Tuesday, 12 June 2012

ಇಂಗ್ಲೀಶ್ ಬಲ್ಲ, ಆದರೆ ಅರೆಬರೆ ಅರಿಮೆಯ ನಾಡು ಕಟ್ಟಬೇಕೇ?

ಆನಂದ್
ಕೃಪೆ:-ಬನವಾಸಿ ಬಳಗ ಬ್ಲಾಗ್ ಏನ್ ಗುರು ಕಾಫಿ ಆಯ್ತಾ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯಸರ್ಕಾರವು ಆರನೇ ತರಗತಿಯಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ತಾನೇ ಆರಂಭಿಸಲು ಮುಂದಾಗಿದೆ. ಈ ನಡೆಯು ಕನ್ನಡ ಮಾಧ್ಯಮ ಕಲಿಕೆಯ ಬಗ್ಗೆ ನಂಬಿಕೆಯಾಗಲೀ, ಈಗಿರುವ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಯೋಚನೆಯಾಗಲೀ ಸರ್ಕಾರಕ್ಕಿಲ್ಲವೆಂಬುವಂತಿದೆ. ಸರ್ಕಾರದ ಈ ನಡೆಯು ದೀರ್ಘಾವಧಿಯಲ್ಲಿ ನಾಡಿನ ಏಳಿಗೆಯನ್ನು ಮಣ್ಣುಪಾಲುಮಾಡಬಲ್ಲುದಾಗಿದೆ.

ರಾಜ್ಯಸರ್ಕಾರದ ಕನ್ನಡಪರತೆ!

೨೦೦೮ರಲ್ಲಿ ರೂಪುಗೊಂಡ ರಾಜ್ಯಸರ್ಕಾರವು ಕಲಿಕೆಯ ವಿಷಯದಲ್ಲಿ ಮೊದಲಿನಿಂದಲೂ ಕನ್ನಡ ವಿರೋಧಿಯನ್ನು ಧೋರಣೆಯನ್ನು ತೋರಿಸುತ್ತಿರುವ ಅನುಮಾನವಿದೆ. ಎರಡುವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿಶಾಲೆಯನ್ನು ಭಾರತೀಯ ವಿದ್ಯಾಭವನ ಎನ್ನುವ ಖಾಸಗಿ ಸಂಸ್ಥೆಗೆ ಕೇಂದ್ರೀಯ ಪಠ್ಯಕ್ರಮದ ಆಂಗ್ಲಮಾಧ್ಯಮ ಶಾಲೆಯನ್ನು ನಡೆಸಲು ಒಪ್ಪಿಸಿಬಿಟ್ಟಿತು. ಆ ಮೂಲಕ ರಾಜ್ಯಸರ್ಕಾರದ ಪಠ್ಯಕ್ರಮದಲ್ಲಿ ತನಗೆ ನಂಬಿಕೆ ಇಲ್ಲವೆಂಬುದನ್ನು ತೋರಿಸಿಕೊಂಡಿತ್ತು. ಹೀಗೆ ನಡೆದುಕೊಳ್ಳಲು “ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು” ಎನ್ನುವ ಕಾರಣವನ್ನು ನೀಡಿತ್ತು. ಇದಾದ ಕೆಲದಿನಗಳಲ್ಲೇ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂದು ಸುಮಾರು ಮೂರು ಸಾವಿರ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಮುಂದಾಯಿತು. ಈ ಬಗ್ಗೆ ಜನರಿಂದ ವಿರೋಧ ಬಂದಾಗ “ಮುಚ್ಚುವಿಕೆ ಅಲ್ಲಾ... ಹತ್ತಿರದ ಶಾಲೆಯೊಂದಿಗೆ ವಿಲೀನ” ಎಂದಿತು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಯಾಕೆ ಕಡಿಮೆ? ಎನ್ನುವುದಕ್ಕೆ “ಹಳ್ಳಿಗಳಿಂದ ನಗರಗಳಿಗೆ ಜನರು ವಲಸೆ ಹೋಗುತ್ತಿದ್ದಾರೆ” ಎಂದಿತು. “ಹಾಗಾದರೆ ಹಳ್ಳಿಗಾಡಿನ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೇಗೆ ಹೆಚ್ಚುತ್ತಿದೆ?” ಎನ್ನುವ ಪ್ರಶ್ನೆಗೆ ಉತ್ತರವಿಲ್ಲದಾಯ್ತು. ಸರ್ಕಾರಿ ಶಾಲೆಗಳನ್ನು ಮುಚ್ಚಲು ಮಕ್ಕಳ ಸಂಖ್ಯೆ ಐದಕ್ಕಿಂತಾ ಕಡಿಮೆಯಿದೆ ಎನ್ನುವ ಕಾರಣ ನೀಡುತ್ತಾ “ಇದು ಕೇಂದ್ರಸರ್ಕಾರದ ಆದೇಶ, ನಮ್ಮ ತಪ್ಪೇನೂ ಇಲ್ಲಾ” ಎಂದು ತಿಪ್ಪೆ ಸಾರಿಸಲಾಯಿತು. ಇಷ್ಟೇ ಅಲ್ಲದೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳನ್ನು ಆರಂಭಿಸಲು ಇರುವ ಕಟ್ಟುಪಾಡುಗಳನ್ನೆಲ್ಲಾ ಗಾಳಿಗೆ ತೂರಿ ನಿರಾಕ್ಷೇಪಣಾ ಪತ್ರಗಳನ್ನು ನೀಡುವುದನ್ನು ಮುಂದುವರೆಸಲಾಯಿತು, ಇದು ಬೀದಿಗೊಂದು ಕೇಂದ್ರಪಠ್ಯಕ್ರಮದ ಶಾಲೆ ಆರಂಭವಾಗಲು ಕಾರಣವಾಯಿತು. ಇವಿಷ್ಟೂ ಒಂದು ಹಂತದ ಕಥೆಯಾದರೆ ಈಗಿನದ್ದು ಮತ್ತೊಂದು.

ಹೊಸ ನಿರ್ಧಾರ!

ಈಗ ರಾಜ್ಯಸರ್ಕಾರದ ೩೪೧ ಶಾಲೆಗಳಲ್ಲಿ ಆಂಗ್ಲಮಾಧ್ಯಮವನ್ನು ಶುರುಮಾಡಲು ಮುಂದಾಗಿದೆ. “ಇದಕ್ಕೆ ಜನರಿಂದ ಬೇಡಿಕೆಯಿದೆ, ಬಡಮಕ್ಕಳು ಖಾಸಗಿ ಶಾಲೆಗಳನ್ನು ಸೇರಲಾಗದ ಕಾರಣದಿಂದ ಆಂಗ್ಲಮಾಧ್ಯಮದಲ್ಲಿ ಕಲಿಯುವುದರಿಂದ ವಂಚಿತರಾಗಬಾರದು, ಇದು ರಾಜ್ಯಸರ್ಕಾರದ ಭಾಷಾನೀತಿಯನ್ನು ಉಲ್ಲಂಘಿಸುತ್ತಿಲ್ಲಾ” ಇತ್ಯಾದಿ ಕಾರಣಗಳನ್ನು ಕೊಡಲಾಗುತ್ತಿದೆ. ಕರ್ನಾಟಕದ ಭಾಷಾನೀತಿ ಕನ್ನಡ ಮಾಧ್ಯಮದಲ್ಲಿನ ಕಲಿಕೆಯನ್ನು ೫ನೇ ತರಗತಿಯವರೆಗೆ ಕಡ್ಡಾಯ ಮಾಡಿರುವುದನ್ನು “ಕನಿಷ್ಠ ೫ನೇ ತರಗತಿಯವರೆಗೆ” ಎಂದು ಪರಿಗಣಿಸದೇ “ಗರಿಷ್ಠ ೫ನೇ ತರಗತಿಯವರೆಗೆ” ಎಂದು ಸರ್ಕಾರ ಪರಿಗಣಿಸಿದಂತಿದೆ.

ಕನ್ನಡದ ಬಗ್ಗೆ ಕನ್ನಡಸರ್ಕಾರಕ್ಕೇ ನಂಬಿಕೆಯಿಲ್ಲ!

ಇದೆಲ್ಲದರ ಅರ್ಥವು ನೇರವೂ ಸರಳವೂ ಆಗಿದೆ. ಕನ್ನಡನಾಡಿನ ಭವಿಷ್ಯ ರೂಪಿಸಲು ಅಗತ್ಯವಾಗಿರುವ ’ಕನ್ನಡಿಗರ ಕಲಿಕೆ’ಗೆ ‘ಕನ್ನಡ ನುಡಿ’ ಯೋಗ್ಯವಾಗಿದೆ ಎನ್ನುವ ನಂಬಿಕೆಯೇ ಸರ್ಕಾರಕ್ಕಿಲ್ಲ. ಈಗಿರುವ ಕಲಿಕೆ ಏರ್ಪಾಟಿನಲ್ಲಿರುವ ಕುಂದುಕೊರತೆಗಳನ್ನು ನೀಗಿಸಿಕೊಂಡು “ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿರುವ, ಅತ್ಯುತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ”ಯನ್ನು ಕಟ್ಟಬೇಕೆಂಬ ಸಣ್ಣ ಹಂಬಲವೂ ಸರ್ಕಾರಕ್ಕಿರುವಂತೆ ತೋರುತ್ತಿಲ್ಲ. ಬದಲಾಗಿ ಕನ್ನಡಕ್ಕೆ ಕಲಿಕಾ ಮಾಧ್ಯಮವಾಗುವ ಯೋಗ್ಯತೆಯಿಲ್ಲಾ ಎಂದೂ, ಕನ್ನಡಿಗರಿಗೆ ಆಂಗ್ಲಮಾಧ್ಯಮದಲ್ಲಿನ ಕಲಿಕೆಯೇ ಒಳಿತೆಂದೂ ತಿಳಿದಿರುವಂತಿದೆ. ಪ್ರಪಂಚದಲ್ಲಿ “ತಾಯ್ನುಡಿಯಲ್ಲಿ ಕಲಿಕೆ ನೀಡುವುದೇ ಅತ್ಯುತ್ತಮ” ಎನ್ನದಿರುವ ಯಾವುದಾದರೂ ನಾಡಿದ್ದರೆ ಬಹುಶಃ ಅದು ನಮ್ಮದೇ! ವೈಜ್ಞಾನಿಕ ಅಧ್ಯಯನಗಳು, ವಿಶ್ವಸಂಸ್ಥೆಯ ಅಂಗವಾಗಿರುವ ಯುನೆಸ್ಕೋ ನಿಲುವುಗಳೆಲ್ಲವೂ ಈ ಬಗ್ಗೆ ಸ್ಪಷ್ಟವಾಗಿ ಏನನ್ನು ಹೇಳುತ್ತಿವೆಯೋ ಅದು ನಮ್ಮ ಸರ್ಕಾರಕ್ಕೆ ಮನವರಿಕೆಯಾಗಿಲ್ಲ. ಬದಲಾಗಿ ಯಾರದೋ ಮಕ್ಕಳು - ಮೊಮ್ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿರುವುದನ್ನು ಎತ್ತಿ ತೋರಿಸುತ್ತಾ... ಕೆಲವರ ಆಯ್ಕೆಯ ಉದಾಹರಣೆಯನ್ನು ರಾಜ್ಯಸರ್ಕಾರದ ನೀತಿ-ನಿಲುವನ್ನು ರೂಪಿಸಲು, ಸಮರ್ಥಿಸಿಕೊಳ್ಳಲು ಬಳಸುತ್ತಿರುವುದು ದುರಂತ.

ಕೈಬಿಡಲಿ ಭಾಷಾನೀತಿಯನ್ನು!

ಸರ್ಕಾರ ಈಗಿನ ನಂಬಿಕೆಯನ್ನೇ ಖಚಿತವಾಗಿ ಹೊಂದಿದ್ದರೆ ತನ್ನ ಭಾಷಾನೀತಿಯನ್ನೂ, ಶಿಕ್ಷಣನೀತಿಯನ್ನು ಬದಲಾಯಿಸಲಿ. ಯಾಕಾಗಿ ಆರನೇ ತರಗತಿಯಿಂದ ಆಂಗ್ಲಮಾಧ್ಯಮ ಶುರುವಾಗಬೇಕು? ಅದು ಒಂದನೇ ತರಗತಿಯಿಂದಲೇ ಆಗಲಿ. ಕನ್ನಡದ ಮಕ್ಕಳನ್ನು ಕನ್ನಡದಿಂದ ದೂರ ಮಾಡುವ ಕಲಿಕಾ ವ್ಯವಸ್ಥೆಯನ್ನು ಕಟ್ಟುತ್ತಿರುವ ಸರ್ಕಾರಕ್ಕೆ ಸುಮ್ಮನೆ ಕನ್ನಡಪರ ಸರ್ಕಾರ ಎಂದು ತೋರಿಸುವ ಹಂಬಲವೇಕೆ? ಕನ್ನಡ ಅಭಿವೃದ್ಧಿ ಪ್ರಾಧಿಕಾರವೇಕೆ? ಆಡಳಿತ ಭಾಷೆಯಾಗಿ ಕನ್ನಡ ಏಕೆ? ಕನ್ನಡ ಸಂಸ್ಕೃತಿ ಇಲಾಖೆ ಏಕೆ? ವಾರ್ಷಿಕ ಪ್ರಶಸ್ತಿಗಳೇಕೆ? ಕನ್ನಡದ ಜಾತ್ರೆಗಳೇಕೇ? ಸುಮ್ಮನೇ ತೆರಿಗೆ ಹಣ ಪೋಲು ಮಾಡುವುದಾದರೂ ಏಕೆ? ಕನ್ನಡದಿಂದ ಜ್ಞಾನಾರ್ಜನೆ ಅಸಾಧ್ಯವೆನ್ನುವ, ಕನ್ನಡದಿಂದ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ, ಕನ್ನಡದಲ್ಲಿ ಉನ್ನತ ಕಲಿಕೆ ಸಾಧ್ಯವಿಲ್ಲ, ಉದ್ಯೋಗಾವಕಾಶ ಸಾಧ್ಯವಿಲ್ಲ ಎನ್ನುವ ನಂಬಿಕೆ ನಮ್ಮ ಸರ್ಕಾರಕ್ಕಿರುವುದಾದರೆ… ನಾಡಿನ ಜನರ ಒಳಿತು ಆಂಗ್ಲಮಾಧ್ಯಮದ ಕಲಿಕೆಯಿಂದಲೇ ಎನ್ನುವುದಾದರೆ ಅದನ್ನೇ ಮಾಡಲಿ.

ಬೇಕು ಏಳಿಗೆಗೆ ಸಾಧನ

ಈಗಿನ ಕರ್ನಾಟಕ ರಾಜ್ಯಸರ್ಕಾರ ಮುಂದಿನ ಗೊತ್ತುಗುರಿಯಿಲ್ಲದೆ ತೀರಾ ಹತ್ತಿರದ ನೋಟ ಹೊಂದಿದ್ದು ನಾಡಿನ ಕಲಿಕಾ ವ್ಯವಸ್ಥೆಯನ್ನು ಶಾಶ್ವತವಾಗಿ ಹಾಳುಗೆಡವುವ ಕ್ರಮಕ್ಕೆ ಮುಂದಾಗಿದೆ ಮತ್ತು ಮುಂದೆ ಇದರಿಂದಾಗಿ ಕನ್ನಡ ಜನಾಂಗಕ್ಕಾಗುವ ಹಾನಿಗೆ ಸರ್ಕಾರವೇ ಹೊಣೆಯಾಗಿದೆ. ಒಂದು ಒಳ್ಳೆಯ ಕಲಿಕಾ ವ್ಯವಸ್ಥೆಯನ್ನು ಕಟ್ಟಲು ಶ್ರಮಿಸಬೇಕಾಗಿದ್ದ ಸರ್ಕಾರವು ಈ ರೀತಿ ಅರೆನುರಿತ ಕ್ರಮಗಳನ್ನು ತೆಗೆದುಕೊಳ್ಳುವುದು ನಾಡಿಗೆ ಒಳಿತಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವತ್ತ ಗಮನಹರಿಸಬೇಕಾಗಿರುವ ಜೊತೆಯಲ್ಲೇ ಖಾಸಗಿ ಶಾಲೆಯಾದರೂ ಕನ್ನಡ ಮಾಧ್ಯಮವಾಗಿದ್ದಲ್ಲಿ ಅವುಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕಾಗಿದೆ. ಬದಲಾಗಿ ನಮ್ಮ ರಾಜ್ಯಸರ್ಕಾರವು ಕನ್ನಡ ಶಾಲೆಗಳನ್ನೇ ಮುಚ್ಚುವುದರಿಂದಾಗಲೀ, ಕಲಿಕಾ ಮಾಧ್ಯಮವನ್ನೇ ಬದಲಾಯಿಸುವುದರಿಂದಾಗಲೀ ಯಾವುದೇ ಉಪಯೋಗವಿಲ್ಲ. ಇಂಗ್ಲೀಶ್ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳು ಇಂಗ್ಲೀಶ್ ಭಾಷೆಯನ್ನರಿತ ಆದರೆ ಅರಿಮೆಯ ವಿಷಯಗಳನ್ನು ಅರೆಬರೆ ತಿಳಿದ ಪೀಳಿಗೆಯಾಗಿಬಿಡುವ ಅಪಾಯವಿದೆ. ನಮ್ಮ ನಾಡಿಗೆ ಬೇಕಿರುವುದು, ಅರಿಮೆಯ ವಿಷಯಗಳನ್ನು ಚೆನ್ನಾಗಿ ತಿಳಿದ, ಕನ್ನಡದ ಜೊತೆಗೆ ಇಂಗ್ಲೀಶನ್ನೂ ಬಲ್ಲ ಜನರು. ನಮಗೆ ಬೇಕಿರುವುದು ಸಮಾನ ಶಿಕ್ಷಣದ ಕನ್ನಡ ಮಾಧ್ಯಮದ ಸಮುದಾಯ ಶಾಲೆಗಳು.

88 ವರ್ಷಗಳ ನಂತರ ಸಮಾಧಿ ಸೇರಲಿದೆ ಲೆನಿನ್ ಕಳೇಬರ!



ಲಂಡನ್: ಕಾಯ ಅಳಿದರೂ ಕಾರ್ಯ ಉಳಿಯುವುದು ಎಂಬ ಮಾತು ಜನಜನಿತ. ಆದರೆ ಸೋವಿಯತ್ ರಷ್ಯಾದ ಕ್ರಾಂತಿಕಾರಿ ನಾಯಕ ವ್ಲಾದಿಮಿರ್ ಲೆನಿನ್ ವಿಷಯಕ್ಕೆ ಬಂದಾಗ ಕಾರ್ಯದೊಂದಿಗೆ ಕಾಯವೂ ಉಳಿದಿರುವುದು ಮಾತ್ರ ಸೋಜಿಗ!


ಲೆನಿನ್ ಮೃತಪಟ್ಟು 88 ವರ್ಷಗಳಾದರೂ ಅವರ ಕಳೇಬರಕ್ಕೆ ಇನ್ನೂ ಅಂತ್ಯಕ್ರಿಯೆ ನಡೆದಿಲ್ಲ. 1924ರಲ್ಲಿ 53ನೆಯ ವಯಸ್ಸಿನಲ್ಲಿ ನಿಧನರಾದ ಲೆನಿನ್‌ರ ಮೃತದೇಹವನ್ನು ಶವಸಂಸ್ಕಾರ ಮಾಡದೆ ಮಾಸ್ಕೊದ ರೆಡ್ ಸ್ಕೇರ್‌ನ ಸಮಾಧಿಯಲ್ಲಿ ಕಳೆದ 88 ವರ್ಷಗಳಿಂದ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ.

ಪುತಿನ್ ಸರಕಾರದಲ್ಲಿ ನೂತನ ಸಾಂಸ್ಕೃತಿಕ ಸಚಿವರಾಗಿರುವ ವ್ಲಾಡಿಮಿರ್ ಮೆಡಿಂಸ್ಕಿ ಲೆನಿನ್ ಶವ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಲೆನಿನ್ ಶವ ಸಂಸ್ಕಾರಕ್ಕೆ ತಯಾರಿ ನಡೆಯುತ್ತಿದ್ದು ಪೂರ್ಣ ಪ್ರಮಾಣದ ಸರಕಾರಿ ಮರ್ಯಾದೆಗಳೊಂದಿಗೆ ಅಂತ್ಯಕ್ರಿಯೆ ನಡೆಯಬೇಕು ಎಂದು ಹೇಳಿದ್ದಾರೆ. ಲೆನಿನ್ ಅಪೇಕ್ಷೆಯಂತೆಯೇ ಸಾಮಾನ್ಯ ಸಮಾಧಿಯಲ್ಲಿ ಶವ ಸಂಸ್ಕಾರ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

'ಈ ಕಾಲಕ್ಕೆ ಅನುಗುಣವಾಗಿ ಸ್ವಲ್ಪ ಮಟ್ಟಿನ ಬದಲಾವಣೆಯಾಗಬಹುದು. ಸಂಭಾವ್ಯ ಟೀಕೆಗಳನ್ನು ತಪ್ಪಿಸಲು ಎಚ್ಚರಿಕೆಯಿಂದ ಅಂತ್ಯಕ್ರಿಯೆ ನಡೆಸಲಾಗುವುದು. ಲೆನಿನ್ ಸಮಾಧಿ ಸೋವಿಯತ್‌ನ ಪಾರಂಪರಿಕ ತಾಣವಾಗಲಿದೆ ಎಂದು ಹೇಳಿದ್ದಾರೆ. ಕ್ರೆಮ್ಲಿನ್‌ನ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಲೆನಿನ್ ತಾಯಿ ಸಮಾಧಿ ಬಳಿಯೇ ಲೆನಿನ್ ಸಮಾಧಿಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

Tuesday, 5 June 2012

ಹೂ ಜೊತೆಗೆ ನಾರು...

