೆ ಹೊದಿಸಿದ.’
ಸ್ವಲ್ಪ ಸಮಯದ ನಂತರ ದೂರದಿಂದ ಒಂದು ಕರುವು ’ಅಂಬಾ’ ಎನ್ನುವ ಸದ್ದು ಕೇಳಿ ಬಂತು. ಆಕಳ ಕಿವಿಗಳು ನಿಮಿರಿ ನಿಂತವು, ಅದು ಎದ್ದು ಹುಚ್ಚೆದ್ದು ಅತ್ತಿತ್ತ ಓಡಾಡುತ್ತಾ ಒದರತೊಡಗಿತು. ಅದು ಒದರದಂತೆ ಮಾಡಲು ಎಷ್ಟು ಪ್ರಯತ್ನಿಸದರೂ ಪ್ರಯೋಜನವಾಗಲಿಲ್ಲ.
ಸದ್ದು ಕೇಳಿದ ವೈರಿಗಳು ಯಾವುದೇ ಕ್ಷಣದಲ್ಲಿ ಹಲ್ಲೆ ಮಾಡಬಹುದಿತ್ತು. ದೂರದಲ್ಲಿ ಪಂಜಿನ ಬೆಳಕು ಕಂಡಿತು. ಹೆಂಡತಿ ತನ್ನ ಗಂಡನ ಮೇಳೆ ಸಿಟ್ಟಿಗೆದ್ದು ಈ ಪೀಡಾ ದನ ನಿನಗ ಯಾಕ ಬೇಕಾಗಿತ್ತೋ? ಎಂದಳು

ಸೌಜನ್ಯ: ಸದ್ಯಕಿದು ಹುಚ್ಚರ ಸಂತಿ, ಅನುವಾದ: ಹಸನ್ ನಯೀಂ ಸುರಕೋಡ