ಕೃಪೆ:-ಗಿರೀಶ್ ಕೆ ಅವರ ಬಯಲಬಿತ್ತಿ ಬ್ಲಾಗ್


ಅಮೀರ್ ಖಾನ್ನ ಸತ್ಯಮೇವ ಜಯತೇ' ಕಾರ್ಯಕ್ರಮ ಜಡ್ಡುಗಟ್ಟಿರುವ ಭಾರತದ ಮಧ್ಯಮ ವರ್ಗದ ಮನಸ್ಸುಗಳನ್ನು ಅಲ್ಲಾಡಿಸಲು ಶುರು ಮಾಡಿದೆ. ಜೊತೆಗೇ ಕಳೆದುಹೋಗಿರುವ ಟಿವಿ ಚಾನೆಲ್ಗಳ ಬದ್ಧತೆಯನ್ನೂ ಹುಡುಕಿ ತಂದು ಕನ್ನಡಿಯಂತೆ ಮುಖಕ್ಕೆ ಹಿಡಿಯುತ್ತಿದೆ.

ಇಂಥಾ ಹೊತ್ತಲ್ಲೇ ಅಮೀರ್ ಖಾನ್ ಜೊತೆಗೆ ಕಾರ್ಯಕ್ರಮದ ಸಾಚಾತನವನ್ನೇ ಸಿನಿಕತನದಿಂದ ಹೀಗೆಳೆಯುವ ಪ್ರಯತ್ನಗಳೂ ಶುರುವಾಗಿವೆ. ಡಬ್ಬಿಂಗ್ ಇಲ್ಲದೆ ಕನರ್ಾಟಕದಲ್ಲೂ ಆಪಾರವಾಗಿ ನೋಡುಗರನ್ನು ಸೃಷ್ಟಿಸಿಕೊಂಡಿರುವ ಕಾರ್ಯಕ್ರಮವನ್ನು ಹೊಟ್ಟೆಕಿಚ್ಚಿನ ಕಾರಣಕ್ಕೆ ವಿರೋಧಿಸುವ ಗೊಡ್ಡುಗಳೂ ಹುಟ್ಟುಕೊಂಡಿದ್ದಾರೆ. ಅಲ್ಲದೆ ಅಮೀರ್ ಖಾನ್ನ ವಾಣಿಜ್ಯ ಉದ್ದೇಶ ಹಾಗೂ ಶೋನ ನಾಟಕೀಯತೆಯನ್ನು ಬೊಟ್ಟು ಮಾಡಿ, ಕಾರ್ಯಕ್ರಮದ ಒಟ್ಟಾರೆ ಪರಿಣಾಮ ಮತ್ತು ಫಲಿತಾಂಶವನ್ನು ಮರೆಮಾಚುವ ಪ್ರಯತ್ನಗಳೂ ಶುರುವಾಗಿವೆ.

ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸೈದ್ಧಾಂತಿಕ ಚರ್ಚೆಯ ಚೌಕಟ್ಟಿನಲ್ಲಿ ನಿರ್ದೇಶಕ ಬಿ.ಸುರೇಶ್ ಮತ್ತು ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಗಂಗಾಧರ್ ಮೊದಲಿಯಾರ್ ಅವರು ಎತ್ತಿರುವ ಪ್ರಶ್ನೆಯನ್ನು ನಿಷ್ಠುರವಾಗಿ ಚರ್ಚಿಸಲೇಬೇಕಿದೆ.

ಇವರಿಬ್ಬರ ವಾದದಲ್ಲೂ ಸಾಮಾನ್ಯವಾಗಿದ್ದ ಸಂಗತಿ ಅಂದರೆ ಕನ್ನಡದಲ್ಲೂ ಕೂಡಾ ಇಂತಹ ಕಾರ್ಯಕ್ರಮ ಈಗಾಗಲೇ ಮಾಳವಿಕಾ ಮತ್ತು ಶಿವರಾಜ್ಕುಮಾರ್ ಅವರು ನಡೆಸಿಕೊಟ್ಟಿದ್ದಾರೆ ಅನ್ನುವುದು ಮೊದಲನೆಯದು.ಸತ್ಯಮೇವ ಜಯತೇ'ಯಲ್ಲೂ ವಾಣಿಜ್ಯ ಉದ್ದೇಶಗಳಿವೆ. ಸಾಮಾಜಿಕ ಕಳಕಳಿ ಕಾಣುವುದಿಲ್ಲ. ಲಾಭಕ್ಕಾಗಿ ವಾಸ್ತವವನ್ನು ನಾಟಕೀಯಗೊಳಿಸಿ ಸಮಸ್ಯೆಯನ್ನು ಪರಿಹಾರ ಇಲ್ಲದೆ ಸರಳೀಕೃತಗೊಳಿಸಲಾಗುತ್ತಿದೆ ಅನ್ನುವುದು ಎರಡನೆಯದು.
ಅಮೀರ್ ಖಾನ್ ಜೊತೆಗೆ ಮಾಳವಿಕಾ ಅವರನ್ನು ಹೋಲಿಸಿರುವುದೇ ಅಸಹ್ಯ. ಏಕೆಂದರೆ ಮಾಳವಿಕಾ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಅವರೊಬ್ಬ ನಿರೂಪಕಿ ಅಷ್ಟೇ. ಕುಟುಂಬದ ಸಮಸ್ಯೆಗೆ ಸಾಮಾಜಿಕವಾಗಿ ಪರಿಹಾರ ಕಂಡುಹಿಡಿಯುವ ಕನಿಷ್ಠ ಪ್ರಯತ್ನವನ್ನೂ ಮಾಡದೆ ನಾಲ್ಕು ಗೋಡೆ ಯೊಳಗಿದ್ದುದನ್ನು ಬೀದಿಗೆ ತಂದು ಹಾದಿರಂಪ ಮಾಡಿದಂತಿತ್ತು ಅವರ ಕಾರ್ಯಕ್ರಮ. ಅದೆಷ್ಟೇ ಹೃದಯ ಹಿಂಡುವ ಸಮಸ್ಯೆ ಇದ್ದರೂ ಮಾಳವಿಕಾ ಅವರ ಗ್ಲಾಮರ್ ಕೊಂಚವೂ ಕಡಿಮೆಯಾಗದಂತೆ ಒಂದೂವರೆ ಕೆಜಿ ರೇಷ್ಮೆ ಸೀರೆ, ಮೇಕಪ್, ಲಿಪ್ಸ್ಟಿಕ್ ಸಮೇತ ಆ ಚಾನೆಲ್ ಅವರನ್ನು ನಿರೂಪಕಿಯಾಗಿ ಪ್ರದರ್ಶಿಸಿತ್ತು. ಇದರ ಆಚೆಗೆ ಕಾರ್ಯಕ್ರಮಕ್ಕೆ ಸಾಮಾಜಿಕ ಪ್ರಸ್ತುತತೆಯೇ ಇರಲಿಲ್ಲ.

ಅಮೀರ್ ಖಾನ್ ಎತ್ತಿಕೊಂಡಿರುವ ಸಮಸ್ಯೆಗಳು ಯಾರಿಗೂ ಗೊತ್ತಿಲ್ಲದ್ದಲ್ಲ. ಹಾಗೆಯೇ ಯಾರು ಬೇಕಾದರೂ ಕಾರ್ಯಕ್ರಮ ಮಾಡಬಹುದಾದದ್ದು. ಆದರೆ ಅದಕ್ಕೆ ಬೇಕಾಗಿರುವ ಇಚ್ಛಾಶಕ್ತಿ, ಅಧ್ಯಯನಶೀಲತೆ, ಕಾಳಜಿ ಮತ್ತು ಪರಿಣಾಮಕಾರಿಯಾಗಿ ಜನರನ್ನು ಮುಟ್ಟಿಸಲು ಬೇಕಾದ ಕಲಾವಂತಿಕೆ. ಇದಿಷ್ಟನ್ನೂ ಅಮೀರ್ ಖಾನ್ ತನ್ನ ತಂಡದ ಸಮೇತ ಜಾರಿಗೊಳಿಸಿದ್ದಾನೆ.
ತನ್ನ ಸ್ಟಾರ್ಗಿರಿಯನ್ನು ಸಾಮಾಜಿಕ ಹೋರಾಟ ವಾಗಿ, ಸಾಮಾಜಿಕ ಚಟುವಟಿಕೆಯಾಗಿ ಪರಿವರ್ತಿಸುತ್ತಿರುವುದು ಅಮೀರ್ ಖಾನ್ನ ಹೆಗ್ಗಳಿಕೆ. ತನ್ನ ಸಿನಿಮಾಗಳಲ್ಲಿ ಮಾತ್ರವಲ್ಲದೆ, ವೈಯಕ್ತಿಕವಾಗಿಯೂ ನರ್ಮದಾ ಹೋರಾಟ, ಹಜಾರೆ ಉಪವಾಸಗಳಲ್ಲಿ ಪ್ರಚಾರವಿಲ್ಲದೆ ಭಾಗವಹಿಸಿ ಈಗಾಗಲೇ ತನ್ನನ್ನು ಸಾಬೀತುಗೊಳಿಸಿಕೊಂಡಿರುವ ಸ್ಟಾರ್, ಅಮೀರ್.ಸತ್ಯಮೇವ ಜಯತೇ' ಹೇಳುತ್ತಿರುವ ಸತ್ಯವನ್ನೇ ಪತ್ರಕರ್ತ ಪಿ.ಸಾಯಿನಾಥ್, ಅರುಂಧತಿ ರಾಯ್ ಅವರೂ ಹಲವು ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ಆದರೆ ಅವರ ಮಾತು ಮತ್ತು ಮಾಧ್ಯಮ ಎಷ್ಟು ಜನರಿಗೆ ತಲುಪಿದೆ? ಹಾಗಂದ ಮಾತ್ರಕ್ಕೆ ಅವರು ಸಂವೇದನಾ ಶೀಲರಲ್ಲ, ಕಾಳಜಿಯುಳ್ಳವರಲ್ಲ ಎಂದು ಹೇಳಲಾಗುತ್ತದೆಯೇ?

ಅಮೀರ್ನ ಶ್ರೀಮಂತಿಕೆ ಇರುವುದು ಇಲ್ಲೇ. ಸತ್ಯವನ್ನು ತಲುಪಿಸಬೇಕಾಗಿ ರುವ ಜನಕ್ಕೆ ತಲುಪಿಸಬೇಕಾದ ರೀತಿಯಲ್ಲಿ ತಲುಪಿಸಿರುವ ಕಾರಣಕ್ಕೇ ಕಾರ್ಯಕ್ರಮ ಸಾರ್ಥಕತೆ ಕಂಡು ಕೊಂಡಿರುವುದು. ಅಮೀರ್ ಖಾನ್ ಸಾಯಿನಾಥ್, ಅರುಂಧತಿ ರಾಯ್ ರಷ್ಟು ಅಣ್ಣಾ ಹಜಾರೆ ಪ್ರಬುದ್ಧರಲ್ಲ. ಬುದ್ಧಿವಂತರೂ ಅಲ್ಲ. ಆದರೆ ಅತ್ಯಂತ ಸರಳವಾಗಿ ಬದುಕಿರುವ ಒಳ್ಳೆಯ ಮನುಷ್ಯ. ಹೆಚ್ಚಿನ ಮಾತಿಲ್ಲದೆ ಮೌನದಲ್ಲೇ ದೇಶವನ್ನು ಅಲ್ಲಾಡಿಸಿ ಬಿಡಲಿಲ್ಲವೇ?

ಇದರ ಅರ್ಥ ಇಷ್ಟೇ. ಜನಸಾಮಾನ್ಯರಿಗೆ ಒಣ ಸಿದ್ಧಾಂತ, ಪಾಂಡಿತ್ಯದ ಪ್ರಹಾರ ಬೇಕಿಲ್ಲ. ಅತೀ ಸರಳವಾಗಿ ಅವರ ಹೃದಯ ಮುಟ್ಟುವಂತೆ ಅವರನ್ನು ಕಾಡುತ್ತಿರುವ ನೋವನ್ನು, ಅದರ ಹಿಂದಿರುವ ಹುನ್ನಾರವನ್ನು ತೆರೆದು ತೋರಿಸಬೇಕಷ್ಟೇ. ತೋರಿಸುವುದರ ಜೊತೆಗೆ ತೋರಿಸುವವರ ಯೋಗ್ಯತೆ ಕೂಡಾ ಮುಖ್ಯವಾಗುತ್ತದೆ. ಇದೇ ಸತ್ಯಮೇವ ಜಯತೇ'ಯನ್ನು ಸಲ್ಮಾನ್ ನಡೆಸಿಕೊಟ್ಟಿದ್ದರೆ ಅದರ ಸಾಂದ್ರತೆ ಎಷ್ಟು ಕೆಳಮಟ್ಟದಲ್ಲಿ ಇರುತ್ತಿತ್ತು?
ಇದೇ ಅಮೀರ್ನ ಶಕ್ತಿ ಮತ್ತು ತಾಕತ್ತು.
ಹೀಗಿರುವಾಗ ಮಾಳವಿಕಾರನ್ನು ಅಮೀರ್ ಮಟ್ಟಕ್ಕೆ ಹೋಲಿಸುವುದು ಅತ್ಯಂತ ಅಸಭ್ಯ. ನವಿರಾಗಿ ಹೇಳಬಹುದಾದರೆ ಹೂ'ವಿನ ಜೊತೆಗೆ ನಾರೂ ಕೂಡಾ ಸ್ವರ್ಗ ಸೇರಿದಂತೆ!ಇನ್ನು ಕಾರ್ಯಕ್ರಮದ ವಾಣಿಜ್ಯ ಉದ್ದೇಶ ಹಾಗೂ ಅಮೀರ್ನ ಲಾಭ'ದ ಗುರಿಯನ್ನು ಪ್ರಶ್ನಿಸಲಾಗಿದೆ. ಕಾರ್ಯಕ್ರಮದ ಪ್ರಾಯೋಜಕರಾದ ಕಂಪನಿ ಯವರನ್ನು ಮುಂದಿಟ್ಟು ಅಮೀರ್ನ ಸಾಚಾತನವನ್ನು ಪ್ರಶ್ನಿಸಲಾಗಿದೆ.
ಗಾಂಧಿಯನ್ನು ಬಡವನ ರೀತಿ ಕಾಣಿಸಲು ಬಿರ್ಲಾ ತಿಂಗಳಿಗೆ 500 ಡಾಲರ್ ಖಚರ್ು ಮಾಡುತ್ತಿದ್ದರು ಎಂದು ಸರೋಜಿನಿ ನಾಯ್ಡು ಅವರು ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ.ಇಲ್ಲಿ ಗಾಂಧಿ ಸುಳ್ಳಾ? ಸರೋಜಿನಿ ನಾಯ್ಡು ಸುಳ್ಳಾ?
ಎರಡೂ ಸತ್ಯವೇ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಬಿರ್ಲಾರ ಷಾಮಿಯಾನವನ್ನು ಗಾಂಧಿ ಆಶ್ರಯಿಸಿದ್ದರು. ಅಷ್ಟೇ ಏಕೆ ಬ್ರಿಟಿಷರೇ ತಂದ ಪ್ರಿಂಟಿಂಗ್ ಪ್ರೆಸ್ಗಳಲ್ಲೇ ಅಲ್ಲವೇ ಭಗತ್ ಸಿಂಗ್ನ ಕರಪತ್ರಗಳು ಮುದ್ರಿತ ವಾಗಿದ್ದು?ಹೀಗೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಣ್ಣ-ಪುಟ್ಟ ರಾಜಿಗಳ ಜೊತೆಗೇ ನಮ್ಮ ಕಾಳಜಿಗಳನ್ನು ಜಾರಿಗೊಳಿಸಬೇಕಾದ್ದು ಅನಿವಾರ್ಯ.ಹಾಗಂತ ಅಂಬಾನಿ ಅವರದ್ದೇ ಡ್ರಗ್ಸ್ ಕಂಪನಿ ಇದೆ. ಅವರದ್ದೇ ಆಸ್ಪತ್ರೆಯಲ್ಲಿ ವೈದ್ಯರ ತಂಡವೇ ಇದೆ.ಸತ್ಯಮೇವ ಜಯತೇ'ಯಲ್ಲಿ ಅಂಬಾನಿ ಆಸ್ಪತ್ರೆಯ ಯಾವ ವೈದ್ಯರೂ ಮೂತಿ ತೂರಿಸಿಲ್ಲ. ಇಡೀ ಮಹಾರಾಷ್ಟ್ರದಲ್ಲಿ ದೇವರ ಮಗ' ಎಂದು ಆರಾಧಿಸಲ್ಪಡುವ ಡಾ.ರವಿ ಬಾಪಟ್ರವರನ್ನು ತೋರಿಸಲಾಯಿತು. ಇವರ ಇಡೀ ಕುಟುಂಬ ಖಾಸಗೀ ವೈದ್ಯಕೀಯ ಕ್ಷೇತ್ರದ ಕುತಂತ್ರ, ಲಾಭಕೋರತನ, ಮೋಸ, ವಂಚನೆ ವಿರುದ್ಧ ಹೋರಾಡುತ್ತಲೇ ಬಂದಿದೆ. ಇವರು ಬರೆದಿರುವ ವಾರ್ಡ್ ನಂ.5 ಏಇಒ' ಹಾಗೂ ಪೋಸ್ಟ್ ಮಾರ್ಟಂ ಅನ್ನುವ ಎರಡು ಕಾದಂಬರಿಗಳು ವೈದ್ಯಲೋಕದ ನರಹಂತಕತನವನ್ನು ಬಿಚ್ಚಿಡುತ್ತವೆ.

ಭಾರತದ ಮಾಧ್ಯಮ ಜಗತ್ತಿನಲ್ಲಿ ಡ್ರಗ್ಸ್ ಮತ್ತು ವೈದ್ಯಲೋಕದ ಮಾಫಿಯಾಗಳ ವಿರುದ್ಧ ತನಿಖಾ ವರದಿಗಳು ಆಗ ಬೇಕಾದಷ್ಟು ಪ್ರಮಾಣದಲ್ಲಿ ಆಗಿಲ್ಲ. ಅದರಲ್ಲೂ ವಿದೇಶಿ ಕಂಪನಿಗಳ ಕ್ರೈಂ ಮತ್ತು ಮಾಫಿಯಾವನ್ನು ಬಿಚ್ಚಿಟ್ಟಿರು ವುದು ಕೂಡಾ ಕಡಿಮೆಯೇ.
ಇಂಥಾ ಹೊತ್ತಲ್ಲಿ ಎಲ್ಲಾ ಮಾಫಿಯಾಗಳಿಂದಲೂ ಟಾಗರ್ೆಟ್ ಆಗಿಸಿಕೊಳ್ಳುವ ಅಪಾಯವನ್ನು ಲೆಕ್ಕಿಸದೆ ಅಮೀರ್ ನಿಷ್ಠುರ ಸತ್ಯಗಳನ್ನು ಮಧ್ಯಮ ವರ್ಗದ ಜಡ್ಡುತನಕ್ಕೆ ಚಾಟಿ ಬೀಸುವ ರೀತಿಯಲ್ಲಿ ಬಿಚ್ಚಿಡುತ್ತಿದ್ದಾರೆ.
ನಾವು ಸಿನಿಕತನ ಬಿಡದಿದ್ದರೆ ಹೇಗೆ?

Tuesday, 29 May 2012

ಆರೋಗ್ಯ ಕ್ಷೇತ್ರದ ಅನಾರೋಗ್ಯಕ್ಕೆ ಮದ್ದೇನು?



ಅಮೀರ್ ಖಾನ್ ಅಂಕಣ ಬರಹ

 ನಾನೊಂಥರಾ ಕನಸುಗಾರ. ನಾವೆಲ್ಲರೂ ಸಹ ಬಡವರು, ಶ್ರೀಮಂತರೆಂಬ ಭೇಧವಿಲ್ಲದೆ ಎಲ್ಲರೂ ಒಂದೇ ಬಗೆಯ ಆರೋಗ್ಯ ಸೌಲಭ್ಯಗಳನ್ನು ಪಡೆಯುವಂತಹ ದಿನ ನಮ್ಮ ದೇಶದಲ್ಲಿ ಬರುತ್ತದೆ ಎನ್ನುವುದು ನನ್ನ ಕನಸು. ಅನೇಕರಿಗೆ ಇದೊಂದು ಬಗೆಯಲ್ಲಿ ಅವಾಸ್ತವವಾದ ಹಾಗೂ ಅಸಾಧ್ಯವಾದಂತಹ ಹುಚ್ಚುಕನಸು ಎನ್ನಿಸಬಹದು. ಆದರೆ ಇದು ಖಂಡಿತವಾಗಿಯೂ ಕಾಣಬೇಕಾದಂತಹ ಕನಸು ಹಾಗೂ ಇಂತಹ ಕನಸೊಂದು ನನಸಾಗಲೇಬೇಕೆನ್ನಲು ಕಾರಣಗಳಿವೆ ಎನ್ನುವುದು ನನ್ನ ನಂಬುಗೆ.
ನೀವು ಬಡವರಿರಲಿ, ಶ್ರೀಮಂತರಿರಲಿ, ನಿಮ್ಮ ಪ್ರೀತಿಪಾತ್ರೊಬ್ಬರನ್ನು ಕಳೆದುಕೊಂಡಾಗ ಉಂಟಾಗುವ ದು:ಖ ದುಮ್ಮಾನಗಳಿಗೆ ಭಿನ್ನಭೇಧವಿರುವುದಿಲ್ಲ. ನನ್ನ ಮಗು ವಾಸಿಯಾಗದ ಖಾಯಿಲೆಗೆ  ತುತ್ತಾಗಿ ನರಳಿ ನರಳಿ ತೀರಿಕೊಳ್ಳುವಾಗ, ಆಗ ನನಗೇನೂ ಮಾಡಲು ಸಾಧ್ಯವಾಗದಿರುವಾಗ ನಿಜಕ್ಕೂ ದು:ಖವಾಗುತ್ತದೆ. ಆದರೆ ಆ ಮಗುವಿನ ಖಾಯಿಲೆಯನ್ನು ಗುಣಪಡಿಸಬಹದಾದ ಔಷಧವೊಂದಿದೆ ಎಂದು ತಿಳಿದೂ ನನಗೆ ಆ ಔಷಧಿಯನ್ನು ಕೊಳ್ಳಲಾಗದಿರುವ ಕಾರಣಕ್ಕೆ ನನ್ನ ಮಗುವು ನರಳಿ ಸಾಯುತ್ತದೆ ಎಂದಾದಾಗ, ಅದನ್ನು ನಾನು ನೋಡಿ ಸುಮ್ಮನಿರಬೇಕಾಗಿ ಬಂದಾಗ - ಅಂತಹ ಒಂದು ಸ್ಥಿತಿ ನಿಜಕ್ಕೂ ದುರಂತಮಯ.
ಒಂದು ಒಳ್ಳೆಯ ಆರೋಗ್ಯ ಆರೈಕೆ ವ್ಯವಸ್ಥೆಯೊಂದು ನಮ್ಮಲ್ಲಿಲ್ಲದಿರುವಂತೆ ಮಾಡಿರುವ ಕಾರಣವಾದರೂ ಏನು?
ನಾವು ಅಸಂಖ್ಯ ಜನರು ತೆರಿಗೆ ಕಟ್ಟುತ್ತೇವೆ. ಕೆಲವರು ಕಟ್ಟುವುದಿಲ್ಲ. ಹಾಗೆಯೇ ಬಹುತೇಕ ಜನರಿಗೆ ಪ್ರತ್ಯಕ್ಷ ತೆರಿಗೆ ಕಟ್ಟುವಷ್ಟು ಆದಾಯವೇ ಇರುವುದಿಲ್ಲ. ಆದರೆ,  ಪ್ರತಿ ರಾಜ್ಯವೂ ವಿವಿಧ ಬಗೆಯಲ್ಲಿ ಪರೋಕ್ಷ ತೆರಿಗೆಯನ್ನು ಸಂಗ್ರಹಿಸುತ್ತದೆ. ಅದು ಸಣ್ಣಮೊತ್ತವಿರಲಿ, ದೊಡ್ಡಮೊತ್ತವಿರಲಿ, ಪ್ರತಿ ಸಲ ನಾವೇನಾದರೂ ಕೊಂಡುಕೊಳ್ಳುವಾಗಲೂ ಒಂದಲ್ಲಾ ಒಂದು ಬಗೆಯ ತೆರಿಗೆಯನ್ನು ಕಟ್ಟುತ್ತಲೇ ಇರುತ್ತೇವೆ. ಅಂದರೆ, ಅದರರ್ಥ ಅಗ್ದಿ ಬಡವರೂ ಸಹ ತೆರಿಗೆ ನೀಡುತ್ತಿರುತ್ತಾರಲ್ಲದೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಾಗಿ ಅವರ ಪಾಲೂ ಸಂದಾಯವಾಗುತ್ತಿರುತ್ತದೆ. ಆದರೆ ಅದಕ್ಕೆ ತಕ್ಕಂತೆ ಅವರಿಗೆ ಪ್ರತಿಫಲವೆಂಬುದು ದಕ್ಕುವುದಿಲ್ಲ ಅಷ್ಟೆ. ನಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇಕಡಾ ೧.೪ ರಷ್ಟನ್ನು ಮಾತ್ರ ಈ ದೇಶದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸಲಾಗುತ್ತದೆ.
ಯಾಕೆ ಹೀಗೆ?
ಈ ಕ್ಷೇತ್ರದಲ್ಲಿ ಪರಿಣಿತರಾದವರು ಹೇಳುವ ಪ್ರಕಾರ ನಮ್ಮ ದೇಶದಲ್ಲಿ ಮೂಲಭೂತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆಗೆಂದೇ ಕನಿಷ್ಠ ಶೇಕಡ ೬ ರಷ್ಟನ್ನಾದರೂ ಮೀಸಲಿಡಬೇಕು. ನಾನು ಅರ್ಥಶಾಸ್ತ್ರಜ್ಞನೂ ಅಲ್ಲ ವೈದ್ಯನೂ ಅಲ್ಲ. ಆದರೂ ಸ್ವಲ್ಪ ಸೇಫರ್ ಸೈಡ್‌ನಲ್ಲಿದ್ದುಕೊಂಡೇ ಮಾತನಾಡುವುದಾದರೆ ನನ್ನ ಪ್ರಕಾರ ಇದು ಶೇಕಡ ೮ ರಿಂದ ೧೦ ರಷ್ಟಂತೂ ಇರಬೇಕು.
ಒಂದು ಸಮಾಜದ ಆರೋಗ್ಯವೇ ಸರಿಯಿಲ್ಲ ಅಂದ ಮೇಲೆ ಅಲ್ಲಿ ಸಾಧಿಸುವ ಭಾರೀ ಜಿಡಿಪಿ ಕಟ್ಟಿಕೊಂಡು  ಆಗಬೇಕಾಗಿದ್ದಾದರೂ ಏನು ಹೇಳೀ? ನಾವು ಆರೋಗ್ಯವಾಗಿದ್ದು, ನಾವು ಸಾಧಿಸುವ ಆರ್ಥಿಕ ಸಾಮರ್ಥ್ಯವನ್ನು ಅನುಭವಿಸಲು ನಮಗೆ ಶಕ್ಯವಿದ್ದಾಗ ಮಾತ್ರವೇ ಆರ್ಥಿಕ ಸಾಮರ್ಥ್ಯ ಬರಲು ಸಾಧ್ಯ ಎಂಭುದನ್ನು ನಾವು ಅರಿಯಬೇಕು.
ಮುಖ್ಯವಾಗಿ, ಆರೋಗ್ಯ ಕೂಡಾ ರಾಜ್ಯವೊಂದರ ವಿಷಯ. ನಮ್ಮ ಹಣದಲ್ಲಿ ಹೆಚ್ಚೆಚ್ಚು ಪ್ರಮಾಣ ಸಾರ್ವಜನಿಕ ಆಸ್ಪತ್ರೆಗಳನ್ನು ಸ್ಥಾಪಿಸುವುದಕ್ಕೆ, ಮುಖ್ಯವಾಗಿ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಯಾಕೆ ಬಳಕೆಯಾಗುತ್ತಿಲ್ಲ? ಸಾರ್ವತ್ರಿಕ ಆಸ್ಪತ್ರೆಗಳಿಗೆ ಹೊಂದಿಕೊಂಡಂತೆ ಇಲ್ಲಿ ಯಾಕೆ ಹೆಚ್ಚು ಪ್ರಮಾಣದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಲ್ಲ?

ಹುಮ್ಮಸ್ಸಿನ ಯುವಕರರನ್ನು ಹೊಂದಿರುವ ನಮ್ಮ ದೇಶದಲ್ಲಿ ಹೆಚ್ಚೆಚ್ಚು ವೈದ್ಯಕೀಯ ಕಾಲೇಜುಗಳನ್ನು ತೆರೆಯಬೇಕಾಗಿರುವುದು ಈ ಕ್ಷಣದ ತುರ್ತು. ಆದರೆ ಕೇಂದ್ರದಲ್ಲಿರುವ ಮತ್ತು ಎಲ್ಲಾ ರಾಜ್ಯಗಳಲ್ಲಿರುವ ಸರ್ಕಾರಗಳು ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಬಗ್ಗೆ ಯಾವ ಉತ್ಸಾಹವನ್ನೂ ಹೊಂದಿಲ್ಲ. ಹೀಗಾಗಿ ವೈದ್ಯರಾಗಬೇಕೆಂದು ಬಯಸುವ ತರುಣರ ಅಗತ್ಯತೆಗಳನ್ನು ಪೂರೈಸುತ್ತಿರುವವರು ಬೇರಾರೂ ಅಲ್ಲ. ನೀವು ಸರಿಯಾಗಿ ಊಹಿಸಿದಂತೆಯೇ ಖಾಸಗಿ ವೈದ್ಯಕೀಯ ಕಾಲೇಜುಗಳು. ಅಲ್ಲಿ ತಲಾ ವಿದ್ಯಾರ್ಥಿಗೆ ೫೦ ರಿಂದ ೬೦ ಲಕ್ಷ ರೂಪಾಯಿಗಳಷ್ಟು ಹಣವನ್ನು ಅನಧಿಕೃತವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ನಾನು ಕೇಳಿದ್ದೇನೆ.
ಹೆಚ್ಚಿನ ಪ್ರಕರಣಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಒಂದು ಉದ್ದಿಮೆ ಎಂದು ಪರಿಗಣಿಸಿ ಬೆಳೆಸಲಾಗುತ್ತದೆ. ಅದರಲ್ಲಿ ಬಹಳಷ್ಟಕ್ಕೆ ಕಾರ್ಯನಿರತ ಆಸ್ಪತ್ರೆಗಳೊಂದಿಗೆ ಸಂಬಂಧವೇ ಇರುವುದಿಲ್ಲ. ಆದರೆ ವೈದ್ಯಕೀಯ ಕಾಲೇಜುಗಳಿಗೆ ಇದು  ಬಹಳ ಮುಖ್ಯವಾಗಿ ಇರಬೇಕಾಗಿರುತ್ತದೆ. ಇಂತಹ ಖಾಸಗಿ ಕಾಲೇಜುಗಳಿಂದ ಹೊರ ಬರುವ ವೈದ್ಯರು ಎಷ್ಟರ ಮಟ್ಟಿಗೆ ಸ್ಪರ್ಧಾಸಮರ್ಥರಾಗಿರಬಲ್ಲರು ಎಂಬ ಕುರಿತು ನನಗೆ ಆಗಾಗ ಪ್ರಶ್ನೆಯುಂಟಾಗುತ್ತದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡಿರುವ ಹೆಚ್ಚೆಚ್ಚು ಸಾರ್ವಜನಿಕ ಆಸ್ಪತ್ರೆಗಳನ್ನು ತೆರೆಯಬೇಕಿದೆ ಎಂಬುದನ್ನು ನಾವೀಗ ದೃಢವಾಗಿ ಹೇಳುವ ಅಗತ್ಯವಿದೆ.
ಖಾಸಗಿ ಆಸ್ಪತ್ರೆಗಳನ್ನೂ ಸ್ವಾಗತಿಸೋಣ. ಆದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕುರಿತು ಗಮನ ಕೇಂದ್ರೀಕರಿಸೋಣ ಹಾಗೂ ಖಾಸಗಿ ಆಸ್ಪತ್ರೆಗಳು ಅವುಗಳೊಂದಿಗೆ ಸ್ಪರ್ಧಿಸಲು ಹೆಣಗಾಡುವಂತೆ ಮಾಡೋಣ. ಆಗ ಸಮಾಜಕ್ಕೆ ಉತ್ತಮ ಗುಣಮಟ್ಟದ ಸೇವೆಗಳು ಲಭ್ಯವಾಗುತ್ತವೆ.
ಒಬ್ಬ ಎಂಬಿಬಿಎಸ್ ಪರೀಕ್ಷೆ ಬರೆಯಲು ಕುಳಿತ ವಿದ್ಯಾರ್ಥಿ/ ವಿದ್ಯಾರ್ಥಿನಿಗೆ ಮಧುಮೇಹಕ್ಕೆ ನೀಡಬೇಕಾದ ಔಷಧಿ ಯಾವುದು ಎಂಬ  ಪ್ರಶ್ನೆ ಕೇಳಿದರೆ ಆತ/ ಆಕೆ ’ಗ್ಲಿಮೆಪಿರೈಡ್’ ಎಂದು ಉತ್ತರ ನೀಡಬಹುದು. ಮಧುಮೇಹಕ್ಕೆ ಚಿಕಿತ್ಸೆ ನೀಡುವ ಲವಣ ಇದು. ಆದರೆ ಅದೇ ವಿದ್ಯಾರ್ಥಿ ವೈದ್ಯನಾದ/ಳಾದ ಮೇಲೆ ಮಧುಮೇಹಿ ರೋಗಿಯೊಬ್ಬ ಆತನ/ಆಕೆಯ ಬಳಿ ಹೋದಾಗ ಬರೆದುಕೊಡುವ ಔಷಧಿ ’ಅಮಾರಿಲ್’ ಎಂದು. ಹಾಗಾದರೆ, ಆ ಯುವ ವೈದ್ಯ/ ವೈದ್ಯೆ ತಪ್ಪಾದ ಔಷಧಿ ಬರೆದುಕೊಟ್ಟರಾ? ಇಲ್ಲ. ’ಗ್ಲಿಮೆಪಿರೈಡ್’ ಲವಣವನ್ನು ಮಾರುವ ಹಲವು ಬ್ರಾಂಡ್‌ಗಳಲ್ಲಿ ಅಮಾರಿಲ್ ಕೂಡ ಒಂದು. ಹೀಗಾದಾಗ ಇವೆರಡರ ನಡುವಿನ ವ್ಯತ್ಯಾಸವಾದರೂ ಏನು? ಇಲ್ಲಿ ನೋಡಿ, ಅಮಾರಿಲ್‌ನ ೧೦ ಮಾತ್ರೆಗಳಿರುವ ಒಂದು ಪಟ್ಟಿಗೆ ಸುಮಾರು ೧೨೫ ರೂಪಾಯಿ. ಅದೇ ’ಗ್ಲಿಮೆಪಿರೈಡ್’ ಲವಣದ ಹತ್ತು ಮಾತ್ರೆಗಳ ಪಟ್ಟಿಗೆ ಕೇವಲ ೨ ರೂಪಾಯಿ. ಎರಡೂ ಸಾರದಲ್ಲಿ ಒಂದೇ. ಆದರೆ ಕೇವಲ ಬ್ರಾಂಡ್ ಹೆಸರಿಗೇ ನಾವು ೧೨೩ ರೂಪಾಯಿಗಳ ಅಧಿಕ ಹಣವನ್ನು ತೆರಬೇಕಾಗಿದೆ.
 ಅಂಥವೇ ಮತ್ತೊಂದಷ್ಟು ಉದಾಹರಣೆಗಳು ಇಲ್ಲಿವೆ.
ಶೀತ ನೆಗಡಿ ಸರ್ವಸಾಮಾನ್ಯ ಖಾಯಿಲೆ. ಇದಕ್ಕೆ ನೀಡಲಾಗುವ ಲವಣದ ಹೆಸರು ಸಿಟ್ರಿಜೈನ್ ಅಂತ. ಈ ಜನರಿಕ್ ಔಷಧಿಯ ತಯಾರಿ, ಪ್ಯಾಕೇಜಿಂಗ್, ಸಾಗಾಣಿಕೆ, ಮತ್ತು ಒಂದಷ್ಟು ಮಾರ್ಜಿನ್ ಕೂಡಾ ಸೇರಿ ಹತ್ತು ಮಾತ್ರೆಗಳಿಗೆ ೧ ರೂಪಾಯಿ ೨೦ ಪೈಸೆ ತಗುತ್ತದೆ. ಆದರೆ ಇದನ್ನೇ ನಾವು ಸೆಟ್‌ಜೈನ್‌ನಂತಹ ಬ್ರಾಂಡ್ ಹೆಸರಲ್ಲಿ ಕೊಂಡಾಗ ಹತ್ತು ಗುಳಿಗೆಗಳಿಗೆ ೩೫ ರೂಪಾಯಿ ನೀಡುತ್ತೇವೆ.

ಹೃದಯಾಘಾತವುಂಟುವ ಬ್ಲಾಕೇಜ್‌ಗಳಿಗೆ ಚಿಕಿತ್ಸೆ ನೀಡಲು ಉಪಯೋಗಿಸುವ ಇಂಜೆಕ್ಷನ್ ಹೆಸರು ಸ್ಟೆಪ್ಟೋಕಿನೇಸ್ ಅಥವಾ ’ಯುರೋಕಿನೇಸ್’. ಇವಕ್ಕೆ ತಲಾ ೧೦೦೦ ರೂಪಾಯಿ ವೆಚ್ಚವಾಗುತ್ತದೆ. ಆದರೆ ಅವುಗಳ ಬ್ರಾಂಡ್ ಹೆಸರುಗಳಿಗೆ ನಾವು ಔಷಧಿ ಅಂಗಡಿಗಳಲ್ಲಿ ತಲಾ ೫೦೦೦ ರೂಪಾಯಿ ನೀಡಬೇಕು.
ಭಾರತದಲ್ಲಿ ಮಲೇರಿಯಾ ಬಹಳ ಜನರನ್ನು ಅದರಲ್ಲೂ ಮಕ್ಕಳನ್ನು ಕೊಲ್ಲುತ್ತದೆ. ಈ ಮಲೇರಿಯಾ ಪ್ರತಿಬಂಧಕ ಚಿಕಿತ್ಸೆಗೆ ಉಪಯೋಗಿಸುವ ಮೂರು ಇಂಜೆಕ್ಷನ್‌ಗಳ ಒಂದು ಪ್ಯಾಕ್‌ಗೆ ೨೫ ರೂಪಾಯಿ ತಗುಲುತ್ತದೆ. ಆದರೆ ಬ್ರಾಂಡ್ ಹೆಸರುಗಳು ೩೦೦ ರೂಪಾಯಿಯಿಂದ ೪೦೦ ರೂಪಾಯಿಗಳನ್ನು ಸುಲಿಯುತ್ತವೆ.
ಅತಿಸಾರ ಕೂಡಾ ಭಾರತದ ಬಹಳಷ್ಟು ಮಕ್ಕಳನ್ನು ಬಲಿತೆಗೆದುಕೊಳ್ಳುತ್ತದೆ. ದೇಹದ ನೀರಿನಂಶವನ್ನು ಕಡಿಮೆ ಮಾಡುವ ವಾಂತಿಯನ್ನು ನಿಯಂತ್ರಿಸಲು ಡಾಂಪೆರಿಡೋನ್ ಎಂಬ ಲವಣವನ್ನು ಉಪಯೋಗಿಸಲಾಗುತ್ತದೆ. ಅದರ ಬೆಲೆ ಹತ್ತು ಮಾತ್ರೆಗಳಿಗೆ ೧.೨೦ ರೂಪಾಯಿ. ಡಾಮ್‌ಸ್ಟಾಲ್ ಎಂಬ ಅದರ ಬ್ರಾಂಡ್ ಹೆಸರಿಗೆ ೩೩ ರೂಪಾಯಿ
ನಮ್ಮ ಬಡಜನತೆ, ಅಥವಾ ಮಧ್ಯಮವರ್ಗದಳು ಚಿಕಿತ್ಸೆ ಪಡೆಯಲು ಹೇಗೆ ಸಾಧ್ಯ?
ಇದಕ್ಕಿರುವ ಒಂದೇ ಉತ್ತರ ಜನೆರಿಕ್ ಔಷಧಗಳು
ಈ ವಿಚಾರದಲ್ಲಿ ನಾವು ರಾಜಾಸ್ತಾನ ಸರ್ಕಾರದ ಪ್ರಯತ್ನಗಳನ್ನು ಮೆಚ್ಚಿಕೊಳ್ಳಬೇಕು. ಅಲ್ಲಿ ಸರ್ಕಾರವೇ ಜನೆರಿಕ್ ಔಷಧಿಗಳನ್ನು ಮಾರುವ ಅಂಗಡಿಗಳನ್ನು ರಾಜ್ಯದಾದ್ಯಂತ ಸ್ಥಾಪಿಸಿದೆ. ಜನತೆಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ಔಷಧಿ ಚಿಕಿತ್ಸೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ಇದು.
ಔಷಧಿಗಳ ದುಬಾರಿ ಬೆಲೆಯನ್ನು ಭರಿಸಲಾಗದೆ ಭಾರತದಲ್ಲಿ ಶೇಕಡ ೨೫ರಷ್ಟು ಖಾಯಿಲೆಗಳಿಗೆ ಚಿಕಿತ್ಸೆಯೇ ದೊರೆಯುವುದಿಲ್ಲ. ಪ್ರತಿ ಭಾರತೀಯನಿಗೆ ಈ ಜನೆರಿಕ್ ಔಷಧಗಳು ಮಾಡಬಹುದಾದ ಸಹಾಯವನ್ನು ಯೋಚಿಸಿ. ಇಂತಹ ಒಂದು ಕೆಲಸವನ್ನು ರಾಜಸ್ತಾನ ಸರ್ಕಾರ ಮಾಡುತ್ತಿದೆಯೆಂದಾದರೆ ಉಳಿದ ಸರ್ಕಾರಗಳು ಮಾಡಲಿಕ್ಕೆ ಏನಡ್ಡಿ?
ಒಂದು ಕುತೂಹಲಕಾರಿ ಮಾಹಿತಿ: ರಾಸಾಯನಿಕಗಳು ಹಾಗೂ ಗೊಬ್ಬರಗಳ ಸಚಿವಾಲಯವು ಯಾರೆಲ್ಲಾ ಜನೆರಿಕ್ ಔಷಧಗಳನ್ನು ಮಾರಲು ಮುಂದೆ ಬರುತ್ತಾರೋ ಅಂತವರಿಗೆ ೫೦,೦೦೦ ರೂಪಾಯಿ ಕೊಡುಗೆ ನೀಡುತ್ತೇವೆಂದು ಘೋಷಿಸಿದೆಯಲ್ಲದೆ ಅಂತಹ ಅಂಗಡಿಗೆ ಜಾಗವನ್ನೂ ನೀಡುತ್ತದೆ.
ಒಳ್ಳೆಯ, ಗುಣಮಟ್ಟದ ಸಾರ್ವಜನಿಕ ಆರೋಗ್ಯ ಆರೈಕೆ ಬಡವಶ್ರೀಮಂತರೆನ್ನದೆ ಎಲ್ಲರಿಗೂ ಒಂದೇ ರೀತಿಯಲ್ಲಿ ಲಭ್ಯವಾಗುತ್ತದೆ ಎಂಬ ನನ್ನ ಕನಸು ನನಸಾಗುವಂತೆ ತೋರುತ್ತದೆ.
ವಿ.ಸೂ. ನಮ್ಮ ವೈದ್ಯರು ಔಷಧಿಗಳನ್ನು ಸೂಚಿಸುವಾಗ ಜನೆರಿಕ್ ಔಷಧಿಗಳ ಹೆಸರನ್ನ ಬರೆದು ಬ್ರಾಂಡ್ ಔಷಧಿಗಳು ಬೇಕೇ ಬೇಡವೇ ಎಂದು ನಾವೇ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಬಲ್ಲರಾ?
ಜೈ ಹಿಂದ್. ಸತ್ಯ ಮೇವ ಜಯತೇ
ಕೃಪೆ: ದ ಹಿಂದೂ ದಿನ ಪತ್ರಿಕೆ
: ಕನ್ನಡಕ್ಕೆ: ಹರ್ಷಕುಮಾರ್ ಕುಗ್ವೆ



Sunday, 27 May 2012

ಉಗ್ರ ಚಳವಳಿಯ ಸೌಮ್ಯ ನಾಯಕ

-ಜಿ.ಪಿ.ಬಸವರಾಜ್
ಕೃಪೆ:- ಅವಧಿ

ಚರಿತ್ರೆಯಲ್ಲಿ ದಾಖಲಾಗದ ಒಂದು ಪುಟ್ಟ ಘಟನೆಯನ್ನು ಇಲ್ಲಿ ಕಾಣಿಸುವುದರ ಮೂಲಕ ಈ ಲೇಖನವನ್ನು ಆರಂಭಿಸಬೇಕೆನ್ನಿಸುತ್ತದೆ. ಅದು ರೈತ ಚಳವಳಿ ಬಿರುಸಾಗಿದ್ದ ಕಾಲ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರೈತರು ರಸ್ತೆ ತಡೆ ಚಳವಳಿಯನ್ನು ನಡೆಸುತ್ತಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಂತೂ ಈ ಚಳವಳಿ ಎಷ್ಟು ಜೋರಾಗಿತ್ತೆಂದರೆ, ಒಂದೇ ಒಂದು ವಾಹನವೂ ರೈತರ ಕಣ್ಣುತಪ್ಪಿಸಿ ಹೋಗುವುದು ಸಾಧ್ಯವಿರಲಿಲ್ಲ. ರೋಗಿಗಳಿಗೆ, ಮಕ್ಕಳಿಗೆ, ಅಗತ್ಯ ಸೇವಾ ಸಿಬ್ಬಂದಿಗೆ ಒಂದಿಷ್ಟು ಕರುಣೆಯನ್ನು ತೋರಿಸಿ ಅಂಥ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡುವಷ್ಟು ರೈತರು ಉದಾರಿಗಳಾಗಿದ್ದರು. ಉಳಿದಂತೆ ಯಾವ ವಾಹನವನ್ನೂ ಬಿಡುತ್ತಿರಲಿಲ್ಲ. ವಾಹನಗಳು ಸಾಲುಗಟ್ಟಿ ರಸ್ತೆಯಲ್ಲಿ ನಿಂತಿರುವುದು ರೈತ ಚಳವಳಿಯ ಶಕ್ತಿಯನ್ನು ಸೂಚಿಸುವಂತಿರುತ್ತಿತ್ತು.


ಆಗ ನಾನು ಶಿವಮೊಗ್ಗದಲ್ಲಿ ಪ್ರಜಾವಾಣಿಯ ವರದಿಗಾರ. ನಮ್ಮ ಸಂಪಾದಕರಾದ ವೈಯನ್ಕೆ (ವೈ. ಎನ್.ಕೃಷ್ಣಮೂರ್ತಿ) ತೀರ್ಥಹಳ್ಳಿಯಲ್ಲಿ ಕೆಲಸವಿತ್ತೆಂದು ಬಂದು ಶಿವಮೊಗ್ಗದ ಜ್ಯುಯೆಲ್ ರಾಕ್ ಹೋಟೆಲಿನಲ್ಲಿ ತಂಗಿದ್ದರು. ಅವರು ಬೆಂಗಳೂರಿಗೆ ವಾಪಸು ಹೋಗಬೇಕಾಗಿತ್ತು. ಒಂದು ಬೆಳಗ್ಗೆ ಅವರು ಬೆಂಗಳೂರಿಗೆ ಹೊರಟು, ಭದ್ರಾವತಿಯನ್ನೂ ಮುಟ್ಟಲಾಗದೆ ಶಿವಮೊಗ್ಗಕ್ಕೆ ವಾಪಸು ಬಂದು, ಮತ್ತೆ ಅದೇ ಹೋಟೆಲಿನಲ್ಲಿ ವಾಸ್ತವ್ಯ ಮಾಡಿದರು. ಪೊಲೀಸರ ನೆರವು, ಸಂಪಾದಕರ ಹುದ್ದೆ ಇದು ಯಾವುದೂ ವೈಯನ್ಕೆ ಅವರ ಸುಗಮ ಸಂಚಾರಕ್ಕೆ ಸಹಕಾರಿಯಾಗಲಿಲ್ಲ. ಅವರು ನನ್ನನ್ನು ಕರೆದು ಏನು ಮಾಡುವುದೆಂದು ಕೇಳಿದರು. ನಾನು ನಿಮ್ಮ ನಿರಾತಂಕ ಪ್ರಯಾಣಕ್ಕೆ ಒಂದು ಪಾಸ್ ಪೋರ್ಟ್ ಅಗತ್ಯ ಎಂದೆ. ಎಂಥ ಪಾಸ್ ಪೋರ್ಟ್ ಎಂದರು ಕುತೂಹಲದಿಂದ. ಈ ಪಾಸ್ ಪೋರ್ಟ್ ಕೊಡುವ ಅಧಿಕಾರ ಇರುವುದು ಒಬ್ಬರಿಗೇ; ಅದು ರೈತ ಸಂಘದ ಅಧ್ಯಕ್ಷ ಎಚ್.ಎಸ್. ರುದ್ರಪ್ಪನವರಿಗೆ ಎಂದೆ. ಇದು ವೈಯನ್ಕೆ ಅವರಿಗೆ ತಮಾಷೆಯಾಗಿ ಕಾಣಿಸಿರಬೇಕು. ‘ಅದೇನು ಮಾಡುತ್ತೀರೋ ಮಾಡಿ, ನಾನು ಬೆಂಗಳೂರಿಗೆ ನಾಳೆ ಹೋದರೆ ಸಾಕು’ ಎಂದರು.


ನಾನು ಸೀದಾ ರುದ್ರಪ್ಪನವರ ಹತ್ತಿರ ಹೋಗಿ ಈ ಪಾಸ್ಪೋರ್ಟನ್ನು ಕೊಡಲು ವಿನಂತಿಸಿಕೊಂಡೆ. ರುದ್ರಪ್ಪನವರು ನಕ್ಕರು. ಪ್ರಜಾವಾಣಿಯ ಬಗ್ಗೆ ರುದ್ರಪ್ಪನವರೂ ಸೇರಿದಂತೆ ರೈತಮುಖಂಡರಿಗೆಲ್ಲ ಒಳ್ಳೆಯ ಅಭಿಪ್ರಾಯವಿತ್ತು. ರೈತ ಚಳವಳಿ ಒಂದು ಬಲಿಷ್ಠ ಚಳವಳಿಯಾಗಿ ರೂಪಗೊಳ್ಳಲು ಪ್ರಜಾವಾಣಿಯ ಕೊಡುಗೆಯೂ ಮುಖ್ಯವಾಗಿತ್ತು. ಆರಂಭದ ಹಂತದಿಂದಲೂ ರೈತ ಚಳವಳಿಯನ್ನು ನಾನು ಗ್ರಹಿಸಿದ ರೀತಿ ಮತ್ತು ನೀಡುತ್ತಿದ್ದ ವರದಿಗಳು ಪ್ರಜಾವಾಣಿಯಲ್ಲಿ ಪ್ರಮುಖವಾಗಿಯೇ ಪ್ರಕಟವಾಗುತ್ತಿದ್ದವು. ಇದರಿಂದಾಗಿ ರೈತರಲ್ಲಿ ಪ್ರಜಾವಾಣಿಯ ಬಗ್ಗೆ ಒಂದು ರೀತಿಯ ಪ್ರೀತಿಯೂ ಬೆಳೆದು, ಪ್ರಜಾವಾಣಿಯ ಪ್ರಸಾರ ಸಂಖ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ ಗಣನೀಯವಾಗಿ ಹೆಚ್ಚಿತ್ತು. ರೈತಮುಖಂಡರಂತೂ ಪ್ರಜಾವಾಣಿಯನ್ನು ತುಂಬ ವಿಶ್ವಾಸದಿಂದಲೇ ನೋಡುತ್ತಿದ್ದರು.

ರುದ್ರಪ್ಪನವರು ಸಂಘದ ಲೆಟರ್ಹೆಡ್ನಲ್ಲಿ ನಾಲ್ಕು ಸಾಲು ಬರೆದರು. ಪ್ರಜಾವಾಣಿಯ ಮತ್ತು ರೈತ ಚಳವಳಿಯ ಸಂಬಂಧವನ್ನು ಹೇಳಿ, ರೈತ ಚಳವಳಿ ಬೆಳೆಯಲು ಅದರ ಕೊಡುಗೆಯನ್ನೂ ಪ್ರಸ್ತಾಪಿಸಿ, ಪ್ರಜಾವಾಣಿಯ ಸಂಪಾದಕರಾದ ವೈಯನ್ಕೆ ಅವರ ವಾಹನವನ್ನು ತಡೆಯಬಾರದು; ಅವರ ಓಡಾಟ ನಿರಾತಂಕವಾಗಿರಬೇಕೆಂದು ಚಳವಳಿಗಾರರಿಗೆ ಸೂಚಿಸಿ, ಸಹಿ ಹಾಕಿಕೊಟ್ಟರು.

ಈ ಕಾಗದವನ್ನು ವೈಯನ್ಕೆ ಅವರಿಗೆ ಕೊಟ್ಟೆ. ಇದೊಂದು ಪಾಸ್ ಪೋರ್ಟ್ ರೀತಿಯಲ್ಲಿ ಕೆಲಸ ಮಾಡಬಹುದೆಂಬ ನಂಬಿಕೆ ಅವರಿಗೆ ಹುಟ್ಟಿದಂತೆ ಕಾಣಲಿಲ್ಲ. ಅಂತೂ ಕಾಗದವನ್ನು ತಮ್ಮ ಬ್ಯಾಗ್ನಲ್ಲಿ ಹಾಕಿಕೊಂಡರು.

ನನಗಂತೂ ನಂಬಿಕೆ ಇತ್ತು. ಆದರೂ ಮರುದಿನ ಬೆಳಗ್ಗೆ ವೈಯನ್ಕೆ ಅವರು ಹೊರಡುವ ಹೊತ್ತಿಗೆ ಸರಿಯಾಗಿ ನಾನೂ ಹೊರಟು ಅವರನ್ನು ಹಿಂಬಾಲಿಸಿದೆ. ಭದ್ರಾವತಿಯವರೆಗೂ ತಡೆಯಂತೂ ಇತ್ತು. ಅಲ್ಲೆಲ್ಲ ವೈಯನ್ಕೆ ಈ ಕಾಗದವನ್ನು ತೋರಿಸುತ್ತಿದ್ದರು. ಹಸಿರು ಟವಲಿನ ಚಳವಳಿಗಾರರು ಕಾಗದವನ್ನು ಓದಿಕೊಂಡು, ತಮ್ಮಲ್ಲೇ ಚರ್ಚಿಸಿಕೊಂಡು, ವಾಹನವನ್ನು ಹೋಗಲು ಬಿಡುತ್ತಿದ್ದರು. ಹಳ್ಳಿಹಳ್ಳಿಗೂ ಈ ವಾಹನ ನಿಲ್ಲುತ್ತಿತ್ತು. ಆದರೆ ಓಡಾಟಕ್ಕೆ ತಡೆಯಂತೂ ಎಲ್ಲೂ ಆಗಲಿಲ್ಲ. ಹಿಂದೆ ಹಿಂದೆಯೇ ಹೋಗುತ್ತ, ದೂರದಿಂದಲೇ ಇದನ್ನೆಲ್ಲ ಗಮನಿಸುತ್ತಿದ್ದ ನಾನು, ವೈಯನ್ಕೆ ಅವರು ಭದ್ರಾವತಿಯನ್ನು ದಾಟಿದ ನಂತರ ಶಿವಮೊಗ್ಗಕ್ಕೆ ಮರಳಿ ಬಂದೆ. ಅಂದು ರಾತ್ರಿ ಫೋನ್ನಲ್ಲಿ ವಿಚಾರಿಸಿಕೊಂಡಾಗ ವೈಯನ್ಕೆ ನಗುನಗುತ್ತಾ, ಹೌದು ಅದು ಪಾಸ್ಪೋರ್ಟೇ, ಎಲ್ಲಿಯೂ ತೊಂದರೆಯಾಗಲಿಲ್ಲ ಎಂದು ಉತ್ತರಿಸಿದರು.

2

ಕರ್ನಾಟಕ ರಾಜ್ಯ ರೈತ ಸಂಘ ರುದ್ರಪ್ಪನವರನ್ನು ತಮ್ಮ ನೇತಾರ ಎಂದು ಪರಿಭಾವಿಸುವ ಹೊತ್ತಿಗೆ ರುದ್ರಪ್ಪನವರ ಬದುಕಿನ ಹಲವು ಮಜಲುಗಳು ಮುಗಿದು ಹೋಗಿದ್ದವು. ರಾಜ್ಯ ಸಕರ್ಾರದಲ್ಲಿ ಅವರು ಮಂತ್ರಿ ಪದವಿಯನ್ನು ನಿಭಾಯಿಸಿ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮರಳಿ ಸಾಕಷ್ಟು ಕಾಲವಾಗಿತ್ತು. ಒಮ್ಮೆ ಮಂತ್ರಿಯಾದವರು ಬೆಂಗಳೂರಿನಲ್ಲಿಯೇ ಬೇರುಬಿಟ್ಟು ಸಕಲ ವೈಭೋಗಗಳಲ್ಲಿಯೇ ಮೈಮರೆಯುವ ರಾಜಕಾರಣ ಪರಂಪರೆಯೇ ನಮ್ಮಲ್ಲಿರುವಾಗ ರುದ್ರಪ್ಪನವರು ಶಿವಮೊಗ್ಗಕ್ಕೆ ಮರಳಿದ್ದು, ಒಂದರ್ಥದಲ್ಲಿ ಅವರ ಜೀವನ ತತ್ವವನ್ನು ಸ್ವಯಂ ನಿವೇದಿಸುತ್ತದೆ. ತೆಳ್ಳಗೆ ತಾಳೆಮರದಂತಿದ್ದ ರುದ್ರಪ್ಪನವರು ಸರಳ ಜೀವಿ. ಬಿಳಿ ಪಂಚೆ, ಜುಬ್ಬ, ಗಾಂಧೀ ಟೋಪಿಯ ಅವರು ಗಾಂಧೀ ತತ್ವಕ್ಕೆ ಹತ್ತಿರವಿದ್ದಂತೆ ಕಾಣುತ್ತಿದ್ದರು. ಅವರ ಸುತ್ತ ಮಾಜಿ ಮಂತ್ರಿಯ ವೈಭವದ ಪ್ರಭಾವಳಿ ಇರಲಿಲ್ಲ; ಅಂಥ ಗತ್ತೂ ಅವರಿಂದ ಬಹಳ ದೂರವಿತ್ತು. ಹಳ್ಳಿಯ ರೈತನೂ ಅವರನ್ನು ಸುಲಭವಾಗಿ ಸಂಪಕರ್ಿಸಬಹುದಾದ, ಸಹಜವಾಗಿ ಮಾತುಕತೆಯಾಡಲು ಸಾಧ್ಯವಾಗಬಹುದಾದ, ಹಿಂದೊಂದು ಮುಂದೊಂದು ಇಲ್ಲದ ನೇರ, ಸರಳ, ಸಜ್ಜನ ನಡವಳಿಕೆ ಅವರದು. ಅವರೊಂದಿಗೆ ಯಾರೂ ಕಷ್ಟ ಸುಖಗಳನ್ನು ಹೇಳಿಕೊಳ್ಳಬಹುದಾಗಿತ್ತು. ಅಂಥ ಆಪ್ತ ವ್ಯಕ್ತಿತ್ವ ಅವರದು. ಜೊತೆಗೆ ರುದ್ರಪ್ಪನವರದು, ಅವರ ಉಡುಗೆಯಂತೆಯೇ, ಶುಭ್ರ ಶೀಲ. ಯಾವ ಹಗರಣಗಳೂ ಅವರ ಸುತ್ತ ಇರಲಿಲ್ಲ. ಭ್ರಷ್ಟಾಚಾರದ ಪ್ರಕರಣಗಳಂತೂ ಅವರಿಂದ ದೂರವೇ. ಹೀಗಾಗಿಯೇ ಅವರು ಜನತೆಯ ಪ್ರೀತಿ, ವಿಶ್ವಾಸ, ಗೌರವಗಳಿಗೆ ಪಾತ್ರರಾಗಿದ್ದರು. ರೈತ ಸಂಘ ಅಧ್ಯಕ್ಷತೆಯ ಪಟ್ಟವನ್ನು ರುದ್ರಪ್ಪನವರಿಗೆ ಕಟ್ಟಲು ಇದೂ ಮುಖ್ಯ ಕಾರಣವಾಗಿರಬಹುದು.

ರುದ್ರಪ್ಪನವರದು ಬಹಳ ಸೌಮ್ಯ ಮತ್ತು ಶಾಂತ ಸ್ವಭಾವ. ಪ್ರೊ.ನಂಜುಂಡಸ್ವಾಮಿ ಅವರ ಭಾಷಣಗಳು ಕೆಂಡದುಂಡೆಯನ್ನೇ ಉಗುಳುತ್ತಿದ್ದರೆ ರುದ್ರಪ್ಪನವರ ಭಾಷಣಗಳು ಅದಕ್ಕೆ ತೀರ ತದ್ವಿರುದ್ಧ. ಹಾಗೆ ನೋಡಿದರೆ ರುದ್ರಪ್ಪನವರು ಭಾಷಣಕಾರರೇ ಆಗಿರಲಿಲ್ಲ. ತಮಿಳ್ನಾಡಿನ ನಾರಾಯಣಸ್ವಾಮಿ ನಾಯ್ಡು ಅವರಂತೆ ಅಥವಾ ಉತ್ತರ ಭಾರತದಿಂದ ಬರುತ್ತಿದ್ದ ಟಿಕಾಯತ್ ಮೊದಲಾದ ರೈತ ನಾಯಕರಂತೆ ರುದ್ರಪ್ಪನವರು ರೈತರನ್ನು ಬಡಿದೇಳಿಸುವಂತೆ ಮಾತನಾಡುತ್ತಿರಲಿಲ್ಲ. ಅಂಥ ಮಾತುಗಾರಿಕೆಯೂ ಅವರಿಗೆ ತಿಳಿದಿರಲಿಲ್ಲ. ಸುಂದರೇಶ್ ಅವರ ಉಕ್ಕುವ ಯೌವನ ಮತ್ತು ಪಟ್ಟುಬಿಡದೆ ಕೆಲಸ ಮಾಡುವ ಕ್ರಿಯಾಶಕ್ತಿ ಅಥವಾ ಕಡಿದಾಳು ಶಾಮಣ್ಣನವರ ವ್ಯಂಗ್ಯವಿಲ್ಲದ ತಮಾಷೆ -ಇವು ಯಾವುವೂ ರುದ್ರಪ್ಪನವರಲ್ಲಿ ಇರಲಿಲ್ಲ. ಪ್ರೊ.ನಂಜುಂಡಸ್ವಾಮಿಯವರಂತೆ ಜಗತ್ತಿನ ಎಲ್ಲ ಸಂಗತಿಗಳನ್ನು ರುದ್ರಪ್ಪ ಬಲ್ಲವರಾಗಿರಲಿಲ್ಲ. ಮಾಕ್ಸರ್್, ಲೋಹಿಯಾ, ಪೆರಿಯಾರ್, ಗೋಪಾಲಗೌಡ ಇತ್ಯಾದಿ ಚಿಂತಕರನ್ನು ಅರೆದುಕುಡಿದಿದ್ದ ನಂಜುಂಡಸ್ವಾಮಿಯವರ ಮುಂದೆ ರುದ್ರಪ್ಪನವರು ಕಳಾಹೀನರಾಗಿಯೇ ಕಾಣಿಸುತ್ತಿದ್ದರು. ಅವರ ಮಾತಿನಲ್ಲಿ ಗುಡುಗಾಗಲಿ, ಸಿಡಿಲಾಗಲಿ, ತತ್ವಚಿಂತನೆಯಾಗಲಿ ಇರಲಿಲ್ಲ.

ಆದರೆ ರುದ್ರಪ್ಪನವರ ಜೀವನಾನುಭವ ಸಮೃದ್ಧವಾಗಿತ್ತು. ಅವರ ಲೋಕಜ್ಞಾನ ಅಪಾರವಾಗಿತ್ತು. ಅಹಿಂಸಾ ತತ್ವದಲ್ಲಿ ಅವರಿಟ್ಟ ನಂಬಿಕೆ ಅಚಲವಾಗಿತ್ತು. ಗ್ರಾಮೀಣ ಜನತೆಯ ಸರಳ ಜೀವನವನ್ನೇ ಮೈದುಂಬಿಕೊಂಡಂತಿದ್ದ ರುದ್ರಪ್ಪನವರನ್ನು ನೋಡಿದ ಕೂಡಲೇ ಎಂಥವರಿಗೂ ವಿಶ್ವಾಸ ಹುಟ್ಟಿಬಿಡುತ್ತಿತ್ತು. ಅವರ ಶಾಂತ ಸ್ವಭಾವ ಇಡೀ ರೈತ ಚಳವಳಿಯನ್ನು ಹಿಂಸೆಯ ಹಾದಿ ಹಿಡಿಯದಂತೆ ನೋಡಿಕೊಂಡಿತ್ತು. ಎಂಥ ಸಂದರ್ಭದಲ್ಲಿಯೂ ರುದ್ರಪ್ಪನವರು ಹಿಂಸೆಯನ್ನು ಒಪ್ಪುತ್ತಿರಲಿಲ್ಲ; ಪ್ರಚೋದಿಸುತ್ತಿರಲಿಲ್ಲ. ರೈತರನ್ನು ಪೊಲೀಸರು ಹಿಂಸಿಸಿದಾಗ, ದೂರದೂರದ ಜೈಲುಗಳಿಗೆ ಕಳುಹಿಸಿದಾಗ, ಪ್ರೊ.ನಂಜುಂಡಸ್ವಾಮಿ ಮತ್ತು ಪ್ರೊ.ರವಿವರ್ಮ ಕುಮಾರ್ ಅವರಂಥವರನ್ನೂ ಪೊಲೀಸ್ ಠಾಣೆಯಲ್ಲಿ ಬಟ್ಟೆಬಿಚ್ಚಿಸಿ ಅವಮಾನಗೊಳಿಸಿದ ಸಂದರ್ಭದಲ್ಲಿಯೂ ರುದ್ರಪ್ಪನವರು ಉದ್ರೇಕಗೊಂಡು ಹಿಂಸೆಯನ್ನು ಪ್ರಚೋದಿಸಲಿಲ್ಲ. ಶಾಂತರೀತಿಯಲ್ಲಿಯೇ ದಿಟ್ಟವಾಗಿ ಪ್ರತಿಭಟಿಸುವ ಅವರ ಛಲ ಮತ್ತು ಮಾರ್ಗಗಳು ರೈತ ಸಮುದಾಯವನ್ನು ನಿಯಂತ್ರಣದಲ್ಲಿಟ್ಟಿದ್ದವು ಮತ್ತು ರೈತ ಚಳವಳಿಯನ್ನು ಮುನ್ನಡೆಸಿದ್ದವು.

ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ರೈತ ಚಳವಳಿಯ ಅದ್ಭುತ ಶಕ್ತಿಗೆ ಬೆಚ್ಚಿಬಿದ್ದು, ಪೊಲೀಸರ ನೆರವಿಂದ ಅಥವಾ ಅನ್ಯ ಮಾರ್ಗಗಳಿಂದ ಈ ಚಳವಳಿಯನ್ನು ಹತ್ತಿಕ್ಕುವುದು ಸಾಧ್ಯವಿಲ್ಲ ಎಂಬುದು ಮನವರಿಕೆಯಾದಾಗ ಸಂಧಾನ ಮಾರ್ಗವೊಂದು ಉಳಿದಿರುವ ಆಯ್ಕೆ ಎಂದು ತೀರ್ಮಾನಿಸಿದರು. ಆಗ ಸಂಧಾನಕ್ಕೆ, ಗುಂಡೂರಾವ್ ಅವರ ಸಂಪುಟದಲ್ಲಿದ್ದ ವೀರಪ್ಪ ಮೊಯ್ಲಿ, ಕಾಗೋಡು ತಿಮ್ಮಪ್ಪ ಮೊದಲಾದವರು ಸಂಧಾನಕಾರರಾಗಿ ರೈತ ಸಂಘದ ಬಳಿಗೆ ಬಂದಾಗ ಅವರಿಗೆ ಮೊದಲು ಕಂಡದ್ದು ರೈತ ಸಂಘದ ಅಧ್ಯಕ್ಷ ರುದ್ರಪ್ಪನವರೇ. ನಂಜುಂಡಸ್ವಾಮಿ, ಸುಂದರೇಶ್ ಮೊದಲಾದವರ ಹತ್ತಿರ ಸುಳಿಯುವ ಧೈರ್ಯ ಯಾವ ಮಂತ್ರಿಗೂ ಇರಲಿಲ್ಲ. ಅಲ್ಲದೆ ನಂಜುಂಡಸ್ವಾಮಿಯವರ ವಾದಕ್ಕೆ ಪ್ರತಿವಾದ ಒಡ್ಡುವ ಭೌದ್ಧಿಕ ಸಾಮಥ್ರ್ಯವೂ ಅನೇಕರಿಗೆ ಇರಲಿಲ್ಲ. ಕಡ್ಡಿ ಮುರಿದಂತೆ ಮಾತನಾಡುತ್ತಿದ್ದ ನಂಜುಂಡಸ್ವಾಮಿಯವರ ಮುಂದೆ ಯಾವ ಸಂಧಾನವೂ ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ನಂಜುಂಡಸ್ವಾಮಿ, ಸುಂದರೇಶ್ ಮೊದಲಾದ ನಾಯಕರು ಹಳ್ಳಿಹಳ್ಳಿಯ ಸುತ್ತಾಟದಲ್ಲಿ ಯಾವ ಸಂಧಾನಕಾರರ ಕೈಗೂ ಸಿಕ್ಕುವುದು ಕಷ್ಟವಾಗುತ್ತಿತ್ತು. ಅಥವಾ ಜೈಲುಗಳಲ್ಲಿರುತ್ತಿದ್ದ ಅವರೊಂದಿಗೆ ಸಂಧಾನ ನಡೆಸುವುದು ಸುಲಭವೂ ಆಗುತ್ತಿರಲಿಲ್ಲ. ಇಂಥ ಸಂದರ್ಭಗಳಲ್ಲೆಲ್ಲ ಸಮಾಧಾನದಿಂದ ಮಾತನಾಡುತ್ತಿದ್ದ, ಆದರೆ ರೈತರ ಬಗ್ಗೆ ಸಂಪೂರ್ಣ ಕಾಳಜಿಯಿಂದ, ಕಳಕಳಿಯಿಂದ, ಅವರ ಬೇಡಿಕೆಗಳ ಬಗ್ಗೆ ಪೂರ್ಣ ಅರಿವನ್ನಿಟ್ಟುಕೊಂಡು ಮಾತನಾಡುತ್ತಿದ್ದ ಏಕೈಕ ‘ಯಜಮಾನ’ರೆಂದರೆ ರುದ್ರಪ್ಪನವರೇ.

ರುದ್ರಪ್ಪನವರನ್ನು ರೈತಸಂಘದಲ್ಲಿ ‘ಯಜಮಾನ’ರೆಂದೇ ಕರೆಯುತ್ತಿದ್ದರು. ಸಮಾಜವಾದೀ ಸಿದ್ಧಾಂತದಲ್ಲಿ ನಂಬಿಕೆಯಿಟ್ಟ, ಊಳಿಗಮಾನ್ಯ ಪದ್ಧತಿಯನ್ನು ಕಟುವಾಗಿ ವಿರೋಧಿಸುತ್ತಿದ್ದ ಅನೇಕರು ರುದ್ರಪ್ಪನವರ ವಿಚಾರದಲ್ಲಿ ಮಾತ್ರ ಉದಾರಿಗಳಾಗಿದ್ದರು. ಪ್ರೀತಿಯಿಂದ ಯಜಮಾನರೆಂದೇ ಕರೆಯುತ್ತಿದ್ದರು. ಹಾಸನದ ದತ್ತ, ವೆಂಕಟೇಶಮೂರ್ತಿ ಎಲ್ಲರಿಗೂ ಈ ಯಜಮಾನರ ಬಗ್ಗೆ ತುಂಬ ಪ್ರೀತಿಯಿತ್ತು. ಅಂಥ ಪ್ರೀತಿ ಗೌರವಗಳನ್ನು ಅವರು ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದರು.

ಸಂಧಾನಕಾರರು ಬಂದಾಗ ಪ್ರೊಫೆಸರ್ ಸೇರಿದಂತೆ ಹಲವು ರೈತಮುಖಂಡರಿಗೆ, ಯಜಮಾನರು ಹೇಗೆ ನಿಭಾಯಿಸುತ್ತಾರೊ, ಎಲ್ಲಿ ತಾವು ಸಿಕ್ಕಿಬಿದ್ದು ಕೈಕಟ್ಟಿಸಿಕೊಳ್ಳುತ್ತಾರೋ ಎಂಬ ಬಗ್ಗೆ ಒಂದು ಬಗೆಯ ಅಳುಕು ಇರುತ್ತಿತ್ತು. ಆದರೆ ರುದ್ರಪ್ಪನವರು ರೈತಸಂಘದ ಹಿತಕ್ಕೆ ಧಕ್ಕೆ ಬರುವಂತೆ ಯಾವ ಸಂದರ್ಭದಲ್ಲೂ ನಡೆದುಕೊಳ್ಳಲಿಲ್ಲ. ಅಷ್ಟೇ ಅಲ್ಲ ತಮ್ಮ ನಿಲುವಿನಿಂದ ಹಿಂದೆ ಸರಿದು ಸರ್ಕಾರದ ಸಂಧಾನ ಬಲೆಯಲ್ಲಿ ಬೀಳಲಿಲ್ಲ. ತಾವು ಏಕಾಂಗಿಯಾಗಿದ್ದಾಗಲೂ ರುದ್ರಪ್ಪನವರ ವಿಚಾರದಲ್ಲಾಗಲಿ, ನಿಲುವಿನಲ್ಲಾಗಲೀ ಏರುಪೇರುಗಳಾಗುತ್ತಿರಲಿಲ್ಲ. ಸಂಧಾನಕಾರರ ಮಾತಿನ ಮೋಡಿ ಹೇಗೆ ಇದ್ದರೂ ರುದ್ರಪ್ಪನವರ ಸರಳತೆ ಮತ್ತು ಪ್ರಾಮಾಣಿಕತೆ ಎಲ್ಲವನ್ನೂ ಗೆದ್ದುಬಿಡುತ್ತಿತ್ತು. ಈ ಸರಳತೆ ಮತ್ತು ಪ್ರಾಮಾಣಿಕತೆಗಳೇ ರೈತಸಂಘದ ಶಕ್ತಿಯಾಗಿದ್ದವು. ರೈತ ಮುಖಂಡರಲ್ಲಿ ಕೆಲವರು ಒರಟರಂತೆ ಮಾತನಾಡಿದರೂ, ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಗಾಂಧಿ, ಲೋಹಿಯಾ, ಗೋಪಾಲಗೌಡ ಹೀಗೆ ಅನೇಕರ ತತ್ವ ಸಿದ್ಧಾಂತಗಳು ರೈತ ಸಂಘದ ಬೆನ್ನಿಗಿದ್ದದ್ದಕ್ಕೆ ಈ ರೈತಮುಖಂಡರೇ ಕಾರಣ. ರುದ್ರಪ್ಪನವರು ಗಾಂಧಿಯನ್ನು ಇಡಿಯಾಗಿಯೇ ತಂದು ರೈತಸಂಘಕ್ಕೆ ಸೇರಿಸಿದ್ದರು. ಸಹನೆ, ಶಾಂತಿ, ಸತ್ಯಾಗ್ರಹ ಇವುಗಳನ್ನು ರುದ್ರಪ್ಪನವರು ಎಂದೂ ಬಿಟ್ಟುಕೊಡಲಿಲ್ಲ.

ರೈತ ಸಂಘದ ಪಾದಯಾತ್ರೆಗಳಲ್ಲಿ ಭಾಗವಹಿಸಲು ರುದ್ರಪ್ಪನವರಿಗೆ ತ್ರಾಣವಿರಲಿಲ್ಲ. ಅವರಾಗಲೇ ವೃದ್ಧಾಪ್ಯದಲ್ಲಿದ್ದರು. ಹೀಗಾಗಿ ರೈತರ ಜೊತೆಜೊತೆಗೆ ಮೊದಲಿನಿಂದ ಕೊನೆಯವರೆಗೆ ಪಾದಯಾತ್ರೆಗಳಲ್ಲಿ ಹೆಜ್ಜೆಹಾಕುವುದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಆರಂಭದಲ್ಲಿದ್ದು ರೈತರಿಗೆ ನೈತಿಕ ಧೈರ್ಯ ತುಂಬುತ್ತಿದ್ದ ರುದ್ರಪ್ಪನವರು ಕೊನೆಯಲ್ಲಿ ಬಂದು ಕೂಡಿಕೊಳ್ಳುತ್ತಿದ್ದರು. ರುದ್ರಪ್ಪನವರ ಉಪಸ್ಥಿತಿಯೇ ರೈತರಿಗೆ ಹುಮ್ಮಸ್ಸನ್ನು, ಘನತೆಯನ್ನು ತಂದುಕೊಡುತ್ತಿತ್ತು. ಇತರ ರೈತ ಮುಖಂಡರೂ ರುದ್ರಪ್ಪನವರ ಈ ಉಪಸ್ಥಿತಿಯನ್ನು ಗೌರವದಿಂದ ನೋಡುತ್ತಿದ್ದರು. ರೈತರ ವಿಭಿನ್ನ ಹೋರಾಟಗಳಲ್ಲಿ ಭಾಗವಹಿಸಿ ಜೈಲು ಸೇರುವುದು ಕೂಡಾ ಅವರ ಆರೋಗ್ಯದ ದೃಷ್ಟಿಯಿಂದ ಸಾಧ್ಯವಾಗುತ್ತಿರಲಿಲ್ಲ. ಆದರೆ ರೈತಸಂಘದ ‘ಯಜಮಾನ’ರಾಗಿ ಅವರು ಜೈಲಿನ ಹೊರಗಿರಲಿ, ಒಳಗಿರಲಿ ರೈತಸಮುದಾಯದ ಜೊತೆಯಲ್ಲಿದ್ದರು. ಈ ನಂಬಿಕೆ ಇಡೀ ರೈತ ಸಮುದಾಯದಲ್ಲಿತ್ತು. ಈ ನಂಬಿಕೆಯೇ ಚಳವಳಿಯನ್ನು ಮುನ್ನಡೆಸಿತ್ತು.

ರುದ್ರಪ್ಪನವರು ತಳೆಯುತ್ತಿದ್ದ ಶಾಂತಿಯ ನಿಲುವು ಕೆಲವು ಬಾರಿ ಎಳೆಯ ತಲೆಮಾರಿನ ತರುಣರನ್ನು ಸಿಟ್ಟಿಗೇಳಿಸುತ್ತಿತ್ತು. ಹೀಗಿದ್ದರೆ ಸರ್ಕಾರವನ್ನು ಮಣಿಸುವುದು ಸಾಧ್ಯವಾಗುವುದಿಲ್ಲ. ಇನ್ನೆಷ್ಟು ವರ್ಷಗಳ ಕಾಲ ಚಳವಳಿಗಳನ್ನೇ ಮಾಡಿಕೊಂಡಿರುವುದು ಎಂದು ರೇಗುವವರೂ ಇದ್ದರು. ಆದರೆ ಈ ರೇಗಾಟ, ಕೂಗಾಟಗಳೆಲ್ಲ ತಣ್ಣಗಾದ ಮೇಲೆ ‘ಯಜಮಾನರ’ ನಿಲುವಿಗೆ ಎಲ್ಲರೂ ಬದ್ಧರಾಗುತ್ತಿದ್ದರು. ಯಜಮಾನರ ನಿಲುವಿನ ಹಿಂದೆ ಪ್ರೊ.ನಂಜುಂಡಸ್ವಾಮಿಯವರ ಚಿಂತನೆಯೂ ಇರುತ್ತಿತ್ತು. ಸುಂದರೇಶ್ ಮತ್ತು ಶಾಮಣ್ಣನವರ ಕ್ರಿಯಾಶೀಲತೆಯೂ ಇರುತ್ತಿತ್ತು. ದತ್ತ, ವೆಂಕಟೇಶಮೂರ್ತಿ ಅವರ ಯೌವನದ ಕಸುವೂ ಇರುತ್ತಿತ್ತು.

ಕರ್ನಾಟಕದ ಬಹುದೊಡ್ಡ ಚಾರಿತ್ರಿಕ ಚಳವಳಿಯ ನೇತೃತ್ವವನ್ನು ವಹಿಸುವ ಮೂಲಕ ರುದ್ರಪ್ಪನವರ ವ್ಯಕ್ತಿತ್ವವೂ ಹಿಗ್ಗಿತು. ಅವರ ಸುತ್ತ ಪ್ರಭಾವಳಿಯೊಂದು ಇದ್ದರೆ ಅದು ಈ ಚಳವಳಿಯಿಂದಲೇ ಬಂದದ್ದು. ಇಂಥ ಪ್ರಭಾವಳಿಯನ್ನು ಪಡೆದೂ ರುದ್ರಪ್ಪನವರು ಬೀಗಲಿಲ್ಲ. ಅಷ್ಟು ಸರಳತೆಯನ್ನು ಅವರು ಮೈಗೂಡಿಸಿಕೊಂಡಿದ್ದರು. ತನ್ನನ್ನು ಒಬ್ಬ ಸಾಮಾನ್ಯ ರೈತನ ಪ್ರತಿನಿಧಿಯೆಂದು ಪ್ರಾಮಾಣಿಕವಾಗಿ ಭಾವಿಸುತ್ತಿದ್ದ ರುದ್ರಪ್ಪನವರು ಕೊನೆಯವರೆಗೂ ಹಾಗೆಯೇ ನಡೆದುಕೊಂಡರು; ರೈತ ಸಂಘವನ್ನು ಅದೇ ನಂಬಿಕೆಯಿಂದ ಮುನ್ನಡೆಸಿದರು.

Saturday, 26 May 2012

ಜಟ್ಕಾ ಬಂಡಿ ಬದುಕು.




ಲೇಖಕರು- ದಿನೇಶ್ ಕುಮಾರ್. ಎಸ್. ಸಿ
ಸೌಜನ್ಯ:-ವರ್ತಮಾನ

ನೈಜ ಕಥೆ ಎಂದಾದರೂ ,ವರದಿ ಎಂದಾದರೂ, ಮಾಹಿತಿ ಎಂದಾದರೂ ಓದಿಕೊಳ್ಳಿ ಆದರೆ ಲೇಖಕರ ಬದ್ದತೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವದು ಮತ್ತು ಸತ್ಯವನ್ನು ತನಗರಿವಿಗೆ ಬಂದ ಅನುಭವವನ್ನು ಮುಖ್ತವಾಗಿ ತೆರೆದಿಡುವದು ಎಂಬುದು ಪೂರ್ತಿಯಾಗಿ ಓದಿಕೊಂಡಲ್ಲಿ ಸಿಗುವ ಒಟ್ಟಭಿಪ್ರಾಯ.

-ಸಮಾನ


ನಂಗೆ ನನ್ನ ಹೆಂಡತಿ ಬೇಕು ಸಾರ್, ತುಂಬಾ ಒಳ್ಳೆಯವಳು ಸಾರ್…

ಹೀಗಂತನೇ ಮಾತು ಶುರುಮಾಡಿದ ವಾಸುದೇವ. ನೋಡಕ್ಕೆ ಚೆನ್ನಾಗಿದ್ದಾನೆ. ಆರು ವರ್ಷದ ಮುದ್ದಾದ ಮಗಳಿದ್ದಾಳೆ. ಹೆಂಡತಿ ಮನೆ ಬಿಟ್ಟು ತವರಿಗೆ ಹೋಗಿ ಕುಳಿತಿದ್ದಾಳೆ. ವಾಪಾಸು ಬರುವ ಯಾವ ಸಾಧ್ಯತೆಯೂ ಇಲ್ಲದೆ ಅವನು ನನ್ನ ಬಳಿ ಬಂದಿದ್ದ. ಇವನದೊಂದು ಸಮಸ್ಯೆಯಿದೆ, ಏನಾದರೂ ಮಾಡೋದಕ್ಕೆ ಸಾಧ್ಯನಾ ನೋಡಿ ಅಂತ ಗೆಳತಿಯೊಬ್ಬಳು ನನ್ನ ಬಳಿ ಕಳಿಸಿದ್ದಳು.

ಏನಾಯ್ತು? ಯಾಕಾಯ್ತು? ಮಾಮೂಲಿ ಪ್ರಶ್ನೆಗಳು ನನ್ನಿಂದ. ಹತ್ತು ವರ್ಷಗಳ ಸಂಸಾರ, ಆರು ವರ್ಷದ ಮಗಳು, ಸರ್ಕಾರಿ ಉದ್ಯೋಗದಲ್ಲಿರುವ ಗಂಡ ಎಲ್ಲ ಬಿಟ್ಟು ಆ ಹೆಣ್ಣುಮಗಳೇಕೆ ತವರಿಗೆ ಹೋಗಿದ್ದಾಳೆ? ಇದು ನನ್ನ ಸಹಜ ಕುತೂಹಲ.
ಒಂದು ಮಿಸ್ಟೇಕು ಸಾರ್. ಇವಳ ಕಡೆ ಗಮನ ಕಡಿಮೆಯಾಗಿ ಹೋಗಿತ್ತು. ನನ್ನ ಕೆಲಸ ನೋಡಿ, ಊರೂರು ಸುತ್ತಬೇಕು. ಬೆಳಿಗ್ಗೆನೇ ಮನೆ ಬಿಡಬೇಕು, ಗಂಟೆಗಟ್ಟಲೆ ಪ್ರಯಾಣ. ರಾತ್ರಿ ಆಯಾಸವಾಗಿರುತ್ತೆ ಮನೆ ತಲುಪುವಷ್ಟರಲ್ಲಿ. ಇವಳನ್ನು ಮಾತಾಡಿಸುವಷ್ಟೂ ಪುರುಸೊತ್ತು ಇರಲಿಲ್ಲ. ಮನೇಲಿ ಅಮ್ಮ ಮತ್ತು ಇವಳಿಗೆ ಅಷ್ಟಕ್ಕಷ್ಟೆ. ಏನೇನು ಜಗಳ ಆಗ್ತಾ ಇದ್ವೋ ಗೊತ್ತಿಲ್ಲ.

ಅವನು ಹೇಳ್ತಾ ಹೋದ. ಮಧ್ಯೆ ಮಧ್ಯೆ ಕೊಂಚ ಸೆಲ್ಫ್ ಡೆಫೆನ್ಸ್ಗಾಗಿ ಸುಳ್ಳು, ಅಥವಾ ಹಾರಿಕೆಯ ಮಾತು. ಎಷ್ಟೇ ದೊಡ್ಡ ಫಟಿಂಗರು ತಲೆಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿದ್ದರೂ ಧ್ವನಿಯ ವೈಬ್ರೇಷನ್ನಿಂದಲೇ ಗೊತ್ತಾಗಿಬಿಡುತ್ತೆ ನನಗೆ ಅದು ಸುಳ್ಳು ಅಂತ. ಹೀಗಾಗಿ ಮಧ್ಯೆ ಮಧ್ಯೆ ಕೆಣಕು ಪ್ರಶ್ನೆಗಳು ನನ್ನಿಂದ. ಅವನು ಮುಂದುವರೆಸುತ್ತಾ ಹೋದ. ನನ್ನ ಪ್ರಶ್ನೆಗಳು ಜೋರಾದ ನಂತರ ಪೂತರ್ಿ ಶರಣಾಗತನಂತೆ ಸತ್ಯವನ್ನಷ್ಟೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಿದವನಂತೆ ಕರುಣಾಜನಕವಾಗಿ ಮಾತನಾಡತೊಡಗಿದ.

ಈ ನಡುವೆ ಅವನು ಬಂದ ಸಾರ್. ಬಾಂಬೆಯವನು. ಯಾರೋ ಏನೋ ಗೊತ್ತಿಲ್ಲ. ಇವಳಿಗೆ ಇಂಟರ್ನೆಟ್ನಿಂದ ಪರಿಚಯ. ಅವನು ಬ್ರಾಥಲ್ ನಡೆಸ್ತಾನೆ ಸಾರ್, ನಂಗೊತ್ತು, ನಾ ತನಿಖೆ ಮಾಡಿದ್ದೇನೆ. ನನ್ನ ಹತ್ರ ಪ್ರೂಫ್ ಇದೆ. ಒಂದ್ ದಿನ ಇವಳ ಮೊಬೈಲ್ ಚೆಕ್ ಮಾಡಿದಾಗ ಎಲ್ಲ ಡೀಟೇಲ್ಸು ಗೊತ್ತಾಯ್ತು. ನನ್ನ ಫ್ರೆಂಡ್ ಅಂತಾಳೆ, ಹೇಗೆ ನಂಬೋದು ಸಾರ್. ಅವನ ಜತೆ ಫೋನಲ್ಲಿ ಮಾತಾಡಿದೆ. ಕೆಟ್ಟದಾಗಿ ಮಾತಾಡಿದ ನಂಜೊಂತೆ, ಬೇಕಾದ್ರೆ ನೋಡಿ ನಾ ರೆಕಾರ್ಡ್ ಮಾಡ್ಕೊಂಡಿದ್ದೀನಿ..

ಮಾತು ಮಾತಿನ ನಡುವೆ ಅವನು ತನ್ನ ಸಾಕ್ಷ್ಯಗಳನ್ನೆಲ್ಲ ನನ್ನ ಮುಂದೆ ಮಂಡಿಸುತ್ತಿದ್ದ. ಬಾಂಬೆಯವನ ಫೇಸ್ ಬುಕ್ ಪೇಜ್ನ ಲಿಂಕುಗಳು, ಅವನು ನಡೆಸುವ ಗ್ರೂಪ್ನ ವಿವರಗಳು, ಇತ್ಯಾದಿ ಇತ್ಯಾದಿ…

ಅವನು ತನ್ನ ಸಾಕ್ಷ್ಯಗಳ ಕುರಿತು ತೋರುತ್ತಿದ್ದ ವಿಪರೀತ ಆಸಕ್ತಿಯಿಂದಲೇ, ಅವನ ಸಾಕ್ಷ್ಯಗಳ ಮೇಲೆ ನನಗೆ ಆಸಕ್ತಿ ಹೊರಟುಹೋಗಿತ್ತು. ಅವುಗಳನ್ನೆಲ್ಲ ನಿರ್ಲಕ್ಷ್ಯದಿಂದ ಪಕ್ಕಕ್ಕೆ ಸರಿಸಿ, ಮುಂದೇನಾಯ್ತು ಹೇಳು ಅಂದೆ.

ಒಂದ್ ತಪ್ ಕೆಲಸ ಮಾಡಿಬಿಟ್ಟೆ ಸಾರ್. ಒಂದು ಮಹಿಳಾ ಸಂಘದ ಅಧ್ಯಕ್ಷರೊಬ್ಬರಿದ್ದಾರೆ ಸಾರ್ ವಿಜಯಮ್ಮ ಅಂತ. ಅವರ ಹತ್ರ ಹೇಳ್ಕೊಂಡೆ. ಅವರು ನಿನ್ನ ಸಮಸ್ಯೆಗೆ ಪರಿಹಾರ ಆಗಬೇಕು ಅಂದ್ರೆ ಒಂದು ಟೀವಿ ಶೋಗೆ ಹೋಗಬೇಕು. ಅನುರಾಧ ಅಂತ ಫಿಲ್ಮ್ ಆಕ್ಟರ್ ಗೊತ್ತರು ತಾನೇ ನಿಂಗೆ? ಸೀರಿಯಲ್ನಲ್ಲೂ ಮಾಡ್ತಾರೆ. ತುಂಬಾ ಒಳ್ಳೆಯವರು. ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ? ಅವರೇ ಕಾರ್ಯಕ್ರಮ ನಡೆಸಿಕೊಡೋದು. ಅವರಿಗೆ ಒಂಥರಾ ಡಿವೈನ್ ಶಕ್ತಿಗಳಿವೆ ಅಂತಾರೆ. ಅವರ ಕೊರಳಲ್ಲಿ ದಪ್ಪದಪ್ಪ ರುದ್ರಾಕ್ಷಿ ಮಾಲೆ ಇರುತ್ತೆ, ಎದುರಿಗೆ ಕೂತವರ ನೆಗಟಿವ್ ಎನರ್ಜಿನೆಲ್ಲ ಆ ಮಣಿಗಳು ಹೀರಿ ಬಿಡ್ತಾವಂತೆ. ಎಲ್ಲರ ಸಮಸ್ಯೆಗಳನ್ನು ಮಾತಾಡಿ ಬಗೆಹರಿಸಿಬಿಡ್ತಾರೆ, ನಿಮ್ಮಿಬ್ಬರ ಸಮಸ್ಯೆ ಪರಿಹಾರವಾಗುತ್ತೆ. ಆದ್ರೆ ಒಂದು ಕಂಡಿಷನ್, ನಿನ್ನ ಹೆಂಡತಿಗೆ ಅಲ್ಲಿಗೆ ಹೋಗೋದು ಗೊತ್ತಾಗೋದು ಬೇಡ, ಹೋದ ಮೇಲೆ ಹೇಗೂ ಗೊತ್ತಾಗುತ್ತೆ. ಏನಾದ್ರೂ ಬೇರೆ ಕಾರಣ ಹೇಳಿ ಕರೆದುಕೊಂಡು ಬಂದುಬಿಡು. ಬಾಂಬೆಯವನ ಫೋನ್ ನಂಬರ್ ಕೊಡು, ಅವನನ್ನು ಕರೆಸೋ ಜವಾಬ್ದಾರಿ ಚಾನಲ್ ನವರದ್ದು. ಅವರು ಹೇಗಾದ್ರೂ ಕರೆಸಿಕೊಳ್ತಾರೆ…

ವಿಜಯಮ್ಮ ಹೇಳಿದ್ದನ್ನು ನಾನು ನಂಬಿದೆ ಸಾರ್, ಅವರು ಹೇಳಿದ ಹಾಗೇನೇ ಮಾಡಿದೆ.
ವಿಷಯನೂ ಹೇಳದೇ ಹೆಂಡತಿನಾ ಯಾಕ್ ಕರ್ಕೊಂಡ್ ಹೋದೆ? ಅಂತ ರೇಗಿದೆ.
ಏನ್ ಮಾಡಲಿ ಸಾರ್, ಅದೇ ನಾನ್ ಮಾಡಿದ ತಪ್ಪು ಎನ್ನುತ್ತ ತಲೆತಗ್ಗಿಸಿಕೊಂಡ. ಕಥೆ ಮುಂದುವರೆಯಿತು.

ಮುಂದಿನದ್ದನ್ನು ನಾನೂ ಟೀವಿಯಲ್ಲಿ ನೋಡಿದ್ದೆ. ಕೌಟುಂಬಿಕ ಸಮಸ್ಯೆಗಳನ್ನು ಒಂಥರಾ ಹಳ್ಳಿ ಪಂಚಾಯ್ತಿ ರೀತಿಯಲ್ಲಿ ಬಗೆಹರಿಸುವ ಕಾರ್ಯಕ್ರಮ ಅದು. ಕಾರ್ಯಕ್ರಮದಲ್ಲಿ ಜಗಳ ಆಗುತ್ತೋ ಅಥವಾ ಜಗಳಕ್ಕಾಗಿ ಕಾರ್ಯಕ್ರಮ ಮಾಡ್ತಾರೋ ಗೊತ್ತಾಗೋದೇ ಇಲ್ಲ. ನಿರೂಪಕಿ ಜಗಳ ಮಾಡಿಕೊಂಡು ಬಂದವರನ್ನು ಪ್ರಶ್ನೆ ಕೇಳುವ ಧಾಟಿಯಲ್ಲೇ ಜಗಳ ಮಾಡಿಸುವ ಸಂಚು ಕಾಣಿಸುತ್ತದೆ. ಆಮೇಲೆ ಚಪ್ಪಲಿಯಲ್ಲಿ ಹೊಡೆಯೋ ಪ್ರೋಗ್ರಾಂ. ಕ್ಯಾಮೆರಾಗಳು ಎಲ್ಲಾ ದಿಕ್ಕುಗಳಿಂದಲೂ ಓಡಾಡುತ್ತೆ. ನಿರೂಪಕಿ ಮಾತ್ರ ತಲೆ ಮೇಲೆ ಕೈ ಹೊತ್ತುಕೊಂಡು ಕೂತಿರುತ್ತಾರೆ. ನೆಗೆಟಿವ್ ಎನರ್ಜಿ ಹೀರುವ ಮಣಿಗಳು ಫಳಫಳ ಹೊಳೆಯುತ್ತಾ ಇರುತ್ತವೆ.

ಇವನ ವಿಷಯದಲ್ಲಿ ನಡೆದದ್ದೂ ಅದೇನೇ. ಬಾಂಬೆಯವನನ್ನು ಚಾನಲ್ ನವರೇ ಪುಸಲಾಯಿಸಿ ಏರ್ ಟಿಕೆಟ್ ಮಾಡಿಸಿ ಕರೆಸಿಕೊಂಡಿದ್ದರು. ಹೀಗೆ ಕ್ಯಾಮೆರಾಗಳ ಎದುರು, ಲಕ್ಷಾಂತರ ಕಣ್ಣುಗಳ ಮುಂದೆ ತನ್ನನ್ನು ತಾನು ಸಮರ್ಥಿಸಿಸಿಕೊಳ್ಳಬೇಕಾದ ಅಸಹಾಯಕತೆಯಿಂದಾಗಿ ಈಕೆ ಕಂಗೆಟ್ಟಿದ್ದಳು. ಅನುರಾಧರಿಂದ ಪ್ರಶ್ನೆಗಳ ಕೂರಂಬು ತೂರಿಬರುತ್ತಲೇ ಇತ್ತು. ಆಕೆ ಅಳ್ತಾ ಇದ್ದಳು, ತನ್ನನ್ನು ಯಾವುದೋ ಜ್ಯೋತಿಷಿ ಬಳಿ ಕರೆದುಕೊಂಡು ಹೋಗುವುದಾಗಿ ಹೇಳಿ ಇಲ್ಲಿಗೆ ಕರೆತಂದು ಮರ್ಯಾದೆ ಕಳೆದ ಗಂಡನ ಮೇಲೆ ಅಸಹನೆಯಿಂದ ಮಿಡುಕುತ್ತಿದ್ದಳು. ಪರಪುರುಷನ ಜತೆ ಸ್ನೇಹ ಮಾಡಿದ ಹೆಂಡತಿಯ ಮೇಲೆ ಸೇಡು ತೀರಿಸಿಕೊಂಡ ವಿಕೃತ ಸಂತೋಷ ಇವನ ಮುಖದಲ್ಲಿ.

ಚರ್ಚೆ ನಡೆಯುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಇವನ ತಮ್ಮ ಸಭಿಕರ ಸಾಲಿನಿಂದ ಎದ್ದುಬಂತು ಬಾಂಬೆಯವನ ಮೇಲೆ ಎರಗಿ ದಾಳಿ ಮಾಡುತ್ತಾಳೆ. ಅದರಿಂದ ಸ್ಫೂರ್ತಿ ಪಡೆದ ಇವನು ಹೆಂಡತಿಯನ್ನೇ ಎಲ್ಲರ ಎದುರು ಬಾರಿಸುತ್ತಾನೆ. ಇಬ್ಬರೂ ನೆಲದ ಮೇಲೆ ಬಿದ್ದು ಒದ್ದಾಡುತ್ತಾರೆ. ಅನುರಾಧ ಗಲಾಟೆ ಮಾಡಬೇಡಿ ಎಂದು ಹಣೆಹಣೆ ಚಚ್ಚಿಕೊಂಡು ಹೇಗೋ ಒಂದು ಬ್ರೇಕ್ನ ಬಳಿಕ ಎಲ್ಲರನ್ನೂ ಸಮಾಧಾನಪಡಿಸುತ್ತಾಳೆ.

ಏನಮ್ಮಾ, ಕಡೆದಾಗಿ ಕೇಳ್ತಾ ಇದ್ದೀನಿ, ಏನ್ ಮಾಡ್ತೀಯಾ? ಎಂದು ನಿರೂಪಕಿ ಘಟವಾಣಿ ಹೆಂಗಸಿನ ಶೈಲಿಯಲ್ಲಿ ಈಕೆಯನ್ನು ಕೇಳುತ್ತಾಳೆ. ನಾನು ಬಾಂಬೆಯವನ ಜತೆ ಹೋಗ್ತೀನೋ ಇಲ್ವೋ ಗೊತ್ತಿಲ್ಲ, ಆದರೆ ನನ್ನನ್ನು ಇಲ್ಲಿಗೆ ತಂದು ಮಯರ್ಾದೆ ಕಳೆದ ಗಂಡನ ಮನೆಗಂತೂ ಹೋಗಲಾರೆ ಎಂದು ಆಕೆ ಅಲ್ಲಿಂದ ಎದ್ದುಹೋಗುತ್ತಾಳೆ. ಮತ್ತೆ ಒಂದಷ್ಟು ಗಲಾಟೆ, ಪೊಲೀಸರು, ರಂಪಾಟ. ಅಲ್ಲಿಗೆ ಎಪಿಸೋಡು ಮುಗಿಯುತ್ತದೆ.

ಇವನು ನನ್ನ ಬಳಿ ಬರುವುದಕ್ಕೂ ಮುನ್ನವೇ, ನನ್ನ ಗೆಳತಿ ಈ ಕಾರ್ಯಕ್ರಮದ ವಿಡಿಯೋ ಲಿಂಕ್ಗಳನ್ನು ನನಗೆ ಕಳುಹಿಸಿದ್ದಳಾದ್ದರಿಂದ ಈ ಎಲ್ಲ ಕದನವನ್ನೂ ನೋಡಿದ್ದೆ.
ಅಲ್ಲಪ್ಪ, ಆ ಹೆಣ್ಣುಮಗಳ ಮೇಲೆ ಹಾಗೆ ಕೈ ಮಾಡಿದೆಯಲ್ಲ, ಅಸಹ್ಯ ಅನ್ನಿಸಲ್ವಾ ನಿನ್ನ ಮೇಲೆ ನಿನಗೆ? ಅಂತ ಕೇಳಿದೆ. ನಿಜ ಹೇಳಬೇಕೆಂದರೆ ಇವನನ್ನು ಎದುರಿಗೆ ಕೂರಿಸಿಕೊಂಡು ಮಾತಾಡ್ತಾ ಇದ್ದಿದ್ದಕ್ಕೇ ನನಗೆ ನನ್ನ ಮೇಲೆ ಅಸಹ್ಯ ಹುಟ್ಟುವಂತಾಗಿತ್ತು. ಸಾರ್, ತಪ್ಪಾಯ್ತು, ಹಾಗೆ ಮಾಡಬಾರದಿತ್ತು ಎನ್ನುತ್ತ ಮುಷ್ಠಿ ಬಿಗಿಹಿಡಿದು ತನ್ನ ಬಲಗೈಗೆ ಶಿಕ್ಷೆ ಕೊಡುತ್ತಿರುವಂತೆ ತಿರುಚಿದ.
ಏನ್ ಮಾಡಲಿ ಸಾರ್, ಪ್ರೋಗ್ರಾಂನವರು ಮೊದಲೇ ನನ್ನ ತಮ್ಮನ ಜತೆ ಮಾತಾಡಿದ್ದರಂತೆ. ನಾವು ಸಿಗ್ನಲ್ ಕೊಡ್ತೀವಿ. ಅವಾಗ ಬಂದು ಬಾಂಬೆಯವನಿಗೆ ನಾಲ್ಕು ತದುಕು. ಉಳಿದದ್ದು ನಾವು ನೋಡ್ಕೋತೀವಿ ಅಂತ. ನಾವು ಮಾತಾಡೋ ಟೈಮಿನಲ್ಲಿ ಸಿಗ್ನಲ್ ಬಂದಿದೆ. ಅವನು ಬಂದು ಹೊಡೆದ. ಅದನ್ನು ಇವಳು ಪ್ರತಿಭಟಿಸಿದ್ದು ನಂಗೆ ಸರಿ ಅನಿಸಲಿಲ್ಲ, ಕೋಪದಿಂದ ಹೊಡೆದೆ ಸಾರ್, ಹೊಡೀಬಾರದಿತ್ತು ಸಾರ್ ಅಂದ.

ಸರಿ, ಆಮೇಲೇನಾಯ್ತು, ಅದನ್ನಾದ್ರೂ ಹೇಳು ಅಂದೆ.
ಇನ್ನೇನ್ ಸಾರ್, ಎಲ್ಲಾ ಮುಗಿದುಹೋಯ್ತು. ಇವಳು ಹೋಗಿ ತವರು ಮನೆಯಲ್ಲಿ ಕೂತ್ಕೊಂಡಳು. ವಾಪಾಸ್ ಬಾ ಅಂತ ಫೋನ್ ಮಾಡಿ ಹೇಳಿದೆ. ಕೇಳಲಿಲ್ಲ. ಅವಳು ರಸ್ತೆಯಲ್ಲಿ ಓಡಾಡದಂತೆ ಆಗೋಗಿದೆ ಸಾರ್. ನಿಮಗೇ ಗೊತ್ತಲ್ವಾ ಸಾರ್, ನಮ್ಮ ಎಪಿಸೋಡು ಮೂರು ದಿನ ಪ್ರಸಾರ ಮಾಡಿದ್ರು ಚಾನಲ್ನಲ್ಲಿ. ಅದರ ಮೇಲೆ ರಿಪೀಟ್ ಟೆಲಿಕಾಸ್ಟ್ಗಳು ಬೇರೆ. ತುಂಬಾ ಜನ ನೋಡಿದ್ದಾರೆ. ಯಾರು ಸಿಕ್ಕರೂ ನೀವು ಟೀವಿಯಲ್ಲಿ ಬಂದಿದ್ರಿ ಅಲ್ವಾ ಅಂತಾರೆ. ನನಗೇ ತಲೆ ಎತ್ತಿಕೊಂಡು ತಿರುಗಾಡೋದಕ್ಕೆ ಸಾಧ್ಯವಾಗ್ತಾ ಇಲ್ಲ. ಇನ್ನು ಅವಳ ಕಥೆ ನೀವೇ ಯೋಚನೆ ಮಾಡಿ ಸಾರ್.

ಸಾರ್, ಶೂಟಿಂಗ್ ಆದ ಮೇಲೆ ನಾನು ಮಾಡಿದ್ದು ತಪ್ಪು ಅಂತ ನಂಗೆ ಗೊತ್ತಾಯ್ತು. ಶೋನ ದಯವಿಟ್ಟು ಪ್ರಸಾರ ಮಾಡಬೇಡಿ. ಮಾಡಿದರೆ ನಾನು, ನನ್ನ ಹೆಂಡ್ತಿ ಒಂದಾಗೋದಕ್ಕೆ ಇರೋ ಕಡೆಯ ಅವಕಾಶನೂ ಹಾಳಾಗುತ್ತೆ ಅಂತ ಪರಿಪರಿಯಾಗಿ ಬೇಡಿಕೊಂಡೆ ಸಾರ್. ಅವರು ಕೇಳಲೇ ಇಲ್ಲ. ಕೋಟರ್ಿನಲ್ಲಿ ಸ್ಟೇ ತಗೊಳ್ಳೋದಕ್ಕೆ ಸಮಯ ಇರಲಿಲ್ಲ ಸಾರ್, ರಜೆ ಬಂದಿತ್ತು. ಕಡೆಗೆ ಗಾಂಧಿನಗರದಲ್ಲಿ ಇದ್ದಾರಲ್ಲ ಸಾರ್, ಫೇಮಸ್ ಲಾಯರ್ ಎಸ್.ಸಿ. ಮಥುರಾನಾಥ್ ಅಂತ. ಅವರ ಬಳಿ ಹೋದೆ. ಅವರು ಒಂದು ಲೀಗಲ್ ನೋಟಿಸ್ ಕೊಟ್ರು ಚಾನಲ್ಗೆ. ಯಾವುದೇ ಕಾರಣಕ್ಕೂ ಪ್ರಸಾರ ಮಾಡಬಾರದು ಅಂತ. ಅವರು ಕ್ಯಾರೇ ಅನ್ನಲಿಲ್ಲ ಸಾರ್, ಪ್ರಸಾರ ಮಾಡೇಬಿಟ್ರು.

ಅದ್ಸರಿ ಈಗೇನ್ ಮಾಡೋದು? ಏನ್ ಮಾಡಿದರೆ ನಿನ್ನ ಪತ್ನಿ ವಾಪಾಸ್ ಬರ್ತಾಳೆ ಅಂದುಕೊಂಡಿದ್ದೀಯಾ?
ಗೊತ್ತಾಗ್ತಾ ಇಲ್ಲ ಸಾರ್. ತುಂಬಾ ಜನರ ಹತ್ರ ಹೋಗಿ ಕೇಳಿದೆ. ಎಲ್ಲರೂ ಬೇರೆಬೇರೆಯಾಗಿಬಿಡಿ, ಲೀಗಲ್ ಆಗಿ ಸೆಪರೇಟ್ ಆಗಿಬಿಡಿ ಅಂತಾರೆ. ಅವರಿಗೇನ್ ಗೊತ್ತು ಸಾರ್. ನನ್ನ ಹೆಂಡತಿ ಒಳ್ಳೆಯವಳು. ಹತ್ತು ವರ್ಷ ಸಂಸಾರ ಮಾಡಿದ್ದೀನಿ ಸಾರ್. ಮಗು ತಾಯಿ ನೆನಪಿಸಿಕೊಂಡು ಅಳುತ್ತೆ. ಕೌನ್ಸಿಲಿಂಗ್ ಮಾಡಿಸ್ತಾ ಇದ್ದೀನಿ. ಸರಿ ಹೋಗ್ತಾ ಇಲ್ಲ. ನಂಗೆ ಅವಳು ಬೇಕು ಸಾರ್, ಅವಳು ಬೇಕು….
ಇವನು ಇಷ್ಟೆಲ್ಲ ಮಾತನಾಡುವಾಗ ಡಾ. ನೀಲಾ ನೆನಪಾದರು. ಮಹಿಳೆಯರಿಗೆ ಸಂಬಂಧಿಸಿದ ಎನ್ಜಿಓದಲ್ಲಿ ಕೆಲಸ ಮಾಡ್ತಾ ಇರೋರು ಅವರು. ಲೈಂಗಿಕ ಶೋಷಿತ ಹೆಣ್ಣುಮಕ್ಕಳ ಬಗ್ಗೆ ಹೆಚ್ಚು ಕೆಲಸಮಾಡಿದವರು. ಅವರು ಇವನಿಗೂ ಪರಿಚಯವಿತ್ತು. ಸಮಸ್ಯೆ ಹೀಗಿದೆ ಮೇಡಂ, ಬನ್ನಿ ಮಾತಾಡೋಣ ಅಂದೆ, ಮಾರನೇ ದಿನವೇ ಅವರೂ ಬಂದರು. ಮತ್ತೆ ಅವರೆದುರು ಎಲ್ಲ ವಿಷಯಗಳು ಪ್ರಸ್ತಾಪವಾದವು. ಇವನ ಬ್ಯಾಗ್ ತುಂಬಾ ಬಾಂಬೆಯವನ ವಿರುದ್ಧದ ಸಾಕ್ಷ್ಯಗಳು.

ನಾನೂ, ಮೇಡಂ ಇಬ್ಬರೂ ರೇಗಿದೆವು. ನಿಮ್ಮ ಸಾಕ್ಷ್ಯಗಳನ್ನೆಲ್ಲ ಮೊದಲು ಬೆಂಕಿಗೆ ಹಾಕಿ ಆಮೇಲೆ ನಿಮ್ಮಿಬ್ಬರ ಸಂಬಂಧ ಸುಧಾರಿಸಿಕೊಳ್ಳೋದಕ್ಕೆ ಪ್ರಯತ್ನಪಡು. ನಿನ್ನ ಸಾಕ್ಷ್ಯಗಳು ನಿನ್ನ ವಿರುದ್ಧವೇ ಕೆಲಸ ಮಾಡಿವೆ. ಅವುಗಳಿಂದಾಗಿಯೇ ನೀನು ಕೆಟ್ಟಿದ್ದೀಯ. ನಿನ್ನನ್ನು ನೀನು ಸಮರ್ಥಿಸಿಕೊಳ್ಳುವುದಕ್ಕೆ ಅವಳನ್ನು ಕೆಟ್ಟವಳನ್ನಾಗಿಮಾಡಬೇಕಿತ್ತು. ಅದನ್ನು ನೀನು ಯಶಸ್ವಿಯಾಗಿ ಮಾಡಿದ್ದೀ. ಇನ್ನೇನೂ ಉಳಿದಿಲ್ಲ. ಆಕೆಗೆ ಬದುಕುವ ಮಾರ್ಗವನ್ನೇ ಬಂದ್ ಮಾಡಿದ್ದೀಯ. ಅವಳು ಈಗ ನಿನ್ನ ಜತೆ ನಾಯಿಯಂತೆ ಬದುಕಿರುತ್ತಾಳೆ ಅನ್ನೋದು ನಿನ್ನ ಲೆಕ್ಕಾಚಾರವಾಗಿದ್ದಿರಬೇಕು. ಆದರೆ ಅವಳ ಕಣ್ಣಿನಲ್ಲಿ ನೀನು ಪಾತಾಳಕ್ಕೆ ಇಳಿದುಹೋಗಿದ್ದೀಯಾ. ಹಾಗಾಗಿ ಅವಳು ನಿನ್ನ ಜತೆ ಬದುಕೋದು ಸಾಧ್ಯವೇ ಇಲ್ಲ ಅನ್ನಿಸುತ್ತೆ.

ನಾವಿಬ್ಬರೂ ಅಥವಾ ಇಡೀ ಸಮಾಜವೇ ಬಂದು ಅವಳ ಎದುರು ನಿಂತು, ನಿನ್ನ ತಪ್ಪುಗಳನ್ನು ಮನ್ನಿಸಿ ನಿನ್ನ ಜತೆ ಸಂಸಾರ ಮುಂದುವರೆಸಲು ಹೇಳಿದರೂ ಆಕೆ ಕೇಳಲಾರಳೇನೋ. ಹೀಗಾಗಿ ನಾವು ಮಾತಾಡೋದೂ ಸರಿಯಲ್ಲ. ನಿನ್ನ ಪರವಾಗಿ ಮಾತನಾಡೋದಕ್ಕೂ ಏನೂ ಉಳಿದಿಲ್ಲ.

ಈಗ ನಿನಗಿರೋದು ಒಂದೇ ದಾರಿ. ಅವಳ ಕಾಲು ಹಿಡಿದು ಅವಳನ್ನು ಒಪ್ಪಿಸೋದು. ನಿನ್ನ ಮೇಲಿಟ್ಟ ನಂಬಿಕೆಯನ್ನು ನೀನು ಒಡೆದು ಚೂರು ಮಾಡಿದ್ದೀ. ಅದನ್ನು ಸರಿಪಡಿಸಿಕೊಳ್ಳುವುದು ಒಂದು ಭೇಟಿ, ಒಂದು ಸಿಟ್ಟಿಂಗ್ನಲ್ಲಿ ಆಗುವ ಕೆಲಸವಲ್ಲ. ನೋಡು ಪ್ರಯತ್ನಪಡು, ಉಳಿದದ್ದು ನಿನಗೆ ಸೇರಿದ್ದು…
ಹೀಗೆಂದು ನಾವು ಸುಮ್ಮನಾದೆವು.
ಅವಳು ಒಪ್ಪದಿದ್ದರೆ ನನ್ನ ಮಗಳ ಕತೆ? ಅವಳು ಮಾನಸಿಕ ಅಸ್ವಸ್ಥೆಯಾಗಿಬಿಡ್ತಾಳೆ ಸಾರ್ ಎಂದು ಅವನು ಬಿಕ್ಕಿದ.
ನಮ್ಮ ಬಳಿ ಉತ್ತರವಿರಲಿಲ್ಲ. ಟಿವಿ ಕಾರ್ಯಕ್ರಮದ ನಿರೂಪಕಿ ಅನುರಾಧಾ ಅವರನ್ನೇ ಕೇಳಬೇಕೆನಿಸಿತು. ಆಕೆ ಈಗೀಗ ತುಂಬಾ ಬಿಜಿ. ರಾಜಕೀಯ ಪಕ್ಷವೊಂದರ ಕಾರ್ಯಕರ್ತೆಯಾಗಿ ಅವರು ಸಮಾಜಸೇವೆಯಲ್ಲಿ ತೊಡಗಿದ್ದಾರೆ.



Friday, 25 May 2012

ಡಬ್ಬಿಂಗ್ : ಸಮಸ್ಯೆಯ ಆಯಾಮಗಳು, ವಿರೋಧಾಭಾಸಗಳು, ವಿಪರ್ಯಾಸಗಳು - ಎನ್. ಮನು ಚಕ್ರವರ್ತಿ



ಎನ್. ಮನುಚಕ್ರವರ್ತಿ ನಾಡಿನ ಹೆಸರಾಂತ ವಿಮರ್ಶಕರು. ರಾಜ್ಯದಲ್ಲಿ ನಡೆದಿರುವ ಡಬ್ಬಿಂಗ್ ಕುರಿತ ವಾದ ವಿವಾದಗಳ ಸಂದರ್ಭದಲ್ಲಿ ಅವರು 'ದ ಸಂಡೆ ಇಂಡಿಯನ್' ಪತ್ರಿಕೆಗೆ ಬರೆದಿರುವ ಒಂದು ತಲಸ್ಪರ್ಶಿ ಲೇಖನ ಇಲ್ಲಿದೆ... 

ಸಾಹಿತ್ಯ ಕ್ಷೇತ್ರದಲ್ಲಿ ಅನುವಾದಕ್ಕೆ ಬೆಲೆ, ಗೌರವ, ಮನ್ನಣೆ ಅಪಾರವಾಗಿ, ನಿರ್ವಿವಾದವಾಗಿ ದೊರೆತಿದೆ. ಅನುವಾದ ಕ್ರಿಯೆಯನ್ನು ಸೃಜನಶೀಲ ಕ್ರಿಯೆಯಾಗಿಯೇ ಗುರುತಿಸಲಾಗಿದೆ. ಒಂದು ಸಮುದಾಯಕ್ಕೆ ಅನ್ಯ ಭಾಷೆಯ ಕೃತಿಗಳು ಅನುವಾದಗಳ ಮೂಲಕ ಬಂದಾಗ ಅವುಗಳನ್ನು ದೊಡ್ಡ ಕೊಡುಗೆಯಾಗಿ ಎಲ್ಲರೂ ಮುಕ್ತವಾಗಿ ಸ್ವೀಕರಿಸುತ್ತಾರೆ. ತಮ್ಮ ಭಾಷೆಗಳಿಗೆ, ಸಂಸ್ಕೃತಿಗಳಿಗೆ ಅನ್ಯಭಾಷಾ ಕೃತಿಗಳು ಮಾರಕ, ಅಪಾಯ ಎಂದು ಯಾರೂ ಆರೋಪ ಹೊರೆಸುವುದಿಲ್ಲ. ಸ್ಥಳೀಯ ಸಂಸ್ಕೃತಿಗೆ ಅನ್ಯ ಸಂಸ್ಕೃತಿಗಳ ಕೃತಿಗಳು ಬಂದಾಗ ಅವುಗಳನ್ನು ಒಂದು ಸಾಂಸ್ಕೃತಿಕ ಅನುಸಂಧಾನವನ್ನಾಗಿ ಸ್ವೀಕರಿಸಲಾಗುತ್ತದೆ. ಸ್ಥಳೀಯತೆಗೆ ಮತ್ತೊಂದು ಸಾಂಸ್ಕೃತಿಕ ನೆಲೆ ದಕ್ಕಿದಂತೆ ಈ ಪ್ರಕ್ರಿಯೆಯನ್ನು ವ್ಯಾಖ್ಯಾನಿಸಲಾಗುತ್ತದೆ.

ಸಿನೆಮಾ ಜಗತ್ತಿಗೆ ಬಂದಾಗ ನೇರವಾಗಿ ಮತ್ತೊಂದು ಭಾಷೆಯಲ್ಲೇ ಚಿತ್ರಗಳು ಸ್ಥಳೀಯವಾಗಿ ಬಿಡುಗಡೆಯಾದಾಗ ಅದನ್ನು ಯಾರೂ, ಎಂದೂ ದೊಡ್ಡ ಅಪಾಯವೆಂದು ಪರಿಗಣಿಸುವುದಿಲ್ಲ. ಚಿತ್ರಗಳು ಯಾವ ಭಾಷೆ, ಸಂಸ್ಕೃತಿಯಿಂದ ಬಂದರೂ ಅವುಗಳನ್ನು ಸಹಜವಾಗಿಯೇ ಸ್ವೀಕರಿಸುವ ರೀತಿಯನ್ನು ಎಲ್ಲರೂ ಗಮನಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬೇರೆ ಭಾಷೆಗಳ ಚಿತ್ತಗಳು ಡಬ್ ಆದಾಗ (ಇದನ್ನು ಮೌಖಿಕ ಅನುವಾದ ಎಂದು ಕರೆಯೋಣ) ಅನೇಕ ಬಗೆಯ ವಿರೋಧಗಳು ಎದ್ದು ಬರುವುದನ್ನು ಕಂಡಿದ್ದೇವೆ. ಕರ್ನಾಟಕದಲ್ಲಿ ಡಬ್ ಆದ ಚಿತ್ರಗಳ ವಿರುದ್ಧ ದೊಡ್ಡ ಆಂದೋಲನವೇ ಪ್ರಾರಂಭವಾಗಿದೆ. ಕೇವಲ ಚಿತ್ರರಂಗದ ಒಳಗಿರುವವರು ಮಾತ್ರ ಈ ವಿರೋಧವನ್ನು ವ್ಯಕ್ತಪಡಿಸುತ್ತಿಲ್ಲ. ಬದಲಾಗಿ ಸಾಂಸ್ಕೃತಿಕ ಕ್ಷೇತ್ರದ ಅನೇಕರು ಡಬ್ ಆದ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಒದಗಿ ಬಂದಿರುವ ದೊಡ್ಡ ಶತ್ರುವೆಂದೇ ಕಾಣುತ್ತಿರುವ ಸಂಗತಿಯನ್ನು ನಾವು ಗಮನಿಸಬಹುದು. ಕನ್ನಡ ಭಾಷೆಗೆ, ಸಂಸ್ಕೃತಿಗೆ, ಕನ್ನಡ ಜನರ ಸಂವೇದನೆಗೆ ಡಬ್ ಆದ ಚಿತ್ರಗಳು (ಅದರಲ್ಲೂ ಕೆಳದರ್ಜೆಯ ಹಾಲಿವುಡ್ನ ಚಿತ್ರಗಳು ಮತ್ತು ಹಿಂದಿ, ತಮಿಳು, ತೆಲುಗು ಚಿತ್ರಗಳು) ದೊಡ್ಡ ರೀತಿಯಲ್ಲಿ ಹಾನಿಯನ್ನುಂಟುಮಾಡುವುದರಲ್ಲಿ ಸಂದೇಹವಿಲ್ಲ ಎಂಬ ಆಲೋಚನೆ ಈ ವಾದದ ಹಿಂದೆ ಇದೆ. ಇದನ್ನು ಸಾಂಸ್ಕೃತಿಕ ದುರಂತವೆಂದು ಬಣ್ಣಿಸಲಾಗುತ್ತಿದೆ. ಒಂದು ಸಮುದಾಯದ ಸದಭಿರುಚಿಯನ್ನು ನಾಶಮಾಡುವ ಶಕ್ತಿಯಾಗಿ ಡಬ್ ಆದ ಚಿತ್ರಗಳನ್ನು ಕಾಣಲಾಗುತ್ತಿದೆ. ಅಷ್ಟೇ ಅಲ್ಲದೆ ವ್ಯಾವಹಾರಿಕ ದೃಷ್ಟಿಯಿಂದಲೂ ಡಬ್ ಆದ ಚಿತ್ರಗಳನ್ನು ಕನ್ನಡ ಚಿತ್ರೋದ್ಯಮದ ಮಹಾ ದೊಡ್ಡ ಶತ್ರುವೆಂದೇ ಪರಿಗಣಿಸಲಾಗುತ್ತಿದೆ. ಬೇರೆ ಭಾಷೆಗಳ ಚಿತ್ರಗಳ ರಾಕ್ಷಸಾಕಾರದ ಬಂಡವಾಳದ ಎದುರು ಕನ್ನಡ ಚಿತ್ರಗಳು ಕೊಚ್ಚಿಹೋಗುತ್ತವೆ, ಅವುಗಳಿಗೆ ಮಾರುಕಟ್ಟೆಯಲ್ಲಿ ಯಾವ ಸ್ಥಾನವೂ ದಕ್ಕುವುದಿಲ್ಲ ಎಂಬ ವಾದ ಈ ನಿರ್ದಿಷ್ಟ ವಿರೋಧದಲ್ಲಿದೆ. ಅಂದರೆ ಡಬ್ಬಿಂಗ್ಗೆ ಇರುವ ವಿರೋಧಗಳು ಎರಡು ಬಗೆಯವು. ಮೊದಲನೆಯದು ಸಾರ್ವತ್ರಿಕವಾದ, ಸಾರ್ವಜನಿಕವಾದ ಸಾಂಸ್ಕೃತಿಕ ವಿರೋಧ. ಎರಡನೆಯದು ನಿರ್ದಿಷ್ಟವಾದ ಚಿತ್ರರಂಗದ ಆಂತರಿಕ ವಿರೋಧ. ಒಂದಕ್ಕೆ ತಾತ್ವಿಕ ಆಯಾಮಗಳಿವೆ, ಮತ್ತೊಂದಕ್ಕೆ ವ್ಯಾವಹಾರಿಕ ಗುಣವಿದೆ.

ಡಬ್ಬಿಂಗ್ ವಿರೋಧಕ್ಕೆ ವಿರೋಧ ಹುಟ್ಟಿರುವ ಸಂಗತಿಯನ್ನು ಸರಿಯಾಗಿ ಅರ್ಥೈಸಬೇಕು. ಡಬ್ಬಿಂಗ್ ಪರವಾಗಿ ವಾದಮಾಡುತ್ತಿರುವವರ ನಿಲುವನ್ನು ಪೂರ್ವಾಗ್ರಹಗಳಿಲ್ಲದೆ ಅರಿಯಬೇಕು. ಅಲ್ಲದೆ ಡಬ್ಬಿಂಗ್ ಸಮಸ್ಯೆಯನ್ನು ಬೇಕು-ಬೇಡಗಳ ಗಡಿಯನ್ನು ದಾಟಿ ಸರಿಯಾಗಿ ಅರಿತುಕೊಳ್ಳಬೇಕು. ಇದು ಎಲ್ಲರ ಮೂಲಭೂತ ಕರ್ತವ್ಯ.

ಡಬ್ಬಿಂಗ್ ಪರವಾಗಿ ವಾದ ಮಾಡುತ್ತಿರುವವರು ಸಾಮಾಜಿಕ ನ್ಯಾಯದ ವಾದವನ್ನು ಹೂಡುತ್ತಿದ್ದಾರೆ. ಬೇರೆ ಭಾಷೆಗಳಲ್ಲಿರುವ ಅತ್ಯುತ್ತಮ ಚಿತ್ರಗಳನ್ನು ಕೇವಲ ಒಂದು ವರ್ಗ ಮಾತ್ರ ನೋಡಲು ಈ ಸಮಾಜದಲ್ಲಿ ಅವಕಾಶವಿರಬೇಕೇ ಎಂದು ಈ ಪಂಥದವರು ಕೇಳುತ್ತಿರುವುದನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಭಾರತದ ಅನೇಕ ಭಾಷೆಗಳಲ್ಲಿ ಮತ್ತು ಹೊರ ದೇಶಗಳ ಅನೇಕ ಭಾಷೆಗಳಲ್ಲಿ ಸೃಷ್ಟಿಸಲ್ಪಡುವ ಅತ್ಯುತ್ತಮ ಚಲನಚಿತ್ರಗಳನ್ನು ನಮ್ಮ ಸಾಮಾನ್ಯರು, ಅಂತ್ಯಜರು ಕನ್ನಡದಲ್ಲೇ ಡಬ್ಬಿಂಗ್ ಮೂಲಕ ಯಾವ ಕಾರಣಕ್ಕೆ ನೋಡಬಾರದೆಂಬುದೇ ಅವರ ಪ್ರಶ್ನೆ. ಅತ್ಯುತ್ತಮ ಚಿತ್ರಗಳು ಎಲ್ಲರಿಗೂ ದಕ್ಕಬಾರದೇಕೆ ಎಂಬುದು ಇವರ ತೀಕ್ಷ್ಣವಾದ ಸವಾಲು. ಸಂಸ್ಕೃತಿ, ವ್ಯವಹಾರದ ಹೆಸರಿನಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರ ಇದು ಎಂಬುದೇ ಇವರ ಆರೋಪ. ಸಾಮಾಜಿಕ ನ್ಯಾಯವೆಂಬ ಪರಿಕಲ್ಪನೆಯನ್ನು ಇಟ್ಟುಕೊಂಡೇ ಡಬ್ಬಿಂಗ್ ಪರವಾಗಿ ವಾದಮಾಡುವವರು ತಮ್ಮ ಸಿದ್ಧಾಂತವನ್ನು ಹೀಗೆ ಅಭಿವ್ಯಕ್ತಿಗೊಳಿಸುತ್ತಿರುವುದನ್ನು ನಾವು ಕಡೆಗಣಿಸುವಂತಿಲ್ಲ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಸಾಂಸ್ಕೃತಿಕ ವಲಯಗಳಿಂದ ದೂರ ಉಳಿಯಬೇಕಾಗಿ ಬರುವುದು ಒಂದು ಸಾಮಾಜಿಕ ದುರಂತವೆಂದು ಗಟ್ಟಿಯಾಗಿ ಸಾರುತ್ತ, ಡಬ್ಬಿಂಗ್ ಅನ್ನು ಸ್ವಾಗತಿಸಿ, ಒಪ್ಪಿಕೊಳ್ಳಬೇಕು ಎಂಬುದು ಡಬ್ಬಿಂಗ್ ಪರವಾಗಿ ವಾದ ಮಾಡುವವರ ನಿಲುವಾಗಿದೆ.

ಡಬ್ಬಿಂಗ್ಗೆ ಬರುವ ವಿರೋಧವು ಉಳ್ಳವರ ತಂತ್ರ ಮತ್ತು ಇದೊಂದು ಬಗೆಯ ಬೌದ್ಧಿಕ ಶೋಷಣೆ ಎಂಬುದೇ ಡಬ್ಬಿಂಗ್ೆ ಪರವಾಗಿ ವಾದಮಾಡುತ್ತಿರುವವರ ಖಚಿತ ಸೈದ್ಧಾಂತಿಕ ನಿಲುವಾಗಿದೆ. ಮುಕ್ತ ಸಮಾಜದಲ್ಲಿ ಈ ರೀತಿಯ ನಿಷೇಧಗಳು ಇರಬಾರದೆಂಬುದು ಇವರ ಮತ್ತೊಂದು ವಾದ. ಸಮುದಾಯದಲ್ಲಿ ಜನರಿಗೆ ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಯಾರೂ ಕಿತ್ತುಕೊಳ್ಳುವ ಹಾಗಿಲ್ಲ, ಆ ರೀತಿಯ ಅಧಿಕಾರವನ್ನು ಯಾರೂ ಯಾರಿಗೂ ಪ್ರಜಾಪ್ರಭುತ್ವದಲ್ಲಿ ಕೊಟ್ಟಿಲ್ಲ, ಕೊಡಬಾರದೆಂಬುದೇ ಇವರ ರಾಜಕೀಯ ಸಿದ್ಧಾಂತವೂ ಹೌದು.

ಈ ಎರಡೂ ವಾದಗಳಲ್ಲಿ ಸತ್ಯವಿದೆ. ಎರಡು ಪಂಥಗಳ ವಿಚಾರಗಳಲ್ಲಿ ನಿಜವಾಗಲೂ ಒಪ್ಪಿಕೊಳ್ಳಲೇಬೇಕಾದ ಸಂಗತಿಗಳಿವೆ. ಹಾಗಾದರೆ ಈ ಡಬ್ಬಿಂಗ್ ಪರ/ವಿರೋಧ ನೆಲೆಗಳ ನಡುವೆ ಯಾವ ರೀತಿಯ ಅನುಸಂಧಾನವನ್ನು ಕಟ್ಟಲು ಸಾಧ್ಯ? ಈ ಎರಡೂ ಬಣಗಳನ್ನು ಒಟ್ಟುಮಾಡಬಹುದಾದ ಬುನಾದಿ ಯಾವುದು? ಕನರ್ಾಟಕದಲ್ಲಿ ಚಲನಚಿತ್ರೋದ್ಯಮವನ್ನು ಕಾಪಾಡುತ್ತಲೇ ನಮ್ಮ ಅಲ್ಪಸಂಖ್ಯಾತರಿಗೆ, ಬಹುಜನರಿಗೆ ಅತ್ಯುತ್ತಮವಾದ ಚಲನಚಿತ್ರಗಳನ್ನು ವೀಕ್ಷಿಸುವ ಸೌಲಭ್ಯವನ್ನು ಒದಗಿಸಿಕೊಡುವ ಸಾಧ್ಯತೆಗಳಿವೆಯೆ? ಡಬ್ಬಿಂಗ್ ಪರ/ವಿರೋಧ ಇರುವವರಿಬ್ಬರಲ್ಲೂ ಸತ್ಯಾಂಶಗಳಿವೆ ಎಂಬ ವಿಪರ್ಯಾಸವನ್ನು ಬಗೆಹರಿಸುವುದಾದರೂ ಹೇಗೆ? ಕರ್ನಾಟಕದ ಸಮುದಾಯಗಳು ಈ ವಿಷಯದ ಬಗ್ಗೆ ಇನ್ನಾದರೂ ಬಹಳ ಗಂಭೀರವಾಗಿ ಯೋಚನೆ ಮಾಡಿ ಪರಿಹಾರವನ್ನು ಹುಡುಕಬೇಕು. ಇದು ಇಂದಿನ ಅಗತ್ಯ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

ಡಬ್ಬಿಂಗ್ ವಿಷಯದಲ್ಲಿ ಪರ/ವಿರೋಧಗಳ ನಡುವೆ ಅನುಸಂಧಾನಗಳಿಗೆ ಅನೇಕ ಸಮಾನ ಅಂಶಗಳಿರುವುದನ್ನು ಗಣನೆಗೆ ತೆಗೆದುಕೊಳ್ಳುವುದು ಮುಖ್ಯ. ವ್ಯಾವಹಾರಿಕ ದೃಷ್ಟಿಯಿಂದ ಡಬ್ಬಿಂಗ್ ವಿರೋಧಿಸುತ್ತಿರುವವರಿಗೂ ಕನ್ನಡ ಚಲನಚಿತ್ರಗಳು ಮಾರುಕಟ್ಟೆಯಲ್ಲಿ ಚೆನ್ನಾಗಿ ನಡೆಯಬೇಕು, ಒಳ್ಳೆಯ ಗುಣಮಟ್ಟವನ್ನು ಹೊಂದಿರಬೇಕೆಂಬ ಕಾಳಜಿ ಕೂಡ ಇದೆ. ಈಗ ಕನ್ನಡದ ಜನಪ್ರಿಯ ಚಲನಚಿತ್ರಗಳಿಗೆ ಹೇಳಿಕೊಳ್ಳುವಂತಹ ಗುಣಮಟ್ಟವಿಲ್ಲ ಎಂದು ಜನಪ್ರಿಯ ಸಿನೆಮಾ ಮಾಡುವವರಲ್ಲಿ ಅನೇಕರು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ.

ಸದಭಿರುಚಿಯ ಚಿತ್ರಗಳು ಕನ್ನಡ ಸಂಸ್ಕೃತಿಯಲ್ಲಿ ಉಳಿಯಬೇಕು ಎಂದು ವಾದ ಮಾಡುವವರು ವ್ಯಾವಹಾರಿಕವಾಗಿಯೂ ಕನ್ನಡ ಚಲನಚಿತ್ರಗಳು ಯಶಸ್ಸನ್ನು ಕಾಣಬೇಕೆಂದು ಬಯಸುವವರೇ. ಕಲಾತ್ಮಕ ಚಿತ್ರಗಳೆಂದುಕೊಂಡು ಅವುಗಳು ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಸೋತರೂ ಪರವಾಗಿಲ್ಲ ಎಂದು ಹೇಳುವವರಲ್ಲ ಇವರು. ಆದ್ದರಿಂದ ಡಬ್ಬಿಂಗ್ ವಿರೋಧಿ ನೆಲೆಯಲ್ಲಿ ಒಂದು ತೆರೆದ ಮನಸ್ಸಿರುವುದನ್ನು ನಾವು ಕಡೆಗಣಿಸುವಂತಿಲ್ಲ.

ಹಾಗೆಯೆ ಡಬ್ಬಿಂಗ್ ಪರ ಇರುವವರು ಕನ್ನಡ ಚಿತ್ರಗಳು ಯಶಸ್ಸನ್ನು ಕಾಣಬೇಕು, ವೀಕ್ಷಕರಲ್ಲಿ ಒಳ್ಳೆಯ ಸಂವೇದನೆಯನ್ನು ಹುಟ್ಟುಹಾಕಬೇಕೆಂಬ ಕಾಳಜಿ ಇರುವವರೇ. ಬೇರೆ ಸಂಸ್ಕೃತಿಗಳಿಂದ, ಭಾಷೆಗಳಿಂದ ಒಳ್ಳೆಯ ಚಲನಚಿತ್ರಗಳು ನಮಗೆ ಲಭ್ಯವಾಗಬೇಕೆಂದ ತಕ್ಷಣ ಕನ್ನಡ ಚಲನಚಿತ್ರಗಳ ಸೋಲನ್ನು ಇವರುಗಳು ಬಯಸುತ್ತಿರುವವರೆಂದು ಯಾರೂ ಹೇಳುವಹಾಗಿಲ್ಲ. ಹಾಗಾದರೆ ಸಮಸ್ಯೆ ಇರುವುದಾದರೂ ಎಲ್ಲಿ?

ನನ್ನ ಪ್ರಕಾರ ಎರಡು ಗುಂಪಿನವರೂ ಅರಿಯಬೇಕಾದ ಒಂದು ಸಂಗತಿಯಿದೆ. ಅದೇನೆಂದರೆ ತಾವು ಪರಸ್ಪರ ವಿರೋಧಿಗಳೆಂದುಕೊಂಡು ತಮ್ಮ ನಡುವೆ ವಾದ-ವಿವಾದಗಳನ್ನು ಹೆಚ್ಚಿಸಿಕೊಳ್ಳದೆ ಡಬ್ಬಿಂಗ್ ವಿಷಯದಲ್ಲಿ ಸಕರ್ಾರ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಕಾಳಜಿ, ಜವಾಬ್ದಾರಿಗಳ ಬಗ್ಗೆ ಎಲ್ಲರ ಗಮನವನ್ನೂ ಸೆಳೆಯಬೇಕು. ಕನ್ನಡದ ಕಲಾತ್ಮಕ ಚಿತ್ರಗಳನ್ನು ಕಡೆಗಣಿಸಿ ಅವುಗಳಿಗೆ ಎಲ್ಲೂ ಅವಕಾಶವಿಲ್ಲದಿರುವ ಪರಿಸ್ಥಿತಿ ಬಂದಿರುವುದು ಶೋಚನೀಯ (ಈ ರೀತಿಯ ಚಿತ್ರಗಳ ಬಿಡುಗಡೆಗೆ ಚಿತ್ರ ಮಂದಿರ ದಕ್ಕುವಂತೆ ಮಾಡುವುದು ತಮ್ಮ ಮೂಲಭೂತ ಜವಾಬ್ದಾರಿ ಎಂದು ಸರ್ಕಾರವಾಗಲಿ, ಚಲನಚಿತ್ರ ವಾಣಿಜ್ಯ ಮಂಡಳಿಯಾಗಲಿ ಇದುವರೆಗೂ ಮನಗಂಡಿಲ್ಲವೆಂಬುದೇ ದುರಂತದ ಸಂಗತಿ). ಹಾಗೆಯೇ, ಜನಪ್ರಿಯ ಸಿನೆಮಾಗಳು ಮತ್ತು ಕಲಾತ್ಮಕ ಸಿನೆಮಾಗಳು ಒಂದಕ್ಕೊಂದು ವಿರೋಧಿ ಎಂಬ ಪ್ರಜ್ಞೆಯು ಎರಡು ಗುಂಪುಗಳನ್ನು ಸೃಷ್ಟಿಸಿರುವುದು ಅನಗತ್ಯವಾದ ಸಾಂಸ್ಕೃತಿಕ ಸಂಗತಿ ಆಗಿಬಿಟ್ಟಿದೆ. ಈ ವಿರೋಧವನ್ನು ಸರ್ಕಾರ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ತಮ್ಮ ಅಸಡ್ಡೆಯಿಂದ ನೇರವಾಗಿ, ಪರೋಕ್ಷವಾಗಿ ಪೋಷಿಸಿವೆ. ಆದ್ದರಿಂದ ಡಬ್ಬಿಂಗ್ ಪರ/ವಿರೋಧಗಳು ತಮ್ಮ ನಿಜವಾದ ಎದುರಾಳಿಗಳನ್ನು ಕಾಣಬೇಕಾದದ್ದು ಸರ್ಕಾರದ ನೀತಿಗಳಲ್ಲಿ, ಚಲನಚಿತ್ರ ವಾಣಿಜ್ಯ ಮಂಡಳಿಯ ಧೋರಣೆಯಲ್ಲಿ.

ಜನಪ್ರಿಯ ಸಿನೆಮಾದ ಗುಣಮಟ್ಟ, ಡಬ್ಬಿಂಗ್ ಚಿತ್ರಗಳ ಸಾಂಸ್ಕೃತಿಕ ಗುಣ, ಕಲಾತ್ಮಕ ಚಿತ್ರಗಳ ಯಶಸ್ಸು ಸರ್ಕಾರದ ನೀತಿಗಳಿಗೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಧೋರಣೆಗೆ ನೇರವಾಗಿ ಸಂಬಂಧಪಟ್ಟ ವಿಷಯಗಳೆಂದು ಅರಿತು ಒಂದು ಆಂದೋಲನವನ್ನು ಒಟ್ಟಿಗೆ ನಡೆಸಬೇಕು. ಆಗ ಡಬ್ಬಿಂಗ್ ಆಗುವ ಚಲನಚಿತ್ರಗಳ ಗುಣವನ್ನು, ಕಲಾತ್ಮಕ ಚಿತ್ರಗಳ ಉಳಿವನ್ನು, ಕನ್ನಡ ಜನಪ್ರಿಯ ಸಿನೆಮಾದ ಒಳಿತನ್ನು ಏಕಕಾಲದಲ್ಲಿ ಕಾಯ್ದುಕೊಳ್ಳಬಹುದು. ಒಂದು ಇನ್ನೊಂದಕ್ಕೆ ವಿರೋಧಿಯಲ್ಲ ಎಂಬ ಪ್ರಾಥಮಿಕ ಸತ್ಯ ಎಲ್ಲರ ಅರಿವಿಗೆ ಬರಬೇಕು. ಅಲ್ಲದೆ, ಒಂದರ ಏಳಿಗೆಯೇ ಇನ್ನೊಂದರ ಏಳಿಗೆಯನ್ನು ಕಾಯುತ್ತದೆ ಎಂಬ ಸತ್ಯ ಮನದಟ್ಟಾಗುತ್ತದೆ. ಈ ಪ್ರಜ್ಞೆ ಎಲ್ಲರಲ್ಲೂ ಜಾಗೃತಗೊಂಡರೆ ಕರ್ನಾಟಕ ಚಲನಚಿತ್ರ ಸಂಸ್ಕೃತಿಯ ಅನೇಕ ದುರಂತಗಳನ್ನು ತಡೆಯಬಹುದು. 

ಸರ್ಕಾರದ ಸಾಂಸ್ಕೃತಿಕ ನೀತಿ (cultural policy) ರೂಪಿತವಾಗಬೇಕು. ಇದು ಎಲ್ಲರ ಸಂಘರ್ಷ. ಕೇವಲ ಎರಡು ಬಣಗಳ, ಪಂಗಡಗಳ, ಗುಂಪುಗಳ ಸಂಘರ್ಷ ಅಲ್ಲ. ಸರ್ಕಾರದ ಸಾಂಸ್ಕೃತಿ ನೀತಿಯಿಂದ ಮಾತ್ರ ಕನ್ನಡದಲ್ಲಿ ಉತ್ತಮ ಚಿತ್ರಗಳು ಬರಲು ಸಾಧ್ಯ ಮತ್ತು ಉತ್ತಮ ಚಿತ್ರಗಳು ಮಾತ್ರ ಡಬ್ ಆಗಿ ಕನ್ನಡಕ್ಕೆ ಬರಲು ಸಾಧ್ಯ. ಈ ವಿವೇಚನೆ ಇಂದು ಮೂಡಿಬರಬೇಕು. ಡಬ್ಬಿಂಗ್ನಿಂದ ಉತ್ತಮ ಕಾಣ್ಕೆಗಳು ನಮ್ಮ ಸಮುದಾಯಕ್ಕೆ ದಕ್ಕಬೇಕಾದರೆ ಅದಕ್ಕೆ ಅಗತ್ಯವಾಗಿ ಪೂರಕವಾದದ್ದು ಸರ್ಕಾರದ ನೀತಿ. ಹಾಗೆಯೆ, ಕನ್ನಡದ ಉತ್ತಮ ಚಿತ್ರಗಳಿಗೆ ಮನ್ನಣೆ ಬರಬೇಕಿದ್ದರೆ (ಅವು ಜನಪ್ರಿಯ ಸಿನೆಮಾಗಳಾಗಲಿ ಕಲಾತ್ಮಕ ಚಿತ್ರಗಳಾಗಲಿ) ಅದಕ್ಕೆ ಅಗತ್ಯವಾದದ್ದು ಸರ್ಕಾರದ ಉತ್ತಮ ನೀತಿ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ವಿವೇಚನಾಯುಕ್ತ ಸಂಹಿತೆ.

ಡಬ್ಬಿಂಗ್ ವಿರೋಧ/ಪರ ಗುಂಪುಗಳು ತಮ್ಮ ತಮ್ಮ ಕಾಳಜಿಗಳನ್ನು ಎತ್ತಿಹಿಡಿಯಲು ತಮ್ಮ ಒಟ್ಟೂ ನಿಲುವುಗಳನ್ನು ವಿರೋಧಿ ನೆಲೆಯಲ್ಲಿಟ್ಟು ನೋಡದೆ ಒಂದೇ ಕಾಳಜಿಯ ಎರಡು ವಿಭಿನ್ನ ಆದರೆ ಪೂರಕವಾದ ಆಯಾಮಗಳನ್ನಾಗಿ ನೋಡಲು ಕಲಿಯಬೇಕು. ಆದ್ದರಿಂದ ಒಂದು ಸಾಮಾಜಿಕ/ಸಾಂಸ್ಕೃತಿಕ ಆಂದೋಲನವನ್ನು ಒಟ್ಟಿಗೆ ಕೈಗೊಂಡು ಸಕರ್ಾರದ ಸಾಂಸ್ಕೃತಿಕ ನೀತಿಯು ಉಂಟಾಗುವಂತೆ ಪ್ರಯತ್ನಿಸಬೇಕು. ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಧೋರಣೆಯನ್ನು ಬದಲಿಸಲು ಪ್ರಯತ್ನಿಸಬೇಕು. ಹೀಗಾಗದಿದ್ದಲ್ಲಿ ಅಸಹ್ಯದ ಚಿತ್ರಗಳು ಮಾತ್ರ ಕನ್ನಡಕ್ಕೆ ಡಬ್ ಆಗಿ ಬರುತ್ತವೆ. ಅಲ್ಲದೆ ಕನ್ನಡ ಚಲನಚಿತ್ರ ಸಂಸ್ಕೃತಿ ತನ್ನ ಗುಣಮಟ್ಟವನ್ನು ಏರಿಸಿಕೊಳ್ಳುವುದೂ ಅಸಾಧ್ಯವಾಗುತ್ತದೆ. ಕಳಪೆ ಚಿತ್ರಗಳು ಡಬ್ ಆಗಿ ಬಂದಾಗ ಸ್ಪರ್ಧೆಯಿಂದಾಗಿ ಕನ್ನಡದ ಜನಪ್ರಿಯ ಸಿನೆಮಾ ಇನ್ನೂ ಕೆಳಮಟ್ಟಕ್ಕೆ ಇಳಿಯುವುದರಲ್ಲಿ ಯಾವ ಅನುಮಾನವೂ ಇಲ್ಲ. ಹಾಗೆಯೇ ಈಗಲೇ ಮೂಲೆಗುಂಪಾಗಿರುವ ಕಲಾತ್ಮಕ ಚಿತ್ರಗಳೂ ಸಂಪೂರ್ಣವಾಗಿ ವಿನಾಶದ ಅಂಚಿಗೆ ತಳ್ಳಲ್ಪಡುತ್ತವೆ. ಇದು ಎಲ್ಲರ ಸಾಮೂಹಿಕ ದುರಂತವೇ ಸರಿ.